varthabharthi

ವೈವಿಧ್ಯ

ಮೋದಿಯ ‘ಒಬಿಸಿ’ ರಾಜಕಾರಣ

ವಾರ್ತಾ ಭಾರತಿ : 12 Nov, 2018
ದಿಲೀಪ್ ಮಂಡಲ್

ನರೇಂದ್ರ ಮೋದಿ ಅವರು ಗುಜರಾತ್‌ನ ‘ಮೋದ್ ಗಾಂಚಿ’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ಸದಾ ತಾನು ಕೆಳಜಾತಿಯವನೆಂದು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ತನ್ನ ಜಾತಿಯ ಬಗ್ಗೆ ಪದೇ ಪದೆ ಉಲ್ಲೇಖಿಸುವ ಮೂಲಕ ಅವರು ತನ್ನನ್ನು, ದೇಶದ ಒಟ್ಟು ಜನಸಂಖ್ಯೆಯ ಶೇ.52ರಷ್ಟಿರುವ ಒಬಿಸಿಗಳ ಜೊತೆ ನಂಟು ಕಲ್ಪಿಸಲು ಯತ್ನಿಸುತ್ತಿರುತ್ತಾರೆ.

ದೇಶದ ಜನಸಂಖ್ಯೆಯ ಅರ್ಧಾಂಶದಷ್ಟು ಮಂದಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಸೇರಿದವರಾಗಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ತಾನು ಒಬಿಸಿಗೆ ಸೇರಿದವನೆಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಹಾಲಿ ಕೇಂದ್ರ ಸರಕಾರವು ಒಬಿಸಿಗಳಿಗಾಗಿ ಏನು ಮಾಡಿದೆಯೆಂಬುದನ್ನು ನೋಡಲು ಕುತೂಹಲವೆನಿಸುತ್ತದೆ.

 2014ರಲ್ಲಿ ಲೋಕಸಭಾ ಚುನಾವಣಾ ಪ್ರಚಾರವು ಕಾವೇರಿದ್ದ ವೇಳೆ, ಎಲ್ಲಾ ಪಕ್ಷಗಳ ನಾಯಕರು ಭರವಸೆಗಳನ್ನು ಹಾಗೂ ಘೋಷಣೆಗಳ ಸುರಿಮಳೆಗೈಯುತ್ತಿದ್ದರು. ಉತ್ತರಪ್ರದೇಶದ ಅಮೇಠಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ಅಣಕವಾಡಿದ್ದರು. ಮಾರನೆ ದಿನ ಪ್ರಿಯಾಂಕಾ ಗಾಂಧಿ ಹೀಗೆ ಪ್ರತಿಕ್ರಿಯಿಸಿದ್ದರು. ‘‘ ಅಮೇಠಿಯಲ್ಲಿ ನರೇಂದ್ರ ಮೋದಿಯವರು ಹುತಾತ್ಮರಾದ ನನ್ನ ತಂದೆಯನ್ನು ಅಪಮಾನಿಸಿದ್ದಾರೆ. ಇಂತಹ ಕೆಳಮಟ್ಟದ ರಾಜಕಾರಣಕ್ಕಾಗಿ, ಅಮೇಠಿಯ ಪ್ರತಿಯೊಂದು ಮತಗಟ್ಟೆಯೂ ಸೇಡುತೀರಿಸಿಕೊಳ್ಳಲಿದೆ’’ ಎಂದಿದ್ದರು.

  ನರೇಂದ್ರ ಮೋದಿಯವರು ಪ್ರಿಯಾಂಕಾ ಗಾಂಧಿಯಿಂದ ಇಂತಹದೇ ಪ್ರತಿಕ್ರಿಯೆಯನ್ನು ಬಯಸಿದ್ದರು. ಮಾರನೆಯ ದಿನವೇ ಉತ್ತರಪ್ರದೇಶದ ಡೊಮಾರಿಯಾಗಂಜ್‌ನಲ್ಲಿ ನಡೆದ ಇನ್ನೊಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘‘ ಹೌದು. ನಾನು ಕೆಳಜಾತಿಯಲ್ಲಿ ಜನಿಸಿದವನಾಗಿದ್ದೇನೆ. ಆದರೆ ಏಕೀಕೃತ, ಸರ್ವಶ್ರೇಷ್ಠವಾದ ಭಾರತದ ನಿರ್ಮಾಣ ನನ್ನ ಕನಸಾಗಿದೆ... ನಿಮಗೆ ಬೇಕಾದಷ್ಟು ನನ್ನನ್ನು ಬಯ್ಯಿರಿ. ಮೋದಿಯನ್ನು ಬೇಕಾದರೆ ಗಲ್ಲಿಗೇರಿಸಿ. ಆದರೆ ನನ್ನ ಕೆಳಜಾತಿಯ ಸೋದರರನ್ನು ಅಪಮಾನಿಸದಿರಿ’’ ಎಂದು ಹೇಳಿದ್ದರು. ಆ ದಿನವೇ ಅವರು, ‘‘ನಾನು ಸಾಮಾಜಿಕವಾಗಿ ಹಿಂದುಳಿದ ವರ್ಗದಿಂದ ಬಂದವನಾಗಿದ್ದೇನೆ. ಹೀಗಾಗಿ ನನ್ನ ರಾಜಕೀಯವು ಈ ವ್ಯಕ್ತಿಗಳಿಗೆ ಕೆಳಮಟ್ಟದ್ದಾಗಿ ಕಾಣಿಸುತ್ತಿರಬಹುದು’’ ಎಂದು ಟ್ವೀಟ್ ಮಾಡಿದ್ದರು. ಮುಂದಿನ ಟ್ವೀಟ್‌ನಲ್ಲಿ ಅವರು ಈ ಬಗ್ಗೆ ಇನ್ನಷ್ಟು ಸ್ಪಷ್ಟೀಕರಣ ನೀಡುತ್ತಾ, ‘‘ಬಹುಶಃ ಕೆಲವು ವ್ಯಕ್ತಿಗಳಿಗೆ ಇದು ಕಾಣಿಸದೆ ಹೋಗಿರಬಹುದು. ಕೆಳಜಾತಿಗಳವರ ನಿಸ್ವಾರ್ಥ, ತ್ಯಾಗ ಹಾಗೂ ಧೈರ್ಯವು ಈ ದೇಶವನ್ನು ಇಷ್ಟೊಂದು ಎತ್ತರಕ್ಕೊಯ್ಯುವಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಿದೆ’’ ಎಂದವರು ಹೇಳಿದ್ದರು.

   2017ರಲ್ಲಿ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಇದೇ ರೀತಿಯ ಘಟನೆ ನಡೆದಿತ್ತು. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು, ‘‘ ನರೇಂದ್ರ ಮೋದಿಯವರು ಕೆಳ ಮಟ್ಟದ ವ್ಯಕ್ತಿ. ಅವರು ಇನ್ನೂ ಸುಸಂಸ್ಕೃತರಾಗಿಲ್ಲ’’ ಎಂದು ಹೇಳಿದ್ದರು. ಮಣಿಶಂಕರ್ ಅಯ್ಯರ್ ಅವರ ಟೀಕೆಗೆ ಮಾರನೆಯ ದಿನ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರತಿಕ್ರಿಯಿಸಿದ ಮೋದಿ, ‘‘ನಾನು ಕೀಳುಜಾತಿಗೆ ಸೇರಿದ ವ್ಯಕ್ತಿಯೆಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ ಹಾಗೂ ನಾವು ಚರಂಡಿಯ ಹುಳು (ಗಂಧಿ ನಾಲಿ ಕಾ ಕೀಡಾ) ಎಂದು ನಮ್ಮನ್ನು ಕರೆದಿದ್ದರು. ಇದು ಗುಜರಾತ್ ಹಾಗೂ ಗುಜರಾತ್‌ನ ಜನತೆಗೆ ಮಾಡಿದ ಅಪಮಾನವಲ್ಲವೇ ?’’ ಎಂದಿದ್ದರು. ನರೇಂದ್ರ ಮೋದಿ ಅವರು ಗುಜರಾತ್‌ನ ‘ಮೋದ್ ಗಾಂಚಿ’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ಸದಾ ತಾನು ಕೆಳಜಾತಿಯವನೆಂದು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ತನ್ನ ಜಾತಿಯ ಬಗ್ಗೆ ಪದೇ ಪದೆ ಉಲ್ಲೇಖಿಸುವ ಮೂಲಕ ಅವರು ತನ್ನನ್ನು, ದೇಶದ ಒಟ್ಟು ಜನಸಂಖ್ಯೆಯ ಶೇ.52ರಷ್ಟಿರುವ ಒಬಿಸಿಗಳ ಜೊತೆ ನಂಟು ಕಲ್ಪಿಸಲು ಯತ್ನಿಸುತ್ತಿರುತ್ತಾರೆ. 1931ರ ಜನಗಣತಿಯನ್ನು ಆಧರಿಸಿ ಮಂಡಲ್ ಆಯೋಗವು ದೇಶದಲ್ಲಿ ಒಬಿಸಿ ಸಮುದಾಯದ ಒಟ್ಟು ಜನಸಂಖ್ಯೆಯನ್ನು ನೀಡಿದೆ. 1931ರಿಂದೀಚೆಗೆ ಎಸ್ಸಿ/ಎಸ್ಟಿಗಳನ್ನು ಹೊರತುಪಡಿಸಿ ಇತರ ಜಾತಿ ಪಂಗಡಗಳ ಜನಸಂಖ್ಯಾ ಗಣತಿಯನ್ನು ರಾಷ್ಟ್ರಮಟ್ಟದಲ್ಲಿ ನಡೆಸಲಾಗಿಲ್ಲ. 2011 ಹಾಗೂ 2016ರ ನಡುವೆ ಸಾಮಾಜಿಕ-ಆರ್ಥಿಕ ಹಾಗೂ ಜಾತಿ ಗಣತಿ(ಎಸ್‌ಇಸಿಸಿ 2011)ಯನ್ನು ನಡೆಸಲಾಗಿದೆಯಾದರೂ, ಅದನ್ನು ಬಹಿರಂಗಪಡಿಸಲಾಗಿಲ್ಲ. ಬಿಜೆಪಿಯ ಪ್ರಕಾರ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ (ಎನ್‌ಸಿಬಿಸಿ)ಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿರುವುದು ಹಾಲಿ ಸರಕಾರದ ಸಾಧನೆಗಳಲ್ಲೊಂದಾಗಿದೆ. ಸಾಂವಿಧಾನಿಕ (123ನೇ ತಿದ್ದುಪಡಿ) ವಿಧೇಯಕವನ್ನು ಜಾರಿಗೊಳಿಸುವ ಮೂಲಕ ಸಂವಿಧಾನಕ್ಕೆ ನೂತನ 338ಬಿ ಕಲಮನ್ನು ಸೇರ್ಪಡೆಗೊಳಿಸಲಾಯಿತು. ಸಂಸತ್‌ನ ಸಹಮತದೊಂದಿಗೆ ಈ ವಿಧೇ ಯಕವನ್ನು ಅಂಗೀಕರಿಸಲಾಯಿತು. ಎನ್‌ಸಿಬಿಸಿಯು ಈಗ ಸಿವಿಲ್ ನ್ಯಾಯಾಲಯಕ್ಕೆ ಸರಿಸಮಾನವಾದ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. (I ) ಜನರಿಗೆ ಸಮನ್ಸ್ ನೀಡುವುದು ಹಾಗೂ ಅವರ ಪ್ರಮಾಣ ಪಡೆದು ವಿಚಾರಣೆ ನಡೆಸುವುದು (II) ಯಾವುದೇ ಕಾಗದಪತ್ರ ಅಥವಾ ಸಾರ್ವಜನಿಕ ದಾಖಲೆಯನ್ನು ಹಾಜರುಪಡಿಸುವಂತೆ ಸೂಚಿಸುವುದು ಹಾಗೂ (III  ) ಪುರಾವೆಯನ್ನು ಸ್ವೀಕರಿಸುವುದು. ಎನ್‌ಸಿಬಿಸಿಗೆ ಈಗ ಹಿಂದುಳಿದ ಜಾತಿಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸುವ ಅಧಿಕಾರವಿದೆ. ಹಿಂದುಳಿದ ವರ್ಗಗಳ ಹಕ್ಕುಗಳ ಉಲ್ಲಂಘನೆಯ ಕುರಿತಾದ ನಿರ್ದಿಷ್ಟ ದೂರುಗಳ ಬಗ್ಗೆ ತನಿಖೆ ನಡೆಸುವುದು ಹಾಗೂ ಅಂತಹ ವರ್ಗಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಬಗ್ಗೆ ಸಲಹೆ ಹಾಗೂ ಶಿಫಾರಸುಗಳನ್ನು ಮಾಡಬಹುದಾಗಿದೆ ಹಾಗೂ ಆ ಬಗ್ಗೆ ಸಲಹೆಯನ್ನು ನೀಡಬಹುದಾಗಿದೆ. ಇದೀಗ ಈ ಆಯೋಗವು, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಗಳು ಅಥವಾ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಸರಿಸಮಾನವಾದ ಸ್ಥಾನಮಾನವನ್ನು ಹೊಂದಿದೆ.

ಎನ್‌ಸಿಬಿಸಿಯ ಸ್ಥಾನಮಾನವನ್ನು ಹೆಚ್ಚಿ ಸುವಲ್ಲಿ ಸರಕಾರವು ಕೈಗೊಂಡ ಉಪಕ್ರಮಗಳ ಬಗ್ಗೆ ಬಿಜೆಪಿಯು ಈಗ ಕೊಚ್ಚಿಕೊಳ್ಳುತ್ತಿದೆ. ಆದರೆ ಇದರಿಂದ ಒಬಿಸಿಗಳ ಬದುಕು ಬದಲಾಗಲಿದೆಯೆಂದು ಹೇಳುವುದು ತುಂಬಾ ಕಷ್ಟ. ಇದೊಂದು ಬಹುತೇಕ ಸಾಂಕೇತಿಕ ಕ್ರಮವೆನಿಸುತ್ತದೆ. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವಾಗಲಿ ಅಥವಾ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಗಳಿಗೆ, ಬಹಳ ಹಿಂದಿನಿಂದಲೇ ಸಾಂವಿಧಾನಿಕ ಸ್ಥಾನಮಾನ ದೊರೆತಿದ್ದರೂ, ತಾವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರುವುದನ್ನು ಸಾಬೀತುಪಡಿಸಲು ಅವುಗಳಿಗೆ ಈವರೆಗೆ ಸಾಧ್ಯವಾಗಿಲ್ಲ.

 ಒಬಿಸಿಗಳ ಅಭಿವೃದ್ಧಿಗಾಗಿ ಬಿಜೆಪಿ ಇಟ್ಟಿರುವ ಇನ್ನೊಂದು ದೊಡ್ಡ ಹೆಜ್ಜೆಯೆಂದರೆ, ಈ ಸಮುದಾಯವನ್ನು ಉಪಗುಂಪುಗಳಾಗಿ ವಿಭಜಿಸಲು, ಆಯೋಗವೊಂದನ್ನು ರಚಿಸಿರುವುದಾಗಿದೆ. 2017ರ ಅಕ್ಟೋಬರ್2ರಂದು ಸಂವಿಧಾನದ 340ನೇ ಕಲಮಿನಡಿ ಆಯೋಗವೊಂದನ್ನು ರಚಿಸುವ ಕುರಿತು ಕೇಂದ್ರ ಸರಕಾರವು ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಈ ಆಯೋಗಕ್ಕೆ ಮೂರು ಕೆಲಸಗಳನ್ನು ವಹಿಸಲಾಗಿದೆ. (I) ಒಬಿಸಿಗಳ ನಡುವೆ ಮೀಸಲಾತಿಯ ಸವಲತ್ತುಗಳ ಅಸಮಾನ ಹಂಚಿಕೆಯ ವ್ಯಾಪ್ತಿಯನ್ನು ಪರಿಶೀಲಿಸುವುದು. (II ) ಉಪಶ್ರೇಣೀಕರಣಕ್ಕೆ ಬೇಕಾದ ಕಾರ್ಯತಂತ್ರ, ಮಾನದಂಡ ಹಾಗೂ ನಿಯತಾಂಕಗಳನ್ನು ರೂಪಿಸುವುದು (III ) ಒಬಿಸಿಗಳಲ್ಲಿರುವ ಆಯಾ ಜಾತಿಗಳು ಅಥವಾ ಸಮುದಾಯಗಳನ್ನು ಗುರುತಿಸುವ ಹಾಗೂ ಅವುಗಳನ್ನು ಉಪಶ್ರೇಣಿಗಳಾಗಿ ವರ್ಗೀಕರಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದು. ಈ ಬಗ್ಗೆ ವರದಿ ಸಲ್ಲಿಸಲು ಆಯೋಗಕ್ಕೆ 12 ವಾರಗಳ ಕಾಲಾವಕಾಶ ನೀಡಲಾಗಿತ್ತು.

ನಿವೃತ್ತ ನ್ಯಾಯಮೂರ್ತಿ ಜಿ. ರೋಹಿಣ ನೇತೃತ್ವದ ಈ ಆಯೋಗವು, ಹಿಂದುಳಿದ ವರ್ಗಗಳಿಗೆ ನ್ಯಾಯ ಪಡೆಯಲು ಬಹಳಷ್ಟು ನೆರವಾಗಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಒಬಿಸಿ ಪಂಗಡಗಳಲ್ಲಿನ ಹಿಂದುಳಿಯುವಿಕೆಯು ಸರಿಸಮಾನಾಗಿಲ್ಲ ಮತ್ತು ಹೀಗಾಗಿ ಅವುಗಳಿಗೆ ಸರಿಯಾದ ಪ್ರಮಾಣದಲ್ಲಿ ಮೀಸಲಾತಿಯ ಹಂಚಿಕೆಯಾಗಿಲ್ಲವೆಂಬುದೇ ಈ ಆಯೋಗದ ರಚನೆಯ ಹಿಂದಿರುವ ವೈಚಾರಿಕತೆಯಾಗಿದೆ. ಇದರ ಪರಿಣಾಮವಾಗಿ, ಒಬಿಸಿ ಶ್ರೇಣಿಯ ಮೇಲುಸ್ತರದ ಪಂಗಡಗಳು ಮೀಸಲಾತಿಯ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ಒಬಿಸಿ ಶ್ರೇಣಿಯ ಹಲವಾರು ಜಾತಿಗಳಿಗೆ ಅದರ ಪ್ರಯೋಜನ ದೊರೆಯುತ್ತಿಲ್ಲ. ಹೀಗಾಗಿ, ಒಬಿಸಿ ಶ್ರೇಣಿಯನ್ನು ವಿಭಜಿಸಬೇಕಾದ ಅಗತ್ಯವಿದೆ. ಈಗಾಗಲೇ ಏಳು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳನ್ನು ಉಪಶ್ರೇಣಿಗಳಾಗಿ ವಿಭಜಿಸಲಾಗಿದೆ.

     ಆದರೆ 12 ವಾರಗಳೊಳಗೆ ವರದಿ ಸಲ್ಲಿಸಬೇಕಾಗಿದ್ದ ಆಯೋಗಕ್ಕೆ 12 ತಿಂಗಳುಗಳ ಆನಂತರವೂ ಅದನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಆಯೋಗದ ಅವಧಿಯನ್ನು ಸರಕಾರವು ಮೂರು ಬಾರಿ ವಿಸ್ತರಿಸಿತ್ತು ಹಾಗೂ ಇದೀಗ ಆಯೋಗವು ತನ್ನ ವರದಿಯನ್ನು ನವೆಂಬರ್ 20ರೊಳಗೆ ಸಲ್ಲಿಸುವ ನಿರೀಕ್ಷೆಯಿದೆ. ಆಯೋಗದ ಕೆಲಸದ ವೇಗ ಹಾಗೂ ಅದು ಎದುರಿಸುತ್ತಿರುವ ಸವಾಲುಗಳನ್ನು ನೋಡಿದಾಗ, ಸರಕಾರ ಹೊಸತಾಗಿ ವಿಧಿಸಿರುವ ಅಂತಿಮಗಡುವಿನೊಳಗೆ ಅದಕ್ಕೆ ವರದಿಯನ್ನು ಸಲ್ಲಿಸಲು ಸಾಧ್ಯವಾಗಲಿದೆಯೇ ಎಂಬುದನ್ನು ಯಾರೂ ಕೂಡಾ ಊಹಿಸಬಹುದಾಗಿದೆ.

 ಈ ವರದಿಗೆ ಸಂಬಂಧಿಸಿ ಮೋದಿ ಸರಕಾರವು ಯಾವ ಹೆಜ್ಜೆಯನ್ನು ಇಡಲಿದೆ. ಒಬಿಸಿ ರಾಜಕೀಯ ಹಾಗೂ ದೇಶದ ರಾಜಕೀಯದ ಮೇಲೆ ಅದು ಯಾವ ರೀತಿಯ ಪರಿಣಾಮವನ್ನು ಬೀರಲಿದೆಯೆಂದು ಎಂಬುದನ್ನು ಈ ಹಂತದಲ್ಲಿ ಊಹಿಸಲು ಯಾರಿಗೂ ಸಾಧ್ಯವಾಗದು.

 ಒಬಿಸಿಗಳ ಅಭಿವೃದ್ಧಿಗಾಗಿ ಸರಕಾರವು ಹಮ್ಮಿಕೊಂಡಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರವು ಯಾವುದೇ ದೊಡ್ಡ ಘೋಷಣೆಯನ್ನು ಮಾಡುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಒಬಿಸಿಗಳಿಗಾಗಿ ಪ್ರತ್ಯೇಕ ಸಚಿವಾಲಯವೊಂದರ ಬೇಡಿಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ.

ಒಬಿಸಿಗಳ ಕಲ್ಯಾಣವು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಈ ಇಲಾಖೆಯು ಪರಿಶಿಷ್ಟ ಜಾತಿಗಳು, ಹಿರಿಯ ನಾಗರಿಕರು, ಮಾದಕದ್ರವ್ಯ ವ್ಯಸನಿಗಳು, ಭಿಕ್ಷುಕರು, ತೃತೀಯ ಲಿಂಗಿಗಳು ಹಾಗೂ ಅಂಗವಿಕಲರ ಅಭಿವೃದ್ಧಿಗಾಗಿಯೂ ಕೆಲಸ ಮಾಡುತ್ತಿದೆ

ಈ ಎಲ್ಲಾ ವರ್ಗಗಳ ಏಳಿಗೆಗಾಗಿ, ಸಚಿವಾಲಯಕ್ಕೆ 2018-19ರ ಸಾಲಿನ ಬಜೆಟ್‌ನಲ್ಲಿ ಕೇವಲ 8,820 ಕೋಟಿ ರೂ. ಅನುದಾನ ದೊರೆತಿದೆ.

  ಈ ಬಜೆಟ್ ಅನುದಾನದ ಪೈಕಿ ಒಬಿಸಿಗಳಿಗೆ ಕೇವಲ 1,745 ಕೋಟಿ ರೂ. ಮಾತ್ರವೇ ದೊರೆತಿದೆ.ಸುಮಾರು 70 ಕೋಟಿಯಷ್ಟಿರುವ ಒಬಿಸಿ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ, ಕೇಂದ್ರ ಸರಕಾರವು ಪ್ರತಿಯೊಬ್ಬ ಒಬಿಸಿಯ ಮೇಲೆ ಕೇಂದ್ರ ಸರಕಾರದ ವಾರ್ಷಿಕ ವೆಚ್ಚವು ಕೇವಲ 25 ರೂ. ಆಗಿದೆ. ಈ ಮೊತ್ತವು ಒಬಿಸಿಗಳಿಗಾಗಿನ 9 ವಿವಿಧ ಸರಕಾರಿ ಯೋಜನೆಗಳ ನಡುವೆ ವಿಭಜಿಸಲ್ಪಟ್ಟಿದೆ. ಇದರ ಜೊತೆಗೆ ಕೇವಲ 100 ಕೋಟಿ ರೂ. ವಾರ್ಷಿಕ ನಿಧಿ ಪಡೆಯುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ವಿತ್ತ ಹಾಗೂ ಅಭಿವೃದ್ಧಿ ನಿಗಮ ಕೂಡಾ ಇದೆ. ಈ ಮೊತ್ತವನ್ನು ಕೂಡಾ 1745 ಕೋಟಿ ರೂ. ಅನುದಾನದಿಂದಲೇ ಪಡೆಯಲಾಗುತ್ತದೆ. ಈ ನಿಧಿಯಿಂದ ಒಬಿಸಿ ಸಮುದಾಯದ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ.

 ಈ ಬಜೆಟ್ ಅನುದಾನದ ಮೊತ್ತವು, ಕೇಂದ್ರ ಸರಕಾರವು ಒಬಿಸಿ ಉದ್ಯಮಿಗಳ ಅಭಿವೃದ್ಧಿಯ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆಯೆಂಬುದನ್ನು ತೋರಿಸಿಕೊಡುತ್ತದೆ. ಆದರೆ ಈ ಅಸಮಂಜಸತೆಯು ಮೋದಿ ಸರಕಾರದ ಸೃಷ್ಟಿಯಲ್ಲ. ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರಗಳ ನೀತಿಯ ಮುಂದುವರಿಕೆಯಿಂದಲೇ ಈ ಎಲ್ಲಾ ಸಮಸ್ಯೆಗಳು ಉದ್ಭವಿಸಿವೆ. ಆದರೆ ಸ್ವಘೋಷಿತ ಒಬಿಸಿ ನಾಯಕನ ನೇತೃತ್ವವಿರುವ ಈ ಸರಕಾರದ ಅವಧಿಯಲ್ಲೂ ಪರಿಸ್ಥಿತಿ ಬದಲಾಗಿಲ್ಲ.

     ಆಡಳಿತದ ಉನ್ನತ ಸ್ತರಗಳಲ್ಲಿ ಒಬಿಸಿಗಳ ಪಾಲುದಾರಿಕೆಯು ತೀರಾ ಕಡಿಮೆಯಾಗಿದೆ. ಕಾಂಗ್ರೆಸ್ ಆಳ್ವಿಕೆಗೆ ಹೋಲಿಸಿದರೆ ಪ್ರಸಕ್ತ ಪರಿಸ್ಥಿತಿಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಕೇಂದ್ರ ಸರಕಾರದ ಗ್ರೂಪ್-1ಹುದ್ದೆಗಳಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇ.13.01 ಆಗಿದ್ದರೆ, ಗ್ರೂಪ್-2 ಹುದ್ದೆಗಳಲ್ಲಿ ಶೇ.14.78 ಆಗಿದೆ. ಉನ್ನತ ನ್ಯಾಯಾಂಗ, ಸರಕಾರದ ಉನ್ನತ ಅಧಿಕಾರಿ ವಲಯ, ಸಾರ್ವಜನಿಕರಂಗದ ಸಂಸ್ಥೆಗಳು ಹಾಗೂ ಬ್ಯಾಂಕುಗಳ ಕಾರ್ಯದರ್ಶಿ ಮಟ್ಟದ ಹುದ್ದೆಗಳಲ್ಲಿ ಒಬಿಸಿ ಪ್ರಾತಿನಿಧ್ಯ ಹೆಚ್ಚುಕಮ್ಮಿ ಇಲ್ಲವೇ ಇಲ್ಲ ಎಂಬಂತಹ ಪರಿಸ್ಥಿತಿಯಿದೆ. ಸರಕಾರದ ಉನ್ನತ ಅಧಿಕಾರವಲಯ (ಬ್ಯುರೋಕ್ರಸಿ)ಯಲ್ಲಿ ಒಬಿಸಿ ಪ್ರಾತಿನಿಧ್ಯದಲ್ಲಿ ಹೆಚ್ಚಳವಾಗಿದೆಯೆಂಬುದನ್ನು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೂಡಾ ಹೇಳಿಕೊಳ್ಳುತ್ತಿಲ್ಲ.

 ಇಂತಹ ಸನ್ನಿವೇಶದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಒಬಿಸಿ ಸ್ಥಾನಮಾನದ ಬಗ್ಗೆ ಪ್ರಧಾನಿ ಕೊಚ್ಚಿಕೊಳ್ಳಲಿದ್ದಾರೆಯೇ?. ಬಿಜೆಪಿಯ 2019ರ ಚುನಾವಣಾ ಪ್ರಣಾಳಿಕೆ ಈ ಪ್ರಶ್ನೆಗೆ ಉತ್ತರ ಹೇಳಲಿದೆ.

theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)