varthabharthi

ವೈವಿಧ್ಯ

ಮರೆಯಲಾರದ ಮಹಾನುಭಾವ ವಿ. ಶಾಂತಾರಾಂ

ವಾರ್ತಾ ಭಾರತಿ : 18 Nov, 2018
ಬಸು ಮೇಗಲಕೇರಿ

ಚಿತ್ರಕಥೆ ರಚಿಸುವುದರಲ್ಲಿ ಸಿದ್ಧಹಸ್ತರಾಗಿದ್ದ ಶಾಂತಾರಾಂ, ಸಂಗೀತ, ಸಾಹಿತ್ಯ, ನಟನೆ ಮತ್ತು ನಾಟ್ಯಕ್ಕೂ ಅಷ್ಟೇ ಮಹತ್ವ ನೀಡುತ್ತಿದ್ದರು. ಇನ್ನು ಚಿತ್ರದ ತಾಂತ್ರಿಕ ವಿಷಯದಲ್ಲಿ, ವರ್ಣ ಮಿಶ್ರಣ, ಹೊರಾಂಗಣ ಚಿತ್ರಣ, ದೃಶ್ಯಸಂಯೋಜನೆಗೆ ಒತ್ತು ಕೊಡುತ್ತಿದ್ದರು. ಶಾಂತಾರಾಂ ಅವರಿಗೆ ಭಾರತೀಯ ಮಣ್ಣಿನ ಗುಣ ಗೊತ್ತಿತ್ತು, ಮನುಷ್ಯರ ನಾಡಿಮಿಡಿತ ಅರ್ಥವಾಗಿತ್ತು. ಅದು ಅವರ ಚಿತ್ರಗಳಲ್ಲಿ ಕಾಣುತ್ತಿತ್ತು.

ನವೆಂಬರ್ 18, ಭಾರತೀಯ ಚಿತ್ರರಂಗದ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ ಅವರ ಜನ್ಮದಿನ. ಕಳೆದ ವರ್ಷ, ಇದೇ ದಿನ ಗೂಗಲ್ ತನ್ನ ಡೂಡಲ್ ನಲ್ಲಿ ಶಾಂತಾರಾಂರ ಚಿತ್ರಬದುಕನ್ನು ಸಾರುವ- ಆ ಕಾಲದ ಕ್ಯಾಮರಾ, ಅವರ ಒಂದು ಮರಾಠಿ, ಎರಡು ಹಿಂದಿ ಚಿತ್ರಗಳ ಸ್ಟಿಲ್ ಗಳನ್ನು ಬಳಸಿ ಚಿತ್ತಾಕರ್ಷಕ ಪೋಸ್ಟರ್ ಸೃಷ್ಟಿಸುವ ಮೂಲಕ ಸಿನಿ ಮಾಂತ್ರಿಕನನ್ನು ಸ್ಮರಿಸಿಕೊಂಡು ಗೌರವಿಸಿತ್ತು. ಅದು ಸುದ್ದಿಯಾಗಿತ್ತು. ಭಾರತೀಯರನ್ನು ಪುಳಕಗೊಳಿಸಿತ್ತು. ಪಕ್ಕಾ ವ್ಯಾಪಾರಿ ಮನೋಭಾವದ ಗೂಗಲ್ ಕೂಡ ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಸೆಳೆದಿತ್ತು.
ಒಣಕುದ್ರಿ ಶಾಂತಾರಾಂ, ಬಿಜಾಪುರ ಜಿಲ್ಲೆಯ ಇಂಡಿಯಲ್ಲಿ ಜನಿಸಿದ ಕನ್ನಡಿಗರು. ಕೊಲ್ಹಾಪುರದಲ್ಲಿ ಆಡಿ ಬೆಳೆದವರು. ಮರಾಠಿ ಮನೆಮಾತಾಗಿದ್ದ ಜೈನ ಧರ್ಮೀಯರು. ಚಿಕ್ಕಂದಿನಲ್ಲೇ ಕಲೆ, ಸಂಗೀತ, ನಾಟಕಗಳತ್ತ ಒಲವುಳ್ಳವರಾಗಿದ್ದರು. ಇಪ್ಪತ್ತರ ಹರೆಯದಲ್ಲಿಯೇ ಆ ಕಾಲದ ಮೂಕಿ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದರು. ಕೇವಲ ನಟರಾಗಿಯೇ ಉಳಿಯದೆ, ಮುಂಬೈ ಮಯಾನಗರಿಯಲ್ಲಿ, ಹಿಂದಿ ಚಿತ್ರರಂಗವೆಂಬ ಕರ್ಮಭೂಮಿಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದರು. ಚಿತ್ರಕಥೆ, ನಿರ್ದೇಶನ, ನಿರ್ಮಾಣಕ್ಕೂ ಮುಂದಾಗಿ ನವರಂಗ್, ಡಾ.ಕೊಟ್ನಿಸ್ ಕೀ ಅಮರ್‌ಕಹಾನಿ, ಝಣಕ್‌ಝಣಕ್‌ಪ್ಹಾಯಲ್ಭಾಜೆ, ಸ್ತ್ರೀ, ಗೀತ್‌ಗಾಯೋಪತ್ತರೋನೆ, ದೋಆಂಖೆ ಬಾರಹ್ ಹಾಥ್, ಪಿಂಜ್ರ, ಅಮರ್‌ಭೂಪಾಲಿಯಂತಹ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟವರು.
ಶಾಂತಾರಾಂ ಅವರು ಮರಾಠಿ ಭಾಷೆಯಲ್ಲಿ ನಿರ್ಮಿಸಿದ, ಪೊಲೀಸ್ ಅಧಿಕಾರಿಯೊಬ್ಬ ಬೀದಿ ಬದಿಯ ವೇಶ್ಯೆಯೊಬ್ಬಳನ್ನು ಮೆಚ್ಚಿ ಮದುವೆಯಾಗುವ ಕಥಾ ಹಂದರವುಳ್ಳ ‘ಮಾಣೂಸ್’ ಚಿತ್ರವನ್ನು ನೋಡಿದ ಹಾಲಿವುಡ್ ನಟ ಚಾರ್ಲಿ ಚಾಪ್ಲಿನ್, ಮುಕ್ತಕಂಠದಿಂದ ಹೊಗಳಿದ್ದು-ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ. ಚಿತ್ರಕಥೆ ರಚಿಸುವುದರಲ್ಲಿ ಸಿದ್ಧಹಸ್ತರಾಗಿದ್ದ ಶಾಂತಾರಾಂ, ಸಂಗೀತ, ಸಾಹಿತ್ಯ, ನಟನೆ ಮತ್ತು ನಾಟ್ಯಕ್ಕೂ ಅಷ್ಟೇ ಮಹತ್ವ ನೀಡುತ್ತಿದ್ದರು. ಇನ್ನು ಚಿತ್ರದ ತಾಂತ್ರಿಕ ವಿಷಯದಲ್ಲಿ, ವರ್ಣ ಮಿಶ್ರಣ, ಹೊರಾಂಗಣ ಚಿತ್ರಣ, ದೃಶ್ಯಸಂಯೋಜನೆಗೆ ಒತ್ತು ಕೊಡುತ್ತಿದ್ದರು. ಶಾಂತಾರಾಂ ಅವರಿಗೆ ಭಾರತೀಯ ಮಣ್ಣಿನ ಗುಣ ಗೊತ್ತಿತ್ತು, ಮನುಷ್ಯರ ನಾಡಿಮಿಡಿತ ಅರ್ಥವಾಗಿತ್ತು. ಅದು ಅವರ ಚಿತ್ರಗಳಲ್ಲಿ ಕಾಣುತ್ತಿತ್ತು.
ತಮ್ಮೆಲ್ಲ ಕ್ರಿಯಾಶೀಲ ಕೆಲಸಗಳನ್ನು ಆಗುಮಾಡಲು, ಸ್ವತಂತ್ರವಾಗಿ ಕಾರ್ಯವೆಸಗಲು ‘ರಾಜ್ ಕಮಲ್ ಸ್ಟುಡಿಯೋ’ ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇದು ಭಾರತದ ಅತ್ಯುತ್ತಮ ಚಲನಚಿತ್ರ ನಿರ್ಮಾಣ ಸಂಸ್ಥೆ ಎಂದು ಪ್ರಸಿದ್ಧಿ ಪಡೆಯಿತು. ಅಷ್ಟೇ ಅಲ್ಲದೆ, ಕರ್ನಾಟಕದಿಂದ ಹೋಗಿ ಮುಂಬೈ ಮಾಯಾಜಗತ್ತಿನಲ್ಲಿ ಹೆಸರು ಮಾಡಿದ್ದ ಕನ್ನಡಿಗರಾಗಿದ್ದ ಗುರುದತ್, ವಿ.ಕೆ.ಮೂರ್ತಿಯಂತಹ ಪ್ರತಿಭಾವಂತರನ್ನೆಲ್ಲ ಒಂದೆಡೆ ಕಲೆಹಾಕಿ, ಸಂಸ್ಥೆ ಸ್ಥಾಪಿಸಿ ಕನ್ನಡಿಗರ ಶಕ್ತಿ ಪ್ರದರ್ಶಿಸಿದ್ದರು. ಹಾಗೆಯೇ ಚಿತ್ರದಿಂದ ಚಿತ್ರಕ್ಕೆ ತಾವೂ ಬೆಳೆದು, ಸಮಾಜವನ್ನೂ ಜಾಗೃತಗೊಳಿಸಿ, ಉದ್ಯಮವನ್ನೂ ಬಲಿಷ್ಠಗೊಳಿಸಿದ್ದರು. ಸಿನೆಮಾ ಎಂಬುದು ಸಾಮಾಜಿಕ ಬದಲಾವಣೆಗೆ ಪ್ರಬಲ ಅಸ್ತ್ರ ಎನ್ನುವುದನ್ನು ಮನಗಂಡಿದ್ದರು. ಸಿನೆಮಾಗಳು ಪ್ರೇಕ್ಷಕರ ಮೇಲೆ ಬೀರುವ ಪ್ರಭಾವ ಮತ್ತು ಪರಿಣಾಮಗಳನ್ನು ಅನುಭವದಿಂದ ಅರಿತಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಅವರ ‘ದೋ ಆಂಖೆ ಬಾರಹ್ ಹಾಥ್’ ಸಿನೆಮಾ. ಈ ಸಿನೆಮಾ ಭಾರತೀಯ ಚಿತ್ರರಂಗದಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸಿದ್ದಷ್ಟೇ ಅಲ್ಲ, ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳ ಸಾಲಿಗೆ ಸೇರುವ ಮೂಲಕ ಇತಿಹಾಸ ಸೃಷ್ಟಿಸಿತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸ್ವತಂತ್ರಪುರ ಎಂಬಲ್ಲಿ ಬಂದಿಖಾನೆ ಇಲಾಖೆ 1937ರಲ್ಲಿ ಕೈದಿಗಳ ಮಾನಸಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಲು, ಅವರ ಮನಪರಿವರ್ತಿಸಲು, ಬಯಲು ಬಂದಿಖಾನೆ ಎಂಬ ಹೊಸ ಪ್ರಯೋಗಕ್ಕೆ ಕೈ ಹಾಕಿತ್ತು. ಇದನ್ನು ಗಮನಿಸಿದ ಕತೆಗಾರ ಜಿ.ಡಿ.ಮದ್ಗುಲ್ಕರ್, ಒಂದಷ್ಟು ಪುಟಗಳ ಚಿತ್ರಕಥೆ ರಚಿಸಿ ವಿ.ಶಾಂತಾರಾಂ ಅವರಿಗೆ ನೀಡಿದರು. ಅವರು ಅದರ ಮೇಲೆ ಸುಮಾರು ವರ್ಷಗಳ ಕಾಲ ಕೆಲಸ ಮಾಡಿ, 1957 ರಲ್ಲಿ ‘ದೋ ಆಂಖೆ ಬಾರಹ್ ಹಾಥ್’ ಎಂಬ ಚಿತ್ರ ಮಾಡಿದರು. ಆ ಚಿತ್ರದ ನಾಯಕನಟನಾಗಿ ಸ್ವತಃ ಶಾಂತಾರಾಂ ಅಭಿನಯಿಸಿದರು. ಗೊಂಬೆ ಮಾರುವ ಮಹಿಳೆಯ ಪಾತ್ರದಲ್ಲಿ ಸಂಧ್ಯಾ ನಟಿಸಿದರು. ಮಾನವೀಯ ತುಡಿತಗಳುಳ್ಳ ಒಬ್ಬ ಯುವ ಜೈಲರ್, ಕೊಲೆ ಮಾಡಿ ಜೀವಾವಧಿ ಶಿಕ್ಷೆಗೊಳಗಾದ ಆರು ಜನ ಕುಖ್ಯಾತ ಕೈದಿಗಳ ಮನಪರಿವರ್ತಿಸುವ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ, ಆ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ ಕಥಾಹಂದರವುಳ್ಳ ಮನೋಜ್ಞ ಚಿತ್ರ. ಇದು ಆ ಕಾಲಕ್ಕೇ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾದ ಚಿತ್ರ. ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದ ಹೆಗ್ಗಳಿಕೆ ಪಾತ್ರವಾದ ಭಾರತದ ಮೊದಲ ಚಿತ್ರ.
ಈ ಚಿತ್ರ ಕಲ್ಲು ಹೃದಯದ ಕಟುಕ ಕೊಲೆಗಾರರಲ್ಲೂ ಮನುಷ್ಯತ್ವವಿದೆ, ಪ್ರೀತಿಸಿದರೆ, ಕ್ಷಮಿಸಿದರೆ ಅವರೂ ಸಹಜ ಮನುಷ್ಯರಂತಾಗಿ ಸಮಾಜದಲ್ಲಿ ಬದುಕಿ ಬಾಳಬಹುದು ಎಂಬ ಮಹಾನ್ ಸಂದೇಶವನ್ನು ಸಾರುತ್ತದೆ. ಸಾಮಾಜಿಕ ಕ್ರಾಂತಿಯನ್ನು ಕಣ್ಣಮುಂದಿರಿಸುತ್ತದೆ. ಆಶ್ಚರ್ಯಕರ ಸಂಗತಿ ಎಂದರೆ, ಈ ಚಿತ್ರ ಕರ್ನಾಟಕದ ದಕ್ಷ, ನಿಷ್ಠಾವಂತ ಜೈಲು ಅಧಿಕಾರಿಯಾಗಿದ್ದ ಸಿ.ಎಸ್.ಮಲ್ಲಯ್ಯನವರಿಗೆ ಸ್ಫೂರ್ತಿಯಾಗಿದ್ದು; ಚಿತ್ರ ಬಿಡುಗಡೆಯಾಗಿ ಹದಿನೈದು ವರ್ಷಗಳ ನಂತರ, ಬೆಂಗಳೂರಿನ ಹತ್ತಿರದ ದೇವನಹಳ್ಳಿಯ ಕೋರಮಂಗಲದಲ್ಲಿ ಬಯಲು ಬಂದಿಖಾನೆ ಸ್ಥಾಪನೆಗೆ ಕಾರಣವಾಗಿದ್ದು ಕುತೂಹಲಕರ ಸಂಗತಿ. 1957 ರಲ್ಲಿ ಬಂದ ಶಾಂತಾರಾಂ ಅವರ ದೋ ಆಂಖೆ ಚಿತ್ರವನ್ನು ಹತ್ತಾರು ಬಾರಿ ನೋಡಿದ್ದ ಮಲ್ಲಯ್ಯ, ಮುಂದೆ 1970ರಲ್ಲಿ ಜೈಲ್ ಸೂಪರಿಂಟೆಂಡೆಂಟ್ ಆದಾಗ, ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ, ಕರ್ನಾಟಕದಲ್ಲೊಂದು ಬಯಲು ಬಂದಿಖಾನೆ ಮಾಡಬೇಕೆಂಬ ಕನಸನ್ನಿಟ್ಟುಕೊಂಡಿದ್ದರು. ಆ ಕನಸಿನ ಬೆನ್ನೇರಿ ದೇವರಾಜ ಅರಸರಿಗೆ ಶಾಂತಾರಾಂ ಅವರ ದೋ ಆಂಖೆ ಚಿತ್ರವನ್ನು ತೋರಿಸಿದ್ದರು. ಚಿತ್ರ ನೋಡಿದ ಅರಸು, ಬಯಲು ಬಂದಿಖಾನೆಗೆ ಭೂಮಿ ಮಂಜೂರು ಮಾಡಿದ್ದರು. ದೇವನಹಳ್ಳಿಯ ಕೋರಮಂಗಲದಲ್ಲಿ 113 ಎಕರೆ ಜಾಗದಲ್ಲಿ, 1972ರಲ್ಲಿ ಬಯಲು ಬಂದಿಖಾನೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ಅದು ಈಗಲೂ ಕಾರ್ಯನಿರ್ವಹಿಸುತ್ತಿದೆ. ಚಿತ್ರವೊಂದರ ಪ್ರಭಾವದಿಂದಾಗಿ, ದೇಶದಲ್ಲಿಯೇ ಮೊದಲ ಬಯಲು ಬಂದಿಖಾನೆ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. 1972ರಿಂದ ಇಲ್ಲಿಯವರೆಗೆ ಲೆಕ್ಕವಿಲ್ಲದಷ್ಟು ಕೈದಿಗಳ ಮನ ಪರಿವರ್ತನೆಯಾಗಿ, ಸಾಮಾಜಿಕ ಬದುಕಿಗೆ ಹಿಂದಿರುಗಿ, ಅಪ್ಪಟ ಮನುಷ್ಯರಾಗಿ ಸಹಜ ಬದುಕು ನೂಕುತ್ತಿದ್ದಾರೆ. ಸಮಾಜ ಪರಿವರ್ತನೆಯಂತಹ ಮಹತ್ವದ ಕಾರ್ಯದಲ್ಲಿ ಶಾಂತಾರಾಂ, ಮಲ್ಲಯ್ಯ, ದೇವರಾಜ ಅರಸರಂತಹ ಕನ್ನಡಿಗರ ಸೇವೆ ಜನಮಾನಸದಲ್ಲಿ ಸ್ಮರಣೀಯವಾಗಿ ಉಳಿದಿದೆ.
ಆರು ದಶಕಗಳ ಕಾಲ, ಐವತ್ತಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಿ ಹೆಸರು ಗಳಿಸಿದ ಶಾಂತಾರಾಂ ಅವರಿಗೆ ಭಾರತ ಸರಕಾರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಮಹಾರಾಷ್ಟ್ರ ಸರಕಾರ ಅವರ ಹೆಸರಿನಲ್ಲೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿ ಗೌರವ ಸಲ್ಲಿಸಿದೆ. ಭಾರತೀಯ ಅಂಚೆ ಇಲಾಖೆ ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಹಿಂದಿ, ಮರಾಠಿ ಭಾಷೆಗಳಲ್ಲಿ ಅವರ ಜೀವನಚರಿತ್ರೆ ಪ್ರಕಟಗೊಂಡು ಜನಪ್ರಿಯತೆ ಪಡೆದಿವೆ.ವಿಮಲಾಬಾಯಿ, ಜಯಶ್ರೀ, ಸಂಧ್ಯಾ-ಮೂವರು ಪತ್ನಿಯರು ಶಾಂತಾರಾಂರ ಬದುಕಿನಲ್ಲಿ ಬಂದುಹೋದರೂ, ಅವರ ಸಾಧನೆಗೆ ಸ್ಫೂರ್ತಿಯಾಗಿದ್ದು, ವೈಯಕ್ತಿಕ ಬದುಕಿನ ಶಾಂತಿ ಸಮಾಧಾನಗಳಿಗೆ ಬಲ ತುಂಬಿದ್ದು ಕಡಿಮೆ ಎಂದು ಅವರ ಜೀವನ ಚರಿತ್ರೆ ಹೇಳುತ್ತದೆ. ಹಾಗೆಯೇ ಇಳಿವಯಸ್ಸಿನಲ್ಲಿ ಮಗಳನ್ನು ನಾಯಕಿಯನ್ನಾಗಿ ಮಾಡಿ ನಿರ್ಮಿಸಿದ ‘ಬೂಂದ್ ಜೋ ಬನ್ ಗಯಿ ಮೋತಿ’ ಚಿತ್ರ ಫ್ಲಾಪ್ ಆಗಿ, ಅನೇಕ ಕಷ್ಟನಷ್ಟಗಳಿಗೆ ಈಡಾದರು. ಆರೋಗ್ಯ ಕೈ ಕೊಟ್ಟು ಹಾಸಿಗೆ ಹಿಡಿದರು. 1990ರಲ್ಲಿ, 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಅವರಿಲ್ಲದ ಈ ಹೊತ್ತಿನಲ್ಲಿ, ಕರ್ನಾಟಕದಿಂದ ಮಹಾರಾಷ್ಟ್ರದ ಮುಂಬೈಗೆ ತೆರಳಿ, ಹಿಂದಿ ಚಿತ್ರರಂಗವೆಂಬ ಸಾಗರದಲ್ಲಿ ಈಜಿ, ಸಾರ್ವಕಾಲಿಕ ಚಿತ್ರಗಳನ್ನು ಮಾಡುವ ಮೂಲಕ ಗೆದ್ದು, ಮಾಡಿದ ಸಾಧನೆ ಸಾಮಾನ್ಯವಲ್ಲ. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಗುರುದತ್, ವಿ.ಕೆ.ಮೂರ್ತಿ, ಎಂ.ಎಸ್.ಸತ್ಯು, ಗಿರೀಶ್ ಕಾರ್ನಾಡ್, ಲಾರೆನ್ಸ್ ಫೆರ್ನಾಂಡಿಸ್, ಫೈಟರ್ ಶೆಟ್ಟಿ, ಎಸ್.ರಾಮನಾಥನ್, ಹ್ಯಾರಿ ಫೆರ್ನಾಂಡಿಸ್‌ರಂತಹ ನಿರ್ದೇಶಕರು-ತಂತ್ರಜ್ಞರು ದೇಶವೇ ಬೆರಗಾಗುವ ಚಿತ್ರಗಳನ್ನು ಕೊಡುಗೆಯಾಗಿ ನೀಡಿ ಶಾಂತಾರಾಂ ಪರಂಪರೆಯನ್ನು ಮುಂದುವರಿಸಿದ್ದಾರೆ. ಶಿಲ್ಪಾಶೆಟ್ಟಿ, ಸುನೀಲ್ ಶೆಟ್ಟಿ, ಪ್ರಕಾಶ್ ರೈ, ಐಶ್ವರ್ಯ ರೈ, ದೀಪಿಕಾ ಪಡುಕೋಣೆಯಂತಹ ಪ್ರತಿಭಾವಂತ ಕನ್ನಡಿಗರ ಮೆರವಣಿಗೆ ಇವತ್ತಿಗೂ ನಡೆದೇ ಇದೆ. ಹಳೆ ಬೇರು ಹೊಸ ಚಿಗುರು- ನಿತ್ಯ ನಿರಂತರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)