varthabharthi

ವೈವಿಧ್ಯ

1984ರ ಸಿಖ್ ಹತ್ಯಾಕಾಂಡದ ಕೊಲೆಗಾರರ ಹುಡುಕಾಟವೆಂಬ 34 ವರ್ಷಗಳ ಪ್ರಹಸನ

ವಾರ್ತಾ ಭಾರತಿ : 9 Nov, 2018
ಶಂಶುಲ್ ಇಸ್ಲಾಂ

ಹಿಂದುತ್ವದ ಆದರ್ಶದಂತಿರುವ ಪ್ರಧಾನಿ ಮೋದಿ ಸಿಖ್ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ ಎಂದು ದುಃಖ ತೋಡಿಕೊಂಡಿದ್ದರು. ಆದರೆ, 1998ರಿಂದ 2004ರ ಅವಧಿಯಲ್ಲಿ ದೇಶದಲ್ಲಿ ಎನ್‌ಡಿಎ ಸರಕಾರವಿದ್ದಾಗ ತಪ್ಪಿತಸ್ಥರನ್ನು ಶಿಕ್ಷಿಸಲು ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಮೋದಿ ತಿಳಿಸಲಿಲ್ಲ.

ಳೆದ 30 ವರ್ಷಗಳಿಂದ ಪ್ರತಿ ವರ್ಷ 1984ರ ಸಿಖ್ ಹತ್ಯಾಕಾಂಡ ದಿನದಂದು ಲೇಖಕರು, ದೇಶದ ಎರಡನೇ ಅತೀದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾದ ಸಿಖ್ ಸಮುದಾಯದ ಮುಗ್ಧರ ಸಾಮೂಹಿಕ ಹತ್ಯೆ ಮಾಡಿದ ಅಪರಾಧಿಗಳಿಗೆ ಶಿಕ್ಷೆ ನೀಡುವ ಗೋಜಿಗೆ ನಮ್ಮ ಸರಕಾರ ಮತ್ತು ನ್ಯಾಯಾಂಗ ಹೋಗಿಲ್ಲ ಎಂಬ ಬಗ್ಗೆ ರಾಷ್ಟ್ರಕ್ಕೆ ನೆನಪು ಮಾಡುತ್ತಲೇ ಇದ್ದಾರೆ. ಬಹುಶಃ ಮುಂದಿನ ವರ್ಷ ಈ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಮತ್ತು ತಾನು ಮುಂದೆ ಈ ಕುರಿತ ನೋವಿನ ಕತೆಯನ್ನ್ನು ಬರೆಯುವ ಅಗತ್ಯವಿಲ್ಲ ಎಂದು ಅವರು ಆಶಾವಾದ ಹೊಂದುತ್ತಾರೆ. ಆದರೆ ಇದು ಇಂದಿನವರೆಗೂ ನಡೆದಿಲ್ಲ.

ಭಾರತೀಯ ಗಣರಾಜ್ಯದಿಂದ ಅಪರಾಧಿ ವಂಚನೆಯ ಸರಣಿ ಕೊನೆಯಿಲ್ಲದೆ ಸಾಗುತ್ತಿದೆ ಮತ್ತು ಲೇಖಕರು ಮೂಗ ಮತ್ತು ಕಿವುಡ ಭಾರತ ಸರಕಾರದ ಮುಂದೆ ತನ್ನ ರೋದನವನ್ನು ಮುಂದುವರಿಸಿದ್ದಾರೆ.
 2014ರ ವರೆಗಿನ ಸರಕಾರಗಳ ಮೋಸ
ಕೊಲೆಗಾರರು ಪರಾರಿಯಾಗಲು ಅವಕಾಶ ಮಾಡಿಕೊಟ್ಟ ಸರಕಾರ ನಂತರ 1984ರ ದಂಗೆಗಳ ಅಪರಾಧಿಗಳನ್ನು ಪತ್ತೆಹಚ್ಚಲು ಏಕಸದಸ್ಯ ಮಾರ್ವ ಆಯೋಗವನ್ನು ರಚಿಸಿತು. ಈ ನಡೆ ಸಮಂಜಸವಾದುದಾಗಿರಲಿಲ್ಲ. ಆದರೆ ರಚಿಸಲ್ಪಟ್ಟ ಕೆಲವೇ ಸಮಯದ ಒಳಗೆ ಈ ಆಯೋಗವನ್ನು ಬರ್ಖಾಸ್ತುಗೊಳಿಸಿ ಸಿಖ್ ಹತ್ಯಾಕಾಂಡದ ತನಿಖೆಯ ಜವಾಬ್ದಾರಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ರಂಗನಾಥ ಮಿಶ್ರಾರಿಗೆ ಒಪ್ಪಿಸಲಾಯಿತು. ಇವರು ತನ್ನ ವರದಿಯನ್ನು 1987ರಲ್ಲಿ ಸರಕಾರಕ್ಕೆ ಸಲ್ಲಿಸಿದರು.
ಆಘಾತಕಾರಿ ಅಂಶವೆಂದರೆ, ಮಿಶ್ರಾ ನೇತೃತ್ವದ ಈ ನೈಜಾಂಶ ಪತ್ತೆ (ವಾಸ್ತವದಲ್ಲಿ ನೈಜಾಂಶ ಮುಚ್ಚುವ) ಆಯೋಗವು , ಆರಂಭದಲ್ಲಿ ಸ್ವಾಭಾವಿಕವಾಗಿ ಆರಂಭವಾದ ದಂಗೆಗಳು ನಂತರ ಗ್ಯಾಂಗ್‌ಸ್ಟರ್‌ಗಳ ಕೈಯಲ್ಲಿ ಭಿನ್ನ ಪ್ರಕಾರಗಳಲ್ಲಿ ವಿಭಜನೆಯಾಯಿತು ಎಂದು ತನ್ನ ವರದಿಯಲ್ಲಿ ತಿಳಿಸಿತ್ತು.
ಆದರೆ ಈ ಗ್ಯಾಂಗ್‌ಸ್ಟರ್‌ಗಳು ಎಲ್ಲಿಂದ ಆಗಮಿಸಿದರು ಎಂಬುದನ್ನು ಪತ್ತೆ ಹಚ್ಚುವಲ್ಲಿ ಮಾತ್ರ ನ್ಯಾಯದ ದೇವದೂತ ಮಿಶ್ರಾ ವಿಫಲವಾಗಿದ್ದರು! ಐ ಅಕ್ಯೂಸ್:ದಿ ಆ್ಯಂಟಿ ಸಿಖ್ ವೈಲೆನ್ಸ್ ಆಫ್ 1984ನ ಲೇಖಕ ಜರ್ನೈಲ್ ಸಿಂಗ್ ಪ್ರಕಾರ, ಮಿಶ್ರಾ ಸರಕಾರಕ್ಕೆ ತೋರಿದ ಈ ವಿಧೇಯತೆಗೆ ಅವರಿಗೆ ರಾಜ್ಯಸಭೆಯಲ್ಲಿ ಸಂಪುಟ ದರ್ಜೆಯನ್ನು ನೀಡಲಾಯಿತು.
ಮುಂದಿನ ಎರಡು ದಶಕಗಳಲ್ಲಿ ಕಡಿಮೆಯೆಂದರೂ ಒಂಬತ್ತು ತನಿಖಾ ಆಯೋಗಗಳನ್ನು ರಚಿಸಲಾಯಿತು. ಚುನಾವಣೆ ಸಮಯದಲ್ಲಿ ವ್ಯಕ್ತವಾಗುವ ಆಕ್ರೋಶವನ್ನು ತಣಿಸಲು ಹೊಸ ಆಯೋಗವನ್ನು ರಚಿಸುವ ಘೋಷಣೆ ಮಾಡುವುದು ಅಥವಾ ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವುದು ಸರಕಾರಕ್ಕೆ ಮಾಮೂಲಿಯಾಯಿತು. ಇಂಥ ಆಯೋಗಗಳ ಅಲ್ಪಸಂಖ್ಯಾತ ವಿರೋಧಿ ಪಕ್ಷಪಾತದತ್ತ ಬೆಟ್ಟು ಮಾಡಿದ ಖ್ಯಾತ ನ್ಯಾಯವಾದಿ ಎಚ್.ಎಸ್.ಫೂಲ್ಕ, ಈ ಹತ್ಯಾಕಾಂಡದಲ್ಲಿ ಶಿಕ್ಷೆಗೊಳಗಾಗುವ ಬದಲು ಅನೇಕ ರಾಜಕೀಯ ಅಪರಾಧಿಗಳು ಆಡಳಿತಗಾರರಾಗಿ ಭಡ್ತಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಇತ್ತೀಚಿನ ಬೆಳವಣಿಗೆಯಲ್ಲಿ, ಸಿಖ್ ವಿರೋಧಿ ದಂಗೆಗಳ 241 ಪ್ರಕರಣಗಳ ಮುಚ್ಚುಗಡೆಯ ನ್ಯಾಯಸಮ್ಮತೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವನ್ನು ರಚಿಸಲು ಸರ್ವೋಚ್ಚ ನ್ಯಾಯಾಲಯ 2017ರ ಆಗಸ್ಟ್ 16ರಂದು ಆದೇಶ ನೀಡಿತು. ಈ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ಮುಂದಿನ ಮೂರು ತಿಂಗಳಲ್ಲಿ ಸಂಪೂರ್ಣಗೊಳಿಸಬೇಕು ಎಂದು ಶ್ರೇಷ್ಠ ನ್ಯಾಯಾಲಯ ತಿಳಿಸಿತ್ತು.
ಈಗ ನಾವು 2018ರ ನವೆಂಬರ್‌ನಲ್ಲಿದ್ದೇವೆ (ಆದೇಶ ಹೊರಬಂದು 15 ತಿಂಗಳು ಕಳೆದಿವೆ) ಮತ್ತು ಆ ಮೂರು ತಿಂಗಳು ಇನ್ನೂ ಮುಗಿದಿಲ್ಲ!
 ಈಗಿನ ಆರೆಸ್ಸೆಸ್/ಬಿಜೆಪಿ ಆಡಳಿತಗಾರರಿಂದ ವಂಚನೆ
 ಆರೆಸ್ಸೆಸ್ ಎಂದೂ ಹಿಂದೂ-ಸಿಖ್ ಏಕತೆಯನ್ನು ಪ್ರೋತ್ಸಾಹಿ ಸುತ್ತದೆ ಎಂದು ಹೇಳಿಕೊಳ್ಳುತ್ತದೆ. ಹಿಂದುತ್ವವನ್ನು ಮುಸ್ಲಿಂ ಅತಿಕ್ರಮ ಣದಿಂದ ರಕ್ಷಿಸಿದೆ ಎಂದು ಆರೆಸ್ಸೆಸ್ ಆಗಾಗ ಸಿಖ್ ಧರ್ಮಕ್ಕೆ ಕೃತಜ್ಞತೆ ಸಲ್ಲಿಸುತ್ತಿರುತ್ತದೆ. ಜಾತಿವಾದ ಮತ್ತು ಬ್ರಾಹ್ಮಣೀಯ ಆಧಿಪತ್ಯವನ್ನು ನಿರಾಕರಿಸಿರುವ ಸಿಖ್ ಧರ್ಮವನ್ನು ಒಂದು ಸ್ವತಂತ್ರ ಧರ್ಮವಾಗಿ ಆರೆಸ್ಸೆಸ್ ನೋಡುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು.
ಸಿಖ್ ವಿರೋಧಿ ಹಿಂಸಾಚಾರಕ್ಕೆ ಕಾಂಗ್ರೆಸ್ ಕಾರಣ ಎಂದು ಆರೆಸ್ಸೆಸ್/ಬಿಜೆಪಿ ಆರೋಪಿಸುತ್ತದೆ. ಕಳೆದ ಸಂಸದೀಯ ಚುನಾವಣೆಗಳ ಸಮಯದಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಇದೇ ಆರೋಪವನ್ನು ಮಾಡಿದ ಮೋದಿ, 1984ರಲ್ಲಿ ಸಿಖ್ಖರನ್ನು ಕೊಂದವರು ಯಾರು ಮತ್ತು ಈ ನರಮೇಧಕ್ಕಾಗಿ ಈವರೆಗೆ ಯಾರನ್ನಾದರೂ ಶಿಕ್ಷಿಸಲಾಗಿದೆಯೇ ಎಂಬುದಕ್ಕೆ ಉತ್ತರಿಸುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದರು. 2014ರ ಸಾರ್ವತ್ರಿಕ ಚುನಾವಣೆ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೋದಿ ಸಿಖ್ ನರಮೇಧದ ಹೇಳಿಕೆಯನ್ನು ಹಲವು ಬಾರಿ ನೀಡಿದ್ದರು.
ಪ್ರಧಾನ ಮಂತ್ರಿಯಾದ ನಂತರ ಮೋದಿ ನೀಡಿದ ಸಂದೇಶವೊಂದರಲ್ಲಿ (ಅಕ್ಟೋಬರ್ 31, 2014) ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಿಖ್ ವಿರೋಧಿ ದಂಗೆಗಳು ಭಾರತದ ಎದೆಗೆ ತೂರಿದ ಚಾಕುವಿನಂತೆ. ನಮ್ಮ ಸ್ವಂತ ಜನರೇ ಹತ್ಯೆಗೀಡಾದರು. ಈ ದಾಳಿಯು ನಿರ್ದಿಷ್ಟ ಸಮುದಾಯದ ಮೇಲೆ ನಡೆದಿಲ್ಲ ಬದಲಿಗೆ ಇಡೀ ದೇಶದ ಮೇಲೆ ನಡೆದಿದೆ ಎಂದು ತಿಳಿಸಿದ್ದರು.
ಹಿಂದುತ್ವದ ಆದರ್ಶದಂತಿರುವ ಪ್ರಧಾನಿ ಮೋದಿ ಸಿಖ್ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ ಎಂದು ದುಃಖ ತೋಡಿಕೊಂಡಿದ್ದರು. ಆದರೆ, 1998ರಿಂದ 2004ರ ಅವಧಿಯಲ್ಲಿ ದೇಶದಲ್ಲಿ ಎನ್‌ಡಿಎ ಸರಕಾರವಿದ್ದಾಗ ತಪ್ಪಿತಸ್ಥರನ್ನು ಶಿಕ್ಷಿಸಲು ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಮೋದಿ ತಿಳಿಸಲಿಲ್ಲ.
ಬಿಜೆಪಿ ಧುರೀಣ ಎಲ್.ಕೆ ಅಡ್ವಾಣಿಯವರ ಆತ್ಮಕತೆಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಪರೇಶನ್ ಬ್ಲೂ ಸ್ಟಾರ್ ಎಂದು ಕುಖ್ಯಾತವಾಗಿರುವ ಸಿಖ್ ಪ್ರಾರ್ಥನಾಲಯದ ಒಳಗೆ ನಡೆದ ಸೇನಾ ಕಾರ್ಯಾಚರಣೆಗೆ ಇಂದಿರಾಂ ಗಾಂಧಿ ಮೇಲೆ ಒತ್ತಡ ಹೇರಿದ್ದೇ ಕೇಸರಿ ಪಕ್ಷ (ಪುಟ 430) ಎಂಬುದನ್ನೂ ಮೋದಿ ಮರೆತಂತಿದೆ.
ವೆನ್ ಎ ಟ್ರೀ ಶುಕ್ ಡೆಲ್ಲಿ: ದಿ 1984 ಕಾರ್ನೆಜ್ ಆ್ಯಂಡ್ ಇಟ್ಸ್ ಆಫ್ಟರ್ಮ್ಯಾತ್ ಪುಸ್ತಕದ ಲೇಖಕ ಖ್ಯಾತ ಪತ್ರಕರ್ತ ಮನೋಜ್ ಮಿಟ್ಟ, ಬಿಜೆಪಿ ಆಡಳಿತವಿದ್ದರೂ ಕಾಂಗ್ರೆಸ್ ಅವಧಿಯಲ್ಲಿ ನಡೆದ ಹತ್ಯಾಕಾಂಡದ ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ . ಇದೊಂಥರ 1984 ಮತ್ತು 2002ರ ಪ್ರಾಯೋಜಕರ ಮಧ್ಯೆ ಒಪ್ಪಂದ ನಡೆದಂತೆ ಎಂದು ನೇರವಾಗಿಯೇ ಆರೋಪಿಸುತ್ತಾರೆ.
ಆದರೆ ಆರೆಸ್ಸೆಸ್‌ನ ಹೊರಗಿನವರು ಮತ್ತು ಟೀಕಾಕಾರರು ಹೇಳುತ್ತಿರುವುದು ಇದಲ್ಲ. ಸಮಕಾಲೀನ ಆರೆಸ್ಸೆಸ್ ದಾಖಲೆಗಳನ್ನು ಸೂಕ್ಷ್ಮವಾಗಿ ಓದಿದಾಗ ತಿಳಿಯುವುದೇನೆಂದರೆ, ಇವುಗಳಲ್ಲಿ ಸಿಖ್ ತೀವ್ರವಾದದ ಖಂಡನೆ, ಇಂದಿರಾ ಗಾಂಧಿಯ ಶ್ಲಾಘನೆ ಮತ್ತು ರಾಜೀವ್ ಗಾಂಧಿಯನ್ನು ನೂತನ ಪ್ರಧಾನಿಯಾಗಿ ನೇಮಿಸಿರುವುದನ್ನು ಸ್ವಾಗತಿಸುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ.
ಸಿಖ್ ನರಮೇಧದ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಕಾರ್ಯವನ್ನು ಆರೆಸ್ಸೆಸ್‌ವಾದಿ ಮೃತ ನಾನಾ ದೇಶ್ಮುಖ್ ಅವರು ಹಂಚಿರುವ ದಾಖಲೆ ಮಾಡುತ್ತದೆ. ದೇಶ್ಮುಖ್ 1984ರ ನವೆಂಬರ್ 8ರಂದು ಹಂಚಿದ, ಮೊಮೆಂಟ್ಸ್ ಆಫ್ ಸೋಲ್ ಸರ್ಚಿಂಗ್ ಎಂಬ ದಾಖಲೆಯು, ಇಂದಿರಾ ಗಾಂಧಿ ಹತ್ಯೆಯಲ್ಲಿ ಯಾವ ಪಾತ್ರವನ್ನು ನಿರ್ವಹಿಸದ ಮುಗ್ಧ ಸಿಖ್ಖರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಇನ್ನಷ್ಟು ಕ್ರಿಮಿನಲ್‌ಗಳ ಮುಖದಿಂದ ಪರದೆಯನ್ನು ಸರಿಸುತ್ತದೆ.
ಸಿಖ್ಖರ ಹತ್ಯೆಯನ್ನು ಅಷ್ಟೊಂದು ನಿಖರವಾಗಿ ಆಯೋಜಿಸಿದವರು ಮತ್ತು ಅವರು ಎಲ್ಲಿಂದ ಬಂದರು ಎಂಬುದರ ಮೇಲೆಯೂ ಈ ದಾಖಲೆ ಬೆಳಕು ಚೆಲ್ಲುತ್ತದೆ. ಈ ದಾಖಲೆಯಲ್ಲಿ ದೇಶ್ಮುಖ್ 1984ರ ಸಿಖ್ ನರಮೇಧವನ್ನು ಸಮರ್ಥಿಸಲು ವಿವರಣೆಯನ್ನು ನೀಡುತ್ತಾರೆ.
ಈ ದಾಖಲೆಯಲ್ಲಿ, ಭಾರತದ ಎಲ್ಲ ಅಲ್ಪಸಂಖ್ಯಾತರ ಬಗ್ಗೆ ಆರೆಸ್ಸೆಸ್‌ಗಿರುವ ಉತ್ಪಾದಿತ ಮತ್ತು ಮತಾಂಧ ಧೋರಣೆಯನ್ನು ತೋರಿಸಲಾಗಿದೆ. ನಾವು ಮುಸ್ಲಿಂ ಮತ್ತು ಕ್ರೈಸ್ತರ ವಿರೋಧಿಗಳಾಗಿದ್ದೇವೆ. ಯಾಕೆಂದರೆ ಅವರು ವಿದೇಶಿ ಧರ್ಮಗಳ ಅನುಯಾಯಿಗಳಾಗಿದ್ದಾರೆ ಎಂದು ಆರೆಸ್ಸೆಸ್ ವಾದಿಸುತ್ತದೆ. ಆದರೆ ದೇಶ್ಮುಖ್‌ನ ದಾಖಲೆಯಲ್ಲಿ ನಾವು ಆರೆಸ್ಸೆಸ್ ತಮ್ಮದೇ ಹಿಂದೂ ಧರ್ಮದ ಒಂದು ಭಾಗ ಎಂದು ಪರಿಗಣಿಸುವ ಸಿಖ್ ಧರ್ಮದ ಅನುಯಾಯಿಗಳ ಹತ್ಯೆಯನ್ನು ಸಮರ್ಥಿಸುವುದನ್ನು ಕಾಣುತ್ತೇವೆ. ಈ ದಾಖಲೆಯಲ್ಲಿ ಆರೆಸ್ಸೆಸ್ ಕೂಡಾ ಅಂದಿನ ಕಾಂಗ್ರೆಸ್‌ನಂತೆ ಮುಗ್ಧ ಸಿಖ್ಖರ ಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಭಾವಿಸಿತ್ತು ಎಂಬುದನ್ನು ಅವರದ್ದೇ ಬಾಯಿಂದ ಕೇಳಿದ್ದೇವೆ.
ಈ ದಾಖಲೆಯು 1984ರ ನವೆಂಬರ್ 25ರಂದು ಹಿಂದಿ ಸಾಪ್ತಾಹಿಕ ಪ್ರತಿಪಕ್ಷದಲ್ಲಿ ಪ್ರಕಟವಾಗಿತ್ತು. ಈ ಸಾಪ್ತಾಹಿಕದ ಸಂಪಾದಕರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಮುಂದೆ ಎನ್‌ಡಿಎ ಸರಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಂದು ಈ ದಾಖಲೆ ಇಂದಿರಾ ಕಾಂಗ್ರೆಸ್-ಆರೆಸ್ಸೆಸ್ ಅಕ್ರಮ ಮೈತ್ರಿ ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು.
ಈ ಕುರಿತ ಸಂಪಾದಕೀಯದಲ್ಲಿ, ಈ ದಾಖಲೆಯ ಲೇಖಕರು ಆರೆಸ್ಸೆಸ್‌ವಾದಿಯಾಗಿದ್ದು ಸಂಘದ ನೀತಿ ರೂಪಕರಾಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಅವರು ಈ ದಾಖಲೆಯನ್ನು ಪ್ರತಿಷ್ಠಿತ ರಾಜಕಾರಣಿಗಳಿಗೆ ಹಂಚಿದ್ದರು. ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು ಆ ಕಾರಣದಿಂದ ನಮ್ಮ ಸಾಪ್ತಾಹಿಕದ ನಿಯಮವನ್ನು ಉಲ್ಲಂಘಿಸಿ ನಾವಿದನ್ನು ಪ್ರಕಟಿಸುತ್ತಿದ್ದೇವೆ. ಈ ದಾಖಲೆಯು ಇಂದಿರಾ ಕಾಂಗ್ರೆಸ್ ಮತ್ತು ಆರೆಸ್ಸೆಸ್ ಮಧ್ಯೆ ಬೆಳೆಯುತ್ತಿರುವ ಹೊಸ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ. ಈ ದಾಖಲೆಯ ಹಿಂದಿ ಅನುವಾದವನ್ನು ನಾವಿಲ್ಲಿ ನೀಡಿದ್ದೇವೆ ಎಂದು ಜಾರ್ಜ್ ಬರೆದಿದ್ದರು.
  ಮೊಮೆಂಟ್ಸ್ ಆಫ್ ಸೋಲ್ ಸರ್ಚಿಂಗ್‌ನಲ್ಲಿ ನಾನಾ ದೇಶ್ಮುಖ್ 1984 ಸಿಖ್ ಹತ್ಯಾಕಾಂಡವನ್ನು ಸಮರ್ಥಿಸುತ್ತಾ ಬರೆಯುತ್ತಾರೆ: ಸಿಖ್ ಹತ್ಯಾಕಾಂಡವು ಯಾವುದೇ ಗುಂಪು ಅಥವಾ ಸಮಾಜಘಾತಕ ಶಕ್ತಿಗಳ ಕೃತ್ಯವಾಗಿರಲಿಲ್ಲ. ಅದು ನೈಜ ಆಕ್ರೋಶದ ಫಲವಾಗಿತ್ತು.
ಇಂದಿರಾ ಗಾಂಧಿಯ ಇಬ್ಬರು ಸಿಖ್ ಭದ್ರತಾ ಸಿಬ್ಬಂದಿಯ ನಡೆಯನ್ನು ಮತ್ತು ಇಡೀ ಸಿಖ್ ಸಮುದಾಯವನ್ನು ದೇಶ್ಮುಖ್ ಪ್ರತ್ಯೇಕವಾಗಿ ಪರಿಗಣಿಸಲಿಲ್ಲ. ಅವರ ದಾಖಲೆಯ ಪ್ರಕಾರ, ಇಂದಿರಾ ಗಾಂಧಿ ಹಂತಕರು ತಮ್ಮ ಸಮುದಾಯದ ಅಪ್ಪಣೆಯ ಮೇರೆಗೆ ಕಾರ್ಯನಿರ್ವಹಿಸಿದ್ದರು.
 ಸಿಖ್ಖರೇ ಈ ದಾಳಿಯನ್ನು ಆಹ್ವಾನಿಸಿಕೊಂಡರು ಎನ್ನುವ ಮೂಲಕ ಸಿಖ್ ನರಮೇಧವನ್ನು ಸಮರ್ಥಿಸಲು ಕಾಂಗ್ರೆಸ್ ಮಾಡಿದ ವಾದವನ್ನು ಬೆಂಬಲಿಸಿದ್ದಾರೆ. ಬ್ಲೂಸ್ಟಾರ್ ಕಾರ್ಯಾಚರಣೆಯನ್ನು ವೈಭವೀಕರಿಸಿದ ದೇಶ್ಮುಖ್ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ದೇಶದ್ರೋಹ ಎಂದು ತಿಳಿಸಿದ್ದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸಿಖ್ಖರ ಹತ್ಯೆ ನಡೆಯುತ್ತಿದ್ದರೆ ದೇಶ್ಮುಖ್ ಸಿಖ್ ತೀವ್ರವಾದದ ಬಗ್ಗೆ ದೇಶವನ್ನು ಎಚ್ಚರಿಸುತ್ತಿದ್ದರು ಮತ್ತು ಆಮೂಲಕ ಈ ಹತ್ಯೆಗಳಿಗೆ ಸೈದ್ಧಾಂತಿಕ ಸಮರ್ಥನೆಯನ್ನು ನೀಡುತ್ತಾ ಹೋದರು. ಒಟ್ಟಾರೆಯಾಗಿ ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಸಿಖ್ ಸಮುದಾಯ ಜವಾಬ್ದಾರಿ ಎಂಬಂತಾಯಿತು. ಸಿಖ್ಖರು ಏನೂ ಮಾಡುವಂತಿರಲಿಲ್ಲ. ಬದಲಿಗೆ ತಮ್ಮ ಕೊಲೆಗಾರರ ಬಗ್ಗೆ ತಾಳ್ಮೆ ಮತ್ತು ಸಹಿಷ್ಣುತೆ ತೋರಿಸಬೇಕಿತ್ತಷ್ಟೇ. ಈ ಹತ್ಯಾಕಾಂಡಕ್ಕೆ ಸಿಖ್ ಬುದ್ಧಿಜೀವಿಗಳು ಕಾರಣರೇ ಹೊರತು ಹತ್ಯಾ ಗುಂಪುಗಳಲ್ಲ. ಈ ಬುದ್ಧಿಜೀವಿಗಳು ಸಿಖ್ ಧರ್ಮವನ್ನು ಅದರ ಹಿಂದೂ ಬೇರಿನಿಂದ ಪ್ರತ್ಯೇಕಗೊಳಿಸುವ ಮೂಲಕ ಉಗ್ರ ಸಮುದಾಯವನ್ನಾಗಿ ಪರಿವರ್ತಿಸಿದ್ದರು. ಇದರಿಂದ ರಾಷ್ಟ್ರವಾದಿ ಭಾರತೀಯರಿಂದ ದಾಳಿಯನ್ನು ತಾವೇ ಆಹ್ವಾನಿಸಿಕೊಂಡರು ಎಂದು ದೇಶ್ಮುಖ್ ಬರೆದಿದ್ದಾರೆ.
 ಎಲ್ಲದಕ್ಕೂ ಹೆಚ್ಚಾಗಿ ದೇಶ್ಮುಖ್ ಎಲ್ಲ ಸಿಖ್ಖರನ್ನು ಒಂದೇ ಗುಂಪಿನ ಭಾಗವಾಗಿ ಪರಿಗಣಿಸಿದ್ದಾರೆ ಮತ್ತು ಅವರ ಮೇಲೆ ನಡೆದ ದಾಳಿ ರಾಷ್ಟ್ರವಾದಿ ಹಿಂದೂಗಳ ಪ್ರತಿಕ್ರಿಯೆಯಾಗಿತ್ತು ಎಂದು ವ್ಯಾಖ್ಯಾನಿಸಿದ್ದಾರೆ. ಇಂದಿರಾ ಗಾಂಧಿಯೊಬ್ಬರೇ ಈ ದೇಶವನ್ನು ಒಗ್ಗಟ್ಟಾಗಿಡಲು ಶಕ್ತರಾಗಿದ್ದರು ಮತ್ತು ಅಂಥ ನಾಯಕಿಯ ಹತ್ಯೆಯ ಪರಿಣಾಮವಾಗಿ ನಡೆದ ಈ ರೀತಿಯ ಹತ್ಯೆಗಳನ್ನು ತಪ್ಪಿಸಲು ಸಾಧ್ಯವಿಲ್ಲ.
ಬೃಹತ್ ಮರವೊಂದು ಬಿದ್ದಾಗ ಭೂಮಿ ನಡುಗುವುದು ಸಹಜ ಎಂಬ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ನಡೆದ ಸಿಖ್ಖರ ಹತ್ಯೆಯನ್ನು ಸಮರ್ಥಿಸಿದ್ದ ಇಂದಿರಾ ಗಾಂಧಿಯ ಉತ್ತರಾಧಿಕಾರಿ ರಾಜೀವ್ ಗಾಂಧಿಯನ್ನು ದೇಶ್ಮುಖ್ ತನ್ನ ದಾಖಲೆಯ ಕೊನೆಯಲ್ಲಿ ಶ್ಲಾಘಿಸಿದ್ದರು.
ಆಘಾತಕಾರಿ ಅಂಶವೆಂದರೆ, ಸಿಖ್ಖರ ನರಮೇಧವನ್ನು ಗಾಂಧೀಜಿಯ ಹತ್ಯೆ ನಡೆದ ನಂತರ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ನಡೆದ ದಾಳಿಗಳಿಗೆ ಹೋಲಿಸಲಾಗಿತ್ತು ಮತ್ತು ಸಿಖ್ಖರು ತಮ್ಮ ಮೇಲಿನ ದಾಳಿಯನ್ನು ವೌನವಾಗಿ ಸಹಿಸಿಕೊಳ್ಳಬೇಕು ಎಂಬ ಸಲಹೆಯನ್ನು ದೇಶ್ಮುಖ್ ನೀಡಿದ್ದರು.
ಗಾಂಧೀಜಿಯ ಹತ್ಯೆಯು ಆರೆಸ್ಸೆಸ್ ಮತ್ತು ಹಿಂದುತ್ವ ಸಿದ್ಧಾಂತದ ಪ್ರೇರಣೆಯಿಂದ ನಡೆದಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇಂದಿರಾ ಗಾಂಧಿ ಹತ್ಯೆಯಲ್ಲಿ ಸಾಮಾನ್ಯ ಮುಗ್ಧ ಸಿಖ್ಖರ ಯಾವುದೇ ಕೈವಾಡವಿರಲಿಲ್ಲ.

ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಥವಾ ಅಂದಿನ ಗೃಹ ಸಚಿವ ನರಸಿಂಹ ರಾವ್ (ಆರೆಸ್ಸೆಸ್‌ಗೆಅತ್ಯಂತ ಆತ್ಮೀಯರಾಗಿದ್ದ ಕಾಂಗ್ರೆಸ್ ನಾಯಕ. 1992ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಿಂದುತ್ವ ಗುಂಪುಗಳು ಬಾಬರಿ ಮಸೀದಿಯನ್ನು ಧ್ವಂಸಗೈಯುವುದನ್ನು ವೌನವಾಗಿ ವೀಕ್ಷಿಸಿದ್ದ ವ್ಯಕ್ತಿ) ಅವರಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲಾದ ಹಿಂಸಾಚಾರವನ್ನು ನಿಯಂತ್ರಿಸಲು ಕ್ರಮಗಳನ್ನು ತೆಗದುಕೊಳ್ಳಲು ಆಗ್ರಹಿಸಿರುವ ಬಗ್ಗೆ ದೇಶ್ಮುಖ್‌ರ ದಾಖಲೆಗಳಲ್ಲಿ ಒಂದು ವಾಕ್ಯ ಕೂಡಾ ಕಂಡು ಬರುವುದಿಲ್ಲ.
ಗಮನಿಸಬೇಕಾದ ಅಂಶವೆಂದರೆ, ಈ ದಾಖಲೆಯನ್ನು ದೇಶ್ಮುಖ್ 1984ರ ನವೆಂಬರ್ 8ರಂದು ಪ್ರಕಟಿಸಿದ್ದರು ಮತ್ತು ಅಕ್ಟೋಬರ್ 31ರಿಂದ ಆ ದಿನದ ವರೆಗೆ ಸಿಖ್ಖರು ಹಿಂಸಾಚಾರಕ್ಕೆ ಒಳಗಾಗಿದ್ದರು. ವಾಸ್ತವದಲ್ಲಿ, ನವೆಂಬರ್ 5ರಿಂದ 10ರ ನಡುವೆ ಅತೀಹೆಚ್ಚು ಸಿಖ್ಖರು ಹತ್ಯೆಗೀಡಾಗಿದ್ದರು. ಆದರೆ ಈ ಬಗ್ಗೆ ದೇಶ್ಮುಖ್‌ಗೆ ಯಾವುದೇ ಚಿಂತೆಯಿದ್ದಂತೆ ಕಾಣುವುದಿಲ್ಲ.
ಸಾಮಾನ್ಯವಾಗಿ ಈ ಹತ್ಯಾಕಾಂಡದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ನಂಬಲಾಗಿದೆ. ಇದು ಸತ್ಯವಾಗಿದ್ದರೂ ಇತರ ಶಕ್ತಿಗಳೂ ಈ ನರಮೇಧದ ಹಿಂದೆ ಸಕ್ರಿಯವಾಗಿ ಕೈಯಾಡಿಸಿದ್ದವು. ಈ ಕೈಗಳ ಪಾತ್ರದ ಬಗ್ಗೆ ತನಿಖೆ ನಡೆಯಲೇ ಇಲ್ಲ. ಪ್ರಕರಣದ ನಿಜವಾದ ತಪ್ಪಿತಸ್ಥರು ತಿಳಿಯದೇ ಇರಲು ಇದೂ ಒಂದು ಕಾರಣವಾಗಿರಬಹುದು.
ಈ ಹತ್ಯಾಕಾಂಡವನ್ನು ವೀಕ್ಷಿಸಿದವರು ಕೊಲೆಗಾರರ ತೀವ್ರತೆ ಮತ್ತು ಸೇನಾ ರೀತಿಯ ನಿಖರತೆಯನ್ನು (ನಂತರ ಬಾಬರಿ ಮಸೀದಿ ಧ್ವಂಸ, ಡಾ. ಗ್ರಹಂ ಸ್ಟೇನ್ಸ್ ಮತ್ತವರ ಇಬ್ಬರು ಪುತ್ರರ ಸಜೀವ ದಹನ, 2002ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಮರ ನರಮೇಧ ಮತ್ತು ಒಡಿಶಾದಲ್ಲಿ ಕ್ರೈಸ್ತರ ಮಾರಣಹೋಮ ಮುಂತಾದ ಘಟನೆಗಳಲ್ಲಿ ಗಮನಿಸಲಾಗಿದೆ) ಕಂಡು ದಂಗಾಗಿದ್ದರು. ಇದು ಕಾಂಗ್ರೆಸ್‌ನ ಅನೇಕ ನಾಯಕರು ಹೊಂದಿದ್ದ ಗೂಂಡಾಗಳ ಸಾಮರ್ಥ್ಯಕ್ಕಿಂತ ಹೊರತಾಗಿತ್ತು.
 ದೇಶ್ಮುಖ್ ದಾಖಲೆಯು ಯಾವುದೇ ಪ್ರತ್ಯೇಕತೆಯನ್ನು ಹೊಂದಿರಲಿಲ್ಲ. ಅದು 1984 ಸಿಖ್ ಹತ್ಯಾಕಾಂಡದ ಬಗ್ಗೆ ಆರೆಸ್ಸೆಸ್ ನಿಜವಾದ ಮನೋಭಾವವನ್ನು ಪ್ರತಿನಿಧಿಸಿತ್ತು. ಆರೆಸ್ಸೆಸ್ ಈ ವೇಳೆ ಸಿಖ್ಖರ ರಕ್ಷಣೆಗೆ ಧಾವಿಸಿರಲಿಲ್ಲ ಎಂಬುದನ್ನು ನಾವು ಗಮನಿಸಬಹುದು.
ಆರೆಸ್ಸೆಸ್ ಪ್ರಚಾರ ವಸ್ತುಗಳನ್ನು ಹಂಚುವುದರಲ್ಲಿ ಖುಷಿಪಡುತ್ತದೆ. ಮುಖ್ಯವಾಗಿ ಖಾಕಿ ಚಡ್ಡಿ ಧರಿಸಿದ ಕಾರ್ಯಕರ್ತರು ಸಮಾಜ ಸೇವೆಯಲ್ಲಿ ತೊಡಗಿರುವ ಭಾವಚಿತ್ರಗಳನ್ನು ಅದು ಹಾಕುತ್ತಲೇ ಇರುತ್ತದೆ. 1984ರ ಹಿಂಸಾಚಾರದ ವೇಳೆ ಅಂಥ ಯಾವುದೇ ಚಿತ್ರಗಳು ಕಾಣಲು ಸಿಕ್ಕಿರಲಿಲ್ಲ. ನಿಜವಾಗಿ, ದೇಶ್ಮುಖ್‌ರ ದಾಖಲೆಯಲ್ಲೂ ದಂಗೆಯ ಸಮಯದಲ್ಲಿ ಆರೆಸ್ಸೆಸ್‌ನ ಕಾರ್ಯಕರ್ತರು ಸಿಖ್ಖರ ರಕ್ಷಣೆಗೆ ಧಾವಿಸಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದು ಈ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್‌ನ ಉದ್ದೇಶಗಳನ್ನು ತೋರಿಸುತ್ತದೆ.
ಆರೆಸ್ಸೆಸ್‌ನ ಆಂಗ್ಲ ಮುಖವಾಣಿ ಆರ್ಗನೈಸರ್‌ನ 1984ರ ನವೆಂಬರ್ 11 ಮತ್ತು 18ರ ಅವೃತ್ತಿಯಲ್ಲಿ ಬರೆಯಲಾಗಿದ್ದ ಆಘಾತಕಾರಿ ನಷ್ಟ ಎಂಬ ಸಂಪಾದಕೀಯದಲ್ಲಿ ಇಂದಿರಾ ಗಾಂಧಿಯನ್ನು ಈ ರೀತಿ ಹೊಗಳಲಾಗಿತ್ತು: ಇಂದಿರಾ ಗಾಂಧಿ ಇಲ್ಲವೆನ್ನುವುದನ್ನು ನಂಬಲು ಎಂದಿಗೂ ಕಷ್ಟವಾಗಲಿದೆ. ಆಕೆಯ ಧ್ವನಿಯನ್ನು ಕೇಳುವುದು ಯಾವ ಮಟ್ಟಕ್ಕೆ ಅಭ್ಯಾಸವಾಗಿದೆಯೆಂದರೆ ಆಕೆಯ ಹೊರತು ಎಲ್ಲವೂ ಖಾಲಿಯಾಗಿ ಕಾಣುತ್ತದೆ. ಆಕೆಯ ಭೀಕರ ಹತ್ಯೆ ಅತ್ಯಂತ ಆಘಾತಕಾರಿ ಭಯಾನಕ ಕತೆಯಾಗಿದೆ. ಇದು, ಭಾರತೀಯ ಮಹಿಳತ್ವದ ಅಭೂತಪೂರ್ವ ಸಾಕ್ಷಿಯನ್ನು ಕೊಲೆ ಮಾಡುವ ಮೂಲಕ ಇಡೀ ದೇಶವನ್ನು ಆಘಾತಕ್ಕೆ ತಳ್ಳಿದ ದ್ರೋಹಿ ಮತಾಂಧರ ಕೃತ್ಯವಾಗಿದೆ. ಆಕೆ ಅಕ್ಷರಶಃ ತನ್ನದೇ ದೃಷ್ಟಿಕೋನದಿಂದ ತನ್ನ ದೇಹದ ರಕ್ತದ ಕೊನೆ ಹನಿಯವರೆಗೆ ಭಾರತದ ಸೇವೆ ಮಾಡಿದರು.
ಈ ಸಂಪಾದಕೀಯವು ನೂತನವಾಗಿ ನಿಯೋಜನೆಗೊಂಡ ಪ್ರಧಾನಿ ರಾಜೀವ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸಿ, ಅವರಿಗೆ ದಯೆ ಮತ್ತು ಪರಿಗಣನೆಯ ಅಗತ್ಯವಿದೆ ಎಂದು ತಿಳಿಸುತ್ತಾ ಕೊನೆಯಾಗುತ್ತದೆ.
 ಸಿಖ್ ಹತ್ಯಾಕಾಂಡವನ್ನು ಆರೆಸ್ಸೆಸ್ ಮುಖಂಡ ಬಾಳಾ ದಿಯೋರಸ್ ಖಂಡಿಸಿರುವುದನ್ನೂ ಪ್ರಕಟಿಸಿದ್ದ ಆರ್ಗನೈಸರ್, ಬಾಳಾ ಸಾಹೇಬ್ ಈ ಹತ್ಯಾಕಾಂಡವನ್ನು, ದಿಲ್ಲಿ ನರಮೇಧವನ್ನು ಖಂಡಿಸುತ್ತಾರೆ ಎಂಬ ತಲೆಬರಹದಡಿ ಕೇವಲ ಒಂದು ಸಾಲಿನ ಸುದ್ದಿಯನ್ನು ಪ್ರಕಟಿಸಿತ್ತು. ದಿಯೋರಸ್ ಈ ಹತ್ಯಾಕಾಂಡವನ್ನು ಖಂಡಿಸಿದರೂ ಸಿಖ್ಖರ ಮೇಲೆ ದಾಳಿಗಳು ನಡೆಯುತ್ತಿವೆ ಎಂಬುದನ್ನು ಎಲ್ಲಿಯೂ ತಿಳಿಸಿರಲಿಲ್ಲ. ಅವರ ಪಾಲಿಗೆ ಅದು ಹಿಂದೂ ಸಮಾಜದಲ್ಲಿ ನಡೆದ ಆಂತರಿಕ ಜಗಳವಾಗಿತ್ತು.
ಕೇವಲ ದಿಲ್ಲಿಯಲ್ಲಿ ಮಾತ್ರ ಸಿಖ್ಖರನ್ನು ಹತ್ಯೆ ಮಾಡಿರುವುದು/ದಹಿಸಿರುವುದಲ್ಲ, ಇಡೀ ದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆದಿವೆ ಎಂಬುದನ್ನೂ ದಿಯೋರಸ್ ನಿರ್ಲಕ್ಷಿಸಿದ್ದರು. ಈ ಹೇಳಿಕೆಯ ಪ್ರಕಾರ, ಶಾಂತಿ ಕಾಪಾಡಲು ಮತ್ತು ಸಂತ್ರಸ್ತರ ಪುನರ್ವಸತಿಗಾಗಿ ಮೊಹಲ್ಲಾ ಸುರಕ್ಷಾ ಸಮಿತಿಯನ್ನು ರಚಿಸಲು ಅಥವಾ ನೆರವಾಗಲು ಸ್ವಯಂ ಸೇವಕರಿಗೆ ಸೂಚಿಸಲಾಗಿದೆ. ಆದರೆ ಆರೆಸ್ಸೆಸ್‌ನ ಸಮಕಾಲೀನ ಯಾವುದೇ ದಾಖಲೆಗಳಲ್ಲಿ ಈ ಸಮಿತಿಗಳು ಯಾವ ರೀತಿ ಕಾರ್ಯನಿರ್ವಹಿಸಿದ್ದವು ಎಂಬ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.
ತನ್ನ ಕಾರ್ಯಕರ್ತರು ಸಮಾಜ ಸೇವೆಯಲ್ಲಿ ತೊಡಗಿರುವ ಚಿತ್ರಗಳನ್ನು ಪ್ರಕಟಿಸಲು ಇಷ್ಟಪಡುವ ಆರೆಸ್ಸೆಸ್ ಈ ಸಮಿತಿಗಳ ಚಟುವಟಿಕೆಗಳ ಬಗ್ಗೆ ಯಾವುದೇ ದೃಶ್ಯಾವಳಿಗಳನ್ನು ಪ್ರಸಾರ ಮಾಡಿರಲಿಲ್ಲ ಎಂಬುದು ವಾಸ್ತವ.
ಇದೇ ಹೇಳಿಕೆಯಲ್ಲಿ ಇಂದಿರಾ ಗಾಂಧಿ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ದಿಯೇರಸ್ ಹೇಳುತ್ತಾರೆ, ಪ್ರಧಾನ ಮಂತ್ರಿ ಇಂದಿರಾ ಗಾಂಧಿಯನ್ನು ಕೆಲವು ಮತಾಂಧ ಶಕ್ತಿಗಳು ಹತ್ಯೆ ಮಾಡಿರುವುದರಿಂದ ಉಂಟಾಗಿರುವ ಆಘಾತವನ್ನು ವ್ಯಕ್ತಪಡಿಸಲು ಶಬ್ದಗಳಿಂದ ಸಾಧ್ಯವಿಲ್ಲ. 1966ರಿಂದೀಚೆಗೆ ಇಂದಿರಾ ಗಾಂಧಿ ಬಹುತೇಕ ಸಂಪೂರ್ಣ ದೇಶದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತಿದ್ದರು. ಆಕೆ ಈ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಇಂಥ ಸಂದರ್ಭದಲ್ಲಿ ಆಕೆ ಮೃತಪಟ್ಟಿರುವುದು ಭಾರತ ಮತ್ತು ಇಡೀ ಜಗತ್ತಿನಲ್ಲಿ ಒಂದು ಖಾಲಿತನವನ್ನು ಸೃಷ್ಟಿಸಿದೆ.
 ಆರ್ಗನೈಸರ್ ಪ್ರಕಾರ, ಪ್ರಧಾನಿಯ ಹತ್ಯೆಯನ್ನು ಖಂಡಿಸಲು ಮತ್ತು ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಕೋರಲು ದೇಶಾದ್ಯಂತದ ಶಾಖೆಗಳಲ್ಲಿ ವಿಶೇಷ ಸಭೆಗಳನ್ನು ಆಯೋಜಿಸುವಂತೆ ಆರೆಸ್ಸೆಸ್ ಕಾರ್ಯವಾಹ ರಾಜೇಂದ್ರ ಸಿಂಗ್ ಸೂಚನೆ ನೀಡಿದ್ದರು. ಶ್ರದ್ಧಾಂಜಲಿಯ ಸಮಯದಲ್ಲಿ ಆರೆಸ್ಸೆಸ್ ನಡೆಸಲು ಉದ್ದೇಶಿಸಿದ್ದ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆಯೂ ಅವರು ಸೂಚಿಸಿದ್ದರು. ಖಂಡಿತ ವಾಗಿಯೂ, ಸಿಖ್ ಹುತಾತ್ಮರಿಗೆ ಶ್ರದ್ಧಾಂಜಲಿ ಕೋರಲು ಆರೆಸ್ಸೆಸ್‌ನ ಉನ್ನತ ನಾಯಕರು ಆದೇಶ ಹೊರಡಿಸಿರುವ ಬಗ್ಗೆ ಸಂಘದ ಕಡತಗಳಲ್ಲಿ ಯಾವುದೇ ಉಲ್ಲೇಖವಿಲ್ಲ.
 1984 ಹತ್ಯಾಕಾಂಡಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕ್ಷಮೆ ಯಾಚಿಸಿದುದನ್ನು ವಿರೋಧಿಸಿದ ಆರೆಸ್ಸೆಸ್
ಆರೆಸ್ಸೆಸ್ 1984ರ ಸಿಖ್ ಹತ್ಯಾಕಾಂಡವನ್ನು ಕ್ಷುಲ್ಲಕ ಗೊಳಿಸುವುದನ್ನು ಮುಂದುವರಿಸಿದೆ ಎಂಬುದು ಕಳೆದ ಜುಲೈಯಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ)ಗೆ ಸಲ್ಲಿಸಿದ್ದ ಬೇಡಿಕೆಗಳ ಪಟ್ಟಿಯನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಸಂಘ ಪರಿವಾರದ ಅಂಗ ಸಂಸ್ಥೆ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸದ ಪರವಾಗಿ ಸಂಘಸಿದ್ಧಾಂತಿ ದೀನಾನಾಥ ಬಾತ್ರ ಸಲ್ಲಿಸಿದ ಐದು ಪುಟಗಳ ಪಟ್ಟಿಯಲ್ಲಿ ಶಾಲಾ ಪಠ್ಯಕ್ರಮದಿಂದ ಯಾವೆಲ್ಲ ವಿಷಯಗಳನ್ನು ತೆಗೆದುಹಾಕಬೇಕು ಎಂಬುದನ್ನು ತಿಳಿಸಲಾಗಿತ್ತು. ಅಲ್ಪಸಂಖ್ಯಾತರ ಮೇಲೆ ನಡೆದ ಯಾವುದೇ ರೀತಿಯ ಹಿಂಸಾಚಾರದ ಬಗೆಗಿನ ಪ್ರಸ್ತಾವವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಬೇಕು ಎಂದು ಬಾತ್ರಾ ಸೂಚಿಸಿದ್ದರು. ಇದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 1984 ಹತ್ಯಾಕಾಂಡಕ್ಕೆ ಕ್ಷಮೆ ಯಾಚಿಸುವ ಉಲ್ಲೇಖವೂ ಸೇರಿದೆ.
 ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ 2005ರ ಆಗಸ್ಟ್ 12ರಂದು ಸಂಸತ್‌ನಲ್ಲಿ ನೀಡಿದ ಕ್ಷಮಾಪಣಾ ಹೇಳಿಕೆಯಲ್ಲಿ ಈ ರೀತಿ ತಿಳಿಸಿದ್ದರು: ಸಿಖ್ ಸಮುದಾಯದಲ್ಲಿ ಕ್ಷಮೆ ಕೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ನಾನು ಕೇವಲ ಸಿಖ್ ಸಮುದಾಯದಲ್ಲಿ ಮಾತ್ರವಲ್ಲ ಸಂಪೂರ್ಣ ಭಾರತೀಯರ ಮುಂದೆ ಕ್ಷಮೆ ಯಾಚಿಸುತ್ತೇನೆ. ಯಾಕೆಂದರೆ 1984ರಲ್ಲಿ ನಡೆದ ಘಟನೆ ನಮ್ಮ ಸಂವಿಧಾನದಲ್ಲಿ ತಿಳಿಸಲಾಗಿರುವ ರಾಷ್ಟ್ರತ್ವದ ಪರಿಕಲ್ಪನೆಯನ್ನು ನಿರಾಕರಿಸುತ್ತದೆ. ಹಾಗಾಗಿ, 1984 ಸಿಖ್ ನರಮೇಧದ ತಪ್ಪಿತಸ್ಥರನ್ನು ಹುಡುಕುವ ಕಾರ್ಯ ಮುಂದುವರಿದಿದೆ. ತಮ್ಮ ಸಿಖ್ ಸಮುದಾಯದ ಸಹಧರ್ಮಿಕರು ಎಂದು ಹೇಳಿಕೊಳ್ಳುವ ಸದ್ಯದ ಆರೆಸ್ಸೆಸ್/ಬಿಜೆಪಿ ಆಡಳಿತಗಾರರು ಕಾಂಗ್ರೆಸ್‌ಗಿಂತ ಭಿನ್ನವಾಗೇನೂ ಇಲ್ಲ. ಒಂದೇ ಭರವಸೆಯೆಂದರೆ, ಪ್ರಜಾಸತ್ತಾತ್ಮಕ-ಜಾತ್ಯತೀತ ಭಾರತೀಯ ರಾಜಕೀಯದಲ್ಲಿ ನಂಬಿಕೆಯಿರುವ ಭಾರತೀಯರು ಕೊಲೆಗಡುಕರನ್ನು ಪತ್ತೆಹಚ್ಚಿ ಶಿಕ್ಷಿಸಲು ಸರಕಾರದ ಮೇಲೆ ಒತ್ತಡ ತರುತ್ತಲೇ ಇರುತ್ತಾರೆ ಎಂಬುದಷ್ಟೇ.
 ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)