varthabharthi


ಭೀಮ ಚಿಂತನೆ

ಫ್ಯಾಶಿಸಂ

ವಾರ್ತಾ ಭಾರತಿ : 2 Nov, 2018

ಭಾಗ-2

ರಾಜ್ಯ ಸಂಸ್ಥೆಯು ಸಮಾಜದಲ್ಲಿ ಎಲ್ಲದಕ್ಕೂ ಹೆಚ್ಚು ಶ್ರೇಷ್ಠವಾದ ಸಂಸ್ಥೆಯೆಂದು ಫ್ಯಾಶಿಸಂ ನಂಬುತ್ತದೆ. ಸಮಾಜವು ಒಂದು ಸಾವಯವ, ಏಕಾತ್ಮ ವಸ್ತುವಾಗಿದ್ದು ವ್ಯಕ್ತಿಗಳು ಅದರ ಘಟಕಾಂಶರು. ದೇಹಕ್ಕಾಗಿ ಅವಯವ ಹಾಗೂ ಜೀವಕೋಶಗಳು ಇರುವಂತೆ ವ್ಯಕ್ತಿಗಳು ಸಮಾಜಕ್ಕಾಗಿ ಇರುತ್ತಾರೆ. ರಾಷ್ಟ್ರ ಇಲ್ಲವೇ ರಾಜ್ಯವೆಂದರೆ ಸಮಾಜದ ಅಭಿವೃದ್ಧಿಗೊಂಡ ಅಥವಾ ಉನ್ನತಗೊಂಡ ರೂಪವೇ ಸರಿ. ಹೀಗಾಗಿ ದೂರಿಕೊಳ್ಳದೆ ಎಲ್ಲರೂ ರಾಜ್ಯದ ಅಪ್ಪಣೆಯನ್ನು ಪಾಲಿಸತಕ್ಕದ್ದು. ರಾಜ್ಯದ ಹಿತವೇ ಎಲ್ಲರ ಹಿತ. ರಾಜ್ಯ ಛಾಯಾಛತ್ರದಡಿಯೇ ವ್ಯಕ್ತಿಯ ವಿಕಸನ ಸಾಧ್ಯ. ಎಲ್ಲರೂ ಸೇರಿ ರಾಜ್ಯದ ಸಮರಕ್ಷಣೆ ಅಥವಾ ಸಂವರ್ಧನೆಯನ್ನು ಮಾಡತಕ್ಕದ್ದು. ಪ್ರತಿಯೊಬ್ಬನೂ ಅದಕ್ಕಾಗಿ ತೇದಿಕೊಳ್ಳಲು ಇಲ್ಲವೇ ಆತ್ಮತ್ಯಾಗಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ರಾಜ್ಯ, ರಾಷ್ಟ್ರ ಮತ್ತು ಸಮಾಜಗಳಲ್ಲಿ ವ್ಯತ್ಯಾಸವಿಲ್ಲ.

ರಾಷ್ಟ್ರದ ನಾಯಕನೇ ರಾಜ್ಯ ಹಾಗೂ ಸಮಾಜದ ನಾಯಕನು. ಅವನ ಕೈಯಲ್ಲಿ ಅನಿಯಂತ್ರಿತವಾದ ಸತ್ತೆ ಬೇಕು. ರಾಷ್ಟ್ರದ ಹಿತ ಯಾವುದರಲ್ಲಿದೆ, ಎಂಬುದನ್ನು ಅವನೇ ಬಲ್ಲನು. ಈ ಹಿತವನ್ನು ಸಾಧಿಸಲಿಕ್ಕೆಂದು ಎಲ್ಲರನ್ನೂ ಅವರವರ ಶಕ್ತಿಗೆ ತಕ್ಕಂತೆ ಕೆಲಸಕ್ಕೆ ಹಚ್ಚುವ ಅಧಿಕಾರ ಅವನಿಗಿದೆ. ಅವನು ಒಂದು ಪಕ್ಷವನ್ನು ಕಟ್ಟುತ್ತಾನೆ. ಒಂದು ರಾಷ್ಟ್ರ, ಒಬ್ಬ ನೇತಾರ ಹಾಗೂ ಒಂದು ಪಕ್ಷವೆಂಬ ಘೋಷಣೆಯನ್ನು ಮಾಡಲಾಗುತ್ತದೆ.

ರಾಷ್ಟ್ರವು ಏಕಜೀವವಾದುದು. ಅದರಲ್ಲಿ ವರ್ಗಭೇದವನ್ನು ಮನ್ನಿಸುವುದೆಂದರೆ ಅದರ ಸಾಮರ್ಥ್ಯವನ್ನು ಮೊಟಕುಗೊಳಿಸಿದಂತೆ.ಕಾರ್ಮಿಕರು, ಬಂಡವಾಳಗಾರರು, ಒಕ್ಕಲಿಗರು ಹಾಗೂ ಜಮೀನುದಾರರು ಒಗ್ಗಟ್ಟಿನಿಂದ ಕೆಲಸವನ್ನು ಮಾಡಿ ರಾಷ್ಟ್ರದ ಸಾಮರ್ಥ್ಯನ್ನು ಹೆಚ್ಚಿಸಬೇಕು.
 ರಾಷ್ಟ್ರದ ಅಭಿವೃದ್ಧಿಪರವಾಗಿ ಇರತಕ್ಕದ್ದು. ಅದು ತನ್ನ ಸಾಮ್ರಾಜ್ಯವನ್ನು ನಿರ್ಮಿಸಬೇಕು. ಅದಕ್ಕಾಗಿ ಯುದ್ಧವನ್ನು ಮಾಡಬೇಕಿದೆ. ಯಾವಾಗಲೂ ಯುದ್ಧದ ಸಿದ್ಧತೆ ಬೇಕು. ಯುದ್ಧ ಮಾಡುವುದರಲ್ಲಿ ಪಾಪವೇನೂ ಇಲ್ಲ. ಅದರಿಂದಾಗಿ ವ್ಯಕ್ತಿಯ ಶೌರ್ಯ, ಧೈರ್ಯಗಳು ಹೆಚ್ಚಿ ಅವನ ಗುಣಗಳನ್ನು ಒರಗೆ ಹಚ್ಚಲಾಗುತ್ತದೆ.

ಪ್ರಜಾಪ್ರಭುತ್ವವು ಜನರ ಹಿತದ್ದಲ್ಲ. ಅದರಿಂದ ಶ್ರೀಮಂತರು ಹಾಗೂ ದಂಧೆಕೋರ ರಾಜಕಾರಣಿಗಳು ಸೊಕ್ಕೇರುತ್ತಾರೆ. ಅದರಿಂದ ಸಾಮಾನ್ಯರಿಗೆ ನಷ್ಟವಾಗುತ್ತದೆ. ರಾಷ್ಟ್ರದ ಹಿತದ ಗಹನ ಪ್ರಶ್ನೆಗಳು ಸರ್ವೇಸಾಮಾನ್ಯ ಜನರಿಗೆ ಅರ್ಥವಾಗವು. ಅದರ ಬಗೆಗೆ ಅವರಲ್ಲಿ ಆಸ್ತೆ ಇರದು. ಹೀಗಾಗಿ ಅರಿತವರು ಅವುಗಳನ್ನು ಎದುರಿಸುವುದು ಒಳ್ಳೆಯದು. ಫ್ಯಾಶಿಸಂನ ಅಭಿಜನವಾದವು ಇದರಿಂದ (ಇಲಿಟಿಸಂ) ಸ್ಪಷ್ಟವಾಗುತ್ತದೆ. ಆದರೆ ಫ್ಯಾಶಿಸ್ಟರಿಗೆ ಅದು ತಪ್ಪಾಗಿ ಕಾಣುವುದಿಲ್ಲ.

ಫ್ಯಾಶಿಸಂ ವ್ಯಕ್ತಿಯ ಸ್ವಾತಂತ್ರ ಹಾಗೂ ವ್ಯಕ್ತಿಯ ಸಮಾನತೆಯನ್ನು ಒಪ್ಪುವುದಿಲ್ಲ. ವಿಷಮತೆಯು ಪ್ರಕೃತಿದತ್ತವಾದುದು. ಅದು ಇಲ್ಲವಾಗದು. ಕೆಲವರಲ್ಲಿ ನಾಯಕತ್ವದ ಗುಣಗಳಿವೆ. ಅವರ ಅಪ್ಪಣೆಯಂತೆ ನಡೆದುಕೊಳ್ಳು ವುದೇ ಉಳಿದವರ ಕರ್ತವ್ಯ. ಅದರಲ್ಲೇ ಅವರ ಸ್ವಾತಂತ್ರವಿದೆ, ಜೀವನದ ಪರಿಪೂರ್ಣತೆ ಇದೆ.

ಆರ್ಥಿಕ ಕಾರಣಗಳಿಂದ ಇತಿಹಾಸವು ನಿರ್ಮಾಣವಾಗುವುದಿಲ್ಲ. ಅದು ಪರಾಕ್ರಮಿ ಪುರುಷರ ಪರಾಕ್ರಮದಿಂದಾಗಿ ಉಂಟಾಗುತ್ತದೆ ಅವರ ಮನದಂತೆ ಪರಾಕ್ರಮವನ್ನು ಮೆರೆಯಲು ಅವರಿಗೆ ಅವಕಾಶವನ್ನು ನೀಡುವುದರಲ್ಲೇ ಸಮಾಜದ ಹಿತವಿದೆ ರಾಷ್ಟ್ರದ ನಾಯಕನಿಗೆ ನೆರವಾಗಲು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲೆಂದು ಒಂದು ಸಂಘಟನೆಯ ಅವಶ್ಯವಿದೆ. ಅಂಥ ಸಂಸ್ಥೆ ಯೆಂದರೆ ಫ್ಯಾಶಿಸ್ಟ್ ಪಕ್ಷ. ಈ ಪಕ್ಷವು ಶಿಸ್ತುಬದ್ದವೂ ಹೋರಾಟಗಾರ ಪ್ರವೃತ್ತಿ ಯದೂ ಆಗಿರಬೇಕು. ಅದು ನಾಯಕನನ್ನು ಪೂರ್ತಿಯಾಗಿ ನಂಬಬೇಕು.

ಇವು ಫ್ಯಾಸಿಸಂ ಅಥವಾ ನಾಝಿಸಂನ ಸರ್ವೇಸಾಮಾನ್ಯ ತತ್ತ್ವಗಳು.ಅದರ ತತ್ತ್ವಜ್ಞಾನದ ಅಂದರೆ ವಿಶ್ವವನ್ನು ಕುರಿತಾದ ಪರಿಕಲ್ಪನೆಗಳನ್ನು ಇಲ್ಲಿ ಬೇಕೆಂದೇ ಉಲ್ಲೇಖಿಸಿಲ್ಲ. ಏಕೆಂದರೆ. ಅವು ತುಂಬ ಗೋಜಲಿನವು, ಅಸಂಗತವಾದವುಗಳು. ಫ್ಯಾಶಿಸಂ ಜಡವಾದಿಯೋ ಇಲ್ಲವೆ ಆದರ್ಶವಾದಿಯೋ ಎನ್ನುವುದನ್ನು ಹೇಳುವುದು ಕೂಡ ಕಷ್ಟದ ಸಂಗತಿ. ಅದರ ಕೃತಿಯಲ್ಲಿ ಕೆಳಮಟ್ಟದ ಜಡವಾದ ಅಥವಾ ಭೌತಿಕವಾದವು ಕಂಡುಬರುತ್ತದೆ. ರಾಜ್ಯವೆಂಬ ಅದರ ಎಲ್ಲದಕ್ಕೂ ಹೆಚ್ಚು ಮಹತ್ವದ ಪರಿಕಲ್ಪನೆಯಲ್ಲಿ ಆದರ್ಶವಾದವು ಕಂಡುಬರುತ್ತದೆ. ಫ್ಯಾಶಿಸಂ ಅಥವಾ ನಾಝಿಸಂಗೆ ಹಿಂಸೆ ಅಪಥ್ಯವಲ್ಲ. ಅದರಲ್ಲಿ ಹಿಂಸೆಯನ್ನು ಪುರಿಸ್ಕರಿಸಲಾಗುತ್ತದೆ. ಹಾಗೆಯೇ ನೀತಿ-ಅನೀತಿಗಳ ನಿಷೇಧವು ಅದಕ್ಕಿಲ್ಲ. ರಾಷ್ಟ್ರಿಯ ಉದ್ದೇಶಗಳನ್ನು ಸಾಧಿಸಲೆಂದು ಯಾವುದೇ ಮಾರ್ಗವನ್ನು ಅನುಸರಿಸಿದರೂ ಸರಿ. ಫ್ಯಾಶಿಸಂ ಶಾಂತವಾದಿಯಾಗಿರದೆ ಯುದ್ಧವಾದಿಯಾಗಿದೆ. ಅದು ಉಗ್ರ ರಾಷ್ಟ್ರವಾದಿಯಾಗಿದೆ. ಉಗ್ರ ರಾಷ್ಟ್ರವಾದ ಹಾಗೂ ಯುದ್ಧಗಳು ಯಾವಾಗಲೂ ಜೊತೆಯಾಗಿರುತ್ತದೆ.

ಐತಿಹಾಸಿಕ ದೃಷ್ಟಿಯಿಂದ ಮೊದಲ ಮಹಾಯುದ್ಧವು ಮುಗಿದ ತರುವಾಯ ಫ್ಯಾಶಿಸಂ ಹಾಗೂ ಅದರ ಅವಳಿಯಾದ ನಾಝಿಸಂ ಹುಟ್ಟಿ ಬಂದವು. ವಾರ್ಸಾದ ಒಪ್ಪಂದದಂತೆ ತಯಾರಾದ ಅಂತರ್‌ರಾಷ್ಟ್ರೀಯ ವ್ಯವಸ್ಥೆಯನ್ನು ಕಿತ್ತೆಸೆಯಲೆಂದು ನಡೆದ ಯುದ್ಧದಲ್ಲಿ ಜರ್ಮನಿಗೆ ಸೋಲಾಗಿತ್ತು. ಅದರಿಂದಾಗಿ ಅದು ತನ್ನ ವಸಾಹತುಗಳನ್ನು ಹಾಗೂ ಎಲ್ಸೆಸ್-ಲಾರೆನ್‌ರಂತಹ ಮಹಾನುಭಾವರನ್ನೂ ಕಳೆದುಕೊಳ್ಳಬೇಕಾಯಿತು. ಇಟಲಿ ಸೋತಿರಲಿಲ್ಲ. ಆದರೆ ಯುದ್ಧದ ತರುವಾಯ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲೆಂದು ದಕ್ಷಿಣ ಯುರೋಪ್ ಹಾಗೂ ಉತ್ತರ ಆಫ್ರಿಕಾದಲ್ಲಿ ತನಗೆ ಕೆಲವೊಂದು ಪ್ರದೇಶವು ಲಭಿಸಬಹುದೆಂದು ಆಶಿಸಿತ್ತು. ಅದು ಪೂರ್ತಿಯಾಗಿರಲಿಲ್ಲ. ಹಿಗಾಗಿ ಇಟಲಿ ಅಸಮಾಧಾನಿಯಾಗಿತ್ತು. ಎರಡೂ ದೇಶಗಳು ತಮ್ಮ ಮೇಲೆ ಅನ್ಯಾಯವಾಗಿದೆಯೆಂದು ಭಾವಿಸಿದವು. ತಮಗಾದ ಅನ್ಯಾಯವನ್ನು ಪರಿಹರಿಸಿಕೊಳ್ಳಲೆಂದು ಅವೆರಡೂ ದೇಶಗಳಿಗೆ ಯುದ್ಧ ಬೇಕಿತ್ತು. ಹೀಗಾಗಿ ಅವು ಉಗ್ರ ರಾಷ್ಟ್ರವಾದ ಹಾಗೂ ಯುದ್ಧಕೋರ ಪ್ರವೃತ್ತಿಗಳಿಗೆ ಉತ್ತೇಜನವನ್ನು ನೀಡಿದವು. ಅದೇ ಫ್ಯಾಶಿಸ್ಟ್ ಹಾಗೂ ನಾಝಿ ಪಕ್ಷಗಳ ಕಾರ್ಯಕ್ರಮವಾಗಿತ್ತು. ಹೀಗಾಗಿ ಅವುಗಳಿಗೆ ರಾಜಾಶ್ರಯ ದೊರೆತು, ಎರಡೂ ಪಕ್ಷಗಳ ಬಲ ಹಾಗೂ ಮಹತ್ವಗಳು ಒಮ್ಮೆಲೇ ಬೆಳೆದವು.

ದೇ ಕಾಲಕ್ಕೆ ಬೇರೊಂದು ಘಟನೆ ನಡೆಯುತ್ತಿತ್ತು. ಅಂದರೆ ಸಂಬಳ ಕಡಿತ, ಕೆಲಸದ ಹೆಚ್ಚಳ, ಕಾರ್ಮಿಕರನ್ನು ಕೆಲಸದಿಂದ ವಜಾ ಗೊಳಿಸುವುದು, ಮುಂತಾದ ಹಲವು ಬಗೆಯ ಬಂಡವಾಳ ಶಾಹಿಯ ಕಾರ್ಮಿಕರ ಮೇಲಿನ ಹಲ್ಲೆಗಳು. ಯುದ್ಧಾನಂತರದ ಆರ್ಥಿಕ ಪರಿಸ್ಥಿತಿಯಲ್ಲಿ ಬಂಡವಾಳ ಶಾಹಿಗಳಿಗೆ, ಕಾರ್ಮಿಕರಿಗೆ ಹೊಸ ಸವಲತ್ತುಗಳನ್ನು ನೀಡಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲದೆ ಹಳೆಯ ಸವಲತ್ತುಗಳನ್ನು ಮುಂದುವರಿಸುವುದು ಕೂಡ ಅಸಾಧ್ಯವಾಗಿತ್ತು. ಏಕೆಂದರೆ ಬಂಡವಾಳಶಾಹಿಯ ಬೆಳವಣಿಗೆ ನಿಂತಿತ್ತು. ಅದರಿಂದಾಗಿ ತೀವ್ರವಾದ ವರ್ಗಯುದ್ಧವು ಶುರುವಾಯಿತು. ಕಾರ್ಮಿಕರ ಮುಷ್ಕರ, ಪ್ರತಿಭಟನೆ ಮೊದಲಾದವನ್ನಂತೂ ಮಾಡಿಯೇ ಮಾಡುತ್ತಿದ್ದರು. ಅದರ ಜೊತೆಗೆ ರಾಜಕೀಯ ಹೋರಾಟವನ್ನು ಆರಂಭಿಸಿದರು. ಆ ಹೋರಾಟವು ರಶ್ಯಾದಲ್ಲಿ ಯಶಸ್ವಿಯಾಯಿತು. ಅಲ್ಲಿ ಕಾರ್ಮಿಕರ ರಾಜ್ಯದ ಸ್ಥಾಪನೆಯಾಯಿತು. ಇತರ ದೇಶಗಳ ಬಂಡವಾಳದಾರರಿಗೆ ಇದೇ ಹೆದರಿಕೆ ಇತ್ತು. ಇಂಥ ಕಾಲಕ್ಕೆ ಅವರಿಗೆ ಫ್ಯಾಶಿಸ್ಟ್ ವಿಚಾರಸರಣಿ ಹಾಗೂ ಫ್ಯಾಶಿಸ್ಟ್ ಪಕ್ಷಗಳು ಆಧಾರವನ್ನು ಒದಗಿಸಿದವು.

ಸೌಮ್ಯವಾದಿ ಹಾಗೂ ಸಮಾಜವಾದಿ ವಿಚಾರಗಳಿಗೆ ಉತ್ತರ ನೀಡಬಲ್ಲ ಸಾಮರ್ಥ್ಯವು ಫ್ಯಾಶಿಸಂನಲ್ಲಿ ಇರುವುದು ಅವರಿಗೆ ಕಂಡು ಬಂದು, ಫ್ಯಾಶಿಸ್ಟ್ ಪಕ್ಷವು ಕಾರ್ಮಿಕ ಚಳವಳಿಯ ಹಾಗೂ ಸಂಘಟನೆಗಳನ್ನು ಹತ್ತಿಕ್ಕುವ ಯಂತ್ರಗಳನ್ನು ಒದಗಿಸಿತು. ಹೀಗಾಗಿ ಬಂಡವಾಳಶಾಹಿ ಹಾಗೂ ಫ್ಯಾಶಿಸಂಗಳ ನಡುವೆ ಹತ್ತಿರದ ನಂಟು ತಯಾರಾಯಿತು. ಈ ಅನುಭವದಿಂದ ಫ್ಯಾಶಿಸಂನ್ನು ಕುರಿತಾದ ಮಾರ್ಕ್ಸ್‌ವಾದಿಗಳ ಸಿದ್ಧಾಂತವು ತಯಾರಾಯಿತು. ಅವರ ಸಿದ್ಧಾಂತವು ಹೀಗಿದೆ: ಬಂಡವಾಳಶಾಹಿಗೆ ಇಳಿಗಾಲ ಬರುತ್ತಲೇ ಅದು ಫ್ಯಾಶಿಸಂನ್ನು ಹುಟ್ಟುಹಾಕುತ್ತದೆ. ಏರುಗತಿಯ ಕಾಲದಲ್ಲಿ ಅದು ಕಾರ್ಮಿಕ ಪ್ರಜಾಪ್ರಭುತ್ವ, ಕಾರ್ಮಿಕ ಸಂಘ, ಕಾರ್ಮಿಕರ ಮುಷ್ಕರ ಮೊದಲಾದವನ್ನು ಸಹಿಸಬಲ್ಲುದಾಗಿತ್ತು. ಇಳಿಗಾಲದಲ್ಲಿ ಇವೆಲ್ಲವನ್ನು ಸಹಿಸುವುದು ಸಾಧ್ಯವಿಲ್ಲವೆಂದು ಕಂಡುಬಂದು ಬಂಡವಾಶಾಹಿಯು ಅವುಗಳನ್ನು ನಾಶಪಡಿಸಲೆಂದು ಫ್ಯಾಶಿಸಂನ್ನು ಹುಟ್ಟುಹಾಕಿತು. ಇದರ ದೋಷವೆಂದರೆ ಬಂಡವಾಳ ಶಾಹಿಯಿಂದ ಫ್ಯಾಶಿಸಂಗೆ ಸಾಕಷ್ಟು ನೆರವು ದೊರೆತಿದ್ದರೂ ಅದು ಫ್ಯಾಶಿಸಂನ್ನು ಹುಟ್ಟುಹಾಕಿತೆಂದು ಹೇಳುವುದು ಕಷ್ಟ. ಅದು ಮೊದಲೇ ಅಸ್ತಿತ್ವಕ್ಕೆ ಬಂದಾಗಿತ್ತು. ಬಂಡವಾಳಶಾಹಿಯು ಅದರ ಉಪಯುಕ್ತತೆಯನ್ನು ಕಂಡುಕೊಂಡು ತರುವಾಯದಲ್ಲಿ ಅದನ್ನು ಪೋಷಿಸಿತು.

ಇದೇ ರೀತಿಯಾಗಿ ರಾಜಕೀಯಸತ್ತೆಯನ್ನು ಕೈವಶ ಮಾಡಿಕೊಂಡ ತರುವಾಯ ಫ್ಯಾಶಿಸಂ ಕೂಡ ಬಂಡವಾಳಶಾಹಿಯನ್ನು ಜೀತದಾಳಿನಂತೆ ದುಡಿಸಿಕೊಂಡಿತೆಂಬುದನ್ನು ಮರೆಯುವಂತಿಲ್ಲ. ಫ್ಯಾಶಿಸಂನ ಸ್ವರೂಪವು ಕೇವಲ ಬಂಡವಾಳದಾರರ ಪಕ್ಷ ಎಂದಷ್ಟೇ ಆಗಿದ್ದರೆ ಮಧ್ಯಮ ವರ್ಗವು ಅದಕ್ಕೆ ಬೆಂಬಲವನ್ನು ನೀಡುತ್ತಿರಲಿಲ್ಲ. ಆದರೆ ಅದರ ಉಗ್ರ ರಾಷ್ಟ್ರವಾದ ಹಾಗೂ ಮಧ್ಯಮ ವರ್ಗಕ್ಕೆ ಬೇರೆ ಮತ್ತು ಸ್ವತಂತ್ರ ಸ್ಥಾನವನ್ನು ನೀಡುವ ಅದರ ಘೋಷಣೆಗಳು ಮಧ್ಯಮವರ್ಗದವರನ್ನು ಮರುಳು ಮಾಡಿದವು. ಹೀಗಾಗಿ ಅವರು ಫ್ಯಾಶಿಸಂನ ಚಿತ್ರಹಿಂಸೆಯತ್ತ ಅಲಕ್ಷ್ಯ ತೋರಿದರು. ತರುವಾಯದಲ್ಲಿ ಅವರು ಇದಕ್ಕಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇಬೇಕಾಯಿತು. ಮುಸಲೋನಿಯು ಸತ್ತೆಯನ್ನು ಪಡೆದಾದ ಬಳಿಕ ಅದನ್ನು ಸುಸಂಘಟಿತ ಹಾಗೂ ಸ್ಥಿರಗೊಳಿಸಲೆಂದು ಅವನು ಮೊದಲ ಮೂರು-ನಾಲ್ಕು ವರ್ಷಗಳನ್ನು ಕಳೆಯಬೇಕಾಯಿತು. ಈ ಕಾಲದಲ್ಲಿ ಅವನು ವಿರೋಧಿ ಪಕ್ಷಗಳು ಹಾಗೂ ವಿರೋಧಿ ಸಂಸ್ಥೆಗಳನ್ನೆಲ್ಲ ನಾಶಪಡಿಸಿದನು. ಅವನು ದೇಶದ ಕಾನೂನು ಮಂಡಲಿ, ನೌಕರಶಾಹಿ, ಸೈನ್ಯ, ವೃತ್ತಪತ್ರ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ತನ್ನ ಅಧಿಕಾರವನ್ನು ಸಾಧಿಸಿದನು. ಅಂದರೆ ಅವನು ದೇಶದಲ್ಲಿ ಒಬ್ಬ ನಾಯಕ, ಒಂದು ಪಕ್ಷ ಹಾಗೂ ಒಂದು ಧ್ವನಿ ಇರಬೇಕೆನ್ನುವ ಫ್ಯಾಶಿಸಂನ ಕಾರ್ಯಕ್ರಮವನ್ನು ಕಾರ್ಯಾಚರಣೆಗೆ ತಂದನು.

ಅದನ್ನು ಮಾಡುವಾಗ ಅವನು ತುಂಬ ದಬ್ಬಾಳಿಕೆ ನಡೆಸಿದನು. ವಿರೋಧಕರ ಮೇಲೆ ಬಲಾತ್ಕಾರವನ್ನು ಮಾಡಿದನು. ಎಲ್ಲ ಪ್ರಜಾತಂತ್ರದ ಹಕ್ಕುಗಳನ್ನು ಮೆಟ್ಟಿದನು. ಆದರೆ ದೇಶದ ಕಾನೂನು ಹಾಗೂ ಆಡಳಿತದ ಪರಿಸ್ಥಿತಿಯು ಹದಗೆಟ್ಟಿತ್ತು. ಅವನು ಅದನ್ನು ಮತ್ತೆ ಸ್ಥಾಪಿಸಿದನು. ಅದರಿಂದಲೇ ಹಲವರಿಗೆ ಮೆಚ್ಚುಗೆಯಾಯಿತು. ಮುಸಲೋನಿಯ ರಾಜ್ಯದಲ್ಲಿ ವಾಹನಗಳು ವೇಳೆಗೆ ಸರಿಯಾಗಿ ಹೊರಡುತ್ತವೆಂದು ಹಲವರು ಅವನನ್ನು ಕೊಂಡಾಡಿದರು. ಆದರೆ ಅದಕ್ಕಾಗಿ ತೆತ್ತ ಬೆಲೆ ಎಷ್ಟು? ಮುಂದೆ ಎಷ್ಟನ್ನು ತೆರಬೇಕಾದೀತು ಎನ್ನುವುದನ್ನು ಅವರು ಮರೆತರು. ತರುವಾಯದಲ್ಲಿ ಮುಸಲೋನಿಯ ಸಾಮ್ರಾಜ್ಯಯುಗವೇ ಫ್ಯಾಶಿಸಂನ ಕಾರ್ಯಕ್ರಮವನ್ನು ಅನುಸರಿಸಿ ಆರಂಭವಾಯಿತು. ಸಾಮ್ರಾಜ್ಯವಾದವು ಫ್ಯಾಶಿಸಂನ ಅವಿಭಾಜ್ಯ ಭಾಗವಾಗಿದೆ. ಉಗ್ರ ರಾಷ್ಟ್ರವಾದವು ಯಾವಾಗಲೂ ಸಾಮ್ರಾಜ್ಯವಾದದಲ್ಲಿ ಪರಿವರ್ತಿತವಾಗುತ್ತದೆ.

ಫ್ಯಾಶಿಸಂನ ಕಣ್ಣೆದುರು ಹಳೆಯ ರೋಮನ್ ಸಾಮ್ರಾಜ್ಯದ ಗುರಿ ಇತ್ತು. ಫ್ಯಾಶಿಸ್ಟರು ಆ ಕಾಲದಲ್ಲಿ ಇಟಲಿಗೆ ಇದ್ದ ಪ್ರತಿಷ್ಠೆಯನ್ನು ಮರಳಿ ಪಡೆಯುವ ಕನಸನ್ನು ಕಾಣುತ್ತಿದ್ದರು. ಅದಕ್ಕಾಗಿ ಯುದ್ಧಗಳನ್ನು ಮಾಡಬೇಕಾದೀತು ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ಅವರು ಸೈನ್ಯವನ್ನು ಸುಸಜ್ಜಿತವಾಗಿ ಇರಿಸುವತ್ತ ಹೆಚ್ಚಿನ ಗಮನ ಹರಿಸಿದರು. ತಮಗೆ ರೊಟ್ಟಿ ಸಿಗದಿದ್ದರೂ ನಡೆದೀತು, ಆದರೆ ಸೈನ್ಯಕ್ಕೆ ಯುದ್ಧದ ಸಲಕರಣೆಗಳ ಕೊರತೆಯಾಗಕೂಡದು ಎನ್ನುವ ಆಗ್ರಹ ಅವರದಾಗಿತ್ತು. ಅವನು ಇಟಲಿಯ ಜನತೆಯನ್ನು ಉದ್ದೇಶಿಸಿ ತಯಾರಿಸಿದ ಒಂದು ಘೋಷಣೆಯಲ್ಲಿ, ‘‘ನಂಬಿ. ಅಪ್ಪಣೆ ಪಾಲಿಸಿ. ಹೋರಾಡಿ,’’ ಎಂದೆನ್ನಲಾಗಿತ್ತು. 1939ರ ತನ್ನೊಂದು ಭಾಷಣದಲ್ಲಿ ಮುಸಲೋನಿಯು, ‘‘ನಾವು ಶಸ್ತ್ರಬಲವನ್ನು ಹೆಚ್ಚಿಸಿಕೊಳ್ಳಬೇಕೆಂಬುದು ಹೆಚ್ಚು ಮಹತ್ವದ್ದೂ, ಖಚಿತವೂ ಆದ ಸಂಗತಿಯಾಗಿದೆ. ಅದಕ್ಕಾಗಿ ಹೆಚ್ಚು ಬಂದೂಕುಗಳು, ಹೆಚ್ಚು ಹಡಗುಗಳು ಹಾಗೂ ಹೆಚ್ಚು ವಿಮಾನಗಳನ್ನು ಪಡೆದುಕೊಳ್ಳಿ. ಅವಕ್ಕಾಗಿ ಅದೆಷ್ಟೇ ಬೆಲೆಯನ್ನು ತೆರಬೇಕಾಗಿ ಬಂದರೂ ಪರವಾಗಿಲ್ಲ.

 ಅದಕ್ಕಾಗಿ ಯಾವುದೇ ಬಗೆಯ ಅಭ್ಯಂತರವಿಲ್ಲ. ಅದಕ್ಕಾಗಿ ಸುಸಂಸ್ಕೃತವೆನ್ನಿಸಿದ ನಮ್ಮ ಜೀವನವನ್ನೇ ತೆತ್ತರೂ ಸರಿಯೇ’’ ಎಂದು ಅಪ್ಪಣೆ ಮಾಡಿದ್ದನು. ಮುಸಲೋನಿಯ ಈ ಭಾಷಣದಲ್ಲಿ ಯುದ್ಧದ ಬಗೆಗಿನ ಪ್ಯಾಸಿಸಮ್‌ನ ಧೋರಣೆಯು ಚೆನ್ನಾಗಿ ಪ್ರತಿಬಿಂಬಿತಗೊಂಡಿದೆ.

ಫ್ಯಾಶಿಸಂ ಧೋರಣೆಗೆ ತಕ್ಕಂತೆ ಮುಸಲೋನಿಯು ಇಟಲಿಯ ಸಾಮ್ರಾಜ್ಯವನ್ನು ವಿಸ್ತರಿಸಲೆಂದು 1935 ರಲ್ಲಿ ಎಬಿಸೀನಿಯಾ(ಇಂದಿನ ಇಥಿಯೋಪಿಯಾ)ದ ಮೇಲೆ ದಾಳಿ ಮಾಡಿ, ಅದನ್ನು ವಶಪಡಿಸಿಕೊಂಡನು. ತರುವಾಯ 1939ರಲ್ಲಿ ಅಲ್ಬೇನಿಯವನ್ನು ಕೂಡ ನುಂಗಿದನು. ಸಂಸ್ಕೃತಿಯ ಪ್ರಸಾರಕ್ಕಾಗಿ ತಾನು ಹೀಗೆ ಮಾಡಿದೆನೆಂದು ತನ್ನನ್ನು ಸಮರ್ಥಿಸಿಕೊಳ್ಳುತ್ತಿದ್ದನು. ಅವನು ಸುಯೇಜ್ ಕಾಲುವೆ ಹಾಗೂ ಈಜಿಪ್ತುಗಳ ಮೇಲೂ ತನ್ನ ಅಧಿಕಾರವನ್ನು ಸ್ಥಾಪಿಸಬಯಸಿದ್ದನು. ಆದರೆ ಅಷ್ಟರಲ್ಲಿ, ಅಂದರೆ 1939ರಲ್ಲಿ ಎರಡನೆಯ ಮಹಾಯುದ್ಧ ಶುರುವಾಗಿ, ಅದಕ್ಕೆ ಫ್ಯಾಶಿಸಂ ವಿರುದ್ಧದ ಯುದ್ಧವೆಂಬ ಸ್ವರೂಪ ಲಭಿಸಿ, ಇಟಲಿ, ಜರ್ಮನಿ ಹಾಗೂ ಜಪಾನ್ ದೇಶಗಳ ಫ್ಯಾಶಿಸ್ಟ್ ರಾಜ್ಯಾಡಳಿತಗಳು ಆಹುತಿಯಾದವು. ನಾಝಿ-ಫ್ಯಾಶಿಸ್ಟ್ ಜಪಾನಿನ ಸರ್ವಾಧಿಕಾರಿಗಳ ಯುದ್ಧಪಿಪಾಸೆ ಹಾಗೂ ಸಾಮ್ರಾಜ್ಯತ್ರಷ್ಣೆಯೇ ಈ ಯುದ್ಧ ಶುರುವಾಗಲು ಕಾರಣ. ಯುದ್ಧಪಿಪಾಸೆ ಹಾಗೂ ಸಾಮ್ರಾಜ್ಯತ್ರಷ್ಣೆಯೇ ಫ್ಯಾಶಿಸಂನಲ್ಲಿ ಅಡಕವಾಗಿರುವ ಸಂಗತಿಗಳು. ಜೊತೆಗೆ, ಪ್ರಜಾಪ್ರಭುತ್ವದ ಬಗೆಗೆ ಅವುಗಳಲ್ಲಿರುವ ತಿರಸ್ಕಾರ ಬೇರೆ. ಅಲ್ಲದೆ, ಪ್ರಜಾಪ್ರಭುತ್ವವಾದಿ ದೇಶಗಳು ಇಷ್ಟೊಂದು ತೀವ್ರತೆಯಿಂದ ಹೋರಾಡಬಹುದೆಂದು ಅವುಗಳಿಗೆ ಅನ್ನಿಸಿರಲಿಲ್ಲ.

ತಾವು ಸಹಜವಾಗಿ ಗೆಲ್ಲಬಹುದೆಂಬ ಕನಸು ಕಾಣುತ್ತಿದ್ದವು. ಆದರೆ ಪ್ರಜಾಪ್ರಭುತ್ವವು ಅವರ ಭ್ರಮೆಯನ್ನು ದೂರ ಮಾಡಿತು. ಯುದ್ಧದಲ್ಲಾದ ಸೋಲಿನಿಂದ ಸರ್ವಾಧಿಕಾರಿ ದೇಶಗಳು ನಾಶಹೊಂದಿದ್ದಷ್ಟೇ ಅಲ್ಲದೇ ಅವು ಕಟ್ಟಿದ ಸಂಘಟನೆಗಳು ಕೂಡ ನಾಶ ಹೊಂದಿದವು. ಎರಡನೆಯ ಮಹಾಯುದ್ಧದಿಂದಾಗಿ ಫ್ಯಾಶಿಸ್ಟ್ ರಾಜ್ಯಾಡಳಿತಗಳೇನೋ ನಾಶ ಹೊಂದಿದರೂ ಫ್ಯಾಶಿಸ್ಟ್ ಮನೋಧರ್ಮ ಮಾತ್ರ ನಾಶ ಹೊಂದಿತೆನ್ನುವಂತಿಲ್ಲ. ಮಾನವನು ತನ್ನ ಅಧಿಕಾರವನ್ನು ಮೆರೆಯಬಯಸುತ್ತಾನೆ. ಅವಕಾಶ ಸಿಕ್ಕುತ್ತಲೇ ಇಂಥ ಕೆಲವರು ತಲೆಯೆತ್ತುತ್ತಾರೆ. ಉಳಿದವರ ಅಸಹಾಯಕತೆಯೇ ಇಂಥವರಿಗೆ ಒಂದು ಸುವರ್ಣಾವಕಾಶ ಎಂದೆನ್ನಿಸುತ್ತದೆ. ರಾಜಕೀಯ ವಿಪತ್ತು ಇಲ್ಲವೇ ಆರ್ಥಿಕ ಸಂಕಟಗಳಿಂದಾಗಿ ಸಮೂಹದಲ್ಲಿ ಕೆಲವೊಮ್ಮೆ ಅಸಹಾಯಕತೆ ತಲೆದೋರುತ್ತದೆ. ಜನರು ತಕ್ಕ ಆಧಾರಕ್ಕಾಗಿ ಹುಡುಕಾಟವನ್ನು ಆರಂಭಿಸುತ್ತಾರೆ. ಆಗ ಸಾಮರ್ಥ್ಯಶಾಲಿಯಾದವನು ಇಂಥವರಿಗೆ ಆಧಾರವನ್ನು ಒದಗಿಸಲು ಮುಂದಕ್ಕೆ ಬರುತ್ತಾನೆ. ಇದು ಸಣ್ಣ ಪ್ರಮಾಣದಲ್ಲಿದ್ದರೆ ಇಂಥವನನ್ನು ದಾದಾ ಇಲ್ಲವೆ ಗೂಂಡಾ ಎಂದೆನ್ನುತ್ತಾರೆ. ಆದರೆ ಇದೇ ಸಂಗತಿಯು ದೇಶವ್ಯಾಪಿಯಾದರೆ ಅಂಥವನನ್ನು ಫ್ಯಾಶಿಸ್ಟ್, ಸರ್ವಾಧಿಕಾರಿ ಎನ್ನುತ್ತಾರೆ. ಇಂಥ ಸಂಕಟವನ್ನು ತಪ್ಪಿಸಲು ಒಂದೇ ಒಂದು ದಾರಿಯಿದೆ. ಅದೆಂದರೆ ಮನುಷ್ಯರು ಅಸಹಾಯಕರಾಗದ ಹಾಗೆ ನೋಡಿಕೊಳ್ಳುವುದು, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು, ಅವರಿಗೆ ಸಂಕಟಕಾಲದಲ್ಲಿ ಆಧಾರವನ್ನು ಒದಗಿಸಬಲ್ಲ ಅವರದಾದ ಸಂಘಟನೆಗಳನ್ನು ಕಟ್ಟುವುದು. ಪ್ರಜಾಪ್ರಭುತ್ವವು ಯಾವ ಪ್ರಮಾಣದಲ್ಲಿ ಈ ಕಾರ್ಯವನ್ನು ನೆರವೇರಿಸುವುದೋ ಆ ಪ್ರಮಾಣದಲ್ಲಿ ಫ್ಯಾಶಿಸಂ ಕಡಿಮೆಯಾಗುವುದು.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)