varthabharthi

ವೈವಿಧ್ಯ

ಹಾಶಿಂಪುರದ ಪೋಲಿಸ್ ಕಸ್ಟಡಿಯಲ್ಲಿ ನಡೆದ ಘೋರ ಸಾಮೂಹಿಕ ಹತ್ಯೆಗಳನ್ನು ಮರೆಯಬಾರದು

ಹಾಶಿಂಪುರ ಕಲಿಸುವ ಪಾಠಗಳು

ವಾರ್ತಾ ಭಾರತಿ : 19 Nov, 2018
ಅನು: ಶಿವಸುಂದರ್

ನಡೆದ ಘಟನೆಗಳನ್ನು ಮರೆತುಬಿಡುವುದು ಮತ್ತು ಹೇಗಾದರೂ ಸರಿ ಅದಕ್ಕೆ ಒಂದು ಅಂತ್ಯಕಾಣಿಸಿ ಮುಂದುವರಿಯುವುದು ಬೇರೆಯ ಪ್ರಕರಣದಲ್ಲಿ ಎಷ್ಟು ಸರಿ ಅಥವಾ ತಪ್ಪು ಎಂದು ಬೇಕಾದರೆ ಚರ್ಚಿಸಬಹುದು. ಆದರೆ ಅಂತಹ ಯೋಚನೆಯನ್ನೂ ಹಾಶಿಂಪುರ ಪ್ರಕರಣದಲ್ಲಿ ಮಾಡಲಾಗದು. ಉತ್ತರಪ್ರದೇಶದ ಹಾಶಿಂಪುರದಲ್ಲಿ ಉತ್ತರಪ್ರದೇಶದ ಸಶಸ್ತ್ರ ಪ್ರಾಂತೀಯ ಪೊಲೀಸ್ ಪಡೆಯು (ಪ್ರೊವಿನ್ಷಿಯಲ್ ಆರ್ಮಡ್ ಕಾನ್ಸ್ಟೆಬ್ಯುಲರಿ-ಪಿಎಸಿ) 38 ಮುಸ್ಲಿಮರನ್ನು 1987ರಲ್ಲಿ ಸಾಮೂಹಿಕವಾಗಿ ಕೊಂದುಹಾಕಿತ್ತು. ಹೀಗಾಗಿ ಈ ಪ್ರಕರಣ ನಡೆದು 31 ವರ್ಷಗಳಷ್ಟು ತಡವಾಗಿಯಾದರೂ ದಿಲ್ಲಿ ಹೈಕೋರ್ಟ್ ಈ ಪ್ರಕರಣದ ಬಗ್ಗೆ ಇತ್ತೀಚೆಗೆ ನೀಡಿರುವ ತೀರ್ಪನ್ನು ವಿಶಾದವಾಗಿ ಚರ್ಚಿಸುವ ಅಗತ್ಯವಿದೆ ಮತ್ತು ರಕ್ತವನ್ನು ಹೆಪ್ಪುಗಟ್ಟಿಸುವಂತಹ ಆ ಪ್ರಕರಣದ ನೆನಪುಗಳನ್ನು ಸೋಸಿ ಭಾರತದ ಸಮಾಜ ಮತ್ತು ರಾಜಕೀಯಕ್ಕೆ ಸಂಬಂಧಪಟ್ಟಂತಹ ಪಾಠಗಳನ್ನು ಅದರಿಂದ ಹೊರತೆಗೆಯುವ ಅಗತ್ಯವಿದೆ. ಪ್ರಕರಣದಲ್ಲಿ ಪಾಲ್ಗೊಂಡ ಪಿಎಸಿಯ 16 ನಿವೃತ್ತ ಸಿಬ್ಬಂದಿಗೆ ಹೈಕೋರ್ಟು ಮರಣದಂಡನೆಯನ್ನು ವಿಧಿಸಿದೆ (ಇನ್ನೂ ಮೂವರು ಸಿಬ್ಬಂದಿ ವಿಚಾರಣೆ ನಡೆಯುತ್ತಿರುವಾಗಲೇ ಮೃತಪಟ್ಟಿದ್ದರು). ಅಷ್ಟು ಮಾತ್ರವಲ್ಲದೆ ಕಾನೂನನ್ನು ಜಾರಿ ಮಾಡಬೇಕಾದ ಸಂಸ್ಥೆಗಳಲ್ಲಿ ಆಳವಾಗಿ ಬೇರೂರಿರುವ ಸಾಂಸ್ಥಿಕ ಪಕ್ಷಪಾತವನ್ನು ಈ ಪ್ರಕರಣವು ಬಯಲು ಮಾಡಿದೆ ಎಂದು ದಿಲ್ಲಿ ಹೈಕೋರ್ಟು ತನ್ನ ಅಭಿಪ್ರಾಯವನ್ನು ದಾಖಲಿಸಿದೆ. ಪೊಲೀಸ್ ಕಸ್ಟಡಿಯಲ್ಲಿ ಮತ್ತು ಸಾಂಸ್ಥಿಕವಾಗಿ ನಡೆವ ಹಿಂಸಾಚಾರಗಳ ಸುದ್ದಿಗಳ ಬಗ್ಗೆ ಸಂವೇದನೆಯೇ ಮರಗಟ್ಟಿಹೋಗಿರುವ ಈ ರಾಷ್ಟ್ರಕ್ಕೂ ಕೂಡ ಹಾಶಿಂಪುರ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಶಿಕ್ಷಾಭೀತಿಯಿಲ್ಲದೆ ತೋರಿರುವ ಕ್ರೌರ್ಯ ಮತ್ತು ಅದರಲ್ಲಿನ ಮುಸ್ಲಿಮ್ ವಿರೋಧಿ ನಂಜಿನ ಧೋರಣೆಗಳು ಗಾಬರಿ ಹುಟ್ಟಿಸಿವೆ.
 ವಾಸ್ತವವಾಗಿ ಹೇಳುವುದಾದರೆ ಕಳೆದ ಮೂರು ದಶಕಗಳಿಂದ ನಿಜಕ್ಕೂ ವಿಚಾರಣೆಯನ್ನು ಎದುರಿಸುತ್ತಿದ್ದದ್ದು ಉತ್ತರಪ್ರದೇಶದ ಪೊಲೀಸರು ಮತ್ತು ಆ ಅವಧಿಯಲ್ಲಿ ರಾಜ್ಯವಾಳಿದ ಸರಕಾರಗಳೇ. ಈ ಪ್ರಕರಣದ ವಿಚಾರಣೆಯ ಗತಿಯು ಪೋಲಿಸ್ ಕಸ್ಟಡಿಯಲ್ಲಿನ ಹಿಂಸಾಚಾರಗಳು ಮತ್ತು ಸಾವುಗಳಂತಹ ವಿಷಯಗಳ ಬಗ್ಗೆ ಪೊಲೀಸ್ ವಿಚಾರಣೆಯನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಮೇಲಿನ ದೋಷಾರೋಪದಂತಿದೆ. ಯಾಕೆಂದರೆ ಮೊದಲು ಕೆಳಗಿನ ಕೋರ್ಟ್‌ನಲ್ಲಿ ಆನಂತರ ಹೈಕೋರ್ಟ್‌ನಲ್ಲಿ ಎಲ್ಲಾ ಪೊಲೀಸರು ದೋಷಮುಕ್ತರಾಗಿಬಿಟ್ಟಿದ್ದರು. ದೇಶಾದ್ಯಂತ ಪೊಲೀಸ್ ಕಸ್ಟಡಿಯಲ್ಲಿನ ಸಾವುಗಳ ಸಂಖ್ಯೆಯು ನಿರಂತರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ನಿಗಾ ಇಡುವವರು ಯಾರು ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದುಹೋಗುತ್ತಿದೆ.
 ಹೈಕೋರ್ಟ್ ಸ್ಪಷ್ಟವಾಗಿ ಗುರುತಿಸಿದಂತೆ ಈ ಕಸ್ಟಡಿ ಕೊಲೆಗಳು ಇಂಥಾ ಹೀನಾಯ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣಕರ್ತರಾಗಿರುವವರನ್ನು ಪರಿಣಾಮಕಾರಿಯಾಗಿ ಕಾನೂನು ಕ್ರಮಕ್ಕೆ ಒಳಪಡಿಸುವಲ್ಲಿ ನಮ್ಮ ಕಾನೂನು ವ್ಯವಸ್ಥೆಯ ವೈಫಲ್ಯವೂ ಆಗಿದೆ. ಎಲ್ಲಿಯತನಕ ಹಾಶಿಂಪುರದ ಪಾಠಗಳನ್ನು ಹೃದಯಕ್ಕೆ ತಟ್ಟಿಸಿಕೊಂಡು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಹಾಶಿಂಪುರದಂಥ ಘಟನೆಗಳು ಕೊನೆಯಾಗುವುದಿಲ್ಲ ಎಂಬ ಅಭಿಪ್ರಾಯವೊಂದಿದ್ದರೆ ಅದು ಸಿನಿಕ ಅಭಿಪ್ರಾಯವಾಗದೆ ಬದಲಿಗೆ ವಾಸ್ತವಕ್ಕೆ ಸಮೀಪವಿರುವ ಹೇಳಿಕೆಯಾಗಿದೆ. ಈ ಸುದೀರ್ಘ ಯುದ್ಧದಲ್ಲಿ ತೊಡಗಿಸಿಕೊಂಡಿದ್ದ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಕೀಲರು ಸ್ಪಷ್ಟಪಡಿಸುವಂತೆ ಇಂಥ ಘನಘೋರ ಕೃತ್ಯವೊಂದನ್ನು ಪಿಎಸಿಯ ಕೆಳಹಂತದ ಸಿಬ್ಬಂದಿಯು ತನ್ನಿಷ್ಟಕ್ಕೆ ತಾವೇ ಎಸಗಿರಲು ಸಾಧ್ಯವಿಲ್ಲ. ಇದೂ ಸಹ ಹಳೆಯ ಕಾಯಿಲೆಯೇ ಆಗಿದೆ: ಪೊಲೀಸ್ ಕಸ್ಟಡಿಯಲ್ಲಿ ನಡೆದ ಹಿಂಸಾಚಾರಗಳಲ್ಲಿ ಅಪರೂಪಕ್ಕೊಮ್ಮೆ ಶಿಕ್ಷೆಯಾದರೂ ಅದರ ಹಿಂದಿನ ಸೂತ್ರಧಾರರಿಗೆ ಮಾತ್ರ ಶಿಕ್ಷೆಯಾಗುವುದೇ ಇಲ್ಲ.
ನಾಗರಿಕರ ಮಾನವ ಹಕ್ಕುಗಳನ್ನು ಸಾಂವಿಧಾನಿಕವಾಗಿ ರಕ್ಷಿಸಬೇಕೆಂದು ನಿರೀಕ್ಷಿಸಲಾದ ಸಂಸ್ಥೆಗಳೇ ನಾಗರಿಕರು ಬಲಿಯಾಗಲು ಬಿಟ್ಟುಕೊಟ್ಟಿವೆ. ದುರದೃಷ್ಟವಶಾತ್ ಇದೇನೂ ಹಳೆಯ ಕಥೆಯಲ್ಲ. ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಳ್ಳಲಾದ ಸಮುದಾಯ ಮತ್ತು ಗುಂಪುಗಳ ಮೇಲೆ ಉದ್ದೇಶಪೂರ್ವಕವಾದ ಸಾಂಸ್ಥಿಕ ಕ್ರೌರ್ಯ ಮತ್ತು ಹಿಂಸಾಚಾರಗಳು ನಡೆಯುತ್ತಲೇ ಇದ್ದರೂ ತಪ್ಪಿತಸ್ಥರಿಗೆ ಮಾತ್ರ ಯಾವುದೇ ಶಿಕ್ಷೆಯಾಗುತ್ತಿಲ್ಲ. ಆದ್ದರಿಂದಲೇ ಹಾಶಿಂಪುರವನ್ನು ನೆನಪಿಸಿಕೊಳ್ಳುವುದೂ ಮತ್ತದರ ಪಾಠಗಳನ್ನು ಚರ್ಚಿಸುವುದು ಈ ಕ್ಷಣದ ಅಗತ್ಯವಾಗಿದೆ.

ಹಾಗಿದ್ದರೂ ಈ ಕೋಮುಗಲಭೆಯ ಹಿಂಸಾಚಾರಕ್ಕೆ ತುತ್ತಾಗಿ ಬದುಕುಳಿದವರ ಮತ್ತು ಹತ್ಯೆಗೊಳಗಾದವರ ಕುಟುಂಬದವರ ಮತ್ತು ಅವರ ಬೆಂಬಲಿಗರ ನೈತಿಕ ಸ್ಥೈರ್ಯ ಮತ್ತು ನ್ಯಾಯಾಂಗದಲ್ಲಿ ಅವರಿಟ್ಟಿದ್ದ ವಿಶ್ವಾಸಗಳನ್ನು ಇಲ್ಲಿ ಗುರುತಿಸಲೇ ಬೇಕು. ಮಾಧ್ಯಮದ ವರದಿಗಳು ಮತ್ತು ಸಂತ್ರಸ್ತರ ವಕೀಲರು ತೋರಿಸುವಂತೆ ಈ ಸಂತ್ರಸ್ತರನ್ನು ಬಂಧಿಸಲ್ಪಟ್ಟ ಪ್ರದೇಶದ ನೆರೆಹೊರೆಯಲ್ಲಿದ್ದವರನ್ನೆಲ್ಲಾ ಅಪಾಯಕಾರಿಗಳೆಂದೂ ಮತ್ತು ದೇಶದ್ರೋಹಿಗಳೆಂದೂ ದೂಷಿಸಲಾಗುತ್ತಿತ್ತು. ಹಾಗಿದ್ದರೂ ಸಂತ್ರಸ್ತರನ್ನು ಬಂಧಿಸಿದ ಕೂಡಲೇ ಯಾವುದೇ ದೊಡ್ಡ ಪ್ರತಿಕ್ರಿಯೆಗಳು ವ್ಯಕ್ತವಾಗಲಿಲ್ಲ ಅಥವಾ ಅವರುಗಳ ವಿರುದ್ಧದ ಸಾಕ್ಷಿಯಾಗಿ ಯಾವುದೇ ಶಸ್ತ್ರಾಸ್ತ್ರಗಳು ದೊರೆಯಲಿಲ್ಲ. ಈ ವಾಸ್ತವಗಳೆಲ್ಲವೂ ಇಡೀ ಪ್ರದೇಶದ ವಾಸಿಗಳಲ್ಲೆರ ಮೇಲೆ ಗುಮ್ಮ ಕೂರಿಸುವ ಯತ್ನಗಳು ಎಷ್ಟು ಸುಳ್ಳೆಂಬುದನ್ನು ಸಾರಿ ಹೇಳುತ್ತಿತ್ತು. ಮತ್ತೆ, ಆ ಹಿಂಸಾಚಾರದಲ್ಲಿ ಬದುಕುಳಿದವರಿಗೆ ಕೆಳಗಿನ ಕೋರ್ಟಿನಲ್ಲೇ ಹಿನ್ನಡೆಯುಂಟಾಗಿದ್ದರಿಂದ ಸಾಕಷ್ಟು ಭಾವನಾತ್ಮಕ ಮತ್ತು ಮಾನಸಿಕ ಕ್ಷೋಭೆಯನ್ನು ಅನುಭವಿಸುವುದರ ಜೊತೆಜೊತೆಗೆ ಅವರ ಜೀವನೋಪಾಯಗಳ ಮೇಲೆ, ಮಕ್ಕಳ ಶಿಕ್ಷಣದ ಮೇಲೆ ತೀವ್ರತರದ ದುಷ್ಪರಿಣಾಮಗಳು ಬೀರಿದರೂ ಅವರುಗಳು ಹಿಂಜರಿಯದೆ ಮೊಕದ್ದಮೆಯನ್ನು ಮುನ್ನಡೆಸಿದರು. ಹಲವು ಮಹಿಳೆಯರನ್ನು ಒಳಗೊಂಡಿದ್ದ ವಕೀಲರ ತಂಡ ಕಲ್ಲುಬಂಡೆಯಂತೆ ಅವರ ಬೆಂಬಲಕ್ಕೆ ನಿಂತಿತು. ಇಂಥಾ ನಿರಂತರ ಮತ್ತು ಪಟ್ಟುಬಿಡದ ಪ್ರಯತ್ನಗಳಿಂದಾಗಿಯೇ ಅಂತಿಮವಾಗಿ ನಡೆದ ಸಾಮೂಹಿಕ ಹತ್ಯೆಗೂ ಪಿಎಸಿ ಸಿಬ್ಬಂದಿಗೂ ಇದ್ದ ಸಂಬಂಧವನ್ನು ಸಾಬೀತುಪಡಿಸುವ ಪುರಾವೆಯನ್ನು ಕಂಡುಹಿಡಿಯಲು ಸಾಧ್ಯವಾಯಿತು. ಅತ್ಯಂತ ಕಷ್ಟದಿಂದಲೇ ಆದರೂ ಕೊನೆಗೊಮ್ಮೆ ನ್ಯಾಯವನ್ನು ಖಂಡಿತ ಪಡೆಯಬಹುದೆಂಬ ಭರವಸೆ ಮತ್ತು ವಿಶ್ವಾಸವನ್ನು ಕಾಪಿಟ್ಟುಕೊಂಡು ಬಂದ ಶ್ರೇಯಸ್ಸು ಈ ಹಿಂಸಾಚಾರಕ್ಕೆ ಒಳಗಾಗಿ ಬದುಳಿದವರಿಗೆ, ವಕೀಲರು ಮತ್ತು ಮಾಧ್ಯಮದ ಒಂದು ಸಣ್ಣ ವಿಭಾಗಕ್ಕೆ ಸೇರಬೇಕು. ಈ ಪ್ರಕರಣವೊಂದು ನಿತ್ಯರೂಢಿಯಲ್ಲದ ಅಪಾಯವಾದ ಮಾತ್ರವೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಈ ಹಿಂಸಾಚಾರಕ್ಕೆ ಬಲಿಯಾದವರ ಮತ್ತು ಕೊಲ್ಲಲ್ಪಟ್ಟವರ ಕುಟುಂಬಗಳು ಮುಂದಿಡುತ್ತಿರುವ ಹಲವಾರು ಆಗ್ರಹಗಳನ್ನು ಒಪ್ಪಿಕೊಳ್ಳಬೇಕಿದೆ. ಈ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಯೊಬ್ಬರು ಬಣ್ಣಿಸಿದಂತೆ ಸ್ವತಂತ್ರ ಭಾರತದ ಅತ್ಯಂತ ಹೀನಾಯವಾದ ಕಸ್ಟಡಿ ಕೊಲೆಯಾದ ಈ ಪ್ರಕರಣದಿಂದ ಕಲಿಯಬೇಕಾದ ಪಾಠಗಳನ್ನು ಜೀವಂತವಾಗಿಟ್ಟುಕೊಳ್ಳಬೇಕೆಂದರೆ ಈ ದೇಶ ಎತ್ತ ಸಾಗುತ್ತಿದೆಯೆಂಬುದರ ಬಗ್ಗೆ ಕಳವಳಗೊಂಡಿರುವ ನಾಗರಿಕರು ಮತ್ತು ಮಾಧ್ಯಮಗಳು ಅವರ ಬೆಂಬಲಕ್ಕೆ ನಿಲ್ಲಬೇಕಿದೆ.. ಮುಸ್ಲಿಂ ಸಮುದಾಯದ ಮಟ್ಟಿಗೆ ಹಾಶಿಂಪುರ ಘಟನೆಯು ಅವರ ಸಾಮೂಹಿಕ ಇತಿಹಾಸದ ಮರೆಯಲಾಗದ ಭಾಗವಾಗಿದೆ. ಇದರ ವಿವರಗಳು ಅವರ ಸಾಮೂಹಿಕ ನೆನಪಿನಲ್ಲಿ ಆಳವಾಗಿ ಕೊರೆದಿಡಲ್ಪಟ್ಟಿದೆ. ಹೀಗಾಗಿ ಈ ಪ್ರಕರಣವು ವಿಶಾಲ ಸಾರ್ವಜನಿಕ ನೆನಪಿನ ಗುರುತಾಗುವುದೂ ಕೂಡಾ ಅತ್ಯಗತ್ಯವಾಗಿದೆ. ಇತಿಹಾಸದಿಂದ ಪಾಠ ಕಲಿಯಲಾರದವರು ಅದನ್ನು ಮತ್ತೆ ಪುನರಾವರ್ತಿಸುವ ತಪ್ಪಿಗೆ ತುತ್ತಾಗುತ್ತಾರೆ ಎಂಬುದು ಅತ್ಯಂತ ಸ್ಪಷ್ಟವಾದ ಆದರೆ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ಪಾಠವೇ ಆಗಿದೆ.

ಕೃಪೆ: Economic and Political Weekly

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)