varthabharthi

ವೈವಿಧ್ಯ

ಪಶ್ಚಿಮಘಟ್ಟಗಳು: ಗಾಡ್ಗೀಳ್ ವರದಿ ಕಂಡಂತೆ

ವಾರ್ತಾ ಭಾರತಿ : 23 Nov, 2018
ಎ. ಕೆ. ಸುಬ್ಬಯ್ಯ

ಭಾಗ-2

ಪಶ್ಚಿಮಘಟ್ಟ ರಕ್ಷಣೆಗಾಗಿ ಬಹುದೊಡ್ಡ ಅರಣ್ಯ ಇಲಾಖೆಯಿದೆ. ಇಲಾಖೆ ಚಟುವಟಿಕೆಗಳಿಗಾಗಿ ಅಪಾರ ಪ್ರಮಾಣದಲ್ಲಿ ಧನರಾಶಿಯನ್ನೇ ಸರಕಾರದ ಚೌಕ್ಕಟ್ಟಿನಲ್ಲಿಯೇ ಒದಗಿಸಲಾಗುತ್ತಿದೆ. ಪಶ್ಚಿಮಘಟ್ಟ ಹಾಗೂ ಅರಣ್ಯ ರಕ್ಷಣೆಗಾಗಿ  Wild life protection Act-1972, Karanataka Forest Act-1963, Forest Conservation Act-1980 ಇತ್ಯಾದಿ ಕಾನೂನುಗಳಿವೆ. ಅರಣ್ಯ ಇಲಾಖೆ ಇಷ್ಟೆಲ್ಲಾ ಕಾನೂನುಗಳನ್ನು ಬಳಸಿಕೊಂಡು ಪಶ್ಚಿಮಘಟ್ಟ ಉಳಿಸಿಕೊಳ್ಳಲು ಸಾಧ್ಯವಿಲ್ಲವೇ?. ಸಾಧ್ಯವಿಲ್ಲ ಎನ್ನುವುದಾದರೆ ಗಾಡ್ಗೀಳ್ ವರದಿ ಜಾರಿಯಿಂದ ಪಶ್ಚಿಮಘಟ್ಟವನ್ನು ಉಳಿಸುವುದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರಬೇಕಾಗಿದೆ.

ಕ್ಯಾಮರಾ ಟ್ರಾಪಿಂಗ್ ಸಂದರ್ಭದಲ್ಲಿ ಉಲ್ಲಾಸ ಕಾರಂತರ ತಂಡ ಅರಣ್ಯದಿಂದ ಅಪಾರ ಪ್ರಮಾಣದ ಪ್ರಾಣಿಗಳ ಎಲುಬು ಹುಡುಕಿ ತಲೆಬುರುಡೆ ಇತ್ಯಾದಿಗಳನ್ನು ಅಕ್ರಮವಾಗಿ ಸಂಗ್ರಹಿಸಿ ದಾಸ್ತಾನು ಮಾಡಿಟ್ಟರು. ನಂತರ ಈ ಬಗ್ಗೆ ತಕರಾರು ಎದ್ದಾಗ ಉನ್ನತ ಮಟ್ಟದ ತನಿಖೆ ನಡೆದಾಗ ಅದೊಂದು ಗಂಭೀರ ಚಟುವಟಿಕೆಯೆಂದು ಸಾಬೀತಾದರೂ, ಅಪರಾಧಿಗಳ ಮೇಲೆ ಯಾವ ಕ್ರಮವೂ ಜರುಗದೆ ರಕ್ಷಿಸಲ್ಪಟ್ಟರು. ಹಾಗೆಯೇ ರೇಡಿಯೋ ಕಾಲರಿಂಗ್‌ನಿಂದ ಹುಲಿಗಳು ಸತ್ತಾಗ ಸಹ, ಉನ್ನತ ಮಟ್ಟದ ತನಿಖೆ ನಡೆದು ರೇಡಿಯೋ ಕಾಲರಿಂಗ್ ಕಾರಣದಿಂದಲೇ ಹುಲಿಗಳು ಸತ್ತವೆಂದು ವರದಿ ಹೇಳಿದ್ದರೂ ಆ ವರದಿಯೂ ಸಹ ಕಸದ ಬುಟ್ಟಿಯಲ್ಲಿಯೇ ಉಳಿಯುವಂತಾಯಿತು.
ಇದೂ ಅಲ್ಲದೆ ಉಲ್ಲಾಸ ಕಾರಂತರು ಅವರ ತಂಡದೊಡನೆ ಹುಟ್ಟು ಹಾಕಿಕೊಂಡಿರುವ ವಿವಿಧ ಟ್ರಸ್ಟ್‌ಗಳ ಕಾರ್ಯಾಚರಣೆಯ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸಲಾಯಿತು. ಹೀಗೆ ತನಿಖೆ ನಡೆಸಿದ ಸಮಿತಿ ಆಮೂಲಾಗ್ರ ತನಿಖೆ ನಡೆಸಿ ಪ್ರತಿಯೊಂದು ಸಂಸ್ಥೆಯ ಅಕ್ರಮ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿ ವರದಿ ಸಲ್ಲಿಸಲಾಯಿತಾದರೂ ಆ ವರದಿ ಕೂಡ ಕಸದ ಬುಟ್ಟಿ ಸೇರುವಂತೆ ನೋಡಿಕೊಳ್ಳುವುದರಲ್ಲಿ ಉಲ್ಲಾಸ ಕಾರಂತರು ಸಫಲರಾದರೆಂದರೆ ಅವರ ಪ್ರಭಾವ ಯಾ ಅವರು ಪರಿಸರವಾದದ ಸೋಗಿನಲ್ಲಿ ಗಳಿಸುವ ಅಪಾರ ಮೊತ್ತದ ಹಣದ ಪ್ರಭಾವ ಎಷ್ಟಿರಬಹುದೆಂಬುದು ಊಹೆಗೂ ನಿಲುಕದು. ಇವರು ತಮ್ಮ ಬದುಕನ್ನು ಭವ್ಯ ಮಾಡಿಕೊಳ್ಳುವುದಕ್ಕಾಗಿ ತಮ್ಮ ಬುದ್ಧಿಯನ್ನು ಬಳಸಿಕೊಂಡು ವಂಚಿಸುತ್ತಿರುವ ರೀತಿ ಬಗ್ಗೆ ಕೂಲಂಕುಷ ತನಿಖೆ ನಡೆಸಿದ Wild Life Warden ಆಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಆಗಿದ್ದ ಎಸ್.ಕೆ. ಚಕ್ರವರ್ತಿ ಐ.ಎಫ್.ಎಸ್.ರವರು ತಮ್ಮ ಸಮಗ್ರ ವರದಿಯನ್ನು  Inspector General of Forests and Director Project Tiger ಕೇಂದ್ರದ ಆಗಿದ್ದ ಡಾ.ರಾಜೇಶ್ ಗೋಪಾಲರವರಿಗೆ ನೀಡಿದ ದಿನಾಂಕ 17-4-2003ರ ವರದಿಯಲ್ಲಿ ಸಹ ಸಮಗ್ರವಾಗಿ ವಿವರಿಸಲಾಗಿದೆ. ಈ ವರದಿಯ ಅಂತಿಮ ಭಾಗ ಈ ಕೆಳಗಿನಂತಿದೆ.
 'After a quick and  close examination of the claims made by the closely inter-linked organisations in the 3 projects mentioned in your letter, i come to the conclusion that this is a well-planned and organised effort in obtaining foreign funding for mere  survival and not really in the best of interest of wildlife conservation as it is made to look like and that too a very lavish degree of survival by ngos who always have the advantage of showing the efforts of the forest department and fall back upon them as their achievements as per the project reports drafted by they themselves. Certain claims really border on hood winking donor agencies with the cosmetically worded and designed projects showing fantastic performances when none of the credits should and need to go to them. On the other hand these ngos are vociferous in their criticism of the department for the so called failures in fire control, control of poaching and illicit felling of trees at the drop of a hat! You benefit from the good work of the department and are the first to be little the same benefactor whenever it is inconvenient for you. What a travesty of justice ! What a fantastic way of survival.'
ಈಗ ಉಲ್ಲಾಸ ಕಾರಂತರ ನಿಯಂತ್ರಣದಲ್ಲಿ ನಡೆಯುವ ಎಲ್ಲಾ ಪರಿಸರವಾದಿ ಸೋಗಿನಲ್ಲಿ ವ್ಯವಹರಿಸುವ ಸರಕಾರೇತರ ಸಂಸ್ಥೆಗಳು ಯಾವ ಕೆಲಸವನ್ನೂ ಮಾಡದೆ, ಸರಕಾರದ ಕೆಲಸಗಳನ್ನೇ ತಮ್ಮದೆಂದು ದಾಖಲೆಗಳನ್ನು ಸೃಷ್ಟಿಸಿಕೊಂಡು ಸಮಾಜವನ್ನು ವಂಚಿಸಿ, ಸಂಪತ್ತು ಗಳಿಸುತ್ತಾರೆಂಬುದು ಇಷ್ಟೊಂದು ಉನ್ನತ ಮಟ್ಟದ ತನಿಖಾ ವರದಿಗಳು ಬಹಿರಂಗಪಡಿಸಿದ್ದರೂ ಸಹ, ಈ ವಂಚಕ ಪರಿಸರವಾದಿ ಗುಂಪುಗಳ ವಿರುದ್ಧ ಯಾವ ಕ್ರಮವನ್ನೂ ಜರುಗಿಸಲಾಗಿಲ್ಲ. ಎಲ್ಲಾ ವರದಿಗಳು ಕಸದ ಬುಟ್ಟಿಗೆ ಸೇರಿಹೋದವು. ಅಂದ ಮೇಲೆ ಇವರು ಅದೆಂತಹ ಪ್ರಭಾವಶಾಲಿಗಳೆಂದು ತಿಳಿದುಕೊಳ್ಳಬಹುದು. ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ಇಬ್ಬರೂ ಸಹ ಉಲ್ಲಾಸ ಕಾರಂತರ ಗುಂಪಿಗೆ ಸೇರಿದವರೇ ಆಗಿದ್ದಾರೆಂದು ಊಹಿಸುವುದಕ್ಕೆ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಿವೆ. ಆದ್ದರಿಂದ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಗಳು ಈ ನಕಲಿ ಪರಿಸರವಾದಿಗಳ ಮೂಗಿನ ನೇರಕ್ಕೆ ತಯಾರಿಸಿದ ವರದಿಗಳಾಗಿವೆ ಎಂಬುದನ್ನು ಅನುಮಾನಿಸಬೇಕಾಗಿಲ್ಲ.

ಪಶ್ಚಿಮಘಟ್ಟ ಹಾಗೂ ಪರಿಸರ ರಕ್ಷಣೆ

ಪಶ್ಚಿಮ ಘಟ್ಟ ಉಳಿಸಿ ಎಂಬ ಕೂಗು ಒಂದು ಆಂದೋಳನದ ರೂಪ ತಳೆದಿದೆ. ಇದರ ಹಿಂದೆ ನಕಲಿ ಪರಿಸರವಾದಿಗಳ ಸ್ವಾರ್ಥ ಸಾಧನೆಯ ಹುನ್ನಾರ ಅಡಗಿದೆ ಎನ್ನುವುದನ್ನು ಕಂಡುಕೊಳ್ಳುತ್ತಾ, ಪಶ್ಚಿಮಘಟ್ಟ ಅಳಿದು ಹೋಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ. ಪಶ್ಚಿಮಘಟ್ಟ ಉಳಿಸಿ ಎಂದರೆ, ಅದಿನ್ನೂ ಅಳಿದಿಲ್ಲ. ಉಳಿದಿದೆಯೆಂದೇ ತಿಳಿಯಬೇಕು. ಮುಂದೆ ಅದು ಅಳಿಯದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು. ಇದು ಪರಿಸರವಾದದ ಸೋಗಿನಲ್ಲಿ ಮೋಜಿನ ಬದುಕು ಕಂಡುಕೊಂಡಿರುವವರ ವಾದ. ಪಶ್ಚಿಮಘಟ್ಟ ರಕ್ಷಣೆಗಾಗಿ Wild life protection Act-1972, Karanataka Forest Act-1963, Forest Conservation Act-1980 ಬಹುದೊಡ್ಡ ಅರಣ್ಯ ಇಲಾಖೆಯಿದೆ. ಇಲಾಖೆ ಚಟುವಟಿಕೆಗಳಿಗಾಗಿ ಅಪಾರ ಪ್ರಮಾಣದಲ್ಲಿ ಧನರಾಶಿಯನ್ನೇ ಸರಕಾರದ ಚೌಕ್ಕಟ್ಟಿನಲ್ಲಿಯೇ ಒದಗಿಸಲಾಗುತ್ತಿದೆ. ಪಶ್ಚಿಮಘಟ್ಟ ಹಾಗೂ ಅರಣ್ಯ ರಕ್ಷಣೆಗಾಗಿ ಇತ್ಯಾದಿ ಕಾನೂನುಗಳಿವೆ. ಅರಣ್ಯ ಇಲಾಖೆ ಇಷ್ಟೆಲ್ಲಾ ಕಾನೂನುಗಳನ್ನು ಬಳಸಿಕೊಂಡು ಪಶ್ಚಿಮಘಟ್ಟ ಉಳಿಸಿಕೊಳ್ಳಲು ಸಾಧ್ಯವಿಲ್ಲವೇ?. ಸಾಧ್ಯವಿಲ್ಲ ಎನ್ನುವುದಾದರೆ ಗಾಡ್ಗೀಳ್ ವರದಿ ಜಾರಿಯಿಂದ ಪಶ್ಚಿಮಘಟ್ಟವನ್ನು ಉಳಿಸುವುದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರಬೇಕಾಗಿದೆ. ಪಶ್ಚಿಮಘಟ್ಟದಲ್ಲಿ ಅರಣ್ಯವೇನಾದರೂ ನಾಶವಾಗಿದ್ದರೆ ಅದು ಅರಣ್ಯ ಇಲಾಖೆಯ ವಶದಲ್ಲಿರುವ ನೈಸರ್ಗಿಕ ವಲಯದಲ್ಲಲ್ಲದೆ ಕೃಷಿ ಚಟುವಟಿಕೆ ಇರುವ ಸಾಂಸ್ಕೃತಿಕ ವಲಯದಲ್ಲಲ್ಲ. ಕೃಷಿ ಪ್ರದೇಶ ಇಂದಿಗೂ ಹಚ್ಚಹಸಿರಾಗಿಯೇ ಇದ್ದು, ಪರಿಸರ ಉತ್ತಮವಾಗಿಯೇ ಇದೆ ಎಂಬುದನ್ನು ಗಾಡ್ಗೀಳ್, ಕಸ್ತೂರಿ ರಂಗನ್ ವರದಿಗಳೇ ಸಾರುತ್ತಿವೆ. ಒಂದು ಕಡೆ ಗಾಡ್ಗೀಳ್ ವರದಿ ಈ ಕೆಳಗಿನಂತೆ ಹೇಳುತ್ತದೆ. The working group also took note of the envoirnament friendly practices like Coffee plantation in Kodagu and cardmom plantations in  Idduki and Waynad where integration of natural landscapes with human settlement exists. Indeed it is because of this harmony between people and nature in the Westren Ghats the H.L.W.G. recomended policies to incentivize green growth that promotes sustainable and equitable development across the Westren Ghat region. ಈ ಮೇಲಿನಂತೆ ಹೇಳಿದ ಅದೇ ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟ ನಾಶವಾಗಿರುವುದು, ಜನಸಾಂದ್ರತೆಯ ಒತ್ತಡದಿಂದ ಎಂದು ತಿಪ್ಪೆಸಾರಿಸಿ ಬಿಟ್ಟಿರುವುದನ್ನು ನಾವು ಕಾಣುತ್ತೇವೆ.

ಪಶ್ಚಿಮಘಟ್ಟದಲ್ಲಿ ಅರಣ್ಯ ನಾಶ ಮಾಡಲಾಗಿದ್ದರೆ ಅದು ಖಂಡಿತಾ ಜನಸಾಂದ್ರತೆಯ ಒತ್ತಡದಿಂದಲ್ಲ. ಅದು ಅರಣ್ಯ ಇಲಾಖೆಯ ದುರಾಡಳಿತ ಭ್ರಷ್ಟಾಚಾರ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಲ್ಲದೆ, ಬೇರೆ ಯಾವ ಕಾರಣದಿಂದಲೂ ಅಲ್ಲ. ಸಾಂಸ್ಕೃತಿಕ ವಲಯದಲ್ಲಿ ಹಸಿರು ಬೆಳೆಸುವುದಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಬೇಕೆಂದು, ಗಾಡ್ಗೀಳ್ ಸಮಿತಿ ವರದಿಯು ಹೇಳುತ್ತದಾದರೂ ಅಂತಹ ಮರ ಬೆಳೆಸಲು ಉತ್ತೇಜನ ನೀಡುವ ಯಾವ ಯಾವ ಯೋಜನೆಯನ್ನು ಇಲ್ಲಿ ಮಾತ್ರವಲ್ಲ ಎಲ್ಲಿಯೂ ಜಾರಿಗೊಳಿಸಿಲ್ಲ. ಸಾಂಸ್ಕೃತಿಕ ವಲಯದಲ್ಲಿ ಮರ ಬೆಳೆಸುವುದಕ್ಕೆ ಅನೇಕ ನಿರ್ಬಂಧಗಳು ಇಲಾಖೆಯಿಂದ ಹೇರಲ್ಪಟ್ಟಿದ್ದು, ಜಮೀನು ಮಾಲಕರು ಮರ ಬೆಳೆಸಿದರೂ ಹಲವು ಕಿರುಕುಳಗಳನ್ನು ಎದುರಿಸಿ, ಜೈಲು ಸೇರಬೇಕಾದ ಪರಿಸ್ಥಿತಿ ಕೊಡಗಿನಲ್ಲಂತೂ ಎದುರಾಗಿದೆ. ಹೀಗಿದ್ದಾಗ ಖಾಸಗಿ ಜಮೀನಿನಲ್ಲಿ ಮರ ಬೆಳೆಸುವುದಾದರೂ ಹೇಗೆ?. ಕೃಷಿ ವಲಯದಲ್ಲಿ ಮರ ಬೆಳೆಸಿದರೆ ಜೈಲು ಸೇರಬೇಕಾದ ಪರಿಸ್ಥಿತಿಯನ್ನು ಇರುವ ಕಾನೂನಿನಲ್ಲಿಯೇ ಇಲಾಖೆಯವರು ನಿರ್ಮಿಸಿದ್ದಾರೆಂದ ಮೇಲೆ, ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಜಾರಿಯಾಗಿ ಕೃಷಿಕರಿಗೆ ಕಿರುಕುಳ ನೀಡುವುದಕ್ಕೆ ಇನ್ನೊಂದು ಅಸ್ತ್ರವಾಗುತ್ತದೆ. ಈ ಅಸ್ತ್ರವೂ ದೊರೆತರೆ, ಕೃಷಿಕರ ಗತಿಯೇನು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
ಕಾಫಿ ಕೃಷಿಗಿಂತ ಪರಿಸರ ಸ್ನೇಹಿ ಕೃಷಿ ಮತ್ತೊಂದಿಲ್ಲ. ಏಲಕ್ಕಿ ಕೃಷಿ ಕೂಡ ಕಾಫಿ ಕೃಷಿಯಷ್ಟೇ ಪರಿಸರ ಸ್ನೇಹಿಯಾಗಿದೆ. ಪಶ್ಚಿಮ ಘಟ್ಟಗಳ ಸಾಂಸ್ಕೃತಿಕ ವಲಯದಲ್ಲಿ ಕೃಷಿ ಚಟುವಟಿಕೆ ಇರುವ ಕಡೆ ಮಾತ್ರ ಇಂದಿಗೂ ಪರಿಸರ ಸಮೃದ್ಧವಾಗಿಯೇ ಇದೆ ಎನ್ನುವುದಕ್ಕೆ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳೇ ಸಾಕ್ಷಿ ನುಡಿಯುತ್ತವೆ. ಈ ವರದಿಗಳು ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸುವುದರಿಂದಲೇ, ಪರಿಸರ ಇನ್ನೂ ಉಳಿದಿದೆ ಎಂದೂ, ಅಳಿದು ಹೋಗಿಲ್ಲ ಎಂಬುದನ್ನು ತಿಳಿಯಬಹುದು. ಇಲ್ಲಿಯವರೆಗೆ ಉತ್ತಮವಾಗಿ ಇದ್ದ ಪರಿಸರವನ್ನು ಮುಂದೆ ಕೂಡ ಉಳಿಸಿಕೊಂಡು, ಬೆಳೆಸಿಕೊಂಡು ಬರುವುದಕ್ಕೆ ಯಾವ ವರದಿಗಳ ಅನುಷ್ಠಾನದ ಅಗತ್ಯ ಕೂಡ ಇಲ್ಲ. ಅದಕ್ಕೆ ಬೇಕಾಗಿರುವುದು ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ ಜನ ತಮ್ಮನ್ನು ತೊಡಗಿಸಿಕೊಳ್ಳುವುದು. ಈ ದಿಸೆಯಲ್ಲಿ ಪಶ್ಚಿಮಘಟ್ಟಗಳ ಸಾಂಸ್ಕೃತಿಕ ವಲಯದ ಬೆನ್ನೆಲುಬು ಆಗಿರುವ ಕೃಷಿಕ ವರ್ಗ ಮತ್ತು ಕೃಷಿಯನ್ನು ಅವಲಂಬಿಸಿರುವ ಇನ್ನಿ ತರ ಜನಸಮುದಾಯದ ಜೊತೆ ವ್ಯಾಪಕ ಚರ್ಚೆ ಅಗತ್ಯ ಇತ್ತು.
ಆದರೆ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಈ ಜನಗಳನ್ನು ಗಮನಕ್ಕೆ ತೆಗೆದುಕೊಳ್ಳದೆ, ಅವರನ್ನು ಕತ್ತಲೆಯಲ್ಲಿಟ್ಟು ವರದಿಗಳನ್ನು ತಯಾರಿಸಿರುವುದು ಸ್ಪಷ್ಟವಾಗಿದೆ. ಯಾವ ದುರುದ್ದೇಶದಿಂದ ಹೀಗೆ ಮಾಡಲಾಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು. ಅರಣ್ಯ ನಾಶವಾಗಿರುವುದು, ಅರಣ್ಯ ಇಲಾಖೆಯ ವಶದಲ್ಲಿರುವ ಜನವಸತಿ ಕೂಡ ಇಲ್ಲದಿರುವ ನೈಸರ್ಗಿಕ ವಲಯದಲ್ಲಿ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮೀಸಲು ಅರಣ್ಯ ಮಾತ್ರವಲ್ಲ, ವನ್ಯಜೀವಿ ವಿಭಾಗದಲ್ಲಿ ಕೂಡ ವ್ಯಾಪಕವಾಗಿ ಅರಣ್ಯ ಇಲಾಖೆಯವರೇ ತೇಗದ ಮರಗಳನ್ನು ನೆಟ್ಟಿದ್ದಾರೆ. ಜೊತೆಗೆ ರಬ್ಬರ್, ಅಕೇಶಿಯಾ, ನೀಲಗಿರಿ ಗಿಡಗಳನ್ನು ಸಹ ಕೃಷಿ ಮಾಡಲಾಗಿದೆ. ವನ್ಯಜೀವಿ ವಲಯಗಳು ಸೇರಿದಂತೆ, ಅರಣ್ಯಗಳನ್ನು ತೇಗ, ರಬ್ಬರ್, ನೀಲಗಿರಿಯಂತಹ ತೋಟವನ್ನಾಗಿ ಅರಣ್ಯ ಇಲಾಖೆ ಪರಿವರ್ತಿಸಿರುವುದರ ಬಗ್ಗೆ ಗಾಡ್ಗೀಳ್ ವರದಿಯಾಗಲಿ, ಕಸ್ತೂರಿ ರಂಗನ್ ವರದಿಯಾಗಲಿ ಚಕಾರವೆತ್ತಿಲ್ಲ. ಜೊತೆಗೆ ಪ್ರತೀ ವರ್ಷ ಅರಣ್ಯಗಳು ಬೆಂಕಿ ಬಿದ್ದು, ಲಕ್ಷಾಂತರ ಎಕರೆ ನಾಶವಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಯವರೇ ಶಾಮೀಲಾಗಿ, ವ್ಯಾಪಕವಾಗಿ ಅಕ್ರಮ ಗಾಂಜಾ ಬೆಳೆಸಿ, ಅರಣ್ಯ ನಾಶಮಾಡಿರುವ ಉದಾಹರಣೆಗಳೂ ಇವೆ. ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಗಳು ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ, ಅರಣ್ಯ ನಾಶಕ್ಕೆ ಜನಸಾಂದ್ರತೆಯ ಒತ್ತಡ ಕಾರಣ ಎಂದು ಹೇಳಿ, ಕೈತೊಳೆದುಕೊಳ್ಳುವುದರ ಹಿಂದಿನ ರಹಸ್ಯವನ್ನು ಬೇಧಿಸಬೇಕಾಗಿದೆ. ಅರಣ್ಯ ನಾಶಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ದೀರ್ಘ ಅಧ್ಯಯನ ಮಾಡಬೇಕಾಗಿದ್ದು, ಈ ಸಮಿತಿಗಳ ಕರ್ತವ್ಯ ವಾಗಿತ್ತು. ನೈಸರ್ಗಿಕ ವಲಯದಲ್ಲಿ ಅರಣ್ಯ ನಾಶವಾಗಿರುವ ಕಾರಣದಿಂದ ಪ್ರಾಣಿ ಪಕ್ಷ್ಷಿಗಳು ಕಾಡಿನಿಂದ ನಾಡಿಗೆ ವಲಸೆ ಬರುತ್ತಿರುವುದರಿಂದಲೇ ಸಾಂಸ್ಕೃತಿಕ ವಲಯದಲ್ಲಿ ಪರಿಸರ ನೈಸರ್ಗಿಕ ವಲಯಕ್ಕಿಂತ ಉತ್ತಮವಾಗಿದೆ ಎಂದು ದೃಢವಾಗಿ ಹೇಳಬಹುದು.
ಪಶ್ಚಿಮಘಟ್ಟ ವಲಯದಲ್ಲಿ ಕೃಷಿ ಇರಬೇಕೋ, ಬೇಡವೋ ಎನ್ನುವುದನ್ನು ಮೊದಲು ನಿಶ್ಚಿಯಿಸಬೇಕು. ಕೃಷಿ ಬೇಡ ಎನ್ನುವುದಾದರೆ ಅದನ್ನು ಅವಲಂಬಿಸಿಕೊಂಡು ಬಾಳಿ ಬದುಕುತ್ತಿರುವ ಜನರಿಗೆ ಪರ್ಯಾಯ ವ್ಯವಸ್ಥೆಯ ಅಗತ್ಯವಿದೆ. ಕೃಷಿ ಬೇಕೆನ್ನುವುದಾದರೆ, ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಅಗತ್ಯವಿರುವ ಎಲ್ಲಾ ಉತ್ತೇಜನಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಯಾವ ಪರಿಸರ ಸೂಕ್ಷ್ಮ ಪ್ರದೇಶ ಕೂಡ ಕೃಷಿ ಚಟುವಟಿಕೆಗೆ ಅಡ್ಡಗಾಲು ಹಾಕುವಂತಿರಬಾರದು. ಈ ಕಾರಣದಿಂದ ಪಶ್ಚಿಮಘಟ್ಟ ಭೂ ಪ್ರದೇಶದ ಕೃಷಿಕರು, ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಹಾಗೂ ಆದಿವಾಸಿಗಳು ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಧಿಕ್ಕರಿಸುತ್ತಾರೆ.
ಈ ಚಳವಳಿಯನ್ನು ಹತ್ತಿಕ್ಕುವ ದುರುದ್ದೇಶದಿಂದಲೇ ಟಿಂಬರ್ ಲಾಬಿ, ಗಣಿಗಾರಿಗೆ ಲಾಬಿ ಎಂದೆಲ್ಲಾ ಕಪೋಲ ಕಲ್ಪಿತ ಕಟ್ಟುಕತೆಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿ ಮಾಡಿಕೊಂಡು ಬಂದಿವೆ. ಯಾವ ದೃಷ್ಟಿಯಿಂದ ನೋಡಿದರೂ, ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿ ಕೃಷಿಕ ವರ್ಗದವರಿಗೆ ಸ್ವೀಕಾರ ಯೋಗ್ಯವಲ್ಲ. ಈ ವರದಿಗಳನ್ನು ನೈಸರ್ಗಿಕ ವಲಯದಲ್ಲಿ ಯಥಾಃಸ್ಥಿತಿಯಲ್ಲಿ ಜಾರಿ ಮಾಡುವುದಕ್ಕೆ ಯಾರ ವಿರೋಧವೂ ಇಲ್ಲ. ಹಾಗೆ ಜಾರಿ ಮಾಡುವಾಗ ಕೃಷಿ ಚಟುವಟಿಕೆಗೆ ಧಕ್ಕೆ ಆಗದ ಹಾಗೆ ನಿಗಾ ವಹಿಸುವ ಅಗತ್ಯತೆ ಇದೆ. ಹಾಗಾಗಿ ಬಫರ್‌ರೆನ್ ಶೂನ್ಯವಾಗಿರಬೇಕು. ಹೀಗೆ ಕೃಷಿ ಚಟುವಟಿಕೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಭದ್ರತೆ ಒದಗಿಸುವ ಮೂಲಕ ಯಾವ ವರದಿ ಜಾರಿ ಮಾಡಿದರೂ ಕೂಡ ಕೃಷಿಕರು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆ ಮಾಡದೆ, ಈ ವರದಿಗಳನ್ನು ಜನಗಳ ಮೇಲೆ ಹೇರುವುದರಿಂದ ಪರಿಸರವನ್ನು ಉಳಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಸರಕಾರಗಳು ಅರ್ಥಮಾಡಿಕೊಂಡು ವ್ಯವಹರಿಸುವ ಅವಶ್ಯಕತೆ ಇದೆ.

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸು ತ್ತಿರುವುದೇಕೆ?
ಪಶ್ಚಿಮಘಟ್ಟ ತಪ್ಪಲು ಪ್ರದೇಶದಲ್ಲಿ ಕೃಷಿಯನ್ನು ನಾಶಮಾಡಿ ಇಡೀ ವಲಯವನ್ನು ಅರಣ್ಯವನ್ನಾಗಿಸಿ ಅದರ ಆಡಳಿತದ ಮೇಲೆ ಪ್ರಭುತ್ವ ಸಾಧಿಸುವ ಪಿತೂರಿಯನ್ನು ನಕಲಿ ಪರಿಸರವಾದಿಗಳು ಮತ್ತು ಭ್ರಷ್ಟ ಅರಣ್ಯ ಅಧಿಕಾರಿಗಳ ಒಕ್ಕೂಟ ರೂಪಿಸುವಂತೆ ಭಾಸವಾಗುತ್ತಿದೆ. ಈ ಪಿತೂರಿಯ ಅಂಗವಾಗಿಯೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜೋಡಿಯಾಗಿ ಕೃಷಿಕರಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆಂದು ತಿಳಿಯಬೇಕಾಗಿದೆ.
ಕೊಡಗಿನ ಮಟ್ಟಿಗೆ ಹೇಳುವುದಾದರೆ ಕೃಷಿಕರು ತಮ್ಮ ಸ್ವಂತ ಜಮೀನಿನಲ್ಲಿ ಮರ ಬೆಳೆಸುವುದು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಂದೊಡ್ಡಿದ್ದಾರೆ. ಕೃಷಿಕ ತನ್ನ ಸ್ವಂತ ಜಮೀನಿನಲ್ಲಿ ನೆಟ್ಟು ಬೆಳೆಸಿದ ಮರದ ಮೇಲೆ ಅವನಿಗೆ ಯಾವ ಹಕ್ಕ್ಕೂ ಇಲ್ಲದೆ, ಇಲ್ಲಸಲ್ಲದ ಕಿರುಕುಳವನ್ನು ಅಧಿಕಾರಿಗಳಿಂದ ಎದುರಾಗುತ್ತಿರುವುದು ನಿತ್ಯ ವ್ಯವಹಾರವಾಗಿದೆ. ಉದ್ದೇಶ ಪೂರ್ವಕವಾಗಿಯೇ ಕಾಡನ್ನು ನಾಶ ಮಾಡಿ, ಪ್ರಾಣಿಗಳನ್ನು ನಾಡಿಗೆ ಅಟ್ಟಿ ಕೃಷಿಕರ ವ್ಯವಸಾಯಕ್ಕೆ ಅಡ್ಡಗಾಲು ಹಾಕಲಾಗುತ್ತಿದೆ. ಕೊಡಗು ಕರ್ನಾಟಕದ ಭಾಗವಾದ ನಂತರ ಕೊಡಗಿನಲ್ಲಿ ಖಾಸಗಿ ಜಮೀನುಗಳು ಇಲ್ಲವೆಂದು, ಎಲ್ಲವೂ ಅರಣ್ಯವಾಗಿದ್ದು, ಸರಕಾರಕ್ಕೆ ಸೇರಿದ ಜಮೀನು ಎಂಬ ವಾದವನ್ನು ಮುಂದಿಟ್ಟುಕೊಂಡು ಕೃಷಿಕರನ್ನು ನಾನಾ ರೀತಿಯ ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ. ಹಳೆಯ ಕಾನೂನುಗಳೆಲ್ಲವೂ ರದ್ದಾಗಿ ಇಡೀ ಕರ್ನಾಟಕಕ್ಕೆ ಅನ್ವಯವಾಗುವ 1964 ಕಂದಾಯ ಕಾನೂನು ಜಾರಿಯಾದ ನಂತರವೂ ಅಧಿಕಾರಿಗಳು ತಮ್ಮ ಕುಚೋದ್ಯವನ್ನು ಇನ್ನೂ ಮುಂದುವರಿಸುತ್ತಿರುವುದು ಸಾಮಾನ್ಯ ಕೃಷಿಕರನ್ನು ಕಂಗೆಡಿಸುತ್ತಿದೆ.
ಕೊಡಗಿನಲ್ಲಿ ಕಾಫಿ ಬೆಳೆ ಎಂದರೆ, ಭಾರೀ ಭೂ ಮಾಲಕರು, ಅವರೆಲ್ಲರೂ ಅರಣ್ಯ ಭೂಮಿಯನ್ನು ಕಬಳಿಸಿಕೊಂಡು ಕಾಫಿ ತೋಟ ಮಾಡಿಕೊಂಡಿದ್ದಾರೆಂದು ಒಂದು ಕಡೆ ವ್ಯವಸ್ಥಿತವಾಗಿ ಬಿಂಬಿಸಲಾಗುತ್ತಿದೆ. ಇದರೊಡನೆ ‘ಟಿಂಬರ್ ಲಾಬಿ’ ಎಂಬ ಇಲ್ಲದಿರುವ ಪೆಡಂಭೂತವೊಂದನ್ನು ಹುಟ್ಟು ಹಾಕಲಾಗಿದೆ. ಕೊಡಗಿನಲ್ಲಿ ಸಾವಿರಾರು ಎಕರೆ ಕಾಫಿ ತೋಟದ ಮಾಲಕತ್ವ ಹೊಂದಿರುವವರೆಂದರೆ ಬ್ರಿಟಿಷರ ಕಾಲದಿಂದಲೇ ಅಸ್ತಿತ್ವಕ್ಕೆ ಬಂದಿರುವ ಟಾಟಾ, ಬಿ.ಟಿ.ಟಿ.ಸಿ., ಕೊಠಾರಿ ಇತ್ಯಾದಿ ಕಾಫಿ ಕಂಪೆನಿಗಳಾಗಿವೆ. ಹಿಡಿಯಷ್ಟು ಜನ ಖಾಸಗಿ ವ್ಯಕ್ತಿಗಳು ನೂರಾರು ಎಕರೆ ಕಾಫಿ ತೋಟದ ಮಾಲಕರಾಗಿರಬಹುದು. ಇಂತಹವರ ಹಿತಾಸಕ್ತಿಗೆ ಯಾವ ಕಾರಣದಿಂದಲೂ ಇದುವರೆಗೆ ಧಕ್ಕೆ ಉಂಟಾಗಿಲ್ಲ. ಮುಂದೆ ಉಂಟಾಗುವುದಿಲ್ಲ.
ಕೊಡಗಿನಲ್ಲಿ ನೋಂದಾವಣೆಗೆ ಒಳಪಟ್ಟಿರುವ ಕಾಫಿ ತೋಟ 45,000. ಇವುಗಳಲ್ಲಿ ಒಂದಿಷ್ಟು ಮಂದಿ ಮಾತ್ರ ಹತ್ತು ಹೆಕ್ಟೇರಿಗೂ ಹೆಚ್ಚು ಜಮೀನು ಇರುವವರು, ಉಳಿದವರು ಸಣ್ಣ ಹಿಡುವಳಿದಾರರಾಗಿ, 5 ಎಕರೆಗಿಂತ ಕಡಿಮೆಯವರಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಭಾರೀ ಕುಳಗಳಾದ ಕಾಫಿ ಕಂಪೆನಿಯವರಿಗಾಗಲಿ, ಯಾ ನೂರಾರು ಎಕರೆ ಕಾಫಿ ತೋಟದ ಮಾಲಕರಿಗೆ ಯಾವುದೇ ಬಾಧಕವಿಲ್ಲ. ಅದು ಬಾಧಿಸುವುದು ಸಣ್ಣ ಹಿಡುವಳಿದಾರರಾಗಿರುವ ಕಾಫಿ ಕೃಷಿಕರನ್ನು. ಜೊತೆಗೆ ಅವರನ್ನು ಅವಲಂಬಿಸಿರುವ ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಹಾಗೂ ಆದಿವಾಸಿಗಳನ್ನು. ಹೀಗಾಗಿ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧವಿರುವುದು ಭಾರೀ ಕಾಫಿ ತೋಟದ ಮಾಲಕರಿಂದ ಅಲ್ಲ. ವಿರೋಧ ವ್ಯಕ್ತವಾಗುತ್ತಿರುವುದು ಸಣ್ಣ ಹಿಡುವಳಿದಾರರಾಗಿರುವ ಶ್ರೀಸಾಮಾನ್ಯ ಕೃಷಿಕರಿಂದಾಗಿದೆ.
ಏಕೆಂದರೆ ಈ ವರದಿ ಜಾರಿಯಿಂದ ಬೀದಿಗೆ ಬೀಳುವುದು ಇಂತಹ ಶ್ರೀಸಾಮಾನ್ಯನ ಬದುಕು. ಅಲ್ಲದೆ ದೊಡ್ಡ ಕಾಫಿ ತೋಟದ ಮಾಲಕರಲ್ಲ. ಕೊಡಗಿನ ಕೃಷಿಕ ವರ್ಗಕ್ಕೆ ನಾನಾ ರೀತಿಯ ಕಿರುಕುಳ ನೀಡುತ್ತಾ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟು ಮಾಡಿ ಅವರಾಗಿಯೇ ಕೃಷಿಯಿಂದ ಪಲಾಯನ ಮಾಡುವಂತೆ ನೋಡಿಕೊಳ್ಳುವುದಕ್ಕಾಗಿ ಅಧಿಕಾರಿಗಳು ನಕಲಿ ಪರಿಸರವಾದಿಗಳ ಜೊತೆ ಕೈಜೋಡಿಸಿಕೊಂಡು ಆದಿಯಿಂದಲೂ ನಾನಾ ರೀತಿಯ ಕಿರುಕುಳ ನೀಡುತ್ತಾ ಬಂದಿರುವುದು ವಾಸ್ತವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಕರ ಗೋಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯಕವಾಗುವ ಮತ್ತೊಂದು ಅಸ್ತ್ರವಾಗಿ ಕಸ್ತೂರಿ ರಂಗನ್ ವರದಿ ದೊರೆತರೆ ಕೊಡಗಿನಲ್ಲಿ ಕೃಷಿ ಚಟುವಟಿಕೆ ನಾಶವಾಗುವುದು ಖಚಿತ. ಆದ್ದರಿಂದಲೇ ಮೊದಲು ಕೃಷಿ ಚಟುವಟಿಕೆ ಹಾಗೂ ಅದಕ್ಕೆ ಪೂರಕವಾಗಿರುವ ಚಟುವಟಿಕೆಗಳಿಗೆ ಭದ್ರತೆ ಒದಗಿಸಬೇಕು. ನಂತರವೇ ಕಸ್ತೂರಿ ರಂಗನ್ ವರದಿ ಜಾರಿ ಎಂಬ ನಿಲುವನ್ನು ಕೊಡಗಿನಲ್ಲಿ ಕೃಷಿಕ ವರ್ಗ ಹಾಗೂ ಶ್ರೀಸಾಮಾನ್ಯ ವರ್ಗ ತಳೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)