varthabharthi

ಸಿನಿಮಾ

2.0: ಬದುಕುವ ‘ಹಕ್ಕಿ’ಗಾಗಿ! ಪ್ರಾಣ ಪಕ್ಷಿಯ ಹೋರಾಟ!

ವಾರ್ತಾ ಭಾರತಿ : 2 Dec, 2018
ಶಶಿಕರ ಪಾತೂರು

ರಜನಿಕಾಂತ್ ಚಿತ್ರಗಳೆಂದರೇನೇ ಪ್ರೇಕ್ಷಕರಲ್ಲಿ ನಿರೀಕ್ಷೆ ಅಧಿಕವಾಗಿರುತ್ತದೆ. ಅದರಲ್ಲಿ ಕೂಡ ‘ಎಂದಿರನ್’ ಬಳಿಕ ಅದರ ಎರಡನೇ ಭಾಗವಾಗಿ ಬರುತ್ತಿರುವ ಕಾರಣ ಬಹು ನಿರೀಕ್ಷೆಯ ಚಿತ್ರವಾಗಿ 2.0 ತೆರೆಗೆ ಬಂದಿದೆ.

ಟ್ರೇಲರ್‌ನಲ್ಲಿ ಕಂಡಂತೆ ಮೊಬೈಲ್ ಫೋನ್‌ಗಳು ಹಠಾತ್ತಾಗಿ ಮಾಯವಾಗುವುದೇ ಚಿತ್ರದ ಮೊದಲ ಆಕರ್ಷಣೆ. ಆದರೆ ಹಾಗೆ ಮಾಯವಾದ ಮೊಬೈಲ್ ಗಳು ಎಲ್ಲಿ ಹೋಗುತ್ತವೆ ಎನ್ನುವಲ್ಲಿಂದ ಚಿತ್ರದ ಕತೆ ಕುತೂಹಲಕಾರಿಯಾಗಿ ಸಾಗುತ್ತದೆ. ಹಾಗೆ ಮೊಬೈಲ್ ಫೋನ್‌ಗಳು ಕಾಣೆಯಾಗುವುದು ಮಾತ್ರವಲ್ಲ, ಕಾಣೆಯಾದ ಫೋನ್‌ಗಳ ಸ್ಥಾನದಲ್ಲಿ ಹೊಸದನ್ನು ತರಿಸುವವರ ಕೊಲೆ ನಡೆಯುತ್ತದೆ. ಈ ಕೊಲೆಗಳನ್ನು ಕೂಡ ಮೊಬೈಲ್‌ಗಳೇ ಮಾಡುತ್ತವೆ. ಅದರ ವಿರುದ್ಧ ಹೋರಾಟಕ್ಕೆ ರಾಜ್ಯವು ಮಿಲಿಟರಿಯನ್ನು ಬಳಸುತ್ತದೆ. ಆದರೆ ಅದನ್ನು ರೋಬೋ ಮೂಲಕವೇ ಎದುರಿಸಬೇಕು ಎನ್ನುವ ವಿಜ್ಞಾನಿ ವಸೀಗರನ್ ಮಾತುಗಳಿಗೆ ಕೊನೆಗೂ ಮನ್ನಣೆ ಸಿಗುತ್ತದೆ. ರೋಬೋ ಹೇಗೆ ಎದುರಿಸುತ್ತದೆ ಎನ್ನುವುದು ಚಿತ್ರದ ಆಕರ್ಷಣೆಯಾದರೆ ಈ ಘಟನೆಯ ಹಿಂದಿರುವ ಪಕ್ಷಿರಾಜನ್ ಕುರಿತಾದ ಮಾಹಿತಿ ಚಿತ್ರದ ಸಂದೇಶವನ್ನು ಸಾರುತ್ತದೆ.

2.0ನಲ್ಲಿ ರಜನಿಕಾಂತ್ ನಿರೀಕ್ಷೆಯಂತೆ ಎಂದಿರನ್ ಚಿತ್ರದ ನಾಯಕ ವಸೀಗರನ್ ಪಾತ್ರದಲ್ಲಿ ಮುಂದುವರಿದಿದ್ದಾರೆ. ಜೊತೆಗೆ ಈ ಬಾರಿ ಚಿಟ್ಟಿ ಜೊತೆಗೆ ಕುಟ್ಟಿ (ಮಿನಿ ರೋಬೋ)ಯಾಗಿಯೂ ರಜನಿ ಬಹುರೂಪದಲ್ಲಿ ರಂಜಿಸಿದ್ದಾರೆ. ಅವರ ಇತರ ಚಿತ್ರಗಳಿಗೆ ಹೋಲಿಸಿದರೆ ಹಾಡು ಮತ್ತು ಪಂಚಿಂಗ್ ಸಂಭಾಷಣೆಗಳ ಕೊರತೆ ಕಾಣುತ್ತದೆ. ಜೊತೆಗೆ ವಸೀಗರನ್ ಸಹಾಯಕಿಯಾಗಿ ಆ್ಯಮಿಜಾಕ್ಸನ್ ನಿರ್ವಹಿಸಿರುವ ನಿಲಾ ಪಾತ್ರ ಕೂಡ ರೋಬೊ ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ನಿರ್ದೇಶಕರು ಎಡವಿದಂತಿದೆ. ಆದರೆ ಒಟ್ಟು ಚಿತ್ರದ ಆಶಯವಾದ ಮೊಬೈಲ್ ಸಮಸ್ಯೆ ಮತ್ತು ಅದರ ವಿರುದ್ಧದ ಹೋರಾಟ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಎನ್ನುವುದು ಸತ್ಯ. ಬಹುಶಃ ಅದೇ ಕಾರಣದಿಂದಲೇ ಇರಬಹುದು ಎಲ್ಲವನ್ನೂ ಡೀಟೈಲಾಗಿ ನೀಡುವ ನಿರ್ದೇಶಕ ಶಂಕರ್ ಈ ಬಾರಿ ಕತೆಯೊಳಗಿನ ರಾಜಕೀಯ ಮತ್ತು ಆಡಳಿತದ ಅಡೆತಡೆಗಳಿಗಿಂತ ಗ್ರಾಫಿಕ್ ಯುದ್ಧದತ್ತ ಹೆಚ್ಚು ಗಮನ ಕೇಂದ್ರೀಕರಿಸಿದಂತಿದೆ. ಹಕ್ಕಿಗಳ ಮೇಲೆ ಪ್ರೀತಿ ತೋರಿಸುವ ಪಕ್ಷಿರಾಜನ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆಗೆ ಮೊಬೈಲ್‌ಗಳ ರಾಶಿಯಂತೆ ಪ್ರಶಸ್ತಿಗಳ ಮಳೆ ಬಂದರೆ ಅಚ್ಚರಿಯೇನಿಲ್ಲ. ಅವರ ಪಾತ್ರದ ಹಿನ್ನೆಲೆಯ ವಿವರಣೆ ಕೂಡ ಅಪ್ಯಾಯಮಾನ.

ಸದಾ ಭ್ರಷ್ಟಾಚಾರದ ವಿರುದ್ಧ ಸಿನೆಮಾ ಮಾಡುವ ಶಂಕರ್ ಈ ಬಾರಿಯೂ ಅಂಥದೇ ಒಂದು ವಿಷಯವನ್ನು ಕತೆಯಾಗಿಸಿದ್ದಾರೆ. ಅದರಲ್ಲಿ ಕೂಡಾ ಮೊಬೈಲ್ ಫೋನ್‌ಗೆ ಸಂಬಂಧಿಸಿರುವ ಸಮಸ್ಯೆಯಾಗಿರುವ ಕಾರಣ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ತಮ್ಮದೇ ತಮ್ಮದೇ ಕತೆ ಎಂಬ ರೀತಿಯಲ್ಲಿ ಚಿತ್ರ ನೋಡಲು ಸಾಧ್ಯವಾಗುತ್ತದೆ. ಚಿತ್ರ ನೋಡಿದ ಪ್ರತಿಯೊಬ್ಬರು ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿದರೆ ಅಲ್ಲಿಗೆ ಇಂಥದೊಂದು ಚಿತ್ರ ತೆರೆಗೆ ಬಂದಿದ್ದು ಸಾರ್ಥಕ ಎನ್ನಬಹುದು.


ತಾರಾಗಣ: ರಜನಿಕಾಂತ್, ಅಕ್ಷಯ್ ಕುಮಾರ್,
ಆ್ಯಮಿ ಜಾಕ್ಸನ್
ನಿರ್ದೇಶನ: ಎಸ್. ಶಂಕರ್
ನಿರ್ಮಾಣ: ಸುಭಾಸ್ಕರನ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)