varthabharthi


ನೇಸರ ನೋಡು

ತೀನ್ ಮೂರ್ತಿ ಭವನದ ಕಥೆ-ವ್ಯಥೆ

ವಾರ್ತಾ ಭಾರತಿ : 11 Nov, 2018
ಜಿ.ಎನ್.ರಂಗನಾಥ ರಾವ್

ನೆಹರೂ ಪರಂಪರೆಯ ಸಂಕೇತವಾದ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರವನ್ನು ಮಾಜಿ ಪ್ರಧಾನಿಗಳ ಸ್ಮಾರಕವಾಗಿ ಪರಿವರ್ತಿಸುವ ನಿರ್ಧಾರ ಕೈಬಿಡುವಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತಿತರರು ಮಾಡಿದ ಮನವಿಗೆ ಸರಕಾರ ಕಿವಿಗೊಟ್ಟಿಲ್ಲ. ಪರಿವರ್ತನೆಯ ಕಾರ್ಯಕ್ಕೆ ಭೂಮಿಪೂಜೆಯನ್ನು ನೆರವೇರಿಸಿ, ಆಡಳಿತ ಮಂಡಲಿಯ ನೂತನ ಸದಸ್ಯರು ನೆಹರೂ ಪರಂಪರೆಯನ್ನು ಅಳಿಸಿಹಾಕುವ ಕಾರ್ಯದಲ್ಲಿ ಮುಂದಡಿ ಇಟ್ಟಾಗಿದೆ.ಇದು ಈ ದೇಶದ ಮಹಾನ್ ಶಿಲ್ಪಿಗೆ ಎಸಗುತ್ತಿರುವ ಅವಮಾನ. ನೆಹರೂ ಬಗ್ಗೆ ಸುಳ್ಳುಗಳನ್ನು ಹೆಣೆಯುತ್ತ ಜನರ ವಿವೇಕವನ್ನು ವಂಚಿಸುವ ನಾಚಿಕೆಗೇಡಿನ ಕೆಲಸ.


‘ತೀನ್‌ಮೂರ್ತಿ ಭವನ’ ದಿಲ್ಲಿಯ ಪ್ರಮುಖ ಆಕರ್ಷಣೆಗಳಲ್ಲೊಂದು. ತೀನ್ ಮೂರ್ತಿ ಭವನ ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ನಿವಾಸವಾಗಿತ್ತು. ಅವರ ನಿಧನಾನಂತರ ‘ತೀನ್ ಮೂರ್ತಿ ಭವನ’ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥ ಭಂಡಾರವಾಗಿ ರೂಪಾಂತರಹೊಂದಿತು. ಅಧ್ಯಯನಶೀಲರ ಜ್ಞಾನಗಂಗೋತ್ರಿಯಾಗಿ ದಿಲ್ಲಿಯ ಸಾಂಸ್ಕೃತಿಕ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾಗಿ ಪ್ರಖ್ಯಾತಿಹೊಂದಿತು. ಈಗ ‘ತೀನ್ ಮೂರ್ತಿ ಭವನ’ ದುಷ್ಟಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಮೋದಿ ಸರಕಾರ ಅದನ್ನು ದೇಶದ ಎಲ್ಲ ಪ್ರಧಾನಿಗಳ ಸ್ಮಾರಕವಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿದೆ.


 ದಿಲ್ಲಿ ಮಹಾ ನಗರದ ಎರಡನೆಯ ಭವ್ಯ ಬಂಗಲೆಯಾದ ‘ತೀನ್ ಮೂರ್ತಿ ಭವನ’ ವಸಾಹತುಶಾಹಿ ಕಾಲದಲ್ಲಿ ಬ್ರಿಟಿಷ್ ಸೇನೆಯ ಮಹಾದಂಡ ನಾಯಕರ ನಿವಾಸವಾಗಿತ್ತು. ವೈಸ್ ರಾಯ್ ಅವರ ರೈಸನಾ ಹಿಲ್ಸ್ಸ್ ಬಂಗಲೆಗಿಂತ ಸ್ವಲ್ಪಚಿಕ್ಕಾದಾಗಿತ್ತಷ್ಟೆ. ಬ್ರಿಟಿಷರ ಆಳ್ವಿಕೆಯ ಕೊನೆಯ ವರ್ಷವಾದ 1946ರಲ್ಲಿ ಜವಾಹರಲಾಲ್ ನೆಹರೂ ಅವರು ಮಧ್ಯಂತರ ಸರಕಾರವನ್ನು ಸೇರಿದಾಗ ಅವರ ವಾಸಕ್ಕೆ ಯಾರ್ಕ್ ರಸ್ತೆಯ ಒಂದು ಸಣ್ಣ ಬಂಗಲೆಯನ್ನು ನೀಡಲಾಗಿತ್ತು. 1947ರಲ್ಲಿ ಸ್ವಾತಂತ್ರ್ಯ ಬಂದು ದೇಶದ ಪ್ರಥಮ ಪ್ರಧಾನ ಮಂತ್ರಿಯಾದ ನಂತರವೂ ನೆಹರೂ ಅದೇ ಬಂಗಲೆಯಲ್ಲಿ ತಮ್ಮ ವಾಸ್ತವ್ಯ ಮುಂದುವರಿಸಿದ್ದರು. 1948ರ ಮಧ್ಯಭಾಗದಲ್ಲಿ ನೆಹರೂ ‘ತೀನ್ ಮೂರ್ತಿ ಭವನ’ಕ್ಕೆ ವಾಸ ಬದಲಾಯಿಸಿದರು. ನೆಹರೂ ಅವರಿಗೆ ಮೊದಲಿನಿಂದಲೂ ಈ ಭವ್ಯ ಭವನದ ಮೇಲೆ ಮನಸ್ಸಿತ್ತೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ನೆಹರೂ ಆಡಂಬರ ಪ್ರದರ್ಶನ ಮನೋಭಾವದವರಾಗಿರಲಿಲ್ಲವಾದರೂ ಬೃಹತ್ತಾದ ಸಾರ್ವಭೌಮ ರಾಷ್ಟ್ರವೊಂದರ ಪ್ರಧಾನ ಮಂತ್ರಿಗಳು ಅಧಿಕೃತ ಔತಣ ಕೂಟಗಳು ಮೊದಲಾದ ಸಭೆಸಮಾರಂಭಗಳನ್ನು ನಡೆಸಬೇಕಾದ ಹಿನ್ನೆಲೆಯಲ್ಲಿ ‘ತೀನ್‌ಮೂರ್ತಿ ಭವನ’ ತಮ್ಮ ವಾಸಕ್ಕೆ ಸೂಕ್ತವಾದು ದೆಂದು ನೆಹರೂ ಭಾವಿಸಿರಬಹುದು ಎಂಬುದು ಚರಿತ್ರೆಕಾರರ ಊಹೆ. ನೆಹರೂ ಅವರು ಕೊನೆಯುಸಿರು ಇರುವವರೆಗೆ ದೇಶದ ಪ್ರಧಾನಿಯಾಗಿ ‘ತೀನ್ ಮೂರ್ತಿ ಭವನ’ದಲ್ಲಿ ವಾಸವಾಗಿದ್ದರು. 1964ರ ಮೇ ತಿಂಗಳಲ್ಲಿ ನೆಹರೂ ನಿಧನಾನಂತರ ಇಂದಿರಾಗಾಂಧಿಯವರು ತಮ್ಮ ತಂದೆಯೇ ‘ತೀನ್‌ಮೂರ್ತಿ ಭವನ’ದ ಕೊನೆಯ ಭಾರತೀಯ ನಿವಾಸಿಯಾಗಿರತಕ್ಕದ್ದೆಂದು ತೀರ್ಮಾನಿಸಿದರು. ಶೋಕದ ದಿನಗಳು ಮುಗಿದ ಕೂಡಲೇ ‘ತೀನ್‌ಮೂರ್ತಿ ಭವನ’ ನೆಹರೂ ಅವರ ಸ್ಮಾರಕವಾಗಲಿದೆಯೆಂದು ಪ್ರಕಟಿಸಲಾಯಿತು. 1948ರಲ್ಲಿ ಗಾಂಧಿಯವರ ಹತ್ಯೆಯಾದ ಬಿರ್ಲಾ ಭವನವನ್ನು ಮಹಾತ್ಮರ ಸ್ಮಾರಕ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿದ್ದ ಪೂರ್ವನಿದರ್ಶನ ಇಂದಿರಾಗಾಂಧಿಯವರ ಈ ನಿರ್ಧಾರಕ್ಕೆ ಪ್ರೇರಣೆಯಾಗಿರಬಹುದು. ‘ತೀನ್‌ಮೂರ್ತಿ ಭವನ’ವನ್ನು ನೆಹರೂ ಸ್ಮಾರಕವಾಗಿ ರೂಪಿಸಿವ ಹೊಣೆಯನ್ನು ಆಗ ಕೇಂದ್ರದಲ್ಲಿ ಸಂಸ್ಕೃತಿ ಸಚಿವರಾಗಿದ್ದ ನ್ಯಾಯ ಶಾಸ್ತ್ರಜ್ಞ ಎಂ.ಸಿ.ಛಗಲಾ ಅವರಿಗೆ ವಹಿಸಲಾಯಿತು. ಪ್ರಪ್ರಥಮ ಪ್ರಧಾನ ಮಂತ್ರಿಗಳಷ್ಟೇ ಅಲ್ಲದೆ ವಿದ್ವಾಂಸ ಲೇಖಕರೂ ಮುತ್ಸದ್ಧಿಯೂ ಆಗಿದ್ದ ನೆಹರೂ ಅವರಿಗೆ ಯೋಗ್ಯ ಸ್ಮಾರಕ ನಿರ್ಮಿಸಲು ನಿರ್ಧರಿಸಿದ ಛಗಲಾ ಅವರು ಮೊದಲ ಹೆಜ್ಜೆಯಾಗಿ ತೀನ್‌ಮೂರ್ತಿ ಭವನದ ಆವರಣೊಳಗಿದ್ದ ವಿಶಾಲವಾದ ಜಾಗದಲ್ಲಿ ಸಾರ್ವಜನಿಕ ಪತ್ರಾಗಾರ ಮತ್ತು ಗ್ರಂಥ ಭಂಡಾರವನ್ನು ಸ್ಥಾಪಿಸಲು ನಿರ್ಧರಿಸಿದರು. ಇತಿಹಾಸಕಾರರೂ ಜೀವನಚರಿತ್ರೆಕಾರರೂ ಆಗಿದ್ದ ಬಿ.ಆರ್.ನಂದಾ ಅವರನ್ನು ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯದ ಪ್ರಥಮ ನಿರ್ದೇಶಕರನ್ನಾಗಿ ನೇಮಕಮಾಡಿದರು. ಭಾರತೀಯ ರೈಲ್ವೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ನಂದಾ ಅವರು ಆ ವೇಳೆಗಾಗಲೇ ಮೋತಿಲಾಲ್ ನೆಹರೂ, ಮಹಾತ್ಮಗಾಂಧಿ ಮತ್ತು ಜವಾಹರಲಾಲ್ ನೆಹರೂ ಮೊದಲಾದವರ ಜೀವನ ಚರಿತೆಗಳನ್ನು ರಚಿಸಿ ಖ್ಯಾತರಾಗಿದ್ದರು. ಆಡಳಿತಾನುಭವದ ಜೊತೆಗೆ ಇತಿಹಾಸ ಜ್ಞಾನವಿದ್ದ ನಂದಾ ಅವರಿಗೆ ಚಾರಿತ್ರಿಕ ಮಹತ್ವದ ಮೌಲಿಕ ಆಕರಗಳನ್ನು ಹಾಗೂ ಮೂಲ ದ್ರವ್ಯಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಿಡಬೇಕಾದ ಅಗತ್ಯದ ಅರಿವಿತ್ತು. ಹೀಗಾಗಿ ನಂದಾ ಅವರು ಅಧಿಕಾರವಹಿಸಿಕೊಂಡ ಕೂಡಲೇ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯವನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಮಾಹಿತಿ ಕೇಂದ್ರವನ್ನಾಗಿ ಬೆಳೆಸಲು ನಿರ್ಧರಿಸಿದರು. ನೆಹರೂ ಅವರ ಖಾಸಗಿ ಪುಸ್ತಕ ಭಂಡಾರ ಮತ್ತು ಅವರ ಗ್ರಂಥಗಳ ಹಸ್ತಪ್ರತಿಗಳನ್ನು ಅವುಗಳು ಇದ್ದ ಜಾಗದಲ್ಲೇ ವ್ಯವಸ್ಥಿತಗೊಳಿಸಿ ಉಳಿದ ಕೊಠಡಿಗಳನ್ನು ಹಾಗೂ ಔತಣ ಕೂಟಗಳನ್ನು ಏರ್ಪಡಿಲಾಗುತ್ತಿದ್ದ ಹಜಾರಗಳನ್ನು ಸ್ವಾತಂತ್ರ್ಯ ಹೋರಾಟದ ವಿವಿಧ ಘಟ್ಟಗಳನ್ನು ಬಿಂಬಿಸುವ ಚಿತ್ರಶಾಲೆಯಾಗಿ ಪರಿವರ್ತಿಸಲು ನಂದಾ ನಿರ್ಧರಿಸಿದರು. ಭವನದ ಹಿಂದುಗಡೆ ಇದ್ದ ಖಾಲಿ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಗ್ರಂಥ ಭಂಡಾರ ಮತ್ತು ಖಾಸಗಿ ಪತ್ರಗಳ ಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ರಾಷ್ಟ್ರೀಯ ಆಂದೋಲದಲ್ಲಿ ಭಾಗವಹಿಸಿದವರ ಕುಟುಂಬಗಳಿಂದ ಸಂಗ್ರಹಿಸಲಾದ ಹಸ್ತಪ್ರತಿಗಳು, ಖಾಸಗಿ ಪತ್ರಗಳು, ಚಿತ್ರಗಳನ್ನು ವ್ಯವಸ್ಥಿತವಾಗಿ ಇರಿಸಲಾಗಿರುವ ಈ ಸಂಗ್ರಹಾಲಯ, ಮುಂದಿನ ದಿನಗಳಲ್ಲಿ ದೇಶವಿದೇಶಗಳ ಇತಿಹಾಸದ ಅಧ್ಯಯನಕಾರರಿಗೆ ಒಂದು ಸುಸಜ್ಜಿತ ಬಖೈರು ಮನೆಯಾಯಿತು. ಸಾಹಿತಿಗಳು, ಕಲಾವಿದರು ಮತ್ತು ಪತ್ರಕರ್ತರ ಬಳಿ ಇದ್ದ ಸ್ವಾತಂತ್ರ್ಯ ಹೋರಾಟದ ಅಮೂಲ್ಯ ದಾಖಲೆಗಳನ್ನು ಮೈಕ್ರೊಫಿಲ್ಮ್ ಮಾಡಿಸಿ ಇಟ್ಟಿದ್ದು ನಂದಾ ಅವರ ಮತ್ತೊಂದು ಗಮನಾರ್ಹ ಸಾಧನೆ ಎನ್ನಿಸಿಕೊಂಡಿತು. ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯವನ್ನು ಒಂದು ಸುವ್ಯವಸ್ಥಿತ ಆಕರ ಗ್ರಂಥ ಭಂಡಾರ ಮತ್ತು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಿ ನಂದಾ 1980ರಲ್ಲಿ ನಿರ್ದೇಶಕನ ಹುದ್ದೆ ತ್ಯಜಿಸಿದರು. ಆ ವೇಳೆಗಾಗಲೇ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥ ಭಂಡಾರ ಉತ್ತಮವಾದ ಮೂಲ ಆಕರ ಕೇಂದ್ರವೆಂದು ದೇಶವಿದೇಶಗಳಲ್ಲಿ ಪ್ರಖ್ಯಾತವಾಗಿತ್ತು. ದೇಶವಿದೇಶಗಳ ಪಂಡಿತರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ನಂದಾ ಅವರ ಉತ್ತರಾಧಿಕಾರಿಯಾಗಿ ಬಂದವರು ರವೀಂದ್ರ ಕುಮಾರ್. ಹತ್ತೊಂಬತ್ತನೆ ಶತಮಾನದ ಪಶ್ಚಿಮ ಭಾರತದ ಇತಿಹಾಸದಲ್ಲಿ ವಿಶೇಷ ಅಧ್ಯಯನ ನಡೆಸಿ ಗ್ರಂಥಗಳನ್ನು ರಚಿಸಿದ್ದ ರವೀಂದ್ರ ಕುಮಾರ್ ಗಾಂಧಿ ಸತ್ಯಾಗ್ರಹಗಳಿಗೆ ಸಂಬಂಧಿಸಿದ ಪ್ರಬಂಧಗಳ ಸಂಪುಟವೊಂದನ್ನು ಸಂಪಾದಿಸಿದ್ದರು. ಇತಿಹಾಸದ ಜೊತೆಗೆ ಮಾನವ ಶಾಸ್ತ್ರ, ಸಾಮಾಜಿಕ ಸಿದ್ಧಾಂತಗಳು, ವಿಜ್ಞಾನ, ಕಲೆ ಸಾಹಿತ್ಯಗಳಲ್ಲೂ ಆಸಕ್ತರಾಗಿದ್ದ ರವೀಂದ್ರ ಕುಮಾರ್ ಅವರ ವಿದ್ವತ್ತು ಮತ್ತು ಬಹುಮುಖ ಆಸಕ್ತಿಗಳಿಂದಾಗಿ, ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಭಂಡಾರದ ಆಶಯಗಳಿಗೆ ಹೊಸ ಆಯಾಮಗಳು ಮೂಡಿದವು. ವಿಜ್ಞಾನಿಗಳು, ಸಮಾಜಸೇವಕರು, ಪ್ರದರ್ಶನ ಕಲೆಗಳ ಕಲಾಕಾರರು ಮೊದಲಾದವರ ಖಾಸಗಿ ಸಂಗ್ರಹದಲ್ಲಿದ್ದ ಕಾಗದಪತ್ರಗಳು, ದಸ್ತಾವೇಜುಗಳು ಮೊದಲಾದವುಗಳನ್ನು ಸಂಗ್ರಹಿಸಿ ಈ ಬಖೈರು ಮನೆಯ ಶ್ರೀಮಂತಿಕೆ ಮತ್ತು ವೈವಿಧ್ಯವನ್ನು ಹೆಚ್ಚಿಸಲಾಯಿತು. ಸಮಕಾಲೀನ ವಿಷಯಗಳ ಅಧ್ಯಯನಕ್ಕಾಗಿ ಪತ್ಯೇಕವಾದ ಹೊಸ ಕೇಂದ್ರವೊಂದನ್ನು ಸ್ಥಾಪಿಸಲಾಯಿತು. ಈ ಹೊಸ ಕೇಂದ್ರದಲ್ಲಿ ಇತಿಹಾಸಕಾರರು ಮತ್ತು ಸಮಾಜ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಫೆಲೋಶಿಪ್ ಕೊಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಮೂರರಿಂದ ಐದು ವರ್ಷಗಳ ಅವಧಿಯ ಈ ಫೆಲೋಶಿಪ್ ಪಡೆದವರು ತಾವು ಆಯ್ದುಕೊಂಡ ವಿಷಯದಲ್ಲಿ ಗ್ರಂಥ ರಚಿಸಬೇಕಾಗಿತ್ತು. ರಾಮಚಂದ್ರ ಗುಹಾ ಅವರಂಥ ಪ್ರತಿಭಾನ್ವಿತರು ಸುಮಾರು ಮಂದಿ ಈ ಯೋಜನೆಯ ಪ್ರಯೋಜನ ಪಡೆದುಕೊಂಡು ಆಧ್ಯಯನಮಾಡಿ ಗ್ರಂಥಗಳನ್ನು ರಚಿಸಿದರು. ವಾರಾಂತ್ಯದ ವಿಚಾರ ಸಂಕಿರಣಗಳು ಇಲ್ಲಿನ ಮತ್ತೊಂದು ಆಕರ್ಷಣೆಯಾಯಿತು. ವಿಚಾರ ಸಂಕಿರಣಗಳಲ್ಲಿ ಮಂಡಿಸಲಾದ ಪ್ರಬಂಧಗಳು ಗ್ರಂಥ ರೂಪದಲ್ಲಿ ಪ್ರಕಟಗೊಂಡವು. ಹೀಗೆ, ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರ ವಿದ್ವಜ್ಜನರ ಜೇನುಗೂಡಾಯಿತು. ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರದ ಆಕರಗಳನ್ನು ಆಧರಿಸಿ ಇಲ್ಲಿಯವರೆಗೆ ಸುಮಾರು ಎಂಟುನೂರು ಗ್ರಂಥಗಳು ಪ್ರಕಟವಾಗಿವೆಯೆಂದು ಸಮೀಕ್ಷೆಯೊಂದು ತಿಳಿಸಿದೆ.

 ನಲವತ್ತು ವರ್ಷಗಳ ಇತಿಹಾಸದಲ್ಲಿ ಎನ್.ಎಂ.ಎಂ.ಎಲ್. ಯಾವುದೇ ಒಂದು ನಿರ್ದಿಷ್ಟ ಪಕ್ಷದೊಂದಿಗೆ ಅಥವಾ ಕುಟುಂಬದೊಂದಿಗೆ ಗುರುತಿಸಿಕೊಳ್ಳಲು ನಿರಾಕರಿಸಿತ್ತು. ಇಲ್ಲಿನ ಪತ್ರಾಗಾರ ಹಿಂದೂ ಮಹಾಸಭಾ, ಕಮ್ಯುನಿಸ್ಟ್ ಪಕ್ಷ ಹಾಗೂ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಪತ್ರ ವ್ಯವಹಾರಗಳನ್ನೂ ಸಂಗ್ರಹಿಸಿತ್ತು. ಆಚಾರ್ಯ ನರೇಂದ್ರ ದೇವರ ಭಾಷಣಗಳು ಮತ್ತು ಲೇಖನಗಳ ಸಂಕಲನವನ್ನೂ ಪ್ರಕಟಿಸಿತ್ತು. ಆಚಾರ್ಯ ನರೇಂದ್ರ ದೇವ್ ನೆಹರೂ ಮತ್ತು ಜಯಪ್ರಕಾಶ್ ನಾರಾಯಣರ ಕಟುಟೀಕಾಕಾರರಾಗಿದ್ದರು. ವಿದ್ವತ್ ವಲಯಗಳಿಗೆ ಅಧ್ಯಯನಕ್ಕೆ ಆಸರೆಯಾಗಿದ್ದ ಈ ಸಂಸ್ಥೆ ನಂದಾ ಮತ್ತು ರವೀಂದ್ರ ಕುಮಾರರ ನಿವೃತ್ತಿಯ ನಂತರ ರಾಜಕೀಯಗ್ರಸ್ತವಾಯಿತು. ನಿರ್ದೇಶಕರ ನೇಮಕ್ಕಕ್ಕೆ ವಿದ್ವತ್ ಅರ್ಹತೆಗಳನ್ನೇ ಮಾನದಂಡವನ್ನಾಗಿ ಹೊಂದಿದ್ದ ಆಯ್ಕೆ ಸಮಿತಿಯನ್ನು ಅಲಕ್ಷಿಸಿ ರಾಜಕೀಯ ಪ್ರಭಾವದ ನೇಮಕ ತಲೆಹಾಕಿತು. 2006ರ ಆಗಸ್ಟ್ಟ್‌ನಲ್ಲಿ ಎಲ್ಲ ಮಾನದಂಡಗಳನ್ನೂ ಬದಿಗೊತ್ತಿ ರಾಜಕೀಯ ಪ್ರಭಾವವುಳ್ಳ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮೃದುಲಾ ಮುಖರ್ಜಿಯವರನ್ನು ನಿರ್ದೇಶಕರಾಗಿ ನೇಮಿಸಲಾಯಿತು.ಸೋನಿಯಾಗಾಂಧಿಯವರ ವಿಶ್ವಾಸ ನಂಬಿಕೆಗಳಿಗೆ ಪಾತ್ರರಾಗಿದ್ದವರೊಬ್ಬರು ಮೃದುಲಾ ಮುಖರ್ಜಿಯವರ ಹೆಸರನ್ನು ಸೂಚಿಸಿದ್ದರೆಂದು ರಾಮಚಂದ್ರ ಗುಹಾ ಬರೆಯುತ್ತಾರೆ(ದೇಶಪ್ರೇಮಿಗಳು ಮತ್ತು ಪಕ್ಷಪಾತಕರು ಪು 365). ನೆಹರೂ ಕಟುಂಬಸ್ಥರು ಎನ್.ಎಂ.ಎಂ.ಎಲ್. ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತೆ ಮಾಡುವುದೇ ಇದರ ಹಿಂದಿನ ಹುನ್ನಾರವಾಗಿತ್ತು. ಈ ರಾಜಕೀಯ ನೇಮಕದೊಂದಿಗೆ ವಸ್ತು ಸಂಗ್ರಹಾಲಯದ ದುರ್ದೆಶೆ ಶುರುವಾಯಿತು. ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರದ ಕಾರ್ಯಕ್ರಮಗಳಲ್ಲಿ ನೆಹರೂ ಕುಟುಂಬ ಮೆರೆಸುವ ಪ್ರಯತ್ನಗಳಾದವು. ಇಂದಿರಾ ನೆಹರೂ ಪತ್ರವ್ಯವಹಾರ ಆಧರಿಸಿದ ಕಾರ್ಯಕ್ರಮಗಳು, ಇಂದಿರಾಗಾಂಧಿಯವರ ಉವಾಚಗಳ ಫಲಕಗಳು, ಭಾವಚಿತ್ರಗಳು ಎದ್ದುಕಾಣಿಸಲಾರಂಭಿಸಿದವು. ಹೊಸ ನಿರ್ದೇಶಕರು ನೆಹರೂ-ಇಂದಿರಾ ಪ್ರದರ್ಶನಗಳ ಮೂಲಕ ಆ ಕುಟುಂಬದ ಕೃಪಾಕಟಾಕ್ಷಗಳಿಸಲು ಟೊಂಕಕಟ್ಟಿ ನಿಂತಿದ್ದರು. ಗ್ರಂಥ ಭಂಡಾರದ ವಿಚಾರ ಸಂಕಿರಣದ ಕೊಠಡಿಯನ್ನು ಯುವಕಾಂಗ್ರೆಸ್‌ಗೆ, ರಾಹುಲ್ ಗಾಂಧಿಯವರ ಸಭೆಗಳಿಗೆ, ಪತ್ರಿಕಾಗೋಷ್ಠಿಗಳಿಗೆ ಬಿಟ್ಟುಕೊಡಲಾಯಿತು. ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳು ನಿಂತುಹೋದವು. ದೇಶದ ವಿವಿಧ ಭಾಗಗಳಿಂದ ಐತಿಹಾಸಿಕ ಮಹತ್ವದ, ಸಾಂಸ್ಕೃತಿಕ ಮಹತ್ವದ ದಾಖಲೆಗಳನ್ನು, ಖಾಸಗಿ ಸಂಗ್ರಹದಲ್ಲಿರುವ ಪತ್ರಗಳು, ಹಸ್ತಪ್ರತಿಗಳು, ಚಿತ್ರಗಳು ಮೊದಲಾದವುಗಳನ್ನು ಸಂಗ್ರಹಿಸುವ ಪದ್ಧತಿಯನ್ನು ಕೈ ಬಿಡಲಾಯಿತು. ಖ್ಯಾತ ಪತ್ರಕರ್ತ ಶ್ಯಾಂಲಾಲ್ ಅವರು ತಮ್ಮ ಖಾಸಗಿ ಸಂಗ್ರಹದಲ್ಲಿರುವ ರಾಷ್ಟ್ರೀಯ ಮಹತ್ವದ ದಾಖಲೆಗಳನ್ನು ಎನ್.ಎಂ.ಎಂ.ಎಲ್.ಗೆ ನೀಡಲು ಮುಂದಾದರೂ ಆಡಳಿತವರ್ಗ ಅದನ್ನು ಸ್ವೀಕರಿಸುವುದರಲ್ಲಿ ಆಸಕ್ತಿ ತೋರಲಿಲ್ಲವೆಂಬ ದೂರು ಇದೆ. ಮಹಾತ್ಮಗಾಂಧಿಯವರ ಕೊನೆಯ ಕಾರ್ಯದರ್ಶಿಯಾಗಿದ್ದ ಪ್ಯಾರೆಲಾಲ್ ಅವರ ಕುಟುಂಬದ ಸುಪರ್ದಿನಲ್ಲಿದ್ದ ಅಮೂಲ್ಯ ಕಾಗದ ಪತ್ರಗಳ ನಿಧಿಯನ್ನು ಪತ್ರಾಗಾರಕ್ಕೆ ತಂದ ಗ್ರಂಥ ಭಂಡಾರದ ಸಂಶೋಧನಾ ಉಪನಿರ್ದೇಶಕ ಡಾ.ಬಾಲಕೃಷ್ಣನ್ ಮೊದಲಾದವರನ್ನು ಸೇವೆಯಿಂದ ಬರಖಾಸ್ತುಗೊಳಿಸಲಾಯಿತು. ನಿವೃತ್ತಿಹೊಂದಿದ ಪ್ರಧಾನ ಗ್ರಂಥ ಪಾಲಕರ ಹುದ್ದೆಗೆ ಮತ್ತೊಬ್ಬರನ್ನು ನೇಮಿಸಲಿಲ್ಲ. ಫೆಲೋಗಳ ಪುಸ್ತಕಗಳ ಪ್ರಕಟನೆೆ, ಐತಿಹಾಸಿಕ ದಾಖಲೆಗಳ ಪ್ರಕಟನೆ ಕಾರ್ಯ ನಿಂತುಹೋಯಿತು.

ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರ ಅಧೋಗತಿ ಹಿಡಿದಿರುವದನ್ನು ಕಂಡು ವಿದ್ವಜ್ಜನರು ಕಳವಳಗೊಂಡರು. 2009ರಷ್ಟು ಹಿಂದೆಯೇ ರಾಜ್ ಮೋಹನ್ ಗಾಂಧಿ, ವೀಣಾದಾಸ್, ಸುನಿಲ್ ಖಿಲಾನಿ, ಪಾರ್ಥಷಟರ್ಜಿ, ಸಂಜಯ್ ಸುಬ್ರಹ್ಮಣ್ಯಂ, ಎ.ಆರ್.ವೆಂಕಟಾಚಲಪತಿ, ಜಯಾ ಚಟರ್ಜಿ ಮೊದಲಾದ ಐವತ್ತೇಳು ಮಂದಿ ಘನ ವಿದ್ವಾಂಸರು ಆಗಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರ ಮಧ್ಯಸ್ಥಿಕೆ ಬಯಸಿ ಪತ್ರಬರೆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಈಗ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರ ರಾಜಕೀಯ ದುರಾಗ್ರಹದ ಮತ್ತೊಂದು ಆಕ್ರಮಣಕ್ಕೆ ಬಲಿಯಾಗಿದೆ. ಪಂಡಿತ್ ಜವಾಹರಲಾಲ್ ನೆಹರೂ ಬಗ್ಗೆ ಭಾರತೀಯ ಜನತಾಪಕ್ಷ ಹೊಂದಿರುವ ‘ಪ್ರೀತಿ’ ಲೋಕವಿದಿತವಾದುದು. ನೆಹರೂ ಹೆಸರನ್ನು ಭಾರತದ ಚರಿತ್ರೆಯ ಪುಟಗಳಿಂದ ಅಳಿಸಿಹಾಕಲು ಕಟಿಬದ್ಧವಾಗಿರುವ ಬಿಜೆಪಿ ಈಗ ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇಟ್ಟಿದೆ. ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರವನ್ನು ದೇಶದ ಮಾಜಿ ಪ್ರಧಾನ ಮಂತ್ರಿಗಳ ಸ್ಮಾರಕವಾಗಿ ಪರಿವರ್ತಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಆಗಲೇ ತುಂಬ ಚುರುಕಿನಿಂದ ಕಾರ್ಯಪ್ರವೃತ್ತವಾಗಿದೆ. ನೆಹರೂ ಸ್ಮಾರಕವನ್ನು ಪ್ರಧಾನ ಮಂತ್ರಿಗಳ ಸ್ಮಾರಕವಾಗಿ ಪರಿವರ್ತಿಸುವ ನಿರ್ಧಾರ ನೆಹರೂ ಪರಂಪರೆಗೆ ಕಳಂಕ ಹಚ್ಚುವ ಮತ್ತೊಂದು ಪ್ರಯತ್ನವಷ್ಟೆ. ಬಿಜೆಪಿ ದೃಷ್ಟಿಯಲ್ಲಿ ಈ ದೇಶಕ್ಕೆ ನೆಹರೂ ಅವರ ಕೊಡುಗೆ ಏನೂ ಇಲ್ಲ, ಅವರು ದೇಶಕ್ಕೆ ಸಮಸ್ಯೆಗಳನ್ನಷ್ಟೆ ಬಿಟ್ಟು ಅಗಲಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದನಂತರ ನೆಹರೂ ಅವರನ್ನು ಸಂಪೂರ್ಣವಾಗಿ ನೇತ್ಯಾತ್ಮಕವಾಗಿ ಬಿಂಬಿಸುವ ಕೆಲಸ ಭರದಿಂದ ಸಾಗಿತು. ಎನ್.ಎಂ.ಎಂ.ಎಲ್.ನಲ್ಲಿ ದೀನದಯಾಳ್ ಉಪಾಧ್ಯಾಯರ ಚಿತ್ರ ವಿಜೃಂಭಿಸಿತು. ಉಪಾಧ್ಯಾಯರ ಹೆಸರಿನಲ್ಲಿ ಕಾರ್ಯಕ್ರಮಗಳು ಶುರುವಾದವು. ‘ತೀನ್‌ಮೂರ್ತಿ ಭವನ’ದಲ್ಲಿರುವ ನೆಹರೂ ಸ್ಮಾರಕ ನಿಧಿ ಕಚೇರಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿಸಲು ಸರಕಾರ ಪ್ರಯತ್ನಿಸಿತು.ಅದಕ್ಕೀಗ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಎನ್.ಎಂ.ಎಂ.ಎಲ್.ನ್ನು ಮಾಜಿ ಪ್ರಧಾನ ಮಂತ್ರಿಗಳ ಸ್ಮಾರಕವಾಗಿ ಪರಿವರ್ತಿಸುವ ಸರಕಾರದ ನಿರ್ಧಾರವನ್ನು ವಿರೋಧಿಸಿದ ಆಡಳಿತ ಮಂಡಳಿಯ ನಾಲ್ವರು ಸದಸ್ಯರನ್ನು ಕಿತ್ತುಹಾಕಿ ಅವರ ಜಾಗಕ್ಕೆ ಈಗ ಹೊಸಬರನ್ನು ನೇಮಿಸಲಾಗಿದೆ.ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತ ಅರ್ನಬ್ ಗೋಸ್ವಾಮಿ, ಮಾಜಿ ರಾಜತಂತ್ರಜ್ಞ ಎಸ್.ಜೈಶಂಕರ್, ಬಿಜೆಪಿ ಸಂಸದ ವಿನಯ್ ಸಹದ್ರಬುದ್ಧೆ ಮತ್ತು ಸಾಹಿತಿ ರಾಮ್ ಬಹಾದ್ದೂರ್ ರಾಯ್ ಅವರು ಎನ್.ಎಂ.ಎಂ.ಎಲ್. ಆಡಳಿತ ಮಂಡಲಿಯ ನೂತನ ಸದಸ್ಯರು. ‘ಮೀ ಟೂ’ ಹಗರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಂ.ಜೆ. ಅಕ್ಬರ್ ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇವರೆಲ್ಲರೂ ಮೋದಿ ಬೆಂಬಲಿಗರು ಹಾಗೂ ಎನ್.ಎಂ.ಎಂ.ಎಲ್.ನ್ನು ಪ್ರಧಾನ ಮಂತ್ರಿಗಳ ಸ್ಮಾರಕವಾಗಿ ಪರಿವರ್ತಿಸುವ ಸರಕಾರದ ನಿರ್ಧಾರವನ್ನು ಸಮರೋಪಾದಿಯಲ್ಲಿ ಕಾರ್ಯಗತಗೊಳಿಸುವುದರಲ್ಲಿ ಉತ್ಸುಕರಾಗಿರುವವರು.
ನೆಹರೂ ಪರಂಪರೆಯ ಸಂಕೇತವಾದ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥ ಭಂಡಾರವನ್ನು ಮಾಜಿ ಪ್ರಧಾನಿಗಳ ಸ್ಮಾರಕವಾಗಿ ಪರಿವರ್ತಿಸುವ ನಿರ್ಧಾರ ಕೈಬಿಡುವಂತೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮತ್ತಿತರರು ಮಾಡಿದ ಮನವಿಗೆ ಸರಕಾರ ಕಿವಿ ಗೊಟ್ಟಿಲ್ಲ. ಪರಿವರ್ತನೆಯ ಕಾರ್ಯಕ್ಕೆ ಭೂಮಿಪೂಜೆಯನ್ನು ನೆರವೇರಿಸಿ, ಆಡಳಿತ ಮಂಡಲಿಯ ನೂತನ ಸದಸ್ಯರು ನೆಹರೂ ಪರಂಪರೆಯನ್ನು ಅಳಿಸಿಹಾಕುವ ಕಾರ್ಯದಲ್ಲಿ ಮುಂದಡಿ ಇಟ್ಟಾಗಿದೆ.ಇದು ಈ ದೇಶದ ಮಹಾನ್ ಶಿಲ್ಪಿಗೆ ಎಸಗುತ್ತಿರುವ ಅವಮಾನ. ನೆಹರೂ ಬಗ್ಗೆ ಸುಳ್ಳುಗಳನ್ನು ಹೆಣೆಯುತ್ತ ಜನರ ವಿವೇಕವನ್ನು ವಂಚಿಸುವ ನಾಚಿಕೆಗೇಡಿನ ಕೆಲಸ. ಆಧುನಿಕ ಭಾರತದ ಮಹಾನ್ ನಾಯಕರೂ ಧೀರ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರೂ ಆದ ಪಂಡಿತ್ ಜವಾಹರಲಾಲ್ ನೆಹರೂ ವಿರುದ್ಧ ದ್ವೇಷ ಸಾಧಿಸಲು ಭಾರತದ ಪ್ರಜೆಗಳು ಮೋದಿ ಮತ್ತು ಅವರ ಸರಕಾರವನ್ನು ಚುನಾಯಿಸಿಲ್ಲ. ಇಂಥ ಕೃತ್ಯಗಳಿಂದ ಆಡಳಿತಾರೂಢ ರಾಜಕಾರಣಿಗಳ ವಿಕೃತ ಮನಸ್ಸುಗಳ ಅಕರಾವಿಕರಾಳ ಆಲೋಚನೆಗಳು ಲೋಕಕ್ಕೆ ಮತ್ತೆಮತ್ತೆ ಸ್ಪಷ್ಟವಾಗುತ್ತಿವೆ. ಚರಿತ್ರೆಯನ್ನು ತಮ್ಮ ಮನೋಖಯಾಲಿಗಳಿಗನುಗುಣವಾಗಿ ತಿರುಚುವ ಹುನ್ನಾರಗಳು ಎಂದಿಗೂ ಫಲಪ್ರದವಾಗದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)