varthabharthi

ವೈವಿಧ್ಯ

ಭಾರತದಲ್ಲಿ ನಿಯಂತ್ರಣವಿಲ್ಲದ ಆ್ಯಂಟಿಬಯೋಟಿಕ್ ಗಳ ಬಳಕೆ

ವಾರ್ತಾ ಭಾರತಿ : 17 Nov, 2018
ನಫೀಸ್ ಫೈಝಿ

ಎಎಂಆರ್‌ನ ಬೆದರಿಕೆಯನ್ನು ನಿಭಾಯಿಸಲು ಭಾರತವು, ಆರೋಗ್ಯ ಹಾಗೂ ಸಾಮಾಜಿಕ ಸಮಾನತೆಯ ಗುರಿಗಳನ್ನು ಒಳಗೊಂಡ ಅಗತ್ಯವಿರುವ ಶಾಸನಗಳೊಂದಿಗೆ ಸಮಗ್ರ ನೀತಿಯನ್ನು ಜಾರಿಗೆ ತರಬೇಕಾಗಿದೆ. ಲಭ್ಯತೆಯ ಕೊರತೆ ಹಾಗೂ ವೈರಾಣುಗಳ ಹೆಚ್ಚುತ್ತಿರುವ ಔಷಧಿ ನಿರೋಧಕ ಸಾಮರ್ಥ್ಯದ ಸರಪಣಿಯನ್ನು ಮುರಿಯಲು ಗುಣಮಟ್ಟದ ಆ್ಯಂಟಿಬಯೋಟಿಕ್‌ಗಳ ಲಭ್ಯತೆಯನ್ನು ಖಾತರಿಪಡಿಸಬೇಕಾಗಿದೆ.

ನಾವೀಗ ಸಾಮಾನ್ಯ ಸೋಂಕುರೋಗಗಳು ಕೂಡಾ ಗುಣವಾಗಲು ಸಾಧ್ಯವಾಗದಿರುವಂತಹ ಹಾಗೂ ರೋಗನಿರೋಧಕ ಔಷಧಿಗಳಿಗೆ ಪ್ರತಿರೋಧ ತೋರುವ ಸಾಮರ್ಥ್ಯವನ್ನು ವೈರಸ್, ಬ್ಯಾಕ್ಟೀರಿಯಾಗಳು ಪಡೆಯು ತ್ತಿರುವುದರಿಂದ (ಎಎಂಆರ್), ಅಕಾಲಿಕ ಮರಣಗಳು ಸಂಭವಿಸುತ್ತಿರುವ ಯುಗವನ್ನು ಪ್ರವೇಶಿಸುತ್ತಿದ್ದೇವೆ. ಅಂದಾಜು 7 ಲಕ್ಷ ಜನರು ವಾರ್ಷಿಕವಾಗಿ ಎಎಂಆರ್‌ನಿಂದಾಗಿ ಸಾವನ್ನಪ್ಪುತ್ತಿರುವುದಾಗಿ ಅಂದಾಜಿಸಲಾಗಿದೆ. 2050ರೊಳಗೆ ಎಎಂಆರ್‌ನಿಂದಾಗಿ ಸಾವಿಗೀಡಾಗುವವರ ಸಂಖ್ಯೆ 1 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ.
 ಅಪೌಷ್ಟಿಕತೆ ಹಾಗೂ ಅತಿಸಾರ (ಡಯೋರಿಯಾ)ದಂತಹ ರೋಗಗಳು ಬಹುತೇಕವಾಗಿ ಬಡವರನ್ನು ಕಾಡುತ್ತವೆ. ಆದರೆ ಎಎಂಆರ್ ಎಂಬುದು ಬಡವ, ಶ್ರೀಮಂತರೆನ್ನದೆ ಜಗತ್ತಿನಾದ್ಯಂತ ಸಮಾಜದ ಎಲ್ಲಾ ವರ್ಗಗಳಿಗೂ ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಆದಾಗ್ಯೂ ಇದು ನೈರ್ಮಲ್ಯ ಹಾಗೂ ಆರೋಗ್ಯ ಮೂಲ ಸೌಕರ್ಯಗಳು ದುರ್ಬಲವಾಗಿರುವ ಕಡಿಮೆ ಹಾಗೂ ಮಧ್ಯಮ ಆದಾಯ ವರ್ಗದ ದೇಶಗಳಲ್ಲಿ ಅತ್ಯಧಿಕವಾಗಿದೆ.
 68ನೇ ಜಾಗತಿಕ ಆರೋಗ್ಯ ಅಸೆಂಬ್ಲಿಯು ರೋಗನಿರೋಧಕ ಔಷಧಿಗಳ ವಿರುದ್ಧ ಸೂಕ್ಷ್ಮಾಣುಜೀವಿಗಳ ಪ್ರತಿರೋಧ ಸಾಮರ್ಥ್ಯದ (ಎಎಂಆರ್)ಕುರಿತ ಜಾಗತಿಕ ಕ್ರಿಯಾ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಣಯವೊಂದನ್ನು 2015ರಲ್ಲಿ ಅಂಗೀಕರಿಸಿದ ಬಳಿಕ, ಭಾರತದಲ್ಲಿ ಈ ಬಗ್ಗೆ ರಾಜಕೀಯ ಜಾಗೃತಿ ಹೆಚ್ಚಿತು.
ತರುವಾಯ 2017ರ ಎಪ್ರಿಲ್ 19ರಂದು, ಭಾರತದ ಆರೋಗ್ಯ ಸಚಿವಾಲಯದ ನೇತೃತ್ವದ ‘ಎಎಂಆರ್ ನಿಯಂತ್ರಣದ ಕುರಿತ ಅಂತರ್ ಸಚಿವಾಲಯ ಸಮಾಲೋಚನಾ ಸಮಾವೇಶವು’, ಭಾರತದ ಸಮಗ್ರ ಹಾಗೂ ಬಹುವರ್ಗೀಯ ರಾಷ್ಟ್ರೀಯ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡಿರುವುದಾಗಿ ಘೋಷಿಸಿತು. ಒಂದು ಆರೋಗ್ಯ ಕಾರ್ಯಸೂಚಿಯಲ್ಲಿನ ಸಮಸ್ಯೆಗಳನ್ನು ನಿಭಾಯಿಸಲು ವಿವಿಧ ಸಚಿವಾಲಯಗಳನ್ನು ಒಳಪಡಿಸುವ ಭಾರತದ ಯೋಜನೆಯು ದೃಢವಾದುದಾಗಿದೆ. ಒಂದು ವೇಳೆ ಆ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಅದು ಉತ್ತಮ ಫಲಿತಾಂಶಗಳನ್ನು ನೀಡಬಲ್ಲದು. ಆದರೆ ಈ ಕ್ರಿಯಾ ಯೋಜನೆಯ ಅನುಷ್ಠಾನಕ್ಕೆ ಯಾವುದೇ ರಾಜಕೀಯ ಹಾಗೂ ಅರ್ಥಿಕ ಬದ್ಧತೆಯಿಲ್ಲದಿದ್ದರೆ, ಅದು ಕೇವಲ ಕಾಗದಪತ್ರದಲ್ಲಷ್ಟೇ ಅದ್ಭುತವಾಗಿ ಕಂಡೀತೇ ಹೊರತು, ನಿಷ್ಪ್ರಯೋಜಕವೆನಿಸಲಿದೆ.
ಆ್ಯಂಟಿಬಯೋಟಿಕ್‌ಗಳ ವೈಚಾರಿಕ ಬಳಕೆಯನ್ನು ಶಿಫಾರಸು ಮಾಡುವುದು, ಸೋಂಕು ನಿಯಂತ್ರಣ ಪದ್ಧತಿಗಳ ಅನುಷ್ಠಾನ ಹಾಗೂ ಸಂಬಂಧಪಟ್ಟ ಸಾರ್ವಜನಿಕ ಆರೋಗ್ಯ ಪಾಲನಾ ಕ್ರಮಗಳ ಮೂಲಕ ಎಎಂಆರ್ ಕ್ರಿಯಾ ಯೋಜನೆಯು ಇತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಷ್ಟೇ ದೃಢವಾಗಿದ್ದರೂ, ಪ್ರಬಲವಾದ ಆರೋಗ್ಯ ವ್ಯವಸ್ಥೆಯಿಲ್ಲದೆ ಹೋದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಕ್ರಮಗಳು ಸೀಮಿತ ಪರಿಣಾಮವನ್ನು ಬೀರುತ್ತವೆ.
 ಸಮರ್ಪಕವಾದ ನಿಯಂತ್ರಣ ಪದ್ಧತಿಯಿಲ್ಲದೆ, ಆ್ಯಂಟಿಬಯೋಟಿಕ್‌ಗಳ ಪದೇಪದೇ ಬಳಕೆಯಿಂದ ಎಎಂಆರ್ ಉಂಟಾಗುವ ಸಾಧ್ಯತೆ ಅಧಿಕವಾಗಿದೆ. ಭಾರತದಂತೆ ಇನ್ನೊಂದು ಬೆಳೆಯುತ್ತಿರುವ ಆರ್ಥಿಕತೆಯ ದೇಶವಾದ ಬ್ರೆಝಿಲ್‌ನಲ್ಲಿ ಖಾಸಗಿ ಆರೋಗ್ಯ ಕ್ಲಿನಿಕ್‌ಗಳ ಸಾಂದ್ರತೆಯಿಂದಾಗಿ, ಅಧಿಕವಾದ ಆ್ಯಂಟಿಬಯೋಟಿಕ್‌ಗಳ ಮಾರಾಟಕ್ಕೆ ತೀವ್ರ ನಿರ್ಬಂಧಗಳಿರುವ ಹೊರತಾಗಿಯೂ, ಅವುಗಳು ಔಷಧಿಯ ಅಂಗಡಿಗಳಲ್ಲಿ ಬೇಕಾಬಿಟ್ಟಿಯಾಗಿ ದೊರೆಯುತ್ತವೆ.
  ಅಧಿಕ ಆದಾಯದ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಆ್ಯಂಟಿ ಬಯೋಟಿಕ್‌ಗಳ ಬಳಕೆ ಕಡಿಮೆಯಿದ್ದರೂ, ಅಲ್ಲಿ ಪ್ರಜೆಗಳ ರೋಗನಿರೋಧಕ ಸಾಮರ್ಥ್ಯ ಹೆಚ್ಚಿರುವುದನ್ನು ಜಾಗತಿಕ ಎಎಂಆರ್ ನಕಾಶೆಯು ಬೆಟ್ಟು ಮಾಡಿ ತೋರಿಸುತ್ತವೆ. ಎಎಂಆರ್ ನಿಯಂತ್ರಣಕ್ಕೆ ಆ್ಯಂಟಿಬಯೋಟಿಕ್‌ಗಳ ಬಳಕೆಯನ್ನು ಕಡಿಮೆಗೊಳಿಸುವುದು ಮಾತ್ರವೇ ಸಾಕಾಗದು ಎಂದು 73 ದೇಶಗಳಲ್ಲಿ ನಡೆಸಿದ ಸಮೀಕ್ಷಾ ವರದಿಯೊಂದು ತಿಳಿಸಿದೆ. ಕಡಿಮೆ ಆರೋಗ್ಯ ವೆಚ್ಚ, ಮೂಲಸೌಕರ್ಯಗಳು ಅದರಲ್ಲೂ ವಿಶೇಷವಾಗಿ ನೈರ್ಮಲ್ಯ ಮೂಲಸೌಕರ್ಯಗಳು ಕಳಪೆಯಾಗಿರುವಲ್ಲಿ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ನೀಡುವಂತಹ ದುರಾಡಳಿತವಿರುವಲ್ಲಿ ಎಎಂಆರ್ ಪಿಡುಗು ಉಲ್ಬಣಿಸಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಕೇಂದ್ರ ಹಾಗೂ ರಾಜ್ಯ ವೆಚ್ಚ ಸೇರಿದಂತೆ ಭಾರತದ ಸಾರ್ವಜನಿಕ ಆರೋಗ್ಯ ಬಜೆಟ್ ಕೇವಲ ಒಟ್ಟು ಆಯವ್ಯಯದ 1.3 ಶೇಕಡಾದಷ್ಟಾಗಿದೆ. ಆರೋಗ್ಯ ಸಂಬಂಧವೆಚ್ಚಗಳಿಗಾಗಿ ತಮ್ಮ ಸ್ವಂತ ಕಿಸೆಯಿಂದ ಅಪಾರ ಹಣವನ್ನು ವೆಚ್ಚಮಾಡುತ್ತಿರುವುದರಿಂದಾಗಿ ಲಕ್ಷಾಂತರ ಮಂದಿ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಬಡವರಾಗತೊಡಗಿದ್ದಾರೆ. ಭಾರೀ ಪ್ರಚಾರ ಪಡೆದ ಸ್ವಚ್ಛ ಭಾರತ ಅಭಿಯಾನದ ಹೊರತಾಗಿಯೂ 4.10 ಕೋಟಿ ಮಂದಿ ಬಯಲುಶೌಚವನ್ನು ಅವಲಂಬಿಸಿರುವುದು ದೇಶದ ಅತಿ ದೊಡ್ಡ ನಗರ ನೈರ್ಮಲೀಕರಣ ಸಮಸ್ಯೆಯಾಗಿ ಪರಿಣಮಿಸಿದೆ.
ಆರೋಗ್ಯ ಪಾಲನೆ ವರ್ಸಸ್ ಆರೋಗ್ಯ ವಿಮೆ
 ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಸಾರ್ವತ್ರಿಕ ಆರೋಗ್ಯ ಪಾಲನೆಯು ವಿಮಾ ಉದ್ದೇಶದ, ಖಾಸಗಿಸಂಸ್ಥೆಗಳು ಒದಗಿಸುವ ಸಾರ್ವತ್ರಿಕ ಆರೋಗ್ಯ ಸುರಕ್ಷಾ ಯೋಜನೆಯಾಗಿ ಪರಿಣಮಿಸಿವೆ. ಇತ್ತೀಚೆಗೆ ಆರಂಭಿಸಲಾದ ‘ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನಾ’ದಂತಹ ವಿಮಾ ಸುರಕ್ಷೆಯ ಕಾರ್ಯಕ್ರಮಗಳು ಕೇವಲ ಆಸ್ಪತ್ರೆಯನ್ನು ಆಧರಿಸಿದ ಆರೋಗ್ಯ ಶುಶ್ರೂಷೆಯಷ್ಟೇ ಆಗಿವೆ. ಈ ಯೋಜನೆಯನ್ನು ನಿರ್ವಹಿಸುವ ಖಾಸಗಿ ಸಂಸ್ಥೆಗಳು ವಿಚಾರರಹಿತವಾಗಿ ರೋಗಿಗಳಿಗೆ ಆ್ಯಂಟಿ ಬಯೋಟಿಕ್‌ಗಳನ್ನು ಶಿಫಾರಸು ಮಾಡುತ್ತವೆ. ಇದೇ ವೇಳೆ, ಹೊರ ರೋಗಿಗಳಿಗೆ ಅನಗತ್ಯವಾಗಿ ಆ್ಯಂಟಿಬಯೋಟಿಕ್‌ಗಳನ್ನು ಕೂಡಾ ನೀಡಲಾಗುತ್ತಿದೆ. ಅತಿಸಾರ (ಡಯೋರಿಯಾ) ಹಾಗೂ ಶ್ವಾಸನಾಳದ ಸೋಂಕುಗಳಿಗೆ ಅವೈಚಾರಿಕವಾಗಿ ಆ್ಯಂಟಿಬಯೋಟಿಕ್‌ಗಳನ್ನು ನೀಡುವುದು ಕೂಡಾ ಈಗ ಸಾಮಾನ್ಯವಾಗಿ ಬಿಟ್ಟಿದೆ.
 ಇದಕ್ಕಿಂತಲೂ ಹೆಚ್ಚಾಗಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ (ಪಿಎಂಜೆವೈ) ಆರೋಗ್ಯಪಾಲನಾ ಯೋಜನೆಗಳ ಜಾರಿಗೆ ಖಾಸಗಿ ಸಂಸ್ಥೆಗಳಿಗೆ ವಹಿಸಲು ಸರಕಾರವು ಅವಲಂಬಿಸಿರುವುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಇನ್ನಷ್ಟು ಅವಗಣನೆಗೆ ಕಾರಣವಾಗಿದೆ. ಒಂದು ವೇಳೆ ಆರೋಗ್ಯ ಬಜೆಟ್‌ನ ಅನುದಾನವನ್ನು ಹೆಚ್ಚಿಸದೇ ಹೋದಲ್ಲಿ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ದುರ್ಬಲವಾಗಿಯೇ ಮುಂದುವರಿದಲ್ಲಿ ಎಎಂಆರ್‌ನ್ನು ನಿಯಂತ್ರಿಸುವ ಯೋಜನೆಗಳು ವಿಫಲವಾಗುವುದಂತೂ ಖಂಡಿತ.
ಸಂಪರ್ಕದ ಕೊರತೆ
ಆ್ಯಂಟಿಬಯೋಟಿಕ್‌ಗಳ ಅವೈಚಾರಿಕ ಬಳಕೆಯು, ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚುತ್ತಿರುವ ಬೆದರಿಕೆಯಾಗಿರುವ ಹೊರತಾಗಿಯೂ, ಭಾರತವು ಈಗ ಕೂಡಾ ಸಾಮಾನ್ಯ ಅನಾರೋಗ್ಯಗಳ ಚಿಕಿತ್ಸೆಗೆ ಅಗತ್ಯವಿರುವ ಆ್ಯಂಟಿ ಬಯೋಟಿಕ್‌ಗಳ ಕೊರತೆಯಂತಹ ಹಳೆಯ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಜಾಗತಿಕ ಆರೋಗ್ಯ ಸಂಸ್ಥೆ ಪ್ರಕಟಿಸಿದ ಅವಶ್ಯಕ ಔಷಧಿಗಳ ಪಟ್ಟಿಯ 2017ರ ಆವೃತ್ತಿಯು ಆ್ಯಂಟಿ ಬಯೋಟಿಕ್‌ಗಳನ್ನು ಬಳಕೆ, ಕಣ್ಗಾವಲು ಹಾಗೂ ಕಾದಿರಿಸು ಎಂಬುದಾಗಿ ಮೂರು ಗುಂಪುಗಳಾಗಿ ವಿಭಜಿಸಿದೆ. ಬಳಕೆ (ಆ್ಯಕ್ಸೆಸ್) ಗುಂಪಿನ ಆ್ಯಂಟಿಬಯೋಟಿಕ್‌ಗಳು ವ್ಯಾಪಕವಾಗಿ ಲಭ್ಯವಿರುವ, ಮಿತದರದ ಹಾಗೂ ಗುಣಮಟ್ಟ ಖಾತರಿಯದ್ದಾಗಿವೆ. ಕಣ್ಗಾವಲು (ವಾಚ್) ಗುಂಪಿಗೆ ಸೇರಿದ ಆ್ಯಂಟಿ ಬಯೋಟಿಕ್‌ಗಳು ಅಧಿಕ ಪ್ರತಿರೋಧ ಸಾಮರ್ಥ್ಯವನ್ನು ಹೊಂದಿವೆ. ಆದರೆ ಅದನ್ನು ಕೆಲವು ನಿರ್ದಿಷ್ಟ ರೋಗಲಕ್ಷಣಗಳಿಗೆ ಸೀಮಿತ ಸಂಖ್ಯೆಯಲ್ಲಿ ಬಳಸಬೇಕಾಗುತ್ತದೆ. ಕಾದಿರಿಸಲ್ಪಟ್ಟ (ರಿಸರ್ವ್ ಗ್ರೂಪ್) ಗುಂಪಿನ ಆ್ಯಂಟಿ ಬಯೋಟಿಕ್‌ಗಳು ಎಲ್ಲಾ ಪರ್ಯಾಯ ಔಷಧಿ ಮಾರ್ಗಗಳು ವಿಫಲವಾದಾಗ ಮಾತ್ರ ನಿರ್ದಿಷ್ಟ ರೋಗಿಗಳಿಗೆ ನೀಡಲು ಬಳಸಬೇಕಾಗಿದೆ.
ಮಾನವ ಆರೋಗ್ಯಕ್ಕಿಂತ ಬೌದ್ಧಿಕ ಸುರಕ್ಷೆ ಹಾಗೂ ಲಾಭಕ್ಕೆ ಆದ್ಯತೆಯನ್ನು ನೀಡುವ ಪ್ರಸಕ್ತ ಸನ್ನಿವೇಶದಲ್ಲಿ ಸಾರ್ವತ್ರಿಕ ಬಳಕೆಗೆ ಸೇರಿದ ಆ್ಯಂಟಿಬಯೋಟಿಕ್‌ಗಳು ಅಪಾಯಕ್ಕೆ ಸಿಲುಕಿವೆ. ಉದಾಹರಣೆಗೆ, 2015ರಿಂದೀಚೆಗೆ ಭಾರತದಲ್ಲಿ ಬೆಂಝತೈನ್ ಪೆನ್ಸಿಲಿನ್ ಆ್ಯಂಟಿಬಯೋಟಿಕ್‌ನ ದಾಸ್ತಾನಿನ ಕೊರತೆ ಕಾಡುತ್ತಲೇ ಇದೆ. ಬೆಂಝತೈನ್ ಪೆನ್ಸಿಲಿನ್, ಪ್ರವೇಶ (ಆ್ಯಕ್ಸೆಸ್) ಗುಂಪಿನ ಆ್ಯಂಟಿಬಯೋಟಿಕ್ ಆಗಿದ್ದು, ಗೊನೊರಿಯಾ ಹಾಗೂ ಸಿಫಿಲಿಸ್ ಸೇರಿದಂತೆ ಹಲವಾರು ಸೋಂಕುಗಳ ಚಿಕಿತ್ಸೆಗೆ ಬಳಕೆಯಾಗುತ್ತಿದೆ. ದಿಲ್ಲಿಯೊಂದರಲ್ಲೇ, ಆ್ಯಂಟಿಬಯೋಟಿಕ್ ಕೊರತೆಯಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಈ ಎರಡು ಕಾಯಿಲೆಗಳ ಚಿಕಿತ್ಸೆಯಲ್ಲಿ ಸಮಸ್ಯೆಗಳು ಎದುರಾಗಿವೆ. ಒಂದೆಡೆ ನೈಸ್ಸೆರಿಯಾ ಗೊನೊರಿಯಾ ರೋಗಾಣುವು ಪ್ರಚಲಿತದಲ್ಲಿರುವ ಆ್ಯಂಟಿಬಯೋಟಿಕ್‌ಗಳ ವಿರುದ್ಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವುದರಿಂದ ನೂತನ ಆ್ಯಂಟಿಬಯೋಟಿಕ್‌ಗಳನ್ನು ಸಂಶೋಧಿಸುವ ಹಾಗೂ ಅಭಿವೃದ್ಧಿಪಡಿಸುವ ಅಗತ್ಯವುಂಟಾಗಿದೆ. ಇನ್ನೊಂದೆಡೆ ಪೆನ್ಸಿಲಿನ್ ಔಷಧಿಯ ಅಲಭ್ಯತೆಯು, ಇನ್ನಷ್ಟು ರೋಗ ನಿರೋಧಕ ಸಾಮರ್ಥ್ಯದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಉನ್ನತ ಮಟ್ಟದ ಸಾರ್ವಜನಿಕ ಆರೋಗ್ಯ ವೌಲ್ಯದ ಕಾರಣ ಪೆನ್ಸಿಲಿನ್ ಹಾಗೂ ಇತರ ಆ್ಯಂಟಿಬಯೋಟಿಕ್‌ಗಳ ತಯಾರಕರು ಪೂರ್ವಭಾವಿ ನೋಟಿಸ್ ನೀಡದೆ ಏಕಾಏಕಿಯಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಸರಕಾರವು ತನ್ನ ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿ ಈ ಮಹತ್ವದ ಆ್ಯಂಟಿಬಯೋಟಿಕ್‌ಗಳ ಉತ್ಪಾದನೆ ಹಾಗೂ ಪೂರೈಕೆಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಮಾರ್ಗೋಪಾಯಗಳನ್ನು ರೂಪಿಸಬೇಕಾಗಿದೆ.
ಎಎಂಆರ್‌ನ ಬೆದರಿಕೆಯನ್ನು ನಿಭಾಯಿಸಲು ಭಾರತವು, ಆರೋಗ್ಯ ಹಾಗೂ ಸಾಮಾಜಿಕ ಸಮಾನತೆಯ ಗುರಿಗಳನ್ನು ಒಳಗೊಂಡ ಅಗತ್ಯವಿರುವ ಶಾಸನಗಳೊಂದಿಗೆ ಸಮಗ್ರ ನೀತಿಯನ್ನು ಜಾರಿಗೆ ತರಬೇಕಾಗಿದೆ. ಲಭ್ಯತೆಯ ಕೊರತೆ ಹಾಗೂ ವೈರಾಣುಗಳ ಹೆಚ್ಚುತ್ತಿರುವ ಔಷಧಿ ನಿರೋಧಕ ಸಾಮರ್ಥ್ಯದ ಸರಪಣಿಯನ್ನು ಮುರಿಯಲು ಗುಣಮಟ್ಟದ ಆ್ಯಂಟಿಬಯೋಟಿಕ್‌ಗಳ ಲಭ್ಯತೆಯನ್ನು ಖಾತರಿಪಡಿಸಬೇಕಾಗಿದೆ. ಒಂದು ವೇಳೆ ಹಾಗೆ ಮಾಡದೆ ಯಾವುದೇ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ಯತ್ನಿಸುವುದು ನಳ್ಳಿ ನೀರನ್ನು ಹರಿಯಲು ಬಿಟ್ಟು, ನೆಲವನ್ನು ಗುಡಿಸಿದಂತಾಗುವುದು.
ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)