varthabharthi

ವೈವಿಧ್ಯ

ಲಕ್ಷ್ಮಣ್ ಎಂಬ ಕವಿಮನಸ್ಸಿನ ಹೋರಾಟಗಾರ

ವಾರ್ತಾ ಭಾರತಿ : 30 Nov, 2018
ನಂದಕುಮಾರ್ ಕೆ. ಎನ್.

ಹೋರಾಟಗಾರ, ಕವಿ, ಕತೆಗಾರ, ಕಾದಂಬರಿಕಾರ, ಮಾನವ ಹಕ್ಕು ಕಾರ್ಯಕರ್ತ ಲಕ್ಷ್ಮಣ್ ಇಂದು ನಮ್ಮಂದಿಗೆ ಭೌತಿಕವಾಗಿ ಇಲ್ಲ. ಅವರು ತಮ್ಮ ಬದುಕಿನ ಯಾತ್ರೆಯನ್ನು ಮುಗಿಸಿ ಈಗ ಒಂದು ವರ್ಷ ಕಳೆದಿದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಅವರು ಬರೆದಿದ್ದಾರೆ. ಇತ್ತೀಚೆಗೆ ಅವರ ನೆನಪಿನಲ್ಲಿ ಪುಸ್ತಕ ‘ಜನತೆಯ ಸಂಗಾತಿ ಲಕ್ಷ್ಮಣ್ ಜಿ’ ಹಾಗೂ ಅವರ ಆತ್ಮಕತೆಯಾದ ‘ಸಂಬೋಳಿ’ಯ ಆಂಗ್ಲ ಅನುವಾದ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಕರ್ನಾಟಕದ ದಲಿತ ಚಳವಳಿಯ ಭಾಗವಾಗಿದ್ದ ಲಕ್ಷ್ಮಣ್ ನಂತರ ಕ್ರಾಂತಿಕಾರಿ ರಾಜಕೀಯವನ್ನು ಗ್ರಹಿಸಲಾರಂಭಿಸಿದ್ದರು. ಕನ್ನಡ ರಾಷ್ಟ್ರೀಯತಾ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ರಾಷ್ಟ್ರೀಯತೆ, ಜನ, ನೆಲ, ಭಾಷೆ, ಸಂಸ್ಕೃತಿಗಳ ರಕ್ಷಣೆಗಾಗಿನ ಸಂಘಟನೆ ಕರ್ನಾಟಕ ವಿಮೋಚನಾ ರಂಗದ ರಾಜ್ಯ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದಲ್ಲಿ ನಡೆದ ಸಾತನೂರು ಬಿಡದಿ ಬಳಿಯ ಜಪಾನಿ ಟೌನ್‌ಶಿಪ್ ವಿರೋಧಿ ಹೋರಾಟ, ತುಂಗಾ ಮೂಲ ಉಳಿಸಿ ಹೋರಾಟ, ಗಣಿಗಾರಿಕಾ ವಿರೋಧಿ ಹೋರಾಟ, ಬೀದರಿನ ಕೊಳಾರ ಕೈಗಾರಿಕಾ ಮಾಲಿನ್ಯ ವಿರೋಧಿ ಹೋರಾಟ, ನಂದಿ ಇನ್‌ಫ್ರಾಸ್ಟ್ರಕ್ಚರ್ ಹೆಸರಿನ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ವಿರೋಧಿ ಹೋರಾಟ, ಕೋಮುವಾದಿ ಆಕ್ರಮಣಗಳನ್ನು ವಿರೋಧಿಸಿ ಹೋರಾಟಗಳಲ್ಲದೆ ಹಲವಾರು ಮಾನವಹಕ್ಕು ಹೋರಾಟಗಳ ಭಾಗವಾಗಿದ್ದವರು ಲಕ್ಷ್ಮಣ್. ದಲಿತ ದಮನಿತರ ಮೇಲೆ ಸ್ಥಾಪಿತ ಹಿತಾಸಕ್ತಿಗಳು ಮತ್ತು ಪ್ರಭುತ್ವದಿಂದ ದೌರ್ಜನ್ಯಗಳಾದಾಗ ಸತ್ಯಶೋಧನಾ ಸಮಿತಿಯ ಭಾಗವಾಗಿ ತೊಡಗಿಸಿಕೊಂಡು ಸತ್ಯಾಂಶಗಳನ್ನು ನಾಡಿನ ಜನರೆದುರು ತೆರೆದಿಡುವ ಮುಂಚೂಣಿ ಪಾತ್ರ ವಹಿಸುತ್ತಿದ್ದವರಲ್ಲಿ ಲಕ್ಷ್ಮಣ್ ಒಬ್ಬರು. ಇದರ ಭಾಗವಾಗಿ ಕರ್ನಾಟಕದ ಹಲವಾರು ಕಡೆ ಅವರು ಸುತ್ತಿದ್ದರು.

ದಲಿತ ದಮನಿತರ ಬದುಕಿನ ಕಷ್ಟಕೋಟಲೆಗಳನ್ನು ನೇರವಾಗಿ ಅನುಭವಿಸಿದ್ದ ಲಕ್ಷ್ಮಣ್ ದಲಿತ ದಮನಿತರ ದನಿಯಾಗಿಯೇ ಕೊನೆಯವರೆಗೂ ಇದ್ದವರು. ಅದರ ಭಾಗವಾಗಿಯೇ ಅವರು ಜಾತಿ ವಿನಾಶ ವೇದಿಕೆಯ ರಾಜ್ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದವರು. ಜಾತಿ ದೌರ್ಜನ್ಯ, ಶೋಷಣೆಗಳು, ಜಾತಿ ತಾರತಮ್ಯದ ವಿರುದ್ಧ ಹೋರಾಡಲು ರೂಪುಗೊಂಡ ಸಂಘಟನೆಯಾಗಿತ್ತು ಜಾತಿ ವಿನಾಶ ವೇದಿಕೆ.

ಬಾಲ್ಯದಿಂದಲೂ ಕಡು ಬಡತನದ ಜೊತೆಗೆ ಈ ಸಮಾಜದ ಕ್ರೂರ ಅನಿಷ್ಟ ಜಾತಿವ್ಯವಸ್ಥೆಯ ದಳ್ಳುರಿಯನ್ನು ಅನುಭವಿಸುತ್ತಾ ಬೆಳೆದವರು ಲಕ್ಷ್ಮಣ್. ತಮ್ಮ ಬದುಕು ಹಾಗೂ ದಲಿತ ಸಮಾಜದ ಕಥನವಾದ ‘ಸಂಬೋಳಿ’ ಕೃತಿಯಲ್ಲಿ ಅವರ ಒಳನೋಟಗಳ ಪರಿಚಯ ನಮಗಾಗುತ್ತದೆ. ಲಕ್ಷ್ಮಣ್ ಆ ಕೃತಿಯಲ್ಲಿ ತಣ್ಣಗೆ ನಿರ್ಲಿಪ್ತತೆಯಿಂದ ಬರೆಯುತ್ತಾ ಹೋದಂತೆ ಅನಿಸಿದರೂ ಅವರೊಳಗೆ ಹೆಪ್ಪುಗಟ್ಟಿದ್ದ ನೋವು ಮತ್ತು ಸಿಟ್ಟಿನ ಬಿಸಿ ಅದನ್ನು ಓದಿದಾಗ ನಮಗೆ ತಟ್ಟದೇ ಇರುವುದಿಲ್ಲ. ಅವರು ತಮ್ಮ ಬಾಲ್ಯ ಮತ್ತು ವಿದ್ಯಾಭ್ಯಾಸದ ಬಗ್ಗೆ ಹೇಳುತ್ತಾ, ‘‘ಹಸಿವನ್ನೇ ಉಂಡೂ ಉಂಡೂ ನನ್ನೊಟ್ಟೆ ಕಟ್ಬುಟ್ಟಿತ್ತು. ಒಂದಿಷ್ಟು ತಿಂದ್ರೆ ಹೊಟ್ಟೆ ತುಂಬೋಗ್ತಿತ್ತು, ನನ್ಗಿಂತ್ಲೂ ಚಿಕ್ಕ ಚಿಕ್ಕ ಹುಡುಗ್ರೆಲ್ಲಾ ಹೆಚ್ಚು ಹೆಚ್ಚು ಊಟ ಮಾಡ್ತಿದ್ರು, ನಾನು ವಿದ್ಯಾರ್ಥಿನಿಲಯ್ಕೆ ಸೇರಿ ಒಂದ್ವರ್ಷದ ನಂತರ ಹೆಚ್ಚಿಗೆ ಊಟ ಮಾಡಲು ಸಾಧ್ಯವಾಯ್ತು’’ ಎಂದು ಹೇಳುತ್ತಾರೆ. ಇದು ಅವರ ಬಾಲ್ಯದ ಬದುಕಾಗಿತ್ತು. ಇಂತಹ ಬಡತನದ ಬದುಕಿನಿಂದ ಅವರು ಹೋರಾಟಗಾರ, ಕವಿ, ಬರಹಗಾರ, ಕತೆಗಾರ, ಕಾದಂಬರಿಕಾರರಾಗಿ ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಒಬ್ಬ ಸಹೃದಯಿ ಮನುಷ್ಯನಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ತಾವು ಸರಕಾರಿ ನೌಕರಿಯಲ್ಲಿದ್ದರೂ ಅಲ್ಲೂ ಜಾತಿಯ ಕಾರಣಕ್ಕೆ ಅನುಭವಿಸಿದ ಅವಮಾನ ನೋವುಗಳನ್ನು ದಾಖಲಿಸುತ್ತಾರೆ. ಕೊನೆಗೆ ಆ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿದ ಜಾತಿವಾದಿ ಮನಸುಗಳ ಕುತಂತ್ರಗಳು, ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಆ ನೌಕರಿ ಕಳೆದುಕೊಳ್ಳಬೇಕಾಗಿ ಬಂದಾಗ ಆದಂತಹ ಆಘಾತ ದುಃಖಗಳು ಅವರ ಬರವಣಿಗೆಯ ರೀತಿಯಿಂದಲೇ ನಮ್ಮ ಹೃದಯಕ್ಕೆ ನಾಟುತ್ತದೆ. ದಲಿತರು ಮಾನಸಿಕವಾಗಿ ಅನುಭವಿಸುತ್ತಿರುವ ದುಗುಡ ನೋವು ಆತಂಕಗಳನ್ನು ಲಕ್ಷ್ಮಣ್ ತಮ್ಮ ಕೃತಿ ‘ಸಂಬೋಳಿ’ಯಲ್ಲಿ ತೆರೆದಿಡುತ್ತಾರೆ. ದಲಿತರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಹೇಗೆಲ್ಲಾ ತುಳಿದಿಡುತ್ತಿದೆ ಈ ಶ್ರೇಣೀಕೃತ ವ್ಯವಸ್ಥೆ ಎನ್ನುವುದನ್ನು ತಮ್ಮ ಸ್ವಂತ ಅನುಭವದ ಮೂಲಕ ಸೂಕ್ಷ್ಮತೆಯಿಂದ ಆಳವಾಗಿ ತೆರೆದಿಟ್ಟಿದ್ದಾರೆ. ಕೂಲಿ ಕೆಲಸವನ್ನು ಕೂಡ ಇತರ ಜಾತಿಯ ಹಿನ್ನೆಲೆಯವರಂತೆ ನಿರಾಳವಾಗಿ ದಲಿತರಿಗೆ ಮಾಡಲಾಗದ ಸಾಮಾಜದ ಕೊಳೆತು ನಾರುತ್ತಿರುವ ಮನಸುಗಳನ್ನು ಲಕ್ಷ್ಮಣ್ ಇಲ್ಲಿ ತಣ್ಣಗೆ ಆದರೆ ಬಹಳ ಶಕ್ತಿಶಾಲಿಯಾಗಿ ಹೃದಯಕ್ಕೆ ನಾಟುವಂತೆ ಅನಾವರಣ ಮಾಡಿಟ್ಟಿರುವುದು ನಮ್ಮ ಅನುಭವಕ್ಕೆ ಬರುತ್ತದೆ. ಇದು ಇಂದು ಸಿಲಿಕಾನ್ ನಗರ ಎಂದು ಕರೆಯಲ್ಪಡುವ ದೇಶದ ಆಧುನಿಕತೆಯ ದ್ಯೋತಕಗಳಲ್ಲಿ ಒಂದಾದ ಬೆಂಗಳೂರಿನ ಆಸುಪಾಸಿನ ಹಳ್ಳಿಗಳಲ್ಲಿನ ದಲಿತರ ಕತೆ. ಇಲ್ಲಿ ಲಕ್ಷ್ಮಣ್ ಬರೆದಿರುವುದು ಕೇವಲ ಅವರೊಬ್ಬರ ಅನುಭವವೆಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಅವಮಾನ, ಅನುಮಾನಗಳನ್ನು ಪ್ರತಿನಿತ್ಯವೂ ಈ ದೇಶದ ಒಂದು ದೊಡ್ಡ ಜನಸಮುದಾಯ ಕೇವಲ ಹುಟ್ಟಿನ ಹಿನ್ನೆಲೆಯ ಕಾರಣಕ್ಕಾಗಿಯೇ ಇಪ್ಪತ್ತೊಂದನೆಯ ಶತಮಾನದ ಈ ಕಾಲದಲ್ಲೂ ಅನುಭವಿಸುತ್ತಲೇ ಇದೆ. ತಮ್ಮ ವಸತಿ, ಬಟ್ಟೆ, ಓಡಾಟ, ಒಡನಾಟ ಉದ್ಯೋಗ, ಆಹಾರ, ನಿದ್ರೆ, ವಿದ್ಯೆಗಾಗಿ ಮಾತ್ರವಲ್ಲದೆ ಜೀವಂತವಾಗಿ ಬದುಕುವ ಹಕ್ಕಿಗಾಗಿ ಕೂಡ ಇಂದಿಗೂ ದಿನನಿತ್ಯ ಬಡಿದಾಟ ಹಾಗೂ ಹೋರಾಟಗಳನ್ನು ಮಾಡಬೇಕಾದ ಸ್ಥಿತಿ ಇದೆ. ಇದರ ಅರಿವು ಚೆನ್ನಾಗಿ ಲಕ್ಷ್ಮಣ್‌ರಿಗೂ ಇತ್ತು. ಅವರ ರಾಜಕೀಯ ಗ್ರಹಿಕೆ ಹೆಚ್ಚು ಪ್ರಬುದ್ಧವಾದುದಾಗಿತ್ತು. ದಲಿತರ ಸಮಸ್ಯೆಯನ್ನು ಅವರು ಕೇವಲ ಸಾಮಾಜಿಕ ನೆಲೆಗಟ್ಟಿನಲ್ಲಿ ಮಾತ್ರ ನೋಡದೆ ಅದರ ಆರ್ಥಿಕ ಆಯಾಮದ ಹಿನ್ನೆಲೆಯಲ್ಲಿ ಗ್ರಹಿಸಿದ್ದರು. ಅಂದರೆ ಜಾತಿವ್ಯವಸ್ಥೆ ಕೇವಲ ಮೇಲು ಕೀಳು ಭಾವನೆಗಳ ವಿಚಾರ ಮಾತ್ರವಲ್ಲ. ಅದು ಸಮಾಜದ ಸ್ಥಿತಿವಂತ ಮತ್ತು ಆಸ್ತಿವಂತ ವರ್ಗಗಳಿಗೆ ಆರ್ಥಿಕ ಲಾಭವನ್ನು ನೀಡುತ್ತಿರುವುದರಿಂದ ಆ ವ್ಯವಸ್ಥೆಯನ್ನು ಅವರು ಹಾಗೆಯೇ ಉಳಿಸಿಕೊಂಡು ಅದರ ಲಾಭದ ನಿರಂತರತೆಯನ್ನು ಕಾಪಾಡಿಕೊಂಡು ಹೋಗಲು ಬಯಸುತ್ತಿದ್ದಾರೆ. ಅವರು ಹಳೇ ಊಳಿಗಮಾನ್ಯ ವಿಚಾರವಾದ ಸನಾತನ ಬ್ರಾಹ್ಮಣಶಾಹಿ ಹಿಂದೂ ಧರ್ಮವನ್ನು ತಮಗೆ ಅನುಕೂಲ ಇರುವುದರಿಂದ ಬಳಸಿಕೊಳ್ಳುತ್ತಾ ದಲಿತ ಸಮುದಾಯವನ್ನು ಹೊಸಹೊಸ ತಂತ್ರಗಳಿಂದ ವಂಚಿಸುತ್ತಾ ಬರುತ್ತಿದ್ದಾರೆ ಎನ್ನುವುದನ್ನು ಲಕ್ಷ್ಮಣ್ ಕಂಡುಕೊಂಡಿದ್ದರು. ಹಿಂದೂಧರ್ಮ ಕೇವಲ ಬ್ರಾಹ್ಮಣಶಾಹಿ ಧರ್ಮವಾಗಿದೆ. ಆದರೆ ಅದರಲ್ಲಿ ದಲಿತ ಹಿಂದುಳಿದ ಸಮುದಾಯಗಳನ್ನು ಬಹಳ ನಾಜೂಕು ಹಾಗೂ ಕುತಂತ್ರಗಳಿಂದ ಗುರುತಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಆಸ್ತಿವಂತ ಹಾಗೂ ಸಾಮಾಜಿಕವಾಗಿ ಸ್ಥಿತಿವಂತ ವರ್ಗಗಳಿಗೆ ಇದರಿಂದಾಗಿ ಬಹುಸಂಖ್ಯಾತ ಜನರ ಶೋಷಣೆ ಮಾಡಲು ಅನುಕೂಲವಾಗುತ್ತಿದೆ. ಜನರ ಪ್ರತಿನಿಧಿಗಳೆಂದು ಅಧಿಕಾರಕ್ಕೆ ಬರುವ ಯಾವುದೇ ಪಕ್ಷಗಳ ಸರಕಾರಗಳಾದರೂ ಈ ಆಸ್ತಿವಂತ ಮತ್ತು ಸ್ಥಿತಿವಂತ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸಗಳನ್ನೇ ಮಾಡುತ್ತವೆ ಎಂಬುದನ್ನು ಲಕ್ಷ್ಮಣ್ ಅರಿತವರಾಗಿದ್ದರು. ತೊಂಬತ್ತರ ದಶಕದ ಬಲು ಪ್ರಚಲಿತ ಜಾಗತೀಕರಣ ಕೂಡ ದಲಿತರನ್ನು ಜಾಗತಿಕ ಪ್ರಜೆಗಳನ್ನಾಗಿ ನೋಡುತ್ತಿಲ್ಲ.

ಬದಲಿಗೆ ಜಾಗತಿಕ ಬಂಡವಾಳದಾರರು ಬಳಸಿ ಬಿಸಾಡುವ ಗುಲಾಮರನ್ನಾಗಿ ಮತ್ತು ಕಾರ್ಪೊರೇಟ್ ಕಂಪೆನಿಗಳಿಗೆ ಅಗ್ಗದ ಶ್ರಮಶಕ್ತಿಯ ಪೂರೈಕೆದಾರರನ್ನಾಗಿ ಮಾತ್ರ ಪರಿಗಣಿಸಿದೆ ಎನ್ನುವ ಗ್ರಹಿಕೆಯನ್ನು ಬೆಳೆಸಿಕೊಂಡಿದ್ದರು ಲಕ್ಷ್ಮಣ್. ಜಾತಿವಿನಾಶ ಸಾಧ್ಯವಾಗುವುದು ದಲಿತರಿಗೆ ದೇಶದ ಆಸ್ತಿ ಸಂಪತ್ತುಗಳಲ್ಲಿ ಸಮಾನ ಅವಕಾಶ ದೊರೆತು ರಾಜಕೀಯ ಅಧಿಕಾರದ ಅವಕಾಶಗಳಲ್ಲೂ ಸಮಾನ ಅವಕಾಶ ದೊರೆತಾಗ ಮಾತ್ರ ಎಂಬುದು ಲಕ್ಷ್ಮಣ್ ಗ್ರಹಿಕೆಯಾಗಿತ್ತು. ಹಾಗಾಗಿಯೇ ದಲಿತರಿಗೆ ಭೂಮಿ ಹಂಚಿಕೆಯಾಗಬೇಕೆಂಬುದು, ಭೂಮಾಲಕರ ಚಾಕರಿ, ಜೀತ ತೊಲಗಬೇಕೆಂಬುದು ಲಕ್ಷ್ಮಣ್‌ರ ಹಂಬಲವಾಗಿತ್ತು. ಅದಕ್ಕಾಗಿ ಸಮಾಜ ಕ್ರಾಂತಿಕಾರಿ ಬದಲಾವಣೆಗಳನ್ನು ಹೊಂದಬೇಕಾಗಿರುವ ಅಗತ್ಯವನ್ನು ಅವರು ಗ್ರಹಿಸಿ ಪ್ರತಿಪಾದಿಸುತ್ತಿದ್ದರು. ಅದಷ್ಟೇ ಅಲ್ಲದೇ ಸರಳ ಅಂತರ್ಜಾತಿ ವಿವಾಹ, ಬ್ರಾಹ್ಮಣಶಾಹಿ ವೈದಿಕ ಆಚರಣೆಗಳ ತಿರಸ್ಕಾರ, ಸಹಪಂಕ್ತಿ ಭೋಜನ, ದಲಿತ ದಮನಿತ ಸಮುದಾಯದಲ್ಲಿರುವ ಭಿನ್ನ ಭಿನ್ನ ಜಾತಿಗಳ ಜನರ ಒಗ್ಗೂಡುವಿಕೆಯ ಪ್ರಾಮುಖ್ಯತೆಯನ್ನೂ ಅವರು ಮನಗಂಡಿದ್ದರು. ದಲಿತ ಸಮೂಹದ ನಡುವೆಯೇ ಇರುವ ಜಾತೀಯತೆಯ ಕ್ರೂರತೆಯನ್ನೂ ನೇರವಾಗಿ ಅನುಭವಿಸಿದವರಾಗಿದ್ದರು ಲಕ್ಷ್ಮಣ್. ಜಾತೀಯ ಮನಸುಗಳನ್ನು ಬದಲಾಯಿಸಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಬೇಕೆಂಬ ತುಡಿತ ಅವರದಾಗಿತ್ತು. ಆದರೆ ಅವರು ಕೇವಲ ತಮ್ಮ ಹಂಬಲದ ಮಟ್ಟದಲ್ಲಿ ದಲಿತ ವಿಮೋಚನೆಯ ವಿಚಾರವನ್ನು ಉಳಿಸಿಕೊಂಡವರಾಗಿರಲಿಲ್ಲ. ಅವರು ಅರಿವು ಬಂದಾಗಿನಿಂದಲೂ ದಲಿತ ವಿಮೋಚನೆಗಾಗಿ ಕಾರ್ಯಕರ್ತರಾಗಿ ದುಡಿಯುತ್ತಾ, ಆಚರಣೆಯ ಮೂಲಕ ಅವರು ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರಕಟಿಸುತ್ತಾ ಬಂದವರಾಗಿದ್ದರು. ಅವರ ಈ ಪಯಣ ಎಂಬತ್ತರ ದಶಕದ ದಲಿತ ಚಳವಳಿಯಿಂದಲೇ ಆರಂಭವಾಗಿತ್ತು. ಅವರು ಸಂಬೋಳಿಯಲ್ಲಿ ತಾವು ಹೇಗೆ ದಲಿತ ಚಳವಳಿಯ ಮೂಲಕ ತಮ್ಮಂತೆಯೇ ಇರುವ ದಲಿತರ ಬದುಕು ಬೀದಿ ಪಾಲಾಗಿದ್ದನ್ನು ಕಂಡು ಕೇಳಿ ಅವುಗಳ ವಿರುದ್ಧ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾ ಸೋಲು ಗೆಲುವು ಗಳನ್ನು ಅನುಭವಿಸಿದ ಮೇಲೆ ಅಂಬೇಡ್ಕರ್, ಪೆರಿಯಾರ್, ಬಸವಣ್ಣನವರ ಪುಸ್ತಕ ಗಳನ್ನು ಓದಿದ ಮೇಲೆ ತಮಗೆ ಸರಕಾರಿ ಕೆಲಸ ಯಾಕೆ ಸಿಕ್ಕಿತು? ಬೀಗರ ಊಟ ಎಂದರೆ ಏನು? ಸವರ್ಣೀಯರೆಂದುಕೊಂಡಿರುವವರು ದಲಿತರನ್ನು ಮನೆ, ಬಾವಿ, ಹೊಟೇಲು, ದೇವ ಸ್ಥಾನಗಳಿಗೆ ಯಾಕೆ ಸೇರಿಸುವುದಿಲ್ಲ, ಏನೂ ತಪ್ಪು ಮಾಡದಿದ್ದರೂ ಸರಕಾರಿ ಕೆಲಸ ಯಾಕೆ ಹೋಯಿತು. ಅನ್ನೋದೆಲ್ಲಾ ಅರ್ಥವಾದವು ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ವೈವಾಹಿಕ ಜೀವನ ಕಟ್ಟಿಕೊಂಡಿದ್ದು ಕೂಡ ಈ ಪಯಣದ ಭಾಗವೇ ಆಗಿತ್ತು.

ದಲಿತ ಚಳವಳಿಯ ನಾಯಕರ ಸ್ವಾರ್ಥಲಾಲಸೆಗಳಿಂದಾಗಿ ಚಳವಳಿ ಮತ್ತು ದಮನಿತ ಸಮುದಾಯಗಳಿಗಾದ ನಷ್ಟದ ಬಗ್ಗೆ ವಿಮರ್ಶೆಗಳನ್ನು ನೇರವಾಗಿ ಮಾಡಿದವರಾಗಿದ್ದರು ಲಕ್ಷ್ಮಣ್. ದಲಿತ ನಾಯಕರೆಂದು ಹೇಳಿಕೊಳ್ಳುವ ಹಲವಾರು ಅಂತಹ ವ್ಯಕ್ತಿಗಳನ್ನು ಲಕ್ಷ್ಮಣ್ ಹತ್ತಿರದಿಂದ ನೋಡಿದವರಾಗಿದ್ದರು. ‘‘ಅಂದಿನ ದಲಿತ ದಂಡು ಇಂದು ಕಾಣೆಯಾಗಿದೆ. ಇಂದಿನ ಹೋರಾಟಗಳು ಸವಕಲು ನಾಣ್ಯದಂತಾಗಿವೆ. ಸಂಘಟನೆ ಮತ್ತು ದಲಿತರ ಹೆಸರೇಳಿಕೊಂಡು ದಲಿತರನ್ನೇ ವಂಚಿಸುವ, ದೋಚುತ್ತಿರುವ ಉದಾಹರಣೆಗಳುಂಟು. ಸಮೂಹ ಸಂಘಟನೆ ಮಾಯವಾಗಿ ವ್ಯಕ್ತಿಗಳ ಸಂಘಟನೆ ಗಳಾಗಿವೆ. ಧರಣಿ, ಜಾಥಾಗಳಲ್ಲಿ ವ್ಯಕ್ತಿಗಳಿಗೆ ಜಯವಾಗಲಿ ಎಂಬ ಘೋಷಣೆಗಳು ಕೇಳಿಸುತ್ತಿವೆ’’ ಎಂದು ದಲಿತ ಚಳವಳಿಯಿಂದ ಬೆಳೆದು ಬಂದ ನಾಯಕರು ತಲುಪಿರುವ ದುಸ್ಥಿತಿಯನ್ನು ತಮ್ಮ ಸಂಬೋಳಿಕೃತಿಯಲ್ಲಿ ಬರೆದಿದ್ದಾರೆ. ಆದರೆ ಲಕ್ಷ್ಮಣ್ ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಪಟ್ಟರೂ ಧೃತಿಗೆಡದೇ ಹಲವು ಯುವಕರಿಗೆ ಸಾಮೂಹಿಕ ಬದ್ಧತೆಯಿಂದಲೇ ಹೋರಾಟದ ಸ್ಫೂರ್ತಿ ತುಂಬು ತ್ತಿದ್ದರು. ಅವರ ಕಾಳಜಿ ಮತ್ತು ಕಾರ್ಯಗಳು ಈ ನಿಟ್ಟಿನಲ್ಲಿಯೇ ಸಾಗಿ ಬಂದಿದ್ದವು. ಇವೆಲ್ಲದರ ಮಧ್ಯೆಯೇ ಅವರು ತಮ್ಮ ಲೇಖನ, ಕತೆ, ಕಾದಂಬರಿ, ಕವನಗಳನ್ನು ರಚಿಸಿ ಪ್ರಕಟಿಸುತ್ತಿದ್ದರು. ಲಕ್ಷ್ಮಣ್‌ರ ಕತೆಗಳು, ಕಾದಂಬರಿಗಳು, ಲೇಖನಗಳ ಸಂಗ್ರಹಗಳು, ಕವನಗಳು, ಪ್ರವಾಸ ಕಥನ ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಲಕ್ಷ್ಮಣ್‌ರ ಎಲ್ಲಾ ಬರಹಗಳು ತಳ ಸಮುದಾಯದ ನೋವು, ಅಸಹಾಯಕತೆ, ಸಿಟ್ಟು, ಸಂಕಟ, ತಳಮಳಗಳನ್ನು, ತುಮುಲಗಳನ್ನು ಕಟ್ಟಿಕೊಡುವಂತಹವುಗಳು. ಅವುಗಳಲ್ಲಿ ರೋಚಕತೆಯಾಗಲೀ, ರಂಜಕತೆಯಾಗಲೀ ರಮ್ಯತೆಗಳಾಗಲೀ ಇಲ್ಲವೆನ್ನುವಷ್ಟು ಕಡಿಮೆ. ಅಂದರೆ ಅವರ ಕೃತಿಗಳಲ್ಲಿ ಈ ಅಂಶ ಗಳು ಇಲ್ಲವೆಂದು ಅರ್ಥವಲ್ಲ. ಅವುಗಳು ಸಹಜವಾದ ರೀತಿಯಲ್ಲಿ ಕೃತಿಯಲ್ಲಿ ಸೇರಿಕೊಂಡು ಓದುಗರನ್ನು ಓದಿಸಿಕೊಂಡು ಹೋಗುವ ಗುಣವನ್ನು ಪಡೆಯುತ್ತವೆ. ಓದುಗರನ್ನು ಆರಂಭದಲ್ಲಿ ಒಳಗೊಳಿಸಲು ಸ್ವಲ್ಪತಿಣುಕಾಡಿದರೂ ನಂತರ ಓದುಗರನ್ನು ಹಿಡಿದಿಟ್ಟುಕೊಂಡು ಓದಿಸುವಂತಹ ಕೃತಿಗಳಾಗಿವೆ.

ಲಕ್ಷ್ಮಣ್‌ರಂತಹ ಒಬ್ಬ ಸಹೃದಯಿ ಹೋರಾಟಗಾರ ಇಂದು ನಮ್ಮಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರು ನಡೆಸಿದ ಹೋರಾಟಗಳು, ಬರೆದ ಕೃತಿಗಳು ನಮ್ಮ ಮುಂದಿವೆ. ಆಳುವಂತಹ ಶಕ್ತಿಗಳು ದೇಶವನ್ನು ನಿರಂಕುಶ ಫ್ಯಾಶಿಸ್ಟ್ ವ್ಯವಸ್ಥೆಯತ್ತ ಕೊಂಡೊಯ್ಯುತ್ತಿವೆ. ಅದರ ಪರಿಣಾಮ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ಕೊಲೆಗಳು ಹಿಂದಿಗಿಂತಲೂ ಹೆಚ್ಚಾಗುತ್ತಿರುವ ಸಂದರ್ಭ ಇದಾಗಿದೆ. ಉನಾ, ಕೋರೆಗಾಂವ್, ತುಮಕೂರು, ವಿಜಯಪುರ, ಗುಡಿಬಂಡೆಯಂತಹ ಘಟನೆಗಳು ಹೆಚ್ಚು ಹೆಚ್ಚು ನಡೆಯುತ್ತಿರುವ ಸಂದರ್ಭವಿದು. ಇಂತಹ ಸಂದರ್ಭದಲ್ಲಿ ಲಕ್ಷ್ಮಣ್‌ರ ಆಶಯಗಳು ಕೈಗೂಡುವವರೆಗೂ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕಾದ ಕರ್ತವ್ಯ ಸಹೃದಯವಿರುವ ಎಲ್ಲರದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)