varthabharthi

ವೈವಿಧ್ಯ

ನೋಟು ರದ್ದತಿಯ ಎರಡು ವರ್ಷಗಳ ಬಳಿಕವೂ ಬಿಗಡಾಯಿಸುತ್ತಲೇ ಇದೆ ಭಾರತದ ಆರ್ಥಿಕ ಅವ್ಯವಸ್ಥೆ

ವಾರ್ತಾ ಭಾರತಿ : 24 Nov, 2018
ಅರುಣ್ ಕುಮಾರ್

ಎರಡು ವರ್ಷಗಳ ಬಳಿಕವೂ, ಇನ್ನ್ನೂ ನೋವು ಮುಂದುವರಿಯುತ್ತಲೇ ಇದೆ. ಆದರೆ ಸರಕಾರ ಮಾತ್ರ ತನ್ನ ತಪ್ಪನ್ನು ಸಮರ್ಥಿಸುತ್ತಲೇ ಇದೆ. ವಿಶೇಷವಾಗಿ ಅಸಂಘಟಿತ ವಲಯಗಳಿಗಾಗಿರುವ ದೀರ್ಘಕಾಲಿಕ ಹಾನಿಯನ್ನು ಒಪ್ಪಿಕೊಳ್ಳಲು ಸರಕಾರ ನಿರಾಕರಿಸಿದೆ. ನೋಟುಗಳ ಕೊರತೆಯಿಂದಾಗಿ ದೇಶದ ಕೃಷಿ ರಂಗ ಭಾರೀ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಆಗಲಿಲ್ಲ. ಬೀಜಗಳ ಬಿತ್ತನೆ ವಿಳಂಬವಾಯಿತು; ತರಕಾರಿಗಳಂತಹ ಕೊಳೆತು ಹೋಗುವ ಉತ್ಪನ್ನಗಳಿಗೆ ಬೇಡಿಕೆ ಕುಸಿಯಿತು. ಒಟ್ಟಿನಲ್ಲಿ ಉತ್ಪಾದನೆ, ಉದ್ಯೋಗ ಮತ್ತು ಹೂಡಿಕೆ ಎಲ್ಲವೂ ಕುಸಿಯಿತು. ಆ ಕುಸಿತದಿಂದ ದೇಶದ ಅರ್ಥ ವ್ಯವಸ್ಥೆ ಇನ್ನೂ ಚೇತರಿಸಿಕೊಂಡಿಲ್ಲ.

ನೋಟು ರದ್ದತಿಯು ಕಪ್ಪುಹಣದ ಅರ್ಥ ವ್ಯವಸ್ಥೆಯನ್ನು ಎದುರಿಸಲು ನಡೆಸಿದ ಒಂದು ಹುಚ್ಚು ಪ್ರಯತ್ನ. ಅದರ ಪರಿಣಾಮಗಳಿಗೆ ಪ್ರಭುತ್ವದಿಂದ ಬಂದ ಪ್ರತಿಕ್ರಿಯೆ ಸರ್ವಾಧಿಕಾರಿಯ ಒಂದು ಪ್ರತಿಕ್ರಿಯೆ. ನೋಟು ರದ್ದತಿ ನಮ್ಮ ನೆನಪುಗಳಲ್ಲಿ ಆಳವಾಗಿ ಹುದುಗಿರುವ ಒಂದು ಕೆಟ್ಟ ಕನಸು. ನೋಟು ರದ್ದತಿಯ ಪರಿಣಾಮವಾಗಿ ಕಾಡಿದ ಹಣದ ಕೊರತೆಯಿಂದಾಗಿ ವಿವಾಹಗಳು ಮುಂದೂಡಲ್ಪಟ್ಟವು; ವೈದ್ಯಕೀಯ ಚಿಕಿತ್ಸೆಗಳನ್ನು ಸಕಾಲದಲ್ಲಿ ಒದಗಿಸಲಾಗಲಿಲ್ಲ; ಬ್ಯಾಂಕುಗಳ ಮುಂದೆ ಮೈಲುದ್ದದ ಕ್ಯೂಗಳು ಕಂಡು ಬಂದವು. ಬಂಡವಾಳದ ಕೊರತೆಯಿಂದಾಗಿ ಚಿಕ್ಕಪುಟ್ಟ ವ್ಯಾಪಾರೋದ್ಯಮಗಳು ಮುಚ್ಚಿದವು; ಅಲ್ಲಿ ಉದ್ಯೋಗ ಮಾಡುತ್ತಿದ್ದವರು ತಮ್ಮ ಹಳ್ಳಿಗಳಿಗೆ ಮರಳಿದರು. ಎಂದೂ ಕಪ್ಪುಹಣ ಉತ್ಪಾದಿಸದ ಜನಸಾಮಾನ್ಯರು ಅತ್ಯಂತ ಹೆಚ್ಚು ತೊಂದರೆಗಳಾದರು. ಇಷ್ಟೆಲ್ಲ ಆದರೂ ನೋಟು ರದ್ದತಿಯು ಭ್ರಷ್ಟರ ಸಂಪತ್ತನ್ನು ನಾಶ ಮಾಡುತ್ತದೆಂಬ ಕಥಾನಕವನ್ನು ವ್ಯಾಪಕವಾಗಿ ಸ್ವೀಕರಿಸಲಾಯಿತು.
‘ಕಪ್ಪುಅಂದರೆ ಕ್ಯಾಶ್’ (ನಗದು) ಎಂಬ ತಪ್ಪು ಕಲ್ಪನೆಯೇ ಇದಕ್ಕೆಲ್ಲ ಕಾರಣ. ನಗದನ್ನು ನಿವಾರಿಸಿದರೆ ಒಂದೇ ಏಟಿಗೆ ಕಪ್ಪುಅರ್ಥವ್ಯವಸ್ಥೆ ಅದೃಶ್ಯವಾಗಿ ಬಿಡುತ್ತದೆ; ದೀರ್ಘಕಾಲದ ಲಾಭಕ್ಕಾಗಿ ಅಲ್ಪಕಾಲಿಕ ನೋವನ್ನು ನಾವು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಹೇಳಿದರು. ಅವರು ಅದನ್ನು ಒಂದು ‘ಯಾಗ’ದಲ್ಲಿ ನೀಡುವ ‘ಆಹುತಿ’ಗೆ ಹೋಲಿಸಿದರು. ಐವತ್ತು ದಿನಗಳಲ್ಲಿ ನೋವು ಕೊನೆಯಾಗದಿದ್ದಲ್ಲಿ ದೇಶದ ಜನತೆ ತನಗೆ ಯಾವುದೇ ಶಿಕ್ಷೆ ನೀಡಬಹುದು ಮತ್ತು ತಾನು ಅದನ್ನು ಸ್ವೀಕರಿಸುತ್ತೇನೆ, ಅನುಭವಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
ಎರಡು ವರ್ಷಗಳ ಬಳಿಕವೂ, ಇನ್ನ್ನೂ ನೋವು ಮುಂದುವರಿಯುತ್ತಲೇ ಇದೆ. ಆದರೆ ಸರಕಾರ ಮಾತ್ರ ತನ್ನ ತಪ್ಪನ್ನು ಸಮರ್ಥಿಸುತ್ತಲೇ ಇದೆ. ವಿಶೇಷವಾಗಿ ಅಸಂಘಟಿತ ವಲಯಗಳಿಗಾಗಿರುವ ದೀರ್ಘಕಾಲಿಕ ಹಾನಿಯನ್ನು ಒಪ್ಪಿಕೊಳ್ಳಲು ಸರಕಾರ ನಿರಾಕರಿಸಿದೆ. ನೋಟುಗಳ ಕೊರತೆಯಿಂದಾಗಿ ದೇಶದ ಕೃಷಿ ರಂಗ ಭಾರೀ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಆಗಲಿಲ್ಲ. ಬೀಜಗಳ ಬಿತ್ತನೆ ವಿಳಂಬವಾಯಿತು; ತರಕಾರಿಗಳಂತಹ ಕೊಳೆತು ಹೋಗುವ ಉತ್ಪನ್ನಗಳಿಗೆ ಬೇಡಿಕೆ ಕುಸಿಯಿತು. ಒಟ್ಟಿನಲ್ಲಿ ಉತ್ಪಾದನೆ, ಉದ್ಯೋಗ ಮತ್ತು ಹೂಡಿಕೆ ಎಲ್ಲವೂ ಕುಸಿಯಿತು. ಆ ಕುಸಿತದಿಂದ ದೇಶದ ಅರ್ಥ ವ್ಯವಸ್ಥೆ ಇನ್ನೂ ಚೇತರಿಸಿಕೊಂಡಿಲ್ಲ.


ನೋಟು ರದ್ದತಿಯಿಂದಾಗಿ ಆರ್‌ಬಿಐನಂತಹ ಸಂಸ್ಥೆಗಳಿಗೆ ಹಾನಿ ಎಸಗಲಾಯಿತು. ರೈತರು, ನೌಕರರು ಮತ್ತು ಯುವಜನತೆ ಚಳವಳಿ ನಡೆಸುತ್ತಿದ್ದಾರೆ. ಸರಕಾರವು ತನ್ನ ವೈಫಲ್ಯವನ್ನು ಅರಿತು ಇನ್ನಷ್ಟು ಸರ್ವಾಧಿಕಾರಿ ಧೋರಣೆಯನ್ನು ತಳೆದಿದೆ. ಆರ್‌ಬಿಐನ ಇಂದಿನ ಸಮಸ್ಯೆಗಳ ಮೂಲ ಕೂಡ ನೋಟು ರದ್ದತಿಯಲ್ಲೇ ಇದೆ.
ಹಲವರು ನೋಟು ರದ್ದತಿಯ ಪರಿಣಾಮವೆಂದರೆ ಕರೆನ್ಸಿ ನೋಟುಗಳ ಲಭ್ಯತೆಯ ಕೊರತೆ ಎಂದಷ್ಟೆ ತಿಳಿದರು. 2017ರ ಅಂತ್ಯದ ವೇಳೆಗೆ ಶೇ. 80 ಕರೆನ್ಸಿ ನೋಟುಗಳು ಪುನಃ ಚಲಾವಣೆಗೆ ಬಂದವು.
ನೋಟು ರದ್ದತಿಯ ಪರಿಣಾಮ ಮುಗಿಯಿತೇ? ಇಲ್ಲ. ದೇಶದ ಸಮಗ್ರ ಅರ್ಥ ವ್ಯವಸ್ಥೆಯ ಮೇಲೆ ಅದರ ಪರಿಣಾಮ ಇನ್ನೂ ಆಗುತ್ತಲೇ ಇದೆ. ಹಣಕಾಸು ವ್ಯವಹಾರಗಳಲ್ಲಿ ಆಗುತ್ತಿರುವ ಸಮಸ್ಯೆಗಳ, ಸಂಕಷ್ಟಗಳ ಮೂಲಕ ಜನ ಇನ್ನೂ ಕೂಡ ಆ ಪರಿಣಾಮಗಳನ್ನು ಅನುಭವಿಸುತ್ತಲೇ ಇದ್ದಾರೆ. ನೋಟು ರದ್ದತಿಯು ದೇಶದಲ್ಲಿ ಉತ್ಪಾದನೆ, ಉದ್ಯೋಗ ಹಾಗೂ ಬಂಡವಾಳ ಹೂಡಿಕೆ ಎಲ್ಲದಕ್ಕೂ ಹೊಡೆತ ನೀಡಿತು.
ಅಮಾನ್ಯಗೊಳಿಸಲಾದ ಬಹುತೇಕ ಎಲ್ಲ ನೋಟುಗಳು ಆರ್‌ಬಿಐಗೆ ಮರಳಿ ಬಂದವು. ಆದ್ದರಿಂದ ಅರ್ಥವ್ಯವಸ್ಥೆಯಿಂದ ಅತ್ಯಲ್ಪ ಕಪ್ಪು ಹಣವಷ್ಟೇ ಹೊರ ತಳ್ಳಲಾಯಿತು.
ನೋಟು ರದ್ದತಿಯು ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಗಳ ಮೊದಲು ಅಲ್ಲಿಯ ವಿಪಕ್ಷಗಳ ಬಳಿ ಇದ್ದ ಕಪ್ಪುಹಣವನ್ನು ನಿರ್ಮೂಲನ ಮಾಡುವ ಒಂದು ರಾಜಕೀಯ ನಡೆ ಎಂದು ಹಲವರು ಭಾವಿಸಿದ್ದರು. ಆದರೆ 2014ರ ಚುನಾವಣೆಗೆ ಮೊದಲು ನೀಡಿದ್ದ ಆಶ್ವಾಸನೆಯಂತೆ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿ ಕುಟುಂಬದ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡಲಾಗುವುದು ಎಂಬ ಆಶ್ವಾಸನೆ ಸುಳ್ಳಾಯಿತೆಂದು ವಿಪಕ್ಷಗಳು ಸತತವಾಗಿ ನಡೆಸಿದ ದಾಳಿಯೇ ನೋಟು ರದ್ದತಿಗೆ ಮುಖ್ಯ ಕಾರಣ. ಕಪ್ಪು ಹಣವನ್ನು ನಿರ್ಮೂಲನೆಗೊಳಿಸಲು ಸರಕಾರ ತೆಗೆದುಕೊಂಡಿದ್ದ ಎಸ್‌ಐಟಿಯ ಸ್ಥಾಪನೆ, ವಿದೇಶಿ ಹಣ ಮಸೂದೆ, ಬೇನಾಮಿ ಮಸೂದೆಯಂತಹ ಕ್ರಮಗಳಿಂದ ಹೆಚ್ಚಿನ ಫಲಿತಾಂಶ ದೊರಕಲಿಲ್ಲ. ಹಾಗಾಗಿ ಅಧಿಕಾರಾರೂಢ ಬಿಜೆಪಿಗೆ ಒಂದು ದೊಡ್ಡ ಗದ್ದಲದ ಆವಶ್ಯಕತೆ ಇತ್ತು. ನೋಟು ರದ್ದತಿ ಆ ಆವಶ್ಯಕತೆಯನ್ನು ಪೂರೈಸಿತು. ಅಲ್ಲದೆ ದೇಶದಲ್ಲಿ ಉತ್ಪಾದನೆಯಾಗುವ ಕಪ್ಪುಹಣದ ಶೇ. 10ರಷ್ಟು ಮಾತ್ರ ವಿದೇಶಕ್ಕೆ ಹೋಗುತ್ತದೆ. ಉಳಿದದ್ದು ಇಲ್ಲೇ ಇರುತ್ತದೆ ಎಂಬ ಸತ್ಯ ಕೂಡ ಜನರಿಗೆ ತಿಳಿಸಿರಲಿಲ್ಲ. ನೋಟು ರದ್ದತಿಯಿಂದಾಗಿ ಎಲ್ಲ ಹಣಕಾಸು ವ್ಯವಹಾರವೂ ಆನ್‌ಲೈನ್/ ಡಿಜಿಟಲ್ ಆಗಿದ್ದರಿಂದ ತೆರಿಗೆದಾರರ ಸಂಖ್ಯೆ ಹೆಚ್ಚಳವಾಗಿ ತೆರಿಗೆ ಸಂಗ್ರಹ ಹೆಚ್ಚಿದೆ ಎಂದು ಸರಕಾರ ವಾದಿಸಿದೆ. ಆದರೆ ತೆರಿಗೆದಾರರ ಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ತೆರಿಗೆ ಸಂಗ್ರಹವಾಗಿಲ್ಲ. ತೆರಿಗೆ ಅಧಿಕಾರಿಗಳಿಗೆ ಟಾರ್ಗೆಟ್‌ಗಳನ್ನು ನಿಗದಿಪಡಿಸಿರುವುದರಿಂದ ಅವರು ವ್ಯಾಪಾರೋದ್ಯಮಿಗಳಿಗೆ ತಮ್ಮ ಆದಾಯಗಳನ್ನು ಘೋಷಿಸುವಂತೆ ಬಲಾತ್ಕರಿಸುತ್ತಿದ್ದಾರೆ; ಆಯ್ದ ಕೆಲವರ ಮೇಲೆ ತೆರಿಗೆ ಭಯೋತ್ಪಾದನೆ ನಡೆಯುತ್ತಿದೆ ಎಂದು ವರದಿಯಾಗಿದೆ. ದೇಶ ತೊರೆದು ಹೋಗುತ್ತಿರುವ ಮಿಲಿಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದಕ್ಕೆ ತೆರಿಗೆ ಭಯೋತ್ಪಾದನೆ ಕೂಡ ಒಂದು ಕಾರಣವಿರಬಹುದು. ಒಟ್ಟಿನಲ್ಲಿ ನೋಟುಗಳ ಕೊರತೆ ಜನಸಾಮಾನ್ಯರಿಗೆ ಯಾತನಾಮಯವಾಗಿತ್ತು ಮತ್ತು ನೋಟು ರದ್ದತಿಯ ದೀರ್ಘಕಾಲಿಕ ಪರಿಣಾಮಗಳನ್ನು ಜನರು ಇನ್ನೂ ಅನುಭವಿಸುತ್ತಿದ್ದಾರೆ.
ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)