varthabharthi

ವೈವಿಧ್ಯ

ಅವೈಜ್ಞಾನಿಕ, ಅಸಾಂವಿಧಾನಿಕ ಕಸ್ತೂರಿ ರಂಗನ್ ವರದಿ ಮತ್ತು ಪರಿಸರವಾದಿಗಳ ಪೊಳ್ಳುತನ

ವಾರ್ತಾ ಭಾರತಿ : 27 Nov, 2018
ಬಿ. ಎನ್. ಮನುಶೆಣೈ

ಭಾಗ-1

ಭೂ ಕುಸಿತ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು ಕೊಡಗು ಜಿಲ್ಲೆಯಲ್ಲಿ ಮತ್ತು ಕೇರಳ ರಾಜ್ಯದಲ್ಲಿ. ಕೊಡಗು ಜಿಲ್ಲೆಯ ಒಟ್ಟು ವಿಸ್ತೀರ್ಣದ ಶೇ. 1ರಷ್ಟು ಮಾತ್ರ ಭೂ ಕುಸಿತಕ್ಕೆ ಒಳಗಾಗಿತ್ತು. ಭೂಕುಸಿತ ಆಗಿರುವ ಪ್ರದೇಶಗಳಲ್ಲಿ ಹಾನಿ ತೀವ್ರವಾಗಿ ಆಗಿದೆ ಎನ್ನುವುದು ಸತ್ಯ. ಆದರೆ ದೃಶ್ಯ ಮಾಧ್ಯಮಗಳ ಸಹಕಾರದಿಂದ ಪರಿಸರವಾದಿಗಳು ಕೊಡಗಿನಲ್ಲಿ ಭಾರೀ ಅನಾಹುತವಾಗಿದೆ, ಕೊಡಗು ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದು ಬಿಂಬಿಸುವಲ್ಲಿ ಯಶಸ್ವಿಯಾದರು. ಭೂ ವಿಜ್ಞಾನಿಯ ಪ್ರಕಾರ ಮಳೆ ಹೆಚ್ಚಾದಾಗ ನೀರು ಹರಿದು ಹೋಗಲು ಅವಕಾಶಗಳು ಆಗದೇ ಇದ್ದ ಸಂದರ್ಭದಲ್ಲಿ ನೀರು ಹರಿದು ಹೋಗಲು ದಾರಿಯನ್ನು ಮಾಡಿಕೊಂಡಿತು. ಇದು ಒಂದು ನೈಸರ್ಗಿಕ ಕ್ರಿಯೆ. ಈ ರೀತಿ ಭೂ ಕುಸಿತ ಉಂಟಾಗುವುದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ಅವರು ವಿವರಿಸಿದರು. ಇದಕ್ಕೂ ಮಾಧವ ಗಾಡ್ಗೀಳ್ ವರದಿ ಜಾರಿಗೂ ಹೇಗೆ ಸಂಬಂಧ ಬರುತ್ತದೆ?

ಈ ಸಾಲಿನ ಮಳೆಗಾಲದಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಸಾಕಷ್ಟು ಕಡೆ ಭೂಕುಸಿತ ಉಂಟಾಗಿತ್ತು. ಇದೊಂದು ಪ್ರಾಕೃತಿಕ ವಿಕೋಪ ಆಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇಂತಹ ಒಂದು ಪರಿಸ್ಥಿತಿ ಗಾಗಿ ರಣಹದ್ದುಗಳ ರೀತಿಯಲ್ಲಿ ಕಾಯುತ್ತಿದ್ದ ಕೆಲವು ಢೋಂಗಿ ಪರಿಸರವಾದಿಗಳು ತಾವು ತಜ್ಞರು ಎನ್ನುವ ರೀತಿಯಲ್ಲಿ ವಿಶ್ಲೇಷಣೆ ಗಳನ್ನು ಮಾಡಲು ತೊಡಗಿದರು. ಕೊಡಗು ಜಿಲ್ಲೆಯಂತೂ ಈ ಢೋಂಗಿಗಳ ಉಪಟಳದಿಂದ ನಲುಗಿ ಹೋಗಿದೆ. ಆದರೆ ಅವರುಗಳು ಕಾವೇರಿಯ ಹೆಸರನ್ನು ಹೇಳಿಕೊಂಡು ದಕ್ಷಿಣ ಭಾರತ ಮಾತ್ರವಲ್ಲ, ಇಡೀ ದೇಶದ ಜನರ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕಾವೇರಿ ನದಿತಟದಲ್ಲಿ ಮಳೆಯಾಗದಿದ್ದರೆ ದಕ್ಷಿಣ ಭಾರತಕ್ಕೆ ನೀರು ಸಿಗುವುದಿಲ್ಲ. ಹಾಗಾಗಿ ಪರಿಸರ ಸಂರಕ್ಷಣೆ ಆಗಬೇಕು ಎನ್ನುವುದರ ಜೊತೆಗೆ ಕಾವೇರಿಯನ್ನು ಪೂಜ್ಯ ಭಾವನೆಯಿಂದ ನೋಡಬೇಕು ಎಂದು ಧಾರ್ಮಿಕ ನೆಲೆಗಟ್ಟಿನಲ್ಲಿ ಶೋಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ.
ಮಾಧವ ಗಾಡ್ಗೀಳ್ ವರದಿ ಜಾರಿಗೆ ತಂದಿದ್ದರೆ ಕೊಡಗಿನಲ್ಲಿ ಈ ದುರಂತ ಆಗುತ್ತಿರಲಿಲ್ಲ ಎನ್ನುವುದರಿಂದ ಪ್ರಾರಂಭಗೊಂಡು, ಬೆಟ್ಟದ ಮೇಲೆ ಕೆರೆಗಳ ನಿರ್ಮಾಣ ಮಾಡಲಾಗಿದೆ, ಇದರಿಂದಾಗಿ ಭಾರ ತಾಳಲಾರದೆ ಗುಡ್ಡಗಳು ಕುಸಿದಿವೆ ಎನ್ನುವ ವಿಶ್ಲೇಷಣೆ, ಪ್ರವಾಸಿಗರು ಬರುವುದರಿಂದ ಹಾಗೂ ರೆಸಾರ್ಟ್‌ಗಳ ನಿರ್ಮಾಣದಿಂದ ಭೂ ಕುಸಿತ ಉಂಟಾಗಿದೆ ಎಂದು ಯಾವುದೇ ರೀತಿಯ ವೈಜ್ಞಾನಿಕ ಆಧಾರಗಳನ್ನು ನೀಡದೆ, ತಮಗೆ ತೋಚಿದ್ದನ್ನು ಹೇಳಿಕೊಂಡು ಮೆರೆದಿದ್ದಾರೆ. ಇವರುಗಳು ಪರಿಸರದ ಹೆಸರಿನಲ್ಲಿ ಪರಿಸರ ಭಯೋತ್ಪಾದನೆಯನ್ನು ಮಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಹಿಂದಿನ ಎರಡು ವರ್ಷಗಳು ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಆಗ ಕೊಡಗು ಜಿಲ್ಲೆಯ ಮೂಲಕ ಹೈಟೆನ್ಶನ್ ವಿದ್ಯುತ್ ಮಾರ್ಗ ಹಾದುಹೋದ ಪರಿಣಾಮವಾಗಿ 50 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದ್ದು, ಇದರಿಂದಾಗಿ ಮಳೆ ಬರಲಿಲ್ಲ ಎಂದು ಪ್ರಚಾರ ಮಾಡಿದರು. ಇದನ್ನು ಜನರು ನಂಬಿದರು ಕೂಡ. ಈ ಸಾಲಿನಲ್ಲಿ ಮಳೆ ಹೆಚ್ಚಾಗಿದ್ದಕ್ಕೂ ಮರ ಕಡಿದದ್ದೇ ಕಾರಣ ಎಂದು ಪ್ರಚಾರ ಮಾಡಿದರು. ಇವರದು ಯಾವ ವೈಜ್ಞಾನಿಕ ವಿಚಾರಗಳೋ ತಿಳಿಯದು. ಆಂತರಿಕವಾಗಿ ಇವರ ಚಟುವಟಿಕೆ ಏನು ಎಂದು ಗಮನಿಸಿದರೆ, ಖಂಡಿತವಾಗಿಯೂ ಇವರದು ಪರಿಸರ ವಾದವಲ್ಲ, ಬದಲಿಗೆ ಅದು ಮೂಲಭೂತವಾದ. ಈ ಪರಿಸರವಾದಿಗಳೆಲ್ಲರೂ ಒಂದೇ ಜನಾಂಗಕ್ಕೆ ಸೇರಿದವರಾಗಿರುವುದರಿಂದ ಇದು ಖಚಿತವಾದ ವಿಚಾರ. ಹೊರ ಜಿಲ್ಲೆಯವರು ಇಲ್ಲಿಗೆ ಬಂದು ನೆಲೆಸುತ್ತಾರೆ, ಉದ್ಯಮದಲ್ಲಿ ತೊಡಗಿಕೊಳ್ಳುತ್ತಾರೆ ಎನ್ನುವ ಆತಂಕ ಇವರಲ್ಲಿ ಕಂಡು ಬಂದಿದೆ. ಆದರೆ ಈಗ ಪ್ರವಾಸೋದ್ಯಮದಿಂದಾಗಿ ಹೋಂಸ್ಟೇಗಳನ್ನು ಮಾಡಿಕೊಂಡಿರುವವರಲ್ಲಿ ಶೇ. 70ರಷ್ಟು ಮಂದಿ ಸ್ಥಳೀಯರೇ ಆಗಿದ್ದಾರೆ.
ಈಗ ನ್ಯೂಝಿಲ್ಯಾಂಡಿನಲ್ಲಿ ಉದ್ಯೋಗದಲ್ಲಿದ್ದು, ರಜೆಯ ಮೇಲೆ ಕೊಡಗಿನಲ್ಲಿರುವ ಕೊಡಗು ಮೂಲದ ಭೂ ಶಾಸ್ತ್ರಜ್ಞರಾದ ಐಚೆಟ್ಟಿರ ಮಾಚಯ್ಯ ಎಂಬವರು ಮಳೆಗೂ, ಮರಗಳಿಗೂ ಯಾವ ಸಂಬಂಧವೂ ಇಲ್ಲ. ಮಳೆ ಬರುವುದು ಬೆಟ್ಟಗುಡ್ಡಗಳಿಂದ. ಮಳೆ ಬಂದ ನಂತರ ಮರ ಬೆಳೆಯುತ್ತದೆ. ಮರದಿಂದಾಗಿ ಮಳೆಯಾಗುವುದಿಲ್ಲ ಎಂಬುದನ್ನು ಸ್ಪಷ್ಟೀಕರಿಸಿದರು. ಅದೇ ರೀತಿ ಕೊಡಗು ಸೇರಿದಂತೆ ಹಲವು ಭಾಗಗಳಲ್ಲಿ ಆದಂತಹ ಪ್ರಾಕೃತಿಕ ಹಾನಿ ಮಾನವ ನಿರ್ಮಿತವಲ್ಲ. ಅದು ನೈಸರ್ಗಿಕ ಕ್ರಿಯೆ ಎಂಬುದನ್ನು ಅವರು ವೈಜ್ಞಾನಿಕವಾಗಿ ವಿವರಿಸಿದರು. ಮಳೆಯ ಮೋಡಗಳು ಎಲ್ಲಿಯೋ ಸೃಷ್ಟಿಯಾಗುತ್ತವೆ, ಯಾವುದೋ ಭಾಗದಲ್ಲಿ ಮಳೆಯಾಗುತ್ತದೆ ಎನ್ನುವುದರ ಜೊತೆಯಲ್ಲಿ, ಶೇ. 70ರಷ್ಟು ಆಮ್ಲಜನಕ ಸಮುದ್ರದಿಂದ ಉತ್ಪಾದನೆಯಾಗುತ್ತದೆ. ಹುಲ್ಲು, ಸಸ್ಯ, ಗಿಡ, ಪೊದೆ, ಮರ ಇವುಗಳು ಒಟ್ಟು ಸೇರಿ ಉತ್ಪಾದಿಸುವುದು ಶೇ. 28 ಮಾತ್ರ ಎಂಬುದನ್ನು ವಿವರಿಸಿದರು. ಒಬ್ಬ ವಿಜ್ಞಾನಿ ನೀಡಿದ ಈ ವಿವರಣೆ ಈ ಪರಿಸರವಾದಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಪರಿಸರವಾದಿಗಳ ಪೊಳ್ಳುತನ ಬಯಲಾಗಿತ್ತು. ವಿಜ್ಞಾನಿ ನೀಡಿದ ಹೇಳಿಕೆ ಹೇಗೆ ತಪ್ಪು ಎಂಬುದನ್ನು ಅವರು ವಿವರಿಸಲಿಲ್ಲ. ವಿವರಿಸಲು ಪರಿಸರವಾದಿಗಳೆಂದು ತಮ್ಮನ್ನು ತಾವೇ ಕರೆದುಕೊಂಡವರು, ಯಾವ ಪರಿಸರ ತಜ್ಞರೂ ಅಲ್ಲ, ಅಧ್ಯಯನಶೀಲರೂ ಅಲ್ಲ, ಅನುಭವವೂ ಇಲ್ಲ, ವೈಜ್ಞಾನಿಕ ಹಿನ್ನೆಲೆಯುಳ್ಳವರೂ ಅಲ್ಲ. ಹಾಗಾಗಿ ಆ ವಿಜ್ಞಾನಿ ಯಾರದೋ ಗುಂಪಿಗೆ ಸೇರಿದವರು. ಆದ್ದರಿಂದ ಅವರ ಮಾತಿಗೆ ಬೆಲೆ ಕೊಡುವುದು ಬೇಡ ಎಂದು ಹೇಳಿಕೊಂಡರು. ವಿಚಾರಕ್ಕಿಂತಲೂ ಅವರಿಗೆ ತಮ್ಮ ಸುಳ್ಳುಗಳನ್ನು ನಿರಂತರವಾಗಿ ಬಯಲು ಮಾಡುತ್ತಿರುವ ವ್ಯಕ್ತಿಯ ಮೇಲಿನ ದ್ವೇಷ ಮುಖ್ಯವಾಗಿತ್ತು.


ಹೈಟೆನ್ಶನ್ ವಿದ್ಯುತ್ ಮಾರ್ಗ ಕಾಫಿ ತೋಟಗಳ ಮಧ್ಯೆ 12.50 ಕಿ.ಮೀ.ನಷ್ಟು ಹಾದುಹೋಗಿದೆ ಮತ್ತು 35 ಕಿ.ಮೀ.ನಷ್ಟು ಗದ್ದೆಗಳ ನಡುವೆ ಹಾದುಹೋಗಿದೆ. ಗದ್ದೆಗಳಲ್ಲಿ ಮರಗಳು ಇಲ್ಲ. 12.50 ಕಿ.ಮೀ. ಕಾಫಿ. ತೋಟ ಎಂದರೆ 57.50 ಹೆಕ್ಟೇರ್ ಪ್ರದೇಶದ ಕಾಫಿ ತೋಟವಾಗುತ್ತದೆ. ಅಂದರೆ 143 ಎಕರೆಯಷ್ಟು ಪ್ರದೇಶವಾಗುತ್ತದೆ. ಈ 143 ಎಕರೆ ಪ್ರದೇಶದಲ್ಲಿ ಹೈಟೆನ್ಶನ್ ವಿದ್ಯುತ್ ಮಾರ್ಗ ಸಂಪೂರ್ಣವಾಗಿ ಹಾದುಹೋದರೂ, 1 ಎಕರೆಗೆ 100ಕ್ಕಿಂತ ಹೆಚ್ಚು ಮರ ಇರಲು ಸಾಧ್ಯವಿಲ್ಲ. ಆ ಲೆಕ್ಕಾಚಾರದಲ್ಲಿಯೂ 14 ಸಾವಿರ ಮರಗಳಾಗುತ್ತವೆಯೇ ವಿನಹ, 50 ಸಾವಿರವಲ್ಲ. ಆದರೆ ಅರಣ್ಯ ಇಲಾಖೆ ಅಧಿಕೃತವಾಗಿ ನೀಡಿರುವ ಮಾಹಿತಿಯ ಪ್ರಕಾರ ಕೇವಲ 6 ಸಾವಿರ ಮರಗಳು ಕಡಿಯಲ್ಪಟ್ಟಿತ್ತು. ಆದರೆ ಇವರು 50 ಸಾವಿರ ಎಂದು ಕಪೋಲ ಕಲ್ಪಿತ ಲೆಕ್ಕಾಚಾರವನ್ನು ನೀಡುವ ಮೂಲಕ ಜನರನ್ನು ಮುಠ್ಠಾಳರನ್ನಾಗಿಸಲಾಯಿತು. ಪರಿಸರವಾದಿಗಳು ಹೇಗೆ ಜನರನ್ನು ಮುಠ್ಠಾಳರನ್ನಾಗಿಸಲು ಪ್ರಯತ್ನಿಸುತ್ತಾರೆ ಎನ್ನುವುದಕ್ಕೆ ಇತ್ತೀಚಿನ ಒಂದು ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಿಂದ ದಕ್ಷಿಣ ಕನ್ನಡಕ್ಕೆ ಈಗ ಇರುವ ರಸ್ತೆಯನ್ನು ಚತುಷ್ಪಥ ಮಾರ್ಗವಾಗಿ ಪರಿವರ್ತಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಜಿಲ್ಲಾಧಿಕಾರಿಗಳು ಸಭೆಯನ್ನು ಕರೆದಿದ್ದರು. ಯಾವುದೇ ಅಭಿವೃದ್ಧಿ ಕಾರ್ಯಗಳ ವಿಚಾರದ ಸಭೆಯಾದರೂ ಅಲ್ಲಿ ಪರಿಸರವಾದಿಗಳೆಂಬ ಈ ಬೆರಳೆಣಿಕೆಯ ಮಂದಿ ಹಾಜರಿರುತ್ತಾರೆ. ಅವರಿಗೆ ಆಹ್ವಾನ ಬೇಕೆಂದೇನೂ ಇಲ್ಲ. ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಬೇಡ ಎಂದು ಹೇಳುವ ಮೂಲಕ, ಈ ಯೋಜನೆಯ ಪರವಾಗಿ ಮಾತನಾಡುವವರನ್ನು ಜಾತಿಯ ಬಣ್ಣವನ್ನು ಲೇಪನ ಮಾಡಿ, ಬಾಯಿ ಮುಚ್ಚಿಸುವ ಪ್ರಯತ್ನವನ್ನು ಮಾಡುತ್ತಾರೆ. ಈ ಸಭೆಯಲ್ಲಿ ಕರ್ನಲ್ ಮುತ್ತಣ್ಣ ಎಂಬ ನಿವೃತ್ತ ಸೈನ್ಯಾಧಿಕಾರಿ ಈ ಮಾರ್ಗ ರಚನೆ ಮಾಡುವುದರಿಂದ ಮೂರು ಲಕ್ಷಕ್ಕೂ ಹೆಚ್ಚು ಮರಗಳು ನಾಶವಾಗುತ್ತದೆ ಎಂದು ಹೇಳಿ, ಈ ಯೋಜನೆ ಆಗಲೇಬಾರದು ಎಂದು ಪಟ್ಟುಹಿಡಿದರು.
ಆದರೆ ಕರ್ನಾಟಕ ಬೆಳೆಗಾರರ ಸಂಘದ ನಿರ್ದೇಶಕರಾದ ವಿಶ್ವನಾಥ್‌ರವರು ಅಂಕಿ ಅಂಶಗಳ ಸಹಿತ ವಿವರಣೆಯನ್ನು ನೀಡಿ, ರಸ್ತೆ ಅಗಲೀಕರಣದಿಂದ ಕೇವಲ 75 ಎಕರೆ ಪ್ರದೇಶವನ್ನು ವಶಪಡಿಸಿಕೊಳ್ಳಬೇಕಾಗುತ್ತದೆ. ಒಂದು ಎಕರೆಯಲ್ಲಿ ಗರಿಷ್ಠವಾಗಿ 100 ಮರಗಳು ಇರುತ್ತವೆ. ಹಾಗೆ ಆದರೂ ಕೇವಲ 7,500 ಮರಗಳು ಕಡಿಯಲ್ಪಡುತ್ತವೆಯೇ ವಿನಹ, 3 ಲಕ್ಷವಲ್ಲ ಎಂಬುದನ್ನು ಸಭೆಗೆ ತಿಳಿಸಿದರು. ಈ ಮಾತುಗಳು ಪರಿಸರವಾದಿಗಳಿಗೆ ರುಚಿಸಲಿಲ್ಲ. ತಮ್ಮ ಬಣ್ಣ ಬಯಲಾದಾಗ, ಗೊಂದಲಗಳನ್ನು ಹುಟ್ಟು ಹಾಕಿ ಸಭೆಯಿಂದ ನಿರ್ಗಮಿಸಿದರು. ಇದು ಪರಿಸರವಾದಿಗಳು ಕೊಡಗು ಜಿಲ್ಲೆಯಲ್ಲಿ ಮಾತ್ರವಲ್ಲ, ದೇಶದ ನಾನಾ ಭಾಗಗಳಲ್ಲಿ ಮಾಡುತ್ತಿರುವ ಷಡ್ಯಂತ್ರವಾಗಿದೆ.
ಈ ಪೀಠಿಕೆ ಏಕೆಂದರೆ ಕೊಡಗು ಮತ್ತು ಕೇರಳದಲ್ಲಿ ಪ್ರಾಕೃತಿಕ ವಿಕೋಪದಿಂದ ಆದಂತಹ ದುರಂತಕ್ಕೆ ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸದೇ ಇರುವುದೇ ಕಾರಣ ಎಂದು ಈ ಪರಿಸರವಾದಿಗಳು ಹೇಳಿಕೆ ನೀಡಲು ಆರಂಭಿಸಿದರು ಮತ್ತು ವಿಶೇಷ ಎನ್ನುವಂತೆ ಸರಕಾರದ ಭೂ ವಿಜ್ಞಾನ ಇಲಾಖೆಯು ಅನಾಹುತಕ್ಕೆ ಮಾನವನ ಹಸ್ತಕ್ಷೇಪ ಕಾರಣ ಎಂದು ವರದಿ ನೀಡಿತು. ಈ ವರದಿ ಸರಿಯಲ್ಲ ಎಂಬುದನ್ನು ವಿಜ್ಞಾನಿ ಐಚೆಟ್ಟಿರ ಮಾಚಯ್ಯ ಹೇಳಿದರು. ಯಾವ ವೈಜ್ಞಾನಿಕ ಹಿನ್ನೆಲೆಯೂ ಇಲ್ಲದೆ, ಸರಕಾರಕ್ಕೆ ಬೇಕಾದ ರೀತಿಯಲ್ಲಿ ವರದಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಜೊತೆಗೆ ಪರಿಸರವಾದಿಗಳು ತಮ್ಮದೇ ಆದ ಒಂದು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಮೂಲಕ ತಮಾಷೆಯ ಸರಕುಗಳಾದರು.
ಇದರ ಬೆನ್ನಿಗೆ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬೇಕು, ಅದಕ್ಕಾಗಿ ಅಧಿಸೂಚನೆಯನ್ನು ಹೊರಡಿಸಬೇಕು ಎಂಬುದಾಗಿ ಆದೇಶವನ್ನು ನೀಡಿತು. ಇಂತಹ ಹೇಳಿಕೆಗಳು ಬರುವ ವೇಳೆಯಲ್ಲಿಯೇ ಕಲ್ಕುಳಿ ವಿಠಲ ಹೆಗಡೆಯವರು ‘‘ಇಂಗ್ಲಿಷ್ ಮೀಡಿಯಂ ಪರಿಸರವಾದಿಗಳನ್ನು ಮಲೆನಾಡಿನಿಂದಲೇ ಹೊರದಬ್ಬಬೇಕು’’ ಎಂಬ ಹೇಳಿಕೆಯನ್ನು ನೀಡಿದ್ದರು.


ಭೂ ಕುಸಿತ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು ಕೊಡಗು ಜಿಲ್ಲೆಯಲ್ಲಿ ಮತ್ತು ಕೇರಳ ರಾಜ್ಯದಲ್ಲಿ. ಕೊಡಗು ಜಿಲ್ಲೆಯ ಒಟ್ಟು ವಿಸ್ತೀರ್ಣದ ಶೇ. 1ರಷ್ಟು ಮಾತ್ರ ಭೂ ಕುಸಿತಕ್ಕೆ ಒಳಗಾಗಿತ್ತು. ಭೂಕುಸಿತ ಆಗಿರುವ ಪ್ರದೇಶಗಳಲ್ಲಿ ಹಾನಿ ತೀವ್ರವಾಗಿ ಆಗಿದೆ ಎನ್ನುವುದು ಸತ್ಯ. ಆದರೆ ದೃಶ್ಯ ಮಾಧ್ಯಮಗಳ ಸಹಕಾರದಿಂದ ಪರಿಸರವಾದಿಗಳು ಕೊಡಗಿನಲ್ಲಿ ಭಾರೀ ಅನಾಹುತವಾಗಿದೆ, ಕೊಡಗು ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದು ಬಿಂಬಿಸುವಲ್ಲಿ ಯಶಸ್ವಿಯಾದರು. ಭೂ ವಿಜ್ಞಾನಿಯ ಪ್ರಕಾರ ಮಳೆ ಹೆಚ್ಚಾದಾಗ ನೀರು ಹರಿದು ಹೋಗಲು ಅವಕಾಶಗಳು ಆಗದೇ ಇದ್ದ ಸಂದರ್ಭದಲ್ಲಿ ನೀರು ಹರಿದು ಹೋಗಲು ದಾರಿಯನ್ನು ಮಾಡಿಕೊಂಡಿತು. ಇದು ಒಂದು ನೈಸರ್ಗಿಕ ಕ್ರಿಯೆ. ಈ ರೀತಿ ಭೂ ಕುಸಿತ ಉಂಟಾಗುವುದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ಅವರು ವಿವರಿಸಿದರು. ಇದಕ್ಕೂ ಮಾಧವ ಗಾಡ್ಗೀಳ್ ವರದಿ ಜಾರಿಗೂ ಹೇಗೆ ಸಂಬಂಧ ಬರುತ್ತದೆ?.
ಹಾಗಾದರೆ ಶೇ. 99ರಷ್ಟು ಭೂಮಿ ಇಲ್ಲಿ ಕುಸಿತಕ್ಕೆ ಒಳಗಾಗದೆ ಇರಲು ಕಾರಣ ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸದೇ ಇರುವುದು ಎಂದು ವಿಶ್ಲೇಷಿಸಬಹುದೇ?. ಮಾಧವ ಗಾಡ್ಗೀಳ್ ವರದಿಯ ಶಿಫಾರಸನ್ನು ಜಾರಿಗೊಳಿಸಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂಬುದು ಅವರ ವಾದವಾದರೆ, ಮಾಧವ ಗಾಡ್ಗೀಳ್ ವರದಿಯಲ್ಲಿ ಯಾವ ಅಂಶಗಳು ಇವೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡು ಅವರ ವಾದದಲ್ಲಿ ಎಷ್ಟು ಹುರುಳಿದೆ ಎಂಬುದನ್ನು ನೋಡಬೇಕಾಗಿದೆ. ಮಾಧವ ಗಾಡ್ಗೀಳ್ ವರದಿಯಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಅವುಗಳೆಂದರೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಬೃಹತ್ ಕೈಗಾರಿಕೆ ಕೂಡದು. ಬೃಹತ್ ಗಣಿಗಾರಿಕೆ ನಿಷಿದ್ಧ. ಬೃಹತ್ ಜಲ ವಿದ್ಯುತ್ ಯೋಜನೆ ಆಗಕೂಡದು ಹಾಗೂ ಬೃಹತ್ ಟೌನ್‌ಶಿಪ್ (20 ಎಕರೆಗಿಂತಲೂ ಹೆಚ್ಚಿನ ಪ್ರಮಾಣದ ಲೇಔಟ್ ನಿರ್ಮಾಣ) ಆಗಕೂಡದು. ಇದು ಅದರ ಪ್ರಮುಖ ಅಂಶಗಳು. ಕೊಡಗು ಜಿಲ್ಲೆಯಲ್ಲಿ ಈ ಯಾವುದೇ ಪ್ರಸ್ತಾವಿತ ವಿಚಾರಗಳು ಇಲ್ಲವೇ ಇಲ್ಲ. ಅಂದರೆ ಪರೋಕ್ಷವಾಗಿ ಮಾಧವ ಗಾಡ್ಗೀಳ್ ವರದಿ ಕೊಡಗು ಜಿಲ್ಲೆಯಲ್ಲಿ ಜಾರಿಯಲ್ಲಿ ಇದೆ. ಹಾಗಿರುವಾಗ ಏಕೆ ಭೂ ಕುಸಿತ ಉಂಟಾಯಿತು?. ಅಂದರೆ ಇದೊಂದು ನೈಸರ್ಗಿಕ ಕ್ರಿಯೆಯೇ ವಿನಹ ಬೇರೇನೂ ಅಲ್ಲ.
ಮಾಧವ ಗಾಡ್ಗೀಳ್ ವರದಿಯಾಗಲಿ, ಡಾ ಕಸ್ತೂರಿ ರಂಗನ್ ವರದಿಯಾಗಲಿ ದೋಷಪೂರಿತ ವರದಿಗಳು ಮತ್ತು ಜನವಿರೋಧಿ ವರದಿಗಳು ಎಂಬುದನ್ನು ಆ ವರದಿಯನ್ನು ಅವಲೋಕಿಸಿದಾಗ ತಿಳಿಯುತ್ತದೆ. ಮಾಧವ ಗಾಡ್ಗೀಳ್ ವರದಿ ಅನುಷ್ಠಾನಗೊಳಿಸುವುದು ಕಷ್ಟ ಎನ್ನುವ ಕಾರಣಕ್ಕಾಗಿ ಅದನ್ನು ಸರಳೀಕರಿಸಿ, ಅನುಷ್ಠಾನಗೊಳಿಸುವುದು ಹೇಗೆ ಎಂಬುದರ ಬಗ್ಗೆ ವರದಿ ನೀಡುವುದಕ್ಕಾಗಿ ಡಾ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ವರದಿ ಭಿನ್ನವಾಗಿ ಇಲ್ಲದಿದ್ದರೂ, ಒಂದಷ್ಟು ಸರಳಗೊಳಿಸಲಾಗಿದೆ. ಈ ಸರಳತನವನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಒಂದು ಕಡೆ ಕಾಫಿ ತೋಟದ ಮಾಲಕರನ್ನು ಸಂತೃಪ್ತಿಗೊಳಿಸಲು ಕಾಫಿ ಬೆಳೆಸುವುದು ಪರಿಸರಕ್ಕೆ ಹಾನಿಕಾರಕವಲ್ಲ ಎಂಬ ಅಂಶವನ್ನು ಎತ್ತಿ ಹಿಡಿದಿದೆ ಎನ್ನುವ ರೀತಿಯಲ್ಲಿ ವಾದಿಸುತ್ತಿದ್ದಾರೆ. ಸಮಿತಿ ರಚನೆಯಲ್ಲಿಯೇ ಎಡವಿದೆ ಎಂಬುದು ಮುಖ್ಯವಾದ ವಿಚಾರವಾಗಿದೆ. ಇಂತಹ ಒಂದು ಸಮಿತಿಯನ್ನು ರಚಿಸುವ ಸಂದರ್ಭದಲ್ಲಿ ಯಾವ ವಿಚಾರಕ್ಕಾಗಿ ಸಮಿತಿಯನ್ನು ರಚಿಸಲಾಗುತ್ತದೋ, ಅದಕ್ಕೆ ಸಂಬಂಧಪಟ್ಟ ವರ್ಗದ ಪ್ರತಿನಿಧಿಗಳು ಸಮಿತಿಯಲ್ಲಿ ಇರಬೇಕು. ಆದರೆ ಮಾಧವ ಗಾಡ್ಗೀಳ್ ಹಾಗೂ ಡಾ ಕಸ್ತೂರಿ ರಂಗನ್ ಸಮಿತಿಯನ್ನು ಪರಿಶೀಲಿಸಿದರೆ ಅಲ್ಲಿ ಒಂದೇ ವರ್ಗದ ವ್ಯಕ್ತಿಗಳು ಇದ್ದಾರೆ. ಸಮಿತಿಯಲ್ಲಿ ಜನಪ್ರತಿನಿಧಿಗಳು ಇಲ್ಲ. ರೈತ, ಕೃಷಿಕ ಪ್ರತಿನಿಧಿಗಳು ಇಲ್ಲ. ಶ್ರಮಿಕ ವರ್ಗದ ಪ್ರತಿನಿಧಿಗಳು ಇಲ್ಲ. ಭೂಮಿಗೆ ಸಂಬಂಧಪಟ್ಟ ಸಮಿತಿಯಾದ್ದರಿಂದ, ಸಮಿತಿಯಲ್ಲಿ ಭೂಶಾಸ್ತ್ರಜ್ಞರು ಇರಬೇಕಿತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚಿಸಬಲ್ಲ ಆರ್ಥಿಕ ತಜ್ಞರು ಸಮಿತಿಯಲ್ಲಿ ಇರಬೇಕಾಗಿತ್ತು. ಸಾಮಾಜಿಕ ಪರಿಣಾಮಗಳ ಬಗ್ಗೆ ತಿಳಿ ಹೇಳುವ ಸಾಮಾಜಿಕ ಶಾಸ್ತ್ರಜ್ಞರು ಕೂಡ ಇರಬೇಕಾಗಿತ್ತು. ಅವರು ಯಾರೂ ಇಲ್ಲದೆ, ಸಮಿತಿಯೊಂದನ್ನು ರಚಿಸಿ, ತಮಗೆ ಬೇಕಾದಂತಹ ರೀತಿಯ ವರದಿಯನ್ನು ತರಿಸಿಕೊಳ್ಳು ವುದರಲ್ಲಿ ಸಮಿತಿ ರಚಿಸಿದವರು ಸಫಲರಾಗಿದ್ದಾರೆ ಎಂಬುದನ್ನು ಖಡಾಖಂಡಿತವಾಗಿ ಹೇಳಬಹುದಾಗಿದೆ. ಸಮಿತಿ ವರದಿ ನೀಡುವ ಮುನ್ನ ಈ ಪ್ರದೇಶದ ಹಿತಾಸಕ್ತರನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿ, ಅದಕ್ಕೆ ಪರಿಹಾರವನ್ನು ಕಂಡುಕೊಂಡು ವರದಿಯನ್ನು ನೀಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಮಾಧವ ಗಾಡ್ಗೀಳ್ ವರದಿಯಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಜನರ ವಾಸ್ತವ್ಯದ ಉಲ್ಲೇಖವೇ ಇಲ್ಲ. ಅಂದರೆ ವರದಿಯನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಂಡು ಸಿದ್ಧಪಡಿಸಲಾಗಿದೆ ಎಂಬುದನ್ನು ಹೇಳಬಹುದಾಗಿದೆ. ಇದರ ಪರಿಣಾಮವಾಗಿ ಕೃಷಿ ಜಮೀನು ಮತ್ತು ಜನರ ವಾಸ್ತವ್ಯ ಇರುವ ಹಲವು ಪ್ರದೇಶಗಳನ್ನು ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸುವ ಕೆಲಸ ಆಗಿದೆ.
ದೇಶದ ಒಟ್ಟು ಜನಸಂಖ್ಯೆಯ ಸಣ್ಣ ಸಂಖ್ಯೆಯ ಮಂದಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಪಶ್ಚಿಮಘಟ್ಟ ಪ್ರದೇಶವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಹಾಗೆ ಸಂರಕ್ಷಿಸಿಕೊಂಡು ಬಂದಿರುವುದರಿಂದಲೇ ಈಗ ಪಶ್ಚಿಮಘಟ್ಟ ಉಳಿದಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸರಕಾರದ ಅರಣ್ಯವೂ ಇದೆ. ಖಾಸಗಿ ಜಮೀನು ಇದೆ. ಇಲ್ಲಿ ನೆಲೆಸಿರುವ ಜನರು ಯಾವುದೇ ಸಂದರ್ಭದಲ್ಲಿಯೂ ಅರಣ್ಯ ಪ್ರದೇಶಗಳಿಗೆ ಹಾನಿ ಉಂಟುಮಾಡಿಲ್ಲ. ಖಾಸಗಿ ಜಮೀನುಗಳಿಗೂ, ಅರಣ್ಯ ಪ್ರದೇಶಕ್ಕೂ ವ್ಯತ್ಯಾಸವಿದೆ. ಆದರೆ ಈ ಎರಡೂ ಪ್ರದೇಶಗಳಿಗೆ ಏಕರೂಪದ ಕಾನೂನು ತರಲು ಈ ವರದಿ ಸಜ್ಜಾಗಿದೆ. ಖಾಸಗಿ ಜಮೀನು ಮತ್ತು ಅರಣ್ಯ ಪ್ರದೇಶವನ್ನು ವಿಭಜಿಸಿ ವರದಿಯಲ್ಲಿ ಉಲ್ಲೇಖ ಇರಬೇಕಾಗಿತ್ತು. ಆದರೆ ಹಾಗೆ ಮಾಡದೆ, ‘ಸೂಕ್ಷ್ಮ ಪರಿಸರ ವಲಯ’ ಎಂದು ಘೋಷಿಸಲು ಹೊರಟಿದೆ. ಇದು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂಬ ಕನಿಷ್ಠ ಜ್ಞಾನವೂ ವರದಿ ನೀಡುವ ವೇಳೆಯಲ್ಲಿ ನೀಡುವವರಿಗೆ ಇರಲಿಲ್ಲ ಎಂಬುದು ಕಂಡು ಬರುತ್ತದೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಣ್ಣ ರೈತರು ಹಾಗೂ ಕೃಷಿಕರು ಇದ್ದಾರೆ. ಅವರು ಕೃಷಿಯ ಮೇಲೆಯೇ ಅವಲಂಬಿತವಾಗಿರುವಂತಹ ವರ್ಗವಾಗಿದ್ದಾರೆ. ಅವರ ಬದುಕು ಹೇಗೆ ಎನ್ನುವುದರ ಜೊತೆಗೆ, ಬದಲಾವಣೆ ಆದಾಗ ಕೃಷಿಕರ ಆರ್ಥಿಕ ಪರಿಸ್ಥಿತಿ ಏನಾಗಬಹುದು ಎಂಬುದರ ಬಗ್ಗೆ ಚಿಂತನೆಯನ್ನು ನಡೆಸಬೇಕಾಗಿತ್ತು. ಇದು ಯಾವುದನ್ನೂ ಮಾಡದೆ, ವರದಿಯನ್ನು ನೀಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)