varthabharthi

ವೈವಿಧ್ಯ

ಅರ್ಧದಲ್ಲೇ ಅಸ್ತಂಗತರಾದ ಅನಂತಕುಮಾರ್

ವಾರ್ತಾ ಭಾರತಿ : 13 Nov, 2018
ಬಸು ಮೇಗಲಕೇರಿ

1996ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಅನಂತಕುಮಾರ್, ಕೇವಲ ಮೂರ್ನಾಲ್ಕು ವರ್ಷಗಳ ಅಂತರದಲ್ಲಿ ಮೂರು ಚುನಾವಣೆಗಳನ್ನು ಎದುರಿಸಿ, ಜಯ ಗಳಿಸಿ, ಮಂತ್ರಿ ಸ್ಥಾನ ಅಲಂಕರಿಸಿ, ರಾಷ್ಟ್ರೀಯ ಮಟ್ಟದ ನಾಯಕರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡವರು. ಆರೆಸ್ಸೆಸ್ ಮತ್ತು ಎಲ್.ಕೆ.ಅಡ್ವಾಣಿಯವರ ಆಪ್ತವಲಯದ ಆಸಾಮಿಯಾಗಿ, ಬಿಜೆಪಿಯ ಎರಡನೆ ಸಾಲಿನ ನಾಯಕನಾಗಿ ಹೊರಹೊಮ್ಮಿದವರು. ಹೆಚ್ಚೂಕಡಿಮೆ ಮಹಾರಾಷ್ಟ್ರ ಮೂಲದ ಪ್ರಮೋದ್ ಮಹಾಜನ್‌ರಂತೆಯೇ ಶರವೇಗದಲ್ಲಿ ಬೆಳೆದು, ಭವಿಷ್ಯದ ನಾಯಕನಾಗಿ ಸುದ್ದಿ ಮಾಡಿ, ಅವರಂತೆಯೇ ಅರ್ಧಹಾದಿಯಲ್ಲಿಯೇ ಅಸ್ತಂಗತರಾಗಿಬಿಟ್ಟದ್ದು ದುರಂತ.

ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್.ಅನಂತಕುಮಾರ್ ಇನ್ನಿಲ್ಲ ಎನ್ನುವುದು ಈ ತಕ್ಷಣಕ್ಕೆ ನಂಬಲಾಗದ ಸುದ್ದಿ. ಅದರಲ್ಲೂ ಅವರ ಕುಟುಂಬ ಸದಸ್ಯರಿಗೆ ಸಹಿಸಲಾಗದ ಸಂಕಟವನ್ನುಂಟು ಮಾಡಿರುವ ಸಂಗತಿ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ತುಂಬಲಾರದ ನಷ್ಟ. ಹಾಗೆ ನೋಡಿದರೆ, 1959ರಲ್ಲಿ ಬೆಂಗಳೂರಿನಲ್ಲಿ ಜನಿಸಿದ, 59 ವರ್ಷದ ಅನಂತಕುಮಾರ್‌ಗೆ ಸಾಯುವ ವಯಸ್ಸೇನೂ ಆಗಿರಲಿಲ್ಲ. ಸದಾ ನಗು ನಗುತ್ತಲೇ ಎಲ್ಲರೊಂದಿಗೂ ಬೆರೆಯುತ್ತಿದ್ದ ಸರಳ, ಸಜ್ಜನ, ಸುಸಂಸ್ಕೃತ ರಾಜಕಾರಣಿ ಅನಂತಕುಮಾರ್, ಅಚಾನಕ್ ಆಗಿ ಕಾಣಿಸಿಕೊಂಡ ಮಾರಕ ಕಾಯಿಲೆಗೆ ತುತ್ತಾಗಿ ನಿರ್ಗಮಿಸಿದ್ದಾರೆ. ರಾಜ್ಯ ಬಿಜೆಪಿಗೆ ಬಹಳ ದೊಡ್ಡ ನಿರ್ವಾತವನ್ನೇ ಸೃಷ್ಟಿಸಿ ಹೋಗಿದ್ದಾರೆ.
ಆಗಸ್ಟ್ 29ರಂದು ಪಾವಗಡದಲ್ಲಿ ಪೇಜಾವರ ಶ್ರೀಗಳೊಂದಿಗೆ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅನಂತಕುಮಾರ್, ಬೆಂಗಳೂರಿಗೆ ಬಂದಾಗ ಎದುರಾದ ಸುದ್ದಿಗಾರರೊಂದಿಗೆ, ಕರ್ನಾಟಕದ ಮೈತ್ರಿ ಸರಕಾರದ ಬಗ್ಗೆ ಮಾತನಾಡಿದ್ದರು. ಅದಾದ ಒಂದು ವಾರಕ್ಕೆ, ಯಾರಿಗೂ ತಿಳಿಸದೆ ಲಂಡನ್‌ಗೆ ತೆರಳಿದ್ದರು. ಕೇಂದ್ರ ಸಚಿವರ ಪೂರ್ವನಿಯೋಜಿತ ಕಾರ್ಯಕ್ರಮವೂ ಇಲ್ಲ, ತುರ್ತು ಆಹ್ವಾನವೂ ಇರಲಿಲ್ಲ. ಅಷ್ಟೇ ಅಲ್ಲ, ಲಂಡನ್‌ಗೆ ತೆರಳುತ್ತಿರುವುದು ಸಚಿವರ ಆಪ್ತ ಬಳಗಕ್ಕೂ ತಿಳಿದಿರಲಿಲ್ಲ. ಅಸಲಿಗೆ ಅನಂತಕುಮಾರ್ ಅವರಿಗೂ ತಮಗೇನಾಗಿದೆ, ಕಾಯಿಲೆ ಯಾವ ಹಂತದಲ್ಲಿದೆ ಎಂಬುದೂ ಗೊತ್ತಿರಲಿಲ್ಲ. ಕೇಂದ್ರದ ಸಚಿವ ಸ್ಥಾನವೆಂಬ ಅಪರಿಮಿತ ಅಧಿಕಾರದ ಸ್ಥಾನದಲ್ಲಿದ್ದ, ಉತ್ಸಾಹದಿಂದಲೇ ಓಡಾಡಿಕೊಂಡಿದ್ದ, ಆರೋಗ್ಯಕರವಾಗಿ ಕಾಣುತ್ತಿದ್ದ ಅನಂತಕುಮಾರ್ ಇದ್ದಕ್ಕಿದ್ದಂತೆ ಲಂಡನ್‌ಗೆ ತೆರಳಿದ್ದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಅಲ್ಲಿಗೆ ಹೋದನಂತರ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆಂಬ ಸುದ್ದಿ ಹಬ್ಬಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅವರನ್ನು ನ್ಯೂಯಾರ್ಕಿಗೆ ಕಳುಹಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿಗೆ ಕಳುಹಿಸಿದ್ದು, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಶಂಕರ್ ಆಸ್ಪತ್ರೆಯಲ್ಲಿಯೇ ಆರೋಗ್ಯ ವಿಚಾರಿಸಿಕೊಂಡು ಹೋದದ್ದು-ಎಲ್ಲವೂ ಕೇವಲ ಎರಡು ತಿಂಗಳ ಅಂತರದಲ್ಲಿ ಘಟಿಸಿದ ಘಟನಾವಳಿಗಳು.
ಹಾಗಾಗಿ ಅನಂತಕುಮಾರ್ ನಿರ್ಗಮನ ಅವರ ಕುಟುಂಬದವರಿಗಷ್ಟೇ ಅಲ್ಲ, ಆಪ್ತರಿಗೆ, ಅಭಿಮಾನಿಗಳಿಗೆ ಹಾಗೂ ಬಿಜೆಪಿಗೆ ಆಘಾತಕರ ಸಂಗತಿಯಾಗಿದೆ. 1996ರಿಂದ ಇಲ್ಲಿಯವರೆಗೆ, ನಿರಂತರವಾಗಿ 6 ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಅನಂತಕುಮಾರ್, 1998ರಲ್ಲಿ, ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿ, ಪ್ರಧಾನಮಂತ್ರಿ ವಾಜಪೇಯಿ ಅವರ ಕ್ಯಾಬಿನೆಟ್‌ನಲ್ಲಿ ವಿಮಾನಯಾನ ಸಚಿವರಾದಾಗ, ಅನಂತಕುಮಾರ್ ಅವರ ರಾಜಕಾರಣದ ಬೆಳವಣಿಗೆಗೊಂದು ಬಹಳ ದೊಡ್ಡ ಬ್ರೇಕ್ ಸಿಕ್ಕಿತ್ತು. ನಂತರ 1999ರಲ್ಲಿ ಮತ್ತೆ ಪ್ರವಾಸೋದ್ಯಮ, ಕ್ರೀಡಾ ಮತ್ತು ಯುವಜನ, ನಗರಾಭಿವೃದ್ಧಿ, ಗ್ರಾಮೀಣಾವೃದ್ಧಿ ಮತ್ತು ಬಡತನ ನಿವಾರಣೆ, ಸಂಸ್ಕೃತಿ ಸಚಿವರಾಗುವ ಮೂಲಕ ಹಲವರ ಹುಬ್ಬೇರಿಕೆಗೂ ಕಾರಣವಾಗಿತ್ತು. 1996ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಅನಂತಕುಮಾರ್, ಕೇವಲ ಮೂರ್ನಾಲ್ಕು ವರ್ಷಗಳ ಅಂತರದಲ್ಲಿ ಮೂರು ಚುನಾವಣೆಗಳನ್ನು ಎದುರಿಸಿ, ಜಯ ಗಳಿಸಿ, ಮಂತ್ರಿ ಸ್ಥಾನ ಅಲಂಕರಿಸಿ, ರಾಷ್ಟ್ರೀಯ ಮಟ್ಟದ ನಾಯಕರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡವರು. ಆರೆಸ್ಸೆಸ್ ಮತ್ತು ಎಲ್.ಕೆ.ಅಡ್ವಾಣಿಯವರ ಆಪ್ತವಲಯದ ಆಸಾಮಿಯಾಗಿ, ಬಿಜೆಪಿಯ ಎರಡನೆ ಸಾಲಿನ ನಾಯಕನಾಗಿ ಹೊರಹೊಮ್ಮಿದವರು. ಹೆಚ್ಚೂಕಡಿಮೆ ಮಹಾರಾಷ್ಟ್ರ ಮೂಲದ ಪ್ರಮೋದ್ ಮಹಾಜನ್‌ರಂತೆಯೇ ಶರವೇಗದಲ್ಲಿ ಬೆಳೆದು, ಭವಿಷ್ಯದ ನಾಯಕನಾಗಿ ಸುದ್ದಿ ಮಾಡಿ, ಅವರಂತೆಯೇ ಅರ್ಧಹಾದಿಯಲ್ಲಿಯೇ ಅಸ್ತಂಗತರಾಗಿಬಿಟ್ಟದ್ದು ದುರಂತ.
ಹಾಗೆ ನೋಡಿದರೆ, ಅನಂತಕುಮಾರ್ ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಅನಂತಕುಮಾರ್ ಹುಬ್ಬಳ್ಳಿಯಲ್ಲಿದ್ದಾಗ ಬಹಳ ಹತ್ತಿರದಿಂದ ಕಂಡವರು, ‘‘ತಂದೆ ನಾರಾಯಣಶಾಸ್ತ್ರಿಯವರು ಹುಬ್ಬಳ್ಳಿಯ ರೈಲ್ವೆಯಲ್ಲಿ ಕೆಲಸದಲ್ಲಿದ್ದರು. ಮಧ್ಯಮವರ್ಗದ ಬ್ರಾಹ್ಮಣ ಕುಟುಂಬದಿಂದ ಬಂದ ಅನಂತಕುಮಾರ್, ಕಷ್ಟದಲ್ಲಿಯೇ ಪದವಿ ಪಡೆದು, ಕಾನೂನು ಕಲಿತು ಉತ್ತಮ ವಾಗ್ಮಿ ಎಂದು ಹೆಸರಾಗಿದ್ದರು. ಚಿಕ್ಕವಯಸ್ಸಿನಿಂದಲೇ ಆರೆಸ್ಸೆಸ್, ಎಬಿವಿಪಿಯಲ್ಲಿ ಗುರುತಿಸಿಕೊಂಡು ಸಂಘಟನಾ ಚತುರ ಎನಿಸಿಕೊಂಡಿದ್ದರು. ಅದಕ್ಕೆ ಕಾರಣ, ಅವರ ತಾಯಿ ಗಿರಿಜಾಶಾಸ್ತ್ರಿಯವರು. ಅವರು ಜನಸಂಘದಲ್ಲಿದ್ದರು, ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಯ ಉಪಮೇಯರ್ ಆಗಿದ್ದರು. ಅಮ್ಮನ ಪ್ರಭಾವ, ಪ್ರೇರಣೆ ಮತ್ತು ಪ್ರೋತ್ಸಾಹದ ಫಲವಾಗಿ ಸಂಘಟನೆಯಲ್ಲಿ ಸಮರ್ಥರೆನಿಸಿಕೊಂಡಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೂ ಹೋಗಿ ಬಂದಿದ್ದರು’’ ಎನ್ನುತ್ತಾರೆ. ಹುಬ್ಬಳ್ಳಿಯ ಆರೆಸ್ಸೆಸ್‌ನಲ್ಲಿ ಗುರುತಿಸಿಕೊಂಡು ಎಬಿವಿಪಿಯ ಪದಾಧಿಕಾರಿಯಾದ ಅನಂತಕುಮಾರ್, ನಂತರ ಯುವಮೋರ್ಚಾ ಅಧ್ಯಕ್ಷರಾಗಿ, ಬಿಜೆಪಿಯ ಕಾರ್ಯದರ್ಶಿಯಾಗಿ, ರಾಜ್ಯಾಧ್ಯಕ್ಷರಾಗಿ, ಕೇಂದ್ರ ಮಂತ್ರಿಯಾಗಿ, ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದವರು.
ದಿಲ್ಲಿ ಮಟ್ಟದ ನಾಯಕರ ಸಾಲಿನಲ್ಲಿ ಕಂಗೊಳಿಸುತ್ತಿದ್ದ ಅನಂತಕುಮಾರ್ ರಾಜಕಾರಣಕ್ಕೆ ಪಾದಾರ್ಪಣೆ ಬೆಳೆಸಿದ ಬಗ್ಗೆ ಕೇಳಿದರೆ, ‘‘80-90ರ ದಶಕದಲ್ಲಿ ಹುಬ್ಬಳ್ಳಿಯ ಕಮರಿಪೇಟೆಯ ಕಿಂಗ್ ಎಂದೇ ಹೆಸರಾಗಿದ್ದ, ದೋ ನಂಬರ್ ದಂಧೆಯಲ್ಲಿ ಪಳಗಿದ್ದ, ಪಟ್ಟೇಗಾರರ ನಿರುದ್ಯೋಗಿ ಯುವಕರನ್ನು ಬಳಸಿಕೊಂಡು ಬೆಳೆದಿದ್ದ ಬಿಜೆಪಿಯ ಅಶೋಕ ಕಾಟವೆ, ತಮ್ಮೆಲ್ಲ ಸೆಕೆಂಡ್ಸ್ ದಂಧೆಗಳಿಗೆ ಶಾಸಕತ್ವದ ಠಸ್ಸೆ ಒತ್ತಿ ಮೆರೆಯುತ್ತಿದ್ದರು. ಅಂತಹ ಅಶೋಕ ಕಾಟವೆಯವರ ಹಿಂದೆ ಓಡಾಡಿಕೊಂಡಿದ್ದ ಅನಂತಕುಮಾರ್, ಅವರ ಹಣ, ಹೆಂಡ ಮತ್ತು ಪಟ್ಟೇಗಾರ ಹುಡುಗರ ತೋಳ್ಬಲ ಬಳಸಿಕೊಂಡು, ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ಹಿಂದೂ-ಮುಸ್ಲಿಮರ ರಣರಂಗವನ್ನಾಗಿಸಿದ್ದರು. ಮುಸ್ಲಿಮರು ಕೂಡ ಕೊಂಚ ಅತಿರೇಕದಿಂದ ವರ್ತಿಸಿ, ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸುತ್ತಿದ್ದ ಕಾಲವದು. ಇದು ಬಿಜೆಪಿಗೆ ರಾಜಕೀಯವಾಗಿ ಅನುಕೂಲಕರ ಸ್ಥಿತಿಯನ್ನು ಸೃಷ್ಟಿಸಿತ್ತು. ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಹೋದ ಅನಂತಕುಮಾರ್, ಪೊಲೀಸರ ಲಾಠಿ ಏಟಿಗೆ ಹೆದರಿ ರಾಷ್ಟ್ರಧ್ವಜವನ್ನು ಬಿಸಾಡಿ ಓಡಿಹೋಗಿದ್ದನ್ನು ಹುಬ್ಬಳ್ಳಿಯ ಜನ ಇವತ್ತಿಗೂ ನೆನಪು ಮಾಡಿಕೊಳ್ಳುತ್ತಾರೆ’’ ಎ್ನುವುದನ್ನು ಮರೆಯುವುದಿಲ್ಲ.
ಇದಾಗಿ ಕೇವಲ ಹತ್ತು ವರ್ಷಗಳ ಅಂತರದಲ್ಲಿ ಅನಂತಕುಮಾರ್ ರಾಜಕಾರಣದಲ್ಲಿ ಅದ್ಭುತ ರೀತಿಯಲ್ಲಿ ಬೆಳೆದರು. ಕೇಂದ್ರದ ಕ್ಯಾಬಿನೆಟ್‌ನಲ್ಲಿ ಬಡತನ ನಿರ್ಮೂಲನ ಹಾಗೂ ಯುವಜನ ಕ್ರೀಡಾ ಸಚಿವರೂ ಆದರು. ‘‘ಆದರೆ ಅಂದು ತಮ್ಮ ಬೆಳವಣಿಗೆಗೆ ಬೆನ್ನೆಲುಬಾಗಿದ್ದ ಅಶೋಕ ಕಾಟವೆ, ಪ್ರಮೋದ್ ನಾಯಕ್, ಕರುಣಾಕರರನ್ನು ಕಡೆಗಣಿಸಿದರು. ಅಷ್ಟೇ ಅಲ್ಲ, ಈದ್ಗಾ ಮೈದಾನಕ್ಕೆ ಮೈಯೊಡ್ಡಿ ಪೆಟ್ಟು ತಿಂದಿದ್ದ ಪಟ್ಟೇಗಾರ ನಿರುದ್ಯೋಗಿ ಯುವಕರನ್ನೇ ಮರೆತರು’’ ಎನ್ನುತ್ತಾರೆ ಹುಬ್ಬಳ್ಳಿಯಲ್ಲಿ ಅನಂತಕುಮಾರರನ್ನು ಹತ್ತಿರದಿಂದ ಬಲ್ಲವರು.
‘‘ಹುಬ್ಬಳ್ಳಿಯ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದ, ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಅನಂತಕುಮಾರ್‌ರನ್ನು ಬಿಜೆಪಿಯ ರಾಜ್ಯ ನಾಯಕರಾದ ಯಡಿಯೂರಪ್ಪನವರಿಗೆ ಪರಿಚಯಿಸಿದ್ದೇ ಅಶೋಕ್ ಕಾಟವೆ. ಯಡಿಯೂರಪ್ಪನವರು ಅವರಿಗೆ ಬೆಂಗಳೂರಿನ ಬಿಜೆಪಿ ಕಚೇರಿಯ ಉಸ್ತುವಾರಿಯನ್ನು ವಹಿಸಿಕೊಟ್ಟರು. ಕಚೇರಿಯನ್ನೇ ಕಾರಸ್ಥಾನ ಮಾಡಿಕೊಂಡ ಅನಂತಕುಮಾರ್, ಅಂದಿನ ನಾಯಕರಾದ ವಿಎಸ್ ಆಚಾರ್ಯ, ಜಯರಾಮ ಶೆಟ್ಟಿಯಂತಹ ಹಿರಿಯರಿಗೆ ಮೊದ ಮೊದಲು ನಡುಬಗ್ಗಿಸಿ ನಮಿಸುತ್ತಿದ್ದವರು, ನಂತರ ಅವರ ಮೇಲೆ ಸವಾರಿ ಮಾಡತೊಡಗಿದರು. ಇವರಷ್ಟೇ ಅಲ್ಲ, ರಾಜ್ಯದಲ್ಲಿ ಜನಸಂಘದ ಕಾಲದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ.ಬಿ. ಶಿವಪ್ಪ, ಬಿ.ವಿ. ಮಲ್ಲಿಕಾರ್ಜುನಯ್ಯ, ರಾಮಚಂದ್ರಗೌಡ, ಧನಂಜಯಕುಮಾರ್‌ರನ್ನು ಮೂಲೆಗುಂಪು ಮಾಡಿದರು’’ ಎನ್ನುತ್ತಾರೆ. ನಂತರದ ದಿನಗಳಲ್ಲಿ ಬಿಜೆಪಿಯಲ್ಲಿ ಅಣ್ಣತಮ್ಮಂದಿರಂತಿದ್ದ ಯಡಿಯೂರಪ್ಪಮತ್ತು ಈಶ್ವರಪ್ಪನವರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ, ಅದರ ಲಾಭ ಪಡೆಯಲು ಹವಣಿಸಿದರು. ಈತನ್ಮಧ್ಯೆ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಹಿರಿಯ ರಾಜಕೀಯ ಮುತ್ಸದ್ದಿಗಳಾದ ಎಚ್.ಎನ್. ನಂಜೇಗೌಡ, ಎಲ್.ಜಿ. ಹಾವನೂರರು ಅವರಾಗಿಯೇ ಪಕ್ಷ ತೊರೆಯುವಂತೆ ನೋಡಿಕೊಂಡರು. ಆರೆಸ್ಸೆಸ್‌ನಿಂದ ಬಂದ ಬಿ.ಎಲ್.ಸಂತೋಷ್, ಯಡಿಯೂರಪ್ಪನವರಿಗೆ ತೀರಾ ಆಪ್ತರು ಎಂಬ ಕಾರಣಕ್ಕೆ ಮತ್ತು ತಮ್ಮದೇ ಜಾತಿಯಾದ ಬ್ರಾಹ್ಮಣರಾಗಿದ್ದರಿಂದ, ಮುಂದೊಂದು ದಿನ ತಮ್ಮ ಪ್ರತಿಸ್ಪರ್ಧಿಯಾಗಬಹುದೆಂದು ಅರಿತು, ಮುನ್ನ್ನೆಲೆಗೆ ಬರದಂತೆ ನೋಡಿಕೊಂಡಿದ್ದರು. ಹುಬ್ಬಳ್ಳಿಯ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಮತ್ತು ಸದಾನಂದಗೌಡರನ್ನು ಯಾವಾಗ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಬಿಟ್ಟಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ- ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ. ಇಲ್ಲಿ ಅನಂತಕುಮಾರ್ ನಿರಂತರವಾಗಿ ಗೆಲ್ಲಲು, ಒಂದು ಕಡೆ ಒಕ್ಕಲಿಗರ ಅಶೋಕ್, ಮತ್ತೊಂದು ಕಡೆ ಲಿಂಗಾಯತರ ವಿ.ಸೋಮಣ್ಣರನ್ನು ಅಕ್ಕಪಕ್ಕಕ್ಕಿಟ್ಟುಕೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದ ರಾಮಲಿಂಗಾರೆಡ್ಡಿಯವರ ಆಪ್ತರಾಗಿ, ರೆಡ್ಡಿಗಳನ್ನು ಸೆಳೆದುಕೊಂಡಿದ್ದರು. ಸುದ್ದಿ ಮಾಧ್ಯಮಗಳ ಡಾರ್ಲಿಂಗ್ ಎನಿಸಿಕೊಂಡಿದ್ದರು. ಹಲವು ಪತ್ರಕರ್ತರನ್ನು ಆಪ್ತ ಸ್ನೇಹಿತರಂತೆ ಕಾಣುತ್ತಿದ್ದರು. ರಾಜಕಾರಣದಲ್ಲಿ ಚಾಲ್ತಿಯಲ್ಲಿರಬೇಕೆಂದರೆ, ಇಂತಹ ಚದುರಂಗದಾಟಗಳನ್ನು ಆಡುವುದು ಅನಿವಾರ್ಯ. ಅದರಲ್ಲಿ ಅನಂತಕುಮಾರ್ ಪಳಗಿದ್ದರು. ಯಾರನ್ನು ಎಲ್ಲಿ ಹೇಗೆ ಬಳಸಿಕೊಂಡು ಬೆಳೆಯಬೇಕೆಂಬ ಪಠ್ಯವನ್ನು ಅರಿತು ಅರಗಿಸಿಕೊಂಡಿದ್ದರು.
ಒಟ್ಟಾರೆ ಏಕಮೇವಾದ್ವಿತೀಯ ನಾಯಕರಾಗಿ ಬೆಳೆಯಬೇಕೆಂಬ ಮನದಾಸೆಯನ್ನಿಟ್ಟುಕೊಂಡಿದ್ದರು. ಆ ನಿಟ್ಟಿನಲ್ಲಿ ಎದುರಾದ ಎಲ್ಲರನ್ನು- ಬಿಜೆಪಿಯ ಮಹಾನ್ ನಾಯಕರನ್ನು ವ್ಯವಸ್ಥಿತವಾಗಿ ನಿಸ್ತೇಜರನ್ನಾಗಿಸಿದ್ದರು. ಎಲ್ಲ ಅಡೆತಡೆಗಳನ್ನು- ಅವರ ಕಣ್ಣಿಗೆ ಕಾಣುವಂಥದ್ದೆಲ್ಲವನ್ನು- ನೀಗಿಸಿಕೊಂಡಿದ್ದರು. ದಿಲ್ಲಿ ಮಟ್ಟದಲ್ಲಿ, ಕರ್ನಾಟಕ ಎಂದಾಕ್ಷಣ ಅನಂತಕುಮಾರ್ ಎನ್ನುವಂತಹ ವಾತಾವರಣವನ್ನು ನಿರ್ಮಿಸಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೇರಿದಾಗಲೆಲ್ಲ ಸಚಿವ ಸ್ಥಾನ ಖಾತ್ರಿ ಮಾಡಿಕೊಂಡಿದ್ದರು. ಆದರೆ ಅನಂತಕುಮಾರರ ಅಸಲಿತನ- ಮತ್ತೊಂದು ಮುಖ- ಬಿಜೆಪಿಯ ಇನ್ನಿತರ ನಾಯಕರಿಗೆ ಅರ್ಥವಾಗಲು ಹೆಚ್ಚು ದಿನಗಳೇನು ಬೇಕಾಗಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ಜೈಲಿಗೆ ಹೋದಾಗ, ಕೆಜೆಪಿ ಕಟ್ಟಿದಾಗ, ಬಿಜೆಪಿಗೇ ಸಡ್ಡು ಹೊಡೆದು ನಿಂತಾಗ- ಅನಂತಕುಮಾರ್ ಅವರನ್ನು ‘ಬಾಯ್ತುಂಬ’ ಹೊಗಳಿದ್ದು ನಾಡಿನ ಜನರ ನೆನಪಿನಲ್ಲಿದೆ.
1996ರಲ್ಲಿ ಚುನಾವಣಾ ರಾಜಕಾರಣಕ್ಕಿಳಿದ ಅನಂತಕುಮಾರ್, ಕೇವಲ ನಾಲ್ಕೈದು ವರ್ಷಗಳಲ್ಲಿ ನಾಲ್ಕಾರು ಸಚಿವ ಸ್ಥಾನಗಳನ್ನು ಅಲಂಕರಿಸಿ, ದೇಶದಾದ್ಯಂತ ಸುದ್ದಿಯಾದರು. ಇದು ಬಿಜೆಪಿಯನ್ನು ರಾಜ್ಯದಲ್ಲಿ ಬಲಪಡಿಸಲು ಸಾಕಷ್ಟು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತ್ತಲ್ಲವೇ ಎಂದರೆ, ‘‘ಹೌದು, ಅನಂತಕುಮಾರ್ ವಿಮಾನಯಾನ ಸಚಿವರಾದಾಗ, ಬೆಂಗಳೂರಿನ ದೇವನಹಳ್ಳಿಯಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಗಲ್ಲಿಟ್ಟರು. ಅದಕ್ಕೆ ಕೇಂದ್ರದ ನೆರವು ತಂದದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ ವಿಮಾನಯಾನ ಸಚಿವರಾಗಿದ್ದಾಗ, ದೊಡ್ಡ ದೊಡ್ಡ ಕಂಪೆನಿಗಳು ಮತ್ತು ಸರಕಾರದ ನಡುವಿನ ಮಾತುಕತೆ ಮತ್ತು ವ್ಯವಹಾರಕ್ಕಾಗಿ ‘ಮೀಡಿಯೇಟರ್ ಮಹಿಳೆ’ ಎಂದೇ ಖ್ಯಾತಿ ಗಳಿಸಿದ್ದ ನೀರಾ ರಾಡಿಯಾರೊಂದಿಗೆ ಅನಂತಕುಮಾರ್ ಹೆಸರು ತಳಕು ಹಾಕಿಕೊಂಡು, ಭಾರೀ ಹಗರಣದಲ್ಲಿ ಭಾಗಿಯಾಗಿ, ಕೊನೆಗೆ ಸಚಿವ ಸ್ಥಾನವನ್ನು ತೊರೆಯುವಂತಾಗಿತ್ತು. ಇದಾದ ನಂತರ ನಗರಾಭಿವೃದ್ಧಿ ಸಚಿವರಾಗಿದ್ದಾಗ, ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣರೊಂದಿಗೆ ಕೈಜೋಡಿಸಿ, ಅಭಿವೃದ್ಧಿಯ ನೆಪದಲ್ಲಿ ನೂರಾರು ಎಕರೆ ಭೂಮಿ ಖರೀದಿಸಿ ಸುದ್ದಿಯಾಗಿದ್ದರು. ಪ್ರವಾಸೋದ್ಯಮ ಸಚಿವರಾದಾಗ ಬೆಂಗಳೂರಿನ ಸ್ಟಾರ್ ಹೊಟೇಲ್ಗಳಲ್ಲಿ ಒಂದಾದ ಅಶೋಕ ಹೊಟೇಲನ್ನು ಬಿಜೆಪಿ ಕಾರ್ಯಕರ್ತರ ಅಡ್ಡೆಯನ್ನಾಗಿಸಿದ್ದರು. ಬಿಜೆಪಿ ಕಚೇರಿಯ ಫೋನ್ ಬಿಲ್ಲನ್ನು ಹೊಟೇಲ್ ಅಕೌಂಟಿನಿಂದ ಪಾವತಿಸುವಂತೆ ಮಾಡಿ- ಸ್ಟಾರ್ ಹೊಟೇಲ್ಗಳನ್ನು ಹೀಗೂ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ನಂತರ ಸರಕಾರಿ ಸ್ವಾಮ್ಯದ ಹೊಟೇಲ್ ನಷ್ಟದಲ್ಲಿದೆ ಎಂದು ತೋರಿಸಿ, ಖಾಸಗಿಯವರಿಗೆ ಮಾರಾಟ ಮಾಡಿಸಿದ್ದರು. 25 ಸಾವಿರ ಕೋಟಿಗಳ ಹುಡ್ಕೋ ಹಗರಣವಂತೂ ಭಾರೀ ಸುದ್ದಿಯಾಗಿತ್ತು. ಸುಪ್ರೀಂ ಕೋರ್ಟ್ ವಕೀಲರಾದ ತಾರ್ಕುಂಡೆ, ನಾರಿಮನ್, ಪ್ರಶಾಂತಿ ಭೂಷಣ್, ವೇಣುಗೋಪಾಲ್, ಅನಿಲ್ ಧವನ್ ಅನಂತಕುಮಾರ್ ವಿರುದ್ಧ 2004ರಲ್ಲಿ ಸಮರ ಸಾರಿದ್ದು ದೇಶಕ್ಕೇ ಗೊತ್ತಿದೆಯಲ್ಲ’’ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ಅನಂತರ ಮತ್ತೊಂದು ಮುಖವನ್ನು ಬಿಚ್ಚಿಟ್ಟರು. ಜೊತೆಗೆ ಮಡದಿ ತೇಜಸ್ವಿನಿಯವರು ಪಾಲುದಾರರಾಗಿರುವ ಓಕ್ ಸಿಸ್ಟಮ್ ಎಂಬ ಎನ್‌ಆರ್‌ಐ ಫೈನಾನ್ಸ್ ಕಂಪೆನಿ, ಶಾಸಕ ವೀರಣ್ಣ ಚರಂತಿಮಠರೊಂದಿಗಿನ ಇಂಜನಿಯರಿಂಗ್ ಕಾಲೇಜಿನ ವ್ಯವಹಾರವನ್ನೂ ಬಿಡಿಸಿಟ್ಟು.
ಇದರಿಂದ ಒಂದಂತೂ ಸ್ಪಷ್ಟವಾಗುತ್ತದೆ, ಅನಂತಕುಮಾರ್ ಕೂಡ ಭ್ರಷ್ಟಾಚಾರದಿಂದ ಮುಕ್ತರಾಗಿರಲಿಲ್ಲ ಎನ್ನುವುದು. ಇವತ್ತಿನ ರಾಜಕಾರಣದೊಂದಿಗೆ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಮಿಳಿತಗೊಂಡಿದೆ ಎಂದರೆ, ಅದನ್ನು ಬಿಟ್ಟು ಮಾತನಾಡುವುದು ಮತ್ತು ಅದನ್ನೇ ಮುನ್ನೆಲೆಗೆ ತಂದು ಮಾತನಾಡುವುದು- ಎರಡೂ ಕೂಡ ವ್ಯರ್ಥ ಕಸರತ್ತಿನಂತೆ ಕಾಣುತ್ತಿದೆ. ಏಕೆಂದರೆ, ವೃತ್ತಿ ರಾಜಕಾರಣಿಗಳು ಅಧಿಕಾರ ಹಂಚಿಕೆಯಲ್ಲಿ, ಆ ಅಧಿಕಾರ ದಯಪಾಲಿಸುವ ಭ್ರಷ್ಟಾಚಾರದಲ್ಲಿ ಪಕ್ಷಭೇದ ಮರೆತು ಒಂದಾಗಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಭ್ರಷ್ಟ ಹಗರಣಗಳನ್ನು ಬಹಿರಂಗಪಡಿಸಿದರೂ- ಅದೂ ಕೂಡ ಪ್ರಚಾರಕ್ಕೆ, ತಮ್ಮ ಹಿತಾಸಕ್ತಿಗೇ ಹೊರತು, ನಾಡಿನ ಹಿತದೃಷ್ಟಿಯಿಂದಲ್ಲ ಎನ್ನುವುದು ನಗ್ನಸತ್ಯವಾಗಿದೆ. ಜೊತೆಗೆ ಸುದ್ದಿ ಮಾಧ್ಯಮಗಳೂ ಕೂಡ ಅನಂತಕುಮಾರ್ ವಿಷಯದಲ್ಲಿ ಕೊಂಚ ಮೃದುಧೋರಣೆ ತಳೆದಿರುವುದು ಕೂಡ ನಾಡಿನ ಜನತೆಗೆ ಗೊತ್ತೇ ಇದೆ. ಇನ್ನು ಆರೆಸ್ಸೆಸ್ ಮತ್ತು ಬಿಜೆಪಿಯ ಬೇರುಮಟ್ಟದ ಸಂಘಟನೆ ಮತ್ತು ಅದರ ಕೆಲಸ ಕಾರ್ಯಗಳನ್ನು ಅದು ಬಿಂಬಿಸಿಕೊಳ್ಳುವ ಪರಿ, ಮಾಹಿತಿಯನ್ನು ಒದಗಿಸುವ ರೀತಿ ಹೇಗಿದೆ ಎಂದರೆ- ಇವತ್ತಿಗೂ ದಾಖಲೀಕರಣ(ಡಾಕ್ಯುಮೆಂಟೇಷನ್ ಸಿಸ್ಟಮ್) ವ್ಯವಸ್ಥೆಯಲ್ಲಿ ಅವರನ್ನು ಮೀರಿಸುವವರೇ ಇಲ್ಲ. ಉದಾಹರಣೆಗೆ, ಬಿಜೆಪಿಯ ಕಾರ್ಪೊರೇಟರ್ ಒಬ್ಬನ ಫೋಟೊ-ಮಾಹಿತಿ ಸಲೀಸಾಗಿ ಸಿಗುತ್ತದೆ. ಆದರೆ ಕಾಂಗ್ರೆಸ್‌ನ ಕ್ಯಾಬಿನೆಟ್ ಸಚಿವನ ಮಾಹಿತಿ ಆ ಪಕ್ಷದ ಕಚೇರಿಯಲ್ಲೇ ಇರುವುದಿಲ್ಲ. ಬಿಜೆಪಿಯ ಅಧಿಕೃತ ವೆಬ್ ಸೈಟಿಗೆ ಹೋದರೆ, ಅನಂತಕುಮಾರ್ ಅವರ ಆರೆಸ್ಸೆಸ್ ದಿನಗಳಿಂದ ಹಿಡಿದು ಇವತ್ತಿನ ಕೇಂದ್ರ ಸಚಿವ ಸ್ಥಾನದವರೆಗೆ- ಪ್ರತಿಯೊಂದು ಕೆಲಸ ಕಾರ್ಯಗಳನ್ನು, ಜನಪರ ಯೋಜನೆಗಳನ್ನು, ಸಾಧನೆಗಳನ್ನು ಸಾರುವ ಸಂಪೂರ್ಣ ಮಾಹಿತಿ ಚಿತ್ರಸಹಿತ ಲಭ್ಯವಿದೆ.
ಹೀಗೆ ಅನಂತಕುಮಾರ್ ಅವರನ್ನು ಎಲ್ಲರೂ ಪೊರೆಯುತ್ತ, ಪೋಷಿಸುತ್ತಲೇ ಬಂದಿದ್ದಾರೆ. ಜೊತೆಗೆ ಮಡದಿ ತೇಜಸ್ವಿನಿ ಅವರ ಅಕ್ಷಯ ಪಾತ್ರೆ, ಸಮಾಜಸೇವೆ, ಸಂಘಟನಾ ಚತುರತೆಯೂ ಅವರ ರಾಜಕಾರಣಕ್ಕೆ ಅನುಕೂಲಕರ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಆದರೆ ಅಲ್ಲೊಬ್ಬ ಇಲ್ಲೊಬ್ಬ ರಾಜಕೀಯ ನಾಯಕರು ಅನಂತಕುಮಾರ್ ಅವರ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದೂ ಇದೆ. ಕೆಲ ಸುದ್ದಿ ಮಾಧ್ಯಮಗಳು ಅವರ ಪಕ್ಷಪಾತ ಧೋರಣೆಯನ್ನು, ಸಣ್ಣತನವನ್ನು, ಷಡ್ಯಂತ್ರಗಳನ್ನು, ರಾಜಕೀಯ ಹೊಂದಾಣಿಕೆ ವ್ಯವಹಾರವನ್ನು, ಚದುರಂಗದಾಟವನ್ನು ಬಯಲು ಮಾಡಿದ್ದೂ ಇದೆ. ಇದು ಪ್ರಜಾಪ್ರಭುತ್ವದ ಸೊಗಸು. ಹಾಗೆಯೇ ತಮ್ಮ ಮೇಲೆ ಬಂದ ಟೀಕೆ, ಆರೋಪ, ಅಪವಾದ, ವಾಗ್ದಾಳಿಯನ್ನು ಕೂಡ ಕ್ರೀಡಾಸ್ಫೂರ್ತಿಯಿಂದಲೇ ಸ್ವೀಕರಿಸಿ, ನಗುನಗುತ್ತಲೇ ತಮ್ಮ ಅಪ್ರತಿಮ ವಾಕ್ ಚತುರತೆಯಿಂದ ಉತ್ತರಿಸಿ, ಸಂಭಾಳಿಸಿದ್ದು ಕೂಡ- ಅನಂತಕುಮಾರರ ಸಜ್ಜನಿಕೆಯ ದ್ಯೋತಕ.
ಕೇಂದ್ರ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದಾರೆ. ಆಲಮಟ್ಟಿಯ ಎತ್ತರ ಏರಿಸುವಲ್ಲಿ, ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಅನಂತಕುಮಾರರ ಜನಪರ ನಿಲುವು ಎದ್ದು ಕಾಣುತ್ತದೆ. ಆದರೆ ಅದೇ ಧೋರಣೆ ಮಹಾದಾಯಿ ವಿಚಾರದಲ್ಲಿ ಕಾಣುವುದಿಲ್ಲ. ಹಾಗೆಯೇ ಕಾವೇರಿ ಸಮಸ್ಯೆ ಎದುರಾದಾಗಲೆಲ್ಲ, ತಮಿಳುನಾಡಿನ ರಾಜಕಾರಣಿಗಳಂತೆ ಜಿದ್ದಿಗೆ ಬಿದ್ದು ನಾಡಿನ ಜನರ ಪರ ವಕಾಲತ್ತು ವಹಿಸಿದ್ದಿಲ್ಲ. ಆದರೆ ಬೆಂಗಳೂರು ಎಂದಾಕ್ಷಣ ಅತಿ ಉತ್ಸಾಹದಿಂದ, ಇಲ್ಲಿನ ರಸ್ತೆಗಳು, ಫ್ಲೈ ಓವರ್‌ಗಳು, ಪಾದಚಾರಿ ಮಾರ್ಗಗಳು, ಗ್ರೇಡ್ ಸೆಪರೇಟರ್‌ಗಳು, ಮೆಟ್ರೊ ರೈಲು ಯೋಜನೆ, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳತ್ತ ವಿಶೇಷ ಗಮನ ಹರಿಸಿದ್ದು ಕಾಣುತ್ತದೆ. ಅಷ್ಟೇ ಅಲ್ಲದೆ, ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರಕಾರವು 1 ಸಾವಿರ ಕೋಟಿ ರೂ.ಗಳ ಸಾಲವನ್ನು ನೀಡಿದ್ದು ಸಾಮಾನ್ಯ ಸಂಗತಿಯಲ್ಲ. ಅದರಲ್ಲೂ 2014ಲ್ಲಿ ನರೇಂದ್ರ ಮೋದಿ ಪ್ರಧಾನಿ ಸಚಿವ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಮಂತ್ರಿಯಾಗಿ, ಕೃಷಿ ಕ್ಷೇತ್ರಕ್ಕೆ, ರೈತರಿಗೆ ಅನುಕೂಲಕರವಾದ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದ್ದಿದೆ. ಹಾಗೆಯೇ ಬಡವರಿಗಾಗಿ ದೇಶದಾದ್ಯಂತ 1,100 ಜನೌಷಧಿ ಕೇಂದ್ರಗಳನ್ನು ತೆರೆದದ್ದು ಅನಂತರ ಸಾಧನೆ ಎಂದರೂ ತಪ್ಪಾಗಲಾರದು.
ಹಿಂದಿ, ಇಂಗ್ಲಿಷ್ ಬಲ್ಲವರಾದರೂ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕನ್ನಡದಲ್ಲಿ ಮಾತನಾಡಿದ ಕನ್ನಡ ಪ್ರೇಮಿ. ಸರಳ ಸಜ್ಜನಿಕೆಯಿಂದ ಎಲ್ಲರೊಂದಿಗೂ ಬೆರೆಯುತ್ತಿದ್ದ, ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದ, ಸಹಬಾಳ್ವೆ ಬಯಸುತ್ತಿದ್ದ ವ್ಯಕ್ತಿ. ಬಿಜೆಪಿ ಎಂಬ ಮನುವಾದಿಗಳ ಪಕ್ಷದಲ್ಲಿದ್ದರೂ ಕರಾವಳಿ ಭಾಗದ ಬೆಂಕಿ ಉಗುಳುವ ನಾಯಕರಂತಲ್ಲ. ಅದರಲ್ಲೂ ಮೋದಿ-ಅಮಿತ್ ಶಾ-ಆದಿತ್ಯನಾಥ್‌ರಂತಹ ಉಗ್ರ ಹಿಂದುತ್ವ ವಾದಿಯಲ್ಲ. ರಾಜಕೀಯ ಮಹತ್ವಾಕಾಂಕ್ಷೆಯಿತ್ತು ಮನುಷ್ಯವಿರೋಧಿಯಾಗಲಿಲ್ಲ. ಕರ್ನಾಟಕವನ್ನು ಉತ್ತರ ಭಾರತವನ್ನಾಗಿಸಲಿಲ್ಲ. ಇವತ್ತು ಧರ್ಮ, ದೇವರು, ದೇಶಭಕ್ತಿ ರಾಜಕಾರಣದ ಅಸ್ತ್ರವಾಗಿದ್ದರೂ, ಮಾರಾಟದ ಸರಕಾಗಿದ್ದರೂ ಅತಿಗೆ ಕೊಂಡೊಯ್ಯಲಿಲ್ಲ. ಇಷ್ಟಾದರೂ ಜವರಾಯ ಬಿಡಲಿಲ್ಲ. ಸಾಯುವ ವಯಸ್ಸಂತೂ ಖಂಡಿತ ಅಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)