varthabharthiಭೀಮ ಚಿಂತನೆ

ಡಾ. ಬಿ. ಆರ್. ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಪುಣೆಯಲ್ಲಿನ ಪರ್ವತೀ ಸತ್ಯಾಗ್ರಹ ಪ್ರಕರಣ

ವಾರ್ತಾ ಭಾರತಿ : 30 Nov, 2018

ಭಾಗ 6

ನೀಚ ಕುಟಿಲ ಭೇದ ನೀತಿ

ಅಸ್ಪಶ್ಯ ವರ್ಗವು ಮೋಸ ಹೋದಲ್ಲಿಗೆ ಈ ಪ್ರಸಂಗ ಮುಗಿದಿದ್ದರೂ ಸಾಕಿತ್ತು. ಆದರೆ ದುರದೃಷ್ಟವಶಾತ್ ಹಾಗಾಗಲಿಲ್ಲ. ಅಸ್ಪಶ್ಯತಾ ನಿವಾರಕ ಮಂಡಳಿಯ ಬೆಂಬಲ ಹೋದರೆ ಹೋಗಲಿ, ಆದರೆ ಅದಕ್ಕೆ ಸರಿಯಾಗಿ ಪುಣೆಯಲ್ಲಿ ಅಸ್ಪಶ್ಯ ವರ್ಗವನ್ನು ಆಘಾತಿಸುವ ಯತ್ನವಾಯಿತು. ಪುಣೆಯ ಮಾತಂಗ ಸಮಾಜದ ನಾಯಕನೆನಿಸಿಕೊಂಡ ಸಕಟರು, ಸತ್ಯಾಗ್ರಹಕ್ಕೂ ತಮಗೂ ಏನೇನೂ ಸಂಬಂಧವಿಲ್ಲ ಎಂದು ಸಾರಿ, ಒಳ್ಳೆ ಆಯಕಟ್ಟಿನ ಸಮಯದಲ್ಲಿ ಸತ್ಯಾಗ್ರಹಿಗಳಿಗೆ ಮೋಸ ಮಾಡಿದರು. ಅದೇ ರೀತಿ ಪುಣೆಯಲ್ಲಿ ಹರಳೇ ಚಮ್ಮಾರ ಸಮಾಜದ ಕೆಲ ನಾಯಕರು, ತಾವು ಈ ಸತ್ಯಾಗ್ರಹದಲ್ಲಿ ಭಾಗವಹಿಸಲು ಸಿದ್ಧರಿಲ್ಲವೆಂದು ಸಾರಿದರು. ಮತ್ತು ಎಲ್ಲಕ್ಕೂ ಬೇಸರದ ವಿಷಯವೆಂದರೆ, ಆ ಅಸ್ಪಶ್ಯ ವರ್ಗದಲ್ಲಿ, ಬಹುಸಂಖ್ಯಾತರೆಂಬ ಕಾರಣಕ್ಕೆ ಮಹಾರ್ ಜಾತಿಯ 60-65 ಜನರ ಸಹಿಯುಳ್ಳ ಪತ್ರವೊಂದು ‘ಕೇಸರಿ’ಯಲ್ಲಿ ಪ್ರಕಟಿಸಲ್ಪಟ್ಟು, ಸತ್ಯಾಗ್ರಹಕ್ಕೆ ಮಹಾರ್ ಜಾತಿಯ ವಿರೋಧವಿದೆಯೆಂದು ಸಾರಲಾಯಿತು. ಇದೆಲ್ಲಾ ತನ್ನಷ್ಟಕ್ಕೆ ಆಯ್ತೋ, ಇಲ್ಲ ಇದು ಯಾರದೋ ಕೈವಾಡವೋ, ವಿಚಾರ ಮಾಡಬೇಕಾಗಿದೆ. ಇದು ನಿಜಕ್ಕೂ ಯಾರೋ ನೀಚ ವ್ಯಕ್ತಿಗಳ ಕೆಲಸವೆಂದು ನಮಗೆ ಖಂಡಿತವಿದೆ. ನಿಜಕ್ಕೂ ಪುಣೆಯ ಅಸ್ಪಶ್ಯರು ಸತ್ಯಾಗ್ರಹದ ವಿರುದ್ಧವಿದ್ದಿದ್ದರೆ, ಹಾಗೆಂದು ಅವರು ಎಂದೋ ಸಾರುತ್ತಿದ್ದರು. ಇಷ್ಟು ದಿನಗಳ ಕಾಲ ಸುಮ್ಮ್ಮನಿರುತ್ತಿರಲಿಲ್ಲ.

ಅವರನ್ನು ಮೋಸಗೊಳಿಸಿದವರಾರೆಂದು ತಿಳಿದಿದ್ದರೆ ಒಳ್ಳೆಯದಿತ್ತು. ಹಾಗೆಯೇ ಇದು, ಅಸ್ಪಶ್ಯರೊಡನೆ ಸಹಾನುಭೂತಿ ತೋರಲೆಳಸುವವರ ಕೃತ್ಯವೇ ಇರಬೇಕು. ಯಾವ ಮಹಾರರು ಸತ್ಯಾಗ್ರಹದ ವಿರುದ್ಧ ದನಿಯೆತ್ತಿದರೋ, ಅವರು, ಸತ್ಯಾಗ್ರಹದ ದಿನ ಪರಿಸ್ಥಿತಿ ನೋಡಿ, ನಿಶ್ಶಂಕೆಯಿಂದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದನ್ನು ಕಂಡು ನಮಗೆ ಆನಂದವಾಗಿದೆ. ನಮ್ಮ ಅಸ್ಪಶ್ಯ ಬಂಧುಗಳು ತಮ್ಮ ಉನ್ನತಿಯ ವಿಷಯದಲ್ಲಿ ಯಾರೇ ಸ್ಪಶ್ಯ ಜನರ ಸಲಹೆಯಲ್ಲಿ ವಿಶ್ವಾಸವಿಟ್ಟು ನಡೆಯುವುದು ಬೇಡ ಎಂದು ನನ್ನ ಸಲಹೆ; ಇಲ್ಲವಾದರೆ, ಪುಣೆಯಲ್ಲಾದಂತಹ ಪರಿಸ್ಥಿತಿ ಎಲ್ಲೆಡೆ ಆಗುವುದು ನಿಸ್ಸಂಶಯ.

ಅಸ್ಪಶ್ಯ ನಿವಾರಣೆ ಪ್ರಸಾರ ಮಾಡಿ ದೇವಳಗಳನ್ನು ಮುಕ್ತವಾಗಿಸ ಬಹುದೆಂದು ಪ್ರತಿಪಾದಿಸಿದವರು ಮತ್ತು ಹಾಗೆ ಮಾಡಿ ಸತ್ಯಾಗ್ರಹಿಗಳಾಗಲು ಅಸ್ಪಶ್ಯ ಮನೋಭೂಮಿಕೆ ಸಿದ್ಧ ಮಾಡಲು ಕಾರಣರಾದವರೇ ಕೊನೆಯ ಗಳಿಗೆಯಲ್ಲಿ ಸತ್ಯಾಗ್ರಕ್ಕೂ ತಮಗೆ ಸಂಬಂಧವಿಲ್ಲವೆಂದು ಅವಸಾನಘಾತ ಮಾಡಿದರು. ಇಂತಹ ನೀಚರನ್ನು ಪುಣೆಯ ಸನಾತನರ ಸಭೆಯಲ್ಲಿ ನಿಷೇಧಿಸಿದ್ದು ಯುಕ್ತವೇ ಆಗಿದೆ ಎಂದು ನಮಗೆ ಅನಿಸುತ್ತದೆ.

ಸತ್ಯಾಗ್ರಹಕ್ಕೆ ಬೆಂಬಲ ಕೊಡದಿರುವುದಕ್ಕೆ ಅನೇಕ ಕಾರಣಗಳನ್ನು ಕೊಡಲಾಗಿದೆ. ಅವುಗಳಲ್ಲೊಂದು, ಈ ಸತ್ಯಾಗ್ರಹವು ಕೇವಲ ಹೆಸರಿಗಾಗಿ ಮಾಡುವಂತಹುದು ಎಂಬುದು. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ರಾಜಭೋಜಾದಿ ಮಂದಿಗೆ, ರಾಜಭೋಜ ಸಂಪ್ರದಾಯದಂತೆ ದೇವಾಲಯವನ್ನು ಸ್ವೇಚ್ಛೆಯಿಂದ ಮುಕ್ತವಾಗಿಸುವ ಘನತೆಯಿಲ್ಲ. ಕಾರಣ, ಹಾಗಿರಲು ಬೇಕಾಗಿರುವ ಪರಾಕ್ರಮ ಶ್ರೇಯ ಹಾಗೂ ಸ್ವಾವಲಂಬನ ಶ್ರೇಯ ಅವರಲ್ಲಿಲ್ಲ.

ಬದಲಿಗೆ, ‘‘ಸ್ವೇಚ್ಛೆಯಿಂದ ದೇವಳವನ್ನು ಮುಕ್ತವಾಗಿಸುವವರಿಗೆ, ನೀವು ಕೆಲ ಅಸ್ಪಶ್ಯರನ್ನು, ವಿಶೇಷವಾಗಿ ಅವರಲ್ಲಿನ ಪರಾಕ್ರಮೇಚ್ಛು ರಾಜಭೋಜ ಸಂಪ್ರದಾಯದ ನಾಯಕರನ್ನು ಎಂತಾದರೂ ಸತ್ಯಾಗ್ರಹಕ್ಕೆ ಕರೆತಂದು, ಮತ್ತೆ ಸತ್ಯಾಗ್ರಹವನ್ನು ವಿರೋಧಿಸಿ. ಸತ್ಯಾಗ್ರಹದ ಶಾರೀರಿಕ ತ್ರಾಸ ಸಹಿಸದ ಶ್ರೇಯ, ವೃತ್ತ ಪತ್ರಿಕೆಯಲ್ಲಿ ಪ್ರಕಟವಾದ ಬಳಿಕ, ಈ ಪರಾಕ್ರಮಿಗಳ ಪರಾಕ್ರಮದೆದುರು ಸೋತು, ದೇವಳವನ್ನು ತೆರೆದಿಡಬೇಕಾಯಿತು ಎನ್ನಿ. ಅಂದರೆ, ಅಸ್ಪಶ್ಯತಾ ನಿವಾರಣೆಯೂ ಆದಂತಾಯಿತು, ರಾಜಭೋಜ ಸಂಪ್ರದಾಯದ ಪರಾಕ್ರಮ ಶ್ರೇಯವನ್ನು ಸಾಧಿಸಿದಂತಾಯಿತು.’’ ಎಂದು ಹೇಳಿ, ಯಾವ ಸ್ಪಶ್ಯ ಹಿಂದೂಗಳಿಗೆ ಸ್ವಸಂತೋಷದಿಂದ ದೇವಳವನ್ನು ಮುಕ್ತವಾಗಿಸುವ ಹೃದಯವಂತಿಕೆ ಇರುವುದೋ ಅವರಿಗೆ ಇಂತಹ ಭಾಷೆ ಶೋಭಿಸುವುದು. ಆದರೆ ಯಾರಲ್ಲಿ ಅಂತಹ ಔದಾರ್ಯ ಇಲ್ಲವೋ, ಅಂತಹವರು, ದೈತ್ಯರು ತಮ್ಮನ್ನೇ ದೇವರೆಂದು ಕೊಂಡಂತೆ. ಉಕ್ತ ಹೇಳಿಕೆಯಲ್ಲಿ ಸಾಕಷ್ಟು ತಥ್ಯಾಂಶ ಇದ್ದರೂ, ಅಸ್ಪಶ್ಯರು ತಮ್ಮ ಹಕ್ಕು ಸಂಪಾದನೆಯಲ್ಲಿ ಯಾಚಕರಾಗುವುದೇಕೆ? ಬೆಳಗ್ಗೆ, ಸಂಜೆ ಪುಕ್ಕಟೆ ಸುಗ್ರಾಸ ಭೋಜನ ಸಿಗುವಂತಿರುವಾಗ, ಅದನ್ನು ಬಿಟ್ಟು, ಸ್ವಕಷ್ಟಾರ್ಜಿತ ರೊಟ್ಟಿಗಾಗಿ ಯತ್ನಿಸುವವನಿಗೆ ಪರಾನ್ನಪುಷ್ಟ ಬ್ರಾಹ್ಮಣನಂತೆ ಯಾವುದೇ ದೋಷ ಬರುವುದೆಂದು ನಮಗನಿಸುವುದಿಲ್ಲ. ಆದರೆ ಯಾಚಕವೃತ್ತಿಯ ಸಂಭಾವಣೆಯಿಲ್ಲದೆ ಕ್ಷಾತ್ರತೇಜ ತೋರಿ, ಅಸ್ಪಶ್ಯರು ತಮ್ಮ ಹಕ್ಕಿಗಾಗಿ ಪ್ರತ್ನಿಸಿದರೆ ದೋಷವೇನೋ ತಿಳಿಯದು. ಸತ್ಯಾಗ್ರಹ ಮಾಡುವವರ ಕಾರಣ ಎಷ್ಟೇ ದೋಷಾಸ್ಪದವಿದ್ದರೂ, ಅದರಿಂದಾಗಿವರ ಧ್ಯೇಯ ದೂಷಿತವಾಗುವುದೆಂತು ಎಂದೇ ನಮಗೆ ತಿಳಿಯುತ್ತಿಲ್ಲ. ಸಾಧನೆಯ ಒಳಿತು ಕೆಡುಕು ಎಲ್ಲವೂ ಅದರ ಪರಿಣಾಮದ ಮೇಲೇ ನಿರ್ಧರಿಸಲ್ಪಡಬೇಕು. ಅರ್ಥಾತ್, ಸತ್ಯಾಗ್ರಹದ ವಿರುದ್ಧ ಸಾರಲಾದ ಮಾತು ಸರ್ವತಾ ಸುಳ್ಳು ಎಂದೇ ಹೇಳಬೇಕು. ಸತ್ಯಾಗ್ರಹದ ವಿರುದ್ಧ ಎದ್ದಿರುವ ಎರಡನೇ ಸಬೂಬು ಕೂಡ ಅಷ್ಟೇ ವ್ಯರ್ಥವಾದುದು. ಅದೆಂದರೆ ಅಸ್ಪಶ್ಯತಾ ನಿವಾರಣೆಯ ಪ್ರಶ್ನೆಯನ್ನು ಮತಪರಿವರ್ತನೆಯಲ್ಲಿಗೆ ಬಿಟ್ಟು ಬಿಡಬೇಕು; ಸತ್ಯಾಗ್ರಹವನ್ನು ಬಿಟ್ಟು ಹೋಗಬಾರದು. ಹಾಗೆ ಬಿಟ್ಟು ಹೋದರೆ ಇನ್ನೂ ಹೆಚ್ಚು ಬಿಕ್ಕಟ್ಟು ಉಂಟಾಗುವುದು. ಅಸ್ಪಶ್ಯತಾ ನಿರ್ಮೂಲನವೆಂದರೆ ಸ್ಪಶ್ಯ ಹಿಂದೂಗಳ ಮತಪರಿವರ್ತನೆ ಎಂಬುದೇನೋ ಸರಿ, ಆದರೆ, ಸತ್ಯಾಗ್ರಹ ಮತ್ತು ಮತಪರಿವರ್ತನೆ, ಭಿನ್ನ ಹಾಗೂ ಪರಸ್ಪರ ವಿರೋಧಿ ಎಂದೊಪ್ಪಲು ನಾವು ಸಿದ್ಧ್ದರಿಲ್ಲ. ಯಾವ ಜನರು ಮತಪರಿವರ್ತನೆಯ ಮಹಿಮೆಯನ್ನು ಕೀರ್ತಿಸತೊಡಗಿರುವರೋ, ಆ ಜನರು, ಮತಪರಿವರ್ತನೆಯ ಹಾದಿ ಯಾವುದೆಂದಾದರೂ ನಿಶ್ಚಿತವಾಗಿ ಹೇಳಲಿ. ವ್ಯಾಖ್ಯಾನದಂತಹ ಉಪಾಯದಿಂದ ಹಿಂದೂ ಜನತೆಯ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲವೆಂಬ ಅನುಭವ ಎಲ್ಲರಿಗೂ ಆಗಿದೆ. ಕಾರಣ ಹಿಂದೂ ಜನತೆ, ರಾಮದಾಸರು ಅನ್ನುವಂತೆ ಸಿದ್ಧ, ಸಾಧಕ ಮತ್ತು ಮುಮುಕ್ಷು ಈ ಯಾವ ವರ್ಗದಲ್ಲೂ ಬರುವುದಿಲ್ಲ. ಅದು ಕೇವಲ ಬದ್ಧ ವರ್ಗದಲ್ಲಿ ಮಾತ್ರ ಬರಬಲ್ಲುದು. ಇಂತಹ ಬದ್ಧ ವರ್ಗದ ಮತ ಪರಿವರ್ತನೆ ಮಾಡಲು ವ್ಯಾಖ್ಯಾನವಲ್ಲದೆ ಬೇರೇನಾದರೂ ದಾರಿಯಿದ್ದಲ್ಲಿ ಅದನ್ನು ಪರಾಂಬರಿಸಿ ನೋಡಲು ನಮ್ಮ ಅಡ್ಡಿಯಿಲ್ಲ. ಆದರೆ ಹಾಗೊಂದು ಮಾರ್ಗ ಇದೆಯೆಂಬ ಕಲ್ಪನೆಯೇ ನಮಗಿಲ್ಲ. ಬದಲಿಗೆ, ಸತ್ಯಾಗ್ರಹ ಮತ್ತು ಮತಪರಿವರ್ತನೆ ಇವೆರಡು ಬಿನ್ನ, ಹಾಗೂ ಪರಸ್ಪರ ವಿರೋಧಿ ಮಾರ್ಗಗಳಾಗಿರದೆ, ಸತ್ಯಾಗ್ರಹವು, ಮತಪರಿವರ್ತನೆಯನ್ನು ಸಾಧ್ಯವಾಗಿಸುವ ದೊಡ್ಡ ಸಾಧನ ಎಂದು ನಮಗೆ ಖಂಡಿತವಿದೆ. ಬದ್ಧ ಜನರ ಯಾವುದೇ ಪ್ರಶ್ನೆಗೆ ಜ್ಞಾನಯುಕ್ತ ಧಾರಣೆಯನ್ನು ತರಲು ಅವರ ಆಚಾರ, ವಿಚಾರಗಳಲ್ಲಿ ದೊಡ್ಡ ಕ್ರಾಂತಿಯಾಗಬೇಕು. ಅದಲ್ಲದೆ ಅವರ ಆತ್ಮ ನಿರೀಕ್ಷಣೆಗೆ ಉದ್ಯುಕ್ತರಾಗುವುದಿಲ್ಲ, ಮತ್ತು ಹಾಗಾಗುವವರೆಗೆ ಅವರಿಂದ ಮತಾಂತರವಾಗುವುದೂ ಇಲ್ಲ.

ಈ ಯುಕ್ತಿವಾದವು ಗ್ರಾಹ್ಯವೆನಿಸಿದರೆ ಮತ್ತು ಕಣ್ಣಲ್ಲಿ ಅಂಜನ ಹಾಕದ ಹೊರತು, ಜ್ಞಾನವಿಲ್ಲ ಎಂಬುದನ್ನು ಒಪ್ಪಿಕೊಂಡರೆ ಸತ್ಯಾಗ್ರಹ ದಂತೆ ಸಮಾಜದ ದುರಾಗ್ರಹವನ್ನು ಕಳೆಯುವ ಮಾರ್ಗ ಬೇರಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಕಾರಣ, ಅದರ ಆಘಾತ, ಪ್ರತ್ಯಕ್ಷವಾಗಿ ಆಚಾರದ ಮೇಲೆ ಆಗುವುದರಿಂದ ಅದು ಪ್ರತಿಯೊಬ್ಬರನ್ನೂ ವಿಚಾರಕ್ಕೆ ಹಚ್ಚುತ್ತದೆ. ಇದರ ಪ್ರತ್ಯಂತರವು ಸ್ವತಃ ಪುಣೆಯಲ್ಲೇ ಕಾಣ ಸಿಕ್ಕಿದೆ. ಪುಣೆಯಲ್ಲಿ ಈಗ ಎದ್ದಿರುವ ಗೊಂದಲ ಮತ್ತ್ತು ಅಸ್ಪಶ್ಯತಾ ನಿವಾರಣೆಯ ವಿಷಯದಲ್ಲಿ ಏನೂ ಅರಿಯದವರಾಗಿದ್ದರೋ, ಅವರೇ ಈಗ ಬಹಿಷ್ಕೃತರ ಪಕ್ಷದಲ್ಲಿರುವುದು ಯಾವುದರ ಪರಿಣಾಮ? ಇದಕ್ಕೆ ಒಂದೇ ಉತ್ತರ ಎಂದು ನಮ್ಮ ಅಭಿಪ್ರಾಯ. ಅದು ಸತ್ಯಾಗ್ರಹವೊಂದೇ ಕಾರಣ ಎಂಬುದು. ಸತ್ಯಾಗ್ರಹವೆಂದರೆ ಮೂಗು ತಿರುಗಿಸುವ ‘ಕೇಸರಿ’ ಬಳಗ, ಸತ್ಯಾಗ್ರಹದಿಂದ ಒಪ್ಪಂದಕ್ಕೆ ಬರಲು ತನ್ನ ಸಹಮತವಿತ್ತೆಂಬುದನ್ನು ಕೇಸರಿಯಲ್ಲಿ ಅಲ್ಲಗೆಳೆದಿದ್ದಾರೆ.

ಸತ್ಯಾಗ್ರಹದಿಂದಾಗಿಯೇ ಕೇಸರಿ, ತನ್ನ ಮತದಂತೆ ಕೃತಿಗಿಳಿಯುವುದು ಸಾಧ್ಯವಾಯಿತು. ಇದು ಸತ್ಯಾಗ್ರಹದ ಸಾಮರ್ಥ್ಯದ ದೊಡ್ಡ ಸಾಕ್ಷಿಯೇ ಸರಿ. ಯಾವ ಜನರು ಇಂತಹ ಪರಿಣಾಮಕಾರಿ ಉಪಾಯಕ್ಕೆ ಬೆಚ್ಚಿಬೀಳುತ್ತಾರೋ ಮತ್ತು ಅದರ ಅವಲಂಬನೆ ನಿಷಿದ್ಧವೆನ್ನುತ್ತಾರೋ, ಅಂಥವರಿಗೆ ಧ್ಯೇಯದ ಬಗ್ಗೆ ನಿಷ್ಠೆ ಇರದೆ, ಬದಲಿಗೆ ಕೇವಲ ವಾಚಾಳಿತನವಿದೆ ಎನ್ನಬೇಕಾಗಿದೆ.

ಒಪ್ಪಂದದ ನಿಷ್ಫಲತೆಯ ಕಾರಣಗಳು

ಈಗ ಈ ಒಪ್ಪಂದ ನಿಷ್ಫಲವೆಂದಾದುದು ನಿಜ. ಅದರ ದೋಷವನ್ನು ಸತ್ಯಾಗ್ರಹದ ಮೇಲೆ ಹೊರಿಸದೆ, ಮಧ್ಯಸ್ಥರ ದೌರ್ಬಲ್ಯದ ಮೇಲೆ ಹೊರಿಸಬೇಕು. ಈ ಒಪ್ಪಂದದ ಕಾರ್ಯವನ್ನು ಕೇಳ್ಕರ್, ಭೋಪಟ್‌ಕರ್ ಮತ್ತು ಭಾಟೆ ಅವರ ಮೇಲೆ ಹೊರಿಸಲಾಗಿರುವುದು ನಮಗೆ ಆಶ್ಬರ್ಯವಾಗಿದೆ. ಒಪ್ಪಂದ ಮಾಡಿಸುವವರಲ್ಲಿ ಎರಡರಲ್ಲಿ ಒಂದಾದರೂ ಗುಣವಿರಬೇಕು. ಒಂದೋ ಅವರಲ್ಲಿಷ್ಟು ಕಾಠಿಣ್ಯವಿರಬೇಕು, ಅದರಂತೆ ಜನತೆ ಅವರ ಮಾತನ್ನು ಒಪ್ಪಿಕೊಳ್ಳಬೇಕು. ಸಾಮೋಪಚಾರದ ಮಾತುಗಳನ್ನು ಕೇಳದಿದ್ದರೆ, ಒಪ್ಪಂದಕ್ಕೆ ಬರದಿದ್ದರೆ, ಮಧ್ಯಸ್ಥರ ಮನನೊಂದು ಅವರು ಸತ್ಯದ ಪಕ್ಷ ಹಿಡಿದು, ತಮ್ಮನ್ನೆದುರಿಸಬಹುದೆಂದು ದುರಾಗ್ರಹಿ ಪಕ್ಷಕ್ಕೆ ಭಯವೆನಿಸಬೇಕು. ಈ ಎರಡೂ ದೃಷ್ಟಿಯಿಂದ ನೋಡಿದರೆ ಈ ಮಧ್ಯಸ್ಥರು ಬರೀ ನಿಷ್ಪ್ರಯೋಜಕರೆನ್ನದೆ ಗತ್ಯಂತರವಿಲ್ಲ. ಕಾರಣ ಬಹುಜನ ಸಮಾಜದ ಮೇಲೆ ಅವರ ಮಾತುಗಳು ಯಾವುದೇ ಪ್ರಭಾವ ಬೀರುವಂತಿಲ್ಲ. ಅಸ್ಥಿರಬುದ್ಧಿ ಮತ್ತು ಅನಿಶ್ಚಿತ ಕೃತಿಯಿಂದಾಗಿ ಕೇಳ್ಕರ್ ಅವರಿಗೆ ಮಹಾರಾಷ್ಟ್ರದಲ್ಲಿ ಮಾನವಿಲ್ಲ ಎಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲವೆಂದು ನಮಗನಿಸುತ್ತದೆ. ಈ ಮಧ್ಯಸ್ಥರ ಬದಲಿಗೆ ಸರಿಯಾದ ಹಿಂದೂ ಧರ್ಮಜ್ಞಾನವುಳ್ಳ ಶಂಕರಾಚಾರ್ಯರು ಈ ಕೆಲಸವನ್ನು ಕೈಗೆತ್ತಿಕೊಂಡಿದ್ದರೆ, ಎಲ್ಲಾದರೂ ಅದರಲ್ಲಿ ಹೆಚ್ಚಿನ ಯಶ ಪ್ರಾಪ್ತವಾಗುತ್ತಿತ್ತೋ ಇಲ್ಲವೋ! ಕರಾರುವಾಕ್ಕಾಗಿ ಹೇಳುವುದಾದರೆ, ಶೂನ್ಯವೆಂದೇ ಹೇಳಬೇಕು. ಯಾವ ಮನುಷ್ಯನು ಅನ್ಯಾಯವನ್ನೆದುರಿಸಲು ತಾನೇನೂ ಮಾಡಲಾರೆನೆಂದು ಮೊದಲೇ ಸಾರಿ ಬಿಡುವನೋ, ಅವನು ತನ್ನ ಹಕ್ಕು ಸಂರಕ್ಷಣೆಯ ಪ್ರೀತ್ಯರ್ಥ ನ್ಯಾಯ, ನೀತಿ ಎಂದು ಎಷ್ಟೇ ಬಡಕೊಂಡರೂ, ಯಾರೂ ಆಲಿಸುವವರಿಲ್ಲವೆಂಬ ಅನುಭವ ಎಲ್ಲರಿಗೂ ಆಗಿರುತ್ತದೆ. ಭಾಟೆ, ಕೇಳ್ಕರ್ ಹಾಗೂ ಭೋಪಟ್‌ಕರ್ ಅವರು ಹೀಗೆ ತಾವು ಸತ್ಯಾಗ್ರಹಕ್ಕಿಳಿಯಲಾರೆವೆಂದು ಸಾರಿದ್ದಾರೆ. ಅಷ್ಟೇ ಅಲ್ಲ, ಸತ್ಯಾಗ್ರಹಕ್ಕಿಳಿವೆವೆಂದವರನ್ನು ‘ಕೇಸರಿ’ಯಲ್ಲಿ ನಿಂದಿಸಿದ್ದಾರೆ. ಸತ್ಯಾಗ್ರವೆಂದರೆ, ಮದ್ಯಪಾನ ಮತ್ತು ವೇಶ್ಯಾಗಮನದಂತಹ ದೊಡ್ಡ ಪಾತಕವೇ?

ಇಂತಹ ದುರ್ಬಲರ ಕೈಯಿಂದ, ಬೇಕಾದ ಒಪ್ಪಂದ ನಡೆಯಲಿಲ್ಲವೆಂದರೆ, ಅದು ಮಧ್ಯಸ್ಥರ ದೌರ್ಬಲ್ಯದ ಪರಿಣಾಮವೇ ಹೊರತು, ಸತ್ಯಾಗ್ರಹದ್ದಲ್ಲ ಎಂದೇ ಹೇಳಬೇಕು.

ಮತವರಿವರ್ತನೆಯ ತಂಬೂರಿ ಬಾರಿಸುವವರಿಗೊಂದು ಪ್ರಶ್ನೆ

 ಈ ಮತಪರಿವರ್ತನವಾದಿಗಳಿಗೆ ನನ್ನದೊಂದು ಪ್ರಶ್ನೆ; ಅಸ್ಪಶ್ಯರ ದೇವಳ ಪ್ರವೇಶಕ್ಕೆ ಮುನ್ನ ಎಷ್ಟು ಕಾಲ ಮತ್ತು ಎಷ್ಟು ಜನರ ಮತಪರಿವರ್ತನೆ ಮಾಡುವರು? ಎಲ್ಲ ಸ್ಪಶ್ಯ ಹಿಂದೂಗಳ ಮತಪರಿವರ್ತನೆ ಆಗದ ಹೊರತು, ಅಸ್ಪಶ್ಯರಿಗೆ ಮಂದಿರ ಪ್ರವೇಶವಿಲ್ಲ ಎಂದೇನಾದರೂ ಅವರ ವಿಚಾರವಿದ್ದರೆ, ಅಸ್ಪಶ್ಯರು ಅನಂತಕಾಲ ಕಾದಿರಬೇಕಾದೀತು ಮತ್ತು ಆ ಕಾರಣದಿಂದ ಈ ವಿಚಾರ ಅವ್ಯವಹಾರಿಕ ಎಂದು ಬಿಟ್ಟು ಬಿಡಬೇಕು. ಈಗ ಸ್ಪಶ್ಯ ಹಿಂದೂ ಸಮಾಜದಲ್ಲಿನ ಬಹುಜನ ಸಮಾಜದ ಮತಪರಿವರ್ತನೆ ಆಯಿತೆಂದರೆ, ಮತ್ತೆ ಅಸ್ಪಶ್ಯರು ಮಂದಿರ ಪ್ರವೇಶದ ಪ್ರಯತ್ನ ಮಾಡಬಹುದೆಂದು ಮತಪರಿವರ್ತನೆವಾದಿಗಳ ಧ್ಯೇಯವಿದ್ದರೆ, ಅದರಿಂದ ಸತ್ಯಾಗ್ರಹದ ಅಗತ್ಯ ಕಡಿಮೆಯಾಗದೆ, ಬದಲಿಗೆ ಹೆಚ್ಚೇ ಆಗುವುದೆಂದು ಸಾಬೀತಾಗುವುದು. ಕಾರಣ, ಮತಪರಿವರ್ತನೆಯಾಗದ ಹಿಂದೂ ಸ್ಪಶ್ಯರು, ಅಸ್ಪಶ್ಯ ಹಿಂದೂಗಳ ಮಂದಿರ ಪ್ರವೇಶಕ್ಕೆ ಅಡ್ಡಿಯೊಡ್ಡಲು ನಿಶ್ಚಯಿಸಿದರೆ, ಅದರ ವಿರುದ್ಧವೂ ಅಸ್ಪಶ್ಯರು ಸತ್ಯಾಗ್ರಹ ಆರಂಭಿಸಬಹುದು ಈ ದೃಷ್ಟಿಯಿಂದ ನೋಡಿದರೆ ಅಸ್ಪಶ್ಯತಾ ನಿವಾರಣೆಗೆ ಸತ್ಯಾಗ್ರಹದ ಹೊರತು ಅನ್ಯೋಪಾಯವಿಲ್ಲ. ಸ್ವರಾಜ್ಯ ಸಿಗುವ ವರೆಗೆ ಈ ಸತ್ಯಾಗ್ರಹ ನಿಲ್ಲುವಂತಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)