varthabharthi


ಅನುಗಾಲ

ಶಿವಲಿಂಗದ ಮೇಲಿನ ಚೇಳು

ವಾರ್ತಾ ಭಾರತಿ : 1 Nov, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಶಶಿ ತರೂರ್ ಉಲ್ಲೇಖಿಸಿದ ರೂಪಕವನ್ನು ಯೋಚಿಸಿ ಅದರ ನೈಜತೆಯನ್ನು, ಗಾಂಭೀರ್ಯವನ್ನು, ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುವಷ್ಟು ಬುದ್ಧಿ ಬಹಳಷ್ಟು ಜನರಿಗಿಲ್ಲ. ಇಂದು ಸಾಮಾಜಕ್ಕೆ ಸಮಾಜವೇ ರಾಜಕೀಯವಾಗಿ ಮಾತ್ರ ಯೋಚಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ. ಅದರಲ್ಲಿ ವೈಯಕ್ತಿಕ ಲಾಭ ಗಳಿವೆಯೆಂದೇನೂ ಇಲ್ಲ; ಸಾಮೂಹಿಕ ಹಿತವಿದೆಯೆಂದೂ ಇಲ್ಲ. ಒಟ್ಟಾರೆ ತಾನು ಒಂದು ಗ್ರಹಿಕೆಯ ಮತ್ತು ಸ್ಪಂದನೆಯ ಭಾಗವಾಗಿರಬೇಕು, ಅಷ್ಟೇ.


ಶಶಿ ತರೂರ್ ಎಂಬ ಕಾಂಗ್ರೆಸ್ ಸಂಸದರ ಬಗ್ಗೆ ಹಿಂದೆಯೂ ಬರೆದಿದ್ದೇನೆ. ಆದರೆ ಈ ಬಾರಿ ಅವರು ಉಲ್ಲೇಖಿಸಿದ ಒಂದು ಸುಂದರ ರೂಪಕ ಅವರನ್ನು ಮೆಚ್ಚಿಕೊಳ್ಳುವ ನನ್ನನ್ನಷ್ಟೇ ಅಲ್ಲ ಅವರನ್ನು ರಾಜಕೀಯ ಕಾರಣಗಳಿಗಾಗಿಯೇ ಬೆಂಬಲಿಸುವವರನ್ನೂ ವಿರೋಧಿಸುವವರನ್ನೂ ಗಾಢವಾಗಿ ಸೆಳೆದಿದೆ. ನಾನಿನ್ನೂ ಈ ಉಲ್ಲೇಖವನ್ನು ಒಳಗೊಂಡ ಅವರ ಹೊಸ ಕೃತಿಯನ್ನು ಓದಿಲ್ಲ. ಆದರೆ ಅದು ಈ ದೇಶದ ವರ್ತಮಾನದ ಪ್ರಧಾನಿ ಮೋದಿಯವರನ್ನು ಕುರಿತಾಗಿ ಬರೆದದ್ದು ಎಂಬುದನ್ನು ಬಲ್ಲೆ.

ಕನ್ನಡದಲ್ಲಿ ಲಂಕೇಶ್ ಕುರಿತು ಒಂದು ಮಾತಿದೆ. ಅವರು ಬೈದಾಗಲೂ ಆ ಬೈಸಿಕೊಂಡವನಿಗೆ ಖುಶಿಯಾಗುತ್ತಿತ್ತಂತೆ. ಅಷ್ಟು ನವಿರಾಗಿ, ಹೊಸತಾಗಿ ವಿಶಿಷ್ಟವಾಗಿ ಅವರು ಟೀಕಿಸುತ್ತಿದ್ದ್ದರು. ಸುಮಾರಾಗಿ ಪೂರ್ಣಚಂದ್ರ ತೇಜಸ್ವಿಯವರ ಟೀಕೆಯೂ ಹೀಗೇ ಇತ್ತು. ಹೀಗೆ ಒಂದು ಉನ್ನತ ಗುಣಮಟ್ಟದಲ್ಲಿ ಟೀಕಿಸುವುದು ಎಲ್ಲರಿಗೂ ಸಾಧ್ಯವಾಗದು. ಅದು ಟೀಕೆಯ ಮಟ್ಟವನ್ನು ದಾಟಿ ಒಂದು ರೂಪಕವಾಗಿ ಮೆರೆಯುತ್ತದೆ. ಬೈಗಳಿಗೂ ತಾರಾಮೌಲ್ಯ ದಕ್ಕುತ್ತದೆ. ಶಶಿತರೂರ್ ತಾನೇ ಈ ರೂಪಕವನ್ನು ಸೃಷ್ಟಿಸಿದ್ದೇನೆಂದು ಹೇಳಿಕೊಳ್ಳಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬರು ಅನಾಮಧೇಯ ಕಾರ್ಯಕರ್ತರು ಮೋದಿಯ ಕುರಿತಾಗಿ ಹೇಳಿದ ಮಾತು ಅದು: ‘‘ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳಿನಂತೆ; ಕೈಯಿಂದ ಸರಿಸಲಾಗದು; ಚಪ್ಪಲಿಯಿಂದ ಹೊಡೆಯಲಾಗದು!’’ ಎಷ್ಟು ಅದ್ಭುತ ಪ್ರತಿಮೆ! ನಿಜಕ್ಕೂ ಆ ವ್ಯಕ್ತಿಯ ಕಲ್ಪನೆಗೆ, ಪ್ರತಿಭೆಗೆ ಮತ್ತು ಅದನ್ನು ವಾಸ್ತವಕ್ಕೆ ಹೊಂದಿಕೆಯಾಗುವಂತೆ (ಒಪ್ಪುವುದೂ ಬಿಡುವುದೂ ಆಯಾಯ ಮನಸ್ಥಿತಿಗೆ ಸೇರಿದ್ದು) ಹೇಳಿದ ಪ್ರತ್ಯುತ್ಪನ್ನಮತಿಗೆ ಶರಣು.

ತಮಾಷೆ ಮತ್ತು ವಿಷಾದವೆಂದರೆ ಇದನ್ನು ಅನುಭವಿಸಿ ಸುಖಪಡುವ ಇಲ್ಲವೇ ಮೆಚ್ಚಿಕೊಳ್ಳುವ ಅಥವಾ ಬೆಚ್ಚಿಬೀಳುವ ಅಥವಾ ಇದರ ನೈಜತೆಯನ್ನು ಅಳೆಯುವ ಬದಲು ಒಂದು ಸಮುದಾಯವು ನೇರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೊಣೆಗಾರರನ್ನಾಗಿಸಿ ಮೋದಿಗೆ ಅವಮಾನವಾಗುವಂತಿರುವ ಈ ಟೀಕೆಗೆ ಅವರು ಕ್ಷಮೆ ಕೋರಬೇಕೆಂದು ಹೇಳಿದೆ. ಕಾಂಗ್ರೆಸಿಗೂ ಶಶಿತರೂರ್ ಬಳಸಿದ ಈ ರೂಪಕಕ್ಕೂ ಸಂಬಂಧವೇ ಇಲ್ಲ. ಆದರೆ ಇತರರಿಗೆ ಇದೊಂದು ರಾಜಕೀಯ ಅಸ್ತ್ರವೆಂಬುದು ಸರಿ. ರಾಜಕೀಯದಲ್ಲಿ ಪ್ರಣಯ ಮತ್ತು ಯುದ್ಧದಂತೆ ಎಲ್ಲವೂ ಸರಿ. ಆದ್ದರಿಂದ ಇಂತಹ ಟೀಕೆ-ಮರುಟೀಕೆಗಳು ನಾಲ್ಕಾರು ದಿನ ಸಾರ್ವಜನಿಕವಾಗಿ ಹೊಗೆಯೆಬ್ಬಿಸಿ ಆನಂತರ ವಿಶಾಲ ವಿಶ್ವದ ನಭದಲ್ಲಿ ಲೀನವಾಗುತ್ತದೆ. ಸಾರ್ವಜನಿಕ ನೆನಪು ಯಾವತ್ತೂ ಕ್ಷಣಿಕ. ಶಶಿತರೂರ್‌ರಂತಹ ಚಿಂತಕ ರಾಜಕಾರಣಿಗಳ ಹೊರತಾಗಿ ರಾಜಕೀಯದಲ್ಲಿ ಆಯಾಯ ಸಂದರ್ಭದಲ್ಲಿ ಯಾವುದು ಸುಖವೋ, ಅನುಕೂಲವೋ ಅದನ್ನು ಹೇಳುವುದು ಸಹಜ.

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ದೇಶದ ಜಾತ್ಯತೀತತೆಗೆ ಕಟಿಬದ್ಧರಾದವರಂತೆ ಮತಾಂಧತೆಯನ್ನು, ಜಾತೀಯತೆಯನ್ನು, ಟೀಕಿಸುತ್ತ ಅಂತರ್‌ರಾಷ್ಟ್ರೀಯ ಶಾಂತಿಯನ್ನು, ರಾಷ್ಟ್ರೀಯ ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಿರುವವರು ತಮ್ಮ ವೈಯಕ್ತಿಕ ಲಾಭಕ್ಕೆ ಅಥವಾ ಅನುಕೂಲಕ್ಕೆ ಭಾರತೀಯ ಜನತಾ ಪಕ್ಷವನ್ನು ಸೇರಿದರೆಂದುಕೊಳ್ಳಿ: ತಕ್ಷಣ ಹಿಂದೂ ಧರ್ಮದ ಶ್ರೇಷ್ಠತೆಯನ್ನು, ಪಾಕಿಸ್ತಾನದ ಕಾರಸ್ಥಾನವನ್ನು, ಈ ದೇಶದ ಅಲ್ಪಸಂಖ್ಯಾತರಿಂದ ದೇಶಕ್ಕೆ ಆಗುತ್ತಿರುವ ಅನ್ಯಾಯವನ್ನು, ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಬೇಕಾದ ಅನಿವಾರ್ಯತೆಯನ್ನು, ಭಾರತವನ್ನು ವಿಶ್ವಗುರುವಾಗಿಸುವತ್ತ ನಡೆಸಲಿರುವ ಯೋಜನೆಗಳನ್ನು ಅದ್ಭುತವಾಗಿ ಪ್ರಸ್ತಾವಿಸುತ್ತಾರೆ. ಇದು ಏಕಮುಖ ಮಾರ್ಗವೆಂದೇನಿಲ್ಲ. ದ್ವಿಮುಖ ಮಾತ್ರವಲ್ಲ, ಚತುಷ್ಪಥವೂ ಇರುತ್ತದೆ.

ಹೀಗೆ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಬದಲಾಯಿಸಿಕೊಳ್ಳುವುದು ತಪ್ಪೇನಲ್ಲ. ಬದುಕಿನ ಸುವಿಶಾಲ ಹಾದಿಯಲ್ಲಿ ತಪ್ಪುನಡೆಯನ್ನು ಬಹಳಷ್ಟು ಜನ ತುಳಿಯುತ್ತಾರೆ. ಅದರ ವೈಪರೀತ್ಯವನ್ನು, ಲೋಪ-ದೋಷಗಳನ್ನು ಅರಿತಾಗ ಹೊಸ ಹಾದಿಯನ್ನು ಕ್ರಮಿಸುತ್ತಾರೆ. ಸಾಹಿತ್ಯದಲ್ಲೂ ಇಂತಹ ಹಾದಿಗಳಿರುತ್ತವೆ. ಡಾ.ಯು.ಆರ್. ಅನಂತಮೂರ್ತಿಯವರು ಒಂದೊಮ್ಮೆ ‘‘ಅರಳು-ಮರಳುವಿನ ಆನಂತರದ ಬೇಂದ್ರೆ ಕವಿಯೇ ಅಲ್ಲ’’ ಎಂದಿದ್ದರು. ಆದರೆ ಮತ್ತೊಮ್ಮೆ ಹಿಂದಿರುಗಿ ನೋಡಿ ತಾನು ಹಾಗೆ ಹೇಳಿದ್ದು ಸರಿಯಲ್ಲ ಎಂದರು. ಚಿಂತಕರೂ ವಿಮರ್ಶಕರೂ ಆಗಿರುವವರಿಗೇ ಹೀಗೆ ಎಡವುವ ಸಂದರ್ಭವಿರುವಾಗ ಇತರರ ನಡೆ ಹೇಗಿರಬೇಕು! ನಡೆವವರೇ ಎಡವುವವರು; ಕುಳಿತವರಲ್ಲ.

ಆದರೆ ಕೆಲವು ಮಂದಿಯನ್ನು ಹೊರತುಪಡಿಸಿದರೆ ರಾಜಕಾರಣದಲ್ಲಿ ನಿನ್ನೆ ಹೇಳಿದ್ದನ್ನು ತರ್ಕಬದ್ಧವಾಗಿ ನಿರಾಕರಿಸಲು ರಾಜಕಾರಣಿಗಳಿಗೆ ಯಾವ ಬಂಡವಾಳವೂ ಇರುವುದಿಲ್ಲ. ತನ್ನ ಜೀವನಸಂಧ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ದೇಶದ ಮಾಜಿ ವಿದೇಶಾಂಗ ಸಚಿವ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣರಂತಹ ಉದಾಹರಣೆಗಳು ಬೇಕಷ್ಟಿವೆ. ಅವರನ್ನು ನೆನಪಿಸುವಾಗ ಅನುಕಂಪದ ಹೊರತು ಇನ್ನೇನೂ ಹುಟ್ಟುವುದಿಲ್ಲ. ರೂಪಕಗಳು ಜನಪದರಲ್ಲಿ ಹೇರಳವಾಗಿ ಸಿಗುತ್ತವೆ. ನಾವೆಲ್ಲ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿರುವಾಗ ಅಂದರೆ ಈಗ ಸುಮಾರು ಐದು ದಶಕಗಳ ಹಿಂದೆ ಒಂದು ಮಕ್ಕಳ ನೀತಿ ಕಥೆಯಿತ್ತು. ಅದನ್ನು ಸೂಕ್ಷ್ಮವಾಗಿ ಹೀಗೆ ಸಂಗ್ರಹಿಸಬಹುದು: ಗುಂಡಾ ಜೋಯಿಸರೆಂಬವರಿದ್ದರು. ಅವರು ಈ ಜನ್ಮದ್ದಷ್ಟೇ ಅಲ್ಲ, ಜನ್ಮಾಂತರದ ಭವಿಷ್ಯವನ್ನೂ ಬಲ್ಲವರಾಗಿದ್ದರು. ತಮ್ಮ ಸಂಸಾರದೊಂದಿಗೆ ಬದುಕುತ್ತಿದ್ದರು.

ಸಂಸಾರ ನಿರ್ವಹಣೆಗೆ ಜ್ಯೋತಿಷ್ಯವೇ ಅವರಿಗೆ ಆಧಾರವಾಗಿದ್ದು ಅವರು ಸಾಕಷ್ಟು ಜನಪ್ರಿಯರಾಗಿದ್ದರು. ಒಂದೊಮ್ಮೆ ಅವರು ತಮ್ಮದೇ ಭವಿಷ್ಯವನ್ನು ನೋಡಿದಾಗ ಅವರಿಗೆ ತಮ್ಮ ಆಯುಷ್ಯವು ಮುಗಿಯುತ್ತ ಬಂದು ತಾವು ಮರುಜನ್ಮದಲ್ಲಿ ಒಂದು ಹಂದಿಯಾಗಿ ಹುಟ್ಟುವುದನ್ನು ಕಂಡರು. ತಮ್ಮ ಈ ಪುನರ್ಜನ್ಮದ ಬಗ್ಗೆ ಅವರು ಅತೀವವಾಗಿ ಬೇಸರಪಟ್ಟರು. ಆ ಜನ್ಮ ಮುಗಿದರೆ ಮತ್ತೆ ತಾವು ಒಬ್ಬ ಶ್ರೇಷ್ಠ ಮನುಷ್ಯನಾಗಿ ಹುಟ್ಟಬಹುದೆಂಬುದನ್ನೂ ಕಂಡುಕೊಂಡರು. ಆದ್ದರಿಂದ ತಮ್ಮ ಹಂದಿಜನ್ಮಕ್ಕೆ ಆದಷ್ಟು ಶೀಘ್ರವಾಗಿ ಇತಿಶ್ರೀ ಹಾಡಬೇಕೆಂದು ನಿರ್ಧರಿಸಿ ತಮ್ಮ ಮಕ್ಕಳನ್ನು ಕರೆದು ತಮ್ಮ ಮರುಜನ್ಮದ ಬಗ್ಗೆ ವಿವರಿಸಿ ತಾವು ತಮ್ಮ ಮರಿಗಳೊಂದಿಗೆ ಒಂದು ಗೊತ್ತಾದ ದಿನದಂದು ತಮ್ಮ ಈಗಿನ ಮನೆಯ ಮುಂದೆ ಬರುವುದಾಗಿಯೂ ಆಗ ಮಕ್ಕಳಲ್ಲಿ ಯಾರಾದರೊಬ್ಬರು ತಮಗೆ- ಅಂದರೆ ಆ ಗುಂಪಿನ ಹಿರಿಯ ಹಂದಿಗೆ-ಕೋವಿಯಿಂದ ಗುಂಡು ಹೊಡೆದು ಕೊಲ್ಲಬೇಕೆಂದೂ ಹೀಗೆ ತಮಗೆ ಮೋಕ್ಷದಾನಮಾಡಬೇಕೆಂದೂ ಕೋರಿದರು. ಗುಂಡಾ ಜೋಯಿಸರ ವ್ಯಕ್ತಿತ್ವ ಕುರಿತು ಅಪಾರ ಶ್ರದ್ಧೆಯಿದ್ದ ಅವರ ಮಕ್ಕಳು ಒಪ್ಪಿಕೊಂಡರು.

ಗುಂಡಾ ಜೋಯಿಸರು ತೀರಿಕೊಂಡರು. ಆ ನಿಗದಿತ, ಒಪ್ಪಿಕೊಂಡ ದಿನ ಬಂದೇ ಬಂತು. ಮನೆಯ ಮುಂದೆ ಒಂದು ದೊಡ್ಡ ಹಂದಿ ಮತ್ತು ಅದರೊಂದಿಗೆ ಅದರ ಮರಿಹಂದಿಗಳು ನಿಧಾನವಾಗಿ ಬಂದವು. ತಕ್ಷಣ ಗುಂಡಾ ಜೋಯಿಸರ ಮಕ್ಕಳಲ್ಲೊಬ್ಬ ಮನೆಯೊಳಗೆ ಹೋಗಿ ಕೋವಿಯನ್ನು ತಂದು ಇನ್ನೇನು ಆ ಹಿರಿಹಂದಿಗೆ ಹೊಡೆಯಬೇಕೆನ್ನುವಷ್ಟರಲ್ಲಿ ಗುಂಡಾ ಜೋಯಿಸರ ಹಂದಿಜನ್ಮ ಸಹಜವಾಗಿ ಪ್ರಾಣಭೀತಿಯನ್ನು ಎದುರಿಸಿತು. ಹಂದಿಯ ರೂಪದ ಗುಂಡಾ ಜೋಯಿಸರು ದೊಡ್ಡ ಸ್ವರದಲ್ಲಿ, ಬೇಡಪ್ಪಾ, ನನ್ನನ್ನು ಕೊಲ್ಲಬೇಡ ಎಂದರು. ಆಗ ಜೋಯಿಸರ ಮಗ ನೀವೇ ಹೇಳಿದ್ದೀರಲ್ಲಾ? ಎಂದಾಗ ಹೌದು, ಹೇಳಿದ್ದೆ ಸರಿ, ಆದರೆ ಅಂದಿಗೆ ಅದೇ ಸುಖ, ಇಂದಿಗೆ ಇದೇ ಸುಖ, ಪ್ರಾಣ ಯಾರಿಗೆ ಅಮೂಲ್ಯವಲ್ಲ? ನಾನು ಹೀಗೆಯೇ ಬದುಕಲು ಇಷ್ಟಪಡುತ್ತೇನೆ ಎಂದರು. ನಮ್ಮ ಬಹುಪಾಲು ರಾಜಕಾರಣಿಗಳಿಗೆ ಇದೇ ಸವಾಲು. ಅವರಿಗೆ ಕೋವಿ ಹಿಡಿಯುವ ಮತದಾರರು ಎದುರಾದರೆ ಅವರು ಹೇಳುವುದೂ ಇದನ್ನೇ.

ಶಶಿ ತರೂರ್ ಉಲ್ಲೇಖಿಸಿದ ರೂಪಕವನ್ನು ಯೋಚಿಸಿ ಅದರ ನೈಜತೆಯನ್ನು, ಗಾಂಭೀರ್ಯವನ್ನು, ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುವಷ್ಟು ಬುದ್ಧಿ ಬಹಳಷ್ಟು ಜನರಿಗಿಲ್ಲ. ಇಂದು ಸಾಮಾಜಕ್ಕೆ ಸಮಾಜವೇ ರಾಜಕೀಯವಾಗಿ ಮಾತ್ರ ಯೋಚಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ. ಅದರಲ್ಲಿ ವೈಯಕ್ತಿಕ ಲಾಭಗಳಿವೆಯೆಂದೇನೂ ಇಲ್ಲ; ಸಾಮೂಹಿಕ ಹಿತವಿದೆಯೆಂದೂ ಇಲ್ಲ. ಒಟ್ಟಾರೆ ತಾನು ಒಂದು ಗ್ರಹಿಕೆಯ ಮತ್ತು ಸ್ಪಂದನೆಯ ಭಾಗವಾಗಿರಬೇಕು, ಅಷ್ಟೇ. ಸಾಮಾಜಿಕ ಜಾಲತಾಣಗಳು ಬುದ್ಧಿ ಮತ್ತು ಮನಸ್ಸಿನ ಅವನತ ಭಾಗಗಳಾದ ಈ ಹೊಟ್ಟೆಯ ಬೆಂಕಿಗೆ ಪೂರಕ ಸಾಧನಗಳನ್ನು, ವೇದಿಕೆಗಳನ್ನು ಸೃಷ್ಟಿಸಿವೆ. ಆದ್ದರಿಂದ ಯಾವುದೇ ವಿಚಾರವನ್ನೂ ಅದರ ಎಲ್ಲ ಮುಖಗಳಿಂದ ಗುರುತಿಸುವ ಮತ್ತು ಅದರ ಸಾಧಕ-ಬಾಧಕಗಳನ್ನು ವಿಚಾರಿಸಿ ವಿಶ್ಲೇಷಿಸುವ ವಿಧಾನವನ್ನೇ ನಮ್ಮ ಸಮಾಜ ಕಳೆದುಕೊಳ್ಳುತ್ತಿದೆ. ದೇಶದ ಎಲ್ಲೆಡೆ ಪ್ರತ್ಯಕ್ಷ ಪ್ರತಿಮೆಗಳನ್ನು ನಿರ್ಮಿಸುವ ಭರಾಟೆಯಲ್ಲಿ ಅದೃಶ್ಯವಾಗಿ ನಿಂತಿರುವ ನೈತಿಕ, ವೈಚಾರಿಕ ಮೌಲ್ಯಗಳು ಅನಾಥವಾಗಿ ಅಲೆಯುತ್ತಿವೆ.

ಇಷ್ಟೇ ಅಲ್ಲ; ಶಶಿ ತರೂರ್ ಅವರು ಉಲ್ಲೇಖಿಸಿದ ಇಂತಹ ರೂಪಕಗಳನ್ನು ತಿರುಚಿ ಅದನ್ನು ವಾಚ್ಯಮಟ್ಟದಲ್ಲಷ್ಟೇ ಪ್ರಚಾರಮಾಡಿ ಅದರ ಘನತೆಯನ್ನು ಇಲ್ಲವಾಗಿಸುವ ಪ್ರಯತ್ನಗಳೂ ನಡೆಯುತ್ತಿವೆ. ಪ್ರಾಯಃ ಹಿಂದೆ ಬಳಸಲಾಗುತ್ತಿದ್ದ ಅನೇಕ ಜಾನಪದ ಕಥೆಗಳು ಇಂದು ಆಯಾಯ ಜಾತಿ, ಪಂಗಡ, ಸಮುದಾಯಗಳಿಂದ ಮಾನಹಾನಿಯ ಪ್ರಕರಣಗಳಿಗೆ ಹೇತುವಾಗುತ್ತವೆಯೆಂಬ ಭಯ ನನಗಿದೆ. ವೆಂಕಣ್ಣಯ್ಯ ಮೂರು ಕಾಗೆ ಕಾರಿದರು ಎಂಬ ಇನ್ನೊಂದು ನೀತಿ ಕಥೆ ನೆನಪಾಗುತ್ತದೆ: ವೆಂಕಣ್ಣಯ್ಯ ಎಂಬವರು (ಅ)ಜೀರ್ಣದ ಸಮಸ್ಯೆಯನ್ನು ಎದುರಿಸಿ ಕೊನೆಗೆ ಕಾರಿಕೊಂಡರೆಂದು ಒಬ್ಬರು ಇನ್ನೊಬ್ಬರಿಗೆ ಹೇಳಿದರು. ಅದು ಕರ್ರಗಿತ್ತೆಂದು ಇನ್ನೊಬ್ಬರು ಮತ್ತೊಬ್ಬರಿಗೆ ಹೇಳಿದರು. ಎಷ್ಟು ಕರ್ರಗಿತ್ತೆಂದರೆ ಕಪ್ಪುಕಾಗೆಯಂತಿತ್ತು ಎಂದು ಆ ಮತ್ತೊಬ್ಬರು ಮತ್ತೂ ಒಬ್ಬರಿಗೆ ಹೇಳಿದರು. ಆ ಮತ್ತೂ ಒಬ್ಬರು ವೆಂಕಣ್ಣಯ್ಯ ಕಾಗೆ ಕಾರಿದರು ಎಂದು ಪ್ರಚಾರಮಾಡಿದರು. ಅದನ್ನು ಕೇಳಿದವರು ಒಂದು ಕಾಗೆಗೆ ನಿಲ್ಲಿಸದೆ ಮೂರಕ್ಕೆ ಏರಿಸಿದರು. ಇದು ರೂಪವು ವಿರೂಪವಾಗುವ ಬಗೆ.

ಯಾರೂ ಮೂಲದ ಮೌಲ್ಯವನ್ನು ಶೋಧಿಸುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಸತ್ಯ ಹೇಳುವವರಿಗೆ ಬೆಲೆಯಿಲ್ಲದಾಗಿದೆ ಮಾತ್ರವಲ್ಲ ಅವರು ಭೀತಮನರಾಗಿ ಬದುಕಬೇಕಾದ ಅನಿವಾರ್ಯ ಬಂದಿದೆ. ಚಿಂತನಶೀಲ ಬದುಕಿನ ಬಗ್ಗೆ ಎಷ್ಟೇ ಮಾತನಾಡಿದರೂ ಅದೆಲ್ಲ ಈ ದೇಹವಿರುವ ವರೆಗೆ ಮಾತ್ರ. ದೇಹವೇ ಇಲ್ಲದಿದ್ದರೆ? ಇಂದಿನ ಸಮಾಜವು ಈ ಭೌತಿಕ ಸ್ತರವನ್ನಷ್ಟೇ ಗುರುತಿಸುವ ಸಂಕಲ್ಪವನ್ನು ಹೊಂದಿದಂತೆ ಕಾಣುತ್ತದೆ. ಗ್ರಾಂಷಿಯೆಂಬ ಎಡಪಂಥದ ಚಿಂತಕನನ್ನು ಸೆರೆಮನೆಗೆ ತಳ್ಳಿದ ಸರಕಾರವು ಆತನಿಗೆ ಸೆರೆಮನೆಯಲ್ಲಿ ಬೇಕಾದ ಆಹಾರವನ್ನು ಕೊಡಲು ಆದೇಶಿಸಿತು; ಆದರೆ ಓದಲು ಒಂದೂ ಸೌಲಭ್ಯವಿರಕೂಡದೆಂದೂ ಕಟ್ಟುನಿಟ್ಟಾಗಿ ಯೋಜಿಸಿ ಆದೇಶಿಸಿತು. ಏಕೆಂದರೆ ಚಿಂತನಾಶೀಲ ಬದುಕಿಗೆ ಭೌತಿಕ ಆಹಾರ ಸಾಮಗ್ರಿಗಳಿಗಿಂತಲೂ ತುರ್ತು ಅಗತ್ಯವಿರುವುದು ಬೌದ್ಧಿಕ ಆಹಾರ ಸಾಮಗ್ರಿಗಳು. ಅದರ ಉಪವಾಸ ಅಸಹನೀಯ. ಅದೇ ಸಾವು.

ನಮ್ಮೆದುರಿನ ಸಮಾಜ ಬೌದ್ಧಿಕ ಆಹಾರಸಾಮಗ್ರಿಗಳ ಗೋಜಿಗೆ ಹೋಗುವುದಿಲ್ಲ; ಹೊಟ್ಟೆಗೆ, ಲಾಲಸೆಗೆ ಆಹಾರವಾಗಬಲ್ಲ ಭೌತಿಕ ಸುಖಭೋಗಗಳನ್ನಷ್ಟೇ ಚಿಂತಿಸುತ್ತಿದೆ. ಆದ್ದರಿಂದ ಶಶಿತರೂರ್ ಮಾತ್ರವಲ್ಲ, ಗಿರೀಶ್ ಕಾರ್ನಾಡ್, ರಾಮಚಂದ್ರ ಗುಹಾ, ಪ್ರಕಾಶ ರೈ ಮುಂತಾದ ಅನೇಕ ಚಿಂತನಾಪರ ಜೀವಿಗಳು ಮೊದಲು ತಮ್ಮ ರಕ್ಷಣೆಯತ್ತ ಗಮನಕೊಡಬೇಕಾಗಿದೆ. ಏಕೆಂದರೆ ಶಿವಲಿಂಗಗಳ ಮೇಲೆ ಮಾರಣಾಂತಿಕವಾಗಿ ಕುಟುಕಬಲ್ಲ ಚೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)