varthabharthi

ವೈವಿಧ್ಯ

ಬುಲಂದ್‌ಶಹರ್ ಗಲಭೆ ದೊಡ್ಡ ಸಂಚಿನ ಭಾಗವಾಗಿತ್ತೆ?

ವಾರ್ತಾ ಭಾರತಿ : 9 Dec, 2018
ಅಭಿಷೇಕ್ ಡೇ

ಭಾಗ-2

ಬುಲಂದ್‌ಶಹರ್ ಗಲಭೆಯು ಕೇವಲ ಕಾನೂನು ಮತ್ತು ಶಿಸ್ತಿನ ಸಮಸ್ಯೆಯಲ್ಲ. ಈ ಹಿಂಸಾಚಾರವು ದೊಡ್ಡ ಸಂಚೊಂದರ ಭಾಗವಾಗಿತ್ತೆಂದು ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ಹೇಳಿದ್ದಾರೆ.
ದನದ ಕಳೇಬರಗಳು ಅಲ್ಲಿ ತಲುಪಲು ಹೇಗೆ ಸಾಧ್ಯವಾಯಿತು? ಅದನ್ನು ಯಾರು ಹಾಗೂ ಯಾವ ಸನ್ನಿವೇಶದಲ್ಲಿ ತಂದಿದ್ದರು ಎಂದವರು ಪ್ರಶ್ನಿಸಿದ್ದಾರೆ.

ಗುಂಪಿನಲ್ಲಿದ್ದ ಕೆಲವರು ಪೊಲೀಸ್ ಅಧಿಕಾರಿಗಳ ಕೈಯಿಂದ ವಯರ್‌ಲೆಸ್ ಸೆಟ್‌ಗಳನ್ನು ಕಸಿಯಲು ಯತ್ನಿಸಿದರು. ಇದರಿಂದಾಗಿ ಗಲಭೆಯನ್ನು ನಿಯಂತ್ರಿಸಲು ಹೆಚ್ಚುವರಿ ಪಡೆಗಳನ್ನು ಕರೆಯಿಸಿಕೊಳ್ಳುವುದು ವಿಳಂಬವಾಯಿತು. ಕೊನೆಗೂ ಓರ್ವ ಅಧಿಕಾರಿ ಚಿಂಗ್ರಾವತಿ ಪೊಲೀಸ್ ಠಾಣೆಯೊಳಗಿನ ಕೊಠಡಿಯೊಳಗೆ ಬೀಗ ಜಡಿದು, ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿದರು. ಹೆಚ್ಚುವರಿ ಪಡೆಗಳು ಆಗಮಿಸುವ ಮುನ್ನ ಪೊಲೀಸರು ಗುಂಪಿನಲ್ಲಿದ್ದವರ ಮೇಲೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು. ಈ ಸಮಯದಲ್ಲಿ ಇನ್‌ಸ್ಪೆೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಕೂಡಾ ಆತ್ಮರಕ್ಷಣೆಗಾಗಿ ಗುಂಡುಹಾರಿಸಬೇಕಾಯಿತು. ಆದರೆ, ಸುಬೋಧ್ ಕುಮಾರ್ ಸಿಂಗ್ ಗುಂಡುಹಾರಿಸಿದ್ದನ್ನು ನೋಡಿಲ್ಲವೆಂದು ಹಲವರು ಸಾಕ್ಷ ನುಡಿದಿದ್ದಾರೆ.

ಮಧ್ಯಾಹ್ನ 1:30ರಿಂದ 2:00
ಈ ಗುಂಡುಹಾರಾಟದಲ್ಲಿ ಚಿಂಗ್ರಾವತಿ ಗ್ರಾಮದ ನಿವಾಸಿ ಸುಮಿತ್ ಕುಮಾರ್ ಮೃತಪಟ್ಟಿದ್ದ. ಆತನಿಗೆ ತಾಗಿದಂತಹ ಗುಂಡನ್ನು ಯಾರು ಎಸೆದರು ಎಂಬುದಿನ್ನೂ ದೃಢಪಟ್ಟಿಲ್ಲ. ಆದಾಗ್ಯೂ ಕೆಲವು ದಿನಗಳ ನಂತರ ಬಹಿರಂಗಗೊಂಡ ವಿಡಿಯೋಟೇಪ್‌ನಲ್ಲಿ ಗಲಭೆನಿರತಗುಂಪಿನವರಲ್ಲಿದ್ದ ಕೆಲವರು ಪೊಲೀಸ್ ಅಧಿಕಾರಿಯೊಬ್ಬರು ಕುಮಾರ್‌ಗೆ ಗುಂಡುಹಾರಿಸಿದ್ದರೆಂದು ಹೇಳುತ್ತಿರುವುದು ಕಾಣಿಸುತ್ತಿತ್ತು.
ಇದೇ ಹೊತ್ತಲ್ಲಿ ರಸ್ತೆಯ ಇನ್ನೊಂದು ಮೂಲೆಯಲ್ಲಿ ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್‌ಸಿಂಗ್ ಬಿದ್ದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಸಿಂಗ್ ಅವರಿಗೆ ಗುಂಡೇಟಿನಿಂದ ಗಾಯವಾಗಿತ್ತೆ ಅಥವಾ ಕಲ್ಲೆಸೆತದಿಂದಾಗಿ ಗಾಯಗೊಂಡರೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
 ಇನ್ನಿಬ್ಬರು ಕಾನ್‌ಸ್ಟೇಬಲ್‌ಗಳ ಜೊತೆಗೂಡಿ ತಾನು, ಸಿಂಗ್ ವಾಹನದೊಳಗೆ ಸೇರಲು ನೆರವಾಗಿದ್ದಾಗಿ ಅವರ ಚಾಲಕ ಕಾನ್‌ಸ್ಟೇಬಲ್ ರಾಮಾಶ್ರಯ್ ತಿಳಿಸಿದ್ದಾರೆ. ಆನಂತರ ತಾನು ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವಾಗಿ ಪೊಲೀಸ್ ಠಾಣೆಯಿಂದ 50 ಮೀಟರ್ ದೂರದಲ್ಲಿ ತೆರೆದ ಬಯಲಿನೆಡೆಗೆ ಸಾಗಿದ್ದಾಗಿ ಆತ ಹೇಳುತ್ತಾರೆ. ಆದರೆ ಗುಂಪಿನಲ್ಲಿದ್ದವರು ವಾಹನದ ಮೇಲೆ ಕಲ್ಲೆಸೆಯತೊಡಗಿದರು. ಆದರೆ ವಾಹನವು ಗದ್ದೆಯಲ್ಲಿ ಸಾಗಲಾಗದೆ ಸಿಕ್ಕಿಹಾಕಿಕೊಂಡಿತು. ಆನಂತರ ರಾಮಾಶ್ರಯ್ ಜೀವಭಯದಿಂದ ಸುಬೋಧ್ ಸಿಂಗ್ ಅವರನ್ನು ಅಲ್ಲಿಯೇ ತೊರೆದು ಪರಾರಿಯಾದರು.
  ಸಿಂಗ್ ಅವರ ನಿರ್ಜೀವ ದೇಹವು ಆನಂತರ ವಾಹನದಲ್ಲಿ ಪತ್ತೆಯಾಯಿತು. ಅವರ ದೇಹದ ಮೇಲಿನ ಭಾಗ ವಾಹನದಲ್ಲಿ ನೇತಾಡುತ್ತಿದ್ದರೆ, ಕಾಲುಗಳು ಸ್ಟೀರಿಂಗ್ ವೀಲ್‌ಗಳ ನಡುವೆ ಸಿಕ್ಕಿಹಾಕಿಕೊಂಡಿದ್ದವು. ತಲೆ ಹಾಗೂ ಅವರ ಮುಖದಿಂದ ರಕ್ತ ಹರಿದುಹೋಗುತ್ತಿತ್ತು.
ಮಧ್ಯಾಹ್ನ 2:00 ಗಂಟೆಯ ವೇಳೆಗೆ ಹೆಚ್ಚುವರಿ ಪೊಲೀಸ್ ಪಡೆಗಳು ಸ್ಥಳಕ್ಕೆ ಆಗಮಿಸಿದವು ಹಾಗೂ ಸಿಂಗ್ ಅವರ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇದೇ ವೇಳೆಗೆ ಗಲಭೆ ನಿರತರು ಸಿಂಗ್‌ರ ವಾಹನಕ್ಕೆ ಬೆಂಕಿ ಹಚ್ಚಿದರು.
 ಆರಂಭದಲ್ಲಿ ಪೊಲೀಸರು ಇನ್‌ಸ್ಪೆಕ್ಟರ್ ಸುಬೋಧ್, ತಲೆಗಾದ ಪಟ್ಟಿನಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವೇಳೆ ವೈದ್ಯರು, ಇನ್‌ಸ್ಪೆಕ್ಟರ್ ಸುಬೋಧ್ ಅವರ ತಲೆಯ ಹಿಂದುಗಡೆ ಬುಲೆಟ್ ಗಾಯವಾಗಿರುವುದನ್ನು ಗುರುತಿಸಿತ್ತು. ಆದಾಗ್ಯೂ ಸಿಂಗ್‌ಗೆ ಗುಂಡು ಹೊಡೆಯಲಾಯಿತೆಂಬುದನ್ನು ದೃಢಪಡಿಸಲು ಅವರ ಚಾಲಕನಿಗೆ ಸಾಧ್ಯವಾಗಿಲ್ಲ. ಸಿಂಗ್‌ರ ಬಂದೂಕನ್ನು ಬಳಸಿಯೇ ಅವರನ್ನು ಹಂತಕರು ಗುಂಡಿಕ್ಕಿ ಕೊಂದಿದ್ದಾರೆ ಹಾಗೂ ಅವರ ಲೈಸೆನ್ಸ್ ಸಹಿತವಾದ ಬಂದೂಕು ಹಾಗೂ ಮೊಬೈಲ್ ಫೋನ್‌ಗಳೊಂದಿಗೆ ಪರಾರಿಯಾಗಿರಬೇಕೆಂದು ಅವರು ಶಂಕಿಸಿದ್ದಾರೆ.
 ಆದರೆ ಹಫ್‌ಪೋಸ್ಟ್ ಜಾಲತಾಣ ವರದಿ ಮಾಡಿರುವ ಪ್ರಕಾರ, ಗಲಭೆನಿರತರ ತಂಡ ತಮ್ಮ ಎದುರಿಗೆ ಬರುತ್ತಿದ್ದ ಮುಸ್ಲಿಮ್ ಯುವಕರ ಮೇಲೆ ದಾಳಿ ನಡೆಸಲು ಬಯಸಿತ್ತು. ಆದರೆ ಇದನ್ನು ತಡೆಯಲು ಯತ್ನಿಸಿದ ಇನ್‌ಸ್ಪೆಕ್ಟರ್ ಸಿಂಗ್, ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದರು.
ಒಂದು ವೇಳೆ ಅವರು ಹಾಗೆ ಮಾಡಿರದೆ ಇದ್ದಲ್ಲಿ ಇಜ್ತೆಮಾ ಸಮಾವೇಶದಿಂದ ವಾಪಸಾಗುತ್ತಿದ್ದ ಇಬ್ಬರು ಮುಸ್ಲಿಮರ ಹತ್ಯೆಯಾಗುವ ಅಪಾಯವಿತ್ತು. ಆದರೆ ದೊಡ್ಡದೊಂದು ಗಲಭೆ ಭುಗಿಲೇಳುವುದನ್ನು ತಪ್ಪಿಸಲು ಸಿಂಗ್ ಅವರು ತನ್ನ ಜೀವವನ್ನೇ ಬಲಿದಾನಗೈದರು.
ಮಧ್ಯಾಹ್ನ 2:30
ತನ್ನ ಸಹೋದರ, ಮಧ್ಯಾಹ್ನ ಸುಮಾರು 2:30ರ ಹೊತ್ತಿಗೆ ಮನೆಗೆ ವಾಪಸಾಗಿದ್ದ. ಆದರೆ ಇನ್ನೊಂದು ಅರ್ಧಗಂಟೆಯ ಬಳಿಕ ಆತ ಮತ್ತೆ ಮನೆಯಿಂದ ಹೊರಬಿದ್ದನೆಂದು ಯೋಗೇಶ್ ರಾಜ್ ಸಹೋದರಿ ಮಾಹುರ್ ಹೇಳುತ್ತಾರೆ. ಆನಂತರ ಆತ ಗೋಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದನೆಂಬುದು ನಮಗೆ ನೆರೆಹೊರೆಯವರಿಂದ ತಿಳಿದುಬಂದಿತು. ಆದರೆ ಆತ ಹಿಂಸೆಯಲ್ಲಿ ಪಾಲ್ಗೊಂಡಿರಲಿಲ್ಲವೆಂದು ಆಕೆ ಸ್ಪಷ್ಟಪಡಿಸುತ್ತಾಳೆ. ಆತನಿಗೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:00ಯ ಗಂಟೆವರೆಗೆ ಪರೀಕ್ಷೆಯಿತ್ತು. ಆತ ಅದಕ್ಕಾಗಿ ಸಿದ್ಧತೆ ನಡೆಸುತ್ತಿರುವುದಾಗಿ ಆಕೆ ಸ್ಪಷ್ಟಪಡಿಸುತ್ತಾಳೆ.
ಆದರೆ ಈ ಗಲಭೆಗೆ ಸಂಬಂಧಿಸಿ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ವೀಡಿಯೊ ಕ್ಲಿಪ್‌ನಲ್ಲಿ ಸುಬೋಧ್ ಕುಮಾರ್‌ಸಿಂಗ್ ಜೊತೆ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತಿತ್ತು. ಅಷ್ಟೇ ಅಲ್ಲ ಅಂದು ಯಾವುದೇ ಪರೀಕ್ಷೆಯನ್ನು ಆಯೋಜಿಸಲಾಗಿರಲಿಲ್ಲವೆಂಬುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ತೆಹಚ್ಚಿದೆ.
ಮಧ್ಯಾಹ್ನ 2:50
 ರಾಜ್, ಆತನ ಇಬ್ಬರು ಬಂಧುಗಳು, ಸುಮಿತ್ ಕುಮಾರ್ ಹಾಗೂ ರಾಜ್‌ಕುಮಾರ್ ಚೌಧುರಿ ಸೇರಿದಂತೆ ಸುಮಾರು 27 ಶಂಕಿತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಕೊಲೆ, ಕೊಲೆಯತ್ನ ದಂಗೆ, ಸರಕಾರಿ ಉದ್ಯೋಗಿಗಳ ಮೇಲೆ ಹಲ್ಲೆ ಹಾಗೂ ಸಾರ್ವಜನಿಕ ಸೊತ್ತಿಗೆ ಹಾನಿ ಸೇರಿದಂತೆ 17 ಆರೋಪಗಳನ್ನು ಹೊರಿಸಿದ್ದರು.
ಬುಲಂದ್‌ಶಹರ್ ಗಲಭೆಯು ಕೇವಲ ಕಾನೂನು ಮತ್ತು ಶಿಸ್ತಿನ ಸಮಸ್ಯೆಯಲ್ಲ. ಈ ಹಿಂಸಾಚಾರವು ದೊಡ್ಡ ಸಂಚೊಂದರ ಭಾಗವಾಗಿತ್ತೆಂದು ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ಹೇಳಿದ್ದಾರೆ.
ದನದ ಕಳೇಬರಗಳು ಅಲ್ಲಿ ತಲುಪಲು ಹೇಗೆ ಸಾಧ್ಯವಾಯಿತು? ಅದನ್ನು ಯಾರು ಹಾಗೂ ಯಾವ ಸನ್ನಿವೇಶದಲ್ಲಿ ತಂದಿದ್ದರು ಎಂದವರು ಪ್ರಶ್ನಿಸಿದ್ದಾರೆ.
ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)