varthabharthiಆರೋಗ್ಯ

ಇಂದು ರಾಷ್ಟ್ರೀಯ ಅಪಸ್ಮಾರ ದಿನ: ಈ ರೋಗದ ಕುರಿತು ಏಳು ಸಾಮಾನ್ಯ ಮಿಥ್ಯೆಗಳಿಲ್ಲಿವೆ

ವಾರ್ತಾ ಭಾರತಿ : 17 Nov, 2018

ವಿಶ್ವಾದ್ಯಂತ ಜನರನ್ನು ಅತ್ಯಂತ ಸಾಮಾನ್ಯವಾಗಿ ಕಾಡುವ ನರವೈಜ್ಞಾನಿಕ ರೋಗಗಳಲ್ಲಿ ಅಪಸ್ಮಾರ ಎರಡನೇ ಸ್ಥಾನದಲ್ಲಿದೆ. 2018ರ ಭಾರತೀಯ ಅಧ್ಯಯನವೊಂದರಂತೆ ವಿಶ್ವಾದ್ಯಂತ 70 ಮಿಲಿಯನ್ ಮತ್ತು ಭಾರತದಲ್ಲಿ ಸುಮಾರು 12 ಮಿ.ಜನರು ಈ ರೋಗದಿಂದ ನರಳುತ್ತಿದ್ದಾರೆ. ಅಂದರೆ ವಿಶ್ವದ ಆರನೇ ಒಂದರಷ್ಟು ರೋಗಿಗಳು ಭಾರತದಲ್ಲಿಯೇ ಇದ್ದಾರೆ ಮತ್ತು ಈ ದೇಶದಲ್ಲಿ ಇದು ಅಪರೂಪದ ಕಾಯಿಲೆಯಲ್ಲ. ಅಪಸ್ಮಾರ ಅಥವಾ ಮೂರ್ಚೆರೋಗ ಒಂದು ಶಾಪ ಅಥವಾ ಕೆಟ್ಟಶಕ್ತಿಯ ಕಾಟ ಎಂದು ಪರಿಗಣಿಸುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಹೀಗಾಗಿ ಹೆಚ್ಚಿನ ಅಪಸ್ಮಾರ ರೋಗಿಗಳು ಪರಿತ್ಯಕ್ತರಾಗಿರುತ್ತಾರೆ ಅಥವಾ ಅವರ ವಿರುದ್ಧ ತಾರತಮ್ಯವನ್ನು ಪ್ರದರ್ಶಿಸಲಾಗುತ್ತದೆ. ವೈದ್ಯಕೀಯ ವಿಜ್ಞಾನ ಕ್ಷೇತ್ರ ಇಷ್ಟೊಂದು ಮುಂದುವರಿದಿದ್ದರೂ ಇಂದಿಗೂ ಅಪಸ್ಮಾರವನ್ನು ಭಾರತದಲ್ಲಿ ಸಾಮಾಜಿಕ ಕಳಂಕದ ಭಾಗವಾಗಿ ಪರಿಗಣಿಸಲಾಗುತ್ತಿದೆ ಮತ್ತು ಇದರಿಂದಾಗಿ ಜನರು ಹಲವಾರು ಮೂಢನಂಬಿಕೆಗಳಿಗೆ ಅಂಟಿಕೊಂಡಿದ್ದಾರೆ.

ಇಂದು ನ.17,ರಾಷ್ಟ್ರೀಯ ಅಪಸ್ಮಾರ ದಿನ. ಈ ಸಂದರ್ಭದಲ್ಲಿ ಅಪಸ್ಮಾರ ರೋಗದ ಕುರಿತು ಪ್ರಚಲಿತವಿರುವ ಕೆಲವು ಮಿಥ್ಯೆಗಳು ಮತ್ತು ತಪ್ಪುಗ್ರಹಿಕೆಗಳನ್ನು ನಿವಾರಿಸಲು ಇದೊಂದು ಪುಟ್ಟ ಪ್ರಯತ್ನ...

► ಅಪಸ್ಮಾರ ದೇವರ ಶಾಪ

ಖಂಡಿತ ಅಲ್ಲ. ಭೂತಪ್ರೇತಗಳಾಗಲಿ,ಯಾವುದೇ ಅತೀಂದ್ರಿಯ ಶಕ್ತಿಯಾಗಲಿ, ದೇವರ ಸಿಟ್ಟು ಅಥವಾ ಶಾಪವಾಗಲೀ ಈ ರೋಗಕ್ಕೆ ಕಾರಣವಲ್ಲ. ವಾಸ್ತವದಲ್ಲಿ ಅದು ಚಿಕಿತ್ಸೆ ಅಗತ್ಯವಾಗಿರುವ ಮಧುಮೇಹ ಮತ್ತು ಖಿನ್ನತೆಯಂತಹ ಸಾಮಾನ್ಯ ವೈದ್ಯಕೀಯ ಸ್ಥಿತಿಯಾಗಿದೆ. ಇದೊಂದು ನರವೈಜ್ಞಾನಿಕ ರೋಗವಾಗಿದ್ದು,ಮಿದುಳಿನ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ವ್ಯಕ್ತಿಯಲ್ಲಿ ಸೆಳವುಗಳಿಗೆ ಕಾರಣವಾಗುತ್ತದೆ.

► ಅದು ಸಾಂಕ್ರಾಮಿಕ ರೋಗವಾಗಿದೆ

 ಅಲ್ಲ. ಅಪಸ್ಮಾರದಿಂದ ಬಳಲುತ್ತಿರುವ ವ್ಯಕ್ತಿಯನ್ನು ಸ್ಪರ್ಶಿಸುವುದರಿಂದ ಈ ರೋಗವು ಹರಡುವುದಿಲ್ಲ. ರೋಗಿಯ ಊಟದ ಪಾತ್ರೆಗಳನ್ನು ಬಳಸುವುದರಿಂದ ಅಥವಾ ಆತನ ಜೊಲ್ಲಿನ ಸಂಪರ್ಕದಿಂದ ಅಪಸ್ಮಾರವು ತಮಗೂ ತಗುಲುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಇದು ಸತ್ಯವಲ್ಲ. ಹೀಗಾಗಿ ಅಪಸ್ಮಾರದ ಆಘಾತದಿಂದ ಒದ್ದಾಡುತ್ತಿರುವ ವ್ಯಕ್ತಿ ನಿಮಗೆ ಕಂಡುಬಂದಾಗ ಆತನನ್ನು ಸ್ಪರ್ಶಿಸಿದರೆ ರೋಗವು ಹರಡುತ್ತದೆ ಎಂಬ ಭೀತಿಯನ್ನು ಬದಿಗಿಟ್ಟು ಆತನಿಗೆ ಸಾಧ್ಯವಾದಷ್ಟು ನೆರವಾಗಲು ಪ್ರಯತ್ನಿಸಿ.

► ಅಪಸ್ಮಾರ ರೋಗಿಗಳು ಮಾನಸಿಕ ಅಸ್ವಸ್ಥರು

ಇದೊಂದು ಸಂಪೂರ್ಣ ತಪ್ಪುಗ್ರಹಿಕೆ. ಅಪಸ್ಮಾರ ಮಾನಸಿಕ ರೋಗವಲ್ಲ. ಅದು ಉದ್ವೇಗ ಮತ್ತು ಖಿನ್ನತೆಯಂತಹ ಮನಃಸ್ಥಿತಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿದೆ ಮತ್ತು ಇದು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ಆದರೆ ಅಪಸ್ಮಾರ ರೋಗಿಯನ್ನು ಮಾನಸಿಕ ಅಸ್ವಸ್ಥ ಎನ್ನುವುದು ಸಂಪೂರ್ಣ ತಪ್ಪಾಗಿದೆ ಮತ್ತು ಅದು ಮಾನವೀಯವೂ ಅಲ್ಲ.

► ಈರುಳ್ಳಿ ಅಥವಾ ಚಾವಿ ರೋಗಿಯ ಒದ್ದಾಟವನ್ನು ನಿಲ್ಲಿಸುತ್ತದೆ

ಇದು ಸಂಪೂರ್ಣವಾಗಿ ತಪ್ಪುಕಲ್ಪನೆಯಾಗಿದೆ. ಮೂರ್ಚೆರೋಗವು ಉಲ್ಬಣಿಸಿ ಒದ್ದಾಡುತ್ತಿರುವ ವ್ಯಕ್ತಿಯ ಕೈಗಳಲ್ಲಿ ಲೋಹದ ಚಾವಿಗಳನ್ನಿರಿದರೆ ಅಥವಾ ಆತ ಈರುಳ್ಳಿ ಇಲ್ಲವೇ ಕೊಳಕು ಸಾಕ್ಸ್ ಮೂಸುವಂತೆ ಮಾಡಿದರೆ ಕೈಕಾಲುಗಳಲ್ಲಿನ ಸೆಳವು ನಿಲ್ಲುತ್ತದೆ ಎಂದು ಹೆಚ್ಚಿನವರು ನಂಬಿಕೊಂಡಿದ್ದಾರೆ. ಆದರೆ ಅಪಸ್ಮಾರ ರೋಗಿಗಳು ಮತ್ತು ಅವರ ಕುಟುಂಬದವರು ಇಂತಹ ವಿವೇಚನೆರಹಿತ ನಂಬಿಕೆಗಳಿಗೆ ಬಲಿಯಾಗಬಾರದು.

► ಸೆಳವು ಉಂಟಾದಾಗ ರೋಗಿಯು ನಾಲಿಗೆಯನ್ನು ನುಂಗುತ್ತಾನೆ

ಮಾನವನ ನಾಲಿಗೆಯನ್ನು ನುಂಗಲು ಸಾಧ್ಯವಿಲ್ಲ ಎನ್ನುವುದು ನೆನಪಿನಲ್ಲಿರಲಿ. ಆದರೆ ಸೆಳವು ಉಂಟಾದಾಗ ವ್ಯಕ್ತಿಯು ತನ್ನ ನಾಲಿಗೆಯನ್ನು ಕಚ್ಚಿಕೊಂಡು ಗಾಯ ಮಾಡಿಕೊಳ್ಳಬಹುದು ಅಥವಾ ನಾಲಿಗೆಯು ಹಿಮ್ಮುಖವಾಗಿ ಹೊರಳಿಕೊಂಡು ಉಸಿರಾಟದ ಮಾರ್ಗದಲ್ಲಿ ಅಡ್ಡಿಯನ್ನುಂಟುಮಾಡಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ವ್ಯಕ್ತಿಯೋರ್ವ ಅಪಸ್ಮಾರದ ಸೆಳವಿನಲ್ಲಿದ್ದರೆ ಆತನ ಬಾಯಿಯಲ್ಲಿ ಬಟ್ಟೆಯ ತುಂಡನ್ನಿರಿಸಿ ಮಗ್ಗುಲಾಗಿ ಮಲಗಿಸಿದರೆ ಆತ ನಾಲಿಗೆಯನ್ನು ಕಚ್ಚಿಕೊಳ್ಳುವುದು ತಪ್ಪುತ್ತದೆ.

► ಸೆಳವು ಉಂಟಾದಾಗ ರೋಗಿಯನ್ನು ನಿರ್ಬಂಧಿಸಬೇಕು

ಈ ಕೆಲಸವನ್ನು ಖಂಡಿತ ಮಾಡಕೂಡದು. ಸೆಳವು ಬಂದಿದ್ದಾಗ ವ್ಯಕ್ತಿಯನ್ನು ನೆಲದಲ್ಲಿ ಅದುಮಿ ಹಿಡಿಯಬಾರದು,ಬದಲಿಗೆ ಸೆಳವು ತನ್ನ ಪಾಡಿಗೆ ತಾನು ಮುಂದುವರಿಯಲು ಅವಕಾಶ ನೀಡಬೇಕು. ಅಲ್ಲದೆ ಆಘಾತವುಂಟಾಗಿದ್ದಾಗ ಏನನ್ನಾದರೂ ಬಾಯಿಯಲ್ಲಿ ಬಲವಂತದಿಂದ ತುರುಕಿಸಬಾರದು.

► ಅಪಸ್ಮಾರ ರೋಗಿಗಳಿಗೆ ಸಹಜ ಕೆಲಸಗಳು ಮತ್ತು ಸಹಜ ಬದುಕು ಸಾಧ್ಯವಿಲ್ಲ

ಮಾನಸಿಕ ವೈಕಲ್ಯಗಳೊಂದಿಗೆ ಜನಿಸಿದ ಮಕ್ಕಳನ್ನು ಬಿಟ್ಟರೆ ಅಪಸ್ಮಾರ ರೋಗಿಗಳೂ ಸಾಮಾನ್ಯ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ ಮತ್ತು ಇತರರಂತೆ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ಸಮರ್ಥರಾಗಿರುತ್ತಾರೆ. ಅಲ್ಲದೆ ಸೂಕ್ತ ಔಷಧಿಗಳು ಮತ್ತು ಚಿಕಿತ್ಸೆಯೊಂದಿಗೆ ಅವರು ಸಹಜ ಬದುಕನ್ನೂ ನಡೆಸಬಹುದು. ಅವರು ದಡ್ಡರಾಗಿರುತ್ತಾರೆ,ಓದುವುದರಲ್ಲಿ ಮತ್ತು ಕೆಲಸದಲ್ಲಿ ಮುಂದುವರಿಯುವುದಿಲ್ಲ,ಭವಿಷ್ಯದಲ್ಲಿ ಅವರಿಗೆ ಮಕ್ಕಳಾಗಲು ಸಾಧ್ಯವಿಲ್ಲ ಇತ್ಯಾದಿಗಳೆಲ್ಲ ಶುದ್ಧ ತಪ್ಪುಕಲ್ಪನೆಗಳಾಗಿವೆ.

ಅಪಸ್ಮಾರ ಈಗ ಗಂಭೀರ ಕಾಯಿಲೆಯಾಗಿ ಉಳಿದುಕೊಂಡಿಲ್ಲ,ಆದರೆ ಈಗಲೂ ದೇಶದ ಹೆಚ್ಚಿನ ಭಾಗಗಳಲ್ಲಿ ಇದನ್ನೊಂದು ಚಿಕಿತ್ಸೆಯಿಲ್ಲದ ಕಾಯಿಲೆ ಎಂದೇ ಭಾವಿಸಲಾಗುತ್ತಿದೆ. ಈ ರೋಗವನ್ನು ಗುಣಪಡಿಸಲು ಜನರೂ ಈಗಲೂ ವೈದ್ಯಕೀಯ ನೆರವು ಪಡೆದುಕೊಳ್ಳದೆ ವಾಮಾಚಾರ ಮತ್ತು ಇತರ ಮೂಢನಂಬಿಕೆಗಳ ಮೊರೆ ಹೋಗುತ್ತಿರುವುದು ದುರದೃಷ್ಟಕರವೇ ಸರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)