varthabharthiಭೀಮ ಚಿಂತನೆ

ಇದು ನಿಜವೇ ಅಥವಾ ಒಂದು ಸಂಚೇ?

ವಾರ್ತಾ ಭಾರತಿ : 16 Nov, 2018

‘‘ಕೃಪಲಾನಿಯವರು ಇಪ್ಪತ್ತು ವರ್ಷಗಾಂಧಿಯವರ ತತ್ತ್ವ ವಿಚಾರದಲ್ಲಿ ನನೆಯುತ್ತಾ ಹಾಗೂ ಮಾಗುತ್ತಲಿದ್ದೂ ಒಣಕಲು ಆಗಿಯೇ ಉಳಿದರೇ? ಜನತೆಯು ತನ್ನ ಶಾಂತಿಪ್ರಧಾನವಾದ ಪ್ರಯತ್ನದಿಂದ ಸ್ವತಃ ಸರಕಾರ ಆಗುವುದು ಎನ್ನುವುದು ಗಾಂಧಿಯವರ ರಾಜಕೀಯದ ಸಾರ. ರಾಜ್ಯಸತ್ತೆ ಎಂದರೆ ಸಾವೆರೆನಿಟಿಯು ‘ಸರಕಾರ’ದಲ್ಲಿ ಇರದೆ ಜನತೆಯಲ್ಲಿ ಇರುತ್ತದೆ ಎಂಬುದು ಗಾಂಧಿ ಹಾಗೂ ಇಂಗ್ಲೆಂಡ್‌ನಲ್ಲಿರುವ ಲಿಬರಲ್‌ರ ತತ್ತ್ವ ವಿಚಾರ. ಆಯಾ ಕಾಲದ ಸರಕಾರವು(ಗವರ್ನ್‌ಮೆಂಟ್) ಇಂಥ ರಾಜ್ಯಸತ್ತೆಯ ಇಚ್ಛೆಯನ್ನು ಪೂರೈಸುವ ಯಂತ್ರವಾಗಿರುತ್ತದೆ. ಇಂಥ ‘ಸರಕಾರ’ವು ತನ್ನ ಕೆಲಸವನ್ನು ಪೂರೈಸುವಲ್ಲಿ ಪೂರ್ತಿ ನಿರುಪಯೋಗಿ ಎನ್ನಿಸಿದರೆ ಜನತೆಯ ಇಚ್ಛಾಶಕ್ತಿಯು ಪ್ರತ್ಯಕ್ಷ ಕೃತಿಯಿಂದ ರಾಜ್ಯಸಂಸ್ಥೆ ಹಾಗೂ ಸರಕಾರದ ರೂಪವನ್ನು ಬದಲಾಯಿಸಿ ಬಿಡುತ್ತದೆ.(ಬಾಲಗಂಗಾಧರ)ತಿಲಕರ ಇದೇ ಕೆಲಸವನ್ನು ಮುಂದುವರಿಸಲೆಂದು ಗಾಂಧಿಯವರು ನಾಯಕತ್ವವನ್ನು ವಹಿಸಿಕೊಂಡರು. ಅವರ ತಂತ್ರವು ನಿಶ್ಚಿತವಾದುದು. ರೈತರು, ಕಾರ್ಮಿಕರು, ಮಾಧ್ಯಮ ವರ್ಗ ಹಾಗೂ ತಮ್ಮ ನೆರವಿಗೆ ಒದಗುವ ಎಲ್ಲ ಮೇಲ್ವರ್ಗಗಳನ್ನು ಸಂಘಟಿಸಿ ರಾಜ್ಯಸತ್ತೆಯು ಜನಮತಕ್ಕೆ ತಕ್ಕಂತೆ ವರ್ತಿಸುವಂತೆ ಸರಕಾರದ ಮೇಲೆ ಒತ್ತಡವನ್ನು ತರುವುದು. ಗಾಂಧಿಯವರದು ಇದೇ ಮಾರ್ಗವಾಗಿತ್ತು. ಈಗಲೂ ಇದೇ.

 ಆದರೆ ಇಂದು ಗಾಂಧಿ ಸಹಿತ ಎಲ್ಲ ಕಾಂಗ್ರೆಸ್ ನಾಯಕರು ಜನತೆಯನ್ನು ಮೂಢರನ್ನಾಗಿ ಇರಿಸಿ ಅವರ ಕರ್ತೃತ್ವವನ್ನು ನಾಶಪಡಿಸಿ ಬಿಡುವ ಧೋರಣೆಯನ್ನು ಅವಲಂಬಿಸಿರುವರು. ಒಂದು ವರ್ಷಕ್ಕಿಂತಲೂ ಹೆಚ್ಚುಕಾಲದಿಂದ ಹದಿನಾರು ಕೋಟಿ ಪ್ರಜೆಗಳ ಮೇಲೆ ಹೊಣೆಗೇಡಿ ಹಾಗೂ ಅಪ್ರಾತಿನಿಧಿಕ ಗವರ್ನರ್‌ಶಾಹಿ ನಡೆದಿದ್ದರೂ ಜನ ಅದಕ್ಕೆ ಮನಸೋತಿದ್ದಾರೆ! ಇಂಗ್ಲೆಂಡ್‌ನಲ್ಲಾದರೆ ಇಂಥ ಸಂಗತಿ ನಡೆಯುತ್ತಿರಲಿಲ್ಲ, ಎಂದು ಅಮೇರಿ ಅವರು ಸ್ವಂತದ ಮೀಸೆಯನ್ನಲ್ಲ, ಝೆಟ್‌ಲಂಡ್‌ನ ಮೀಸೆಯನ್ನು ಹುರಿಮಾಡಿ ಹೇಳಿದರು. ಆ ವ್ಯಂಗ್ಯ ನಿಜವಾಗಿತ್ತು. ಇಂದು ಅಹಿಂಸೆಯು ಹಿಂದೀ ಜನತೆಗೆ ಒಂದು ತಡೆಗೋಡೆಯಾಗಿಲ್ಲ. ಅದನ್ನೊಂದು ಕುರಿಯ ಪಾತ್ರವನ್ನಾಗಿ ಮಾಡಲಾಗಿದೆ. ಹೀಗಾಗಲು ಕಾಂಗ್ರೆಸ್ ನಾಯಕರೇ ಹೊಣೆ. ಈ ಹೊಣೆಯನ್ನು ಗಮನಕ್ಕೆ ತಂದುಕೊಂಡು ದಾರಿಯನ್ನು ಬದಲಾಯಿಸಬೇಕು. ಬದಲು ಕೃಪಲಾನಿಯವರು ಒಂದು ಪವಾಡಕ್ಕಾಗಿ ಕಾದಿದ್ದಾರೆ! ಪವಾಡಕ್ಕಾಗಿ ಕಾದಿರುವವನ ಕೈಗೆ ಏನು ದಕ್ಕುತ್ತದೆ, ಎನ್ನುವುದು ರೆನೋದ ಉದಾಹರಣೆಯಿಂದ ತಿಳಿದಿದೆ. ಈವರೆಗೂ ನಮ್ಮಲ್ಲಿ ರೆನೋದಂತಹ ಪರಿಸ್ಥಿತಿ ಬಂದಿಲ್ಲ. ಮುಪ್ಪಿನ ಮುಂದಾಳುಗಳು ಧೈರ್ಯ ಕಳೆದುಕೊಂಡಿದ್ದರೆ ಕಾಂಗ್ರೆಸ್‌ನಲ್ಲಿರುವ ಯುವಕರಾದರೂ ಇನ್ನುಮುಂದೆ ಸ್ವಂತದ ಸಾಮರ್ಥ್ಯದಿಂದ ಮುಂದಕ್ಕೆ ಹೆಜ್ಜೆ ಇಕ್ಕಬೇಕು-’’

ಮೇಲಿನ ಮಾತುಗಳನ್ನು ಓದಿ, ಅವು ಜನತಾ ಪತ್ರದ ಸಂಪಾದಕನೆಂದು ಓದುಗರಿಗೆ ಅನ್ನಿಸಿದರೆ ಅದರಲ್ಲೇನಾದರೂ ಅಚ್ಚರಿ ಇದೆಯೆಂದು ಯಾರಿಗೂ ಅನ್ನಿಸಲಾರದು. ಆದರೆ ಈ ಮಾತುಗಳು ಜನತಾ ಸಂಪಾದಕನಾಗಿರದೆ ಅವು ಕಳೆದ ರವಿವಾರದ ‘ಲೋಕಮಾನ್ಯ’ ಸಂಚಿಕೆಯ ಸಂಪಾದಕೀಯದಿಂದ ಎತ್ತಿಕೊಂಡ ಅವತರಣಿಕೆಗಳಾಗಿವೆ. ಮೇಲಿನ ಮಾತುಗಳನ್ನು ಓದಿ, ಲೋಕಮಾನ್ಯದ ಅಭಿಪ್ರಾಯ ಪ್ರಣಾಲಿಕೆಯಲ್ಲಿ ಅದೆಷ್ಟು ಅಭಿಪ್ರಾಯ ಪರಿವರ್ತನೆಯಾಗಿದೆ ಎನ್ನುವುದು ಯಾರಿಗಾದರೂ ತಿಳಿದೀತು. ನಾವು ಅದೆಷ್ಟೋ ದಿನಗಳಿಂದ ಪ್ರತಿಪಾದಿಸುತ್ತಾ ಬಂದ ಸಂಗತಿಯೇ ನಿಜವೆನ್ನಿಸಿ ಕೊನೆಗೂ ಪೂರ್ತಿ ಕಾಂಗ್ರೆಸ್‌ಗಾಗಿ ಮೀಸಲಾಗಿಟ್ಟ ಲೋಕಮಾನ್ಯದಂತಹ ವೃತ್ತಪತ್ರವೂ ಕೂಡ ಅದರ ಸತ್ಯತೆಯನ್ನು ಕುರಿತು ಸಾಕ್ಷಿಯನ್ನು ನೀಡಬೇಕಾಯಿತು ಎನ್ನುವ ಸಂಗತಿಯು ನಮಗೆ ಸಂತಸವನ್ನು ತಂದಿದೆ.

ಆದರೆ ‘ಲೋಕಮಾನ್ಯ’ಕ್ಕೆ ಕಣ್ಣು ತೆರೆಯಲು ಇಷ್ಟೊಂದು ಕಾಲ ಬೇಕಾಯಿತಲ್ಲ ಎಂದು ಕೆಡುಕೆನ್ನಿಸುತ್ತಿದೆ. ಲೋಕಮಾನ್ಯವು ಇಂದು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಈ ಮೊದಲೇ ಪ್ರಕಟಿಸಿ, ಅದನ್ನು ಜನತೆಯಲ್ಲಿ ಹರಡಿದ್ದರೆ ಜನತೆಯ ಸ್ಥಿತಿ ಇಂದಿನಂತೆ ಇರುತ್ತಿರಲಿಲ್ಲ. ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಗಳಾದ ಆಚಾರ್ಯ ಕೃಪಲಾನಿಯವರು ಇಷ್ಟರಲ್ಲೇ ‘ಸೋಸಿಯಲ್ ವೆಲ್‌ಫೇರ್’ ಮಾಸಪತ್ರಿಕೆಯಲ್ಲಿ ಬರೆದ ಲೇಖನದಿಂದ ಈ ಸ್ಥಿತಿಯು ಅದೆಷ್ಟು ಹದಗೆಟ್ಟಿದೆ ಎಂಬುದು ಯಾರಿಗಾದರೂ ತಿಳಿಯುವಂತಿದೆ. ಆಚಾರ್ಯ ಕೃಪಲಾನಿಯವರು ತಮ್ಮ ಲೇಖನಕ್ಕೆ, ‘‘ಇತ್ತೀಚಿನ ಇಕ್ಕಟ್ಟನ್ನು ಬಗೆಹರಿಸುವ ದಾರಿ ಯಾವುದು’’ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಅವರು, ‘ಪರಕೀಯರ ದಾಳಿಯಾದರೆ ಹಿಂದೂಸ್ಥಾನವನ್ನು ಹೇಗೆ ರಕ್ಷಿಸುವುದು’ ಎಂಬುದನ್ನು ಕುರಿತು ಚರ್ಚಿಸಿರುವರು. ಇಂಗ್ಲೆಂಡ್‌ನ ಬದಿ ಹಿಮ್ಮೆಟ್ಟಿದ ವಾರ್ತೆ ಬಂತೆಂದರೆ ಜನರು ಹತಾಶರಾಗುತ್ತಾರೆಂಬುದು ಆಚಾರ್ಯ ಕೃಪಲಾನಿಯವರ ಅಭಿಪ್ರಾಯ. ರಾಜಶ್ರೀ ಕೃಪಲಾನಿಯವರು ಈ ಸತ್ಯವನ್ನು ಹೊರತಂದುದು ಒಳ್ಳೆಯದಾಯಿತೆಂಬುದು ನಮ್ಮ ಅಭಿಪ್ರಾಯ. ಅವರು, ಹತಾಶರಾಗಲು ಇರುವ ಕಾರಣಗಳು ಹಾಗೂ ಅವುಗಳ ಪರಿಹಾರ ಯೋಜನೆ ಯಾವುವು ಎಂಬುದನ್ನು ಕುರಿತು ಯೋಚಿಸುತ್ತ ನಿರಾಶೆಗೆ ಮೂರು ಕಾರಣಗಳಿವೆ ಎಂದಿದ್ದಾರೆ.

(1) ಪರಕೀಯರ ದಾಳಿಯನ್ನು ಎದುರಿಸಲು ಸಾಕಷ್ಟು ಹಿಂದೂಸ್ಥಾನದ ಸೈನಿಕ ಸಿದ್ಧತೆ ಇಲ್ಲ.

(2) ಸರಕಾರವು ಪರಕೀಯ ದಾಳಿಯನ್ನು ಎದುರಿಸಲು ಸಾಧ್ಯವಾಗುವಂತೆ ದೇಶದ ಸಿದ್ಧತೆಯನ್ನು ಕೈಕೊಳ್ಳಲು ಏನನ್ನೂ ಮಾಡುತ್ತಿಲ್ಲ.

(3) ಸರಕಾರವು ಹಿಂದೀ ಜನತೆಯನ್ನು ನಂಬದ ಕಾರಣ ಅದು ಜನರ ನೆರವನ್ನು ಪಡೆಯುತ್ತಿಲ್ಲ. ಆ

ಚಾರ್ಯ ಕೃಪಲಾನಿಯವರು ಸರಕಾರದ ಯುದ್ಧದ ಪ್ರಯತ್ನಗಳನ್ನು ಪರೀಕ್ಷಿಸಿ, ಈ ಮೂರು ಕಾರಣಗಳು ಹೇಗೆ ನಿಜವಾಗಿವೆ ಎಂಬುದನ್ನು ಸಪ್ರಮಾಣವಾಗಿ ಸಿದ್ಧಪಡಿಸಿದ್ದಾರೆ. ಸರಕಾರದ ಬದಿಯಿಂದ ನಿರಾಶರಾದ ಜನರು ಕಾಂಗ್ರೆಸ್‌ನತ್ತ ನೋಡುತ್ತಾರೆ. ಆದರೆ ಕೃಪಲಾನಿಯವರು ದೀನವಾಣಿಯಲ್ಲಿ ಹೀಗೆನ್ನುತಾರೆ: ‘‘ಕಾಂಗ್ರೆಸ್ ಆದರೂ ಏನು ಮಾಡೀತು? ಖಾಸಗಿ ಸಂಸ್ಥೆಯ ಮೂಲಕ ಸೈನಿಕ ಸಂಘಟನೆಯನ್ನು ತಯಾರಿಸಲು ಸಾಧ್ಯವಿಲ್ಲ. ಸರಕಾರವಂತೂ ನಮ್ಮ ಸಹಕಾರವನ್ನು ತಿರಸ್ಕರಿಸುತ್ತದೆ. ಅಂದ ಬಳಿಕ ಮಾಡುವುದೇನು? ಅಳುತ್ತ ಕೂರಬಾರದು. ಈಗಲೂ ಒಂದು ಪವಾಡ ನಡೆದು ಅನುಕೂಲ ಕಾಲ ಒದಗಿ ಬಂದೀತೆಂದು ಕಾಯತ್ತ ಕುಳಿತಿರಬೇಕಷ್ಟೆ. ಕೊನೆಗೆ ಈಶ್ವರ ಹಾಗೂ ಪ್ರಕೃತಿಯನ್ನು ಪ್ರಾರ್ಥಿಸುತ್ತ ಸಿದ್ಧರಾಗಿರಬೇಕು.’’

ಈ ಲೇಖನದಲ್ಲಿ ಕೃಪಲಾನಿಯವರ ಮಾರ್ಗವನ್ನು ಗಮನಿಸಲಾಗಿ ಕಾಂಗ್ರೆಸ್‌ನ ಶಕ್ತಿ ಅದೆಷ್ಟು ಕ್ಷೀಣಿಸಿದೆ ಎಂಬುದು ಕಂಡುಬರುವಂತಿದೆ. ಪರಕೀಯರ ದಾಳಿಯನ್ನು ತಪ್ಪಿಸಲು ಪರಮೇಶ್ವರನನ್ನು ಪ್ರಾರ್ಥಿಸುತ್ತಿರುವುದನ್ನು ಬಿಟ್ಟರೆ ದೇಶಕ್ಕೆ ಬೇರಾವ ದಾರಿಯೂ ಇಲ್ಲ ಎನ್ನುವುದು ನಿಜವಿದ್ದರೆ ಕಾಂಗ್ರೆಸ್ ಆಗಲಿ ಇನ್ನಾವ ರಾಜಕೀಯ ಸಂಸ್ಥೆಯಾಗಲಿ ಯಾವ ಕೆಲಸಕ್ಕೂ ಬಾರದು, ಇಡಿಯ ರಾಜಕೀಯವೇ ವ್ಯರ್ಥ ಎಂದೆನ್ನಬೇಕಾದೀತು. ಕಾಂಗ್ರೆಸ್‌ನಂತಹ ಬಲಿಷ್ಠ ಸಂಸ್ಥೆಯ ಅವಸ್ಥೆ ಹೀಗಾದುದು ನಮಗೂ ಶೋಚನೀಯವಾಗಿ ಕಾಣುತ್ತದೆ. ಕಾಂಗ್ರೆಸ್ ಗಾಂಧಿಯವರ ಅಂಕಿತದಲ್ಲಿ ಇರುವವರೆಗೆ ಅದರ ಕೈಯಿಂದ ರಾಜಕೀಯ ಕ್ರಾಂತಿ ಇಲ್ಲವೆ ರಾಜಕೀಯ ಪ್ರಗತಿ ಸಾಧ್ಯವಿಲ್ಲ ಎಂದು ನಾವು ಹಲವು ದಿನಗಳಿಂದ ಹೇಳುತ್ತ ಬಂದಿದ್ದೇವೆ. ಇದು ಸಾಕಷ್ಟು ಜನರಿಗೆ ಮನದಟ್ಟಾಗುತ್ತಿತ್ತು. ಆದರೆ ಅವರಲ್ಲಿ ಕೆಲವರ ವಾದ ಏನಿತ್ತೆಂದರೆ, ಟೀಕಾಕಾರರು ಒಳಗೆ ಬಂದು ತಮಗೆ ಅನ್ನಿಸಿದಂತೆ ಸುಧಾರಣೆಯನ್ನು ಮಾಡಬೇಕೆಂಬುದು. ಈ ವಾದವು ನಮಗೆ ಅದೆಂದಿಗೂ ಒಪ್ಪಗೆಯಾಗಲಿಲ್ಲ. ಬಲೆಯಲ್ಲಿ ಸಿಕ್ಕಿ ಬಿದ್ದ ಇಲಿಯು ಹೊರಗೆ ಹೋಗಲಾರದು, ಬಲೆಯನ್ನೂ ಹರಿಯಲಾರದೆಂಬಂತೆ ಹೊರಗಿನಿಂದ ಕಾಂಗ್ರೆಸನ್ನು ಟೀಕಿಸುವವರು ಒಳಹೊಕ್ಕು ಅದನ್ನು ಸುಧಾರಿಸಲಾರರು, ಅದರಿಂದ ಹೊರಕ್ಕೂ ಬರಲಾರರು.

ಒಂದೆಂದರೆ ಗಾಂಧಿ ಹಾಗೂ ಕಾಂಗ್ರೆಸ್ ಬೇರ್ಪಡಬೇಕು, ಇಲ್ಲವೆ ಅದು ಗಾಂಧಿ ತತ್ತ್ವಗಳ ಮೇಲೆ ಎಳ್ಳು, ನೀರು ಬಿಟ್ಟು ಅವರ ಮುಂದಾಳುತನವನ್ನು ನಿರಾಕರಿಸಿ, ಮಾನವನ ಅನುಭವಗಳ ತಳಹದಿಯ ಮೇಲೆ ತನ್ನ ಜೀವನವನ್ನು ರಚಿಸಿ, ಕಾರ್ಯವನ್ನು ಕೈಕೊಳ್ಳಲು ಆರಂಭಿಸತಕ್ಕದ್ದು. ಗಾಂಧಿಗಿಂತ ದೇಶ ದೊಡ್ಡದೆಂಬ ದೃಢವಾದ ಭಾವನೆಯನ್ನು ಹೊಂದಿದವರು ಕಾಂಗ್ರೆಸ್‌ನಿಂದ ಹೊರಬಂದು ದೇಶಕ್ಕಾಗಿ ತಮ್ಮಿಂದಾದಷ್ಟನ್ನು ಮಾಡಬೇಕು. ಲೋಕಮಾನ್ಯಕಾರರು ಈ ವಿಚಾರಸರಣಿಯನ್ನು ತಮ್ಮ ಸಂಪಾದಕೀಯದಲ್ಲಿ ಮಂಡಿಸಿದ ಬಗ್ಗೆೆ ನಾವು ಅವರನ್ನು ಅಭಿನಂದಿಸುತ್ತೇವೆ. ಬೆಕ್ಕಿನ ಮರಿಗಳು ಹುಟ್ಟಿದಾಗ ಅವುಗಳ ಕಣ್ಣುಗಳು ಮುಚ್ಚಿರುತ್ತವೆ. ಆದರೆ ಕೆಲವೇ ದಿನಗಳಲ್ಲಿ ಅವು ಕಣ್ಣು ತೆರೆದು ಪ್ರಕೃತಿಯನ್ನು ಅನುಭವಿಸಲು ಸಿದ್ಧವಾಗುತ್ತವೆ. ನಮ್ಮ ಕಾಂಗ್ರೆಸ್ ಭಕ್ತರ ಕಣ್ಣುಗಳು ಎಂದಿಗಾದರೂ ತೆರೆದುಕೊಳ್ಳಬಹುದೆಂದು ಆಸೆ ಎಂದಿಗೂ ನಮ್ಮಲ್ಲಿರಲಿಲ್ಲ. ಆದರೆ ನಿರಾಶೆಯಲ್ಲೇ ಆಸೆಯ ಒಂದು ಕಿರಣ ಕಂಡು ಬಂದದ್ದರಿಂದ ನಮಗೂ ಕೂಡ ತುಂಬ ಸಮಾಧಾನ ಲಭಿಸಿದೆ.

ಮೇಲಿನ ವಿಚಾರಗಳನ್ನು ವ್ಯಕ್ತಪಡಿಸುವಾಗ ನಮ್ಮ ಓದುಗರಿಗೆ ಒಂದು ಸಂಗತಿಯನ್ನು ಕುರಿತು ಎಚ್ಚರಿಕೆಯನ್ನು ನೀಡುವುದು ತುಂಬ ಅವಶ್ಯವೆಂದು ನಮಗೆ ಅನ್ನಿಸುತ್ತದೆ. ಮುನಶಿ ಅವರು ಕಾಂಗ್ರೆಸ್‌ನಿಂದ ಹೊರಬಂದುದರಿಂದ ಬಹಳಷ್ಟು ಜನರಿಗೆ ಬಲು ದೊಡ್ಡ ಸಮಾಧಾನ ಲಭಿಸಿದುದು ಕಂಡುಬರುತ್ತದೆ. ಮುನಶಿ ಅವರು ಕಾಂಗ್ರೆಸ್‌ನ್ನು ತ್ಯಜಿಸಿದ ಬಗೆಗೆ ನಮಗಂತೂ ಸಮಾಧಾನ ಆಗಿಯೇ ಇಲ್ಲ. ಆದರೆ ಅವರ ನಡತೆಯ ಬಗ್ಗೆ ದೊಡ್ಡ ಸಂದೇಹ ತಲೆದೋರುತ್ತಿದೆ. ನಾವು ಸಮಾಧಾನ ವ್ಯಕ್ತ ಪಡಿಸಿದ್ದುದು ಕಾಂಗ್ರೆಸ್‌ಗಾಗಿ ತನ್ನನ್ನೇ ಇಡಿಯಾಗಿ ಮುಡಿಪಾಗಿರಿಸಿಕೊಂಡ ’ಲೋಕಮಾನ್ಯ’ದಂತಹ ವೃತ್ತಪತ್ರದ ಕಣ್ಣು ತೆರೆದುಕೊಂಡದ್ದಕ್ಕಾಗಿ! ಮುನಶಿಯವರು ಕಾಂಗ್ರೆಸ್‌ನಿಂದ ಹೊರಬಂದರೆಂಬ ತಪ್ಪು ತಿಳುವಳಿಕೆ ಎಲ್ಲೆಡೆಗೆ ಹಬ್ಬಿದಂತಿದೆ. ಹಾಗೆಯೇ ಅವರು ಕಾಂಗ್ರೆಸನ್ನು ತ್ಯಜಿಸಿದ ಕಾರಣವು ವೈಯಕ್ತಿಕವಾಗಿರದೆ ತಾತ್ತ್ವಿಕ ನೆಲೆಯದಾಗಿದೆ ಎಂಬ ತಿಳುವಳಿಕೆ ಎಲ್ಲೆಡೆಗೆ ಹಬ್ಬಿದಂತೆ ಕಾಣುತ್ತದೆ. ಆದರೆ ಇವೆರಡೂ ಸಂಗತಿಗಳು ನಿಜ ಎಂದು ನಮಗೆ ಖಂಡಿತ ಅನ್ನಿಸುವುದಿಲ್ಲ. ಮುನಶಿಯವರು ಕಾಂಗ್ರೆಸ್‌ನಿಂದ ಹೊರಬಂದರು ಎನ್ನುವ ಬದಲು ಗಾಂಧಿಯವರು ವಿಶಿಷ್ಟವಾದ ಕಾರ್ಯವನ್ನು ಸಾಧಿಸುವುದಕ್ಕಾಗಿ ಅವರನ್ನು ಬೇಕೆಂದೇ ಕಾಂಗ್ರೆಸ್‌ನಿಂದ ಹೊರಕ್ಕೆ ಬಿಟ್ಟಿದ್ದಾರೆ ಎನ್ನುವುದೇ ನಮಗೆ ಹೆಚ್ಚು ಸೂಕ್ತವೆನ್ನಿಸುತ್ತದೆ. ಇಲ್ಲಿಯವರೆಗೆ ಕಾಂಗ್ರೆಸ್‌ನಿಂದ ಬಹಳಷ್ಟು ಜನರು ಹೊರಗೆ ಹೋಗಿದ್ದಾರೆ.

ಶ್ರೀ ನರೀಮನ್, ಡಾ. ಖರೆ, ಸುಭಾಶ್ಚಂದ್ರ ಬೋಸ್, ಎಂ.ಎನ್. ರಾಯ್ ಅವರ ಉದಾಹಣೆಗಳು ಎಲ್ಲರೆದುರು ಇವೆ. ಈ ಜನ ಕಾಂಗ್ರೆಸ್‌ನಿಂದ ಹೊರಹೋದವರು. ಆದರೆ ಹೊರಹೋಗುವಾಗ ಅವರಾರೂ ಗಾಂಧಿಯವರ ಅಪ್ಪಣೆ ಇಲ್ಲವೇ ಆಶೀರ್ವಾದಗಳನ್ನು ಕೇಳಿದಂತಿಲ್ಲ. ಗಾಂಧಿಯವರ ದೃಷ್ಟಿಯಿಂದ ನೋಡಿದರೆ ಮುನಶಿಯವರು ಕಾಂಗ್ರೆಸ್‌ನಿಂದ ಹೊರಬಂದ ಮೇಲಿನ ವ್ಯಕ್ತಿಗಳಿಗಿಂತ ಕಡಿಮೆ ಪಾಪಿ ಎನ್ನಿಸುತ್ತಾರೆಂದು ಯಾರೂ ಅನ್ನಲಾರರು. ಅಹಿಂಸೆಯ ತತ್ತ್ವವು ಗಾಂಧಿಯವರ ಧರ್ಮವಾಗಿದೆ. ಆ ತತ್ತ್ವವನ್ನು ಲೆಕ್ಕಿಸದೆ ಹೊರಹೋಗುವ ಮನುಷ್ಯನು ಗಾಂಧಿಯವರ ದೃಷ್ಟಿಯಿಂದ ಅಧರ್ಮಿಯೇ ಎನ್ನಬೇಕು. ಹೀಗೆ, ಮುನಶಿಯವರು ಅಧರ್ಮಿ ಹಾಗೂ ಪಾತಕಿಯಾಗಿರುವಾಗಲೂ ಅವರು ಕಾಂಗ್ರೆಸ್‌ನಿಂದ ಹೊರಹೋಗುವಾಗ ಗಾಂಧಿಯವರು ಅವರಿಗೆ ಆಶೀರ್ವಾದಗಳನ್ನು ನೀಡುವುದು, ಅವರಿಗೆ ಶುಭ ಕೋರುವುದು ಒಂದು ದೊಡ್ಡ ನಿಗೂಢ ಸಂಗತಿಯಾಗಿದೆ. ಇಲ್ಲಿಯವರೆಗೆ ಗಾಂಧಿಯವರನ್ನು ವಿರೋಧಿಸಿ ಕಾಂಗ್ರೆಸನ್ನು ತ್ಯಜಿಸಿದವರನ್ನೆಲ್ಲ ತಮ್ಮ ಹಗೆಗಳೆಂದು ಭಾವಿಸಿ, ಅವರನ್ನು ನಾಶಪಡಿಸಲು ಅವರು ಹೇಗೆ ತಮ್ಮ ಶಕ್ತಿಯನ್ನೆಲ್ಲ ವ್ಯಯಿಸಿದರೆಂಬ ಖೇದಜನಕ ಇತಿಹಾಸವು ಎಲ್ಲರಿಗೂ ತಿಳಿದಿದೆ.

ಮುನಶಿಯವರ ಬಗೆಗೆ ಭಸ್ಮಾಸುರನಂತಹ ತಮ್ಮ ನಡತೆಯನ್ನು ಬಿಟ್ಟು ಮುನಶಿಯವರ ದ್ರೋಹವನ್ನು ತಮ್ಮ ಹೊಟ್ಟೆಗೆ ಹಾಕಿಕೊಂಡು, ಅವರ ಬಗೆಗೆ ಇಷ್ಟೊಂದು ಆತ್ಮೀಯತೆಯನ್ನು ತೋರುವುದರ ಮೂಲದಲ್ಲಿ ಯಾವುದಾದರೂ ಉದ್ದೇಶ ಇರಬೇಕೆಂಬ ಸಂದೇಹ ನಮಗಂತೂ ಇದೆ. ಗಾಂಧಿ ಹಾಗೂ ಮುನಶಿಯವರು ಸೇರಿ ಹಿಂದೂ ಮಹಾ ಸಭೆಗೆ ತಡೆಯೊಡ್ಡಲೆಂದು ಈ ಆಟವನ್ನು ಹೂಡಿರಬಹುದೆಂದು ಊಹಿಸಿದರೆ ಅದು ತಪ್ಪೆಂದು ಇಂದಂತೂ ನಮಗೆ ಅನ್ನಿಸುವುದಿಲ್ಲ. ಒಂದು ಸಂಗತಿಯಂತೂ ಖಚಿತ. ಅದೆಂದರೆ ಮುಂಬೈ ಹಾಗೂ ಹೈದರಾಬಾದ್‌ಗಳಲ್ಲಿ ಹಿಂದೂ-ಮುಸಲ್ಮಾನರಲ್ಲಿ ನಡೆದ ದಂಗೆಗಳಿಂದಾಗಿ ಕಾಂಗ್ರೆಸ್‌ನ ಮೇಲಿನ ಗುಜರಾತಿ ಪ್ರಜೆಗಳ ವಿಶ್ವಾಸವು ಪೂರ್ತಿ ಹಾರಿಹೋಗಿದೆ. ಎರಡನೆಯ ಸಂಗತಿ ಎಂದರೆ, ಕಾಂಗ್ರೆಸ್‌ನ ಬಗೆಗೆ ಅಸಂತೋಷಗೊಂಡ ಗುಜರಾತಿ ಪ್ರಜೆಗಳು ಶ್ರೀಮಂತರು. ಯಾವ ಸಂಸ್ಥೆಯೂ ಯಾವ ರಾಜಕೀಯ ಸಂಸ್ಥೆಯೂ ಅವರ ದುಡ್ಡಿನ ಬೆಂಬಲವಿಲ್ಲದೆ ನೆಲೆಯನ್ನು ಕಂಡುಕೊಳ್ಳಲಾರದು. ನಾಲ್ಕನೆಯ ಸಂಗತಿ, ಹಿಂದೂ ಮಹಾ ಸಭೆಯ ನಾಯಕರು ಹಾಗೂ ಸಾವರ್ಕರ್‌ರು ಕಾಂಗ್ರೆಸ್‌ನ ಬದ್ಧ ವೈರಿಗಳು. ಈ ಸಂಗತಿ ಗಾಂಧಿ ಹಾಗೂ ಅವರ ಸಹಕಾರಿಗಳಿಗೆ ಪೂರ್ತಿ ತಿಳಿದಿರಲೇಬೇಕು. ಗುಜರಾತಿ ಸಮುದಾಯದ ಒಲವು ಹಿಂದೂ ಮಹಾ ಸಭೆಯತ್ತ ಹೊರಳಿದರೆ ಅದು ಕಾಂಗ್ರೆಸ್‌ಗೆ ಸವಾಲೊಡ್ಡುವಷ್ಟು ಪ್ರಬಲವಾದೀತೆಂಬ ಸಂಗತಿ ಕೂಡ ಗಾಂಧಿ ಹಾಗೂ ಅವರ ಸಹಕಾರಿಗಳಿಗೆ ತಿಳಿಯದಂತಹುದು ಎಂದೆನ್ನಲಾಗದು.

ಇವೆಲ್ಲ ಸಂಗತಿಗಳನ್ನು ಕುರಿತು ಯೋಚಿಸಿ ಗಾಂಧಿಯವರು ಗುಜರಾತಿ ಸಮಾಜದ ಒಲವನ್ನು ಹಿಂದೂ ಮಹಾ ಸಭೆಯತ್ತ ಹೊರಳಲು ಬಿಡುವ ಬದಲು ತಮ್ಮವನೇ ಆದ ಒಬ್ಬ ಶಿಷ್ಯನ ಕೈಯಲ್ಲಿ ಇರುವಂತೆ ಯತ್ನಿಸುವುದು ಈ ಸನ್ನಿವೇಶದಲ್ಲಿ ಅವಶ್ಯ ಎಂದರಿತು ಮುನಶಿಯವರನ್ನು ಬೇಕೆಂದೇ ಕಾಂಗ್ರೆಸ್‌ನ ಹೊರಕ್ಕೆ ಹೋಗಲು ಬಿಟ್ಟಿರಬೇಕು ಎಂದಂದರೆ ಅದರಲ್ಲಿ ತಪ್ಪೇನಾದರೂ ಆದೀತೆಂದು ನಮಗೆ ಅನ್ನಿಸುವುದಿಲ್ಲ. ಗಾಂಧಿಯವರು ಮಹಾತ್ಮರಾದರೂ ಸರ್ವಸಾಧರಣ ಮನುಷ್ಯ ಮಾತ್ರರಲ್ಲಿರುವ ವಿಕಾರಗಳಾದ ಮದ, ಮತ್ಸರ, ಢಂಬ, ಅಹಂಕಾರ, ಮೊದಲಾದವುಗಳು ಅವರಲ್ಲಿಲ್ಲ ಎಂದು ಯಾರೂ ಅನ್ನಲಾರರು. ಯವ ಗುಜರಾತಿ ಸಮಾಜದ ಆಶ್ರಯದ ಮೇಲೆ ಗಾಂಧಿಯವರು ಯಾವ ತಮ್ಮ ರಾಜಕೀಯ ಕಟ್ಟಡವನ್ನು ಕಟ್ಟಿದರೋ, ಅಂಥದರ ತಳಪಾಯವು ಈ ರೀತಿಯಾಗಿ ಕುಸಿಯುತ್ತಿರುವುದನ್ನು ಕಂಡು ನಾವನ್ನುವ ಉದ್ದೇಶದಿಂದ ಮುನಶಿಯವರನ್ನು ಕಾಂಗ್ರೆಸ್‌ನಿಂದ ಹೊರಕ್ಕೆ ಕಳುಹಿಸುವಂಥ ಉದ್ದೇಶಪೂರ್ವಕವಾದ ಯೋಜನೆಯನ್ನು ಮಾಡುವುದು ಸ್ವಾಭಾವಿಕ. ನಮ್ಮ ಅಂದಾಜು ತಪ್ಪೆಲೆಂದು ನಾವು ಬಯಸುತ್ತೇವೆ. ಭವಿಷ್ಯದಲ್ಲಿ ಏನು ನಡೆಯುವುದೋ ಅದೇ ನಿಜ. ಆದರೆ ಮುನಶಿಯವರ ಕಾಂಗ್ರೆಸ್ ತ್ಯಾಗದ ಬಗೆಗೆ ಯಾರಿಗೆ ಆಶ್ಚರ್ಯವಾಗುವುದೋ ಅವರಿಗಾಗಿ ಈ ಘಟನೆಯನ್ನು ಕುರಿತು ನಮ್ಮಲ್ಲಿ ತಲೆದೋರಿರುವ ಸಂಶಯವನ್ನು ವ್ಯಕ್ತಪಡಿಸುವುದು ನಮ್ಮ ಕರ್ತವ್ಯವಾಗಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)