varthabharthi

ವೈವಿಧ್ಯ

ಇಂದು ವಿಶ್ವ ಏಡ್ಸ್ ದಿನಾಚರಣೆ

ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಏಡ್ಸ್

ವಾರ್ತಾ ಭಾರತಿ : 1 Dec, 2018
ಡಾ. ಮುರಲೀ ಮೋಹನ್, ಚೂಂತಾರ್

ಏನಿದು ಏಡ್ಸ್? 
ಏಡ್ಸ್ ಎನ್ನುವುದು ಎಚ್‌ಐವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಛವಾಗಿರುತ್ತದೆ. ಎಚ್‌ಐವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್‌ಸ್ಸಿ ವೈರಸ್ ಆಗಿರುತ್ತದೆ. ಈ ಎಚ್‌ಐವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೆಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್‌ಐವಿ ವೈರಾಣುವಿನಿಂದ ಸೋಂಕಿತರಾಗಿರುತ್ತಾರೆ. ಏಡ್ಸ್ ಎನ್ನುವುದು ತಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಸಂಬಂಧಪಟ್ಟ ಕಾಯಿಲೆಯಾಗಿರುತ್ತದೆ. ಎಚ್‌ಐವಿ ವೈರಾಣು ದೇಹಕ್ಕೆ ಸೇರಿದ ಬಳಿಕ ನಮ್ಮ ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ. ಹೀಗಾದಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ, ರೋಗಿಯು ಬ್ಯಾಕ್ಟೀರಿಯಾ, ಫಂಗಸ್, ವೈರಾಣು ಅಥವಾ ಇನ್ನಾವುದೇ ರೋಗಗಳ ಸೋಂಕಿಗೆ ಬೇಗನೆ ತುತ್ತಾಗುತ್ತಾನೆ. ಒಟ್ಟಿನಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟು ಹೋಗಿ ರೋಗಿಗಳಲ್ಲಿ ಕಂಡುಬರುವ ರೋಗಗಳ ಸಮೂಹಕ್ಕೆ ಒಟ್ಟಾಗಿ ಏಡ್ಸ್ ರೋಗ ಎಂದು ಸಂಬೋಧಿಸಲಾಗುತ್ತದೆ. ಪದೇ ಪದೇ ಕಾಡುವ ಜ್ವರ, ತಲೆ ನೋವು, ನಿರಂತರ ಭೇದಿ, ವಿಪರೀತ ಸುಸ್ತು, ಅಪೌಷ್ಟಿಕತೆ, ಗಂಟಲು ಉರಿ, ಗಂಟಲು ನೋವು, ಕೆಮ್ಮು ದಮ್ಮು, ದೇಹದ ತೂಕ ಕಡಿಮೆಯಾಗುವುದು, ಕುತ್ತಿಗೆಯ ಸುತ್ತ ಗಡ್ಡೆ ಬೆಳೆಯುವುದು ಹೀಗೆ ಹತ್ತು ಹಲವು ತೊಂದರೆಗಳು ಒಟ್ಟಾಗಿ ಕಾಡಿ ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡಿ ಆತನನ್ನು ರೋಗಗಳ ಹಂದರವನ್ನಾಗಿ ಮಾಡಿ, ರಸ ಹೀರಿದ ಕಬ್ಬಿನ ಜಲ್ಲೆಯಂತೆ ವ್ಯಕ್ತಿಯನ್ನು ಹೈರಾಣಾಗಿಸಿಬಿಡುತ್ತದೆ.
ಬಾಯಿಯಲ್ಲಿ ಎಚ್‌ಐವಿ ಸೋಂಕಿನ ಚಿಹ್ನೆಗಳು
ಬಾಯಿಯನ್ನು ಸಾಮಾನ್ಯವಾಗಿ ವೈದ್ಯರ ಮುಖ ಕನ್ನಡಿ ಎಂದು ಸಂಬೋಧಿಸುತ್ತಾರೆ. ಯಾಕೆಂದರೆ ನೂರಾರು ರೋಗಗಳ ಚಿಹ್ನೆಗಳು ಆರಂಭಿಕ ಹಂತದಲ್ಲಿಯೇ ಬಾಯಿಯೊಳಗೆ ಕಾಣಿಸುತ್ತದೆ. ಎಚ್‌ಐವಿ ಸೋಂಕು ತಗಲಿದ ಬಳಿಕ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ ಬಾಯಿಯಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತವೆ. ಇವುಗಳಲ್ಲಿ ಈ ಕೆಳಗಿನವು ಪ್ರಮುಖವಾಗಿದೆ.
1. ಓರಲ್ ವಾರ್ಟ್‌ಗಳು: ಇದನ್ನು ಅಚ್ಚ ಕನ್ನಡದಲ್ಲಿ ನಾರೋಲಿ ಅಥವಾ ಆಣಿ ಅಂತಲೂ ಸಂಬೋಧಿಸಲಾಗುತ್ತದೆ. ಸಣ್ಣ ಸಣ್ಣ ನೋವು ರಹಿತ ಗಡ್ಡೆಗಳು ಅಥವಾ ಗಂಟುಗಳು ಬಾಯಿಯೊಳಗೆ ಕಂಡು ಬರುತ್ತವೆ. ಇವುಗಳ ಸಂಖ್ಯೆ ನಾಲ್ಕರರಿಂದ ಹತ್ತಿಪ್ಪತ್ತರವರೆಗೆ ಇರುತ್ತದೆ. ಹ್ಯೂಮನ್ ಪಾಪಿಲೋಮಾ ಎಂಬ ವೈರಾಣುವಿನಿಂದ ಈ ವಾರ್ಟ್‌ಗಳು ಉಂಟಾಗುತ್ತದೆ. ಲೇಸರ್ ಮುಖಾಂತರ ಈ ವಾರ್ಟ್‌ಗಳನ್ನು ಕಿತ್ತುಹಾಕಲಾಗುತ್ತದೆ. ಆದರೆ ಪದೇ ಪದೇ ಅವುಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ಕೂದಲುಗಳುಳ್ಳ ಲ್ಯೂಕೋಪ್ಲೇಕಿಯಾ : ಇದೊಂದು ಬೆಳ್ಳಗಿನ ದಪ್ಪನಾದ ಪದರವಾಗಿದ್ದು ನಾಲಗೆ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ. ಅವುಗಳ ನಡುವೆ ಸಣ್ಣ ಕೂದಲುಗಳಂತಹ ರಚನೆ ಕಂಡು ಬರುತ್ತದೆ. ಇವುಗಳನ್ನು ಟೂತ್‌ಬ್ರಶ್‌ನಿಂದ ತೆಗೆಯಲು ಸಾಧ್ಯವಾಗದು ಮತ್ತು ನೋವು ಇರುವ ಸಾಧ್ಯತೆ ಇರುತ್ತದೆ. ನಾಲಿಗೆಯಲ್ಲಿ ರುಚಿಯನ್ನು ಕಂಡು ಹಿಡಿಯುವ ಸಾಮರ್ಥ್ಯ ಕ್ಷೀಣಿಸುತ್ತದೆ. ಏಬ್‌ಸ್ಟೈನ್ ಬಾರ್ ವೈರಾಣುವಿನಿಂದ ಈ ಸ್ಥಿತಿ ಬರುತ್ತದೆ. 100ರಲ್ಲಿ 90 ಶೇಕಡಾ ಏಡ್ಸ್ ರೋಗಿಗಳಲ್ಲಿ ಇದು ಕಾಣಿಸುತ್ತದೆ.
3. ಓರಲ್ ಥ್ರಷ್ : ಇದೊಂದು ಶಿಲೀಂದ್ರ ಅಥವಾ ಫಂಗಸ್ ಸೋಂಕಿನಿಂದ ಬರುವ ರೋಗವಾಗಿರುತ್ತದೆ. ಬಾಯಿಯೊಳಗಿನ ಕೆನ್ನೆಯ ಒಳಭಾಗ ಮತ್ತು ನಾಲಗೆಯ ಮೇಲೆ ಬಿಳಿಯದಾದ ದಪ್ಪಪದರ ಉಂಟಾಗುತ್ತದೆ. ಇದನ್ನು ಸುಲಭವಾಗಿ ತೆಗೆಯಬಹುದು. ಆದರೆ ಬಹಳ ನೋವು ಇರುತ್ತದೆ ಮತ್ತು ರಕ್ತಸ್ರಾವವಾಗುವ ಸಾಧ್ಯತೆಯೂ ಇರುತ್ತದೆ. ಕ್ಯಾಂಡಿಡಾ ಎಂಬ ಫಂಗಸ್‌ನಿಂದ ಈ ಥ್ರಷ್ ಬರುತ್ತದೆ. ಇದನ್ನು ಕ್ಯಾಂಡಿಡಿಯೋಸಿಸ್ ಎಂತಲೂ ಕರೆಯುತ್ತಾರೆ. ಈ ಕ್ಯಾಂಡಿಡಾ ಎಂಬ ಫಂಗಸ್ ಎಲ್ಲ ಆರೋಗ್ಯವಂತ ವ್ಯಕ್ತಿಗಳ ಬಾಯಿಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಆದರೆ ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ ಏಡ್ಸ್ ಮುಂತಾದ ಕಾಯಿಲೆಗಳಲ್ಲಿ ಎಚ್‌ಐವಿ ಸೋಂಕು ತಗಲಿದವರಲ್ಲಿ, ಮಧುಮೇಹ ರೋಗಿಗಳಲ್ಲಿ, ಅತಿಯಾದ ಸ್ಥಿರಾಯ್ಡಿ ಬಳಸಿದಾಗ ಅಥವಾ ಅತಿ ಹೆಚ್ಚು ದಿನಗಳ ಕಾಲ ಆ್ಯಂಟಿಬಯೋಟಿಕ್ ಬಳಸಿದಾಗ ಈ ರೀತಿಯ ಓರಲ್ ಥ್ರಷ್ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಆ್ಯಂಟಿ ಫಂಗಲ್ ಔಷಧಿ ಮತ್ತು ಲೋಷನ್ ಬಳಸಿ ಈ ರೋಗವನ್ನು ನಿಯಂತ್ರಿಸಲಾಗುತ್ತದೆ.
4. ಪದೇ ಪದೇ ಕಾಡುವ ಬಾಯಿ ಹುಣ್ಣು: ಎಚ್‌ಐವಿ ಸೋಂಕು ಇರುವವರ ಬಾಯಿಯಲ್ಲಿ ಪದೇ ಪದೇ ಹುಣ್ಣು ಉಂಟಾಗುತ್ತದೆ. ಕೆನ್ನೆಯ ಒಳಭಾಗ, ತುಟಿಯ ಒಳಭಾಗ, ನಾಲಗೆ, ವಸಡುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ‘ಹರ್ಪಿಸ್ ಸಿಂಪ್ಲೆಕ್ಸ್’ ಎಂಬ ವೈರಾಣುವಿನ ಸೋಂಕಿನಿಂದ ಈ ಬಾಯಿಹುಣ್ಣು ಬರುತ್ತದೆ. ದುಂಡಗಿನ ಆಕಾರದಲ್ಲಿ ಇರುವ ಈ ಹುಣ್ಣುಗಳ ಮಧ್ಯೆ ಬೆಳ್ಳಗಿರುತ್ತದೆ ಮತ್ತು ಸುತ್ತಲೂ ಕೆಂಪು ಪದರವಿರುತ್ತದೆ. ಬಿಸಿಯಾದ, ಖಾರದ ಆಹಾರ ತೆಗೆದುಕೊಂಡಾಗ ವಿಪರೀತ ನೋವು, ಯಾತನೆ, ಉರಿತ ಉಂಟಾಗುತ್ತದೆ. ಸ್ಟಿರಾಯ್ಡಿ ಔಷಧಿ ಬಳಸಿ ಇದನ್ನು ಗುಣಪಡಿಸಲಾಗುತ್ತದೆ.
5. ವಸಡಿನ ತೊಂದರೆಗಳು: ಎಚ್‌ಐವಿ ಸೋಂಕು ಇರುವವರಲ್ಲಿ ವಸಡಿನ ಉರಿಯೂತ, ವಸಡಿನಲ್ಲಿ ಕೀವು, ವಸಡಿನಲ್ಲಿ ರಕ್ತಸ್ರಾವ, ಹಲ್ಲು ಅಲುಗಾಡುವುದು, ಬಾಯಿ ವಾಸನೆ ಹೆಚ್ಚು ಕಂಡು ಬರುತ್ತದೆ. ನಿರಂತರವಾಗಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯವಾಗಿರುತ್ತದೆ.


ಮೇಲೆ ತಿಳಿಸಿದ ಲಕ್ಷಣಗಳ ಜೊತೆಗೆ ಬಾಯಿ ಒಣಗುವುದು, ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು, ಜೊಲ್ಲುರಸ ಗ್ರಂಥಿಗಳು ಊದಿಕೊಳ್ಳುವುದು, ಹರ್ಪಿಸ್ ಜೋಸ್ಟರ್ ಎಂಬ ವೈರಾಣು ಸೋಂಕು, ಕಪೋಸಿಸ್ ಸಾರ್ಕೊಮಾ ಎಂಬ ರೋಗವೂ ಕಂಡು ಬರುತ್ತದೆ. ಜೊಲ್ಲುರಸದ ಉತ್ಪಾದನೆ ಕಡಿಮೆಯಾಗುವುದರಿಂದ ದಂತಕ್ಷಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಏಡ್ಸ್ ರೋಗಕ್ಕೆ ಚಿಕಿತ್ಸೆ ಇಲ್ಲ, ಯಾವುದೇ ಹಳ್ಳಿ ಮದ್ದು, ಆಯುರ್ವೇದ ಮದ್ದು, ಮಂತ್ರ ತಂತ್ರಗಳಿಂದ ಚಿಕಿತ್ಸೆ ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅ್ಕ ಅಂದರೆ ಆ್ಯಂಟಿ ರಿಟ್ರೋವೈರಲ್‌ಥೆರಪಿ ನೀಡಿ ವೈರಾಣುವಿನ ಆರ್ಭಟವನ್ನು ತಗ್ಗಿಸಲಾಗುತ್ತದೆ. ಆ ಮೂಲಕ ಇಈ4 ಎಂಬ ಬಿಳಿರಕ್ತಕಣಗಳ ಸಂಖ್ಯೆ ವೃದ್ಧಿಸುವಂತೆ ಮಾಡಲಾಗುತ್ತದೆ. ಉತ್ತಮ ಪೋಷಕಾಂಶಯುಕ್ತ ಆಹಾರ, ನಿರಂತರವಾದ ಔಷಧಿ ಮತ್ತು ನುರಿತ ವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಿ ರೋಗಿಗೆ ಸಂಪೂರ್ಣ ಸಹಕಾರ, ಧೈರ್ಯ ಮತ್ತು ಸಾಂತ್ವನ ನೀಡತಕ್ಕದ್ದು ಹಾಗೆ ಮಾಡಿದಲ್ಲಿ ಮಾತ್ರ ವಿಶ್ವ ಏಡ್ಸ್ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು.
ಕೊನೆ ಮಾತು
ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ ಒಳಗೆ ಬರುವ ಏಡ್ಸ್ ರೋಗ ಮನುಕುಲವನ್ನು ಮಹಾ ಮಾರಿಯಂತೆ ಕಾಡುತ್ತದೆ. 2015ರ ಅಂಕಿ ಅಂಶಗಳ ಪ್ರಕಾರ 36 ಮಿಲಿಯನ್ ಮಂದಿ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು 36 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಚಿಕಿತ್ಸೆ ಇಲ್ಲದ ರೋಗವಾಗಿದ್ದರೂ ಸಾಕಷ್ಟು ಮುಂಜಾಗರೂಕತೆ ವಹಿಸಿ ರೋಗವನ್ನು ನಿಯಂತ್ರಿಸಬಹುದು. ಕಟ್ಟು ನಿಟ್ಟಿನ ಆಹಾರ ಪದ್ಧತಿ, ನಿರಂತರ ಆಪ್ತಸಮಾಲೋಚನೆ, ಜೀವನ ಶೈಲಿ ಮಾರ್ಪಾಡು ಮತ್ತು ನಿರಂತರ ಔಷಧಿಗಳಿಂದ ಎಚ್‌ಐವಿ ಸೋಂಕಿತರೂ ಸಹಜ ಜೀವನ ನಡೆಸಬಹುದು ಎಂದು ಸಮಾಜಕ್ಕೆ ತಿಳಿ ಹೇಳಬೇಕಾದ ಅನಿವಾರ್ಯತೆ ಇದೆ. ಸಮಾಜ ಇಂತಹ ರೋಗಿಗಳನ್ನು ನೋಡುವ ದೃಷ್ಟಿ ಬದಲಾಗಬೇಕು. ಹಾಗಾದಲ್ಲಿ ಮಾತ್ರ ಏಡ್ಸ್ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬಂದೀತು.

ಹೇಗೆ ಹರಡುತ್ತದೆ ?
♦ ಎಚ್‌ಐವಿ ಸೋಂಕು ಇರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ.
♦ ಎಚ್‌ಐವಿ ಸೊಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹೆರಿಗೆಯ ಸಮಯದಲ್ಲಿ ಮತ್ತು ಎದೆಹಾಲಿನ ಮುಖಾಂತರ ಹರಡುತ್ತದೆ.
♦ ಅಸ್ವಾಭಾವಿಕ ಲೈಂಗಿನ ಕ್ರಿಯೆಗಳಾದ ಬಾಯಿಯಿಂದ ಮತ್ತು ಗುದದ್ವಾರದ ಸೆಕ್ಸ್‌ಗಳಿಂದಲೂ ಹರಡುತ್ತದೆ.
♦ ಎಚ್‌ಐವಿ ಸೋಂಕು ಇರುವ ವ್ಯಕ್ತಿ ಬಳಸಿದ ಸೂಜಿ ಅದೇ ಸಿರಿಂಜ್‌ಗಳನ್ನು ಬೇರೆಯವರಿಗೆ ಬಳಸುವುದರಿಂದ ಹರಡುತ್ತದೆ.
♦ ಮಾದಕ ದ್ರವ್ಯ ವ್ಯಸನಿಗಳು ಬಳಸಿದ ಎಚ್‌ಐವಿ ಸೋಂಕಿತ ಸಿರಿಂಜ್‌ನ್ನು ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ.
♦ ದೇಹದಲ್ಲಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್‌ಐವಿ ಸೋಂಕು ಇರುವವರಿಗೆ ಬಳಸಿದ ಸೂಜಿಗಳನ್ನು ಮಗದೊಮ್ಮೆ ಬಳಸುವುದರಿಂದ ಹರಡುತ್ತದೆ.
ಹೇಗೆ ಹರಡುವುದಿಲ್ಲ?
♦ ಬೆವರು, ಎಂಜಲು, ಸಿಂಬಳ, ಕಣ್ಣೀರು, ಮಲ, ಮೂತ್ರ ಮುಂತಾದವುಗಳನ್ನು ಮುಟ್ಟುವುದರಿಂದ ಹರಡುವುದಿಲ್ಲ.
♦ ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ ಹರಡುವುದಿಲ್ಲ.
♦ ಸೊಳ್ಳೆಗಳ ಕಡಿತದಿಂದ ಎಚ್‌ಐವಿ ಹರಡುವುದಿಲ್ಲ
♦ ಕೈ ಕುಲುಕುವುದು, ಸೀನುವುದು, ಕೆಮ್ಮುವುದು ಇತ್ಯಾದಿಗಳಿಂದಲೂ ಹರಡುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)