varthabharthi

ವೈವಿಧ್ಯ

ರಂಗಕ್ಕೆ ಇಳಿದಿರುವ ಎನ್‌ಜಿಒ ಗಳು ಮತ್ತು ‘ಪರಿಸರವಾದಿ’ಗಳು !?

ಮಾಧವ್ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಜಾರಿ

ವಾರ್ತಾ ಭಾರತಿ : 19 Nov, 2018
ನಂದಕುಮಾರ್ ಕೆ. ಎನ್., ಕುಂಬ್ರಿ ಉಬ್ಬು

ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ನೆಪ ಹಿಡಿದು ಪರಿಸರ ಸ್ನೇಹಿ ಅಮಾಯಕ ಆದಿವಾಸಿ ಇನ್ನಿತರ ಜನಸಾಮಾನ್ಯರ ಬದುಕುಗಳನ್ನು ಮತ್ತು ಪಶ್ಚಿಮ ಘಟ್ಟ ಪ್ರದೇಶವನ್ನು ಸಂಪೂರ್ಣ ನಾಶ ಮಾಡಲು ಸರಕಾರಗಳು ಹೊರಟಿವೆ.

ಲವು ಸರಕಾರೇತರ ಸಂಸ್ಥೆಗಳು, ಪರಿಸರವಾದಿಗಳೆಂದುಕೊಂಡಿರುವವರು ಕಸ್ತೂರಿರಂಗನ್ ವರದಿ ಜಾರಿಗಾಗಿ ಆಗ್ರಹಿಸುತ್ತಾ ಸಭೆ, ಸೆಮಿನಾರುಗಳನ್ನು ನಡೆಸಲು ತೊಡಗಿದ್ದಾರೆ. ಸ್ವತಃ ಮಾಧವ್ ಗಾಡ್ಗೀಳ್ ವಿಶೇಷ ಆಸಕ್ತಿ ವಹಿಸಿ ಸಭೆಗಳಲ್ಲಿ ಭಾಗವಹಿಸುತ್ತಾ ಕಸ್ತೂರಿ ರಂಗನ್ ವರದಿಯನ್ನು ಸಮರ್ಥಿಸುತ್ತಾ ತಕ್ಷಣವೇ ಜಾರಿಗೊಳಿಸಲು ಆಗ್ರಹಿಸುತ್ತಿದ್ದಾರೆ.

ಪಶ್ಚಿಮಘಟ್ಟ ಪ್ರದೇಶ ನೈಸರ್ಗಿಕವಾಗಿ ಸಂಪದ್ಭರಿತವಾಗಿರುವುದು ಮಾತ್ರವಲ್ಲದೇ ಒಟ್ಟಾರೆ ಭಾರತದ ಮಳೆಯಾಗುವಿಕೆ, ನೀರಿನ ಲಭ್ಯತೆ, ಹವಾಮಾನ ಸಮತೋಲನ ಸೇರಿದಂತೆ ಪಾರಿಸಾರಿಕ ವ್ಯವಸ್ಥೆಯನ್ನು ತೀರ್ಮಾನಿಸುವ ಸೂಕ್ಷ್ಮ ಪ್ರದೇಶವಾಗಿದೆ. ಜೀವ ವೈವಿಧ್ಯದ ಹತ್ತು ಹಲವು ವಿಶೇಷ ಪ್ರಾಣಿ ಪಕ್ಷಿ ಸಂಕುಲಗಳು, ನೂರಾರು ಅತ್ಯಮೂಲ್ಯ ಔಷಧೀಯ ಸಸ್ಯಗಳು, ಸಾವಿರಾರು ಬಗೆಯ ಮರ, ಗಿಡ, ಹುಲ್ಲು ಬಳ್ಳಿಗಳು ಪಶ್ಚಿಮ ಘಟ್ಟದ ಕಾಡು ಮತ್ತು ಗುಡ್ಡಗಳಲ್ಲಿವೆ.
ಇಡೀ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುಮಾರು ಐದು ದಶಲಕ್ಷಕ್ಕಿಂತಲೂ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಹಲವು ನಗರ ಪಟ್ಟಣಗಳನ್ನು ಪಶ್ಚಿಮ ಘಟ್ಟ ಪ್ರದೇಶ ಒಳಗೊಂಡಿದೆ. ಈ ಪ್ರದೇಶದ ಹಲವಾರು ಕಡೆಗಳಲ್ಲಿ ಅನುಕೂಲಸ್ಥರ ಮೋಜಿಗಾಗಿ ಪ್ರವಾಸಿ ತಾಣಗಳನ್ನು ಹಾಗೂ ರೆಸಾರ್ಟ್‌ಗಳನ್ನು ನಿರ್ಮಿಸಿ ಪ್ರವಾಸೋದ್ದಿಮೆ ಅಭಿವೃದ್ಧಿ ಎಂದು ಕರೆದುಕೊಳ್ಳಲಾಗಿದೆ. ಹಾಗೆಯೇ ವಾಣಿಜ್ಯ ಉದ್ಧೇಶಗಳಿಗಾಗಿನ ಹಲವು ಗಣಿಗಾರಿಕೆಗಳನ್ನು ಈ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇವುಗಳಲ್ಲಿ ಬಹುತೇಕ ಖಾಸಗಿಯವರದೇ ಆಗಿವೆ. ಈ ಭಾಗದಲ್ಲಿ ಹುಟ್ಟಿ ಹರಿಯುವ ನದಿ, ಹಳ್ಳ, ತೊರೆಗಳಿಗೆ ಈ ಪ್ರದೇಶದ ಹಲವಾರು ಕಡೆಗಳಲ್ಲಿ ಭಾರೀ, ಮಧ್ಯಮ ಹಾಗೂ ಕಿರು ಜಲಾಶಯಗಳನ್ನು ನಿರ್ಮಿಸಲಾಗಿದೆ. ಹಲವಾರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಅಕ್ರಮವಾಗಿ ಈ ಪ್ರದೇಶದ ಸಾವಿರಾರು ಎಕರೆೆ ಭೂಮಿಗಳನ್ನು ಹಿಡಿದಿಟ್ಟುಕೊಂಡಿರುವ ಕಾರ್ಪೋರೆಟ್ ಕಂಪೆನಿಗಳಿಗೆ ಸೇರಿದ ಕಾಫಿ, ಟೀ, ಕೋಕೋ, ಗೇರು, ರಬ್ಬರ್, ಅಡಿಕೆ, ಏಲಕ್ಕಿ, ತೆಂಗಿನ ತೋಟಗಳು ಈ ಪ್ರದೇಶದಲ್ಲಿವೆ. ಈ ಕಾರ್ಪೋರೆಟ್ ತೋಟ ಕಂಪೆನಿಗಳು ಹತ್ತು ಹಲವು ವಿಷಕಾರಿ ರಾಸಾಯನಿಕಗಳನ್ನು, ಕೀಟ ಹಾಗೂ ಕಳೆನಾಶಕಗಳನ್ನು ಅವೈಜ್ಞಾನಿಕವಾಗಿ ಮತ್ತು ವ್ಯಾಪಕವಾಗಿ ಬಳಸುತ್ತಾ ಬರುತ್ತಿವೆ. ಹಾಗೆ ಅವೈಜ್ಞಾನಿಕವಾಗಿ ಬಳಸಿದ ಎಂಡೋಸಲ್ಫಾನ್‌ನಂತಹ ಮಾರಕ ವಿಷದಿಂದಾಗಿ ಪಶ್ಚಿಮ ಘಟ್ಟದ ಹಲವು ಭಾಗಗಳಲ್ಲಿ ಮನುಷ್ಯರು ಮತ್ತು ಪ್ರಾಣಿ, ಪಕ್ಷಿಗಳು ಮಾರಕ ಹಾನಿಯನ್ನು ಅನುಭವಿಸುತ್ತಿವೆ. ಹುಟ್ಟುವ ಮಕ್ಕಳು ಸರಿಪಡಿಸಲಾಗದ ವಿಚಿತ್ರ ಅಂಗ ವೈಕಲ್ಯಗಳಿಗೆ ಗುರಿಯಾಗಿ ನಿತ್ಯ ನರಕವನ್ನು ಅನುಭವಿಸುವಂತಾಗಿದೆ. ಅಲ್ಲದೇ ಅರಣ್ಯ ಕಳ್ಳಕಾಕರ ಮಾಫಿಯಾಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ಅರಣ್ಯ ಯೋಜನೆ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗಿರುವ ನೀಲಗಿರಿ ಮತ್ತು ಅಕೇಶಿಯಾ ನೆಡುತೋಪುಗಳನ್ನು ಈ ಪ್ರದೇಶದ ಹುಲ್ಲುಗಾವಲುಗಳಿಂದ ಕೂಡಿದ ಗುಡ್ಡ ಬೆಟ್ಟಗಳಲ್ಲಿ ಸರಕಾರ ಮತ್ತದರ ಇಲಾಖೆಗಳೇ ನೆಟ್ಟು ಬೆಳೆಸುತ್ತಾ ಬಂದಿವೆ. ಇದನ್ನು ಕಾರ್ಪೋರೆಟ್ ಕಂಪೆನಿಗಳಿಗೆ ಕಚ್ಚಾ ವಸ್ತುವನ್ನಾಗಿ ನಿರಂತರವಾಗಿ ಪೂರೈಕೆ ಮಾಡುತ್ತಾ ಬರಲಾಗಿದೆ. ನಗರ ಪಟ್ಟಣಗಳು ಉತ್ಪಾದಿಸುತ್ತಿರುವ ಕೊಳಚೆ ಮತ್ತು ಮಾಲಿನ್ಯಕಾರಕ ವಸ್ತುಗಳನ್ನು ನೇರವಾಗಿ ಇಲ್ಲಿನ ನದಿ, ಜಲಮೂಲಗಳಿಗೆ ಹರಿಸಲಾಗುತ್ತಿದೆ. ಬಹುತೇಕವಾಗಿ ಎಲ್ಲೂ ಯಾವುದೇ ರೀತಿಯಲ್ಲಿ ಮಾಲಿನ್ಯ ಶುದ್ಧೀಕರಣ ಮಾಡುವ ಜವಾಬ್ದಾರಿಯನ್ನು ಆಳುವ ಸರಕಾರಗಳಾಗಲೀ, ಮಾಲಿನ್ಯಕಾರಕ ಕೈಗಾರಿಕೆಗಳಾಗಲೀ ಇಲ್ಲಿಯವರೆಗೆ ವಹಿಸಲೇ ಇಲ್ಲ. ಪಶ್ಚಿಮ ಘಟ್ಟಕ್ಕೆ ಇವುಗಳು ಭಾರೀ ಅಪಾಯಗಳನ್ನು ಒಡ್ಡುತ್ತಿವೆ. ಈ ಭಾರೀ ಅಪಾಯಕಾರಿ ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಸರಕಾರಗಳು ಬಾಯುಪಚಾರ ಬಿಟ್ಟರೆ ಗಂಭೀರವಾಗಿ ಇಲ್ಲಿಯವರೆಗೂ ಶ್ರಮಿಸಲೇ ಇಲ್ಲ. ಆದರೆ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮತೆಯ ಬಗ್ಗೆ ಈಗಷ್ಟೇ ಜ್ಞಾನೋದಯವಾದಂತೆ ಸರಕಾರಗಳು, ಹಲವು ಸಂಘ ಸಂಸ್ಥೆಗಳು ವರ್ತಿಸುತ್ತಿವೆ.
ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ನೆಪ ಹಿಡಿದು ಪರಿಸರ ಸ್ನೇಹಿ ಅಮಾಯಕ ಆದಿವಾಸಿ ಇನ್ನಿತರ ಜನಸಾಮಾನ್ಯರ ಬದುಕುಗಳನ್ನು ಮತ್ತು ಪಶ್ಚಿಮ ಘಟ್ಟ ಪ್ರದೇಶವನ್ನು ಸಂಪೂರ್ಣ ನಾಶ ಮಾಡಲು ಸರಕಾರಗಳು ಹೊರಟಿವೆ. ಅದಕ್ಕೆ ನ್ಯಾಯಾಲಯದ ಆದೇಶವನ್ನು ನೆಪವನ್ನಾಗಿ ಮುಂದಿಡಲಾಗುತ್ತಿದೆ. ಮಾಧವ್ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ತಂಡ ಮೇಲಿನ ಎಲ್ಲಾ ವಿಚಾರಗಳನ್ನು ಪರಿಗಣಿಸಿದ ರೀತಿಯಲ್ಲೇ ವರದಿ ನೀಡಿದ್ದರೂ ಅಂತಿಮವಾಗಿ ಸಾರಾಂಶದಲ್ಲಿ ಅದು ವರ್ತಿಸುವುದು ಬಹು ಕಷ್ಟದಿಂದ ಬದುಕು ಕಟ್ಟಿಕೊಳ್ಳುತ್ತಾ ಬದುಕುತ್ತಿರುವ ಅಮಾಯಕ ಜನಸಾಮಾನ್ಯರನ್ನು ಮಾತ್ರ. ಅದಕ್ಕೆ ಕಸ್ತೂರಿ ರಂಗನ್ ವರದಿಯೇ ಒಂದು ಉತ್ತಮ ಉದಾಹರಣೆ ಎನ್ನಬಹುದು. ಯಾಕೆಂದರೆ ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟವನ್ನು ಆಕ್ರಮಿಸಿ ಹಾನಿ ಮಾಡುತ್ತಿರುವ ಭಾರಿ ಕಾರ್ಪೋರೇಟ್ ಪ್ಲಾಂಟೇಶನ್ ಕಂಪೆನಿಗಳನ್ನು ಹಾಗೂ ದೊಡ್ಡ ದೊಡ್ಡ ಆಸ್ತಿವಂತರನ್ನು ಬಚಾವು ಮಾಡುವ ಸರ್ಕಸ್ ಮಾಡಿ ಮಾಧವ್ ಗಾಡ್ಗೀಳ್ ನೀಡಿದ ವರದಿಯ ಶಿಫಾರಸುಗಳನ್ನು ಕೇವಲ ಪಶ್ಚಿಮ ಘಟ್ಟದ 60,000ದಷ್ಟು ಎಕರೆಗಳಿಗೆ ಅನ್ವಯವಾಗುವಂತೆ ಸೀಮಿತಗೊಳಿಸಿದೆ. ಅಲ್ಲಿ ಈಗಾಗಲೇ ಹಲವಾರು ಇಂತಹ ಯೋಜನೆಗಳು ಜಾರಿಯಲ್ಲಿದ್ದು ಆದಿವಾಸಿ ಇನ್ನಿತರ ಜನಸಮುದಾಯಗಳೇ ಹೆಚ್ಚಿನ ಮಟ್ಟದಲ್ಲಿರುವ ಪ್ರದೇಶ. ಹಾಗಂತ ಇದು ಇತರ ಜನಸಮುದಾಯಗಳಿಗೆ ಅಪಾಯಕಾರಿಯಲ್ಲವೆಂದು ಅರ್ಥವಲ್ಲ. ಖಂಡಿತಾ ಇದು ಇಡೀ ಪಶ್ಚಿಮ ಘಟ್ಟ ಪ್ರದೇಶಕ್ಕೆ ಹಾಗೇನೆ ಇಡೀ ಭಾರತಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಪಾಯಕಾರಿಯಾದುದು. ಇದರಲ್ಲಿ ಸಮಾಜದ ಸ್ಥಾಪಿತ ಹಿತಾಸಕ್ತಿಗಳ ರಕ್ಷಣೆಯ ಅಂಶವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾ ಬಂದಿದೆ.


ಕಸ್ತೂರಿ ರಂಗನ್ ವರದಿಯು ಮಾಧವ್ ಗಾಡ್ಗೀಳ್ ವರದಿಯ ಜಾರಿಯ ಸಾಧ್ಯಾ ಸಾಧ್ಯತೆಗಳನ್ನು ಅಧ್ಯಯನ ನಡೆಸಿ ನೀಡಿದ ವರದಿಯಾಗಿದೆ. ಅಂದರೆ ಕಸ್ತೂರಿ ರಂಗನ್ ವರದಿ ಮೂಲಭೂತವಾಗಿ ವಾಸ್ತವದಲ್ಲಿ ಸ್ವಲ್ಪ ಸುಧಾರಿತ ಮಾಧವ್ ಗಾಡ್ಗೀಳ್ ವರದಿಯೇ ಆಗಿದೆ. ಮಾಧವ್ ಗಾಡ್ಗೀಳ್ ಸಾರಾಸಗಟಾಗಿ ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಿ ಅಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು, ರಸ್ತೆ, ರೈಲ್ವೆ, ಸೇತುವೆ, ಜಲಾಶಯ, ವಿದ್ಯುತ್ ಘಟಕ, ಕಾಲುವೆ ಇತ್ಯಾದಿ ನಿರ್ಮಾಣಗಳನ್ನು ಮಾಡಕೂಡದು; ಯಾವುದೇ ರಾಸಾಯನಿಕಗಳ ಬಳಕೆ ಮಾಡಕೂಡದು ಎಂದು ಶಿಫಾರಸು ಮಾಡುತ್ತದೆ. ಈ ನಿಯಮಗಳನ್ನು ಪಶ್ಚಿಮಘಟ್ಟ ಪ್ರದೇಶಗಳ ನಗರ, ಪಟ್ಟಣಗಳಿಗೂ ಅನ್ವಯಿಸಿ ಹೇಳುತ್ತದೆ. ಜೊತೆಗೆ ಈಗಾಗಲೇ ನಿರ್ಮಾಣಗೊಂಡಿರುವ 30ಕ್ಕೂ ಹೆಚ್ಚು ವರ್ಷ ಪೂರೈಸಿರುವ ಪಶ್ಚಿಮ ಘಟ್ಟ ಪ್ರದೇಶದ ಎಲ್ಲಾ ಜಲಾಶಯಗಳನ್ನು ಸ್ಥಗಿತಗೊಳಿಸಿ ನೀರಿನ ಮೂಲಗಳು ಸಹಜವಾಗಿ ಹರಿಯುವಂತೆ ಮಾಡಬೇಕು ಎಂದು ಹೇಳುತ್ತದೆ.
ಆದಿವಾಸಿ ಗಿರಿಜನರ ದೀರ್ಘ ಕಾಲದ ಹೋರಾಟಗಳಿಂದ ಲಭಿಸಿದ ಹಕ್ಕಾದ ಅರಣ್ಯ ಹಕ್ಕು ಕಾಯ್ದೆಯನ್ನು ( ಮೋದಿ ಸರಕಾರ ಅದನ್ನು ಮೊದಲಿಗಿಂತಲೂ ಸಡಿಲ ಮತ್ತು ಪೇಲವಗೊಳಿಸಿದೆ ) ಅನುಷ್ಠಾನಗೊಳಿಸಬೇಕೆಂದು ಕೂಡ ಶಿಫಾರಸು ಒಂದೆಡೆ ಮಾಡಿದರೆ, ಮತ್ತೊಂದೆಡೆ ಸರಕಾರಿ ಮತ್ತು ಅರಣ್ಯ ಭೂಮಿಗಳನ್ನು ಖಾಸಗಿ ಭೂಮಿಯಾಗಿ ಪರಿವರ್ತಿಸಬಾರದು ಎಂದು ಹೇಳಿ ಅರಣ್ಯ ಹಕ್ಕು ಕಾಯ್ದೆಯನ್ನು ವಾಸ್ತವದಲ್ಲಿ ಅನುಷ್ಠಾನವಾಗದಂತೆ ಶಿಫಾರಸು ಮಾಡುತ್ತದೆ. ಯಾಕೆಂದರೆ ಬಹುತೇಕ ಆದಿವಾಸಿ ಸಮುದಾಯಗಳಿಗೆ ತಾವು ನೆಲೆಸಿರುವ ಭೂಮಿಯ ಮೇಲೆ ಹಕ್ಕು ಪತ್ರಗಳನ್ನು ಸರಕಾರಗಳು ಈಗಲೂ ನೀಡಿಲ್ಲದಿರುವುದರಿಂದ ಅವರುಗಳು ನೆಲೆ ನಿಂತಿರುವ ಪ್ರದೇಶಗಳೆಲ್ಲಾ ದಾಖಲೆಗಳಲ್ಲಿ ಸರಕಾರಿ ಇಲ್ಲವೇ ಅರಣ್ಯ ಭೂಮಿಯೆಂದೇ ಪರಿಗಣಿಸಲಾಗುತ್ತದೆ. ಇದರಿಂದಾಗಿ ಅಲ್ಲಿರುವ ಆದಿವಾಸಿ ಇನ್ನಿತರ ಸಮುದಾಯಗಳು ಅಕ್ರಮವಾಸಿಗಳೆಂದು ಪರಿಗಣಿಸಲ್ಪಡುತ್ತಿರುವುದು ಮಾಮೂಲಿ ಸಂಗತಿಯಾಗಿದೆ. ಮಾಧವ್ ಗಾಡ್ಗೀಳ್ ವರದಿ ಶಿಫಾರಸು ಮಾಡಿರುವ ಇಡೀ ಪಶ್ಚಿಮ ಘಟ್ಟ ಪ್ರದೇಶಕ್ಕೆಂದೇ ಪಶ್ಚಿಮ ಘಟ್ಟ ಪರಿಸರ ಪ್ರಾಧಿಕಾರ (ವೆಸ್ಟರ್ನ್ ಘಾಟ್ ಎಕಾಲಜಿ ಅಥಾರಿಟಿ) ರಚಿಸಿ ಅದರ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವುದು ಒಕ್ಕೂಟ ತತ್ವಕ್ಕೇ ವಿರುದ್ಧವಾಗುವ ಸಂಗತಿ. ಅಲ್ಲದೆ ಕೇಂದ್ರಾಧಿಪತ್ಯದ ಹಿಡಿತ ಮತ್ತಷ್ಟು ಬಿಗಿಯಾಗುವಂತೆ ಮಾಡಿ ರಾಜ್ಯಗಳ ಅಧಿಕಾರ ಹಾಗೂ ಸ್ವಾಯತ್ತೆಯನ್ನು ಸಂಪೂರ್ಣವಾಗಿ ನಿರಾಕರಿಸುವಂತಹುದಾಗುತ್ತದೆ.
  ಅಂದರೆ ಪರಿಸರ ಸೂಕ್ಷ್ಮ ಪ್ರದೇಶದ ರಕ್ಷಣೆಯ ನೆಪವೊಡ್ಡಿ ಆಳುವ ಹಿತಾಸಕ್ತಿಗಳ ರಾಜಕೀಯ ಹಾಗೂ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಮಾಡುತ್ತಿರುವ ಪ್ರಯತ್ನಗಳೇ ಈ ವರದಿ ಜಾರಿಯ ಹಿಂದಿನ ಗುಟ್ಟು ಎನ್ನುವುದನ್ನು ಗ್ರಹಿಸಬೇಕು. ಪರಿಸರ ರಕ್ಷಣೆಗಾಗಿ ವರದಿ ಜಾರಿಮಾಡಬೇಕಾದ ಅನಿವಾರ್ಯ ಎಂಬ ಕಾರಣವನ್ನು ಮುಂದಿಟ್ಟು ಆ ಪ್ರದೇಶದ ಜನಸಾಮಾನ್ಯರನ್ನು ಪ್ರತ್ಯಕ್ಷ ಮತ್ತು ಪರೋಕ್ಷ ರೀತಿಗಳಲ್ಲಿ ಒಕ್ಕಲೆಬ್ಬಿಸಿ ಆ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೆ ನಂತರ ಅದನ್ನು ಕಾರ್ಪೋರೆಟ್ ಹಿತಾಸಕ್ತಿಗಳಿಗೆ ತಕ್ಕಂತೆ ಹೇಗೆ ಬೇಕಾದರೂ ಉಪಯೋಗಿಸುವುದು ಸುಲಭವಾಗುತ್ತದಲ್ಲವೇ. ಅಂತಹ ಹಿತಾಸಕ್ತಿಗಳಿಗಾಗಿ ಎಷ್ಟೆಲ್ಲಾ ರೀತಿಯ ಡಿನೋಟಿಫಿಕೇಷನ್ ಗಳು ನಡೆಯುತ್ತಿರುವುದು ಗೊತ್ತಿರುವ ಸಂಗತಿ ತಾನೆ.
ಮಾಧವ್ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಯ ಪರ ಬ್ಯಾಟಿಂಗ್ ಮಾಡುತ್ತಿರುವ ಸೇಫ್ ರೆನಿನಲ್ಲಿರುವ ಪರಿಸರವಾದಿಗಳೆಂಬ ಟ್ಯಾಗ್ ಲೈನ್ ನೊಂದಿಗೆ ಕಾರ್ಯಾಚರಿಸುತ್ತಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳಲ್ಲಿ ಹೆಚ್ಚಿನವರು ವಾಸ್ತವದಲ್ಲಿ ಪರಿಸರ ರಕ್ಷಣೆಯ ಹೆಸರಿನಲ್ಲಿ ಜನಸಾಮಾನ್ಯರ ವಿರುದ್ಧವಾಗಿದ್ದು, ಕಾರ್ಪೋರೆಟ್ ಹಿತಾಸಕ್ತಿಗಳ ಪರವಾಗಿರುವವರೇ ಆಗಿದ್ದಾರೆ. ಹಲವು ಸಂಘಟನೆ ವ್ಯಕ್ತಿಗಳು ನೇರವಾಗಿ ಕಾರ್ಪೋರೆಟ್ ಗಳ ಹಣಕಾಸು ಹಾಗೂ ನೇರ ನಿರ್ದೇಶನದಲ್ಲೇ ಕಾರ್ಯಾಚರಿಸುತ್ತಿದ್ದಾರೆ ಎನ್ನುವುದು ಮೇಲ್ನೋಟದಲ್ಲೇ ಗೊತ್ತಾಗುವ ವಿಚಾರ. ಬಹುತೇಕವಾಗಿ ಇವರುಗಳು ಯಾವತ್ತೂ ನಿಜವಾಗಿಯೂ ಪಶ್ಚಿಮ ಘಟ್ಟದ ಸುರಕ್ಷತೆಗೆ ಮಾರಕವಾಗಿರುವ ಭಾರೀ ಕಾರ್ಪೋರೇಟು ಕಂಪೆನಿಗಳು, ಸರಕಾರದ ಬೇಜಬ್ದಾರಿಗಳು, ನಾಟಾ ಮಾಫಿಯಾಗಳ ವಿರುದ್ಧ ದನಿಯೆತ್ತಿ ಮಾತನಾಡುವ ಕನಿಷ್ಠ ಜವಾಬ್ದಾರಿ ತೆಗೆದುಕೊಂಡವರಲ್ಲ. ಆದರೆ ಪರಿಸರ ರಕ್ಷಣೆಯ ನೆಪದಲ್ಲಿ ಪರಿಸರ ಸ್ನೇಹಿ ಅಮಾಯಕ ಆದಿವಾಸಿ ಇನ್ನಿತರ ಜನಸಾಮಾನ್ಯರ ಬದುಕುಗಳನ್ನು ಹರಣ ಮಾಡುವ ವಿಚಾರಗಳಲ್ಲಿ ಭಾರಿ ಆಸಕ್ತಿ ವಹಿಸುತ್ತಾ ಬಂದಿರುವುದು ಮುಖ್ಯವಾಗಿ ಗಮನಿಸಬೇಕು.
ಇಂದು ಪಶ್ಚಿಮ ಘಟ್ಟ ಪ್ರದೇಶ ಉಳಿಯಬೇಕಾದರೆ ಆ ಪ್ರದೇಶದ ಜನಸಾಮಾನ್ಯರು ಸೇರಿದಂತೆ ಎಲ್ಲಾ ಜನಸಾಮಾನ್ಯರು ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಅನುಷ್ಠಾನವನ್ನು ಸ್ಪಷ್ಟವಾಗಿ ವಿರೋಧಿಸಬೇಕು. ಅದೇ ವೇಳೆಯಲ್ಲಿ ಪಶ್ಚಿಮ ಘಟ್ಟಕ್ಕೆ ಮಾರಕವಾಗಿರುವ ದೊಡ್ಡ ಕಾರ್ಪೋರೆಟ್ ಹಿತಾಸಕ್ತಿಗಳು, ಅವರು ಮಾಡುತ್ತಿರುವ ಪರಿಸರ ಹಾನಿಯ ಬಗ್ಗೆ ದೊಡ್ಡದಾಗಿ ಗಟ್ಟಿ ದನಿಯೆತ್ತಬೇಕು. ದೊಡ್ಡ ಕಾರ್ಪೋರೆಟ್‌ಗಳು ಹಿಡಿದಿಟ್ಟುಕೊಂಡಿರುವ ಸಾವಿರಾರು ಎಕರೆೆ ಅಕ್ರಮ ಭೂಮಿಗಳನ್ನು ವಶಪಡಿಸಿಕೊಂಡು ಅಲ್ಲಿ ಅರಣ್ಯ ಸೇರಿದಂತೆ ಇನ್ನಿತರ ಸಸ್ಯ ಜಾಲಗಳು ಬೆಳೆಯಲು ಆಸ್ಪದ ಮಾಡಿಕೊಡುವಂತೆ ಸರಕಾರಗಳನ್ನು ಒತ್ತಾಯಿಸಬೇಕು. ಗುಂಡ್ಯದಂತಹ ಖಾಸಗಿ ಜಲವಿದ್ಯುತ್ ಯೋಜನೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಬೇಕು. ಎತ್ತಿನಹೊಳೆಯಂತಹ ಪ್ರಯೋಗಿಕವಾಗದ ಅಲ್ಲದೇ ಪರಿಸರಕ್ಕೆ ಹಾನಿಮಾಡುವ ಯೋಜನೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಬೇಕು. ಪಶ್ಚಿಮಘಟ್ಟ ಪ್ರದೇಶದ ನಗರ, ಪಟ್ಟಣ, ಪೇಟೆಗಳು ಕಡ್ಡಾಯವಾಗಿ ಕಸ ಇತ್ಯಾದಿ ಮಾಲಿನ್ಯವನ್ನು ಸಂಸ್ಕರಿಸುವ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸಬೇಕು. ಪರಿಸರಕ್ಕೆ ಅಪಾಯಕಾರಿ ಮಾಲಿನ್ಯಕಾರಕ ಗಣಿ ಇತ್ಯಾದಿ ಕೈಗಾರಿಕಾ ಘಟಕಗಳನ್ನು ಕೂಡಲೇ ಮುಚ್ಚಬೇಕೆಂದು ಒತ್ತಾಯಿಸಬೇಕು. ವಿಲಾಸಿ ಮೋಜಿಗಾಗಿನ ಎಲ್ಲಾ ರೆಸಾರ್ಟ್‌ಗಳು ಹಾಗೂ ಹೊಟೇಲುಗಳನ್ನು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ರದ್ದುಗೊಳಿಸಬೇಕು. ಸಾವಿರಾರು ಎಕರೆೆಗಳ ಮಾರಕ ಅಕೇಶಿಯಾ ಹಾಗೂ ನೀಲಗಿರಿ ನೆಡುತೋಪುಗಳನ್ನು ನಾಶ ಮಾಡಿ ಅಲ್ಲಿ ಸಹಜ ನೈಸರ್ಗಿಕ ಅರಣ್ಯ ಬೆಳೆಯುವಂತೆ ನೋಡಿಕೊಳ್ಳಲು ಸರಕಾರವನ್ನು ಒತ್ತಾಯಿಸಬೇಕು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಲೆತಲಾಂತರಗಳಿಂದ ವಾಸವಿರುವ ಪರಿಸರ ಸ್ನೇಹಿ ಆದಿವಾಸಿ ಇನ್ನಿತರ ಜನಸಾಮಾನ್ಯರಿಗೆ ಅವರು ರೂಢಿಸಿಕೊಳ್ಳುವ ತುಂಡು ಭೂಮಿಗಳಿಗೆ ಕೂಡಲೇ ಹಕ್ಕುಪತ್ರ ನೀಡಿ ಅಗತ್ಯ ನಾಗರಿಕ ಸೌಲಭ್ಯಗಳನ್ನು ವಿಕೇಂದ್ರಿತವಾಗಿ ಒದಗಿಸುವಂತೆ ಹಕ್ಕೊತ್ತಾಯಗಳನ್ನು ಸರಕಾರಗಳ ಮುಂದೆ ಇಡಬೇಕು.
ಜನಸಾಮಾನ್ಯರ ಒಗ್ಗಟ್ಟಿನ ಹೋರಾಟದಿಂದ ಮಾತ್ರ ಅಮೂಲ್ಯ ಪಶ್ಚಿಮ ಘಟ್ಟ ಮತ್ತು ಜನಸಾಮಾನ್ಯರ ಬದುಕು ಉಳಿಸಿಕೊಳ್ಳಲು ಸಾಧ್ಯವೇ ಹೊರತು ಮಾಧವ್ ಗಾಡ್ಗೀಳ್ ಇಲ್ಲವೇ ಕಸ್ತೂರಿ ರಂಗನ್ ವರದಿಗಳನ್ನು ಜಾರಿಗೊಳಿಸುವುದರಿಂದಲ್ಲ ಎಂಬುದನ್ನು ಮನಗಾಣಬೇಕಾದುದು ಬಹಳ ಮುಖ್ಯವಾದುದು. ಅವುಗಳು ಮೇಲ್ನೋಟದಲ್ಲಿ ಮಾತ್ರ ಪರಿಸರಪರವೆಂದು ಕಾಣಿಸುತ್ತವೆಯೇ ಹೊರತು ವಾಸ್ತವದಲ್ಲಿ ಅದಕ್ಕೆ ತದ್ವಿರುದ್ಧ್ದವಾದುದೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)