varthabharthiಅನುಗಾಲ

ಅನುವಾದ ಸಾಹಿತ್ಯ

ವಾರ್ತಾ ಭಾರತಿ : 22 Nov, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈಗೀಗ ಅನುವಾದಿಸುವ ಮತ್ತು ವಿಮರ್ಶಿಸುವ ಶಿಷ್ಯವರ್ಗವೇ ಸೃಷ್ಟಿಯಾಗುತ್ತಿರುವುದು ವಿಷಾದದ ವಿಚಾರ. ಶಕುನದ ಹಕ್ಕಿಗಳ ಹಾಗೆ ಇಲ್ಲಿ ಮೂಲವನ್ನೂ ಅನುವಾದವನ್ನೂ ತುಲನಾತ್ಮಕವಾಗಿ ಅಧ್ಯಯನ ಮಾಡದೆ ಅಥವಾ ಮೂಲದ ಸತ್ವವನ್ನು ವಿವೇಚಿಸದೆ, ಅದು ಅನುವಾದಗೊಂಡಿದೆಯೆಂಬ ಕಾರಣಕ್ಕಷ್ಟೇ ಅದು ಶ್ರೇಷ್ಠವೆಂದು ಹೇಳುವ ಸ್ತುತಿಪಾಠಕರ ದೊಡ್ಡ ದಂಡೇ ರಚನೆಗೊಳ್ಳುತ್ತಿದೆ.


ವೀಂದ್ರನಾಥ ಠಾಕೂರರು ತಮ್ಮ ಬೆಂಗಾಲಿ ಕವಿತಾಗುಚ್ಛ ಗೀತಾಂಜಲಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿದರು. ಶ್ರೇಷ್ಠ ಆಂಗ್ಲ ಕವಿ ಯೇಟ್ಸ್ ಈ ಅನುವಾದಕ್ಕೆ ಮುನ್ನುಡಿಯನ್ನು ಬರೆದು ಅದನ್ನು ಲೋಕಪ್ರಸಿದ್ಧಿಗೊಳಿಸಿದರು. 1913ರಲ್ಲಿ ಈ ಕೃತಿಗೆ ನೊಬೆಲ್ ಪ್ರಶಸ್ತಿ ದಕ್ಕಿತು. ನೊಬೆಲ್ ಪ್ರಶಸ್ತಿ ಗಳಿಸಿದ ಐರೋಪ್ಯೇತರ ಮೊದಲ ಸಾಹಿತಿಯೆಂಬ ಹೆಗ್ಗಳಿಕೆಯೂ ಠಾಕೂರರದ್ದಾಯಿತು. ಮೊದಲ ಮತ್ತು ಕೊನೆಯ ಭಾರತೀಯ ಸಾಹಿತಿಯೂ ಅವರೇ. (ಇನ್ನು ಭಾರತೀಯ ಮೂಲದ ಎಂಬ ನೆಪಗಳನ್ನೊಡ್ಡಿ ಇತರರನ್ನೂ ಭಾರತೀಯರನ್ನಾಗಿಸಿದ್ದಿದೆ!)

ರವೀಂದ್ರರು ತಮ್ಮ ಕವಿತೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದರೇಕೆ ಎಂಬ ಪ್ರಶ್ನೆ ಎದ್ದಿದೆ. ಬ್ರಿಟಿಷ್ ಆಳ್ವಿಕೆಯ ಪಾರಂಪರ್ಯದ ವಿರುದ್ಧ ದೇಶಕ್ಕೆ ದೇಶವೇ ಸಿಡಿದೆದ್ದು ಪ್ರತಿಭಟಿಸುತ್ತಿರುವಾಗ, ಭಾರತೀಯತೆಗೆ ಒತ್ತು ಕೊಡಬೇಕಾದ ಹೊತ್ತಿನಲ್ಲಿ ಠಾಕೂರರು ಪ್ರಭುತ್ವದ ಭಾಷೆಗೆ ಮನಸೋತರೇಕೆ? ಹಾಗೆ ಮಾಡುವ ಮೂಲಕ ಅವರು ಆಂಗ್ಲರ ಸೂರ್ಯ ಮುಳುಗದ ಸಾಮ್ರಾಜ್ಯದಾಹಕ್ಕೆ ನೀರೆರೆದರಲ್ಲವೇ? ಇದರ ಹಿಂದಿನ ಮನಸ್ಥಿತಿಯೇನು ಎಂಬುದರ ಕುರಿತ ವಿವಾದ ಇತಿಹಾಸದಲ್ಲಿ ಮುಚ್ಚಿಹೋಗಿದೆ. ಈ ಕುರಿತ ಕೆಲವು ಚರ್ಚೆಗಳನ್ನು ಗಮನಿಸಿದರೆ ಠಾಕೂರರು ಆಂಗ್ಲರ ಆಳ್ವಿಕೆಯನ್ನು, ವಸಾಹತುಶಾಹಿಯನ್ನು ವಿರೋಧಿಸಿದರೇ ಹೊರತು ಇತರ (ಸು)ವಿಚಾರಗಳನ್ನಲ್ಲ. ಉದಾಹರಣೆಗೆ ಮಹಾತ್ಮ ಗಾಂಧೀಜಿಯವರು ಸ್ವದೇಶಿ ಚಳವಳಿಯ ಭಾಗವಾಗಿ 1921ರಲ್ಲಿ ಬ್ರಿಟಿಷ್ ವಸ್ತ್ರಗಳನ್ನು ಬಹಿಷ್ಕರಿಸಿ ಅವನ್ನು ಸುಡಬೇಕೆಂದು ಕರೆಕೊಟ್ಟ ಸಂದರ್ಭದಲ್ಲಿ ಠಾಕೂರರು ಅದನ್ನು ಸಾತ್ವಿಕವಾಗಿಯೇ ವಿರೋಧಿಸಿ (ಗಾಂಧಿಗೆ ಮಹಾತ್ಮಾ ಎಂಬ ಹೆಸರನ್ನಿಟ್ಟದ್ದೇ ಅವರಿಗಿಂತ ಹಿರಿಯರಾಗಿದ್ದ ಠಾಕೂರರು!) ದೇಶದಲ್ಲಿ ಕೋಟಿಗಟ್ಟಲೆ ಮಂದಿ ಉಡಲು ತುಂಡು ವಸ್ತ್ರವೂ ಇಲ್ಲದಿರುವಾಗ ಅವನ್ನು ಸುಡುವ ಬದಲು ಈ ನಿರ್ಗತಿಕರಿಗೆ ಕೊಡಬೇಕೆಂದು ಪ್ರತಿಪಾದಿಸಿದ್ದರು.

ಕಾವ್ಯಕ್ಕೆ ಭಾಷೆಯ ಹಂಗಿಲ್ಲ. ಅದನ್ನು ಎಲ್ಲರಿಗೂ ಅವರವರ ಭಾವಕ್ಕೆ ತಕ್ಕುದಾಗಿ ತಲುಪಿಸುವುದು ಕವಿಯ ಕರ್ತವ್ಯವೂ ಹೌದು ಎಂಬ ನಂಬಿಕೆ ಅವರದ್ದಿರಬಹುದು; ಈ ಮಾನವತಾವಾದದ ಭಾಗವಾಗಿ ಅವರು ತಮ್ಮ ಕಾವ್ಯವನ್ನು ಆಂಗ್ಲಭಾಷೆಗೆ ಅನುವಾದಿಸಿದರೆಂದು ನಂಬಬಹುದು. ಆದರೆ ಇನ್ನೊಂದು ದೃಷ್ಟಿಕೋನದಲ್ಲಿ ಠಾಕೂರರಂಥವರೂ ಜನಪ್ರಿಯತೆಯ ಹಿಂದೆ ಹೋದರೇ ಎಂಬ ಸಂಶಯವನ್ನು ತಾಳಬಹುದು. ಏಕೆಂದರೆ ಅವರ ಈ ಅನುವಾದವು ಬೆಂಗಾಲಿ ಮೂಲಕ್ಕಿಂತ ಭಿನ್ನವಾಗಿದೆಯೆಂಬ ಅಭಿಪ್ರಾಯ ಆಗಿನ ಬೆಂಗಾಲಿ ಚಿಂತಕರಲ್ಲಿ, ಸಾಹಿತಿಗಳಲ್ಲಿ, ವಿಮರ್ಶಕರಲ್ಲಿತ್ತು. ತಾರ್ಕಿಕವಾಗಿಯೂ ಇದು ಸರಿ. ಏಕೆಂದರೆ ಆಂಗ್ಲ ಗೀತಾಂಜಲಿಯಲ್ಲಿ ಮೂಲ ಗೀತಾಂಜಲಿಯಲ್ಲದೆ ಇತರ ಕೆಲವು ಸಂಕಲನಗಳ (ನೈವೇದ್ಯ ಮತ್ತಿತರ ಸಂಕಲನಗಳ) ಕೆಲವು ಕವಿತೆಗಳೂ ಸೇರಿದ್ದವಂತೆ. ಪೌರ್ವಾತ್ಯರೆಂದರೆ ಅನುಭಾವಿಗಳು, ಆಧ್ಯಾತ್ಮಿಕರು, ಋಷಿಪರಂಪರೆಯವರು, ಹೀಗೆಲ್ಲ ಪಾಶ್ಚಾತ್ಯರಲ್ಲಿ ಮನೆಮಾಡಿದ್ದ ನಂಬಿಕೆಗಳನ್ನು ಗಟ್ಟಿಗೊಳಿಸುವಂತೆ ಈ ಅನುವಾದವಿದೆ ಮತ್ತು ಈ ಉದ್ದೇಶಕ್ಕಾಗಿ ಅಧ್ಯಾತ್ಮ ಮತ್ತು ಅನುಭಾವದ ಅಂಶಗಳನ್ನು ಹೆಚ್ಚು ದೃಢಗೊಳಿಸಿದ್ದರಿಂದಾಗಿ ಕವಿತೆಗಳ ಸಂವಿಧಾನವೇ ಕೆಲವೆಡೆ ಸಡಿಲಗೊಂಡಿದೆಯೆಂದು ಕೆಲವರು ಅಭಿಪ್ರಾಯಪಡುತ್ತಾರೆ.

ಠಾಕೂರರು ಬಂಗಾಳದಲ್ಲಿ ಬಹುಜನಪ್ರಿಯತೆ ಮತ್ತು ಗೌರವವನ್ನು ಪಡೆದಿದ್ದ ಕವಿ ಮಾತ್ರವಲ್ಲ ಇತರ ಕ್ಷೇತ್ರಗಳ ಕಲಾವಿದ. ಆದರೆ ಭಾರತದ ಭಿನ್ನಭಾಷಾ ಸಂಸ್ಕೃತಿಯಿಂದಾಗಿ ಅವರ ಸಾಹಿತ್ಯಕ ಜನಪ್ರಿಯತೆ ಬಂಗಾಳಕ್ಕಷ್ಟೇ ಸೀಮಿತವಾಯಿತೆನ್ನುವ ಕೊರತೆ ಅವರನ್ನು ಕಾಡಿರಬಹುದು ಮತ್ತು ಈ ಕಾರಣದಿಂದಾಗಿ ಅವರು (ಸಾಹಿತ್ಯ) ಜಗತ್ತಿನ ಇತರೆಡೆಯೂ ಜನಪ್ರಿಯತೆ ಮತ್ತು ಗೌರವವನ್ನು ಸಂಪಾದಿಸಲು ಹೀಗೆ ಮಾಡಿರಬಹುದು ಎಂಬ ವಾದವೂ ಹುಟ್ಟಿಕೊಂಡಿದೆ. ಏನೇ ಇರಲಿ ಅವರ ಲೋಕಪ್ರಿಯತೆ ಇಂದಿಗೂ ಮುಂದುವರಿದಿದೆ. ಭಾರತದಲ್ಲಿ ಅನುವಾದವು ದೊಡ್ಡ ಸಮಸ್ಯೆಯೇ. ಈ ದೇಶದಲ್ಲಿ ಎಲ್ಲರೂ ಆಡುವ ಭಾಷೆಯೆಂಬುದಿಲ್ಲ. ಆಂಗ್ಲಭಾಷೆಯನ್ನು ಸಂಪರ್ಕ ಭಾಷೆಯಾಗಿಸಿದರೂ ಅದು ನಗರಗಳಲ್ಲಷ್ಟೇ ಮುಖ್ಯಭಾಷೆಯಾಗಿದೆ; ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾದೇಶಿಕ ಭಾಷೆಯೇ ಹೆಚ್ಚು ಪರಿಸರಸ್ನೇಹಿಯಾಗಿದೆ.

ಹೀಗಾಗಿ ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗೂ ಅನುವಾದಿಸದ ವಿನಃ ಯಾವೊಂದು ಕೃತಿಯೂ ರಾಷ್ಟ್ರೀಯ ಕೃತಿಯಾಗದು. ಅದನ್ನು ಆಯಾಯ ಪ್ರದೇಶದ ಜನರಷ್ಟೇ ಓದುವ, ಕೊಂಡಾಡುವಂತಾಗುತ್ತದೆ. ಈ ಕೊರಗು, ಕೊರತೆ ಆನಂತರದ ಕಾಲದಲ್ಲಿ ಎಲ್ಲ ಸಾಹಿತಿಗಳನ್ನೂ ಕಾಡಿದೆ. ಕೆಲವು ಬಾರಿ ಇದು ಅನನುಕೂಲವೂ ಹೌದು. ನಮ್ಮ ಮಾತೃಭಾಷೆಯಲ್ಲಿ ಪ್ರಕಟವಾಗಿ ಭಾರೀ ಶ್ರೇಷ್ಠವೆಂದು ಪ್ರತಿಷ್ಠಿತವಾದ ಕೃತಿಯೊಂದು ಇನ್ನೊಂದು ಭಾಷೆಗೆ ಅನುವಾದಗೊಂಡಾಗ ಅದು ಅಲ್ಲಿನ ಲೋಕಪ್ರಸಿದ್ಧ ಕೃತಿಯೊಂದರ ಪೇಲವ ಪುನರ್ನಿರ್ಮಾಣವೆಂಬಂತೆ ಕಂಡರೆ ಅಚ್ಚರಿಯಿಲ್ಲ. (ಈ ಅಂಶ ಸಾಹಿತ್ಯಲೋಕದಲ್ಲಿ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ.) ಕನ್ನಡದ ಕುರಿತಾಗಿ ಹೇಳುವುದಾದರೆ ಮುಖ್ಯವಾಗಿ ಹೊಸದೆಂಬಂತೆ ಮಂಡಿಸಲ್ಪಟ್ಟ ವಿಮರ್ಶೆಯ ಅನೇಕ ಪಂಥಗಳು ಬೆರಗನ್ನು ಸೃಷ್ಟಿಸಿದರೂ ಪಾಶ್ಚಾತ್ಯ/ಐರೋಪ್ಯ ವಾದಗಳ ಕನ್ನಡೀಕೃತ ರೂಪಗಳಾಗಿವೆಂಬ ಸತ್ಯ ಕೆಲವು ಬಾರಿಯಾದರೂ ಕಹಿಯಾಗಿದೆ. (ಡಿ.ಎ.ಶಂಕರ್ ಅವರು ಬರೆದ ಹೊಸ ವಿಮರ್ಶೆ ಎಂದರೇ ಬರೀ ಅನುವಾದವೇ?- ಪ್ರ: ಸಂಕ್ರಮಣ 441 ಸೆಪ್ಟಂಬರ್-ಅಕ್ಟೋಬರ್ 2018 ಈ ಕುರಿತು ಬೆಳಕು/ನೆರಳು ಚೆಲ್ಲುತ್ತದೆ!) ಇಷ್ಟಾದರೂ ಕೃತಿಗಳನ್ನು ಇತರರು ಅನುವಾದಿಸಿದ್ದೇ ಹೆಚ್ಚು. ಇಂತಹ ಅನುವಾದಗಳಲ್ಲಿ ಮೂಲಕೃತಿಗಳಿಗೆ ನಿಷ್ಠವಾಗಿರುವ ಉದಾಹರಣೆಗಳು ಸಾಕಷ್ಟಿವೆ.

ಕೆಲವು ಭಾಷಾ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ಆಧಾರದಲ್ಲಿ ಮೂಲದ ಭಾವವನ್ನು ಆಯಾಯ ಭಾಷೆಗಳಲ್ಲಿ ತರಲು ಪ್ರಯತ್ನಿಸಿವೆ. ಶಾಬ್ದಿಕ ಅನುವಾದಗಳಂತೆಯೇ ಭಾವಾನುವಾದವಾದ ಕೃತಿಗಳೂ ಬೇಕಷ್ಟಿವೆ. ಕನ್ನಡದ ರಕ್ತಾಕ್ಷಿ, ಹೇಮಲತರಾಜಕುಮಾರ ಚರಿತ್ರೆ ಹೀಗೆ ಕೆಲವು ಅನುವಾದಗಳನ್ನು ಹೆಸರಿಸಬಹುದು. ಆಧುನಿಕ ಕನ್ನಡ ಸಾಹಿತ್ಯ ಬೆಳೆಯುತ್ತಿದ್ದಂತೆಯೇ ಯೇಟ್ಸ್, ಎಲಿಯಟ್ ಮತ್ತಿತರ ಆಂಗ್ಲ ಕವಿಗಳ, ಮಾರ್ಕ್ವೆಝ್, ಕಮೂ, ಕಾಫ್ಕಾ ಮುಂತಾದ ಕಾದಂಬರಿಕಾರರ, ಶೇಕ್ಸ್ ಪಿಯರ್ ಇಬ್ಸೆನ್, ಬ್ರೆಕ್ಟ್‌ರಂತಹ ನಾಟಕಕಾರರ ಅನುವಾದಗಳು ಪ್ರಕಟವಾದವು. ಹಾಗೆಯೇ ಪ್ರಖ್ಯಾತ ಹಿಂದಿ, ಬೆಂಗಾಲಿ, ಪಂಜಾಬಿ, ಮಲೆಯಾಳಿ, ತಮಿಳು, ಮರಾಠಿ, ಮತ್ತಿತರ ಸೋದರ ಭಾಷೆಗಳ (ಬಹುತೇಕ ಎಲ್ಲ ಭಾರತೀಯ ಭಾಷೆಗಳ) ಕೃತಿಗಳೂ ಕನ್ನಡಕ್ಕೆ ಅನುವಾದಗೊಂಡವು. ಇವು ಒಂದರ್ಥದಲ್ಲಿ ಭಿನ್ನತೆಯಲ್ಲಿ ಏಕತೆಯನ್ನು ಮತ್ತು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತಿದ್ದವು. ಅನುವಾದವನ್ನು ಅವರವರೇ ಮಾಡಿದಾಗ ಕೃತಿಯ ಭಾವವು ವಸ್ತು ನಿಷ್ಠವಾಗುತ್ತದೆನ್ನುವುದರಲ್ಲಿ ಸಂದೇಹವಿಲ್ಲ. ಉಭಯಭಾಷಾ ತಜ್ಞರಲ್ಲದ ಸಾಹಿತಿಗಳಿಗೆ ಮಾತ್ರ ಇನ್ನೊಬ್ಬರು ಅನುವಾದಿಸಿ ತಮ್ಮ ಶಿಶು ಪರಪುಟ್ಟ ರಂತೆ ಸೃಷ್ಟಿಯಾಗುವಾಗ ಸಂಕಟವಾಗಬಹುದು. ಆದರೆ ಹೇಗಾದರೂ ಇನ್ನೊಂದು ಭಾಷೆಯಲ್ಲಿ ಬರಲಿ ಎಂಬ ಆಗ್ರಹವು ಕೃತಿಯ ಮಹತ್ವವನ್ನೇ ಕುಂಠಿತಗೊಳಿಸಬಹುದು.

ಠಾಕೂರರ ಕೃತಿ ಅನುವಾದವಾದಾಗ ಅಂತಹ ಅನುವಾದಗಳು ತೀರಾ ಅಪರೂಪವಾಗಿದ್ದವು. (ಅಭಿಜ್ಞಾನ ಶಾಕುಂತಲ ಆಂಗ್ಲಭಾಷೆಗೆ ಅನುವಾದವಾಗಿತ್ತಂತೆ- ಸರ್ ವಿಲಿಯಮ್ ಜೋನ್ಸ್ ಅನುವಾದಿಸಿದ್ದು-ಕಾಳಿದಾಸನಲ್ಲ!) ಆದರೆ ಸಮಸ್ಯೆ ಇರುವುದು, ಬರುವುದು ನಮ್ಮ ಕೃತಿಗಳನ್ನು ನಾವೇ ಅನುವಾದ ಮಾಡಿಸುವುದರಲ್ಲಿ. ಅನುವಾದವು ಒಂದಲ್ಲ ಅನೇಕಾರ್ಥಗಳಲ್ಲಿ ಪುನಃಸೃಷ್ಟಿ. ಮೂಲದ ವೈಶಿಷ್ಟ್ಯಗಳನ್ನು ಅದು ಹೊಸ ಭಾಷೆ, ಭಾವ, ಸಂಸ್ಕೃತಿಯಲ್ಲಿ ರಚಿಸುತ್ತದೆ. ಹಾಗೆ ನೋಡಿದರೆ ಮೂಲ ರಚನೆಗೆ ಮಿಗಿಲಾದ ಪ್ರತಿಭೆ, ಪಾಂಡಿತ್ಯ ಇರಬೇಕಾಗುತ್ತದೆ (ಇರಲೇಬೇಕೆಂದಿಲ್ಲವಲ್ಲ!). ಮೂಲ ಕೃತಿಕಾರನು ಹೆಚ್ಚು ಶ್ರೇಷ್ಠನೋ ಅನುವಾದಕನೋ ಎಂದು ಚರ್ಚಿಸಬಾರದು. ಇಂತಹ ಹೋಲಿಕೆ ಸೃಜನಶೀಲ ಕೃತಿಕಾರನಿಗೂ ವಿಮರ್ಶಕನಿಗೂ ಸಲ್ಲಬಹುದೇ ಹೊರತು ಕೃತಿ ಮತ್ತು ಅನುವಾದಕ್ಕಲ್ಲ. ಕೆಲವೊಂದು ಅನುವಾದಗಳನ್ನು ಓದುವಾಗ ಮೂಲವನ್ನು ಓದಬೇಕೆಂದು ಆಸೆಯಾದರೂ ಓದದಿದ್ದರೆ ಏನೂ ನಷ್ಟವಾಗುವುದಿಲ್ಲವೆಂಬ ಭಾವವೂ ಉದಿಸುತ್ತದೆ. ಸಂಸ್ಕೃತದ ಅನೇಕ ಕೃತಿಗಳು ಕನ್ನಡದಲ್ಲಿ ಭಾವದುಂಬಿ ಓದಿಸಿಕೊಳ್ಳುತ್ತವೆ. ಮರಾಠಿ ದಲಿತ ಆತ್ಮಕಥನಗಳು ಕನ್ನಡದಲ್ಲಿ ಬಹು ಪರಿಣಾಮಕಾರಿಯಾಗಿ ಬಂದಿವೆ.

ಒಂದು ಕೃತಿಯನ್ನು ಓದಿ, ಮೆಚ್ಚಿ, ಅನುವಾದಿಸುವುದು ಆ ಕೃತಿಯ ಹೆಗ್ಗಳಿಕೆ. ಆದರೆ ಅನುವಾದದ ಉದ್ದೇಶವು ಜನಪ್ರಿಯತೆ, ಪ್ರತಿಷ್ಠೆ, ಪ್ರಶಸ್ತಿಗಳೇ ಆದಾಗ ಎಲ್ಲವೂ ಅನುವಾದವಾಗುತ್ತವೆ. ವಿವಾದಗಳೂ ಆಗುತ್ತವೆ! ಈಚೆಗಿನ ವರ್ಷಗಳಲ್ಲಿ ನೊಬೆಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟು ಸೃಷ್ಟಿಯಾದ ಕೆಲವು ಅನುವಾದಗಳಿವೆ. ಪ್ರಚಾರ ಸಾಧನಗಳಾಗಿ ಅನುವಾದ ಸಾಹಿತ್ಯ ಸೃಷ್ಟಿಯಾಗಬಾರದು. ಯಾವುದೇ ಕೃತಿಯ ಸಾರವನ್ನು ಭೃಂಗದಂತೆ ಹೀರಬೇಕೇ ವಿನಾ ನೊಣದಂತೆ ಹೀರಬಾರದು. ಒಂದಕ್ಕೆ ಸುವಿಚಾರ ವೈಶಾಲ್ಯದ ಗುಣ; ಇನ್ನೊಂದಕ್ಕೆ ಗುಣಾವಗುಣಗಳ ಪರಿವೆಯಿಲ್ಲದೆ ಹೊತ್ತೊಯ್ಯುವ ಗುಣ. ಕೆಲವು ಸಾಹಿತಿಗಳು ಮೂಲ ಕೃತಿಯೊಂದಿಗೇ ಅನುವಾದವನ್ನೂ ತಯಾರಿಸಿಕೊಳ್ಳುತ್ತಾರೆ. ಒಬ್ಬ ಸಾಹಿತಿ ಎರಡು ಭಾಷೆಗಳಲ್ಲಿ ಒಂದೇ ಕೃತಿಗಳನ್ನು ಬರೆಯಬಾರದೆಂದಿಲ್ಲ. ಕಾರ್ನಾಡರು ‘ಟಿಪ್ಪೂವಿನ ಕನಸುಗಳು’ ನಾಟಕವನ್ನು ಬರೆಯುವಾಗಲೇ ಆಂಗ್ಲಭಾಷೆಯಲ್ಲಿ ಬಿಬಿಸಿಯ ಪ್ರಸಾರಕ್ಕಾಗಿ ಸಮಾನಾಂತರವಾಗಿ ರಚಿಸಿದರು. ಎರಡೂ ಸ್ವತಂತ್ರ ವಿಮರ್ಶೆಗೆ ಸಲ್ಲುವ ಕೃತಿಗಳು. ಈಗೀಗ ಅನುವಾದಿಸುವ ಮತ್ತು ವಿಮರ್ಶಿಸುವ ಶಿಷ್ಯವರ್ಗವೇ ಸೃಷ್ಟಿಯಾಗುತ್ತಿರುವುದು ವಿಷಾದದ ವಿಚಾರ. ಶಕುನದ ಹಕ್ಕಿಗಳ ಹಾಗೆ ಇಲ್ಲಿ ಮೂಲವನ್ನೂ ಅನುವಾದವನ್ನೂ ತುಲನಾತ್ಮಕವಾಗಿ ಅಧ್ಯಯನ ಮಾಡದೆ ಅಥವಾ ಮೂಲದ ಸತ್ವವನ್ನು ವಿವೇಚಿಸದೆ, ಅನುವಾದ ಗೊಂಡಿದೆಯೆಂಬ ಕಾರಣಕ್ಕಷ್ಟೇ ಅದು ಶ್ರೇಷ್ಠವೆಂದು ಹೇಳುವ ಸ್ತುತಿಪಾಠಕರ ದೊಡ್ಡ ದಂಡೇ ರಚನೆಗೊಳ್ಳುತ್ತಿದೆ.

ಹಿಂದೆಲ್ಲ (ಮತ್ತು ಇಂದಿಗೂ) ರಾಜಕಾರಣದಲ್ಲಿ ಮತ್ತು ಮಠಗಳಲ್ಲಿ ಮತ್ತು ಧಾರ್ಮಿಕ ಪಂಥಗಳಲ್ಲಿ ಮಾತ್ರ ಈ ಅನುಯಾಯಿ/ಶಿಷ್ಯಪರಂಪರೆ ಇರುತ್ತಿತ್ತು. ಶ್ರೀಯುತರು ಶ್ರೀ...ಯವರ ಅಥವಾ ಶ್ರೀಶ್ರೀ..ಯವರ ಪಟ್ಟಶಿಷ್ಯ ಇಲ್ಲವೇ ಉತ್ತರಾಧಿಕಾರಿ ಎಂದು ವಿವರಿಸಲಾಗುತ್ತಿತ್ತು. ಆದರೆ ಆಧುನಿಕತೆ ಕನ್ನಡ ಸಾಹಿತ್ಯಕ್ಕೆ ಕಾಲಿಡುತ್ತಿದ್ದಂತೆ (ಇಂತಹ ಜಾಯಮಾನ ಭಾರತದ ಎಲ್ಲ ಭಾಷಾ ಸಾಹಿತ್ಯದಲ್ಲೂ ಇದೆಯೆಂದು ಕೇಳಿದ್ದೇನೆ!) ಅನೇಕರು ತಾವು ಕುವೆಂಪು ಶಿಷ್ಯ, ಅಡಿಗರ ಶಿಷ್ಯ, ಅನಂತಮೂರ್ತಿಯವರ ಶಿಷ್ಯ ಎಂದೆಲ್ಲ ಹೇಳಿಕೊಳ್ಳುವುದನ್ನು ಗಮನಿಸಬಹುದು. ಇವು ಶಾಲಾ-ಕಾಲೇಜು ಕೊಠಡಿಗಳಿಗೆ ಸೀಮಿತವಾಗಿದ್ದರೆ ಲೇಸು. ಅದಲ್ಲದೆ ತಾವು ಇಂಥವರ ಶಿಷ್ಯವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಆ ಸಾಹಿತಿಯ ಬರವಣಿಗೆಗಳನ್ನು ಸಾರಾ ಸಗಟು ಅನುವಾದ ಮಾಡಲು ಶುರುಮಾಡಿದರೆ ಗುರುವಿಗೆ ಅದಕ್ಕಿಂತ ದೊಡ್ಡ ಕೃತಘ್ನತೆ ಬೇರಿರಲಾರದು.

ಅನುವಾದವು ಸ್ವಯಂಸ್ಫೂರ್ತಿಯಿಂದ ಮತ್ತು ಸ್ವಪ್ರೇರಣೆಯಿಂದ ನಡೆಯ ಬೇಕೇ ಹೊರತು ವೃತ್ತಿನಿರತ ಬೆರಳಚ್ಚುಗಾರರಂತಲ್ಲ; ಕಾರಕೂನರಂತಲ್ಲ. ಅಲ್ಲಿ ಹೊಸ ಹೊಳಪಿರಬೇಕೇ ಹೊರತು ಗುಲಾಮಗಿರಿಯ ಅಧೀನತೆಯಲ್ಲ. ಏಕೆಂದರೆ ಅನುವಾದವು ಎಷ್ಟು ಪ್ರಸಿದ್ಧಿ-ಪ್ರಚಾರವನ್ನು ಪಡೆಯಬಲ್ಲುದೋ ಅದಕ್ಕೆ ಮಿಗಿಲಾದ ಕುಪ್ರಸಿದ್ಧಿ, ಅಪಪ್ರಚಾರಗಳನ್ನೂ ಪಡೆಯಬಲ್ಲುದು. ಆದ್ದರಿಂದ ಯಾವುದೇ ಕೃತಿಯನ್ನು ಅನುವಾದಿಸುವವನೂ ಅದರ ವಿಮರ್ಶಕನೂ ಆಗಿರಬೇಕು. ಇಲ್ಲವಾದರೆ ಕೃತಿಯೊಂದರ ಅನುವಾದಕ್ಕೆ ಸಲ್ಲುವ ಸಂಭಾವನೆಯೇ ಅನುವಾದದ ಮೌಲ್ಯವಾಗುತ್ತದೆ. ಅನುವಾದಗಳು ರಾಜಕಾರಣಿಗೆ ಬರೆದುಕೊಡುವ ಭಾಷಣಗಳಲ್ಲ. ಅವು ಇತರರಿಗೆ ಕಾಣಿಸುವ ಸುಂದರ ಸ್ವಪ್ನದ ವಿವರಣೆಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)