varthabharthi

ವೈವಿಧ್ಯ

‘ನವರತ್ನ’ಗಳನ್ನು ಗಿಲೀಟುಗೊಳಿಸಿ ಕಾರ್ಪೊರೇಟ್‌ಗಳನ್ನು ಬೆಳೆಸುತ್ತಿರುವ ಸರಕಾರ

ವಾರ್ತಾ ಭಾರತಿ : 3 Dec, 2018
ನಂದಕುಮಾರ್ ಕೆ. ಎನ್, ಕುಂಬ್ರಿಉಬ್ಬು. ಕೊಪ್ಪ

ಮೋದಿ ಪ್ರಧಾನಿಯಾಗಿ ಕುಳಿತ ನಂತರ ಸುಳ್ಳಿನ ಮೇಲೆಯೇ ನೆಲೆನಿಂತು ತನ್ನ ವಾಕ್ಚಾತುರ್ಯ ಮೆರೆಯುವ ಗುಣವನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿ ಕಾರ್ಪೊರೇಟುಗಳ ಸೇವೆ ಸಾಂಗೋಪಾಂಗವಾಗಿ ನೆರವೇರಿಸತೊಡಗಿದರು. ಆರಂಭದಲ್ಲಿ ಜನಸಾಮಾನ್ಯರು ಕೂಡ ಮೋದಿಯ ಬಗ್ಗೆ ಭರವಸೆ ಬೆಳೆಸಿಕೊಳ್ಳತೊಡಗಿದ್ದರು. ಅದಕ್ಕೆ ಹಿಂದಿನಿಂದ ಬಂದ ಸರಕಾರಗಳು ಮಾಡಿದ ಅನಾಹುತಗಳೇ ಮುಖ್ಯ ಕಾರಣಗಳಾಗಿದ್ದವು.

ಭಾರತದ ಸಾರ್ವ ಜನಿಕ ರಂಗದ ನವರತ್ನಗಳಲ್ಲಿ ಒಂದಾದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಫೊರೇಷನ್ (ONGC) ಇದೀಗ ಭಾರೀ ನಷ್ಟದಲ್ಲಿದೆ ಎಂಬ ಸುದ್ದಿ ಬರುತ್ತಿದೆ. ಪ್ರಾಪಂಚಿಕ ಆರ್ಥಿಕ ಬಿಕ್ಕಟ್ಟು ಆರಂಭವಾಗಿ ಬಹಳ ಕಾಲವಾಗಿದ್ದರೂ ಒಎನ್‌ಜಿಸಿ ಬೆಳವಣಿಗೆಯಲ್ಲಿ ಸಾಪೇಕ್ಷವಾಗಿ ನಿರಂತರ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಂತಹ ಬೃಹತ್ ಸಾರ್ವಜನಿಕ ರಂಗದ ಕಂಪೆನಿಯಾಗಿತ್ತು. ಈಗ ಇದು 25,000 ಕೋಟಿ ರೂ ಸಾಲದ ಸುಳಿಗೆ ಸಿಲುಕಿರುವ ವರದಿಯಿದೆ. 2013-14ರಲ್ಲಿ ರೂ. 1.07ಲಕ್ಷ ಕೋಟಿಯಿದ್ದ ಇದರ ಮೀಸಲು ನಿಧಿ ಇಂದು 10,127ಕೋಟಿಗೆ ಇಳಿದು ಹೋಗಿದೆ.

ಇದೇ ವೇಳೆಯಲ್ಲಿ ಮೋದಿ ಬಂದ ನಂತರ ಅಂಬಾನಿ ಅದಾನಿಗಳ ತೈಲ ಹಾಗೂ ಅನಿಲ ಕಂಪೆನಿಗಳು ಭಾರೀ ಲಾಭವನ್ನು ತೋರಿಸುತ್ತಿವೆ. ಜನವರಿ 08.2017ರ ಎಕನಾಮಿಕ್ಸ್ ಟೈಮ್ಸ್ ಆಂಗ್ಲ ಆರ್ಥಿಕ ಪತ್ರಿಕೆಯ ವರದಿಯ ಪ್ರಕಾರ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿಯ ಸಂಪತ್ತು ಶೇ.125ರಷ್ಟು ಹೆಚ್ಚಳ ಕಂಡಿದೆ. ಇವರಿಬ್ಬರೂ ಗುಜರಾತಿ ಮೂಲದವರು. ಜನವರಿ 2017ರಲ್ಲಿ ಗೌತಮ್ ಅದಾನಿಯ 4.63 ಬಿಲಿಯನ್ ಡಾಲರ್ ರಷ್ಟು ಇದ್ದ ಸಂಪತ್ತು 2017ಡಿಸೆಂಬರ್ ವೇಳೆಗೆ 10.4 ಬಿಲಿಯನ್ ಡಾಲರ್‌ಗೆ ಏರಿತ್ತು. ಅದೇ ರೀತಿ 2017 ಜನವರಿಯಲ್ಲಿ ಮುಖೇಶ್ ಅಂಬಾನಿಯ 22.70 ಬಿಲಿಯನ್ ಡಾಲರ್‌ನಷ್ಟು ಇದ್ದ ಸಂಪತ್ತು ಅದೇ ವರ್ಷದ ಡಿಸೆಂಬರ್ ವೇಳೆಗೆ 40.30 ಬಿಲಿಯನ್ ಡಾಲರ್ ಗೆ ಏರಿತು. ಹಾಗೆಯೇ ಕುಮಾರ್ ಬಿರ್ಲಾ, ಅಜೀಂ ಪ್ರೇಮ್ ಜಿ, ಉದಯ್ ಕೋಟಕ್, ಲಕ್ಷ್ಮೀ ಮಿತ್ತಲ್ ಮೊದಲಾದವರ ಸಂಪತ್ತುಗಳಲ್ಲಿ ಶೇ. 36.11ರಿಂದ ಶೇ.50.41 ರಷ್ಟು ಇದೇ ಅವಧಿಯಲ್ಲಿ ಏರಿಕೆಯಾದವು. ಜಾಗತಿಕವಾಗಿಯೂ 2017ನೇ ಕ್ಯಾಲೆಂಡರ್ ವರ್ಷದಲ್ಲಿ ದಾಖಲೆ ಸಂಖ್ಯೆಯಲ್ಲಿ ಬಿಲಿಯನೇರ್‌ಗಳ ಏರಿಕೆಯಾದ ಬಗೆಗಿನ ಆಕ್ಸ್‌ಫಾಮ್ ಇಂಟರ್ ನ್ಯಾಷನಲ್ ವರದಿಯನ್ನು ಬ್ಲೂಮ್ ಬೆರ್ಗ್ ಉಲ್ಲೇಖಿಸಿದೆ.
ಜಗತ್ತು ಇಂದು 2,043 ಬಿಲಿಯನೇರ್‌ಗಳನ್ನು ಹೊಂದಿದ್ದು, ಕಳೆದ ವರ್ಷ ಎರಡು ದಿನಗಳಿಗೆ ಒಬ್ಬರಂತೆ ಹೊಸ ಬಿಲಿಯನೇರುಗಳು ಉದಯಿಸಿದ್ದಾರೆ. ಇವರೆಲ್ಲರ ಒಟ್ಟು ಸಂಪತ್ತು 762 ಬಿಲಿಯನ್ ಡಾಲರುಗಳಾಗಿದ್ದು ಅದು ಜಗತ್ತಿನ ಕಡುಬಡತನವನ್ನು ಏಳು ಬಾರಿ ಕೊನೆಗಾಣಿಸುವಷ್ಟು ಇದೆ ಎಂದು ಆಕ್ಸ್ ಫಾಮ್ ವರದಿ ಹೇಳುತ್ತದೆ. ಬಿಲಿಯನೇರುಗಳ ಈ ರೀತಿಯ ಬೆಳವಣಿಗೆ ಆರ್ಥಿಕತೆಯ ಬೆಳವಣಿಗೆಯ ಲಕ್ಷಣವಲ್ಲ ಬದಲಿಗೆ ಆರ್ಥಿಕತೆಯ ವಿಫಲತೆಯ ಲಕ್ಷಣವಾಗಿದೆ ಎಂದು ಕೂಡ ಆಕ್ಸ್ ಫಾಮ್ ಮುಖ್ಯಸ್ಥ ವಿನ್ನಿ ಬ್ಯಾನ್ಯಿಮಾ ಹೇಳಿರುವ ವರದಿಯೂ ಇದೆ. ಆಕ್ಸ್ ಫಾಮ್ ಈ ವರದಿಯನ್ನು ಜಾಗತಿಕ ಕಾರ್ಪೊರೇಟ್ ಮುಖ್ಯಸ್ಥರು, ಬ್ಯಾಂಕರುಗಳು ಸೇರಿ ನಡೆಸುವ ಜಾಗತಿಕ ಆರ್ಥಿಕ ವೇದಿಕೆಯ (ವರ್ಲ್ಡ್ ಎಕನಾಮಿಕ್ ಫೋರಮ್) ವಾರ್ಷಿಕ ಸಭೆಯ ಸಂದರ್ಭದಲ್ಲಿ ಪ್ರಕಟಿಸಿದೆ. ಈ ಬಾರಿ ಸ್ವಿಟ್ಝರ್‌ಲ್ಯಾಂಡ್‌ನ ಡಾವೋಸ್ ನಲ್ಲಿ ಈ ಸಭೆ ನಿಗದಿಯಾಗಿದೆ.
ಇದೇ ವೇಳೆಯಲ್ಲಿ ಅಮೆರಿಕದ ಡೊನಾಲ್ಡ್ ಟ್ರಂಪ್ ಜಾಗತಿಕ ಆರ್ಥಿಕ ಸಮರದಲ್ಲಿ ವ್ಯಾಪಕವಾಗಿ ತೊಡಗಿದ್ದಾರೆ. ಇದು ಪ್ರತಿಯೊಬ್ಬ ಅಮೆರಿಕದ ಪ್ರಜೆಯ ಮೇಲೆ ತಲಾ 2,500 ಡಾಲರುಗಳ ಹೆಚ್ಚುವರಿ ಹೊರೆಯನ್ನು ಹೊರಿಸುವಂತಹ ನಡೆಯಾಗಿದೆ ಎಂದು ‘ಪ್ರೋ ಫ್ರೀ ಟ್ರೇಡ್ ಕೋಚ್ ಇಂಡಸ್ಟ್ರೀಸ್’ ಪ್ರಾಯೋಜಕತ್ವದ ವರದಿಯೊಂದು ಹೇಳಿದೆ. ಈ ನಡೆ ದುಬಾರಿ ಹಾಗೂ ಆರ್ಥಿಕತೆಯನ್ನು ಸಬಲಗೊಳಿಸುವುದಿಲ್ಲ ಎಂದು ಅದು ಹೇಳಿದೆ. ಈ ಸಂಸ್ಥೆ ಕಾರ್ಪೊರೇಟ್‌ಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದಾದರೂ ಅದು ಹೇಳಿರುವ ವಿಚಾರ ಜಾಗತಿಕ ಆರ್ಥಿಕತೆ ಯಾವ ಮಟ್ಟದ ಬಿಕ್ಕಟ್ಟಿನಲ್ಲಿದೆ ಮತ್ತು ಕಾರ್ಪೊರೇಟುಗಳ ನಡುವೆ ಮತ್ತಷ್ಟು ಬಿರುಸಾಗುತ್ತಿರುವ ಅಸ್ತಿತ್ವಕ್ಕಾಗಿನ ನೀಚ ಪೈಪೋಟಿಯನ್ನು ನಮಗೆ ತೋರಿಸುತ್ತದೆ. ಜೊತೆಗೆ ಜನಸಾಮಾನ್ಯರ ದುಡಿಮೆಯ ಗಳಿಕೆಯೆಲ್ಲವನ್ನೂ ಕೆಲವೇ ಕಾರ್ಪೊರೇಟ್‌ಗಳು ಸ್ವಾಹಾ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಜಾಗತಿಕ ಜನರ ಸಂಪತ್ತು ಕೆಲವೇ ಜನರ ಕೈಯಲ್ಲಿ ಕ್ರೋಡೀಕರಣಗೊಳ್ಳುತ್ತಾ ಅಸಮಾನತೆಯು ವಿಪರೀತವಾಗಿ ಬೆಳೆದಿರುವ ಕ್ರೂರ ಲಕ್ಷಣವಿದು. ಬಂಡವಾಳಶಾಹಿ ವ್ಯವಸ್ಥೆಯ ಹುಚ್ಚು ನರ್ತನವಿದು.


ಭಾರತದ ಆರ್ಥಿಕತೆಯನ್ನು ಜಾಗತೀಕರಣ ಪ್ರಕ್ರಿಯೆಗೆ ಒಳಪಡಿಸಿದ ನಂತರ ಜಾಗತಿಕ ಕಾರ್ಪೊರೇಟ್‌ಗಳ ಲಾಭ ನಷ್ಟದ ಲೆಕ್ಕಾಚಾರದ ಮೇಲೆಯೇ ನಮ್ಮ ದೇಶ ಅವಲಂಬಿತವಾಗುವುದು ಮತ್ತಷ್ಟು ಹೆಚ್ಚಾಗುತ್ತಾ ಈಗ ಆರ್ಥಿಕತೆ, ರಾಜಕೀಯ, ಸಾಮಾಜಿಕ ಹೀಗೆ ಪ್ರತಿಯೊಂದು ವಿಚಾರವನ್ನೂ ಜಾಗತಿಕ ಆರ್ಥಿಕ ಶಕ್ತಿಗಳೇ ನಿರ್ಧರಿಸುವಂತಾಗಿಬಿಟ್ಟಿದೆ. ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಸರಕಾರ ರೂಪಿಸಿ ಇಟ್ಟಿದ್ದ ಆರ್ಥಿಕ, ರೈತ, ಕಾರ್ಮಿಕ, ಶೈಕ್ಷಣಿಕ, ಸಾಮಾಜಿಕ ನೀತಿಗಳನ್ನು ಮೋದಿ ಸರಕಾರ ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಾ ಸಾಗಿದೆ. ಕಾಂಗ್ರೆಸ್‌ಗೆ ಬಹುಮತವಿಲ್ಲದ ಯುಪಿಎ ಎಂಬ ಸಮ್ಮಿಶ್ರ ಸರಕಾರವಾಗಿದ್ದರಿಂದ ಮನಮೋಹನ್ ಸಿಂಗ್ ಅವುಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲಾಗಿರಲಿಲ್ಲ. ಆಳುವ ಶಕ್ತಿಗಳಿಗೆ ಅತ್ಯಂತ ಅವಶ್ಯವಾಗಿದ್ದ ಆ ನೀತಿಗಳ ಜಾರಿಗೊಳಿಸುವಿಕೆಗಾಗಿಯೇ; ಗುಜರಾತಿಗಷ್ಟೇ ಸೀಮಿತರಾಗಿದ್ದ, ಅಲ್ಲಿನ ಜನರ ಮಧ್ಯೆ ಆಗಲೇ ಕಳೆಗೆಡಲಾರಂಭಿಸಿದ್ದ ನರೇಂದ್ರ ಮೋದಿಯನ್ನು ಅಕ್ಷರಶಃ ಕಾರ್ಪೊರೇಟ್ ಜಾಹೀರಾತು ಹಾಗೂ ಬ್ರಾಂಡ್ ನಿರ್ಮಾಣದ ರೀತಿಯಲ್ಲಿಯೇ ದೇಶದ ಪ್ರಧಾನಿಯನ್ನಾಗಿ ಕುಳ್ಳಿರಿಸಲಾಯಿತು.
ಮೋದಿ ಪ್ರಧಾನಿಯಾಗಿ ಕುಳಿತ ನಂತರ ಸುಳ್ಳಿನ ಮೇಲೆಯೇ ನೆಲೆನಿಂತು ತನ್ನ ವಾಕ್ಚಾತುರ್ಯ ಮೆರೆಯುವ ಗುಣವನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿ ಕಾರ್ಪೊರೇಟುಗಳ ಸೇವೆ ಸಾಂಗೋಪಾಂಗವಾಗಿ ನೆರವೇರಿಸತೊಡಗಿದರು. ಆರಂಭದಲ್ಲಿ ಜನಸಾಮಾನ್ಯರು ಕೂಡ ಮೋದಿಯ ಬಗ್ಗೆ ಭರವಸೆ ಬೆಳೆಸಿಕೊಳ್ಳತೊಡಗಿದ್ದರು. ಅದಕ್ಕೆ ಹಿಂದಿನಿಂದ ಬಂದ ಸರಕಾರಗಳು ಮಾಡಿದ ಅನಾಹುತಗಳೇ ಮುಖ್ಯ ಕಾರಣಗಳಾಗಿದ್ದವು.
  ಅದರ ಭಾಗವಾಗಿ ಒಂದು ಮಟ್ಟದಲ್ಲಿ ಸರಕಾರಗಳ ತಪ್ಪು ನಡೆಗಳನ್ನು ಸಮತೋಲನ ಮಾಡುತ್ತಿದ್ದ ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲಾ ಬಲಹೀನ ಗೊಳಿಸುತ್ತಾ ಬಂದರು. ಸಂಸತ್ತು ಏಕ ವ್ಯಕ್ತಿಯ ತಾಳಕ್ಕೆ ಕುಣಿಯುವಂತಹ ರೀತಿ ಮಾಡಲಾಯಿತು. ಮಧ್ಯಮವರ್ಗದ ಒಂದು ದೊಡ್ಡ ವರ್ಗ ಮೋದಿಯ ಬೆಂಬಲಕ್ಕೆ ಆಗಲೇ ನಿಂತು ಬಿಟ್ಟಿತ್ತು. ವಿರೋಧ ಪಕ್ಷಗಳೆಲ್ಲಾ ಆಗಲೇ ಜನಸಾಮಾನ್ಯರ ನಡುವೆ ಬೆತ್ತಲಾಗಿ ಕುಳಿತಿದ್ದರಿಂದಾಗಿ ಅವುಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಹ ಸ್ಥಿತಿಗೆ ತಲುಪಿದ್ದವು. ಈ ರೀತಿಯ ರಾಜಕೀಯ ನಿರ್ವಾತದಿಂದಾಗಿ ಮೋದಿಗೆ ಮಾಡಬೇಕಿದ್ದ ಕೆಲಸ ಸುಲಭವಾಯಿತು. ಆ ಪರಿಸ್ಥಿತಿ ಭಾರತದಲ್ಲಿ ಉದ್ಭವಿಸಿದ್ದ ತೀವ್ರ ರೀತಿಯ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟಿನ ಭಾಗವೇ ಆಗಿತ್ತು. ಇದೀಗ ಮೋದಿಯ ಪ್ರಧಾನಿ ಅವಧಿ ಮುಗಿಯುವ ಹಂತ ತಲುಪಿರುವಾಗ ದೇಶದ ಸ್ಥಿತಿಯನ್ನು ಹಿಂದಿರುಗಿ ನೋಡಿದರೆ ಜಾಗತೀಕರಣದ ಉಚ್ಚ ರೀತಿಯ ಅಳವಡಿಕೆ ಮೋದಿಯ ಕಾಲದಲ್ಲೇ ಆಯಿತು ಎನ್ನಬಹುದು. ಜಾಗತೀಕರಣ ಮೊದಲಿನಿಂದಲೂ ಪ್ರತಿಪಾದಿಸುತ್ತಾ, ಹೇರುತ್ತಾ, ನಿರ್ಬಂಧಿಸುತ್ತಾ, ಒತ್ತಾಯಿಸುತ್ತಾ, ಬೆದರಿಸುತ್ತಾ ಬಂದಿದ್ದ ದೇಶದ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾರ್ವಜನಿಕ, ಬ್ಯಾಂಕಿಂಗ್, ವಿಮೆ, ಸಾಮಾಜಿಕ, ಸಾಂವಿಧಾನಿಕ, ರಕ್ಷಣಾ ಹೀಗೆ ಎಲ್ಲಾ ರಂಗಗಳನ್ನೂ ಕಾರ್ಪೊರೇಟುಗಳಿಗೆ ಮುಕ್ತಗೊಳಿಸಲಾಗಿದೆ. ಸಬ್ಸಿಡಿಗಳನ್ನು ಹೆಚ್ಚು ಕಡಿಮೆ ನಿಲ್ಲಿಸಲಾಗುವ ಹಂತ ತಲುಪಿದೆ. ಕಾರ್ಪೊರೇಟುಗಳು ಹಾಡಹಗಲೇ ಜನಸಾಮಾನ್ಯರ ಅಲ್ಪ ಸ್ವಲ್ಪ ಉಳಿತಾಯಗಳನ್ನೆಲ್ಲಾ ನೋಟು ರದ್ದತಿ ಮೂಲಕ ಸರಕಾರದ ಮೂಲಕವೇ ತಮ್ಮ ತಿಜೋರಿಗೆ ತುಂಬಿಸಿಕೊಂಡವು. ಎಸ್‌ಬಿಐ ಸೇರಿದಂತೆ ಸಾರ್ವಜನಿಕ ರಂಗದ ಬ್ಯಾಂಕುಗಳು ಅಪಾರ ನಷ್ಟ ತೋರಿಸುವುದು ಈಗಲೂ ನಿಂತಿಲ್ಲ. ಅಲ್ಲದೇ ನ್ಯಾಯಾಂಗವನ್ನು ಕೂಡಾ ಬಲಹೀನಗೊಳಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ, ಕೇಂದ್ರ ವಿಚಕ್ಷಣಾ ಆಯೋಗ, ಚುನಾವಣಾ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಹೀಗೆ ಸಾಪೇಕ್ಷವಾಗಿ ಸ್ವಾಯತ್ತವಾಗಿದ್ದ ಬಲು ಮುಖ್ಯ ಸಂಸ್ಥೆಗಳನ್ನೆಲ್ಲಾ ಬಲಹೀನಗೊಳಿಸಲಾಗಿದೆ. ಇದನ್ನೆಲ್ಲಾ ಜನರ ವಿರೋಧ ಬಾರದಂತೆ ನೋಡಿಕೊಂಡು ಜಾರಿಗೊಳಿಸಲು ಹತ್ತು ಹಲವು ತಂತ್ರಕುತಂತ್ರಗಳನ್ನು ಹೆಣೆಯಲಾಯಿತು. ಗೋರಕ್ಷಣೆ, ಮುಸ್ಲಿಂ ದ್ವೇಷ, ಪಾಕಿಸ್ತಾನ ದ್ವೇಷ, ಇದೀಗ ಅಯೋಧ್ಯೆಯ ರಾಮ ಹೀಗೆ ಹಲವು ಇದರಲ್ಲಿ ಸೇರಿವೆ. ಇನ್ನೊಂದು ಸಾರ್ವಜನಿಕ ರಂಗದ ದೂರವಾಣಿ ಸಂಸ್ಥೆ ಬಿಎಸ್ಸೆನ್ನೆಲ್ ಅನ್ನು ಶಾಶ್ವತವಾಗಿ ಮಕಾಡೆ ಮಲಗಿಸುವ ಕಾರ್ಯವನ್ನು ಮೋದಿ ಸರಕಾರ ಮಾಡುತ್ತಾ ಬಂದಿದೆ. ಈಗಷ್ಟೇ ಕಣ್ಣುಬಿಟ್ಟಿರುವ ಮುಖೇಶ್ ಅಂಬಾನಿಯ ಜಿಯೋ ಇನ್ನಿತರ ಕಾರ್ಪೊರೇಟ್ ದೂರವಾಣಿ ಕಂಪೆನಿಗಳಿಗೆ 4ಜಿ ಸೇವೆಗೆ ಅನುವು ಮಾಡಿಕೊಟ್ಟು ಎರಡು ಮೂರು ವರ್ಷಗಳೇ ಆಗಿದ್ದರೂ ಎಲ್ಲದಕ್ಕಿಂತಲೂ ಹಿರಿಯ ಹಾಗೂ ದೊಡ್ಡ ಸಂಸ್ಥೆಯಾದ ಬಿಎಸ್ಸೆನ್ನೆಲ್‌ಗೆ 4ಜಿ ಸೇವೆ ಒದಗಿಸಲು ಈಗಲೂ ಅವಕಾಶ ಕೊಡದೆ ಮೋದಿ ಸರಕಾರ ತನ್ನ ಭಂಡ ನಡೆಗಳನ್ನು ಮುಂದುವರಿಸುತ್ತಿದೆ. ಅಷ್ಟೇ ಅಲ್ಲದೆ ಒಎನ್‌ಜಿಸಿಯಂತೆಯೇ ಇದನ್ನು ಮುಳುಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ ಬರಲಾಗಿದೆ.


 ಸ್ಥಳೀಯವಾಗಿಯೇ ತಯಾರಿಸಬಹುದಾಗಿದ್ದ ರಫೇಲ್‌ನಂತಹ ಯುದ್ಧವಿಮಾನಗಳನ್ನು ಒದಗಿಸಲು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಫ್ರೆಂಚ್ ಕಂಪೆನಿಗೆ ನೀಡಿದ್ದ ಗುತ್ತಿಗೆಯನ್ನು ನವೀಕರಿಸಿದ ಮೋದಿ ಸರಕಾರ ಅದರ ಬೆಲೆಯನ್ನು ಹಲವು ಪಟ್ಟು ಏರಿಸಿಕೊಂಡು ಕೊಳ್ಳೆಹೊಡೆದಿರುವುದು ಈಗ ವಿವಾದದ ವಿಚಾರ. ಅದೇ ರೀತಿ ರೈತಾಪಿಗಳನ್ನು ಮರುಳುಗೊಳಿಸುವಂತೆ ಮಾಡಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎಂಬ ಬೆಳೆ ವಿಮೆಯ ಯೋಜನೆ ಕೂಡ ಅನಿಲ್ ಅಂಬಾನಿಯ ವಿಮಾ ಕಂಪೆನಿಯನ್ನು ಉದ್ಧಾರ ಮಾಡಲೆಂದೇ ಮಾಡಲಾಗಿರುವುದು ಕೂಡ ವಿವಾದದ ವಿಚಾರ. ಇದು ರಫೇಲ್ ಹಗರಣಕ್ಕಿಂತಲೂ ಬೃಹತ್ ಗಾತ್ರದ ಮೋಸದ ಹಗರಣವೆಂದು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಹೇಳಿದ್ದಾರೆ.
ಇನ್ನು ಸಣ್ಣ, ಮಧ್ಯಮ ಕೈಗಾರಿಕೆಗಳ ನಾಶ, ಇದ್ದ ಉದ್ಯೋಗಾವಕಾಶಗಳ ನಾಶ, ಸಣ್ಣ ಮಧ್ಯಮ ವ್ಯಾಪಾರ ವಹಿವಾಟುಗಳ ನಾಶ ಮೋದಿ ಕಾಲದಲ್ಲಿ ಯಾವುದೇ ಕನಿಷ್ಠ ಕಣ್ಕಟ್ಟಿನ ಹಿಂಜರಿಕೆ ಕೂಡ ಇಲ್ಲದ ರೀತಿಯಲ್ಲಿ ನಡೆಯಿತು. ಬಹುಶ ಬ್ರಿಟಿಷರು ಕೂಡ ಆ ಕಾಲದಲ್ಲಿ ನಮ್ಮ ಕೈಗಾರಿಕೆಗಳನ್ನು ಈ ಮಟ್ಟದಲ್ಲಿ ನಾಶ ಮಾಡಿರಲಾರರು ಅನಿಸುತ್ತೆ. ಅದಕ್ಕೆ ನೋಟು ರದ್ದತಿ ಹಾಗೂ ಜಿಎಸ್‌ಟಿ ಹೇರಿಕೆ ಮುಖ್ಯ ಕಾರಣವಾಯಿತು. ರೂಪಾಯಿ ಬೆಲೆ ಹಿಂದೆಂದೂ ಇಲ್ಲದ ದಾಖಲೆ ಮಟ್ಟದಲ್ಲಿ ಇಳಿಯಿತು. ನೈಸರ್ಗಿಕ ಅನಿಲ ಹಾಗೂ ಪೆಟ್ರೋಲ್ ಬೆಲೆ ಕೂಡ ಹಿಂದಿನ ಎಲ್ಲಾ ದಾಖಲೆ ಮಟ್ಟ ಮೀರಿತು.
ಈಗ ಬಿಎಸ್ಸೆನ್ನೆಲ್ ನೌಕರರು ಡಿಸೆಂಬರ್3ರಂದು ಬಿಎಸ್ಸೆನ್ನೆಲ್ ಉಳಿಸಿ ಎಂಬ ಹಕ್ಕೊತ್ತಾಯದೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯುವ ವಾರ್ತೆ ಬಂದಿದೆ. ಇದು ಆಶಾದಾಯಕ ಬೆಳವಣಿಗೆಯೆಂದೇ ಹೇಳಬೇಕು. ಇದನ್ನು ಎಲ್ಲರೂ ಬೆಂಬಲಿಸಬೇಕು. ದೇಶದ ರೈತರು ರಾಜಧಾನಿ ದಿಲ್ಲಿಯಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಾದರಿಯನ್ನು ಸಾರ್ವಜನಿಕ ರಂಗದ ಬ್ಯಾಂಕ್ ಇತ್ಯಾದಿ ಇತರ ಸಂಸ್ಥೆಗಳ ನೌಕರರು ಅನುಸರಿಸಬೇಕು. ಸಾರ್ವಜನಿಕ ರಂಗದ ಎಲ್ಲಾ ನೌಕರರು ಹಾಗೂ ಸಾರ್ವಜನಿಕರು ಸೇರಿ ಇರುವ ಕೆಲವೇ ಸಾರ್ವಜನಿಕ ರಂಗದ ಸಂಸ್ಥೆಗಳನ್ನು, ರೈತರನ್ನು, ಇನ್ನಿತರ ಜನಸಮುದಾಯಗಳನ್ನು ಉಳಿಸಲು ಮುಂದಾಗಬೇಕಾದುದು ಕರ್ತವ್ಯ. ಅದನ್ನು ಮಾಡದೇ ಹೋದರೆ ಆಗುವ ಹಾನಿ ಅಪಾರ ಎನ್ನುವುದನ್ನು ಗಮನಿಸಬೇಕು. ಯಾರೂ ಉಳಿಯಲಾರದ ಸ್ಥಿತಿ ಬರುತ್ತದೆ. ಈಗಾಗಲೇ ಸಾಕಷ್ಟು ಹಾನಿ ಸಂಭವಿಸಿದೆ. ಇನ್ನಾದರೂ ಅದನ್ನು ತಡೆಯುವ ಕಾರ್ಯವನ್ನು ಎಲ್ಲರೂ ಸೇರಿಕೊಂಡು ಮಾಡಬೇಕಾದ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)