varthabharthi

ವೈವಿಧ್ಯ

ಶೇ.2.5ರಷ್ಟೂ ಗ್ರಾ.ಪಂ.ಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯವಿಲ್ಲ

ಡಿಜಿಟಲ್ ಇಂಡಿಯಾ ಗುರಿ ಸಾಧಿಸಲು ಸರಕಾರ ವಿಫಲ

ವಾರ್ತಾ ಭಾರತಿ : 25 Nov, 2018
ಮನೋಜ್ ಗೈರೊಲ

ಈ ಯೋಜನೆಗೆ ಇದುವರೆಗೆ 11 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಸುರಿಯಲಾಗಿದ್ದರೂ ಕ್ರಿಯಾತ್ಮಕ ಇಂಟರ್‌ನೆಟ್ ವ್ಯವಸ್ಥೆಯನ್ನು ರೂಪಿಸುವ ಸರಕಾರದ ಗುರಿ ಇನ್ನೂ ಬಹಳ ದೂರದಲ್ಲಿದೆ ಎಂದು ತೋರುತ್ತದೆ. ಸರಕಾರದ ಇತ್ತೀಚಿನ ಆಂತರಿಕ ಮಾಹಿತಿಯ ಪ್ರಕಾರ ದೇಶದ 2.5 ಲಕ್ಷ ಗ್ರಾಮಪಂಚಾಯತ್‌ಗಳ ಪೈಕಿ ಈವರೆಗೆ ಶೇ.2.5ಕ್ಕೂ ಕಡಿಮೆ ಪಂಚಾಯತ್‌ಗಳು ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದಿವೆ.

ನರೇಂದ್ರ ಮೋದಿ ಸರಕಾರದ ಪ್ರಮುಖ ಯೋಜನೆಯಾಗಿರುವ ‘ಡಿಜಿಟಲ್ ಇಂಡಿಯಾ’ ಯೋಜನೆ (ದಿ ಭಾರತ್‌ನೆಟ್ ಯೋಜನೆ) ಕಳೆದ 4 ವರ್ಷಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಿದೆ ಎಂಬುದನ್ನು ಗಮನಿಸಿದರೆ ನಿರಾಶಾಜನಕ ಉತ್ತರ ದೊರಕುತ್ತದೆ.
  ಈ ಯೋಜನೆಗೆ ಇದುವರೆಗೆ 11 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಸುರಿಯಲಾಗಿದ್ದರೂ ಕ್ರಿಯಾತ್ಮಕ ಇಂಟರ್‌ನೆಟ್ ವ್ಯವಸ್ಥೆಯನ್ನು ರೂಪಿಸುವ ಸರಕಾರದ ಗುರಿ ಇನ್ನೂ ಬಹಳ ದೂರದಲ್ಲಿದೆ ಎಂದು ತೋರುತ್ತದೆ. ಸರಕಾರದ ಇತ್ತೀಚಿನ ಆಂತರಿಕ ಮಾಹಿತಿಯ ಪ್ರಕಾರ ದೇಶದ 2.5 ಲಕ್ಷ ಗ್ರಾಮಪಂಚಾಯತ್‌ಗಳ ಪೈಕಿ ಶೇ.2.5ಕ್ಕೂ ಕಡಿಮೆ ಪಂಚಾಯತ್‌ಗಳು ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದಿವೆ.
2014ರಲ್ಲಿ ಸಂಪುಟವು ಅನುಮೋದಿಸಿರುವ ಡಿಜಿಟಲ್ ಇಂಡಿಯಾ ಯೋಜನೆಯಡಿ, ಎನ್‌ಡಿಎ-2 ಸರಕಾರವು 2016ರ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ 2.5 ಲಕ್ಷ ಗ್ರಾಮಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡುವ ಗುರಿ ಹೊಂದಿತ್ತು.
 2016ರ ಡಿಸೆಂಬರ್ ಅಂತ್ಯದೊಳಗೆ 2.5 ಲಕ್ಷ ಗ್ರಾಮ ಪಂಚಾಯತ್‌ಗಳು ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್(ಎನ್‌ಒಎಫ್‌ಎನ್)ನಡಿ ಬರಲಿವೆ. ಈ ಕಾರ್ಯಕ್ಕೆ ದೂರಸಂಪರ್ಕ ಇಲಾಖೆಯು ನೋಡಲ್ ಇಲಾಖೆಯಾಗಿರುತ್ತದೆ ಎಂದು ಡಿಜಿಟಲ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಗ್ರಾಮಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ ಒದಗಿಸುವುದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿದೆ ಮತ್ತು ಈ ಯೋಜನೆಯ ‘9 ಸ್ತಂಭಗಳಲ್ಲಿ’ ಇದು ಪ್ರಥಮ ಹಂತವಾಗಿದೆ. 1.1 ಲಕ್ಷಕ್ಕೂ ಹೆಚ್ಚು ಗ್ರಾಮಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ವ್ಯವಸ್ಥೆ ಒದಗಿಸಲಾಗಿದೆ ಎಂದು 2018ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಘೋಷಿಸಿದೆ. ಆದರೆ ‘ದಿ ವೈರ್’ ಸುದ್ದಿಸಂಸ್ಥೆ ಪಡೆದಿರುವ ದೂರಸಂಪರ್ಕ ಇಲಾಖೆಯ ಆಂತರಿಕ ಮಾಹಿತಿಯ ಪ್ರಕಾರ 2018ರ ಅಕ್ಟೋಬರ್ 31ರ ವೇಳೆ ಕೇವಲ 5,010 ಗ್ರಾಮಪಂಚಾಯತ್‌ಗಳು ಮಾತ್ರ ವಾಣಿಜ್ಯಿಕ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದಿವೆ. ಅಲ್ಲದೆ ಭಾರತ್‌ನೆಟ್ ಯೋಜನೆಯಡಿ ಒದಗಿಸಲಾದ ಸಂಪರ್ಕದಲ್ಲಿ ಕೇವಲ 660 ಎಂಬಿ ಡಾಟಾ ಮಾತ್ರ ಬಳಸಲಾಗಿದೆ. ಒಂದು ಗ್ರಾಮಪಂಚಾಯತ್‌ನಲ್ಲಿ ಸಾವಿರಾರು ಮನೆಗಳಿರುತ್ತವೆ. ಪ್ರತೀ ಸಂಪರ್ಕದಲ್ಲಿ ಬಳಕೆಯಾಗಿರುವ ಸರಾಸರಿ ಡಾಟಾವನ್ನು ಗಮನಿಸಿದಾಗ, ಸಂಪರ್ಕ ಪಡೆದವರೂ ಕೂಡಾ ಸರಕಾರದ ಡಿಜಿಟಲ್ ಆರೋಗ್ಯ ಅಥವಾ ಶೈಕ್ಷಣಿಕ ಕಾರ್ಯಕ್ರಮವನ್ನು ಸದುಪಯೋಗಪಡಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಪರೀಕ್ಷಾರ್ಥ ಸಂಪರ್ಕ ಹೊಂದಿರುವ ಗ್ರಾಮಪಂಚಾಯತ್‌ಗಳ ಸಂಖ್ಯೆ 56,700. ಈ ಸಂಪರ್ಕಗಳನ್ನು 6 ತಿಂಗಳಾವಧಿಗೆ ಮಾತ್ರ ನೀಡಲಾಗಿದೆ.
ಫೈಬರ್ ಕೇಬಲ್ ಅಳವಡಿಸುವುದು ಹಾಗೂ ಪರೀಕ್ಷಾರ್ಥ ಸಂಪರ್ಕ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಬ್ರಾಡ್‌ಬ್ಯಾಂಡ್ ಮೂಲಕ ಪಡೆದಿರುವ ಸಂಪರ್ಕ ಹಾಗೂ ಅದರಿಂದ ಪಡೆಯುತ್ತಿರುವ ಪ್ರಯೋಜನ ಮಾತ್ರ ಗಣನೆಗೆ ಬರುತ್ತದೆ ಎಂದು ‘ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್)’ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್.ಗುಪ್ತಾ ಹೇಳಿದ್ದಾರೆ. ಉದಾಹರಣೆಗೆ, ಗ್ರಾಮಗಳಲ್ಲಿ ನೀರಿನ ಪೈಪ್‌ಗಳನ್ನು ಅಳವಡಿಸಿದರೂ ಅದರ ಮೂಲಕ ನೀರನ್ನು ಹರಿಸದಿದ್ದರೆ ಏನು ಪ್ರಯೋಜನವಾಗುತ್ತದೆ. ಕೇವಲ ಪೈಪ್‌ಗಳಿಂದ ಜನರಿಗೆ ಪ್ರಯೋಜನವಿಲ್ಲ. ಕೆಲ ದಿನಗಳಲ್ಲಿ ಪೈಪ್‌ಗಳೂ ತುಕ್ಕು ಹಿಡಿಯುತ್ತದೆ ಎನ್ನುತ್ತಾರೆ ಗುಪ್ತಾ.
ಇತ್ತೀಚೆಗೆ ದೂರಸಂಪರ್ಕ ಇಲಾಖೆಗೆ ಬಿಎಸ್ಸೆನ್ನೆಲ್ ಇತ್ತೀಚೆಗೆ ಬರೆದಿರುವ ಪತ್ರ ಈ ಮಾತಿಗೆ ಪುಷ್ಟಿ ನೀಡುತ್ತಿದೆ. ‘ಭಾರತ್‌ನೆಟ್ ಯೋಜನೆಯಡಿ ಅಳವಡಿಸಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ ಹಾಳಾಗುತ್ತಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೇಬಲ್‌ಗಳನ್ನು ಅಳವಡಿಸಿದ ಬಳಿಕ ಇಂಟರ್‌ನೆಟ್ ಸಂಪರ್ಕ ಒದಗಿಸುವ ಕಾರ್ಯವನ್ನು ನಿರ್ಲಕ್ಷಿಸಲಾಗಿದೆ ಎಂದು ಡಿಜಿಟಲ್ ಸಂಪರ್ಕ ತಜ್ಞ ಉಸಾಮ ಮಂಝರ್ ಈ ವರ್ಷದ ಆರಂಭದಲ್ಲೇ ತಿಳಿಸಿದ್ದರು.
ಗುರಿ ಸಾಧಿಸುವುದು ಕಷ್ಟ ಎಂದು ಕಳೆದ 2 ವರ್ಷಗಳಲ್ಲಿ ಅರಿತುಕೊಂಡ ಸರಕಾರ ಅರ್ಧದಲ್ಲೇ ತನ್ನ ಗುರಿಯನ್ನು ಬದಲಾಯಿಸಿ ಇದೀಗ ಗ್ರಾಮಪಂಚಾಯತ್‌ಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಇಳಿಸಿದೆ. ಅಲ್ಲದೆ ಉಳಿದ 1,50,000 ಗ್ರಾಮಗಳ ಹೊರೆಯನ್ನು ರಾಜ್ಯ ಸರಕಾರಗಳಿಗೆ ಹೊರಿಸಿದೆ.
ಗ್ರಾಮೀಣ ಭಾರತಕ್ಕೆ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ಯೋಜನೆ ಯುಪಿಎ-2 ಸರಕಾರದಡಿಯೂ ಹಳ್ಳ ಹಿಡಿ ದಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ, ಈ ಯೋಜನೆಗೆ ಹೊಸ ನಿಧಿಯನ್ನು ಒದಗಿಸಲಾಯಿತು ಮತ್ತು ಯೋಜನೆಗೆ ‘ಭಾರತ್‌ನೆಟ್’ ಎಂದು ಮರುನಾಮಕರಣ ಮಾಡಲಾಯಿತು.
 ಸುಮಾರು 11,000 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಲಾಗಿದೆ. ಆದರೆ ಸ್ಪಷ್ಟ ಫಲಿತಾಂಶ ಬಾರದಿರುವು ದರಿಂದ ಪ್ರಧಾನಮಂತ್ರಿ ಕಚೇರಿ(ಪಿಎಂಒ) ಕೂಡಾ ಆತಂಕಕ್ಕೆ ಒಳಗಾಗಿದೆ ಎಂದು ಕೆಲವು ಅಧಿಕಾರಿಗಳೇ ಹೇಳುತ್ತಿದ್ದಾರೆ. ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಕಳೆದ ಕೆಲ ತಿಂಗಳಿನಿಂದ ಡಿಒಟಿ ಇಲಾಖೆಯ ಅಧಿಕಾರಿಗಳು ಹಾಗೂ ಯುಎಸ್‌ಒಎಫ್(ಯುನಿವರ್ಸಲ್ ಸರ್ವಿಸ್ ಅಬ್ಲಿಗೇಷನ್ ಫಂಡ್) ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸುತ್ತಿದ್ದಾರೆ. ಯುಎಸ್‌ಒಎಫ್ ಗ್ರಾಮೀಣ ಸಂಪರ್ಕಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸಲು ಸ್ಥಾಪಿಸಲಾದ ಸರಕಾರ ನಿಯಂತ್ರಣದ ನಿಧಿಯಾಗಿದೆ.
ತೆರಿಗೆ ಪಾವತಿಸುವವರ ಹಣ ವ್ಯರ್ಥವಾಗುತ್ತಿದ್ದು ಇದೊಂದು ಬಹುದೊಡ್ಡ ಹಗರಣವಾಗುವ ಸಾಧ್ಯತೆಯಿದೆ ಎಂದು ‘ಸಿ-ಡಾಟ್’ ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ಗುಪ್ತಾ ಹೇಳಿದ್ದಾರೆ.
 ಭಾರತ್‌ನೆಟ್ ಯೋಜನೆ ಕೇಂದ್ರ ಸರಕಾರಕ್ಕೆ ಮುಜುಗುರ ತಂದಿಟ್ಟಿದೆ ಎಂಬ ಮಾತು ಟೆಲಿಕಾಂ ಉದ್ದಿಮೆ ವಲಯದಲ್ಲಿ ಕೇಳಿ ಬರುತ್ತಿದೆ.
2014ರಲ್ಲಿ ಪ್ರಧಾನಿಯಾಗಿ ಮಾಡಿದ ಪ್ರಪ್ರಥಮ ಸ್ವಾತಂತ್ರ ದಿನಾಚರಣೆಯ ಭಾಷಣದಲ್ಲಿ ಮೋದಿ ಡಿಜಿಟಲ್ ಇಂಡಿಯಾದ ಮಹತ್ವವನ್ನು ಸಾರಿ ಹೇಳಿದ್ದರು. ‘‘ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಬಗ್ಗೆ ಕಲ್ಪಿಸಿಕೊಳ್ಳಿ. ದೇಶದ ಎಲ್ಲಾ ಹಳ್ಳಿಗಳನ್ನೂ ಬ್ರಾಡ್‌ಬ್ಯಾಂಡ್ ಮೂಲಕ ಸಂಪರ್ಕಿಸಿದರೆ ದುರ್ಗಮ ಪ್ರದೇಶದ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸಲು ಸಾಧ್ಯ. ವೈದ್ಯರ ಕೊರತೆಯಿರುವ ಸ್ಥಳಗಳಲ್ಲಿ ಟೆಲಿಮೆಡಿಸಿನ್ ಸೌಲಭ್ಯ ಒದಗಿಸಬಹುದು. ಹಳ್ಳಿಗಳ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯವ್ಯವಸ್ಥೆ ಒದಗಿಸಬಹುದು’’ ಎಂದು ಮೋದಿ ಹೇಳಿದ್ದರು.


2014ರಲ್ಲಿ ಯುಎಸ್‌ಒಎಫ್‌ನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದ ಅರುಣಾ ಸುಂದರರಾಜನ್‌ರನ್ನು ಸರಕಾರ 2017ರಲ್ಲಿ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿತು. ಇವರು ನಾಲ್ಕು ವರ್ಷದ ಹಿಂದೆ ಅನುಷ್ಠಾನಗೊಳಿಸಿದ ಯೋಜನೆಗಳು ಇನ್ನೂ ಯಶಸ್ವಿಯಾಗಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಈ ನೇಮಕಕ್ಕೆ ಸರಕಾರ ಮುಂದಾಗಿದೆ ಎಂದು ಡಿಒಟಿ ಮೂಲಗಳು ತಿಳಿಸಿವೆ. ಆದರೆ ಈಗ ಅರುಣಾರಿಗೆ ಹಿಂದಿನಂತೆ ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಯಾಕೆಂದರೆ ಪ್ರಮುಖ ಯೋಜನೆಗಳು ಹಲವು ಯುಎಸ್‌ಒಎಫ್ ಅಧಿಕಾರಿಗಳ ವಶದಲ್ಲಿವೆ. ಈ ಅಧಿಕಾರಿಗಳು ಯೋಜನೆಯ ಟೆಂಡರ್‌ನಲ್ಲಿ ಕಠಿಣ ಶರತ್ತುಗಳನ್ನು ವಿಧಿಸುವ ಮೂಲಕ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊಬೈಲ್ ಸಂಪರ್ಕ:
ಡಿಜಿಟಲ್ ಇಂಡಿಯಾ ಯೋಜನೆಯ ಮತ್ತೊಂದು ಪ್ರಮುಖ ಅಂಶ ಮೊಬೈಲ್ ಸಂಪರ್ಕ ವ್ಯವಸ್ಥೆ. ದೇಶದಲ್ಲಿ ಮೊಬೈಲ್ ಸಂಪರ್ಕ ಹೊಂದಿರದ ಸುಮಾರು 55,619 ಗ್ರಾಮಗಳಿವೆ. ಈಶಾನ್ಯ ಭಾರತದ ಸಮಗ್ರ ಅಭಿವೃದ್ಧಿ ಯೋಜನೆಯ ಭಾಗವಾಗಿ, ಇದುವರೆಗೆ ಸಂಪರ್ಕವ್ಯಾಪ್ತಿಗೆ ಒಳಪಡದ ಗ್ರಾಮಗಳಿಗೆ ಮೊಬೈಲ್ ಸಂಪರ್ಕ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹಂತಹಂತವಾಗಿ ಉಳಿದ ಗ್ರಾಮಗಳಿಗೂ ಸಂಪರ್ಕ ಒದಗಿಸಲಾಗುವುದು ಎಂದು ಡಿಜಿಟಲ್ ಇಂಡಿಯಾ ವೆಬ್‌ಸೈಟ್ ತಿಳಿಸಿದೆ.
ಎಡಪಂಥೀಯ ತೀವ್ರವಾದಿಗಳ ಚಟುವಟಿಕೆಯಿಂದ ಬಾಧಿತ ವಾಗಿರುವ ಮೇಘಾಲಯದಲ್ಲಿ 6,245 ಮೊಬೈಲ್ ಟವರ್‌ಗಳನ್ನು ಅಳವಡಿಸುವ, ಎಲ್‌ಡಬ್ಲೂಇ(ಎಡಪಂಥೀಯ ತೀವ್ರವಾದಿಗಳು) ಯೋಜನೆಯ ದ್ವಿತೀಯ ಹಂತವನ್ನೂ ಯುಎಸ್‌ಒಎಫ್ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಯುಎಸ್‌ಒಎಫ್ ಹಾಗೂ ಬಿಎಸ್ಸೆನ್ನೆಲ್ ಅಧಿಕಾರಿಗಳು ನೀಡಿರುವ ಅಂದಾಜು ಪಟ್ಟಿಯಲ್ಲಿ ಭಾರೀ ವ್ಯತ್ಯಾಸವಿರುವ ಕಾರಣಕ್ಕೆ ಈ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗಿದೆ. ಯುಎಸ್‌ಒಎಫ್ ಅಧಿಕಾರಿಗಳ ಪ್ರಕಾರ ಯೋಜನೆಯ ವೆಚ್ಚ 11,241 ಕೋಟಿ ರೂ. ಆದರೆ ಬಿಎಸ್ಸೆನ್ನೆಲ್ ಪ್ರಕಾರ 5,312 ಕೋಟಿ ರೂ. ಬಿಎಸ್ಸೆನ್ನೆಲ್ ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿ ದ್ದರೂ, ಒಂದಿಲ್ಲೊಂದು ಕಾರಣ ನೀಡಿ ಇದಕ್ಕೆ ಯುಎಸ್‌ಒಎಫ್ ಅಧಿಕಾರಿಗಳು ಅಡ್ಡಿಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಶಾನ್ಯ ಭಾರತದ ಪ್ರದೇಶದಲ್ಲಿ 2,817 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು 2014ರಲ್ಲಿ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ವೆಚ್ಚ 2,258 ಕೋಟಿ ರೂ. ಯುಎಸ್‌ಒಎಫ್ ಅಧಿಕಾರಿಗಳು, ಟೆಂಡರ್ ಓಪನ್ ಮಾಡಿದ ಬಳಿಕವೂ ಪದೇ ಪದೇ ಹೊಸ ಹೊಸ ಷರತ್ತುಗಳನ್ನು ಮುಂದಿಡುತ್ತಿರುವ ಕಾರಣ ಈ ಯೋಜನೆಗೆ ಇನ್ನೂ ಚಾಲನೆ ದೊರೆತಿಲ್ಲ. ಕಡೆಗೂ ಈ ಷರತ್ತುಗಳಿಗೆ ಬಿಎಸ್ಸೆನ್ನೆಲ್ ಒಪ್ಪಿದರೂ, ಯೋಜನೆ ಆರಂಭಿಸಲು ಯುಎಸ್‌ಒಎಫ್ ಅಧಿಕಾರಿಗಳು ಹಣ ಬಿಡುಗಡೆ ಮಾಡುತ್ತಿಲ್ಲ.
 ಈಶಾನ್ಯ ಭಾರತಕ್ಕೆ ರೂಪಿಸಲಾದ ಇನ್ನೊಂದು ಯೋಜನೆಯಡಿ, 1001 ಮೊಬೈಲ್ ಗೋಪುರಗಳನ್ನು 826 ಕೋಟಿ ರೂ. ವೆಚ್ಚದಲ್ಲಿ ಅಳವಡಿಸುವ ಯೋಜನೆಗೆ 2014ರಲ್ಲಿ ಸಂಪುಟವು ಅನುಮೋದನೆ ನೀಡಿದೆ. ಆದರೆ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
thewire.in

ಕೃಪೆ: ಆರೆಸ್ಸೆಸ್ ಸಂಪರ್ಕದ ಅಧಿಕಾರಿಯಿಂದ ವಿಳಂಬ ಧೋರಣೆ
ಯುಎಸ್‌ಒಎಫ್‌ನ ಓರ್ವ ಹಿರಿಯ ಅಧಿಕಾರಿ ಆರೆಸ್ಸೆಸ್‌ನೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಲಾಗುತ್ತಿದೆ. ಆದ್ದರಿಂದ ಯೋಜನೆ ವಿಳಂಬಗತಿಯಲ್ಲಿ ಸಾಗುತ್ತಿರುವ ಬಗ್ಗೆ ಪ್ರಧಾನಿ ಕಚೇರಿಯೂ ಈ ಅಧಿಕಾರಿಯನ್ನು ಪ್ರಶ್ನಿಸುವಂತಿಲ್ಲ ಎಂದು ಇಲಾಖೆಯ ಕೆಲವು ಅಧಿಕಾರಿಗಳೇ ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)