varthabharthi

ರಾಷ್ಟ್ರೀಯ

ಆದಿತ್ಯನಾಥ್ ಅವರ ಅಲಿ vs ಬಜರಂಗಬಲಿ ಹೇಳಿಕೆಗೆ ಪ್ರತಿಭಟನೆ

ಮ.ಪ್ರ. ಮುಸ್ಲಿಂ ನಾಯಕರಿಂದ ಬಿಜೆಪಿಗೆ ರಾಜೀನಾಮೆ

ವಾರ್ತಾ ಭಾರತಿ : 6 Dec, 2018

ಇಂದೋರ್, ಡಿ.5: ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಿಜೆಪಿಯ ತಾರಾ ಪ್ರಚಾರಕ ಯೋಗಿ ಆದಿತ್ಯನಾಥ್ ಅವರ ‘ಅಲಿ ವಿರುದ್ಧ ಬಜರಂಗಬಲಿ’ ಹೇಳಿಕೆಯಿಂದ ಕುಪಿತಗೊಂಡಿರುವ ಮಧ್ಯಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಹಲವಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷದಿಂದ ಹೊರಕ್ಕೆ ಬಂದಿದ್ದಾರೆ.

ಬಿಜೆಪಿಯ ರಾವು ನಗರ ಉಪಾಧ್ಯಕ್ಷ ಸೋನು ಅನ್ಸಾರಿ, ಮಹಾರಾಣಾ ಪ್ರತಾಪ್ ಮಂಡಲ್‌ನ ಉಪಾಧ್ಯಕ್ಷ ದಾನಿಷ್ ಅನ್ಸಾರಿ, ಮಂಡಳ ಉಪಾಧ್ಯಕ್ಷ ಅಮನ್ ಮೆಮನ್, ಇಂದೋರ್ ಬಿಜೆಪಿ ಅಲ್ಪಸಂಖ್ಯಾತ ಘಟಕದ ಸದಸ್ಯರಾದ ಅನೀಸ್ ಖಾನ್ ಮತ್ತು ರಿಯಾಝ್ ಅನ್ಸಾರಿ ರಾಜೀನಾಮೆ ನೀಡಿರುವ ಮುಸ್ಲಿಂ ನಾಯಕರಲ್ಲಿ ಸೇರಿದ್ದಾರೆ.

ರಾಜ್ಯ ಬಿಜೆಪಿಯು ಶಿವರಾಜ ಸಿಂಗ್ ಚೌಹಾಣ್ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಪ್ರಮುಖವಾಗಿ ಬಿಂಬಿಸುತ್ತಿದ್ದರೆ, ಯೋಗಿ ಆದಿತ್ಯನಾಥ್ ಅವರು ಚುನಾವಣೆಯಲ್ಲಿ ಧರ್ಮವನ್ನು ಎಳೆದುತಂದಿದ್ದಾರೆ ಎನ್ನುವುದು ಇವರೆಲ್ಲರ ಸಾಮಾನ್ಯ ಆರೋಪವಾಗಿದೆ.

ಈ ಬಗ್ಗೆ ಸಾರ್ವಜನಿಕರ ಭಾವನೆಗಳು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳ ಕುರಿತು ತಾನು ಪಕ್ಷಾಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ರಾಕೇಶ್ ಸಿಂಗ್ ಅವರಿಗೆ ಪತ್ರಗಳನ್ನು ಬರೆಯುವುದಾಗಿ ಬಿಜೆಪಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ನಾಸಿರ್ ಶಾಹ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಅವರೊಂದಿಗೆ ಧ್ವನಿಗೂಡಿಸಿದ ಇನ್ನೋರ್ವ ಹಿರಿಯ ಪದಾಧಿಕಾರಿ ಇರ್ಫಾನ್ ಮನ್ಸೂರಿ ಅವರು, ಪಕ್ಷವು ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸಿದ್ದು,ಧರ್ಮ ಮತ್ತು ಜಾತಿಯ ಬದಲು ಇವುಗಳ ಬಗ್ಗೆ ಮಾತನಾಡಬಹುದಾಗಿದೆ ಎಂದರು.

ನಾಲ್ಕು ವರ್ಷಗಳಿಂದ ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೆ ಇಂತಹ ಹೇಳಿಕೆಗಳು ನಮ್ಮನ್ನು ನಮ್ಮ ಸಮುದಾಯದಿಂದ ದೂರ ಮಾಡುತ್ತವೆ. ಯೋಗಿ ಆದಿತ್ಯನಾಥ್‌ರಂತಹ ಹಿರಿಯ ನಾಯಕರಿಂದ ಇಂತಹ ಹೇಳಿಕೆಗಳ ಬಳಿಕ ನಾವು ನಮ್ಮ ಸಮುದಾಯದ ಮತಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಪಕ್ಷಕ್ಕೆ ನಮ್ಮ ಕೊಡುಗೆಯನ್ನು ಸಲ್ಲಿಸಲೂ ಸಾಧ್ಯವಾಗುವುದಿಲ್ಲ ಎಂದು ಮೆಮನ್ ಹೇಳಿದರು.

ರಾವು ನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರಿಗೆ ತಿರುಗೇಟು ನೀಡಿದ ಸಂದರ್ಭದಲ್ಲಿ ಆದಿತ್ಯನಾಥ್, ‘ಅವರು (ಕಾಂಗ್ರೆಸ್) ಅಲಿಯನ್ನು ಇಟ್ಟುಕೊಳ್ಳಲಿ, ನಮ್ಮ ಬಳಿ ಬಜರಂಗಬಲಿ ಇದ್ದಾರೆ’ ಎಂದು ಹೇಳಿದ್ದರು. ಭಿನ್ನಾಭಿಪ್ರಾಯದ ವರದಿಗಳನ್ನು ತಳ್ಳಿ ಹಾಕಿರುವ ಬಿಜೆಪಿ ವಕ್ತಾರರೋರ್ವರು, ಪಕ್ಷವೊಂದು ಕುಟುಂಬವಿದ್ದಂತೆ ಮತ್ತು ಪಕ್ಷದ ಕಾರ್ಯಕರ್ತರ ಕಳವಳಗಳನ್ನು ನಿವಾರಿಸಲಾಗುವುದು ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)