varthabharthi

ಬೆಂಗಳೂರು

ವಂಚನೆ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ

ಬೆಂಗಳೂರು: ಮಿರ್ಲೆ ವರದರಾಜ್ ಬಂಧನ; 500 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ದಾಖಲೆ ಜಪ್ತಿ

ವಾರ್ತಾ ಭಾರತಿ : 6 Dec, 2018

ಬೆಂಗಳೂರು, ಡಿ.6: ವಂಚನೆ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಮಿರ್ಲೆ ವರದರಾಜ್‌ರನ್ನು ಸಿಸಿಬಿ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಗಂಭೀರ ಅಪರಾಧ ಸಂಬಂಧ ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕೆಂಗೇರಿ ವ್ಯಾಪ್ತಿಯಲ್ಲಿರುವ ಮಿರ್ಲೆ ವರದರಾಜ್ ನಿವಾಸದ ಮೇಲೆ ಗುರುವಾರ ಸಿಸಿಬಿ ತನಿಖಾಧಿಕಾರಿಗಳು, ದಾಳಿ ನಡೆಸಿ ಬಹುಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ಜಪ್ತಿ ಮಾಡಿದರು ಎಂದು ತಿಳಿದುಬಂದಿದೆ.

ಯಾರು ಈ ಮಿರ್ಲೆ?: ಮಿರ್ಲೆ ವರದರಾಜ್ ಮೂಲತಃ ಕೆ.ಆರ್.ನಗರದ ನಿವಾಸಿಯಾಗಿದ್ದು, ಬೆಲ್ಲದ ವ್ಯಾಪಾರಿ ಆಗಿದ್ದ ಎನ್ನಲಾಗಿದೆ. ಹಲವು ವರ್ಷಗಳಿಂದ ಕೆಂಗೇರಿ, ಉಲ್ಲಾಳ, ಆರ್.ಆರ್.ನಗರ, ನಾಗರಭಾವಿ ಸೇರಿದಂತೆ ಹಲವು ಕಡೆ ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಹಣ ಒದಗಿಸುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.

ಬಂಧಿತ ಮಿರ್ಲೆ, ಸರಕಾರಿ ಭೂಮಿಯನ್ನು ಅಮಾಯಕರಿಗೆ ತೋರಿಸಿ, ನಿವೇಶನ ನೀಡುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಸಾರ್ವಜನಿಕರಿಂದ ಪಡೆದು ವಂಚನೆ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ವಾಪಸ್ಸು ಹಣ ನೀಡುವಂತೆ ಸಾರ್ವಜನಿಕರು ಪ್ರಶ್ನಿಸಿದರೆ, ರೌಡಿಗಳಿಂದ ಬೆದರಿಕೆ, ಹಲ್ಲೆ ಮಾಡಿಸುತ್ತಿದ್ದ ಎನ್ನುವ ದೂರುಗಳನ್ನು ಕೆಲವರು ಸಿಸಿಬಿಗೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

500 ಕೋಟಿ ಆಸ್ತಿ ಜಪ್ತಿ ಮಿರ್ಲೆ ವರದರಾಜ್ ಜೊತೆಗೆ ಈತನ ಆಪ್ತ ಎನ್ನಲಾದ ನಾಗರಾಜು ಯಾನೆ ಡಿಫೋ ನಾಗ ಎಂಬಾತನನ್ನು ಬಂಧಿಸಲಾಗಿದ್ದು, ಈತನ ಬಳಿಯಿಂದ ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

100 ಕ್ಕೂ ಅಧಿಕ ಕೇಸುಗಳು?

ಮಿರ್ಲೆ ವರದರಾಜ್ ವಿರುದ್ಧ ಸಿಟಿ ಸಿವಿಲ್ ಕೋರ್ಟ್‌ನಲ್ಲಿ 83 ಭೂ ವ್ಯಾಜ್ಯ ಪ್ರಕರಣಗಳಿವೆ ಎನ್ನಲಾಗಿದೆ. ಅದೇ ರೀತಿ, 17 ಕ್ರಿಮಿನಲ್ ಪ್ರಕರಣಗಳು, ಈತನ ಪತ್ನಿ ಗಿರಿಜಾ ಮಿರ್ಲೆ ವಿರುದ್ಧವೂ 10 ಭೂ ವ್ಯಾಜ್ಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಅಪಾರ ದಾಖಲೆ ಪತ್ರ

ಕೆಂಗೇರಿ ಉಪನಗರದ ಮನೆ ಮೇಲೆ ಗುರುವಾರ ದಾಳಿ ನಡೆಸಿ ಪರಿಶೀಲಿಸಿದ ಪೊಲೀಸರಿಗೆ ಲೋಡ್‌ಗಟ್ಟಲೆ ದಾಖಲೆ ಪತ್ರಗಳು ಲಭ್ಯವಾಗಿವೆ. ಅವರ ಕುಟುಂಬ 15 ಖಾತೆಗಳನ್ನು ಹೊಂದಿದೆ. ಭೂ ಹಗರಣ, ಹ್ತಾ ವಸೂಲಿ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ರಾಮ, ಲಕ್ಷ್ಮಣ ಮತ್ತು ಮಿರ್ಲೆ ಈ ಮೂವರು ತೊಂದರೆ ನೀಡಿದರೆ ನಿಖಿತ ದೂರು ಸಲ್ಲಿಸಿ. ಮಿರ್ಲೆ ಹಿಂದೆ ಎಷ್ಟೆ ಪ್ರಭಾವಿಗಳಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಅಲೋಕ್‌ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)