varthabharthiಅನುಗಾಲ

ಸಂವಿಧಾನದ ವಿಧಾನಗಳು

ವಾರ್ತಾ ಭಾರತಿ : 29 Nov, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನಮಗೆ ನಾವೇ ನೀಡಿದ ಈ ಸಂವಿಧಾನವನ್ನು ಮತ್ತು ಅದರಡಿಯ ಕಾನೂನುಗಳನ್ನು ನಾವೇ ಹಿಂಸಿಸುತ್ತಿದ್ದೇವೆಯೇ? ಸಂವಿಧಾನವು ವ್ಯಕ್ತಿ ಮತ್ತು ರಾಷ್ಟ್ರಗೌರವವನ್ನು ಕಾಪಾಡಲು ಕೈಗೊಂಡ ಎಲ್ಲ ಪ್ರಯತ್ನಗಳನ್ನು ನಾವು ವಿಫಲಗೊಳಿಸುತ್ತಿದ್ದೇವೆಯೇ? ಇದರ ಉದ್ದೇಶವಾದರೂ ಏನು? ಇದರಿಂದ ಆಗುವ ಪರಿಣಾಮಗಳೇನು? ಈ ಬಗೆಯ ವಿವೇಕ ವಿವೇಚನೆಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ?


ನವೆಂಬರ್ 26ರಂದು ದೇಶ ‘ಸಂವಿಧಾನ ದಿನ’ವನ್ನು ಆಚರಿಸುತ್ತದೆ. ಸ್ವಾತಂತ್ರ್ಯ ಪಡೆದ ಆನಂತರ 1949ರ ನವೆಂಬರ್ 26ರಂದು ಈ ದೇಶದ ಸಂವಿಧಾನ ಸಭೆಯು ಡಾ. ಭೀಮರಾವ್ ಅಂಬೇಡ್ಕರ್ ಅವರ ಮುಂದಾಳುತನದಲ್ಲಿ ರಚಿಸಿದ ಭಾರತದ ಸಂವಿಧಾನವನ್ನು ಸ್ವೀಕರಿಸಿತು. ತಾನು ಹೆತ್ತ ಮಗುವನ್ನು ತನ್ನ ಕೈಯಲ್ಲಿ ಎತ್ತಿ ಕೊಂಡಾಡಿದ ತಾಯಿಯಂತೆ ಈ ದೇಶದ ಜನತೆ ತನ್ನ ಸಂವಿಧಾನವನ್ನು ಅಂಗೀಕರಿಸಿತು. ಅದು 1950ರ ಜನವರಿ 26ರಂದು ಜಾರಿಗೆ ಬಂದಿತು. ಬಾಬು ರಾಜೇಂದ್ರಪ್ರಸಾದ್ ಭಾರತದ ಮೊದಲ ರಾಷ್ಟ್ರಪತಿಯಾಗಿ ಆಯ್ಕೆಯಾದರು.

ಮುಂದಿನದು ಇತಿಹಾಸ. ಭಾರತದ ಸಂವಿಧಾನವು ವಿಶ್ವದ ಅತ್ಯಂತ ದೀರ್ಘ ಸಂವಿಧಾನವೆಂದು ಉಲ್ಲೇಖವಾಗಿದೆ. ಬ್ರಿಟನಿನ ಅಲಿಖಿತ ಸಂವಿಧಾನ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳ ಲಿಖಿತ ಸಂವಿಧಾನಗಳ ಸಾರವನ್ನು ನಮ್ಮದೇ ವಾತಾವರಣಕ್ಕೆ ಒಗ್ಗಿಸಿಕೊಂಡು ರೂಪತಳೆದ ಗ್ರಂಥ ಸಂವಿಧಾನ. ಒಂದು ರಾಷ್ಟ್ರ ಹೇಗೆ ಮುನ್ನಡೆಯಬೇಕು ಮತ್ತು ಅದರ ಸರಕಾರ ಹಾಗೂ ಪ್ರಜೆಗಳ ನಡುವಣ ಸಂಬಂಧ ಹೇಗಿರಬೇಕು ಎಂಬುದನ್ನು ಸವಿವರವಾಗಿ, ಸವಿಸ್ತಾರವಾಗಿ ಮಂಡಿಸಿದ ಸಮರ್ಥವಾದ ವಾದವೇ ಸಂವಿಧಾನ. ನಮ್ಮ ಸಂವಿಧಾನವು ಒಂದು ಉದ್ಗ್ರಂಥ. ವಿಶ್ವದಲ್ಲಿ ನಮ್ಮದೇ ಶ್ರೇಷ್ಠ ಸಂವಿಧಾನವೆಂದು ಅತೀ ಅಭಿಮಾನದಿಂದ (ಅನೇಕ ಬಾರಿ ರಾಜಕೀಯ ಕಾರಣಗಳಿಗಾಗಿ) ಹೇಳಿಕೊಳ್ಳುತ್ತೇವಾದರೂ ಹಾಗೆ ಭಾವಿಸಬಹುದಷ್ಟೇ ಹೊರತು ಅದೇ ಸತ್ಯವೆಂದು ನಂಬಬೇಕಾಗಿಲ್ಲ. ನಮಗೆ ನಾವೇ ಸಾರ್ವಭೌಮರು. ಇಂತಹ ರಾಷ್ಟ್ರಗಳು ವಿಶ್ವದಲ್ಲಿವೆಯಾದ್ದರಿಂದ ಯಾರೊಂದಿಗೂ ನಾವು ನಮ್ಮ ಸಂವಿಧಾನವು ನಿಮ್ಮ ಸಂವಿಧಾನಕ್ಕಿಂತ ಶ್ರೇಷ್ಠ ಅಥವಾ ಹೇಗೆ ಹೆಚ್ಚು ಶ್ರೇಷ್ಠ ಎಂದು ವಾದಿಸುವುದು ಮೂರ್ಖತನವಾಗುತ್ತದೆ.

ಯಾವುದೇ ದೇಶದ ಕಾನೂನುಗಳು ರಚನೆಗೊಳ್ಳುವುದು, ಕಾರ್ಯವೆಸಗುವುದು, ಸಂವಿಧಾನಕ್ಕನುಗುಣವಾಗಿ. ಆಗಲೇ ಇದ್ದ ಕಾನೂನುಗಳು ಸಂವಿಧಾನಕ್ಕೆ ಹೊಂದುವಂತೆ ಮುಂದುವರಿದವು ಇಲ್ಲವೇ ಬದಲಾವಣೆಗೊಂಡವು. ನಮ್ಮ ಶಾಸಕಾಂಗ- ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ಮನೆಗಳನ್ನು ಒಳಗೊಂಡ ಸಂಸತ್ತು ಇಡೀ ದೇಶದ ಪ್ರತಿನಿಧಿಯಾದರೆ, ವಿಧಾನಸಭೆಗಳು, (ಕೆಲವು ರಾಜ್ಯಗಳಲ್ಲಿರುವ ವಿಧಾನ ಪರಿಷತ್ತುಗಳು) ಆಯಾಯ ರಾಜ್ಯಗಳ ಪ್ರತಿನಿಧಿಗಳು. ಇವು ಅಗತ್ಯ ಪರಿಣತರ ನೆರವಿನಿಂದ ನಡೆಸಿದ ಮತ್ತು ನಡೆಸಬೇಕಾದ ಚರ್ಚೆಯ ಪರಿಣಾಮವಾಗಿ ಹೊಸ ಕಾನೂನುಗಳು ಅಗತ್ಯವಾದಾಗಲೆಲ್ಲ ರಚನೆಗೊಂಡವು. ವಿಶ್ವದ ಭಾರೀ ಜನಸಂಖ್ಯೆಯನ್ನು ಹೊಂದಿದ, ಬಹಳಷ್ಟು ಅಂದರೆ ಭಿನ್ನ ಜಾತಿ, ಮತ, ಧರ್ಮ, ಭಾಷೆ, ಜನಾಂಗಗಳನ್ನೊಳಗೊಂಡ ರಾಷ್ಟ್ರಕ್ಕೆ ಎಲ್ಲರನ್ನೂ ಮತ್ತು ಎಲ್ಲವನ್ನೂ ಹೊಂದಿದ ಮತ್ತು ಹೊಂದಿಸಿದ ಸಂವಿಧಾನವನ್ನು ಮತ್ತು ಅದರ ವಿಶಾಲ ಕೊಡೆಯಡಿ ಕಾನೂನುಗಳನ್ನು ರಚಿಸುವುದೂ ಒಂದು ಸವಾಲೇ ಸರಿ. ಆದರೆ ಸಂವಿಧಾನ ಮತ್ತು ಅದರಡಿ ಹೀಗೆ ರಚನೆಗೊಂಡ ಕಾನೂನುಗಳನ್ನು ಅರ್ಥವಿಸಿ ತೀರ್ಮಾನಿಸಬಲ್ಲ ನ್ಯಾಯಾಂಗವಿದೆಯೆಂದೇ ದೇಶ ಮತ್ತು ಅದರ ಜನ ಸುರಕ್ಷಿತವಾಗಿರುತ್ತಾರೆ.

ಸಂವಿಧಾನವನ್ನು ಮತ್ತು ಅದರಡಿ ರಚನೆಗೊಂಡ ಕಾನೂನನ್ನು ಗೌರವಿಸುವುದು ಪ್ರತೀ ಪ್ರಜೆಯ ಕರ್ತವ್ಯ. ಹಾಗೆಯೇ ಸಂವಿಧಾನದ ಗೌರವವನ್ನು ಕಾಪಾಡುವುದು ಪ್ರತೀ ಪ್ರಜೆಯ ಹಕ್ಕೂ ಹೌದು. ಕಾನೂನು ಆಡಳಿತವನ್ನು ಮಾತ್ರವಲ್ಲ, ಸಾಮಾಜಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುತ್ತದೆ. ಈ ಚೌಕಟ್ಟನ್ನು ಮೀರಿ ಹೋಗುವುದಕ್ಕೆ ಪ್ರಜೆಗಳಿಗೆ ಮಾತ್ರವಲ್ಲ, ಆಳುವವರಿಗೂ ಹಕ್ಕಿಲ್ಲ. ಕಾನೂನಿನ ಪ್ರಕ್ರಿಯೆಯಿಂದ ಯಾರಿಗೂ ವಿನಾಯಿತಿಯೂ ಇಲ್ಲ. (ಸಾಂವಿಧಾನಿಕ ಹುದ್ದೆಗಳಲ್ಲಿರುವವರಿಗೆ ಅವರ ಕಾರ್ಯಕ್ಕೆ ಸಂಬಂಧಿಸಿದಂತೆ ಕೆಲವೊಮ್ಮೆ ರಕ್ಷಣೆ ಬೇಕಾಗುವುದರಿಂದ ಅಂತಹ ವಿನಾಯಿತಿಯನ್ನು ಸಂವಿಧಾನವೇ ನೀಡಿದೆ!) ಯಾರಾದರೂ ಸಂವಿಧಾನಕ್ಕೆ ಮತ್ತು ಈ ಕಾನೂನುಗಳಿಗೆ ಅಪಚಾರವನ್ನೆಸಗಿದರೆ ಅದರ ವಿರುದ್ಧ ಪ್ರತಿಭಟಿಸುವುದು ತಪ್ಪಲ್ಲ. ನೀವೆಷ್ಟೇ ದೊಡ್ಡವರಾದರೂ ಕಾನೂನು ನಿಮಗಿಂತ ಎತ್ತರದಲ್ಲಿರುತ್ತದೆ ಎಂದು ಲಾರ್ಡ್ ಡೆನ್ನಿಂಗ್ ಹೇಳಿದ್ದು ಈ ಅರ್ಥದಲ್ಲಿಯೇ. ನಮ್ಮ ಸಂವಿಧಾನಕ್ಕೆ ಈಗಾಗಲೇ ನೂರಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಹೀಗೆ ತಿದ್ದುಪಡಿಗಳಾಗುವುದು ಸಂವಿಧಾನವನ್ನು ಅಶಕ್ತಗೊಳಿಸುವುದಿಲ್ಲವೇ ಎಂಬ ಸಂಶಯ ಬರುವುದು ಸಹಜ. ಹಾಗೇನಿಲ್ಲ. ಬದಲಾವಣೆ ಅನಿವಾರ್ಯ. ಮಗುವಾಗಿದ್ದಾಗ ಹಾಕಿದ ಬಟ್ಟೆಬರೆ ಎಷ್ಟೇ ಚೆನ್ನಾಗಿದ್ದರೂ ಮಗು ಬೆಳೆಯುತ್ತಿರುವಂತೆ ಅದು ಚಿಕ್ಕದಾಗುತ್ತದೆ.

ಆಗ ಹೊಸ ಗಾತ್ರದ ಬಟ್ಟೆಬರೆ ಬೇಕಾಗುತ್ತದೆ. ಬಟ್ಟೆಬರೆ ಕುಗ್ಗುವುದಿಲ್ಲ; ಆದರೆ ಅದನ್ನು ಧರಿಸುವ ವ್ಯಕ್ತಿ ಬೆಳೆಯುತ್ತಿರುತ್ತಾನೆ. ಪರಿಣಾಮವಾಗಿ ಬದಲಾವಣೆಗಳು ಅಗತ್ಯವಾಗುತ್ತವೆ. (ವ್ಯಕ್ತಿಯ ಬೆಳವಣಿಗೆಗೆ ಒಂದು ಮಿತಿಯಿದೆ. ಆದರೆ ದೇಶದ, ಸಮಾಜದ ಬೆಳವಣಿಗೆಗೆ ಮಿತಿಯಿಲ್ಲ.) ಉದಾಹರಣೆಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇಂದಿನ ವೈಜ್ಞಾನಿಕ ಕೌಶಲವಿರಲಿಲ್ಲ; ತಾಂತ್ರಿಕತೆಯಿರಲಿಲ್ಲ. ಬೆರಳಚ್ಚುಯಂತ್ರದಿಂದ ನಾವು ಅಂತರ್ಜಾಲ ವ್ಯವಸ್ಥೆಗೆ ಬದಲಾಗಿದ್ದೇವೆ. ಪತ್ರಿಕೆಗಳು ಮಾತ್ರ ಮಾಧ್ಯಮಗಳು ಎನ್ನುವಲ್ಲಿಂದ ಟಿವಿ, ಫೋನ್ ಮಾತ್ರ ಸಂಪರ್ಕಸಾಧನ ಎನ್ನುವಲ್ಲಿಂದ ಇ-ಮೈಲ್, ಮೊಬೈಲ್ ಮುಂತಾದ ಸಂಪರ್ಕಸಾಧನಗಳನ್ನು ಹೊಂದಿದ್ದೇವೆ. ವಿಶ್ವವೇ ಒಂದು ಪುಟ್ಟ ನಗರದಂತೆ ಪರಸ್ಪರರಿಗೆ ಮಾತಿಗೆ, ಕ್ರಿಯೆಗೆ ದಕ್ಕಿದೆ.

ಇದಕ್ಕನುಗುಣವಾಗಿ ಸಮಾಜವು ವ್ಯವಹರಿಸುವ ರೀತಿ ಬದಲಾಗುತ್ತದೆ. ಎಂತಹ ಪರಿಸ್ಥಿತಿಯೇ ಬರಲಿ, ನಾನು ಬದಲಾಗುವುದಿಲ್ಲ ಎಂಬವನು(ರು) ಕಾಲದ ಪ್ರಯಾಣದಲ್ಲಿ ಹಿಂದುಳಿಯುವುದು ಮಾತ್ರವಲ್ಲ, ಬೆನ್ನು ಹಾಕುವುದು ಮಾತ್ರವಲ್ಲ, ಅಸಂಗತರಾಗುತ್ತಾರೆ. ಈ ಅರಿವು ಮತ್ತು ಎಚ್ಚರಿಕೆಯೊಂದಿಗೇ ಸಮಾಜವು ತನ್ನ ಪ್ರತಿನಿಧಿಗಳ ಮೂಲಕ ತಿದ್ದುಪಡಿಗಳನ್ನು ಮಾಡುತ್ತದೆ ಮತ್ತು ಸ್ವೀಕರಿಸುತ್ತದೆ. ಬಹುಸಂಸ್ಕೃತಿಯ, ವಿವಿಧ ಆಚಾರ-ವಿಚಾರಗಳ ನಮ್ಮ ದೇಶವು ತನ್ನ ಪ್ರಜೆಗಳು ತಮ್ಮ ತಮ್ಮ ಧರ್ಮ, ಜಾತಿ, ಭಾಷೆ, ಜನಾಂಗೀಯ ಗುಣಗಳು ಇತ್ಯಾದಿ ಭಿನ್ನತೆಗಳನ್ನು ಮನೆಯೊಳಗಿಟ್ಟು ತಾನು ಈ ದೇಶದ ಸತ್ಪ್ರಜೆ ಮತ್ತು ಎಲ್ಲರೂ ತನ್ನ ಸಮಾನರು ಎಂದು ತಿಳಿಯಬೇಕೆಂದು ಸಾಂವಿಧಾನಿಕವಾಗಿ ಬಯಸುತ್ತದೆ. ಈ ಬಯಕೆಯ ಈಡೇರಿಕೆಯು ಪ್ರತಿಯೊಬ್ಬನ ಜಾಗೃತಾವಸ್ಥೆಯ ಸಂಕೇತ.

ಯಾರು ತಾನು, ತನ್ನ ಭಾಷೆ, ಜಾತಿ, ಧರ್ಮ, ಜನಾಂಗ ಮುಂತಾದವುಗಳು ಇತರರಿಗಿಂತ ಶ್ರೇಷ್ಠವೆಂದು ತಿಳಿಯುತ್ತಾನೋ ಮತ್ತು ಅಂತ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಾನೋ ಆತನು ತನ್ನ ಈ ಕಾಯಿಲೆಯನ್ನು ಸಾಂಕ್ರಾಮಿಕಗೊಳಿಸಿ ಇಡೀ ಸಮಾಜವನ್ನು, ದೇಶವನ್ನು ರೋಗಗ್ರಸ್ತವಾಗಿಸುತ್ತಾನೆ. ಇಂತಹ ಜಾಡ್ಯಗಳು ಒಂದು ಸೀಮಿತ ಹಂತದಲ್ಲಿ ಬಹು ಆಕರ್ಷಕವಾಗಿ ಕಾಣುತ್ತಾವಾದರೂ ದೇಶ-ಕಾಲದ ವಿಕಾಸದಲ್ಲಿ ಅವನತಿಯ ವಾಹಕವಾಗುತ್ತವೆ. ಇಂತಹ ಅಪಾಯಗಳನ್ನು ಸಂವಿಧಾನ ನಿರ್ಮಾಪಕರು ಗ್ರಹಿಸಿದ್ದರಿಂದಲೇ ಅವರು ಅತ್ಯಂತ ಎಚ್ಚರಿಕೆಯಿಂದ ಬಗೆಬಗೆಯ ಸಂದರ್ಭಗಳಿಗೆ ಒಗ್ಗುವಂತಹ ವಿವರಣೆಗಳನ್ನು ಅಳವಡಿಸಿದರು. ಇಷ್ಟಾಗಿಯೂ ತಿದ್ದುಪಡಿಗಳು ಅಗತ್ಯವಾದದ್ದು ಸಹಜ ಪ್ರಕ್ರಿಯೆಯೆಂದು ಭಾವಿಸಬೇಕು. ಇಂತಹ ತಿದ್ದುಪಡಿಗಳು ದೇಶದ ಸಹಜ ಮತ್ತು ಅಗತ್ಯ ಬದುಕಿಗೆ ಅಳವಡಿಸಿದ ಜೀವಸಾಧನಗಳು ಎಂಬುದನ್ನು ಜನತೆ ಮರೆಯಬಾರದು.

ಇಂತಹ ಆಶೋತ್ತರಗಳನ್ನು ವರ್ಷಕ್ಕೊಂದು ಸಲವಾದರೂ ನೆನಪಿಸುವ ಸದುದ್ದೇಶವು ‘ಸಂವಿಧಾನ ದಿನ’ಕ್ಕಿದೆಯೆಂಬುದನ್ನು ಮರೆಯಬಾರದು. ಭಾರತದಲ್ಲಿ ಸಂವಿಧಾನ ದಿನವಿದ್ದರೆ ಅಮೆರಿಕದಲ್ಲಿ ಅವರ ಸಂವಿಧಾನ ದಿನವು ಪ್ರಜೆಗಳ ದಿನವೆಂದೂ ಆಚರಿಸಲ್ಪಡುತ್ತದೆ. ವರ್ಷದ 365 ದಿನಗಳೂ ಇಂತಹ ದಿನಗಳಾಗಬೇಕಾದದ್ದು ಅಗತ್ಯವಾದರೂ ಆಚರಣೆಗಳು ವಿಶೇಷ ಸಂದರ್ಭಗಳಿಗೆ ಮಾತ್ರ ಮೀಸಲಾಗಿದ್ದರೆ ಸಹಜವಾಗಿರುತ್ತದೆ.

ಕಳೆದ ಸುಮಾರು ಏಳು ದಶಕಗಳ ಬೆಳವಣಿಗೆಯಲ್ಲಿ ಸಂವಿಧಾನಕ್ಕೆ ಜಾತ್ಯತೀತ ಎಂಬ ಪದವನ್ನು ಸೇರಿಸಿದ್ದೇ ಅತ್ಯಂತ ಕ್ರಾಂತಿಕಾರಕ ಹೆಜ್ಜೆಯೆಂದು ಬಣ್ಣಿಸಬಹುದು. ಅಂತಹ ಯಾವುದೇ ಬದಲಾವಣೆಯನ್ನು ಆಯಾಯ ಕಾಲ-ಸಂದರ್ಭದ ಆಳುವವರ ಅಗತ್ಯಗಳೆಂದು ಟೀಕಿಸಬಹುದಾದರೂ ಅವು ಕಾಲಾತೀತವಾಗುತ್ತವೆ. ಸಂವಿಧಾನದ ಮೂಲ ಆಶಯಗಳಿಗೆ ಅಡ್ಡಿಯಾಗದಂತೆ ತರುವ ಎಲ್ಲ ಬದಲಾವಣೆಗಳನ್ನೂ ನ್ಯಾಯಾಂಗವು ಎತ್ತಿಹಿಡಿದಿದೆ. ನ್ಯಾಯಾಂಗದ ಕರ್ತವ್ಯವೇ ಇದು: ಕತ್ತಲಾದಾಗಲೆಲ್ಲ, ಅಥವಾ ಯಾರಾದರೊಬ್ಬ ಇದು ಸರಿಯೇ ಎಂದು ಪ್ರಶ್ನಿಸಿದಾಗಲೆಲ್ಲ ಸರಿಯಾದ ದಾರಿ ತೋರಿಸುವುದು. ಸಂವಿಧಾನದಲ್ಲಿ ದೋಷಗಳಿವೆಯೆಂದು ವಾದಿಸುವವರಿದ್ದಾರೆ.

ಮೀಸಲಾತಿಯಂತಹ ಧೋರಣೆಗಳನ್ನು ಟೀಕಿಸುವವರಿದ್ದಾರೆ. ಸಂವಿಧಾನವು ಎಲ್ಲ ಅಗತ್ಯ ಸಂದರ್ಭಗಳನ್ನು ವಿವೇಚಿಸಿಯೇ ರಚನೆಗೊಂಡಿದೆಯೆಂಬ ಅರಿವು ನಮಗಿರಬೇಕು. ಒಂದು ಗೊತ್ತಾದ ಸಂದರ್ಭದಲ್ಲಿ ಯಾವುದೊಂದು ಕಾನೂನು ನಮಗೆ ವೈಯಕ್ತಿಕವಾಗಿ ತೊಡಕಾಗಬಹುದು. ಅದು ಅನಿವಾರ್ಯ. ನಮ್ಮ ಸಾಂವಿಧಾನಿಕ ವ್ಯವಸ್ಥೆಯೇ ನಮ್ಮ ಭದ್ರತೆಯಾದಾಗ ಅದು ಪ್ರಾತಿನಿಧಿಕವಾಗಿಯೇ ಮತ್ತು ಕೆಲವು ತಜ್ಞರ ಮೂಲಕವೇ ಜಾರಿಯಾಗಬೇಕಾದಾಗ ಅದನ್ನು ಸರಿಯೆಂದು ತಿಳಿಯಬೇಕಾದ ಅಗತ್ಯ ವಿವೇಕ ನಮ್ಮಲ್ಲಿರಬೇಕು. ಅದು ವೈಯಕ್ತಿಕ ಆಸೆ-ಆಶಯಗಳ ಕೇಂದ್ರವಲ್ಲ. ಸಮಾಜವೆಂಬ ಸಮೂಹ ಕೇಂದ್ರಿತವಾದದ್ದು. ಸರಳ ಉದಾಹರಣೆಯನ್ನು ಪರಿಗಣಿಸುವುದಾದರೆ ಬಸ್ಸಿನಲ್ಲಿ ಎಲ್ಲ ಪ್ರಯಾಣಿಕರೂ ಒಂದೇ ದರವನ್ನು ಪಾವತಿಸುತ್ತಾರೆ. ಆದರೆ ಕೆಲವರಿಗೆ ಮುಂದಿನ ಸೀಟು, ಇನ್ನು ಕೆಲವರಿಗೆ ಹಿಂದಿನ ಸೀಟು. ಕೆಲವರಿಗೆ ಕಿಟಿಕಿಯ ಪಕ್ಕದ ಸೀಟು; ಉಳಿದವರಿಗೆ ಇತರೆಡೆಯ ಸೀಟು. ಒಟ್ಟು ಬಸ್ಸಿನಲ್ಲಿ ನಾವೆಲ್ಲರೂ ಪಥಿಕರು, ಪ್ರಯಾಣಿಕರು ಎಂಬ ತಿಳಿವಳಿಕೆಯಿದ್ದರೆ ಪ್ರಯಾಣ ಸುಗಮವಾಗುತ್ತದೆ.

ಒಬ್ಬ ಅಪರಾಧಿಯನ್ನು ಶಿಕ್ಷೆಗೆ ಗುರಿಪಡಿಸಿದಾಗ ಆತನ ಕುಟುಂಬ ತೀರ ದುರ್ಲಭ ಪರಿಸ್ಥಿತಿಯನ್ನೆದುರಿಸಬೇಕಾಗುತ್ತದೆ. ಹಾಗೆಂದು ಆತನನ್ನು ಶಿಕ್ಷಿಸದಿದ್ದರೆ ಆತನ ಅಪರಾಧಕ್ಕೊಳಪಟ್ಟವರ ಕಷ್ಟಕ್ಕೆ ಪರಿಹಾರವೇ ಇರುವುದಿಲ್ಲ. ಹೀಗಾಗಿ ನ್ಯಾಯದ ತಕ್ಕಡಿಯಲ್ಲಿಯೂ ಸಾಮಾಜಿಕ ಅಗತ್ಯಗಳು ಆರೋಗ್ಯಪೂರ್ಣವಾಗಿರುತ್ತವೆ. ಅದಿಲ್ಲವಾದರೆ ಬದುಕೇ ಅತ್ಯಂತ ಗೊಂದಲಮಯವಾಗುತ್ತದೆ. ಇದನ್ನೇ ನಾವು ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂದು ಲಾಗಾಯ್ತಿನಿಂದಲೇ ಹೇಳಿಕೊಂಡು ಬಂದಿದ್ದೇವೆ. ನಮಗೆ ನಾವೇ ನೀಡಿದ ಈ ಸಂವಿಧಾನವನ್ನು ಮತ್ತು ಅದರಡಿಯ ಕಾನೂನುಗಳನ್ನು ನಾವೇ ಹಿಂಸಿಸುತ್ತಿದ್ದೇವೆಯೇ? ಸಂವಿಧಾನವು ವ್ಯಕ್ತಿ ಮತ್ತು ರಾಷ್ಟ್ರಗೌರವವನ್ನು ಕಾಪಾಡಲು ಕೈಗೊಂಡ ಎಲ್ಲ ಪ್ರಯತ್ನಗಳನ್ನು ನಾವು ವಿಫಲಗೊಳಿಸುತ್ತಿದ್ದೇವೆಯೇ? ಇದರ ಉದ್ದೇಶವಾದರೂ ಏನು? ಇದರಿಂದ ಆಗುವ ಪರಿಣಾಮಗಳೇನು? ಈ ಬಗೆಯ ವಿವೇಕ ವಿವೇಚನೆಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ? ಇತ್ತೀಚೆಗೆ ಜಾತಿ, ಮತ, ಧರ್ಮ, ಭಾಷೆ, ಜನಾಂಗದ ಹೆಸರಿನಲ್ಲಿ ಈ ದೇಶವು ಎದುರಿಸುವ ಪ್ರಕ್ಷುಬ್ಧತೆಯನ್ನು ಗಮನಿಸಿದರೆ ನಾವು ಶಿಲಾಯುಗದತ್ತ ಅತೀ ವೇಗವಾಗಿ ಜಾರುತ್ತಿದ್ದೇವೆಂದು ಅನ್ನಿಸುತ್ತದೆ.

ನಮಗನುಕೂಲವಾದಾಗ ನ್ಯಾಯಾಲಯಗಳ ತೀರ್ಪುಗಳನ್ನು ಸ್ವೀಕರಿಸುವುದು, ಇಲ್ಲವಾದರೆ ಅವುಗಳ ವಿರುದ್ಧ ಜನರನ್ನು ರೊಚ್ಚಿಗೆಬ್ಬಿಸುವುದು ಇವೇ ಇಂದಿನ ಕುಶಲಗಾರಿಕೆಯಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳೂ ವಿರೋಧಾಭಾಸದಿಂದ ಕೂಡಿರುವುದೂ ಇದೆ. ಆದರೆ ಅವು ಈ ನೆಲದ ತೀರ್ಪುಗಳು ಎಂಬುದು ನಾವು ತಿಳಿದಿರಬೇಕು. ಸಂವಿಧಾನ ಮತ್ತು ಅದರಡಿಯ ಎಲ್ಲ ಕ್ಷೇತ್ರಗಳ ಕುರಿತು ಹೇಳುವುದು ಬೇಕಷ್ಟಿದೆ. ಸಂವಿಧಾನವನ್ನು ಪೂರ್ಣ ಓದಿ ತಿಳಿದುಕೊಳ್ಳುವುದು ಎಲ್ಲ ಪ್ರಜೆಗಳಿಗೆ ಸಾಧ್ಯವಿಲ್ಲವಾದರೂ ಕನಿಷ್ಠ ಅದರ ಅಸ್ತಿತ್ವವನ್ನು ಮತ್ತು ಅದರ ಕುರಿತ ಗೌರವವನ್ನು ನಮ್ಮಲ್ಲಿ ನಾವು ರೂಢಿಸಿಕೊಳ್ಳಬೇಕಾದ್ದು ಬದುಕನ್ನು ಮಹತ್ವವಾಗಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)