varthabharthi

ವೈವಿಧ್ಯ

ಬಿಬಿಸಿ ಅಧ್ಯಯನ

ಭಾರತದಲ್ಲಿ ಹೇರಲಾಗುತ್ತಿರುವ ಸುಳ್ಳು ಸುದ್ದಿಗಳ ಹಿಂದೆ!

ವಾರ್ತಾ ಭಾರತಿ : 21 Nov, 2018
ಕೃಪೆ: ಡೆಕ್ಕನ್ ಹೆರಾಲ್ಡ್

‘‘ಯಾವ ಸಂದೇಶಗಳನ್ನು ತಾವು ಇತರರ ಜತೆ ಹಂಚಿಕೊಂಡರೆ ಹಿಂಸೆ ಸಂಭವಿಸಬಹುದೋ ಅಂತಹ ಸಂದೇಶಗಳನ್ನು ಶೇರ್ ಮಾಡಲು ಜನರು ಹಿಂದು ಮುಂದು ನೋಡುತ್ತಾರೆ, ಅಳುಕುತ್ತಾರೆ; ಆದರೆ ರಾಷ್ಟ್ರೀಯತೆಯ ಪ್ರಶ್ನೆಗೆ ಸಂಬಂಧಿಸಿದ ಸುದ್ದಿಗಳಿಗಾಗುವಾಗ ಅಂತಹ ಸುದ್ದಿಗಳನ್ನು ಕಳುಹಿಸುವುದು ತಮ್ಮ ಕರ್ತವ್ಯವೆಂದು ಜನರು ತಿಳಿಯುತ್ತಾರೆ.’’ ಎಂದು ಸಂಶೋಧನೆಯ ವರದಿ ಹೇಳುತ್ತದೆ.

ಈಚೆಗೆ ಬಿಬಿಸಿ ಸಂಶೋಧನೆ ಬಿಡುಗಡೆಗೊಳಿಸಿದ ಒಂದು ವರದಿಯ ಪ್ರಕಾರ ಭಾರತದಲ್ಲಿ ‘ರಾಷ್ಟ್ರ ನಿರ್ಮಾಣದ ಉದ್ದೇಶಗಳಿಗಾಗಿ’ ಎಂದು ಹಾಡಲಾಗುವ ಸುಳ್ಳು ಸುದ್ದಿಗಳನ್ನು ಸುಳ್ಳೋ, ಸತ್ಯವೋ ಎಂದು ಪರೀಕ್ಷಿಸದೆ ಜನರ ಬೇಕಾಬಿಟ್ಟಿಯಾಗಿ ಅವುಗಳನ್ನು ಇತರರ ಜೊತೆ ಹಂಚಿಕೊಳ್ಳುತ್ತಾರೆ.
ಸಾಮಾನ್ಯ ನಾಗರಿಕರು ಯಾವ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ನಂಬುತ್ತಾ ಹರಡುತ್ತಿರುತ್ತಾರೆ ಎಂಬ ಕುರಿತು ಭಾರತ ಕೀನ್ಯಾ ಮತ್ತು ನೈಜೀರಿಯಾದಲ್ಲಿ ನಡೆಸಲಾದ ವ್ಯಾಪಕ ಸಂಶೋಧನೆಯಿಂದ ಈ ವಿಷಯ ತಿಳಿದು ಬಂದಿದೆ ಎಂದು ಬಿಬಿಸಿ ಹೇಳಿದೆ. ಅದರ ವರದಿಯ ಪ್ರಕಾರ ಟ್ವಿಟರ್‌ನಲ್ಲಿ ಬರುವ ಸುಳ್ಳು ಸುದ್ದಿಯ ಮೂಲಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ನೆಟ್‌ವರ್ಕ್ ಗಳು ಒಂದನ್ನೊಂದು ಬೇರ್ಪಡಿಸಲಾಗದಂತೆ ಓವರ್‌ಲ್ಯಾಪ್ ಆಗುತ್ತವೆ.
ಸುದ್ದಿಯನ್ನು ಶೇರ್ ಮಾಡುವ ವಿಷಯಕ್ಕೆ ಬಂದಾಗ ತರ್ಕವನ್ನು ಮೀರಿ ಭಾವನೆಯೇ ಮೇಲುಗೈ ಸಾಧಿಸುತ್ತದೆ ಎನ್ನುತ್ತದೆ ಬಿಬಿಸಿಯ ಮೊದಲ ಪ್ರಕಟಿತ ಅಧ್ಯಯನ:
‘‘ಮಾಧ್ಯಮಗಳಲ್ಲಿ ನಡೆಯುತ್ತಿರುವ ಹೆಚ್ಚಿನ ಚರ್ಚೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಹರಡಲಾಗುತ್ತಿರುವ ಸುಳ್ಳು ಸುದ್ದಿಯ ಮೇಲೆ ಕೇಂದ್ರೀಕೃತವಾಗಿರುವಾಗ, ಈ ಸಂಶೋಧನೆಯು ಜಗತ್ತಿನ ಉಳಿದ ಭಾಗಗಳಲ್ಲಿ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರ ನಿರ್ಮಾಣದ ಹೆಸರಿನಲ್ಲಿ ಸತ್ಯವನ್ನು ಅಡಿಗೆ ತಳ್ಳಲಾಗುತ್ತಿದೆ ಎಂಬುದಕ್ಕೆ ಪ್ರಬಲವಾದ ಪುರಾವೆಯನ್ನು ಒದಗಿಸುತ್ತವೆ’’ ಎಂದಿದ್ದಾರೆ ಬಿಬಿಸಿ ವರ್ಲ್ಡ್ ಸರ್ವಿಸ್ ಗ್ರೂಪ್‌ನ ನಿರ್ದೇಶಕರಾಗಿರುವ ಜೇಮಿ ಆ್ಯಂಗಸ್.
ಬಿಗ್ ಡೇಟಾ ಮತ್ತು ಅನಾಲಿಟಿಕ್ಸ್/ವಿಶ್ಲೇಷಣಾ ವಿಧಾನಗಳನ್ನು ಬಳಸುವ ವ್ಯಾಪಕ ಸಂಶೋಧನೆಯ ಫಲವಾಗಿ ಬಿಬಿಸಿ ಕಂಡುಕೊಂಡ ವಿಷಯ ಹೀಗಿದೆ: ಭಾರತದ ಟ್ವಿಟರ್ ಜಾಲಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಬಲಪಂಥೀಯ ಮೂಲಗಳು ಎಡಪಂಥೀಯ ಮೂಲಗಳಿಗಿಂತ ಹೆಚ್ಚು ನಿಕಟವಾಗಿ ಕಾರ್ಯವೆಸಗುತ್ತವೆ. ಇದರಿಂದಾಗಿ ಬಲಪಂಥದ ಕಡೆ ವಾಲುವ, ಬಲಪಂಥದ ಬಗ್ಗೆ ಒಲವು ಹೊಂದಿರುವ ಸುಳ್ಳುಸುದ್ದಿಗಳಿಗೆ ಎಡಪಂಥದ ಕಡೆಗೆ ವಾಲುವ ಸುದ್ದಿಗಳಿಗಿಂತ ಹೆಚ್ಚು ವೇಗವಾಗಿ ಹರಡಲು ಅವಕಾಶ ಸಿಕ್ಕಂತಾಗುತ್ತದೆ ಮತ್ತು ಸಾಧ್ಯವಾಗುತ್ತದೆ.’’


ಈ ಸಂಶೋಧನೆಯು ಬಿಬಿಸಿ ಬಿಯಾಂಡ್ ಫೇಕ್ ನ್ಯೂಸ್ (ಬಿಬಿಸಿ ಸುಳ್ಳು ಸುದ್ದಿಯ ಆಚೆಗೆ) ಎಂಬ ಪ್ರಾಜೆಕ್ಟ್‌ನ ಒಂದು ಭಾಗವಾಗಿದೆ ಮತ್ತು ಸದ್ಯದಲ್ಲೇ ಆರಂಭವಾಗುವ ಒಂದು ಅಂತರ್‌ರಾಷ್ಟ್ರೀಯ ಸುಳ್ಳು ಮಾಹಿತಿ ವಿರೋಧಿ ಅಭಿಯಾನದ ಅಂಗವಾಗಿದೆ. ಭಾರತ, ಕೀನ್ಯಾ ಮತ್ತು ನೈಜೀರಿಯಾದಲ್ಲಿ ಜನರು ಸುಳ್ಳು ಸುದ್ದಿಗಳನ್ನು ಯಾವುದೇ ಮುಲಾಜಿಲ್ಲದೆ ಹಿಂದೆ ಮುಂದೆ ನೋಡದೆ ಫಾರ್ವರ್ಡ್ ಮಾಡುತ್ತಾರೆ. ತಾವು ಫಾರ್ವರ್ಡ್ ಮಾಡಿರುವ ಸುದ್ದಿ ಸುಳ್ಳೋ ಸತ್ಯವೋ ಎಂದು ಇನ್ನಾರಾದರೂ ಚೆಕ್ ಮಾಡುತ್ತಾರೆ ಎಂಬ ಭರವಸೆಯಲ್ಲಿ ಜನರು ಹೀಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುತ್ತಾರೆ.
‘‘ಯಾವ ಸಂದೇಶಗಳನ್ನು ತಾವು ಇತರರ ಜತೆ ಹಂಚಿಕೊಂಡರೆ ಹಿಂಸೆ ಸಂಭವಿಸಬಹುದೋ ಅಂತಹ ಸಂದೇಶಗಳನ್ನು ಶೇರ್ ಮಾಡಲು ಜನರು ಹಿಂದು ಮುಂದು ನೋಡುತ್ತಾರೆ ಅಳುಕುತ್ತಾರೆ; ಆದರೆ ರಾಷ್ಟ್ರೀಯತೆಯ ಪ್ರಶ್ನೆಗೆ ಸಂಬಂಧಿಸಿದ ಸುದ್ದಿಗಳಿಗಾಗುವಾಗ ಅಂತಹ ಸುದ್ದಿಗಳನ್ನು ಕಳುಹಿಸುವುದು ತಮ್ಮ ಕರ್ತವ್ಯವೆಂದು ಜನರು ತಿಳಿಯುತ್ತಾರೆ.’’ ಎಂದು ಸಂಶೋಧನೆಯ ವರದಿ ಹೇಳುತ್ತದೆ.
‘‘ಭಾರತದ ಅಭಿವೃದ್ಧಿ, ಹಿಂದೂ ಶಕ್ತಿ ಮತ್ತು ಗತಕಾಲದ ಹಿಂದೂ ವೈಭವದ ಕುರಿತಾದ ಸುಳ್ಳು ಸುದ್ದಿ ಕತೆಗಳನ್ನು ಅವು ಸತ್ಯವೂ ಸುಳ್ಳೋ ಎಂದು ಪರೀಕ್ಷಿಸುವ ಯಾವುದೇ ಪ್ರಯತ್ನ ನಡೆಸದೆಯೇ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ ಈ ಸಂದೇಶಗಳನ್ನು ಶೇರ್ ಮಾಡುವಾಗ, ತಮ್ಮ ಪರಿಚಯದವರಿಗೆ ಫಾರ್ವರ್ಡ್ ಮಾಡುವಾಗ ಜನರಿಗೆ ತೀವ್ರ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತೇವೆ ಅನ್ನಿಸುತ್ತದೆ.’’
ಹೀಗೆ, ಭಾರತದಲ್ಲಿ ರಾಷ್ಟ್ರೀಯತೆಯು ಸುಳ್ಳು ಸುದ್ದಿಗಳನ್ನು, ಸುಳ್ಳು ಸಂದೇಶಗಳನ್ನು ಹರಡುವ ಒಂದು ಮಾಧ್ಯಮವಾಗಿದೆ. ಆದರೆ ಕೀನ್ಯಾ ಮತ್ತು ನೈಜೀರಿಯಾದ ಕಥೆ ಬೇರೆಯೇ ಇದೆ ಎನ್ನುತ್ತದೆ ಬಿಬಿಸಿ ತಂಡದ ಸಂಶೋಧನೆ. ಅಲ್ಲಿ ಜನರ ಮಧ್ಯೆ ಶೇರ್ ಆಗುವ ಸುಳ್ಳು ಸುದ್ದಿಗಳು ರಾಷ್ಟ್ರೀಯ ಆತಂಕಗಳನ್ನು ಹಾಗೂ ರಾಷ್ಟ್ರೀಯ ಆಕಾಂಕ್ಷೆಗಳನ್ನು ಪ್ರತಿಫಲಿಸುತ್ತದೆ. ಹಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಗರಣಗಳು ಕೀನ್ಯಾದಲ್ಲಿ ವಾಟ್ಸ್ ಆ್ಯಪ್ ಸಂಭಾಷಣೆಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೂರನೇ ಒಂದು ಪಾಲು ಸುಳ್ಳು ಸುದ್ದಿಗಳ ಮೂಲವಾಗಿದೆ.
ಇಲ್ಲಿ ಉಲ್ಲೇಖಿಸಲಾಗಿರುವ ಸಂಶೋಧನೆಯು ಬಿಬಿಸಿಯ ಬಿಯಾಂಡ್ ಫೇಕ್‌ನ್ಯೂಸ್ ಎಂಬ ವಿಸ್ತೃತ ಕಾರ್ಯಕ್ರಮದ ಒಂದು ಭಾಗವಾಗಿದೆ. ಸುಳ್ಳು ಅಥವಾ ತಪ್ಪುಮಾಹಿತಿಯನ್ನು ಬಹಿರಂಗಪಡಿಸಲು ಬಿಬಿಸಿಗೆ ಇರುವ ಬದ್ಧತೆಯನ್ನು ಅನುಷ್ಠಾನಗೊಳಿಸುವ ಈ ಅಭಿಯಾನವು ಇಟ್ಟಿರುವ ಒಂದು ದೃಢ ಹೆಜ್ಜೆಯಾಗಿದೆ ಈ ನಿಟ್ಟಿನಲ್ಲಿ ಬಿಬಿಸಿ ತಂಡ ನಡೆಸಿರುವ ಸಂಶೋಧನೆಯು ಸುಳ್ಳು ಸುದ್ದಿಗಳ ಹಾಗೂ ಸುಳ್ಳು ಸಂದೇಶಗಳ ಹರಡುವಿಕೆಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ.
ಬಿಬಿಸಿ ತಂಡದ ಅಧ್ಯಯನದ ವರದಿಯನ್ನು ಸಿದ್ಧಪಡಿಸುವಲ್ಲಿ ಆಳವಾದ ಗುಣಾತ್ಮಕವಾದ ಹಾಗೂ ಸಾಂಸ್ಕೃತಿಕ/ಜನಾಂಗೀಯ ತಂತ್ರಗಳನ್ನು ಡಿಜಿಟಲ್ ನೆಟ್‌ವರ್ಕ್ ವಿಶ್ಲೇಷಣೆ ಹಾಗೂ ಬೃಹತ್ ದತ್ತಾಂಶ (ಬಿಗ್ ಡೇಟಾ) ತಂತ್ರಗಳ ಜತೆ ಬಳಸಿಕೊಳ್ಳಲಾಗಿದೆ. ಆ ಮೂಲಕ ಭಾರತ, ಕೀನ್ಯಾ ಮತ್ತು ನೈಜೀರಿಯಾದಲ್ಲಿ ತೀವ್ರಗೊಳ್ಳುತ್ತಿರುವ ಸುಳ್ಳು ಸುದ್ದಿ ಅಭಿಯಾನವನ್ನು ಹಲವು ದೃಷ್ಟಿಕೋನಗಳಿಂದ ಶೋಧಿಸಲಾಗಿದೆ ಎಂದಿದ್ದಾರೆ ಬಿಬಿಸಿ ವರ್ಲ್ಡ್ ಸರ್ವಿಸ್ ನ ಶ್ರೋತೃ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿರುವ ಶಂತನು ಚಕ್ರವರ್ತಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)