varthabharthiಭೀಮ ಚಿಂತನೆ

ಕ್ರಾಂತಿಯ ಉಪಾಸನೆಯೋ ಅಥವಾ ಧ್ಯೇಯದ ರಕ್ಷಣೆಯೋ?

ವಾರ್ತಾ ಭಾರತಿ : 9 Nov, 2018

ಮೊದಲ ಮಹಾಯುದ್ಧ ಮುಗಿದ ನಂತರ ಯೂರೋಪ್‌ನ ಬಹುತೇಕ ದೇಶಗಳಿಗೆ ಪ್ರಜಾಸತ್ತೆಯು ದೇಶಕ್ಕೂ ಸಮಾಜಕ್ಕೂ ಹಿತವಲ್ಲವೆಂದು ಅನಿಸತೊಡಗಿತು. ರಶ್ಯ ದೇಶವು ಕಮ್ಯುನಿಸಂನ ತತ್ವಜ್ಞಾನವನ್ನು ಸ್ವೀಕರಿಸಿ, ಅದುವೇ ಎಲ್ಲ ದೇಶಗಳಿಗೆ ಶ್ರೇಯವೆಂದು ಪ್ರಚಾರ ಮಾಡಿತು. ಜರ್ಮನಿಯಲ್ಲಿ ನಾಝಿಸಮ್ ಆರಂಭವಾಗಿ, ಅದೂ ಅಂತೆಯೇ ಪ್ರಚಾರ ನಡೆಸಿ, ಯೂರೋಪ್‌ನಲ್ಲಿ ಪ್ರಜಾಸತ್ತೆ, ಸೌಮ್ಯವಾದ, ದಂಡಾಧಿಪತ್ಯ (ಫ್ಯಾಶಿಸಮ್-ನಾಝಿಸಮ್) ಹೀಗೆ ಮೂರು ಗುಂಪುಗಳಾಗಿ, ಅವು ಪರಸ್ಪರ ವೈರಿಗಳಾದವು. ದಂಡಾಧಿಪತ್ಯದ ಗುಂಪು, ಪ್ರಜಾಸತ್ತೆ ಹಾಗೂ ಸೌಮ್ಯವಾದವನ್ನು ನಾಶ ಮಾಡುವುದಾಗಿ ಘೋಷಿಸತೊಡಗಿತು. ಹಿಟ್ಲರ್ ಮತ್ತು ಮುಸಲೋನಿ, ಪ್ರಜಾಸತ್ತೆಯನ್ನು ನಷ್ಟಗೊಳಿಸಿದರೆ, ಅದು ತಮ್ಮನ್ನೂ ನಷ್ಟಗೊಳಿಸುವುದೆಂದು ಸ್ಟಾಲಿನ್‌ಗೆ ಭೀತಿಯಾಗತೊಡಗಿತು ಮತ್ತು ಆ ಇಬ್ಬರು ದಂಡಾಧಿಕಾರಿಗಳು ಸ್ಟಾಲಿನ್‌ನ ಸೌಮ್ಯವಾದವನ್ನು ನಾಶಪಡಿಸಿದರೆ, ಮತ್ತೆ ತಮ್ಮನ್ನೂ ನಾಶಪಡಿಸಬಹುದೆಂದು ಪ್ರಜಾಸತ್ತಾತ್ಮಕ ರಾಷ್ಟ್ರಗಳಿಗೆ ಅನಿಸತೊಡಗಿತು. ಸ್ವಶಕ್ತಿಯನ್ನು ಹೆಚ್ಚಿಸಲೆಂದೇ ಈ ಮೂರು ಗುಂಪಿನ ಸ್ಪರ್ಧೆ ಆರಂಭವಾಯಿತು.

ಇಟಲಿಯು ಅಬಿಸೀನಿಯಾ ಮೇಲೆ ದಾಳಿ ಮಾಡಿ ಆ ದೇಶವನ್ನು ತನ್ನ ವರ್ಚಸ್ಸಿನಡಿಯಲ್ಲಿ ತಂದಿತು. ಜರ್ಮನಿಯು, ಪೋಲೆಂಡ್, ಜೆಕೊಸ್ಲೊವಾಕಿಯಾ, ಆಸ್ಟ್ರಿಯಾ ದೇಶಗಳನ್ನು ಜಯಿಸಿತು ಮತ್ತು ಎರಡನೇ ಮಹಾಯುದ್ಧಕ್ಕೆ ದನಿಯಿತ್ತಿತ್ತು. ಜರ್ಮನಿ ಮತ್ತು ಇಟಲಿಯ ಮೇಲೆ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಯುದ್ಧ ಸಾರಿದವು. (3-9-1939) ಜರ್ಮನ್ ಮತ್ತು ರಶ್ಯಗಳ ನಡುವೆ ಮೈತ್ರಿಯ ಒಪ್ಪಂದವಾಯಿತೆಂದು ರಶ್ಯ ಯುದ್ಧಕ್ಕಿಳಿಯಲಿಲ್ಲ. ಆದರೆ ಈ ಒಪ್ಪಂದವನ್ನು ಜರ್ಮನಿ ಮುರಿದು ರಶ್ಯದ ಮೇಲೆ ಆಕ್ರಮಣ ಮಾಡಿದಾಗ ರಶ್ಯವು ಜರ್ಮನಿ ಮತ್ತು ಇಟಲಿಯ ಮೇಲೆ ಯುದ್ಧ ಸಾರಿತು. ಈ ಎರಡನೇ ಮಹಾಯುದ್ಧವು ಸಾಮ್ರಾಜ್ಯವಾದಿ ರಾಷ್ಟ್ರಗಳದ್ದೆಂದು, ಅದರಲ್ಲಿ ಭಾರತ ಭಾಗವಹಿಸುವುದಿಲ್ಲವೆಂದು ಭಾರತ ರಾಷ್ಟ್ರಸಭೆ ಸಾರಿತು. ಏಳು ಪ್ರಾಂತಗಳ ಕಾಂಗ್ರೆಸ್ ಮಂತ್ರಿಮಂಡಲಗಳು 1939 ನವೆಂಬರ್‌ನಲ್ಲಿ ರಾಜೀನಾಮೆ ಕೊಟ್ಟವು. ಎಲ್ಲಿಯವರೆಗೆ ರಶ್ಯವು ಈ ಯುದ್ಧದಲ್ಲಿ ಭಾಗವಹಿಸಲಿಲ್ಲವೋ, ಅಲ್ಲಿಯವರೆಗೆ ಹಿಂದಿ ಕಮ್ಯುನಿಸ್ಟ್ ಪಾರ್ಟಿಯು, ಇದು ರಕ್ತಪಿಪಾಸು ಸಾಮ್ರಾಜ್ಯವಾದಿಗಳ ಯುದ್ಧವೆಂದೂ ಕಾರ್ಮಿಕರು ಸಹಾಯ ಮಾಡಲಾಗದೆಂದೂ ಸಾರಿತು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಭೂಮಿಕೆ ಎಷ್ಟು ತಪ್ಪು ಮತ್ತು ಸ್ವತಂತ್ರ ಪಕ್ಷದ ಭೂಮಿಕೆ ಎಷ್ಟು ಸರಿ ಮತ್ತು ದೇಶಕ್ಕೆ ಪರಿಣಾಮಕಾರಿ ಹಾಗೂ ಎಲ್ಲ ಜಗತ್ತಿಗೆ ಹಿತಕಾರಿ ಎಂಬುದರ ಬಗ್ಗೆ ಸಾಧಕ-ಬಾಧಕ ಮಾಹಿತಿ ದೊರಕಿಸಿ ಬಾಬಾ ಸಾಹೇಬರು 9-11-1940ರ ಅಂಕಣದಲ್ಲಿ ಅಗ್ರಲೇಖನವೊಂದನ್ನು ಬರೆದರು:

ಪ್ರತೀ ವರ್ಷ ನವೆಂಬರ್ 8ರಂದು ರಶ್ಯನ್ ರಾಜ್ಯಕ್ರಾಂತಿಯ ದಿನವೆಂದು ಜಗತ್ತಿನ ಎಲ್ಲ ಕಾರ್ಮಿಕರು ಉತ್ಸಾಹದಿಂದ ಆಚರಿಸುತ್ತಾರೆ. ಹಿಂದುಸ್ಥಾನದಲ್ಲಿ ರಶ್ಯನ್ ಕ್ರಾಂತಿಯ ಉಪಾಸಕರು, ಹೆಚ್ಚಿಲ್ಲದಿದ್ದರೂ ಸಾಕಷ್ಟು ಇದ್ದಾರೆ ಎನ್ನಲು ಅಡ್ಡಿಯಿಲ್ಲ ಮತ್ತು ಹಿಂದುಸ್ಥಾನದಲ್ಲೂ ಅದರ ಆಚರಣೆ ಆಗಲೆಂಬ ಯತ್ನ ನಡೆದಿದೆ. ಹಾಗೇ ಈ ವರ್ಷ ಸ್ವಲ್ಪ ಮಟ್ಟಿಗೆ ಇಲ್ಲೂ ಆಚರಣೆ ನಡೆದಿದೆ.
ರಶ್ಯದಲ್ಲಿ ಸ್ಥಾಪಿಸಲಾದ ಕಮ್ಯುನಿಸ್ಟ್ ಸಮಾಜ ಪದ್ಧತಿ ಸಂಬಂಧ ಯಾರ ವಿಚಾರ ಏನೇ ಇರಲಿ, ರಶ್ಯನ್ ಕ್ರಾಂತಿಯ ದಿನ ಮಾನವ ಸಮಾಜದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಮಾನವ ಸಮಾಜದ ಇತಿಹಾಸದಲ್ಲಿ ಆರಂಭದಿಂದ ಇದುವರೆಗೆ ಯಾರಾದರೂ ಶೋಧಿಸ ಹೊರಟರೆ, ಫ್ರೆಂಚ್ ರಾಜ್ಯಕ್ರಾಂತಿಯ ದಿನ ಮೊದಲನೆಯದೆಂದು ಯಾರಾದರೂ ಒಪ್ಪಿಕೊಳ್ಳಬೇಕು. ಮಾನವ ಸಮಾಜದ ಇತಿಹಾಸದಲ್ಲಿ ಸಮಾಜದ ರಚನೆ ಪ್ರಥಮವಾಗಿ ಸಮತೆ ಮತ್ತು ಸ್ವಾತಂತ್ರ ಈ ತತ್ವದ ಮೇಲೆ ಆಗಬೇಕೆಂದು ಮೊದಲಿಗೆ ಘೋಷಿಸಿದರು, ಫ್ರೆಂಚ್ ಕ್ರಾಂತಿಕಾರರು.

ಫ್ರೆಂಚ್ ಕ್ರಾಂತಿಗೆ ಮೊದಲು ಸಮಾಜದ ರಚನೆ ಗುಲಾಮಗಿರಿಯ ತತ್ವದ ಮೇಲೆ ಆಧರಿಸಿತ್ತು. ಶ್ರೇಷ್ಠ, ಉಚ್ಚ, ನೀಚ, ಇಂತಹ ಭೇದಭಾವವಿತ್ತು. ಅದರಲ್ಲಿನ ಅಸಂಖ್ಯ ದರಿದ್ರ, ವಿದ್ಯಾಹೀನ ಜನರಿಗೆ ಸ್ವಾತಂತ್ರದ ಮಾಹಿತಿ ಇರಲಿಲ್ಲ. ಹಕ್ಕೂ ಇರಲಿಲ್ಲ. ಶ್ರಮ ಪಟ್ಟು, ಹಣ ಸಂಪಾದಿಸಿ ಅದನ್ನು ಮಾಲಕರಿಗೆ ಕೊಡುವುದು, ಮಾಲಕ ಕೊಟ್ಟದ್ದನ್ನು ತೆಗೆದುಕೊಳ್ಳುವುದು ಬಿಟ್ಟರೆ, ಅವರ ಮನುಷ್ಯತ್ವಕ್ಕೆ, ಜೀವನಕ್ಕೆ ಯಾವ ಬೆಲೆಯೂ ಇರಲಿಲ್ಲ. ದಾರಿದ್ರದಲ್ಲಿ ಸಿಲುಕಿ ಸಂಸ್ಕೃತಿಯ ಸುಗಂಧವೂ ಇರದಿದ್ದುದರಿಂದ, ಸಮತೆಯನ್ನು ಬೇಡುವ ಅಪೇಕ್ಷೆಯಾಗಲೀ, ಹಕ್ಕಾಗಲೀ ಅವರಿಗಿರಲಿಲ್ಲ. ಈ ಅಸಮಾನತೆಯ ಸಮೂಲ ಉಚ್ಚಾಟನೆ ಮಾಡಿ ಸಮತೆ ಮತ್ತು ಸ್ವಾತಂತ್ರದ ತತ್ವವನ್ನು ಪುರಸ್ಕರಿಸಿದ ಫ್ರೆಂಚ್ ಕ್ರಾಂತಿಯ ದಿನ ಆಚರಿಸಲ್ಪಡದಿದ್ದರೂ, ಅದರ ಮಹತ್ವ ದೊಡ್ಡದಿದೆ. ಒಂದು ದೃಷ್ಟಿಯಿಂದ ನೋಡಿದರೆ ಫ್ರೆಂಚ್ ಕ್ರಾಂತಿ ಮತ್ತು ರಶ್ಯನ್ ಕ್ರಾಂತಿಯ ನಡುವೆ ನಿಕಟ ಸಂಬಂಧವಿದೆ. ಫ್ರೆಂಚ್ ಕ್ರಾಂತಿಯಲ್ಲಿ ಸಾಮಾಜಿಕ ಮತ್ತು ಸಮತೆಯ ಮೇಲೆ ಒತ್ತು ಕೊಡಲಾಗಿತ್ತು. ಆರ್ಥಿಕ ಸ್ವಾತಂತ್ರ ಮತ್ತು ಸಮತೆಯನ್ನು ಸ್ಥಾಪಿಸುವ ಪ್ರಯತ್ನ ಆಗಿರಲಿಲ್ಲ. ರಶ್ಯನ್ ಕ್ರಾಂತಿಯ ಮಹತ್ವವು, ಆರ್ಥಿಕ ಸ್ವಾತಂತ್ರ ಮತ್ತು ಸಮಾನತೆಯನ್ನು ಸ್ಥಾಪಿಸುವ ಪ್ರಯತ್ನ ಮಾಡಿದುದರಿಂದಲೇ ಬಂದುದು.

ಆರ್ಥಿಕ ಸಮಾನತೆಯಿಲ್ಲದೆ ಸಾಮಾಜಿಕ ಸಮಾನತೆ ಮತ್ತು ಸ್ವಾತಂತ್ರ ಇವೆರಡೂ ನಿಷ್ಫಲವಾಗುವುದು ಎಂಬುದು ಫ್ರೆಂಚ್ ಕ್ರಾಂತಿಯ ಇತಿಹಾಸವನ್ನು ಪರಿಶೀಲಿಸಿದವರಿಗೆ ತಿಳಿಯುವುದು. ಹಣವಿಲ್ಲದವನಿಗೆ ಮಾನವಿಲ್ಲ. ಪರಾವಲಂಬಿಯಾದವ ಎಂದೂ ಸ್ವತಂತ್ರನಾಗಲಾರ. ಸಮತೆ ಸ್ಥಾಪಿಸಲೆಂದು ರಶ್ಯ ವ್ಯಕ್ತಿ ಸ್ವಾತಂತ್ರವನ್ನು ನಷ್ಟಪಡಿಸಿತು. ಇದು ಯೋಗ್ಯವೇ ಎಂದು ಕೇಳಬಹುದು. ಆದರೆ, ಎಲ್ಲಿ ಆರ್ಥಿಕ ಅಸಮಾನತೆ ಅಪರಿಮಿತವಾಗಿದೆಯೋ, ಅಲ್ಲಿ ನಿಜವಾದ ಸ್ವಾತಂತ್ರ ಇರುವುದಿಲ್ಲವೆಂದು ಎಲ್ಲರೂ ಒಪ್ಪಿಕೊಳ್ಳಬೇಕು. ಈ ರೀತಿ ನೋಡಿದರೆ ರಶ್ಯನ್ ಕ್ರಾಂತಿಯ ಮಹತ್ವ ಫ್ರೆಂಚ್ ಕ್ರಾಂತಿಗಿಂತ ಏಕೆ ಹೆಚ್ಚೆಂದು ತಿಳಿಯುವುದು. ಫ್ರೆಂಚ್ ಕ್ರಾಂತಿ ಹೋಳಿಗೆಯಾದರೆ, ರಶ್ಯನ್ ಕ್ರಾಂತಿ ಹೋಳಿಗೆಯೊಳಗಿನ ಹೂರಣವಾಗಿದೆ. ಫ್ರೆಂಚ್ ಕ್ರಾಂತಿ ಮೊಗ್ಗಾದರೆ, ರಶ್ಯನ್ ಕ್ರಾಂತಿ ಒಂದು ವಿಕಸಿತ ಪುಷ್ಪ.ಮನುಷ್ಯಮಾತ್ರರ ಇತಿಹಾಸದಲ್ಲಿ ಅದರ ಮಹತ್ವ ಅಷ್ಟಿರುವುದರಿಂದಲೇ ರಶ್ಯನ್ ಕ್ರಾಂತಿಯ ದಿನ ಫ್ರೆಂಚ್ ಕ್ರಾಂತಿಯ ದಿನಕ್ಕಿಂತ ಹೆಚ್ಚಾಗಿ ಆಚರಣೆ ಆಗುತ್ತಿರುವುದು ಸಹಜವಾಗಿದೆ.

ಭಾರತದಲ್ಲಿ ರಶ್ಯನ್ ಕ್ರಾಂತಿಯ ಉಪಾಸಕರಲ್ಲಿ ಸಾಕಷ್ಟು ಕ್ಷುಲ್ಲಕ, ಡೋಂಗಿ ಹೊಟ್ಟೆಬಾಕ ಜನರಿದ್ದಾರೆ. ಆದರೆ ಹಾಗೆಯೇ ಈ ದೇಶದ ರಾಜಕಾರಣದಲ್ಲಿ ಅಗ್ರ ಭಾಗಿಗಳಾದವರು ಹಲವರಿದ್ದಾರೆ ಎಂಬುದು ನಿಜ. ಪಂಡಿತ್ ಜವಾಹರಲಾಲ್ ನೆಹರೂ, ಜಯಪ್ರಕಾಶ್ ನಾರಾಯಣ್ ಮುಂತಾದ ಧುರೀಣರು ರಶ್ಯನ್ ಕ್ರಾಂತಿಯ ಉಪಾಸಕರು ಆಗಿದ್ದಾರೆ. ಆದರೆ ಇಂಥವರಲ್ಲಿ ನಮ್ಮ ಸವಾಲೆಂದರೆ ನೀವು ಬರೀ ಈ ದಿನವನ್ನು ಆಚರಿಸಿ ಸುಮ್ಮನೆ ಇರುವವರೇ, ಅಥವಾ ಆ ಕ್ರಾಂತಿಯ ತತ್ತ್ವದ ಸಂರಕ್ಷಣೆಗಾಗಿ ಪ್ರಯತ್ನ ಮಾಡುವವರೇ? ಈ ಯುದ್ಧದಲ್ಲಿ ರಶ್ಯನ್ ಕ್ರಾಂತಿಯ ಉಪಾಸಕರು ಪ್ರಜಾಸತ್ತೆಯ ಕಡೆಯಿಂದ ಹೋರಾಡಿ ಪ್ರಜಾಸತ್ತೆಯನ್ನು ಗೆಲ್ಲಿಸುವುದು ಅವರ ಕರ್ತವ್ಯವೆಂದು ನಮಗನ್ನಿಸುತ್ತದೆ. ಆದರೆ ಆಶ್ಚರ್ಯವೆಂದರೆ ಈ ರಶ್ಯನ್ ಕ್ರಾಂತಿಯ ಉಪಾಸಕರು ಯುದ್ಧದಲ್ಲಿ ಬ್ರಿಟಿಷರು ಪ್ರಜಾಸತ್ತೆಯ ವತಿಯಿಂದ ಹೋರಾಡುತ್ತಿದ್ದಾರೆಂದು ಅರಿತೂ ಅವರಿಗೆ ಸಹಾಯ ಮಾಡಲು ಸಿದ್ಧರಿಲ್ಲ.

ಗುರು ವರ್ತಿಸಿದಂತೆ ಶಿಷ್ಯನೂ ವರ್ತಿಸಬೇಕು ಎಂಬುದೇ ಧ್ಯೇಯವಾದರೆ ಈ ವಿಚಾರಣಾ ಸರಣಿ ತರ್ಕ ಶುದ್ಧವಾದುದು ಎಂದು ಒಪ್ಪಿಕೊಳ್ಳಬೇಕು. ಈ ಯುದ್ಧದಲ್ಲಿ ರಶ್ಯದ ವರ್ತನೆ ಸರಿಯಿಲ್ಲ ಎಂದು ಎಲ್ಲರಿಗೂ ಕಾಣಿಸುವಂತಿದೆ. ಇಪ್ಪತ್ತು ವರ್ಷಗಳ ಹಿಂದೆಯೇ ಜರ್ಮನಿಯೊಂದಿಗೆ ಧರ್ಮಯುದ್ಧ ಸಾರಿದ ರಶ್ಯ ಅದೇ ಸಾಮ್ರಾಜ್ಯಶಾಹಿಯೊಂದಿಗೆ ಒಪ್ಪಂದ ಮಾಡಿಕೊಂಡು ಪೋಲೆಂಡ್ ಮೇಲೆ ಅತಿಕ್ರಮಣ ಮಾಡಿ ಅದನ್ನು ವಿಚ್ಛೇದಿಸಿ ಅದರ ಸ್ವಾತಂತ್ರ್ಯ ಹರಣ ಮಾಡಿ ಆ ದೇಶದ ಅರ್ಧಭಾಗವನ್ನು ತನ್ನಲ್ಲಿ ವಿಲೀನಗೊಳಿಸಿತು. ಬಳಿಕ ರಶ್ಯ ಫಿನ್‌ಲ್ಯಾಂಡ್ ಮೇಲೆ ಆಕ್ರಮಣ ಮಾಡಿ ಐದಾರು ತಿಂಗಳ ನಂತರ ದರ ಸ್ವಾತಂತ್ರ್ಯವನ್ನು ಕಸಿಯಿತು. ಬಳಿಕ ಎಸ್ಥೋನಿಯಾ, ಲಟವಿಯಾ ಮುಂತಾದ ಬಾಲ್ಟಿಕ್ ಸಮುದ್ರ ತಟದ ಸ್ವತಂತ್ರ ದೇಶಗಳನ್ನು ಆಕ್ರಮಿಸಿ ಅವುಗಳ ಸ್ವಾತಂತ್ರ್ಯ ಹರಣ ಮಾಡಿತು.

ಮತ್ತೆ ಕಪ್ಪುಸಮುದ್ರದ ಮೇಲೆ ತನ್ನ ವರ್ಚಸ್ಸು ಸ್ಥಾಪಿಸಲು ಅತ್ತ ತನ್ನ ದೃಷ್ಟಿ ಹೊರಳಿಸಿ ರುಮೇನಿಯಾದ ಡವ್‌ರ್ಯೂಜ್ ಎಂಬ ಪ್ರಾಂತವನ್ನು ನುಂಗಿತು. ರಶ್ಯದ ಈ ಆಕ್ರಮಣಶೀಲತೆಯಿಂದ ಹಿಟ್ಲರ್‌ಗೆ ದೊಡ್ಡ ಲಾಭವಾಯಿತು.

ಜರ್ಮನಿಯ ಪೂರ್ವಭಾಗದ ಗಡಿ ಪ್ರದೇಶವು ನಿರ್ವೈರಿಯಾದ್ದರಿಂದ ಜರ್ಮನಿಯು ತನ್ನೆಲ್ಲ ಸೈನ್ಯ ಹಾಗೂ ಯುದ್ಧ ಸಾಮಗ್ರಿಯನ್ನು ಒಂದುಗೂಡಿಸಿ ಪಶ್ಚಿಮದ ಗಡಿಭಾಗದ ರಾಷ್ಟ್ರಗಳನ್ನು ಆಕ್ರಮಿಸುವುದು ಸುಲಭವೂ ಸರಳವೂ ಆಯಿತು. ಫ್ರಾನ್ಸ್, ಬೆಲ್ಜಿಯಂ, ನಾರ್ವೆ, ಹಾಲೆಂಡ್ ದೇಶಗಳನ್ನು ಜರ್ಮನಿ ತುಳಿಯಲು ಶಕ್ಯವಾಯಿತು. ಇದರ ಜವಾಬ್ದಾರಿ ರಶ್ಯದ ಮೇಲೇ ಬರುತ್ತದೆಂದು ನಮಗನ್ನಿಸುತ್ತದೆ. ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ನಾರ್ವೆ ಮುಂತಾದ ಪಶ್ಚಿಮ ಸರಹದ್ದಿನ ರಾಷ್ಟ್ರಗಳ ಸ್ವಾತಂತ್ರ್ಯ ನಷ್ಟ ಮಾಡಿದ್ದಷ್ಟೇ ಅಲ್ಲ, ಎಲ್ಲ ಬಾಲ್ಕಮ್ ರಾಷ್ಟ್ರಗಳ ಮೇಲೆ ತಮ್ಮ ಆಧಿಪತ್ಯ ಸ್ಥಾಪಿಸುವ ಉಪಕ್ರಮಕ್ಕೆ ತೊಡಗಿದರು. ಜೆಕೊಸ್ಲೋವಾಕಿಯಾ ಕೂಡ ಅಸ್ತಂಗತ ವಾಗುತ್ತಾ ಬಂದಿತ್ತು. ರೊಮಾನಿಯಾ ಜರ್ಮನಿಯ ಹಸ್ತಗತವಾಯಿತು. ಜರ್ಮನಿಯ ಜೊತೆಗಾರ ಇಟಲಿಯು ಗ್ರೀಸ್‌ನ ಮೇಲೆ ಆಕ್ರಮಣ ಮಾಡಿದೆ. ಈ ಎಲ್ಲ ಭಾಗ ಜರ್ಮನಿ ಮತ್ತು ಇಟಲಿಯ ಸ್ವಾಧೀನವಾದರೆ ರಶ್ಯಕ್ಕೆ ಯಾವ ಆಸೆಯೂ ಉಳಿಯುವುದಿಲ್ಲ. ಕ್ರಮೇಣ ರಶ್ಯ ದುಃಸ್ಥಿತಿಗೀಡಾಗುವುದು ಎಂದು ರಶ್ಯನ್ ಕ್ರಾಂತಿಯ ಉಪಾಸಕರೇ ಒಪ್ಪಿಕೊಳ್ಳುತ್ತಾರೆ. ರಶ್ಯ ಮಾಡಿದ ಅತಿಕ್ರಮಣ ಒಂದು ವೇಳೆ ಕ್ಷಮ್ಯ ವೆನ್ನಬಹುದು. ಈ ಯುದ್ಧದಲ್ಲಿ ಕಸಿದ ಪ್ರದೇಶವೆಲ್ಲವೂ ಹಿಂದೆ ಅವರದೇ ಆಗಿತ್ತು.

ರಶ್ಯದ ಕ್ಷೇತ್ರ, ಸಂಖ್ಯಾ ಬಲ, ಶಸ್ತ್ರಾಗಾರ ಕಡಿಮೆಯಾಗಲೆಂದು, ಕಳೆದ ಯುದ್ಧದಲ್ಲಿ ರಶ್ಯದ ದುರವಸ್ಥೆಯ ಲಾಭ ಪಡೆದು ಆ ಪ್ರಾಂತವನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ ಒಪ್ಪಂದದ ವೇಳೆ ರಶ್ಯದಿಂದ ಕಿತ್ತು ಸ್ವತಂತ್ರ ರಾಷ್ಟ್ರವಾಗಿದ್ದರೂ ಅದನ್ನು ರಶ್ಯ ಈ ಯುದ್ಧದಲ್ಲಿ ಹಿಂದೆ ಪಡೆದು ತಮ್ಮ ಈಗಿನ ಗಡಿ ಪ್ರದೇಶವನ್ನು ಪೂರ್ವ ಗಡಿ ಪ್ರದೇಶದೊಡನೆ ಸೇರಿಸಿತು. ರುಮೇನಿಯಾ ಮತ್ತು ಗ್ರೀಸ್ ಪ್ರಾಂತವನ್ನು ಜರ್ಮನಿ ಆಕ್ರಮಿಸಿದಾಗ ರಶ್ಯ ತನ್ನ ಧೋರಣೆಯನ್ನು ಬಳಸಬಹುದೆಂಬ ಆಶಯ ಹಲವರಿಗಿತ್ತು. ಆದರೆ ಮಾಸ್ಕೋದಿಂದ ನವೆಂಬರ್ ಆರರಂದು ಸೋವಿಯತ್ ಸರಕಾರದ ಸುಪ್ರೀಂ ಕೌನ್ಸಿಲ್‌ನ ಅಧ್ಯಕ್ಷ ಕಾಲಿನಿನ್, ಮಾಸ್ಕೊ ನಗರದಲ್ಲಿ ಸೋವಿಯತ್ ಸಭಾಸದರೆದುರು ಮಾಡಿದ ಭಾಷಣ ದಿನಾಂಕ 23ರಂದು ಇಲ್ಲಿಗೆ ಬಂದಿದೆ. ಅದರಲ್ಲಿ ಅಂತಹ ಆಸೆ ಹುಟ್ಟುವಂತಹ ಕುರುಹೇನು ಕಂಡು ಬಂದಿಲ್ಲ. ಆ ಭಾಷಣದಲ್ಲಿ ‘‘ಈ ಯುದ್ಧದಲ್ಲಿ ಯಾವ ಪಕ್ಷವನ್ನು ತೆಗೆದುಕೊಳ್ಳುವ ಇರಾದೆ ರಶ್ಯಕ್ಕಿಲ್ಲ. ಈ ಯುದ್ಧದಲ್ಲಿ ರಶ್ಯ ತಟಸ್ಥವಾಗಿರುವುದು’’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಒಂದೊಮ್ಮೆ ರಶ್ಯನ್ ಕ್ರಾಂತಿಯ ನಾಯಕರು ರಶ್ಯದಲ್ಲಿ ಸಮತೆ ಸ್ಥಾಪಿಸಿ ಓಡಿ ಹೋಗಲಿಕ್ಕಿಲ್ಲ ಎಂದು ಹೇಳಿದ್ದರು. ಮಿಷನರಿಗಳು ಜಗದಲ್ಲೆಲ್ಲ ತಮ್ಮ ಧರ್ಮದ ಪ್ರಚಾರವನ್ನು ಮಾಡುತ್ತಿರುವಂತೆ ರಶ್ಯ ಕೂಡ ತನ್ನ ಸಮತೆಯ ಪ್ರಚಾರವನ್ನು ಜಗತ್ತಿನಲ್ಲೆಲ್ಲ ಮಾಡಬೇಕು. ಇದಕ್ಕಾಗಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಗತ್ತಿನಲ್ಲೆಲ್ಲ ಅರ್ಚಕರನ್ನು ನೇಮಿಸಿ ನಿಷ್ಠೆಯಿಂದ ಆ ಕಾರ್ಯಕ್ಕೆ ತೊಡಗಿದ್ದರು. ಕಾಲಿನಿನ್ ಅವರ ಭಾಷಣವನ್ನು ನೋಡಿದರೆ ಅಂದಿನ ಮತ್ತು ಇಂದಿನ ರಶ್ಯದ ಧೋರಣೆಯಲ್ಲಿ ಭೂಮಿ ಆಕಾಶದ ಅಂತರ ಗೋಚರಿಸುತ್ತದೆ. ಧ್ಯೇಯದ ದೃಷ್ಟಿಯಿಂದ ರಶ್ಯ ಇಂದು ಶೂನ್ಯವೇ ಆಗಿದೆ. ಇಂಗ್ಲಿಷರ ದ್ವೇಷವೆಂದು ಅವರ ಜೊತೆಗೂಡಿ ಕಾದಲಿಕ್ಕಿಲ್ಲ ಎಂದರೆ ಬೇರೆ ವಿಷಯ. ಈ ಯುದ್ಧ ಇಂಗ್ಲಿಷ್ ಜನರ ಮೂರ್ಖತೆಯ ಪರಮಾವಧಿ ಎಂಬುದನ್ನು ಯಾರೂ ಅಡಗಿಸಿಡುವಂತಿಲ್ಲ.

ಆದರೆ ಹೀಗೆ ಸ್ವಲ್ಪವೂ ಇಂಗ್ಲೆಂಡಿಗೆ ಸಹಾಯ ಮಾಡುವುದಿಲ್ಲವೆಂದು ರಶ್ಯ ಹೇಳುವುದಾದರೆ, ಮತ್ತೆ ಯಾವ ಬಾಯಿಯಿಂದ ಹಿಟ್ಲರ್‌ನೊಡನೆ ಸ್ನೇಹ ಬೆಳೆಸುವುದೆಂದು ನಮಗೆ ತಿಳಿಯುತ್ತಿಲ್ಲ. ಹಿಟ್ಲರ್ ರಶ್ಯವನ್ನು ಕಡಿಮೆಯೇನೋ ದ್ವೇಷಿಸಲಿಲ್ಲ. ರಶ್ಯದ ದ್ವೇಷದಿಂದಲೇ ನಾಝಿ ಪಕ್ಷವನ್ನು ಎತ್ತಿ ನಿಲ್ಲಿಸಲಾಯಿತು. ರಶ್ಯದ ನಾಶವೊಂದೇ ತನ್ನ ಧ್ಯೇಯವೆಂದು ಹಗಲು ರಾತ್ರಿ ಹಿಟ್ಲರ್ ಘೋಷಿಸಿದ್ದ. ಈ ಯುದ್ಧದಲ್ಲಿ ರಶ್ಯದ ವರ್ತನೆ ಎಷ್ಟು ದೋಷಪೂರ್ಣವೆಂಬುದನ್ನು ನಾನಿಲ್ಲಿ ಹೇಳಿದ್ದೇನೆ. ರಶ್ಯನ್ ಕ್ರಾಂತಿಯ ಉಪಾಸಕರಿಗೆ ಇದು ಇಷ್ಟವಾಗಲೂ ಬಹುದು, ಆಗದಿರಲೂ ಬಹುದು. ಆದರೆ ಅವರೆಲ್ಲರನ್ನೂ ನಾನು ಕೇಳಬಯಸುತ್ತೇನೆ; ನೀವು ಹೀಗೆ ಕ್ರಾಂತಿಯ ಉಪಾಸನೆ ಮಾಡುತ್ತಾ ಕುಳ್ಳಿರುವಿರೋ ಅಥವಾ ಸಮತೆ ಸ್ವಾತಂತ್ರದ ಧ್ಯೇಯದ ರಕ್ಷಣೆ ಮಾಡುವವರೋ? ಕ್ರಾಂತಿ ದೊಡ್ಡದೋ;ಧ್ಯೇಯ ದೊಡ್ಡದೋ ಎಂಬುದನ್ನು ಎಲ್ಲರೂ ನಿರ್ಧರಿಸಬೇಕು ಮತ್ತು ಕ್ರಾಂತಿಗಿಂತ ಧ್ಯೇಯ ದೊಡ್ಡದೆಂಬುದು ನಿರ್ವಿವಾದವಾದ್ದರಿಂದ, ರಶ್ಯ ಏನು ಮಾಡುವುದೋ, ಬಿಡುವುದೋ ಎಂಬತ್ತ ಲಕ್ಷ ತಿರುಗಿಸಿ ಧ್ಯೇಯದ ಸಂರಕ್ಷಣೆಗಾಗಿ ನಡೆದಿರುವ ಯುದ್ಧದಲ್ಲಿ ಮನಃಪೂರ್ವಕವಾಗಿ ಭಾಗವಹಿಸುವುದು ಎಲ್ಲರ ಪರಮ ಕರ್ತವ್ಯ ಮತ್ತು ರಶ್ಯನ್ ಕ್ರಾಂತಿಯ ನಿಜವಾದ ಉಪಾಸನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)