varthabharthi

ನಿಮ್ಮ ಅಂಕಣ

ಹೊಸ ತಲೆಮಾರಿನ ಒಕ್ಕೊರಲ ಧ್ವನಿ

ಬಾಬರಿ ಮಸೀದಿ ಧ್ವಂಸ ರಾಜಕೀಯ ಪ್ರೇರಿತ

ವಾರ್ತಾ ಭಾರತಿ : 6 Dec, 2018
ಯುಡಿ.ಮಂಜುನಾಥ್, ಉಡುಪಿ

ಉಡುಪಿ ಗರಡಿಮಜಲು ನಿವಾಸಿ ಮಂಜುನಾಥ್ ವಿ.(38) ಕಳೆದ 14 ವರ್ಷಗಳಿಂದ ಉಡುಪಿ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿದ್ದು ಕೆಲ ವರ್ಷಗಳ ಹಿಂದೆ ಬೌದ್ಧ ಧಾರ್ಮಿಕ ಪದ್ಧತಿಯಲ್ಲಿ ವಿವಾಹ ಆಗುವ ಮೂಲಕ ಗಮನ ಸೆಳೆದಿದ್ದರು. ಇವರು ಹಲವಾರು ಜನಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಬಾಬರಿ ಮಸೀದಿ ಧ್ವಂಸ ಮತ್ತು ರಾಮಮಂದಿರ ಬೇಡಿಕೆಯ ಕುರಿತಂತೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

1992ರ ಬಾಬರಿ ಮಸೀದಿ ಧ್ವಂಸ ಘಟನೆ ನಡೆದಾಗ ನನಗೆ 12 ವರ್ಷ. ಆಗ ಈ ಕುರಿತಂತೆ ನನಗೆ ಹೆಚ್ಚು ತಿಳಿದಿರಲಿಲ್ಲ. ಹಿರಿಯರಿಂದಷ್ಟೇ ಇದರ ಹೆಚ್ಚು ವಿವರಗಳನ್ನು ತಿಳಿದುಕೊಂಡೆ. ಮಸೀದಿ ಧ್ವಂಸ ಮತ್ತು ಕೋಮು ಹಿಂಸಾಚಾರ ಅನಾಗರಿಕ ಹಾಗೂ ಅಮಾನವೀಯ ಘಟನೆ. ಇದು ರಾಮನ ಮೇಲಿನ ಭಕ್ತಿಯಾಗಲಿ ಪ್ರೀತಿಯಿಂದಾಗಲಿ ನಡೆದ ಘಟನೆಯಲ್ಲ. ಇದೊಂದು ರಾಜಕೀಯ ಪ್ರೇರಿತ ದುರಂತ. ಅದೇ ಕಾರಣಕ್ಕೆ ಮಸೀದಿಯನ್ನು ಧ್ವಂಸ ಮಾಡಿ ನಂತರ ಗಲಭೆಯನ್ನು ಹುಟ್ಟು ಹಾಕಲಾಯಿತು. ಅದರ ಹಿಂದೆ ಸಂಘಪರಿವಾರ ಇದ್ದರೂ ಅದರ ಪ್ರಮುಖ ಹಿನ್ನೆಲೆ ರಾಜಕೀಯ ವಾಗಿದೆ.

 ಪ್ರತಿಯೊಂದು ಸಮುದಾಯಕ್ಕೆ ಆಯಾ ಧರ್ಮದ ಸ್ಮಾರಕಗಳು ಅಗತ್ಯ. ಆದರೆ ಇನ್ನೊಂದು ಸಮುದಾಯಕ್ಕೆ ತೊಂದರೆ ನೀಡಿ ಶಾಂತಿ ಹಾಳು ಮಾಡಿ ಅಯೋಧ್ಯೆಯಲ್ಲಿ ರಾಮ ಮಂದಿರ ಅಥವಾ ಮಸೀದಿ ನಿರ್ಮಿಸುವುದು ಸರಿಯಲ್ಲ. ಈ ಸ್ಥಳದಲ್ಲಿ ಮಂದಿರ ನಿರ್ಮಿಸುವುದರಿಂದ ವಿವಾದ ಅಂತ್ಯ ಕಾಣುವ ಬದಲು ಮತ್ತಷ್ಟು ಮುಂದುವರಿಯಲಿದೆ. ಆದುದರಿಂದ ಇಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಅಥವಾ ಜನರಿಗೆ ಉಪಯೋಗ ಆಗುವ ಯಾವುದಾದರೂ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳಬೇಕು.

ಇದು ಚುನಾವಣೆ ಹತ್ತಿರ ಬರುವಾಗ ರಾಜಕೀಯ ಪ್ರೇರಿತ ಹೋರಾಟವೇ ಹೊರತು ರಾಮನ ಬಗ್ಗೆ ಪ್ರೀತಿ ಅಥವಾ ಭಕ್ತಿಯಿಂದ ನಡೆಯುತ್ತಿರುವ ಹೋರಾಟ ಅಲ್ಲ. ದೇಶದ ಶೇ.3ರಷ್ಟಿರುವ ಮೇಲ್ಜಾತಿಗಳು ಈ ದೇಶದ ಅಧಿಕಾರ ಹಿಡಿಯಲು ಮಾಡುತ್ತಿರುವ ರಾಜಕೀಯ ಷಡ್ಯಂತ್ರ ಇದಾಗಿದೆ.

ಪ್ರಸ್ತುತ ಈ ದೇಶದ ಯುವಜನತೆ ಸರಕಾರದಿಂದ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ಸರಕಾರ ಇದನ್ನು ನೀಡುವ ಬದಲು ಯುವಕರ ತಲೆಗೆ ಧಾರ್ಮಿಕ ವಿಚಾರಗಳನ್ನು ತುಂಬಿ ಅವರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ದೇವಾಲಯ, ಮಸೀದಿ ಅವರವರ ವೈಯಕ್ತಿಕ ವಿಚಾರ. ಅದನ್ನು ನಿರ್ಮಿಸುವುದು ಸರಕಾರದ ಕೆಲಸ ಅಲ್ಲ. ಸರಕಾರ ಮುಖ್ಯವಾಗಿ ಶಿಕ್ಷಣ, ಉದ್ಯೋಗ ನೀಡುವ ಕೆಲಸ ಮಾಡಬೇಕು.

 ದೇಶದ ಪ್ರತಿಯೊಬ್ಬರು ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದರೆ ಈ ದೇಶದಲ್ಲಿ ಸೌಹಾರ್ದ ಉಳಿಯಲು ಸಾಧ್ಯ. ಅದೇ ಕಾರಣಕ್ಕೆ ನಾವು ಸಂವಿಧಾನ ಉಳಿಸಬೇಕೆಂದು ಹೇಳುತ್ತಿರುವುದು. ನಮ್ಮ ಧಾರ್ಮಿಕ ವಿಚಾರವನ್ನು ಇನ್ನೊಬ್ಬರ ಮೇಲೆ ಹೇರಿದಾಗ ಸಮಾಜದಲ್ಲಿ ಸೌಹಾರ್ದ ಕೆಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)