varthabharthi

ಕರಾವಳಿ

ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನ

ಸಾಹಿತ್ಯ ನಮ್ಮ ಅಂತರಂಗದ ಶುದ್ಧತೆಯನ್ನು ಕಾಪಾಡುವ ಕೊಂಡಿ: ಪ್ರೊ. ಟಿ.ಪಿ ಅಶೋಕ್

ವಾರ್ತಾ ಭಾರತಿ : 6 Dec, 2018

ಬೆಳ್ತಂಗಡಿ, ಡಿ. 6: ನಮ್ಮ ನಡುವೆ ಇರುವ ಎಲ್ಲ ಗೊಂದಲಗಳ ನಡುವೆಯೂ ಸಾಹಿತ್ಯ ಇಂದಿಗೂ ಹೆಚ್ಚು ಪ್ರಸ್ತುತವಾಗಿದೆ. ಸಾಹಿತ್ಯ ಮಾತ್ರ ನಮ್ಮ ಅಂತರಂಗದ ಶುದ್ಧತೆಯನ್ನು ನೈತಿಕತೆಯನ್ನು ಕಾಪಾಡುವ ಕೊಂಡಿಯಾಗಿದೆ. ಓದುಗನ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಕಾರ್ಯವನ್ನು ಸಾಹಿತ್ಯ ಮಾಡಬೇಕಾಗಿದೆ ಎಂದು ಹಿರಿಯ ವಿಮರ್ಶಕ ಪ್ರೊ. ಟಿ.ಪಿ ಅಶೋಕ್ ಹೇಳಿದರು.

ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಅಂಗವಾಗಿ ನಡೆದ ಸಾಹಿತ್ಯಸಮ್ಮೇಳನದ 86ನೆ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾವ್ಯ ಸೃಷ್ಟಿಯ ಒಂದು ತುದಿಯಲ್ಲಿ ಲೇಖಕನಿರುತ್ತಾನೆ, ಮತ್ತೊಂದು ತುದಿಯಲ್ಲಿ ಓದುಗನಿರುತ್ತಾನೆ, ಓದುಗ ಓದಿದಾಗ ಮಾತ್ರ ಅದು ಪೂರ್ಣತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಕಾವ್ಯ ಯಾವಾಗಲೂ ಒಂದೇ ಅರ್ಥ  ನೀಡುವುದಿಲ್ಲ ಅದು ಬಹು ಅರ್ಥಗಳ ಚಿಂತನೆಗಳನ್ನು ನೀಡುತ್ತದೆ, ನಮ್ಮ ಅನುಭವಗಳನ್ನು ಇತರರ ಅನುಭವಗಳೊಂದಿಗೆ ಸಂವಾದ ನಡೆಯಬೇಕಾಗಿದೆ. ಅದೇ ಪ್ರಜಾಸತ್ತಾತ್ಮಕ ಮೌಲ್ಯವಾಗಿದೆ, ಭಿನ್ನ ದ್ವನಿಗಳನ್ನು ಕೇಳುವ ಸಂವಾದ ಮಾಡುವ ಕಾರ್ಯ ನಡೆಯಬೇಕಾಗಿದೆ ಎಂದು ಅವರು ಹೇಳಿದರು.

ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಉಧ್ಯಮಿ ವಿಜಯ ಸಂಕೇಶ್ವರ್ ನೆರವೇರಿಸಿ ಮಾತನಾಡುತ್ತಾ ಚಿಕ್ಕ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದಾಗ ದೊಡ್ಡ ಕೆಲಸಗಳನ್ನು ಮಾಡಲು ಅವಕಾಶ ದೊರಕುತ್ತದೆ. ಕಾಯಕದ ಮಹತ್ವವನ್ನು ಯುವ ಜನತೆಗೆ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮನುಷ್ಯ ಸುಶಿಕ್ಷಿತನಾದಂತೆ ಅವನಲ್ಲಿ ಸುಪ್ತವಾಗಿರುವ ವಿವೇಕಪ್ರಜ್ಞೆ ಜಾಗೃತವಾಗಬೇಕು ಪರಿಣಾಮವಾಗಿ ಮೂಢನಂಬಿಕೆ ಅಂಧ ವಿಶ್ವಾಸ, ಕಟ್ಟು ಕಥೆಗಳು ದೂರವಾಗಬೇಕು ಶುದ್ದ ಯಾಥಾರ್ಥದಲ್ಲಿ  ಜ್ಞಾನವು ಬೆಳೆಯಬೇಕು ಸಹಿತ್ಯವೂ ಬೆಳೆಯಬೇಕು, ಆಗ ಜಗತ್ತನ್ನು ಜಗತ್ತಿನ ರಹಸ್ಯಗಳನ್ನು ಮಾನವ ಬದುಕಿನ ಉದ್ದೇಶಗಳನ್ನು ತಿಳಿದುಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು. 

ಸಮ್ಮೇಳನದಲ್ಲಿ ಕುವೆಂಪು ದರ್ಶನ ವಿಚಾರದ ಬಗ್ಗೆ ಮಾತನಾಡಿದ ದ. ಕ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್.ರವಿಕಾಂತೇಗೌಡ ಕುವೆಂಪು ಅವರು ಕೇವಲ ಕಾವ್ಯಕ್ಕೆ ಮಾತ್ರ ಸೀಮಿತರಾಗಿಲ್ಲ ಅವರು ಮುಂದಿಟ್ಟ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನ್ನು ಮುಂದಿಟ್ಟ ಶ್ರೇಷ್ಟ ಚಿಂತಕ. ವೈಚಾರಿಕತೆಯನ್ನು ಮುಂದಿಟ್ಟ ಕುವೆಂಪು ಅವರು ಎಂದಿಗೂ ನಾಸ್ತಿಕವಾದಿಯಾಗಿರಲಿಲ್ಲ. ಅವರು ವೈಚಾರಿಕತೆಯನ್ನು ಮುಂದಿಡುವಾಗಲೇ ಆಧ್ಯಾತ್ಮಿಕತಾವಾದಿಯೂ ಆಗಿದ್ದರು, ಜಗತ್ತಿನ ಸೃಷ್ಟಿಯ ಮೂಲ ನೆಲೆಯನ್ನು ಅರಿಯುವುದು ಆಧ್ಯಾತ್ಮದ ಗುರಿಯೂ ಆಗಿದೆ ವೈಚಾರಿಕತೆ ವಿಜ್ಞಾನದ ಗುರಿಯೂ ಆಗಿದೆ ಎಂದರು.

ಗೋಷ್ಟಿಯಲ್ಲಿ ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಎಂಬ ವಿಚಾರದ ಬಗ್ಗೆ ಮಾತನಾಡಿದ ಅಬ್ದುಲ್ ರಹಿಮಾನ್ ಪಾಷಾ ಅಕ್ಷರ ಸಾಕ್ಷರತೆಯೊಂದಿಗೆ ವೈಜ್ಞಾನಿಕ ಸಾಕ್ಷರತೆಯನ್ನು ಬೆಳೆಸುವ ಅಗತ್ಯವಿದೆ, ವಿಜ್ಞಾನವನ್ನು ಇನ್ನಷ್ಟು ಜನರ ಹತ್ತಿರ ಕೊಂಡೊಯ್ಯುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.

ಕಗ್ಗದಲ್ಲಿ ಜೀವನ ಮೌಲ್ಯಗಳ ಬಗ್ಗೆ ಕವಿತಾ ಅಡೂರ್ ಮಂಡಿಸಿದರು. ವೇದಿಕೆಯಲ್ಲಿ ಡಿ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಶ್ರದ್ದಾ ಅಮಿತ್ ಹಾಗೂ ಶ್ರೇಯಸ್ ಕುಮಾರ್ ಸನ್ಮಾನಿತರ ಪರಿಚಯ ಮಾಡಿದರು. ಸುವರ್ಣ ಸಂಚಿಕೆ ಮಾಲಿಕೆಯ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪ್ರೊ.ಎಂ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ವಿನಯಕುಮಾರ್ ವಂದಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)