varthabharthi

ನಿಮ್ಮ ಅಂಕಣ

ಹೊಸ ತಲೆಮಾರಿನ ಒಕ್ಕೊರಲ ಧ್ವನಿ

ದೇಶದ ಅಭಿವೃದ್ಧಿಯ ಬಗ್ಗೆ ಗಮನಹರಿಸುವುದು ಮುಖ್ಯ

ವಾರ್ತಾ ಭಾರತಿ : 6 Dec, 2018
ಭೂಪತಿರಾಜ್ ಎಗ್ಮೋರ್, ಚೆನ್ನೈ

1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಿಂದ ನೂರಾರು ಕಿ.ಮೀ. ದೂರದಲ್ಲಿದ್ದ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಮೇಲೂ ಪರಿಣಾಮ ಬೀರಿತ್ತು. ಬಿಜೆಪಿ ನೇತೃತ್ವದ ಹಿಂದುತ್ವ ಗುಂಪು ಹದಿನಾರನೇ ಶತಮಾನದ ಮಸೀದಿಯನ್ನು ಧರಾಶಾಯಿಗೊಳಿಸಿದ ಪರಿಣಾಮ ದೇಶದೆಲ್ಲೆಡೆ ಕೋಮು ಹಿಂಸಾಚಾರ ವ್ಯಾಪಿಸಿತ್ತು. ಈ ಅವಧಿಯಲ್ಲಿ ತಮಿಳುನಾಡಿನ ಪೊಲ್ಲಾಚ್ಚಿಯಲ್ಲಿ ಭೂಪತಿರಾಜ್ ಜನಿಸಿದರು. ನಮ್ಮ ಶಾಲೆಯಲ್ಲಿ ಜನರು ನಮ್ಮ ಜಾತಿ ಮತ್ತು ಧರ್ಮವನ್ನು ನಾವು ವಾಸಿಸುವ ಪ್ರದೇಶದ ಆಧಾರದಲ್ಲಿ ಗುರುತಿಸುತ್ತಾರೆ ಎಂದು ಸದ್ಯ ಪಾಂಡಿಚೇರಿಯ ಕೇಂದ್ರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿರುವ ಭೂಪತಿರಾಜ್ ತಿಳಿಸುತ್ತಾರೆ.

ಭೂಪತಿರಾಜ್ ಕುಟುಂಬ ಮುಸ್ಲಿಂ ನೆರೆಹೊರೆಯನ್ನು ಹೊಂದಿತ್ತು. ಅವರ ಕುಟುಂಬ ಸಮೀಪದ ದರ್ಗಾಕ್ಕೆ ಭೇಟಿ ನೀಡುತ್ತಿತ್ತು ಮತ್ತು ಅವರ ತಾಯಿ ಉರ್ದು ಮಾತನಾಡುತ್ತಿದ್ದರು.

 ನಾನು ಅವರ ಮನೆಯಲ್ಲೇ ಬೆಳೆದವನು. ಅವರೂ ನಮ್ಮ ಕುಟುಂಬದಂತೆ ಇದ್ದರು. ರಮಝಾನ್ ಸಮಯದ ನೊಂಬು ಗಂಜಿಯನ್ನು ನಾನೆಂದೂ ತಪ್ಪಿಸಿಕೊಂಡಿಲ್ಲ. ಈದ್ ನಾವೆಲ್ಲರೂ ಸೇರಿ ಆಚರಿಸುವ ಹಬ್ಬವಾಗಿತ್ತು ಎಂದು ಭೂಪತಿರಾಜ್ ನೆನಪಿಸಿಕೊಳ್ಳುತ್ತಾರೆ. ಆದರೆ ಶಾಲೆಯಲ್ಲಿ ಈ ನಂಬಿಕೆ ಮತ್ತು ಪ್ರೀತಿ ಮಾಯವಾಗಿತ್ತು. ಮುಸ್ಲಿಂ ಮಕ್ಕಳನ್ನು ಪ್ರತ್ಯೇಕವಾಗಿ ನೋಡಲಾಗುತ್ತಿತ್ತು.

1998ರಲ್ಲಿ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿಯ ಚುನಾವಣಾ ಸಭೆಗೂ ಮುನ್ನ ಕೊಯಂಬತ್ತೂರಿನಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಈ ಘಟನೆಯಲ್ಲಿ 58 ಮಂದಿ ಸಾವನ್ನಪ್ಪಿದರೆ ಧರ್ಮಗಳ ನಡುವಿನ ಬಿರುಕನ್ನು ಇದು ಮತ್ತಷ್ಟು ಅಗಲವಾಗಿಸಿತು. ಈ ಸ್ಫೋಟಗಳಿಗೆ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ ಅಲ್ ಉಮ್ಮವನ್ನು ಹೊಣೆ ಮಾಡಲಾಯಿತು. ಘಟನೆಯ ನಂತರ ಪೊಲೀಸರು ಮುಸ್ಲಿಮರ ಮನೆಗಳ ಮೇಲೆ ದಾಳಿ ನಡೆಸಿದರು ಮತ್ತು ಯಾವುದೇ ಸ್ಪಷ್ಟ ಪ್ರಕರಣವನ್ನು, ಆರೋಪಗಳನ್ನು ದಾಖಲಿಸದೆ ಹಲವರನ್ನು ಜೈಲಿಗಟ್ಟಿದರು.

ಮುಸ್ಲಿಮರ ವಿರುದ್ಧ ದ್ವೇಷ ಭಾವ ಹೆಚ್ಚುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಜನರು ಅವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು ಎಂದು ಭೂಪತಿರಾಜ್ ತಿಳಿಸುತ್ತಾರೆ. ಕಾಲೇಜುಗಳಲ್ಲಿ ತಮಿಳು ಸಾಹಿತ್ಯ ತರಗತಿಗಳಲ್ಲಿ ಹಿಂದೂ ಗ್ರಂಥಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ನಮಗೆ ಈಗಲೂ ಕಂಬ ರಾಮಾಯಣಮ್‌ಅನ್ನು ಕಲಿಸಲಾಗುತ್ತದೆ. ನೈಜ ರಾಮಾಯಣದ ತಮಿಳು ಅವತರಣಿಕೆಯಾಗಿರುವ ಕಂಬ ರಾಮಾಯಣಮ್‌ನಲ್ಲಿ ರಾಮನ ನಾಯಕತ್ವವನ್ನು ಉತ್ಪ್ರೇಕ್ಷಿಸಲಾಗುತ್ತದೆ.

ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಮತ್ತು ಸದ್ಯ ಕೇಂದ್ರದಲ್ಲಿ ಬಿಜೆಪಿ ಸರಕಾರವಿರುವುದರಿಂದ ಇದಕ್ಕೆ ಸರಿಯಾದ ಕಾನೂನು ಅಥವಾ ಸುಗ್ರೀವಾಜ್ಞೆಯನ್ನು ತರಬೇಕು ಎಂಬ ಆಗ್ರಹಗಳು ಕೇಳಿಬರುತ್ತಿರುವುದು ಭೂಪತಿರಾಜ್‌ಗೂ ತಿಳಿದಿದೆ.

ವಿಶ್ವವಿದ್ಯಾನಿಲಯ ಆವರಣಗಳಲ್ಲಿ ಅಯೋಧ್ಯೆ ಚರ್ಚೆಯು ಮತ್ತೆ ಮುನ್ನೆಲೆಗೆ ಬರಲು ಮುಖ್ಯ ಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್. ಈ ಚರ್ಚೆಯ ಬಗ್ಗೆ ಭೂಪತಿರಾಜ್ ಬಳಿ ಕೇಳಿದರೆ, ಈಗಿನ ಪರಿಸ್ಥಿತಿಯಲ್ಲಿ ಅಯೋಧ್ಯೆಯಲ್ಲಿ ಮಂದಿರವನ್ನು ನಿರ್ಮಿಸುವುದು ಹೆಚ್ಚು ಮುಖ್ಯವಲ್ಲ ಬದಲಿಗೆ ದೇಶದ ಅಭಿವೃದ್ಧಿಯ ಬಗ್ಗೆ ಗಮನಹರಿಸುವುದು ಮುಖ್ಯವಾಗಿದೆ ಎಂದು ಅವರು ಹೇಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)