varthabharthi

ಕರ್ನಾಟಕ

13 ಜಿಲ್ಲೆಗಳ ಅಭಿವೃದ್ಧಿಗಾಗಿ ಪ್ರತ್ಯೇಕತೆಯ ಕೂಗು

ಡಿ.10 ರಂದು ಪ್ರತ್ಯೇಕ ರಾಜ್ಯದ ಧ್ವಜಾರೋಹಣ

ವಾರ್ತಾ ಭಾರತಿ : 6 Dec, 2018

ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.6: ಬೆಳಗಾವಿಯಲ್ಲಿ ಡಿ.10 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣದೊಂದಿಗೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ 31ರಂದು ಈ ಭಾಗದ ನೂರಾರು ಸ್ವಾಮೀಜಿಗಳು, ನಮ್ಮ ಬೇಡಿಕೆಯನ್ನು ಕಾಲಮಿತಿಯಲ್ಲಿ ಈಡೇರಿಸದಿದ್ದರೆ ನಾವೇ ಮುಂದೆ ನಿಂತು ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಿ, ರಾಜ್ಯದ ನೇತೃತ್ವ ವಹಿಸಿಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು. ಸರಕಾರದಿಂದ ನೀಡಲಾಗುವ ಎಲ್ಲ ಪ್ರಶಸ್ತಿಗಳಲ್ಲೂ ತಾರತಮ್ಯ ನಡೆಯುತ್ತಿದೆ. ಮೇಕೆದಾಟು ಯೋಜನೆ ಮೇಲಿರುವ ಕಾಳಜಿ ಮಹದಾಯಿಗೆ ಏಕಿಲ್ಲ, ದಸರಾಗೆ ಇಲ್ಲದ ಬರ ಹಂಪಿ ಉತ್ಸವಕ್ಕೆ ಏಕೆ? ಪ್ರತ್ಯೇಕ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ದಕ್ಷಿಣ ಕರ್ನಾಟಕದ ನಾಯಕರು ದುಷ್ಟರು. ಉತ್ತರ ಕರ್ನಾಟಕದ ರಾಜಕೀಯ ನಾಯಕರು ಇದಕ್ಕೆ ಧ್ವನಿ ಎತ್ತದೆ, ಹೇಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

13 ಜಿಲ್ಲೆಗಳ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು. ಈ ಭಾಗದ ಜನ ಅಧಿಕಾರ ವಂಚಿತರಾಗಿ, ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿಯುವಂತಾಗಿದೆ. ಕಳೆದ ತಿಂಗಳು ಬೆಳಗಾವಿಯ ಸುವರ್ಣಸೌಧದ ಎದುರು ನೂರಾರು ಮಠಾಧೀಶರು ಪ್ರತಿಭಟನೆ ಮಾಡಿದಾಗ, 15 ದಿನಗಳೊಳಗಾಗಿ ಕೆಲವು ಕಚೇರಿಗಳ ಸ್ಥಳಾಂತರ ಹಾಗೂ ಅಭಿವೃದ್ಧಿಗೆ ಯೋಜನೆ ರೂಪಿಸಿ, ಚಾಲನೆ ನೀಡುವುದಾಗಿ ಹೇಳಿದ ಸರಕಾರ ಈ ತನಕ ಯಾವುದೇ ಕ್ರಮಕೈಗೊಂಡಿಲ್ಲ. ಬದಲಿಗೆ ತಾರತಮ್ಯದ ನೀತಿ ಮುಂದುವರೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)