varthabharthi

ವೈವಿಧ್ಯ

ಫ್ರೆಂಚ್ ಸಿನೆಮಾ

ಅಟ್ ವಾರ್: ಶ್ರಮಿಕರ ಬವಣೆಯ ಸುತ್ತಮುತ್ತ...

ವಾರ್ತಾ ಭಾರತಿ : 9 Dec, 2018
ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಅಟ್ ವಾರ್ (At War)

ಸಿನೆಮಾಕ್ಕೆ ಎರಡು ಮುಖಗಳಿವೆ. 1. ಸೂಕ್ಷ್ಮಜ್ಞರ ಕಲಾತ್ಮಕ ಅಭಿವ್ಯಕ್ತಿಯಾಗಿ ಸಿನೆಮಾ. 2. ಮನರಂಜನಾ ವ್ಯಾಪಾರಿಗಳ ಸರಕಾಗಿ ಸಿನೆಮಾ. ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳು ಜೀವನಾನುಭವವನ್ನು ಅದರ ತಾತ್ವಿಕ ನಿಲುವುಗಳೊಂದಿಗೆ ವಿಮರ್ಶಿಸಿ ಸೃಜಿಸುವ ಕಲಾತ್ಮಕ ಚಿತ್ರಗಳ ಪ್ರದರ್ಶನ ವೇದಿಕೆ ಎಂಬ ನಂಬಿಕೆ ಒಂದು ಕಾಲದಲ್ಲಿ ಇತ್ತು. ವಿಶ್ವಮಟ್ಟದಲ್ಲಿ ಹಣಕಾಸು ಬಂಡವಾಳವು ಡಿಜಿಟಲ್ ಬಂಡವಾಳವಾಗಿ ಎಲ್ಲೆಲ್ಲೂ ವಿಜೃಂಭಿಸುತ್ತಿರುವ ಈಚಿನ ವರ್ಷಗಳಲ್ಲಿ, ಮಾರುಕಟ್ಟೆಯ ಕಪಿಮುಷ್ಟಿಗೆ ಜನಜೀವನವು ಸಿಕ್ಕಿರುವುದಲ್ಲದೆ, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸೃಜನಾತ್ಮಕ ಕಲೆಗಳೂ ಸಹ ಬಂಡವಾಳದ ಹೊಡೆತಕ್ಕೆ ನಲುಗಿ, ಚಿತ್ರೋತ್ಸವಗಳಲ್ಲೂ ಸಹ ಪ್ರೌಢವಲ್ಲದ ಮನಸ್ಸುಗಳಿಗೆ ರೋಮಾಂಚನ ಉಂಟುಮಾಡುವ ಥ್ರಿಲ್ಲರ್‌ಗಳು, ಸಂವೇದನಾಶೀಲರ ಭಾವನೆಗಳನ್ನು ನಾಟಕೀಯವಾಗಿಸಿ ನಗದೀಕರಿಸಿಕೊಳ್ಳಬಯಸುವ ಕೌಟುಂಬಿಕ ಡ್ರಾಮಾಗಳು ಮತ್ತು ಸಾಮಾಜಿಕ ಬದುಕಿನ ಮುಖ್ಯಕಾಳಜಿಗಳನ್ನು ಮರೆಮಾಚುವಂತೆ ನವ ನವೀನ ರೀತಿಯಲ್ಲಿ ಮನರಂಜನೆಯನ್ನೊದಗಿಸುವ ಮಸಾಲೆ ಚಿತ್ರಗಳು ಮೇಲುಗೈ ಪಡೆಯುತ್ತಿವೆ. ಆದರೆ ನಿರಾಶೆ ಇನ್ನೂ ಅನಿವಾರ್ಯವಾಗಿಲ್ಲ. ಬಹುಶಃ ಆಗುವುದೂ ಇಲ್ಲ. ಏಕೆಂದರೆ ಇವುಗಳ ಮಧ್ಯೆಯೂ ಪ್ರಸ್ತುತ ಬದುಕಿನ ಬಿಕ್ಕಟ್ಟುಗಳನ್ನು, ತಮ್ಮ ಅನನ್ಯ ಶೈಲಿಯಲ್ಲಿ, ಸೃಜನಾತ್ಮಕವಾಗಿ ಸಿನೆಮಾ ಸಹೃದಯರ ಮುಂದಿಡಲು ಬಯಸುವ ಗೊಡಾರ್ಡ್, ಅಸ್ಗರ್ ಪನಾಹಿ, ನೂರಿ ಬಿಲ್ಗೆ ಸಿಲಾನ್, ಸ್ಟೀಫನ್ ಬ್ರಿಜೆ, ನದೀನ್ ಲಬಾಕಿಯಂಥ ಸಂವೇದನಾಶೀಲ ಚಿತ್ರನಿರ್ದೇಶಕರ ಚಿತ್ರಗಳು ವಿರಳವಾಗಿಯಾದರೂ ಭಾರತದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿ ಸಿನೆಮಾ ಸಹೃದಯರಿಗೆ ನೋಡಲು ಸಿಗುತ್ತಿವೆ.
ಗೋವಾದ 2018ರ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸ್ಟೀಫನ್ ಬ್ರಿಜೆ ನಿರ್ದೇಶಿಸಿರುವ ಫ್ರೆಂಚ್ ಭಾಷೆಯ ‘ಅಟ್ ವಾರ್’ (En Guerre
 ) ಇಂಥ ಸಂವೇದನಾಶೀಲ ವಿರಳ ಚಿತ್ರ. ಬಂಡವಾಳಶಾಹಿ ತಾತ್ವಿಕತೆಯ ರಾಜಕೀಯ ಸಿದ್ಧಾಂತಿಗಳು ಈ ಡಿಜಿಟಲ್ ಬಂಡವಾಳದ ಆಧುನಿಕೋತ್ತರ ಯುಗದಲ್ಲಿ ಕಾರ್ಮಿಕರೇ ಇಲ್ಲ, ಆದ್ದರಿಂದ ಕಾರ್ಲ್ ಮಾರ್ಕ್ಸ್, ಸಮಾಜವಾದ, ಕ್ರಾಂತಿ ಮುಂತಾದುವೆಲ್ಲಾ ಅರ್ಥ ಕಳೆದುಕೊಂಡು, ಅಪ್ರಸ್ತುತವಾಗಿವೆ ಎಂದು ಕೇಕೆ ಹಾಕುತ್ತಿರುವಾಗಲೇ ಜಾಗತಿಕ ಬಂಡವಾಳವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಾ ಕ್ಯಾಪಿಟಲ್ ಗ್ರಂಥದ ಅಧ್ಯಯನವು, ಬಂಡವಾಳಿಗರಿಗೂ ಸಹ ಅನಿವಾರ್ಯವಾಗಿಬಿಟ್ಟಿದೆ. ಬಂಡವಾಳಶಾಹಿ ಸಮಾಜದಲ್ಲಿ ಬಿಕ್ಕಟ್ಟುಗಳು ತಲೆದೋರಿದಾಗಲೆಲ್ಲಾ ಬಂಡವಾಳಿಗರು ತಮ್ಮ ಬಂಡವಾಳ ವೃದ್ಧಿಯ ಕುಸಿತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಶ್ರಮಿಕರನ್ನು ಕೆಲಸದಿಂದ ತೆಗೆಯುವುದು, ಅದರ ಪರಿಣಾಮವಾಗಿ ಶ್ರಮಿಕರು ತಮ್ಮ ಬದುಕನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಮುಷ್ಕರಕ್ಕೆ ಕರೆಕೊಡುವುದೂ ಸಹಜವಾದ ವಿದ್ಯಮಾನಗಳು. ತತ್ಫಲವಾಗಿ, ಸಾಲ-ಸೋಲದ ಸಂಕಷ್ಟಗಳು, ವೈಯಕ್ತಿಕ ಘನತೆಯ ನಾಶ, ಹತಾಶೆ, ಆತ್ಮಹತ್ಯೆಯಂಥ ತೀವ್ರತರದ ಪರಿಣಾಮಗಳನ್ನು ಎದುರಿಸುವುದು ನೇರವಾಗಿ ಮಧ್ಯಮವರ್ಗದ ಜನರನ್ನು ತಟ್ಟುವುದೇ ಇಲ್ಲ. 1909 ರಷ್ಟು ಹಿಂದೆಯೇ ಬ್ರಿಟಿಷ್ ನಾಟಕಕಾರ ಜಾನ್ ಗಾಲ್ಸ್ ವರ್ದಿ ಸ್ಟ್ರೈಫ್ ಎಂಬ ನಾಟಕ ರಚಿಸಿ ಬಂಡವಾಳಿಗರ ಅಮಾನುಷತೆಯಿಂದಾಗಿ ಆರ್ಥಿಕ ಮತ್ತು ವೈಯಕ್ತಿಕ ಸಂಕಷ್ಟಗಳಡಿಯಲ್ಲಿ ಸಿಕ್ಕ ಶ್ರಮಿಕರು ಅಡಕತ್ತರಿಯಲ್ಲಿ ಸಿಕ್ಕಿ ಸೋಲೊಪ್ಪಿಕೊಳ್ಳುವ ದಾರುಣತೆಯನ್ನು ಕಲೆಯ ಆಸ್ವಾದನೆಯಲ್ಲಿ ಮೈಮರೆಯಬಯಸುವ ಮಧ್ಯಮವರ್ಗೀಯರ ಮುಂದೆ ಪ್ರಸ್ತುತಪಡಿಸಿದ್ದ.
1978ರಲ್ಲಿ ಇಂಗ್ಲೆಂಡಿನ ನ್ಯಾಶನಲ್ ಥಿಯೇಟರ್ ಮತ್ತು ಇತ್ತೀಚೆಗೆ 2016ರಲ್ಲಿ ಮಿನರ್ವ ಥಿಯೇಟರ್ ಈ ನಾಟಕವನ್ನು ಇಂಗ್ಲೆಂಡಿನಲ್ಲಿ ಪ್ರದರ್ಶಿಸಿವೆ.

ಸ್ಟೀಫನ್ ಬ್ರಿಜೆ ನಿರ್ಮಿಸಿರುವ ಈ ಚಿತ್ರದಲ್ಲೂ ಬಂಡವಾಳಶಾಹಿ ಪ್ರಜಾಪ್ರಭುತ್ವದ ಶೋಷಣಾತ್ಮಕ ಚೌಕಟ್ಟಿನೊಳಗಿನ ತೋರಿಕೆಯ ನ್ಯಾಯವನ್ನ್ನು ನಿರಾಕರಿಸುವ ಎರಡು ನಾಲಿಗೆಯ ಆಡಳಿತ ಮಂಡಳಿಯ ವಿರುದ್ಧ ಕೆಲಸ ಕಳೆದುಕೊಂಡ 1,100 ಶ್ರಮಿಕರು ತಮ್ಮ ಮತ್ತು ತಮ್ಮನ್ನು ನೆಚ್ಚಿಕೊಂಡ ಕುಟುಂಬಗಳ 4,000 ಜನರ ಬದುಕಿಗಾಗಿ, ನಾಗರಿಕ ವ್ಯಕ್ತಿಗಳಾಗಿ ತಮ್ಮ ಘನತೆಗಾಗಿ ಮುಷ್ಕರ ಹೂಡುತ್ತಾರೆ. ಮೂಲ ಕಂಪೆನಿಯಾಗಿ ಜರ್ಮನಿಯಲ್ಲಿ ಕುಳಿತು ಫ್ರಾನ್ಸ್‌ನ ಏಜೆನ್ ನಗರದಲ್ಲಿ ಮೋಟಾರು ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ತಮ್ಮ ಅಂಗ ಸಂಸ್ಥೆಯಾದ ಪೆರ್ರಿನ್ ಕಾರ್ಖಾನೆಯ ಎಲ್ಲಾ ಕಾರ್ಮಿಕರನ್ನೂ ವಜಾಮಾಡಿ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ವನ್ನು ಆಡಳಿತ ಮಂಡಳಿಯು ತೆಗೆದುಕೊಳ್ಳುತ್ತದೆ. ಎರಡು ವರ್ಷಗಳ ಹಿಂದೆ ಆಡಳಿತವರ್ಗವು ಫ್ಯಾಕ್ಟರಿಯು ಲಾಭದಲ್ಲಿದ್ದರೂ, ಮುಚ್ಚಲು ಮುಂದಾದಾಗ, ಇನ್ನು ಐದು ವರ್ಷಗಳ ಕಾಲ ಫ್ಯಾಕ್ಟರಿಯನ್ನು ಮುಚ್ಚಬಾರದು, ಅದಕ್ಕೆ ಪ್ರತಿಯಾಗಿ ಕಾರ್ಮಿಕರು ಕಡಿಮೆ ವೇತನಕ್ಕೆ ಕೆಲಸಮಾಡುತ್ತಾರೆ ಮತ್ತು ತಮ್ಮ ಬೋನಸನ್ನು ಬಿಟ್ಟುಕೊಡುತ್ತಾರೆ ಎಂಬ ಷರತ್ತಿಗೆ ಆಡಳಿತವರ್ಗವು ಒಪ್ಪಿರುತ್ತದೆ. ಆದರೆ ಷೇರುದಾರರಿಗೆ ಹೆಚ್ಚಿನ ಲಾಭಾಂಶವನ್ನು ಗಳಿಸಿಕೊಡುವುದಕ್ಕಾಗಿ ಕಾರ್ಮಿಕರೊಂದಿಗೆ ಆಗಿದ್ದ ಈ ಒಪ್ಪಂದವನ್ನು ಆಡಳಿತವರ್ಗವು ಉಲ್ಲಂಘಿಸುತ್ತದೆ. ಮತ್ತೆಲ್ಲಿಯೂ ಕೆಲಸ ಸಿಗುವ ಅವಕಾಶವಿಲ್ಲದೆ ಆಡಳಿತಾಧಿಕಾರಿಯನ್ನು ನೇರವಾಗಿ ಭೇಟಿಯಾಗಲು ಮುಷ್ಕರ ನಿರತರು ತಮ್ಮ ಪ್ರತಿನಿಧಿಯಾದ ಲಾರೆಂಟ್ ಅಮೆದೇವೋರ ಮುಂದಾಳತ್ವದಲ್ಲಿ ಪಟ್ಟುಹಿಡಿಯುತ್ತಾರೆ. ಆದರೆ ಮಾಮೂಲಿನಂತೆ ಆಡಳಿತಾಧಿಕಾರಿಯು ಕಾರ್ಮಿಕರ ಪ್ರತಿಧಿಗಳನ್ನು ಭೇಟಿಯಾಗಲು ನಿರಾಕರಿಸುತ್ತಾನೆ. ಮಾಮೂಲಿನಂತೆ ಕಾರ್ಮಿಕರು ಮುಷ್ಕರವನ್ನು ಹಿಂದೆಗೆದುಕೊಂಡು ಮಾತುಕತೆಗೆ ಬರಬಹುದೆಂದು ಆಡಳಿತಾಧಿಕಾರಿಯ ಪ್ರತಿನಿಧಿಗಳು ಸೂಚಿಸುತ್ತಾರೆ. ಕೊಟ್ಟ ಒಪ್ಪಂದವನ್ನು ಮುರಿಯುವ ಆಡಳಿತವರ್ಗದ ಜೊತೆ ಮತ್ತೊಂದು ಒಪ್ಪಂದವನ್ನು ಮಾಡಿಕೊಂಡರೂ ಅಷ್ಟೆ ಮಾಡಿಕೊಳ್ಳದಿದ್ದರೂ ಅಷ್ಟೆ ಎಂಬ ಸ್ಥಿತಿಯಲ್ಲಿ, ಕಾರ್ಮಿಕರು ಕಾರ್ಮಿಕ ನ್ಯಾಯಾಲಯದಲ್ಲಿ ಆಡಳಿತವರ್ಗದ ವಿರುದ್ಧ ದಾವೆ ಹೂಡುತ್ತಾರೆ. ಮಾಮೂಲಿನಂತೆ ಕಾರ್ಮಿಕರ ಬಗ್ಗೆ ಸಹಾನುಭೂತಿ ಇರುವಂತೆ ತೋರಿಸಿಕೊಳ್ಳುವ ಸರಕಾರದ ಪ್ರತಿನಿಧಿಯೊಂದಿಗೆ ಮಾತುಕತೆ, ಪ್ರಜಾಪ್ರಭುತ್ವದಲ್ಲಿ ಮಾಲಕರಿಗೆ ಫ್ಯಾಕ್ಟರಿಯನ್ನು ತೆರೆಯುವ ಸ್ವಾತಂತ್ರ್ಯವಿರುವಂತೆ ಮುಚ್ಚುವ ಸ್ವಾತಂತ್ರ್ಯವೂ ಇದೆ ಎಂದು ಕೈ ಚೆಲ್ಲುವ ಸರಕಾರದ ಅಪ್ರಾಮಾಣಿಕ ನಿಲುವು, ಎರಡೂ ಕಡೆಯ ವಕೀಲರು ಮತ್ತು ಪ್ರತಿನಿಧಿಗಳಿಂದ ಅಂಕಿ ಅಂಶಗಳ ಸಹಿತವಾದ ಬಿರುಸಿನ ವಾದ ವಿವಾದಗಳ ಮಂಡನೆ, ಎರಡೂ ಕಡೆಯವರ ಬಿಗಿ ನಿಲುವು ಎಲ್ಲಿಗೂ ಕೊಂಡೊಯ್ಯದಿದ್ದಾಗ ಮತ್ತೆ, ಆಡಳಿತಾಧಿಕಾರಿಯು ಕಾರ್ಮಿಕರ ಬಳಿ ಬಂದು ಮಾತನಾಡುವವರೆಗೂ ಅಲ್ಲಿಂದ ಕದಲುವುದಿಲ್ಲವೆಂದು ಫ್ಯಾಕ್ಟರಿಯ ಗೇಟಿನ ಬಳಿಯೇ ಅನಿರ್ದಿಷ್ಟಕಾಲದ ಧರಣಿ ಹೂಡುತ್ತಾರೆ. ನಿರೀಕ್ಷಿಸಬಹುದಾದಂತೆ ಪೊಲೀಸರ ಆಗಮನವಾಗುತ್ತದೆ. ಕಾರ್ಮಿಕ ಪ್ರತಿನಿಧಿಗಳ ತರ್ಕಬದ್ಧವಾದ, ಕರಾರುವಾಕ್ಕಾದ ಅಂಕಿ ಅಂಶಗಳು, ಕಾರ್ಮಿಕರ ಒಗ್ಗಟ್ಟು ಮತ್ತು ಐಕ್ಯತೆಗಳು, ಆಡಳಿತಾಧಿಕಾರಿಯ ಉಕ್ಕಿನಂಥ ನಿರ್ದಯ ನಿಲುವಿನ ಮುಂದೆ ಬಗೆಹರಿಯಬಹುದೆಂದು ಕಾದು ಕಾದು ಸೋತು ಪರಿಹಾರವನ್ನಾದರೂ ಒಪ್ಪಿಕೊಳ್ಳಬೇಕಾಗಿತ್ತೆಂಬ ಕೆಲವು ಕಾರ್ಮಿಕರ ನಿಲುವು, ಸರಕಾರ-ನ್ಯಾಯಾಲಯದ ಅಪ್ರಾಮಾಣಿಕ ಅಸಹಾಯಕತೆ, ಪೊಲೀಸರ ಬಲಪ್ರಯೋಗ-ಇವೆಲ್ಲದರ ಪರಿಣಾಮವಾಗಿ, ಕಾರ್ಮಿಕ ಪ್ರತಿನಿಧಿ ಲಾರೆಂಟನ ಸಮರ್ಥ ಮುಂದಾಳತ್ವದ ಹೊರತಾಗಿಯೂ ಕಾರ್ಮಿಕರ ಹೋರಾಟವು ವಿಫಲವಾಗುತ್ತದೆ. ಹತಾಶೆ, ಅಸಹಾಯಕತೆ, ಕಾರ್ಮಿಕರಲ್ಲೇ ಪರಸ್ಪರ ದೂಷಣೆ ಇಡೀ ವಾತಾವರಣವನ್ನು ಆವರಿಸುತ್ತದೆ. ಆಳುವ ವರ್ಗಗಳು ಒಬ್ಬರಬೆನ್ನಿಗೊಬ್ಬರು ನಿಂತು ತೋರಿಸಿದ ಅನುಕರಣೀಯ ಏಕತೆಯು ಕಾರ್ಮಿಕರಲ್ಲಿ ಇಲ್ಲದ್ದರಿಂದಲೇ ತಾವು ಸೋಲಬೇಕಾಯಿತೆಂಬ ಕಟುಸತ್ಯವನ್ನು ತನ್ನ ಸಹೋದ್ಯೋಗಿಗಳಿಗೆ ತಿಳಿಸಿದ ಲಾರೆಂಟ್ ಚಿತ್ರದ ಕೊನೆಯಲ್ಲಿ ಫ್ಯಾಕ್ಟರಿಯ ಮುಂದೆ ಬೆಂಕಿಹಚ್ಚಿಕೊಂಡು ಸಾಯುತ್ತಾನೆ. ಅವನ ಸಾವಿನಿಂದ ವಿಚಲಿತಗೊಂಡ ಆಡಳಿತವರ್ಗವು ಆಮೇಲೆ ಕಾರ್ಮಿಕರನ್ನು ಮಾತುಕತೆಗೆ ಕರೆಯಿತೆಂಬ ಸೂಚನೆಯೊಂದಿಗೆ ಚಿತ್ರವು ಮುಗಿಯುತ್ತದೆ.
‘ಅಟ್ ವಾರ್’ ಚಿತ್ರವು ಕಲ್ಪಿತ ಘಟನೆಗಳನ್ನು ಹೆಣೆದ ಚಿತ್ರವಾದರೂ, ಅದರ ಪ್ರಾರಂಭದಿಂದ ಕಡೆಯವರೆಗೂ ಎಲ್ಲೂ ಬಿಗಿ ಕಳೆದುಕೊಳ್ಳದಂತೆ ಹೆಣೆದಿರುವ ವಾದ-ಪ್ರತಿವಾದಗಳ ಪ್ರತಿಯೊಂದು ಮಾತೂ ಸಹ ಚಿತ್ರಕತೆಯ ರಚನೆಯ ಭಾಗವಾಗಿ, ಚಿತ್ರದಲ್ಲಿ ನಡೆಯುವ ದೊಂಬಿ-ಗಲಾಟೆ-ಗೊಂದಲಗಳ ಪ್ರತಿಯೊಂದು ಚಲನೆಯೂ ಪೂರ್ವಯೋಜಿತ ಚಿತ್ರಣವಾಗಿ, ಕೇಂದ್ರವ್ಯಕ್ತಿ-ಪರಿಧಿಯ ವ್ಯಕ್ತಿ ಎಂದು ಸಂದರ್ಭಾನುಸಾರ ಸ್ಪಷ್ಟವಾಗಿ ಬಿಡಿಸಿ ತೋರಿಸುವ ಪ್ರತಿ ದೃಶ್ಯವೂ ಬಹಳಷ್ಟು ಕಡೆ ಕೈಲಿ ಹಿಡಿದ ಕ್ಯಾಮರಾಗಳಿಂದ ಸೆರೆಹಿಡಿದು ಸಂಕಲಿಸಿದ್ದಾಗಿರುವುದರಿಂದ ಚಿತ್ರದ ದೃಶ್ಯಗಳಿಗೆ ನೈಜತೆ ಮತ್ತು ವಿಶ್ವಾಸಾರ್ಹತೆಯು ಸಿದ್ಧಿಸಿದೆ. ಹಳೆಯ ಡಬ್ಬಗಳನ್ನು ಲಯಬದ್ಧವಾಗಿ ಬಡಿದು ಹೊರಡಿಸುವ ಬರ್ಟ್ರಂಡ್ ಬ್ಲೆಸಿಂಗ್‌ನ ಸಂಗೀತವು ಏರುತ್ತಾ ಹೋಗುವ ವಾದ-ವಿವಾದಗಳ ಲಯದೊಂದಿಗೆ ಸಮರ್ಥವಾಗಿ ಮೇಳೈಸಿದೆ. ಪ್ರಧಾನಪಾತ್ರವಾಗಿ ನಟಿಸಿರುವ ವಿನ್ಸೆಂಟ್ ಲಿಂಡನ್ ಚಿತ್ರನಟನಾಗಿ ಈಗಾಗಲೇ ತುಂಬಾ ದೊಡ್ಡ ಹೆಸರು ಮಾಡಿದಾತ. ಕೆಟ್ಟ ಚಿತ್ರಗಳಲ್ಲಿ ಪ್ರಸಿದ್ಧ ಚಿತ್ರನಟರು ಪಾತ್ರವನ್ನು ತಮ್ಮಲ್ಲೇ ಕರಗಿಸಿಕೊಂಡು ಸೂಪರ್ ನಟರಾಗಿ ಚಿತ್ರದಲ್ಲಿ ಕಾಣಿಸುತ್ತಾರೆ. ಆದರೆ ವಿನ್ಸೆಂಟ್ ಲಿಂಡನ್ ಪಾತ್ರದಲ್ಲಿ ಎಷ್ಟು ಲೀನವಾಗಿ ಹೋಗಿದ್ದಾರೆಂದರೆ ನಮ್ಮ ಮುಂದೆ ಕಾಣಿಸುವುದು ನಟನಲ್ಲ, ಕೇವಲ ಪಾತ್ರ ಎನ್ನಿಸುತ್ತದೆ.
ಚಿತ್ರದಲ್ಲಿ ಆಡಳಿತವರ್ಗ ಮತ್ತು ಕಾರ್ಮಿಕರ ನಡುವಿನ ಹಗರಣವನ್ನು ವರದಿ ಮಾಡಲು ಬಂದ ಟಿವಿ ಚಾನಲ್ಗಳ ಸಿಬ್ಬಂದಿ ವಾದ ವಿವಾದಗಳನ್ನು ಸಂಗ್ರಹಿಸಲಾಗದೆ, ಸುದ್ದಿಯಾಗದೆ, ಹಗರಣ ಟಿವಿಯ ಚೌಕಟ್ಟಿನಾಚೆಗೇ ಉಳಿದುಬಿಡುತ್ತದೆೆ. ಹೊರಗಿನ ಮಾರುಕಟ್ಟೆಯನ್ನು ನಡುಮನೆಯೊಳಕ್ಕೆ ತರಲೆಂದೇ ಟಿವಿಯ ಆವಿಷ್ಕಾರವಾಯಿತೆಂದು ಹೇಳುತ್ತಾರೆ. ಕಾರ್ಮಿಕರ ಮುಷ್ಕರಗಳು, ಚಳವಳಿ-ಆಂದೋಲನಗಳು ನಡೆದಾಗ ಅವನ್ನು ಕೇವಲ ಒಂದು ಶುಷ್ಕ ಸುದ್ದಿಯ ತುಣುಕನ್ನಾಗಿ ಮಧ್ಯಮವರ್ಗೀಯರು ನೋಡುವ ಸಂಭವವೇ ಹೆಚ್ಚು. ದುಡಿಯುವ ಜನತೆಯಾಗಿ ತಮ್ಮ ಭಾಗವೇ ಆದ ಕಾರ್ಮಿಕರ ಬವಣೆಯು ತಮಗೆ ಸಂಬಂಧಿಸಿರದ ವಿದ್ಯಮಾನವೆಂದು ಭಾವಿಸಿ ತೆಪ್ಪಗಿರುವವರೇ ಅಧಿಕ. ಆದರೆ ಈ ಚಿತ್ರವು ಕಾರ್ಮಿಕ-ಮಾಲಕರ ನಡುವಿನ ವೈಷಮ್ಯವನ್ನು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಮಧ್ಯಮವರ್ಗೀಯರ ನಡುಮನೆಗೇ ತಂದಿರಿಸುತ್ತದೆ. ಇದು ಈ ಚಿತ್ರದ ಮತ್ತೊಂದು ಹೆಗ್ಗಳಿಕೆ.
At Warಪ್ರಾರಂಭವಾಗುವುದು ಬ್ರೆಕ್ಟ್‌ನ ನ  He who fights, can lose. He who doesnt fight, has already lost. Ed Pickford ಪ್ರಸಿದ್ಧ ಹಾಡು ದಿ ವರ್ಕರ್ಸ್ ಸಾಂಗ್‌ನಲ್ಲಿ Were the first ones to starve, the first ones to die ಎಂಬ ಸಾಲಿದೆ. ಆದರೆ, ವಾಸ್ತವವಾದಿ ಫ್ರೆಂಚ್ ಸಿನೆಮಾದ ಪರಿಚಯವಿದ್ದವರಿಗೆ ಅಟ್ ವಾರ್ ಚಿತ್ರವು ರೊಮ್ಯಾಂಟಿಕ್ ಆಶಾವಾದಿತನದ ಆಕಾಶದಲ್ಲಿ ಕನಸು ಕಾಣದೆ ಈ ವಾಸ್ತವದ ಗಟ್ಟಿನೆಲದಲ್ಲಿ ಕಾಲುಗಳನ್ನು ಊರಿ ಬಂಡವಾಳದ ಹೃದಯಹೀನ ಉಕ್ಕಿನ ವಾಸ್ತವವನ್ನು ಶ್ರಮಿಕರ ಐಕ್ಯತೆಯ ವಜ್ರದಿಂದ ಎದುರಿಸಬೇಕೆಂದು ಹೇಳುತ್ತದೆಯೇ ಹೊರತು ನಿರಾಸೆ-ಹತಾಶೆಗಳ ಸಂದೇಶವನ್ನಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)