varthabharthi

ವೈವಿಧ್ಯ

ಮರೆಯಾದ ಧೀಮಂತ-ಜಾತ್ಯತೀತ ನಾಯಕ

ವಾರ್ತಾ ಭಾರತಿ : 26 Nov, 2018
ಎಂ.ಎ.ಸಿರಾಜ್

 ರೈಲ್ವೆ ಗೇಜ್‌ಗಳ ಪರಿವರ್ತನೆಗೆ ಗಣನೀಯ ಕೊಡುಗೆ ನೀಡಿದ್ದ ಶರೀಫ್ ಜಮ್ಮುವಿನಿಂದ ಕನ್ಯಾಕುಮಾರಿವರೆಗೆ ಹಾಗೂ ಕೇರಳದ ತಿರುವನಂತಪುರದಿಂದ ಅಸ್ಸಾಂನ ದಿಬ್ರೂಘರ್‌ವರೆಗೆ ನೇರ ರೈಲು ಸಂಪರ್ಕ ಏರ್ಪಡಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ರೈಲ್ವೆ ಇಲಾಖೆಯು 6000 ಕಿ.ಮೀ.ಗಳ ಗೇಜ್‌ಪರಿವರ್ತನೆಯನ್ನು ಕಂಡಿದ್ದು, ಆ ಪೈಕಿ ಕರ್ನಾಟಕ ರಾಜ್ಯವೊಂದರಲ್ಲೇ 1 ಸಾವಿರ ಕಿ.ಮೀ.ರೈಲ್ವೆ ಹಳಿ ವಿಸ್ತರಣೆಯಾಗಿತ್ತು.

ನವೆಂಬರ್ 25ರಂದು ಚಳ್ಳಕೆರೆ ಕರೀಂ ಜಾಫರ್ ಶರೀಫ್ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆಯುವುದರೊಂದಿಗೆ ರಾಜ್ಯವು ಓರ್ವ ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.
 ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಶರೀಫ್, 1971ರಿಂದ 1999ರ ನಡುವೆ ಲೋಕಸಭೆಗೆ ದಾಖಲೆಯ ಏಳು ಬಾರಿ ಆಯ್ಕೆಯಾಗಿದ್ದರು. ರೈಲ್ವೆ ಗೇಜ್‌ಗಳ ಪರಿವರ್ತನೆಗೆ ಗಣನೀಯ ಕೊಡುಗೆ ನೀಡಿದ್ದ ಶರೀಫ್ ಜಮ್ಮುವಿನಿಂದ ಕನ್ಯಾಕುಮಾರಿವರೆಗೆ ಹಾಗೂ ಕೇರಳದ ತಿರುವನಂತಪುರದಿಂದ ಅಸ್ಸಾಂನ ದಿಬ್ರೂಘರ್‌ವರೆಗೆ ರೈಲುಗಳು ಓಡುವಂತೆ ಮಾಡಿದ್ದರು. ರೈಲ್ವೆ ಸಚಿವನಾಗಿ ಶರೀಫ್ ಅಧಿಕಾರ ಸ್ವೀಕರಿಸುವ ಮುನ್ನ ಭಾರತದಲ್ಲಿ ಮೂರು ಬ್ರಾಡ್‌ಗೇಜ್, ಮೀಟರ್‌ಗೇಜ್ ಹಾಗೂ ನ್ಯಾರೋಗೇಜ್ ಹೀಗೆ ಮೂರು ವಿಧದ ಗೇಜ್‌ಗಳಿದ್ದವು.
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕೃಷಿಕ ಕುಟುಂಬದ ಹಿನ್ನೆಲೆಯಲ್ಲಿ ಜನಿಸಿದ ಜಾಫರ್ ಶರೀಫ್ ಅವರಿಗೆ ಹೈಸ್ಕೂಲ್‌ನಿಂದಾಚೆಗೆ ಶಿಕ್ಷಣವನ್ನು ಮುಂದುವರಿಸಲು ಸೂಕ್ತ ಅವಕಾಶ ದೊರೆಯಲಿಲ್ಲ. ಆದಾಗ್ಯೂ ಅವರು ಆಗಿನ ಕಾಲದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಅವರ ರಾಜಕೀಯ ಗರಡಿಯಲ್ಲಿ ಪಳಗಿದರು.
      ನಿಜಲಿಂಗಪ್ಪ ಅವರ ಖಾಸಗಿ ಸಿಬ್ಬಂದಿಯಲ್ಲೊಬ್ಬರಾದ ಜಾಫರ್ ಶರೀಫ್ ಅವರು, ಆಗಿನ ಹಿರಿಯ ಕಾಂಗ್ರೆಸ್ ನಾಯಕರಾದ ಮೊರಾರ್ಜಿ ದೇಸಾಯಿ, ಅತುಲ್ಯ ಘೋಷ್, ನೀಲಂ ಸಂಜೀವ ರೆಡ್ಡಿ, ಕೆ. ಕಾಮರಾಜ್ ಮತ್ತಿತರರ ಜೊತೆ ನಿಕಟವಾದ ಬಾಂಧವ್ಯವನ್ನು ಹೊಂದಿದ್ದರು. ಆದರೆ ಇಂದಿರಾಗಾಂಧಿಯವರ ಎಡಪಂಥೀಯ ನಿಲುವುಗಳಿಗೆ ವಾಲಿದ್ದನ್ನು ಈ ನಾಯಕರು ವಿರೋಧಿಸಿದ್ದರು. 14 ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವ ರೆಡ್ಡಿ ವಿರುದ್ಧ ವಿ.ವಿ.ಗಿರಿ ಅವರ ಅಭ್ಯರ್ಥಿತನವನ್ನು ಇಂದಿರಾ ಬೆಂಬಲಿಸಿದ್ದುದು, ಅನೇಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಕಾರಣವಾಯಿತು. ಅವರು ಇಂದಿರಾರನ್ನು ಪಕ್ಷದಿಂದ ಉಚ್ಚಾಟಿಸಲು ಯೋಜನೆ ಹಾಕಿದ್ದರು.. ಇಂದಿರಾರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲು ಪಕ್ಷದ ಹಿರಿಯ ನಾಯಕರು ನಿರ್ಧರಿಸಿರುವುದನ್ನು ಜಾಫರ್ ಶರೀಫ್ ಮುಂಚಿತವಾಗಿಯೇ ಆಕೆಗೆ ತಿಳಿಸಿದರು. ಆಗ ಕಾರ್ಯಾಚರಣೆಗೆ ಮುಂದಾದ ಇಂದಿರಾ, ಭಾರೀ ಸಂಖ್ಯೆಯ ಸಂಸದರನ್ನು ತನ್ನ ಬೆಂಬಲಕ್ಕೆ ಒಯ್ದು, ಪಕ್ಷವನ್ನು ವಿಭಜಿಸಿದರು. ತೆರೆಮರೆಯಲ್ಲಿ ಶರೀಫ್ ವಹಿಸಿದ್ದ ಈ ಪಾತ್ರಕ್ಕಾಗಿ, ಅವರಿಗೆ ನೆಹರೂ-ಗಾಂಧಿ ವಂಶವು ಚಿರಋಣಿಯಾಗಿತ್ತು. 1971ರಲ್ಲಿ ಅವರು ಕನಕಪುರದ ಲೋಕಸಭಾ ಕ್ಷೇತ್ರಕ್ಕೆ ಪ್ರಮ ಬಾರಿಗೆ ಕಾಂಗ್ರೆಸ್ ಟಿಕೆಟ್‌ನಿಂದ ಆಯ್ಕೆಯಾಗಿದ್ದರು. ಆನಂತರ ಅವರು 1977,1980, 1984,1989, 1991 ,1998 ಹಾಗೂ 1999ರಲ್ಲಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ 1996 ಹಾಗೂ 1998ರ ನಡುವಿನ ಅವಧಿಯಲ್ಲಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿರಲಿಲ್ಲ.
 ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಜಾತ್ಯತೀತತೆಯ ವಿಷಯದಲ್ಲಿ ಕಾಂಗ್ರೆಸ್‌ನ ದ್ವಂದ್ವ ನಿಲುವು ಹಾಗೂ ರಾಜಿ ಮನೋಭಾವವನ್ನು ವಿರೋಧಿಸಿ ಶರೀಫ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. 2009ರ ಚುನಾವಣೆಯಲ್ಲಿ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿದ್ದ ಅವರನ್ನು ಬಿಜೆಪಿಯ ಡಿ.ಬಿ.ಚಂದ್ರೇಗೌಡ ಪರಾಭವಗೊಳಿಸಿದ್ದರು.
1980ರಿಂದ 1984ರ ನಡುವೆ ಶರೀಫ್ ಅವರು ರೈಲ್ವೆಯ ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸಿದರಾದರೂ, 1991 ಹಾಗೂ 1995ರ ಅವಧಿಯಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ಅವರ ಪಾತ್ರವು ಹೆಚ್ಚು ಮನ್ನಣೆಯನ್ನು ಪಡೆದಿತ್ತು. ಶರೀಫ್ ಅಧಿಕಾರಾವಧಿಯಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ರೈಲ್ವೆ ಇಲಾಖೆಯು 6 ಕಿ.ಮೀ.ಗಳ ಗೇಜ್‌ಪರಿವರ್ತನೆಯನ್ನು ಕಂಡಿದ್ದು, ಆ ಪೈಕಿ ಕರ್ನಾಟಕ ರಾಜ್ಯವೊಂದರಲ್ಲೇ 1 ಸಾವಿರ ಕಿ.ಮೀ.ರೈಲ್ವೆ ಹಳಿ ವಿಸ್ತರಣೆಯಾಗಿತ್ತು. ಭಾರತೀಯ ರೈಲ್ವೆಗಾಗಿ ಬೆಂಗಳೂರು ಸಮೀಪದ ಯಲಹಂಕದಲ್ಲಿ ವೀಲ್ ಆ್ಯಕ್ಸೆಲ್ ಸ್ಥಾವರದ ಉದ್ಘಾಟನೆ ಹಾಗೂ ವೈಟ್‌ಫೀಲ್ಡ್‌ನಲ್ಲಿ ರೈಲ್ವೆ ಕಂಟೈನರ್ ಟರ್ಮಿನಲ್‌ನ ಸ್ಥಾಪನೆ ಹಾಗೂ ನೂತನ ರೈಲ್ವೆ ವಲಯದ ಸೃಷ್ಟಿ ( ಹುಬ್ಬಳ್ಳಿಯ ಕೇಂದ್ರ ಕಾರ್ಯಾಲಯವಾಗಿರುವ ನೈಋತ್ಯ ರೈಲ್ವೆ ಹಾಗೂ ಬೆಂಗಳೂರಿನ ಯಶವಂತಪುರದಲ್ಲಿ ಮೂರನೆ ರೈಲ್ವೆ ಟರ್ಮಿನಲ್ ಸ್ಥಾಪನೆ).
  ನೀರಾವರಿ ಖಾತೆ (1984-88) ಹಾಗೂ ಕಲ್ಲಿದ್ದಲು (1988-89) ಖಾತೆಗಳ ಸಹಾಯಕ ಸಚಿವರಾಗಿ ಶರೀಫ್ ಸೇವೆ ಸಲ್ಲಿಸಿದ್ದರು. ತನ್ನ 34 ವರ್ಷಗಳ ಸಂಸದೀಯ ವೃತ್ತಿಬದುಕಿನಲ್ಲಿ ಶರೀಫ್ ಅವರು ಹಲವು ಬಾರಿ ಸ್ಥಾಯಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು.
 ಶರೀಫ್ ರಾಜ್ಯ ರಾಜಕೀಯವನ್ನು ಪ್ರವೇಶಿಸದಿದ್ದರೂ, 1999ರ ವಿಧಾನಸಭಾ ಚುನಾವಣೆಯ ಬಳಿಕ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಆದಾಗ್ಯೂ ಕಾಂಗ್ರೆಸ್ ಹೈಕಮಾಂಡ್ ಎಸ್.ಎಂ. ಕೃಷ್ಣ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಶರೀಫ್ ಅವರು ಎಚ್.ಡಿ.ದೇವೇಗೌಡ ಅವರಿಗೆ ನಿಕಟವಾಗತೊಡಗಿದರು. ಒಂದೊಮ್ಮೆ ಬಿಎಸ್ಪಿ ನಾಯಕಿ ಮಾಯಾವತಿ ಜೊತೆಗೆ ರಾಜಕೀಯ ಸಭೆಯೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ, ಶರೀಫ್ ಕಾಂಗ್ರೆಸ್ ಪಕ್ಷದಿಂದ ನಂಟು ಕಡಿದುಕೊಳ್ಳುತ್ತಿದ್ದಾರೆಂಬ ಊಹಾಪೋಹಗಳನ್ನು ಮೂಡಿಸಿದ್ದರು.
 ಪಿ.ವಿ.ನರಸಿಂಹರಾವ್ ನೇತೃತ್ವದ ಸಂಪುಟಕ್ಕೆ ಶರೀಫ್ ರಾಜೀನಾಮೆ ಸಲ್ಲಿಸಿದ ಬಳಿಕ ಅವರ ವಿರುದ್ಧ 1995ರಲ್ಲಿ ಸಿಬಿಐ ಪ್ರಕರಣವೊಂದನ್ನು ದಾಖಲಿಸಿತ್ತು. ಲಂಡನ್‌ನಲ್ಲಿ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ತನ್ನ ಸಚಿವಾಲಯದ ನಾಲ್ಕು ಅಧಿಕಾರಿಗಳ ಸೇವೆಯನ್ನು ಬಳಸಿಕೊಂಡಿದ್ದರೆಂದು ಸಿಬಿಐ ಆಪಾದಿಸಿತ್ತು.
ಆದರೆ 2006ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೇರಿದ ಬಳಿಕ ಒಂದು ದಶಕದ ಈ ಪ್ರಕರಣವನ್ನು ಸಿಬಿಐ ಮುಚ್ಚಿ ಹಾಕಿತ್ತು. ಅತ್ಯಂತ ಸೌಮ್ಯವಾದಿ ಹಾಗೂ ಜಾತ್ಯತೀತ ನಾಯಕನಾದ ಶರೀಫ್ ಯಾವತ್ತೂ ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಅವರ ನಿಧನದಿಂದಾಗಿ ಕರ್ನಾಟಕ ಓರ್ವ ದೂರದೃಷ್ಟಿಯ ರಾಜಕಾರಣ ಹಾಗೂ ವೌಲ್ಯಯುತ ರಾಜಕಾರಣಿಯನ್ನು ಕಳೆದುಕೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)