varthabharthiಅನುಗಾಲ

ನಾಮದ ಬಲವೊಂದಿದ್ದರೆ ಸಾಕೇ?

ವಾರ್ತಾ ಭಾರತಿ : 15 Nov, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸಮಾಜಕ್ಕೆ, ಸಮುದಾಯಕ್ಕೆ ಮೋಸಮಾಡಿದ ಆನಂತರ ಆ ಹೆಸರಿನಲ್ಲಿ ವ್ಯವಹರಿಸಲು, ಬದುಕುಳಿಯಲು ಅವಕಾಶಗಳ ಬಾಗಿಲು ಮುಚ್ಚಿಹೋದಾಗ ಹೊಸ ಹೆಸರುಗಳು ಅನಿವಾರ್ಯವಾಗುತ್ತವೆ. ಮೋಸಗಾರರಿಗೆ ಹೇಗೆ ಬೇಕಾದರೂ ಹೆಸರು ಬದಲಾಯಿಸಿಕೊಂಡು ಮತ್ತೆ ಮತ್ತೆ ಹೊಸಮೋಸಗಳಲ್ಲಿ ತೊಡಗುವುದಕ್ಕೆ ನಮ್ಮ ಇತಿಹಾಸ ಅನೇಕ ಪುರಾವೆಗಳನ್ನು ಒದಗಿಸಿದೆ ಮತ್ತು ವರ್ತಮಾನದ ದೇಶ, ಕಾಲದಲ್ಲಿ ಬೇಕಷ್ಟು ಅವಕಾಶಗಳಿವೆ.


ಹೆಸರುಗಳು ಶಾಶ್ವತವೇ? ಆಳುವವರ ನಡೆನುಡಿಗಳನ್ನು ಗಮನಿಸಿದರೆ ಹಾಗನ್ನಿಸುತ್ತದೆ. ಸ್ವಾತಂತ್ರ್ಯಪೂರ್ವದ ನೂರಾರು ವರ್ಷಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳನ್ನಾಳಿದವರು ಅಲ್ಲಲ್ಲಿನ ಸ್ಥಳನಾಮಗಳನ್ನು ಬದಲಾಯಿಸಿದರೇ ಅಥವಾ ಅವುಗಳಿಗೆ ಹೆಸರನ್ನಿಟ್ಟರೇ ಎಂಬಲ್ಲಿಂದ ಇಂದ್ರಪ್ರಸ್ಥಕ್ಕೆ ದಿಲ್ಲಿಯೆಂಬ ಹೆಸರನ್ನಿಟ್ಟರೇ, ಎಂಬಲ್ಲಿಯ ವರೆಗೆ ಈ ಹುಡುಕಾಟ, ಜಿಗಿತ ಮತ್ತು ಅಗೆತ ನಡೆಯಬೇಕಿದೆ. ಹೀಗೆ ಅಗೆವಾಗ್ಗೆ ಮೊದಲೂ ಕೊನೆಗೂ ಕೋಶಾವಸ್ಥೆಯೇ ಎಂಬುದೇ ಇದರ ವೈಶಿಷ್ಟ್ಯ!

ಭಾಷಾವಾರು ಪ್ರಾಂತಗಳು ರಾಜ್ಯಗಳಾದಾಗ ಹೊಸ ಹೊಸ ಹೆಸರುಗಳನ್ನು ನೀಡುವುದು ಅನಿವಾರ್ಯವಾಯಿತು. ಈ ಪ್ರಕ್ರಿಯೆಯಲ್ಲಿ ಹಳೆಯ ಅನೇಕ ಪ್ರಾಂತಗಳ ಹೆಸರುಗಳು ಅಳಿದವು ಇಲ್ಲವೇ ತಮ್ಮ ಲಕ್ಷಣಗಳನ್ನು, ಗಾತ್ರಗಳನ್ನು, ಪಾತ್ರಗಳನ್ನು, ಸ್ಥಾನ-ಮಾನಗಳನ್ನು ಕಳೆದುಕೊಂಡವು. ಹೀಗೆ ಕಳೆದುಕೊಂಡದ್ದರಿಂದ ಏನಾಗಿದೆಯೆಂದು ಕೇಳಿದರೆ ಅದಕ್ಕೆ ಸರಿಯಾದ ಉತ್ತರವಿಲ್ಲ. ಕಳೆದ ಕೆಲವು ದಶಕಗಳಲ್ಲಿ ಮದ್ರಾಸ್ ಚೆನ್ನೈ ಆಗಿದ್ದರೆ ಬೊಂಬಾಯಿ ಮುಂಬೈ ಆಗಿದೆ. ಕಲ್ಕತ್ತಾ ಕೋಲ್ಕತಾ ಆಗಿದೆ. ಈ ಬದಲಾವಣೆಗಳನ್ನು ಜನರು ನಿರ್ಮರ್ಮವಾಗಿ ಸ್ವೀಕರಿಸಿದ್ದಾರೆ ಮತ್ತು ಅದರಿಂದ ಹೊಸದೇನೂ ಸಾಧಿಸಿಲ್ಲವೆಂದು ತಮ್ಮ ಬದುಕು ಬದಲಾಗಿಲ್ಲವೆಂದು ಮೌನಸೂಚನೆ ನೀಡಿದ್ದಾರೆ. ಕೆಲವು ಬಾರಿ ಹೆಸರುಗಳನ್ನು ಬದಲಾಯಿಸಿದ್ದು ಕ್ರಾಂತಿಕಾರಕವೆಂದು ತಿಳಿದುಕೊಂಡವರೂ ಇದ್ದಾರೆ: ‘ಮೈಸೂರು’ ಎಂಬ ರಾಜ್ಯವು ‘ಕರ್ನಾಟಕ’ ಎಂದು ಬದಲಾದಾಗ ಅದು ಕನ್ನಡಿಗರ ಕನಸಿನ ಸಾಕ್ಷಾತ್ಕಾರವೆಂದು ತಿಳಿಯಲಾಗಿದೆ. ಸರಕಾರಿ ಕಚೇರಿಗಳ ಲಂಚದ ತಾಂಡವನೃತ್ಯ ನೋಡುವಾಗೆಲ್ಲ ಈ ಕನಸು ನಮ್ಮನ್ನೆಚ್ಚರಿಸುತ್ತದೆ. ಒಂದು ರಾಜ್ಯವಾಗಿದ್ದ ‘ಕೊಡಗು’ ಬ್ರಿಟಿಷರ ಆಳ್ವಿಕೆಯಲ್ಲಿ ‘ಕೂರ್ಗ್’ ಆಗಿತ್ತು. ಅದು ಮರಳಿ ಸ್ವರಾಜ್ಯದ ಭಾಗವಾದಾಗ ಒಂದು ‘ಸಿ’ ರಾಜ್ಯವಾಗಿ ಆನಂತರ ಒಂದು ಜಿಲ್ಲೆಯಾಗಿ ಕುಗ್ಗಿತು. ಅದೀಗ ಮತ್ತೆ ಕೊಡಗು ಎಂದಾಗಿದೆ. ಹಾಲೇರಿ ವಂಶಸ್ಥರ ಆಡಳಿತದ ಕೊಡಗಿನ ಕೇಂದ್ರವಾಗಿದ್ದ ಮಡಿಕೇರಿ ಆಂಗ್ಲರ ಆಳ್ವಿಕೆಯಲ್ಲಿ ಮರ್ಕೆರಾ ಆಗಿದ್ದು ಈಗ ಸ್ವರಾಜ್ಯದಲ್ಲಿ ಮತ್ತೆ ಮಡಿಕೇರಿಯಾಗಿದೆ. ಇಂತಹ ನೂರಾರು ಮಾತ್ರವಲ್ಲ ಸಾವಿರಾರು ಉದಾಹರಣೆಗಳು ಭಾರತದಲ್ಲಿವೆ. ಇವೆಲ್ಲ ಕೆಲವೊಮ್ಮೆ ವ್ಯಾವಹಾರಿಕ ಅಗತ್ಯಗಳಾಗಿದ್ದರೆ ಇನ್ನು ಕೆಲವೊಮ್ಮೆ ವೈಚಾರಿಕ, ಮತ್ತೆ ಕೆಲವೊಮ್ಮೆ ಭಾವನಾತ್ಮಕ ಬದಲಾವಣೆಗಳಾಗಿವೆ.

ಇಂತಹ ಬದಲಾವಣೆ ಸ್ಥಳನಾಮಗಳಿಗಷ್ಟೇ ಅನ್ವಯಿಸುವುದಿಲ್ಲ. ವ್ಯಕ್ತಿಗಳ ಹೆಸರುಗಳಿಗೂ ಅನ್ವಯಿಸುತ್ತವೆ. ತಾವೇ ಹೆಸರು ಬದಲಾಯಿಸಿಕೊಳ್ಳುವವರಿದ್ದಾರೆ. ದಿನಪತ್ರಿಕೆಗಳಲ್ಲಿ ಅನುದಿನವೆಂಬಂತೆ ‘‘... ಎಂಬ ಹೆಸರಿನ ನಾನು ನೋಟರಿಯವರ ಸಮ್ಮುಖದಲ್ಲಿ ಪ್ರಮಾಣಪತ್ರ ಸಲ್ಲಿಸಿ ಈ ದಿನದಿಂದ ನನ್ನ ಹೆಸರನ್ನು ... ಎಂದು ಬದಲಾಯಿಸಿಕೊಂಡಿದ್ದೇನೆ’’ ಎಂಬ ಜಾಹೀರಾತುಗಳನ್ನು ಕಾಣಬಹುದು. ಮಾಜಿ ಪ್ರೇಯಸಿಯಂತೆ ಮಾಜಿ ಹೆಸರೂ ಚೆನ್ನಾಗಿಲ್ಲದಿರುವುದು, ಬದಲಾದ ಸಾಂಸ್ಕೃತಿಕ ವಾತಾವರಣದಲ್ಲಿ ಆ ಹೆಸರು ಹೊಸ ಜಾಯಮಾನಕ್ಕೆ ಒಗ್ಗದಿರುವುದು, ಇನ್ಯಾರೋ ಲೇವಡಿ ಮಾಡುವಂತಹ ಅಂಶಗಳು ಆ ಹಳೆಯ ಹೆಸರಿನಲ್ಲಿರುವುದು, ಅಥವಾ ತನ್ನ ಸಿದ್ಧಾಂತಗಳಿಂದ ಆಸಕ್ತಿಗಳ ವರೆಗೆ ಅಭಿವ್ಯಕ್ತಿಗಳಿಗನುಗುಣವಾಗಿ ಹೆಸರನ್ನು ಬದಲಾಯಿಸಿಕೊಳ್ಳಬೇಕೆನ್ನುವ ತವಕ ಮುಂತಾದವು ಕಾರಣವಾಗಿ ಹೆಸರುಗಳು ಬದಲಾಗುತ್ತವೆ. ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸದಲ್ಲಿ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡದ್ದು ಜನಪ್ರಿಯ ನಿದರ್ಶನ. ಬೃಹನ್ನಳೆ ಎಂಬುದಕ್ಕೆ ಊರ್ವಶಿಯ ಶಾಪ ನೆರವಾಗಿದ್ದುದರಿಂದ ಅದನ್ನು ನಾಮಬದಲಾವಣೆ ಮಾತ್ರವಲ್ಲ ಸ್ವರೂಪ ಬದಲಾವಣೆಯೆಂದೇ ಹೇಳಬೇಕು.

ಹೆಸರುಗಳನ್ನು ಬದಲಾಯಿಸಿಕೊಂಡರೂ ಕಂಕಭಟ್ಟನನ್ನು, ವಲಲ, ಸೈರಂಧ್ರಿಯರನ್ನು, ನಕುಲ, ಸಹದೇವರನ್ನು ಹೊಸ ಹೆಸರಿದ್ದರೂ ಗುರುತಿಸಲಾಗಿರಲಿಲ್ಲವೇ ಎಂಬುದು ಇನ್ನೂ ರಹಸ್ಯವೇ. ಪ್ರಾಯಃ ಆ ಕಾಲದಲ್ಲಿ ಗುರುತು ಸಿಗದಷ್ಟು ರೂಪ ಬದಲಾವಣೆಯ ಪವಾಡಗಳು ನಡೆಯುತ್ತಿರಲಿಲ್ಲವಾದ್ದರಿಂದ ಹೆಸರು ಬದಲಾವಣೆಗಿಂತ ಬೇರೆ ಆಯ್ಕೆಯಿರಲಿಲ್ಲ. ಹೀಗಿದ್ದರೂ ಲೋಕವಿಖ್ಯಾತರಾದ ಪಾಂಡವರು ನೆರೆಯ ವಿರಾಟನಗರದಲ್ಲೇ ಗುರುತು ಸಿಗದವರಾದರೆ ಅವರ ಖ್ಯಾತಿ ಹೇಗಿತ್ತು, ಎಷ್ಟಿತ್ತು ಎಂಬುದರ ಬಗ್ಗೆ, ಅವರ ಕುರಿತ ಭೋ ಪರಾಕ್‌ನ ಬಗ್ಗೆ, ನಮ್ಮ ವಿಮರ್ಶಕರು, ಸಂಶೋಧಕರು, ಚಿಂತಕರು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳನ್ನು ನಡೆಸಿ ಬಗೆಹರಿಸಿಕೊಳ್ಳುವುದು ಅಗತ್ಯವೆಂದು ಹೇಳಿದರೆ ವ್ಯಂಗ್ಯವೆಂದು ಭಾವಿಸಬೇಕಿಲ್ಲ.

ಮತ, ಧರ್ಮ, ಜಾತಿ ಇವುಗಳನ್ನು ಬದಲಾಯಿಸಿಕೊಂಡಾಗ ಹೆಸರು ಬದಲಾಯಿಸಿಕೊಳ್ಳುವುದು ಅನಿವಾರ್ಯವಲ್ಲದಿದ್ದರೂ ಗೊಂದಲಗಳನ್ನು ನಿವಾರಿಸಲು, ಹೊಸ ಲಕ್ಷಣಗಳನ್ನು ಸಂಪಾದಿಸಲು, ಅಗತ್ಯವಾಗುತ್ತದೆ. ಇಂಥಲ್ಲಿ ತೊಡಕುಗಳೂ ಎದುರಾಗುತ್ತವೆ. ಉದಾಹರಣೆಗೆ ಸುಬ್ಬಯ್ಯ ಎಂಬವರ ಮಗ (ಆತನ ಹೆಸರು ಕೇಶವ ಎಂದಿಟ್ಟುಕೊಳ್ಳಿ!) ಮತಾಂತರಗೊಂಡು ಅಬ್ರಹಾಂ ಎಂದೋ ಮುಹಮ್ಮದ್ ಎಂದೋ ಅಂತರಗೊಂಡ ಮತಕ್ಕನುಗುಣವಾಗಿ ಹೆಸರಿಟ್ಟುಕೊಳ್ಳುತ್ತಾನೆ (ಎಂದಿಟ್ಟುಕೊಳ್ಳಿ!). ಆತನ ಮುಂದಿನ ವ್ಯವಹಾರದಲ್ಲಿ ಆತನು ಅಬ್ರಹಾಂ/ಮುಹಮ್ಮದ್ ಎಂದು ಕಾಣಿಸಿದರೂ ತನ್ನ ತಂದೆಯ ಹೆಸರನ್ನು ಸುಬ್ಬಯ್ಯ ಎಂದು ನಮೂದಿಸುವುದು ಅನಿವಾರ್ಯವಾಗುತ್ತದೆ. ಹೀಗೆ ತುಂಬಿಸಲ್ಪಟ್ಟ ನಮೂನೆಗಳನ್ನು, ದಾಖಲೆಗಳನ್ನು ನೀಡಿದಾಗ ಆಯಾಯ ಕಚೆೇರಿಯ ಸಂಬಂಧಿತ ಗುಮಾಸ್ತರು ತದೇಕಚಿತ್ತದಿಂದ ಮತ್ತು ಭಾರೀ ಸಂಶಯದಿಂದ ಒಮ್ಮೆ ಆ ನಮೂನೆಯನ್ನೂ ಮತ್ತೊಮ್ಮೆ ಆ ಅಬ್ರಹಾಂ/ಮುಹಮ್ಮದ್ ಎಂಬ ವ್ಯಕ್ತಿಯನ್ನೂ ನೋಡುವುದನ್ನು ಗಮನಿಸಬಹುದು. ಇಂಥಲ್ಲೆಲ್ಲ ಒಂದು ವಿವರಣೆ, ಅಡಿಟಿಪ್ಪಣಿ ಅಗತ್ಯವಾಗಿರುತ್ತದೆ. ಅದಲ್ಲದಿದ್ದರೆ ಆತನು ತನ್ನ ಹೆತ್ತವರ ಹೆಸರನ್ನೂ ಬದಲಾಯಿಸಬೇಕು; ಆದರೆ ಅದಕ್ಕೆ ಅವಕಾಶವಿಲ್ಲ. ಮತಪರಿವರ್ತನೆಯಾದರೂ ಹೆಸರುಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲದ ಖ್ಯಾತನಾಮರಿಗೆ ಈ ಸಮಸ್ಯೆ ಎದುರಾಗುವುದಿಲ್ಲ. ಹೇಮಮಾಲಿನಿ ಮತ್ತು ಧರ್ಮೇಂದ್ರ ಎಂಬ ತಾರಾ ಪ್ರೇಮಿಗಳು ಮದುವೆಯಾದದ್ದು ಈಗ ಇತಿಹಾಸ. ಅವರಿಬ್ಬರೂ ಕಾನೂನಿನ ಸುಳಿಯಿಂದ ಪಾರಾಗಲು ಮತಾಂತರಗೊಂಡರೆಂದು ವರದಿಯಾದರೂ ಅವರ ದಾಖಲಿತ ನವನಾಮಗಳು ಪ್ರಚಲಿತವಿಲ್ಲ. ಅವರಿಬ್ಬರೂ ಈಗಲೂ ತಮ್ಮ ಹಳೆಯ ಖ್ಯಾತಿಯಲ್ಲಿಯೇ ಮತ್ತು ಹಿಂದುತ್ವದ ಪ್ರತಿನಿಧಿಗಳಾಗಿಯೇ ಉಳಿದ್ದಾರೆ.

ಕ್ರೀಡೆಗಳಲ್ಲಿ ಹೆಸರುಗಳು ಬದಲಾಗುವುದು ಅಷ್ಟಾಗಿ ಗೊತ್ತಾಗಿಲ್ಲ. ಆದರೆ ಸಿನೆಮಾ, ರಂಗಭೂಮಿ ಮುಂತಾದ ಜನಪ್ರಿಯ ಕಲಾಪ್ರಕಾರಗಳಲ್ಲಿ ನಾಮಬದಲಾವಣೆ ಸಾಮಾನ್ಯ. ತೀರಾ ಸಾಂಪ್ರದಾಯಿಕ ಹೆಸರಿನ ಮುತ್ತುರಾಜ್ ರಾಜಕುಮಾರ್ ಆದರು. ಎಲ್ಲ ಕುಮಾರ್‌ಗಳಿಗೆ ಈ ಮಾತನ್ನು ಅನ್ವಯಿಸಬಹುದು. ಹೆಸರಿನ ಮೂಲಕ ತಮ್ಮ ಜಾತಿ, ಕುಲ, ಗೋತ್ರ, ಪರಂಪರೆ ಗೊತ್ತಾಗುತ್ತದೆಂಬ ಕಾರಣಕ್ಕೆ ಈ ನಾಮಬದಲಾವಣೆಯಾಗಿದೆಯೇ ಎಂಬ ಬಗ್ಗೆ ಮತ್ತೆ ಸಂಶೋಧನೆ ಅಗತ್ಯ. ಬಹುತೇಕ ನಾಮಬದಲಾವಣೆಗಳು ಕೀಳರಿಮೆಯ ಸಂಕೇತವೆಂದೇ ಬಗೆದರೂ ಅವು ಆಕರ್ಷಣೆಯನ್ನು ಹೆಚ್ಚಿಸುವ ಸಲುವಾಗಿಯೇ ಇರುತ್ತವೆಂದು ಸೆಲ್ಯುಲಾಯ್ಡಿ ಪ್ರಪಂಚ ನಂಬುತ್ತದೆ.

ಸಾಹಿತ್ಯಕ್ಷೇತ್ರದಲ್ಲಿ ಹೆಸರನ್ನು ಆ ಸಂದರ್ಭಕ್ಕೆ ಮಾತ್ರವೇ ಬದಲಾಯಿಸಿಕೊಳ್ಳಲಾಗುತ್ತದೆ. ಇವು ಗದ್ಯಪದ್ಯಗಳಿಗೆ ಸಮಾನವಾಗಿ ಅನ್ವಯಿಸುತ್ತವಾದರೂ ಅವಕ್ಕೆ ಹೆಸರು ಮಾತ್ರ ‘ಕಾವ್ಯನಾಮ’! ಈ ಪದವನ್ನೂ ಬದಲಾಯಿಸಬೇಕೆಂದು ಯಾರಿಗೂ ಹೊಳೆದಿಲ್ಲ. ಇಂತಹವರಿಗೆ ಸಾಹಿತ್ಯದೊಳಗೆ ಒಂದು ಹೆಸರಿದ್ದರೆ, ವ್ಯವಹಾರದಲ್ಲಿ ಇನ್ನೊಂದು ಹೆಸರಿರುತ್ತದೆ. ಸಂಭಾವನೆಯ, ಗೌರವಧನದ, ಚೆಕ್ ಬಂದಾಗ ಅದರ ನಗದೀಕರಣದ ಸಂದರ್ಭದಲ್ಲಿ ಈ ಸಮಸ್ಯೆ ಕಾಡುತ್ತದೆ. ಕೆಲವರು ತಮ್ಮ ಕಾವ್ಯನಾಮದೊಂದಿಗೆ ಆವರಣದಲ್ಲಿ (ಕನ್ನಡದಲ್ಲಿ ಈ ‘()’ ಪದಕ್ಕೆ ಬ್ರಾಕೆಟ್ ಎನ್ನುತ್ತಾರೆಂದು ಕೆಲವರು ಅಭಿಪ್ರಾಯಪಡುತ್ತಾರೆ!) ತಮ್ಮ ನಿಜನಾಮಧೇಯವನ್ನೂ ಬರೆಯುತ್ತಾರೆ. ಲೇಖಕರ ನಿಜನಾಮದ ಅರಿವಿಲ್ಲದ ಓದುಗರು ಅವರೆದುರೇ ಅವರ ರಚನೆಗಳನ್ನು ಟೀಕಿಸುವುದನ್ನು ತಡೆಯಲು ಇದು ಒಳ್ಳೆಯ ಹಾದಿ!

ಇನ್ನು ಕೆಲವು ಬಾರಿ ಹಳೆಯ ಹೆಸರುಗಳು ಮಾನಗೆಟ್ಟು ಹೊಸ ಹೆಸರುಗಳ ಮೂಲಕ ಅದೇ ವ್ಯಕ್ತಿ, ಸಂಘಟನೆ, ಗುಂಪು ಮತ್ತೆ ಪ್ರತ್ಯಕ್ಷವಾಗುತ್ತವೆ. ಸಮಾಜಕ್ಕೆ, ಸಮುದಾಯಕ್ಕೆ ಮೋಸಮಾಡಿದ ಅನಂತರ ಆ ಹೆಸರಿನಲ್ಲಿ ವ್ಯವಹರಿಸಲು, ಬದುಕುಳಿಯಲು ಅವಕಾಶಗಳ ಬಾಗಿಲು ಮುಚ್ಚಿಹೋದಾಗ ಹೊಸ ಹೆಸರುಗಳು ಅನಿವಾರ್ಯವಾಗುತ್ತವೆ. ಮೋಸಗಾರರಿಗೆ ಹೇಗೆ ಬೇಕಾದರೂ ಹೆಸರು ಬದಲಾಯಿಸಿಕೊಂಡು ಮತ್ತೆ ಮತ್ತೆ ಹೊಸಮೋಸಗಳಲ್ಲಿ ತೊಡಗುವುದಕ್ಕೆ ನಮ್ಮ ಇತಿಹಾಸ ಅನೇಕ ಪುರಾವೆಗಳನ್ನು ಒದಗಿಸಿದೆ ಮತ್ತು ವರ್ತಮಾನದ ದೇಶ, ಕಾಲದಲ್ಲಿ ಬೇಕಷ್ಟು ಅವಕಾಶಗಳಿವೆ. ಇಂತಹವರು ಸಿಕ್ಕಿಬಿದ್ದಾಗ ‘...’ ಅಲಿಯಾಸ್ ‘...’ ಅಲಿಯಾಸ್ ಅಥವಾ ‘ಯಾನೆ’ ಎಂದು ಬಳಸಿಕೊಳ್ಳುವುದನ್ನು ಕಾಣಬಹುದು. ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಈ ಸರ್ವನಾಮಗಳನ್ನು ಬರೆಯುವುದು/ದಾಖಲಿಸುವುದು ಅನಿವಾರ್ಯವಾಗುತ್ತದೆ. ಈ ನಾಮದರ್ಶನ, ಪ್ರದರ್ಶನ, ವ್ಯಕ್ತಿಗಳಿಗಷ್ಟೇ ಅಲ್ಲ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ‘‘ನಮ್ಮ ಸಂಸ್ಥೆ ‘...’ ಎಂಬ ಹೆಸರಿನಿಂದ ನಿಮ್ಮ ಬಳಿ ಬರುತ್ತಿತ್ತು, ಅದೀಗ ... ಈ ಹೊಸ ಹೆಸರಿನೊಂದಿಗೆ ನಿಮ್ಮ ಬಳಿ ಬರುತ್ತಿದೆ’’ ಮತ್ತು ‘‘ನಮಗೆ ಎಂದಿನಂತೆಯೇ ನಿಮ್ಮ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ’’ ಎಂಬ ಜಾಹೀರಾತುಗಳೂ ಇವೆ. ಅನೇಕ ಪ್ರಸಂಗಗಳಲ್ಲಿ ಈ ‘‘ನಿಮ್ಮ ಸೇವೆ ಸಲ್ಲಿಸಲು’’ ಎಂಬ ಪದಗಳಿಗೆ ಬದಲಾಗಿ ‘‘ನಿಮಗೆ ಮೋಸಮಾಡಲು’’ ಎಂದು ಹೆಸರಿಟ್ಟರೆ ಹೆಚ್ಚು ಸಮಂಜಸವಾಗುತ್ತದೆ.

ಹೀಗೆ ಸ್ಥಳ, ವ್ಯಕ್ತಿ, ವಸ್ತು ಮುಂತಾದವುಗಳು ಬದಲಾಗುತ್ತಲೇ ಇರುತ್ತವೆ. ಆದರೆ ರಾಜಕೀಯ ಪಕ್ಷಗಳೂ ಹೊಸಹೊಸ ಹೆಸರುಗಳನ್ನು ಇಟ್ಟುಕೊಳ್ಳುತ್ತವೆ. ಕಾಂಗ್ರೆಸ್ ಪಕ್ಷದ ವಿರುದ್ಧ ಜನತಾಪಾರ್ಟಿಯ ಹೆಸರಿನಲ್ಲಿ ಒಂದಾಗಿದ್ದವರು ಈಗ ಅನೇಕ ಪಾರ್ಟಿಗಳಾಗಿ ಒಡೆದು ಪ್ರತಿಯೊಂದು ಭಾಗವೂ ಆಯಾಯ ಸಿದ್ಧಾಂತ, ವ್ಯಕ್ತಿ, ನಾಯಕರನ್ನು ಹೊಂದಿಕೊಂಡು ಹೆಸರುಗಳನ್ನಿಟ್ಟುಕೊಂಡಿವೆ. ಭಾರತೀಯ ಜನಸಂಘ ಈಗ ಭಾರತೀಯ ಜನತಾ ಪಾರ್ಟಿಯಾಗಿದೆ. ಎಡಪಂಥದ ಕಮ್ಯುನಿಸ್ಟರಲ್ಲೂ ಮತ್ತೆ ಎಡ-ಬಲಗಳಿವೆ. ಹೀಗೆ ಹೊಸಹುಟ್ಟನ್ನು ಪಡೆದು ತಮ್ಮ ಭವಿಷ್ಯವನ್ನು, ಹಣೆಬರಹವನ್ನು ಬದಲಾಯಿಸಿಕೊಳ್ಳುವುದು ರಾಜಕೀಯ ಪಕ್ಷಗಳ ಹಣೆಬರಹವಾಗಿದೆ. ರಾಜಕಾರಣಿಗಳಂತೂ ಹೆಸರುಗಳನ್ನು ಬದಲಾಯಿಸಿಕೊಳ್ಳುವುದು ಅತೀ ಸಹಜವಾಗಿದೆ. ನಾಮಪತ್ರದಲ್ಲಿ (ಇಲ್ಲೂ ‘ನಾಮ’ದ್ದೇ ಕಾರುಬಾರು!) ತಮ್ಮ ಹೆಸರು ಮೊದಲಾಗಿ ಬಂದರೆ ಮೂರ್ಖ ಮತದಾರರು ಅಭ್ಯಾಸಬಲದಲ್ಲಿ ತಮಗೆ ಮತನೀಡಬಹುದೆಂಬ ನಂಬಿಕೆಯಿಂದ ಅದಕ್ಕನುಗುಣವಾಗಿ ಹೆಸರು ಬದಲಾಯಿಸಿ ನೋಂದಾಯಿಸಿಕೊಂಡವರು ಬಹಳಷ್ಟಿದ್ದಾರೆ. ಜಾತ್ಯತೀತತೆಯನ್ನು ಹೇಳುತ್ತಲೇ ಜಾತಿಕಾರಣವಾಗಿ ಅವಕಾಶ ಗಿಟ್ಟಿಸಿಕೊಂಡವರು ತಮ್ಮ ಜಾತಿಯ ನಾಮಬಲವನ್ನು ಕಳೆದುಕೊಳ್ಳಲಿಚ್ಛಿಸದೆ ಅದನ್ನೂ ಸೇರಿಸಿಕೊಳ್ಳುತ್ತಾರೆ. ಈ ದೇಶದ ರಾಜಕೀಯದ ರಾಷ್ಟ್ರಪ್ರಾಣಿಯಾಗಿ ಅಥವಾ ಲಾಂಛನವಾಗಿ ಊಸರವಳ್ಳಿಯೇ ಸರಿ!

ಈಚೆಗೆ ಉತ್ತರಪ್ರದೇಶ ಸರಕಾರವು ಅಲಹಾಬಾದ್ ನಗರದ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿದೆ. ಈ ಹುಮ್ಮಸ್ಸನ್ನು ಮುಂದುವರಿಸಿದ ಗುಜರಾತ್ ಸರಕಾರವು ಅಹಮದಾಬಾದ್ ನಗರದ ಹೆಸರನ್ನು ಕರ್ಣಾವತಿ ಎಂದು ಬದಲಾಯಿಸಲು ಹೊರಟಿದೆ. ಹೆಸರೇನೋ ಬದಲಾಗುತ್ತಿದೆ, (ಅಮಿತ್‌ಶಾ ಅವರ ಹೆಸರಿನ ‘ಶಾ’ ಪರ್ಶಿಯನ್ ಎಂದು ಖ್ಯಾತ ಚಿಂತಕ ಪ್ರೊ.ಇರ್ಫಾನ್ ಹಬೀಬ್ ಈಗಾಗಲೇ ‘ಶಾ’ಕ್ ನೀಡಿದ್ದಾರೆ.) ಆದರೆ ನಗರಗಳ, ಸ್ಥಳಗಳ, ವ್ಯಕ್ತಿಗಳ ಎಂದಿನ ಕುಂದುಕೊರತೆಗಳನ್ನು ಬದಲಾಯಿಸಲು ಅಸಾಧ್ಯವಾದರೆ ಈ ನಾಮಾಂತರವು ಏನನ್ನೂ ಸಾಧಿಸಲಾರದು. ಹೆಚ್ಚೆಂದರೆ ಅದೊಂದು ಮತೀಯ (ಅಂದರೆ ಜಾತಿ-ಮತಕ್ಕೆ ಸಂಬಂಧಿಸಿದ ಮತ್ತು ಚುನಾವಣೆಯ ಮತಕ್ಕೆ) ಪಂಗನಾಮವಾಗಬಹುದೇ ಹೊರತು ಇನ್ನೇನೂ ಆಗಲಾರದು. ‘ಪದ್ಮಾವತಿ’ ಎಂಬ ಸಿನೆಮಾ ಬಿಡುಗಡೆಯಾದಾಗ ಎಲ್ಲೆಡೆ ಕರ್ಣಿಸೇನೆ ಮತ್ತಿತರ ಮತಾಂಧ ಶಕ್ತಿಗಳು ಪ್ರತಿಭಟಿಸಿ ಕೊನೆಗೆ ಅದರ ನಾಮವನ್ನು ‘ಪದ್ಮಾವತ್’ ಎಂದು ಬದಲಾಯಿಸಲಾಯಿತು. ಈ ಪ್ರತಿಭಟನಾಕಾರರಿಗೆ ಸಿನೆಮಾತಂಡದವರು ದೊಡ್ಡ ಪಂಗನಾಮ ಹಾಕಿದರೆಂದು ಬೇರೆ ಹೇಳಬೇಕಾಗಿಲ್ಲ. ದಾಸರು ಇದನ್ನೇ ‘‘ನೀನ್ಯಾಕೋ ನಿನ್ನ ಹಂಗ್ಯಾಕೋ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ’’ ಎಂದಿರಬೇಕು!

ಹೆಸರುಗಳು ಬದಲಾದರೆ ರಾಜಕೀಯ ಲಾಭವೆಷ್ಟೆಂದು ಅಳೆಯಲಾಗದು. ಆದರೆ ನಿಜಕ್ಕೂ ವ್ಯಾವಹಾರಿಕ ಲಾಭವಾಗುವುದು ನಾಮಫಲಕ ತಯಾರಿಸುವವರಿಗೆ. ಅವರೇ ಈ ನಾಮಾಂತರದ ರೂವಾರಿಗಳೇನೋ ಎಂಬ ಸಂಶಯವಿದೆ!

ವಿಷ್ಣುವಿನ ಸಹಸ್ರನಾಮದಿಂದ ಮೊದಲ್ಗೊಂಡು ಇಂಡಿಯಾ ಅಂದರೆ ಭಾರತ ಎಂಬ ದ್ವಿನಾಮದ ಮೂಲಕ ಹಾದುಹೋಗುವ ಈ ಬಹುನಾಮ ಸಂಸ್ಕೃತಿ ನಡೆಯುತ್ತಿರುವುದರಿಂದ ನಾಮ ನಮಗೆ ಸಮಸ್ಯೆಯಾಗಬಾರದೆಂದು ಎಲ್ಲ ಭಾರತೀಯರೂ ನಂಬಬಹುದು. ಚಿಂತನೆಗಳು ಮರುಹುಟ್ಟು ಪಡೆಯದಿದ್ದರೂ ಹೆಸರುಗಳಾದರೂ ಮರುಹುಟ್ಟು ಪಡೆಯುತ್ತವೆಯೆಂಬ ಸರ್ವನಾಮ ಸಮಾಧಾನವಿರಲಿ ಎಲ್ಲರಿಗೂ.
ಅದಲ್ಲದಿದ್ದರೆ ಕುವೆಂಪು ‘ಆಗು ನೀ ಅನಿಕೇತನ’ ಎಂದಂತೆ ‘ಆಗು ನೀ ಅನಾಮಿಕ’ ಎಂದು ಹಾಡಬೇಕೇನೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)