varthabharthi

ಆರೋಗ್ಯ

ಮಧುಮೇಹ: ಖಾಲಿಹೊಟ್ಟೆಯಲ್ಲಿ ಸಕ್ಕರೆ ಪರೀಕ್ಷೆ ಏಕೆ ಮುಖ್ಯ?

ವಾರ್ತಾ ಭಾರತಿ : 18 Nov, 2018

ಖಾಲಿಹೊಟ್ಟೆಯಲ್ಲಿ ರಕ್ತದಲ್ಲಿನ ಗುಕೋಸ್ ಪರೀಕ್ಷೆ ಮಧುಮೇಹಕ್ಕಾಗಿ ಶಿಫಾರಸು ಮಾಡಲಾಗಿರುವ ಅತ್ಯಂತ ಸಾಮಾನ್ಯ ತಪಾಸಣೆಗಳಲ್ಲೊಂದಾಗಿದೆ. ಈ ಪರೀಕ್ಷೆಗೆ 8ರಿಂದ 12 ಗಂಟೆಗಳ ಮೊದಲು ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ಮಧುಮೇಹವನ್ನು ನಿರ್ಧರಿಸಲು ಮತ್ತು ಅದರ ಮೇಲೆ ನಿಗಾ ಇಡಲು ಇದು ಅತ್ಯಂತ ಸರಳ ಮತ್ತು ತ್ವರಿತ ಪರೀಕ್ಷೆಯಾಗಿದೆ.

ಮಧುಮೇಹವನ್ನು ಮುಖ್ಯವಾಗಿ ಟೈಪ್ 1 ಮತ್ತು ಟೈಪ್ 2 ಎಂಬ ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ.ಟೈಪ್ 1 ಪ್ರಕರಣಗಳು ಸಾಮಾನ್ಯವಾಗಿ ಕಡಿಮೆಯಿರುತ್ತವೆ ಮತ್ತು ವಂಶವಾಹಿ,ಸ್ವಪ್ರತಿರೋಧಕ ಮತ್ತು ಪರಿಸರಾತ್ಮಕ ಅಂಶಗಳು ಇದರ ಅಪಾಯದ ಅಂಶಗಳನ್ನು ನಿರ್ಧರಿಸುತ್ತವೆ. ಟೈಪ್ 2 ಹೆಚ್ಚು ಸಾಮಾನ್ಯವಾಗಿದ್ದು,ವೃದ್ಧಾಪ್ಯ,ಒತ್ತಡ,ಬೊಜ್ಜು,ಮಧುಮೇಹದ ಹಿಂದಿನ ಅಥವಾ ಕುಟುಂಬದ ಇತಿಹಾಸ,ಗರ್ಭಾವಸ್ಥೆಯಲ್ಲಿ ಮಧುಮೇಹದ ಇತಿಹಾಸ,ಒಂದೇ ಬಗೆಯ ಜೀವನಶೈಲಿ ಮತ್ತು ಗ್ಲುಕೋಸ್ ಸಹಿಷ್ಣುತೆಯಲ್ಲಿ ವ್ಯತ್ಯಯ ಇವು ಟೈಪ್ 2 ಅಪಾಯಕ್ಕೆ ಕಾರಣವಾಗುತ್ತವೆ.

ಶರೀರವು ರಕ್ತದಲ್ಲಿ ಸಕ್ಕರೆ ಮಟ್ಟಗಳನ್ನು ಹೇಗೆ ಕಾಯ್ದುಕೊಳ್ಳುತ್ತದೆ ಎನ್ನುವುದರ ಚಿತ್ರಣವನ್ನು ನೀಡುವುದರಿಂದ ಖಾಲಿಹೊಟ್ಟೆಯಲ್ಲಿ ರಕ್ತದಲ್ಲಿನ ಗ್ಲುಕೋಸ್ ಪರೀಕ್ಷೆಯು ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಈ ಪರೀಕ್ಷೆಯಲ್ಲಿ ಫಲಿತಾಂಶ 70 ಎಂಜಿ/ಡಿಲ್ ನಿಂದ 100 ಎಂಜಿ/ಡಿಎಲ್‌ನೊಳಗೆ ಇದ್ದರೆ ಮಧುಮೇಹದ ಆತಂಕ ಹೊಂದಬೇಕಿಲ್ಲ.

ನಾವು ಏನನ್ನಾದರೂ ತಿಂದಾಗ ರಕ್ತದಲ್ಲಿಯ ಸಕ್ಕರೆಯ ಮಟ್ಟ ತಕ್ಷಣವೇ ಹೆಚ್ಚಾಗುತ್ತದೆ ಮತ್ತು ಸ್ವಲ್ಪ ಸಮಯದ ಬಳಿಕ ಕಡಿಮೆಯಾಗುತ್ತದೆ. ಆದರೆ ಉಪವಾಸವಿದ್ದಾಗ ಶರೀರವು ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳಲು ಸಮರ್ಥವಾಗಿರಬೇಕು. ಸಾಮಾನ್ಯ ಸ್ಥಿತಿಯಲ್ಲಿ ಊಟ ಮಾಡಿದ ಬಳಿಕ ರಕ್ತದಲ್ಲಿಯ ಸಕ್ಕರೆ ಮಟ್ಟವು ಹೆಚ್ಚುತ್ತಿದ್ದಂತೆ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್‌ನ್ನು ಬಿಡುಗಡೆಗೊಳಿಸುತ್ತದೆ. ಜೀವಕೋಶಗಳು ಗ್ಲುಕೋಸ್‌ನ್ನು ಬಳಸಿಕೊಳ್ಳಲು ಅವಕಾಶ ನೀಡುವ ಮೂಲಕ ಸಕ್ಕರೆಯ ಮಟ್ಟವನ್ನು ಸಹಜಗೊಳಿಸುವುದು ಇನ್ಸುಲಿನ್‌ನ ಕೆಲಸವಾಗಿದೆ.

ಆದರೆ ಮಧುಮೇಹದ ಪ್ರಕರಣದಲ್ಲಿ ಇನ್ಸುಲಿನ್ ಅನ್ನು ತಯಾರಿಸಲು ಶರೀರಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಇನ್ಸುಲಿನ್‌ಗೆ ಸೂಕ್ತವಾಗಿ ಸ್ಪಂದಿಸಲು ಶರೀರವು ಅಸಮರ್ಥವಾಗಿರುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ.

ಆದ್ದರಿಂದ ಖಾಲಿಹೊಟ್ಟೆಯಲ್ಲಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಅಧಿಕವಾಗಿದ್ದರೆ ವ್ಯಕ್ತಿಯು ಮಧುಮೇಹವನ್ನು ಹೊಂದಿದ್ದಾನೆ ಅಥವಾ ಶೀಘ್ರವೇ ಅದಕ್ಕೆ ತುತ್ತಾಗುವ ಸಾಧ್ಯತೆಯಿದ ಎನ್ನುವುದನ್ನು ಸೂಚಿಸುತ್ತದೆ.

ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾಗಿದ್ದರೆ ಅತಿಯಾದ ಹಸಿವು,ವಿಪರೀತ ಬಾಯಾರಿಕೆ,ಪದೇಪದೇ ಮೂತ್ರ ವಿಸರ್ಜನೆ,ವಿವರಿಸಲಾಗದ ತೂಕ ಇಳಿಕೆ, ಮಸುಕಾದ ದೃಷ್ಟಿ,ಕೈಕಾಲುಗಳಲ್ಲಿ ಜುಮುಗುಡುವ ಮತ್ತು ಮರಗಟ್ಟಿದ ಅನುಭವ ಅಥವಾ ಬಳಲಿಕೆಯಂತಹ ಲಕ್ಷಣಗಳು ನಿಮ್ಮಲ್ಲಿ ಕಂಡುಬರಬಹುದು. ಇಂತಹ ಯಾವುದೇ ಲಕ್ಷಣಗಳಿದ್ದರೆ ಅದು ಮಧುಮೇಹದ ಸೂಚನೆಯಾಗಿರಬಹುದು. ಹೀಗಾಗಿ ಇಂತಹ ಲಕ್ಷಣಗಳು ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಿದರೆ ಮೊದಲು ಖಾಲಿಹೊಟ್ಟೆಯಲ್ಲಿ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಸೂಚಿಸುತ್ತಾರೆ.

ಸಕ್ಕರೆಯ ಅಧಿಕ ಮಟ್ಟವನ್ನು ನಿಯಂತ್ರಿಸದಿದ್ದರೆ ಅದು ಮಧುಮೇಹದಿಂದಾಗಿ ನರಗಳು ಮತ್ತು ಮೂತ್ರಪಿಂಡಗಳಿಗೆ ಹಾನಿ,ರೆಟಿನೋಪತಿಯಂತಹ ಕಣ್ಣಿನ ಸಮಸ್ಯೆ ಇತ್ಯಾದಿ ಗಂಭೀರ ಸ್ಥಿತಿಗಳಿಗೆ ಕಾರಣವಾಗುತ್ತದೆ. ಇವೆಲ್ಲವುಗಳ ಜೊತೆಗೆ ಅಪಧಮನಿ ಕಾಠಿಣ್ಯ ಮತ್ತು ಪಾರ್ಶ್ವವಾಯುವಿನಂತಹ ಇತರ ಕಾಯಿಲೆಗಳಿಗೂ ಆಹ್ವಾನ ನೀಡುತ್ತದೆ.

ಹೀಗಾಗಿ ಮಧುಮೇಹ ಮತ್ತು ಅದಕ್ಕೆ ಸಂಬಂಧಿಸಿದ ಕಣ್ಣಿನ ಸಮಸ್ಯೆ,ಮೂತ್ರಪಿಂಡಕ್ಕೆ ಹಾನಿ,ಹೃದಯ ಸಮಸ್ಯೆಗಳು ಇತ್ಯಾದಿಗಳನ್ನು ತಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ತುಂಬ ಮುಖ್ಯವಾಗುತ್ತದೆ. ಕ್ರಿಯಾಶೀಲ ಜೀವನಶೈಲಿ,ನಿಯಮಿತ ವ್ಯಾಯಾಮ,ಸಕ್ಕರೆ ಸೇವನೆಯ ಮೇಲೆ ಮಿತಿ,ಹಿತಮಿತವಾದ ಆಹಾರ ಸೇವನೆ ಮತ್ತು ಒತ್ತಡ ನಿರ್ವಹಣೆಯನ್ನು ಕಾಯ್ದುಕೊಳ್ಳುವ ಮೂಲಕ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ನಿಯಮಿತವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಪರೀಕ್ಷಿಕೊಳ್ಳುವುದು ಕೂಡ ಮುಖ್ಯವಾಗಿದೆ. ಮನೆಯಲ್ಲಿ ಬ್ಲಡ್ ಗ್ಲುಕೋಸ್ ಮಾನಿಟರ್‌ನ್ನು ಬಳಸುವ ಇಲ್ಲವೇ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಈ ಬಗ್ಗೆ ಕಾಳಜಿ ವಹಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)