varthabharthiಅನುಗಾಲ

ಐದು ರಾಜ್ಯಗಳ ಚುನಾವಣೆ ಏನು ಕಲಿಸಿದೆ?

ವಾರ್ತಾ ಭಾರತಿ : 13 Dec, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತಾನಿದ್ದರೆ ಜಗವಿದ್ದೀತು ಎಂಬ ಭಾವನೆಯೊಂದಿಗೆ ಯಾರೇ ಆದರೂ ಸಾರ್ವಜನಿಕ ಬದುಕನ್ನು ಪ್ರವೇಶಿಸಿದರೆ ಅದು ಫಲಪ್ರದವಾಗಲು ಸಾಧ್ಯವಿಲ್ಲ. ರಾಜಕಾರಣದಲ್ಲಂತೂ ಯಾರೇ ಆಗಲಿ, ಯಾವುದೇ ಆಗಲಿ, ಶಾಶ್ವತವಲ್ಲ ಎಂಬುದು ನೆನಪಿದ್ದವರಷ್ಟೇ ಮಾನವಹಿತಕ್ಕಾಗಿ, ಸಮಾಜ ಕಲ್ಯಾಣಕ್ಕಾಗಿ ಕೊಡುಗೆಯನ್ನು ನೀಡಿದರು. ಸಮುದ್ರದ ತೆರೆಗಳಂತೆ ಒಬ್ಬರಾದ ಮೇಲೆ ಒಬ್ಬರು ಬಂದೇ ಬರುತ್ತಾರೆ ಮತ್ತು ಹೆಸರಿರುವ ಯಾರೂ ಸದಾ ನೆನಪಿನಲ್ಲಿರಲು ಸಾಧ್ಯವಿಲ್ಲ. ಇದು ಡಿಮೆನ್ಶಿಯಾ ಅಥವಾ ಮರೆಗುಳಿತನದ ಅನಾರೋಗ್ಯವಲ್ಲ. ಮಾನವ ಸಹಜ ಪ್ರಕ್ರಿಯೆ.


2019ರ ಸಂಸತ್ತಿನ ಚುನಾವಣೆಗೆ ಉಪಾಂತ್ಯ ಪಂದ್ಯವೆಂದು ಬಣ್ಣಿಸಲಾದ, ಈಗಷ್ಟೇ ಮುಗಿದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದಾಗ ಎಂತಹ ರಾಜಕಾರಣಿಗೂ ಬದುಕು ಎಷ್ಟೊಂದು ತಾತ್ವಿಕ ಮತ್ತು ಜೀವನ ಅಂದರೆ ಇಷ್ಟೇನೇ? ಅನ್ನಿಸಬೇಕು. ಆದರೆ ದುರದೃಷ್ಟವಶಾತ್ ಸಕ್ರಿಯ ರಾಜಕಾರಣದಲ್ಲಿರುವ ಬಹುಮಂದಿಗೆ ಇದು ಅರ್ಥವಾಗುವುದು ಬಿಡಿ, ಇದೊಂದು ಪ್ರಶ್ನೆಯೆಂದೂ ಅನ್ನಿಸುವುದಿಲ್ಲ.

ಚುನಾವಣಾ ಪೂರ್ವ ಸಮೀಕ್ಷೆ ಕೇಂದ್ರದ ಆಡಳಿತಾರೂಢ ಪಕ್ಷಕ್ಕೆ ವ್ಯತಿರಿಕ್ತವಾಗಿತ್ತು. ಪ್ರತಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್‌ಗೆ ಅನುಕೂಲವಾಗಿತ್ತು. ಆದರೆ ಗೆಲುವು ನಮ್ಮದೇ ಎಂಬ ಸಾಮಾನ್ಯ ಘೋಷಣೆಗಳೊಂದಿಗೆ ಪ್ರಧಾನಿಯೂ, ಅವರ ಪಕ್ಷಾಧ್ಯಕ್ಷರೂ ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ತ್ರಿವಳಿಗಳಂತೆ (ಇವರನ್ನು ಬಿಟ್ಟು ಇನ್ಯಾವ ರಾಷ್ಟ್ರೀಯ ನಾಯಕರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು ವರದಿಯಾಗಿಲ್ಲ!) ಪ್ರಚಾರ ಮಾಡಿದಾಗಲೂ ದೇಶದ ಅಭಿವೃದ್ಧಿಯ, ಆಡಳಿತದ ದೋಷಗಳನ್ನು ಸರಿಪಡಿಸುವ, ಭ್ರಷ್ಟಾಚಾರವೂ ಸೇರಿದಂತೆ ದೇಶವು ಎದುರಿಸುತ್ತಿರುವ ಯಾವ ಜ್ವಲಂತ ಸಮಸ್ಯೆಯ ಬಗ್ಗೆಯೂ ಮಾತನಾಡದೆ, ಪ್ರತಿಪಕ್ಷಗಳನ್ನು ಅದರಲ್ಲೂ ಕಾಂಗ್ರೆಸ್‌ನ ನಾಯಕತ್ವವನ್ನು ಹಳಿಯುವುದಕ್ಕೇ ಮತ್ತು ಅದರ ಹೊರತಾಗಿ ಈ ದೇಶದ ಸಮಸ್ಯೆಯೆಂದರೆ ಅಯೋಧ್ಯೆಯ ರಾಮಮಂದಿರವೆಂದು ಸಾರುವುದಕ್ಕೆ ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟರು. ಅದರಲ್ಲೂ ಕಾಂಗ್ರೆಸ್‌ನ ಜಾತಕವನ್ನು ಬೇಕಾಬಿಟ್ಟಿ ಬೈಯುವುದಕ್ಕೆ ಅಮೂಲ್ಯ ಪ್ರಚಾರ ಸಮಯವು ವ್ಯಯವಾಯಿತು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ದೊಡ್ಡ ಹೆಸರಾಗಿರುವ ಗಾಂಧಿ-ನೆಹರೂ ಇವರನ್ನು ದೂಷಿಸುವ ಒಂದು ಪಠ್ಯಕ್ರಮವನ್ನು ಭಾಜಪ ರೂಢಿಸಿಕೊಂಡಿತು. ಇದಕ್ಕಾಗಿ ಅದೇ ಕಾಂಗ್ರೆಸ್‌ನ ಭಾಗವಾಗಿದ್ದ ಸರದಾರ್ ಪಟೇಲರ ವ್ಯಕ್ತಿತ್ವವನ್ನು (ಅವರು ಗಾಂಧಿ-ನೆಹರೂರವರಿಗೆ ಎಷ್ಟು ನಿಕಟವರ್ತಿಯಾಗಿದ್ದರೆಂಬುದನ್ನೂ ಬಗೆಯದೆ) ಒಂದು ಪ್ರತಿಮೆಗೆ ಸೀಮಿತಗೊಳಿಸಿ ಅದರಿಂದ ರಾಜಕೀಯ ಲಾಭ ಎಷ್ಟು ಎಂಬ ವ್ಯವಹಾರವನ್ನು ಮಾಡಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಈ ದೇಶದ ಜನರಿಗೆ ಮುಂದೆ ಹಸಿವೆ-ಬಾಯಾರಿಕೆಗಳೆಂಬುದೇ ಇರುವುದಿಲ್ಲವೆಂಬ ಸ್ಥಿತಿಯ ಸುಳ್ಳು ಭರವಸೆಯನ್ನು ನಿರ್ಮಾಣಮಾಡಿದರು. ಪ್ರಜೆಗಳ ಒಳಿತಿನ ಬಗ್ಗೆ ಈ ಚುನಾವಣೆಯಲ್ಲಿ ಚರ್ಚೆಯಾಗಲೇ ಇಲ್ಲ. ಬದಲಾಗಿ ಅವರವರ ಅಹಂ ಇನ್ನೊಬ್ಬರನ್ನು ಹಳಿಯುವುದಕ್ಕೆ ಬಳಕೆಯಾಯಿತು. ಪ್ರಧಾನಿಯೇ ಬದುಕಿನ, ದೇಶದ ಸಮಸ್ಯೆಗಳ ಬಗ್ಗೆ ಮಾತನಾಡದೆ, ತನ್ನ ಎದುರಾಳಿಗಳ ಮತೀಯ, ಶೈಕ್ಷಣಿಕ, ಸಾಮಾಜಿಕ ಪರಂಪರೆ ಮತ್ತು ಅರ್ಹತೆಯ ಬಗ್ಗೆಯೇ ಮಾತನಾಡಿದರು. ತನ್ನ ಮಾತು ಶಾಶ್ವತವಾಗಿ ಇತಿಹಾಸದೊಂದಿಗೆ ಅಂಟಿಕೊಳ್ಳುತ್ತದೆ ಮತ್ತು ವ್ಯಕ್ತಿತ್ವಕ್ಕೆ ನಂಟು ಬೆಸೆಯುತ್ತದೆ ಎಂದು ದೇಶದ ಅತ್ಯುಚ್ಚ ಸ್ಥಾನವನ್ನು ಅಲಂಕರಿಸಿದವರಿಗೇ ಅನ್ನಿಸದಿದ್ದರೆ ದೇಶ ಉದ್ಧಾರವಾದೀತು ಹೇಗೆ?

ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಕುಲವನ್ನೇ ಪ್ರಶ್ನಿಸುವ ಇಂತಹ ಧೋರಣೆಯನ್ನು ಜನರು ಮೆಚ್ಚಲಿಲ್ಲವೆಂಬುದು ಫಲಿತಾಂಶದಿಂದ ವ್ಯಕ್ತವಾಗಿದೆ. ತಮ್ಮ ಅಗತ್ಯಗಳಿಗೆ ಸ್ಪಂದಿಸದ ಯಾವ ಮಾತಿಗೂ ಮತದಾರರು ಸೊಪ್ಪುಹಾಕುವುದಿಲ್ಲವೆಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಭಾಜಪದ ಘೋಷಣೆಗಳು ಪುರಾಣದ ರಾಕ್ಷಸರ ಅಮರತ್ವದ ವರಗಳಂತಾಗಿದೆ. ಎಲ್ಲೋ ಒಂದು ಮುಳ್ಳಿದ್ದೇ ಇರುತ್ತದೆ. ಮರಣಕ್ಕೆ ಹೊರಗೂ ಅಲ್ಲ, ಒಳಗೂ ಅಲ್ಲ, ಹಗಲೂ ಅಲ್ಲ, ಇರುಳೂ ಅಲ್ಲ, ಮನುಷ್ಯನೂ ಅಲ್ಲ, ಮೃಗವೂ ಅಲ್ಲ, ನೆಲವೂ ಅಲ್ಲ, ಆಕಾಶವೂ ಅಲ್ಲ ಎಂಬಿತ್ಯಾದಿ ನಿಯಮಗಳನ್ನು ದಯಪಾಲಿಸಿದರೂ ತನಗೆ ಸಾವೇ ಇಲ್ಲವೆಂಬಂತೆ ವರ್ತಿಸಿದ ಹಿರಣ್ಯಕಶಿಪುವಿಗೆ ಮರಣ ಬಂದಂತೆ ಎಲ್ಲದಕ್ಕೂ ಹೊರದಾರಿಗಳಿದ್ದೇ ಇರುತ್ತವೆಯೆಂಬುದನ್ನು ಭಾಜಪವು ಮತ್ತೆ ಮೊದಲಿನಿಂದ ಕಲಿತು ಎಲ್ಲಿ ಮೌನವಾಗಿರಬೇಕು ಮತ್ತು ಏನನ್ನು ಮಾತನಾಡಬೇಕು ಮತ್ತು ಆಡಬಾರದು ಎಂಬುದನ್ನು ಕಲಿಯಬೇಕಿದೆ.

ಆಧುನಿಕ ರಾಜಕಾರಣದ ಚಾಣಕ್ಯನೆಂಬ ಮಾಧ್ಯಮಪ್ರಶಸ್ತಿಯ ಹೊರತಾಗಿಯೂ ಅಮಿತ್ ಶಾರಿಗೆ ಮತದಾರನ ಮನಸ್ಸಿನಲ್ಲೇನಿದೆ ಎಂದು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಯೋಗಿಯೆಂಬ ಅಭಿದಾನದೊಂದಿಗೆ ಕೇಸರಿ ಬಣ್ಣ ಸೇರಿದೊಡನೇ ಎಲ್ಲವೂ ಪ್ರಕಾಶಮಾನವಾಗಿ ಬೆಳಗುತ್ತದೆಂಬ ಹುಚ್ಚು ಹವಣಿಕೆಗೆ ಮತದಾರರು ಸರಿಯಾದ ನಿಯಂತ್ರಣವನ್ನೇ ಹಾಕಿದರು. ಹಾಗೆಂದು ಚುನಾವಣಾ ಫಲಿತಾಂಶವು ಕಾಂಗ್ರೆಸ್‌ಗೂ ಬಹುದೊಡ್ಡ ಪಾಠವನ್ನು ಹೇಳಿದೆ. ಓದಿದರೆ ಪರೀಕ್ಷೆಯಲ್ಲಿ ಪಾಸಾಗಬಹುದೆಂದು ವಿದ್ಯಾರ್ಥಿಗೆ ಪಾಠ ಹೇಳಿದಂತೆ ಮತದಾರರು ಕಾಂಗ್ರೆಸ್‌ನ ಪ್ರಯತ್ನವನ್ನು ಮೆಚ್ಚಿ ಉತ್ತೀರ್ಣರಾಗುವುದಕ್ಕೆ ಅಗತ್ಯ ಬೇಕಾದ ಶೇ. 35 ಅಂಕಗಳನ್ನು ನೀಡಿ ಮೂರು ರಾಜ್ಯಗಳಲ್ಲಿ ಹರಸಿದ್ದಾರೆ. ಎಂದಿನ ಭ್ರಷ್ಟ ನೀತಿಯನ್ನು ಇನ್ನಾದರೂ ತೊರೆಯದಿದ್ದರೆ ಮತ್ತು ಅಧಿಕಾರವು ಶಾಶ್ವತವೆಂಬ ಅಹಂಕಾರದಲ್ಲಿ ನಿದ್ರಿಸಿದರೆ ಎಂತಹ ಪರಿಣಾಮವನ್ನೆದುರಿಸಬೇಕಾದೀತೆಂದು ಮಿಜೋರಾಂನ ಚುನಾವಣಾ ಫಲಿತಾಂಶ ಹೇಳಿದೆ.

ಚುನಾವಣಾ ಫಲಿತಾಂಶದ ಕುರಿತು ಟಿವಿ ಮಾಧ್ಯಮಗಳ ವಾಹಿನಿಗಳಲ್ಲಿ ಚರ್ಚೆಯಾಗುತ್ತದೆ. ಎಲ್ಲ ಚಾನೆಲ್‌ಗಳನ್ನು ನೋಡುವುದು ಗಮನಿಸುವುದು ಸಾಧ್ಯವಿಲ್ಲ. ಆದರೂ ಒಂದೆರಡು ಚಾನೆಲ್‌ಗಳನ್ನು ಬಿಟ್ಟರೆ ಬಹುಪಾಲು ಚಾನೆಲ್‌ಗಳು ತಮ್ಮ ಒಲವನ್ನು ಪ್ರತಿಬಿಂಬಿಸುವ ವಿಶ್ಲೇಷಕರನ್ನು ಹೊಂದಿದಂತೆ ಕಾಣಿಸುತ್ತಿತ್ತು. ಅರ್ನವ್ ಗೋಸ್ವಾಮಿ ತನ್ನ ಚಾನೆಲ್‌ನಲ್ಲಿ ಭಾಜಪಕ್ಕೆ ವ್ಯತಿರಿಕ್ತವಾಗಿ ಫಲಿತಾಂಶಗಳು ಬರುತ್ತಿದ್ದಾಗಲೂ ಕಾಂಗ್ರೆಸ್‌ನ ಬಗ್ಗೆ ಮತದಾರ ಭ್ರಮನಿರಸನ ಹೊಂದಿದ್ದಾನೆ, ಮಿಜೋರಾಂ ಗಮನಿಸಿ, ತೆಲಂಗಾಣ ಗಮನಿಸಿ ಎಂದು ಕಿರುಚುತ್ತ ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನದ ಲೆಕ್ಕವನ್ನು ತಿರುಚಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲವೆಂದು, ಜನರು ಅದನ್ನು ದೂರವಿಡುವ ಕಾಲ ಬಂದಿದೆ ಎಂದು ಹೇಳುತ್ತಿದ್ದರು. ಇದೇ ಸಮಯಕ್ಕೆ ದಿಲ್ಲಿಯಲ್ಲಿ ಪ್ರಧಾನಿ ಚುನಾವಣೆಯ ಬಗ್ಗೆ ಮೊದಲ ಬಾರಿಗೆ (ಅವಸರದಲ್ಲಿ) ಸೋಲು-ಗೆಲುವು ಸಹಜವೆನ್ನುತ್ತ ಸಂಸತ್ತಿನ ಚಳಿಗಾಲದ ಅಧಿವೇಶನದ ಬಗ್ಗೆ ಮಾತ್ರ ಹೇಳಿ ತಮ್ಮ ಮಾತನ್ನು ಕೊನೆಗೊಳಿಸಿದರು. ಮೋದಿಕಾರಣವಾಗಿ ಮೌನಕ್ಕೆ ಶರಣಾಗಿದ್ದ ಭಾಜಪ ಧುರೀಣರು ಸಾತ್ವಿಕ ಪಥವನ್ನು ಹಿಡಿದಿದ್ದರು.

ಚಾನೆಲ್ಲೊಂದರ ಚರ್ಚೆಯಲ್ಲಿ ಕಾಂಗ್ರೆಸ್‌ನ ನಾಯಕರೊಬ್ಬರು ‘‘ಈ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಮುಖ್ಯ ಪಾತ್ರವನ್ನು ವಹಿಸಬೇಕಾಗಿತ್ತು; ಆದರೆ ಮತದಾರರು ವಸುಂಧರಾ ರಾಜೆಯನ್ನಾಗಲಿ, ಶಿವರಾಜ್ ಸಿಂಗ್ ಚವಾಣ್, ರಮಣಸಿಂಗ್, ಇವರನ್ನು ಲೆಕ್ಕಿಸದೆ ಇವರನ್ನು ದಾಟಿ ಪ್ರಧಾನಿ ಮೋದಿಯ ಕುರಿತೇ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ’’ ಎಂದರು. ಇದು ಸಹಜವೂ ಸಮರ್ಪಕವೂ ಆದ ವಾದದಂತೆ ಕಾಣಿಸುತ್ತದೆ. ರಾಜ್ಯಗಳ ಚುನಾವಣೆಯಲ್ಲಿ ನೆಹರೂರವರನ್ನು ಟೀಕಿಸುವುದಾಗಲಿ, ರಾಹುಲ್ ಗಾಂಧಿ ಹಿಂದೂ ಹೌದೇ ಅಲ್ಲವೇ ಎಂಬುದನ್ನು ಚರ್ಚಿಸುವುದಾಗಲಿ, ವಿಧವೆಯರ ಪಿಂಚಣಿ ಹಣವೆಲ್ಲ ಕಾಂಗ್ರೆಸ್ ವಿಧವೆಯರಿಗೆ ಮಾತ್ರ ಸಂದಿದೆಯೆನ್ನುವುದಾಗಲಿ, ರಾಜ್ಯಗಳ ಸಮಸ್ಯೆಗಳನ್ನು ಸುಧಾರಿಸುವುದಿಲ್ಲ. ತೈಲ ಬೆಲೆ, ಅಡುಗೆ ಬೆಲೆ, ಡಾಲರ್ ಎದುರು ರೂಪಾಯಿ ಬೆಲೆ ಮಾತ್ರವಲ್ಲ ಅಗತ್ಯ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದಾಗ, ಕೃಷಿಕನ ಬೆಳೆಯ ಬೆಲೆ ನೆಲಕಚ್ಚಿದಾಗ ಅದನ್ನು ಪರಿಹರಿಸುವುದು ಆದ್ಯತೆಯಾಗಬೇಕೇ ಹೊರತು, ಮಂದಿರವಾಗಲಿ, ಸರ್ದಾರ್ ಪಟೇಲರ ಪ್ರತಿಮೆಯಾಗಲೀ, ಮುಸ್ಲಿಮರು ಪರಕೀಯರೆಂಬುದಾಗಲಿ ಅಲ್ಲ. ನಮ್ಮ ಸಮಾಜದ ತಳಹಂತದಲ್ಲಿ ಆರ್ಥಿಕ ಅಗತ್ಯಗಳೆದುರು ಜಾತಿ-ಮತ ಇವು ಮುಖ್ಯವಾಗುವುದಿಲ್ಲ. ರಾಜಕಾರಣಿಗಳು ಇವನ್ನು ಒಂದು ವಿವಾದಾಂಶವಾಗಿ ಜನರೆದುರು ಮಂಡಿಸಿ ಜನರನ್ನು ಈ ನೆಪವಾಗಿ ಗುಂಪುಗಳಾಗಿ ವಿಭಜಿಸುತ್ತಾರೆ ಮತ್ತು ಜನರು ಮುಗ್ಧವಾಗಿ ಇಂತಹ ತಂತ್ರಗಳಿಗೆ ಚುನಾವಣಾ ಕಾಲಕ್ಕೆ ಬಲಿಬೀಳುತ್ತಾರೆಂಬುದನ್ನು ಬಿಟ್ಟರೆ ಸಾಮಾಜಿಕ ಸೌಹಾರ್ದ ಸದಾ ನೆಲೆಸಿರುತ್ತದೆ.

ಭಾಜಪದ ಈಗಿನ ಹೈಕಮಾಂಡ್ ಕಾಂಗ್ರೆಸ್‌ನ ಇಂದಿರಾ ಯುಗವನ್ನು ನೆನಪಿಸುತ್ತದೆ. ಇಂದಿರಾ ಗಾಂಧಿ ಮತ್ತು ಅವರ ಒಂದು ಒಳಕೂಟವೇ ಎಲ್ಲ ನಿರ್ಣಯಗಳನ್ನು ಮಾಡುತ್ತಿತ್ತು. ಇದರಿಂದಾಗಿ ಪಕ್ಷವು ಶಕ್ತವಿರುವಲ್ಲಿ ಅಚ್ಚರಿಯ ಆಯ್ಕೆಗಳಾಗುತ್ತಿದ್ದವು ಹಾಗೂ ಹಿರಿಯ ದಕ್ಷರನೇಕರು ಅವಮಾನಿತರಾಗಿ ಪ್ರತಿಭಟಿಸುವ ಶಕ್ತಿಯಿಲ್ಲದೆ ತೆರೆಮರೆಗೆ ಸರಿಯುತ್ತಿದ್ದರು. (ಈಗಲೂ ದಾಖಲೆಯಲ್ಲಿ ಹಾಗೇ ಇದ್ದರೂ ಸ್ಥಳೀಯ ಪ್ರಜಾಪ್ರಭುತ್ವ ಹೆಚ್ಚಿದಂತೆ ಕಾಣಿಸುತ್ತದೆ. ಪಂಜಾಬಿನ ಚುನಾವಣಾ ಪ್ರಕ್ರಿಯೆ ಈ ಪಲ್ಲಟವನ್ನು ತೋರಿಸಿತ್ತು; ಅಲ್ಲಿ ಕ್ಯಾಪ್ಟನ್ ಅಮರೀಂದ್ರ ಸಿಂಗ್ ತಮ್ಮ ವರ್ಚಸ್ಸನ್ನು ಹೈಕಮಾಂಡಿಗೆ ತೋರಿಸಿ ಸ್ಥಳೀಯ ರಾಜಕೀಯವು ಕಾಂಗ್ರೆಸ್‌ಗೆ ಅನಿವಾರ್ಯವೆಂಬಂತೆ ನಡೆದುಕೊಂಡಿದ್ದರು ಮತ್ತು ಇದನ್ನು ಕಾಂಗ್ರೆಸ್ ಸ್ವೀಕರಿಸಿತ್ತು! ಈಗಲೂ ಸಾರ್ವಜನಿಕವಾಗಿ ರಾಹುಲ್ ಗಾಂಧಿ ತಮ್ಮ ನಾಯಕರೆಂದು ಹೇಳಿಕೊಂಡು ಬಂದರೂ ಸಚಿನ್ ಪೈಲಟ್, ಅಶೋಕ್ ಗೆಹ್ಲೊಟ್, ಕಮಲ ನಾಥ್, ಜ್ಯೋತಿರಾದಿತ್ಯ ಸಿಂಧ್ಯಾ ಮುಂತಾದ ಸ್ಥಳೀಯರು ಪಕ್ಷದ ಮೇಲೆೆ ನಿರ್ಣಾಯಕ ಪ್ರಭಾವ ಮತ್ತು ಹತೋಟಿಯನ್ನು ಹೊಂದಿದ್ದಾರೆ!) ಭಾಜಪದಲ್ಲಿನ ಹೈಕಮಾಂಡ್ ಇನ್ನೂ ಚಿಕ್ಕದಿದೆ. ಅಲ್ಲಿ ಮೋದಿ ಮತ್ತು ಅಮಿತ್ ಶಾ ಬಿಟ್ಟರೆ ಇನ್ಯಾರ ಮಾತಿಗೂ ಬೆಲೆಯಿಲ್ಲದಂತಿದೆ. ಈ ಈರ್ವರು ಅಗತ್ಯವಾದಲ್ಲಿ ತಮ್ಮ ತಾಯಿ ಬೇರಾದ ಸಂಘ ಪರಿವಾರವನ್ನೂ ಧಿಕ್ಕರಿಸುವ ಸಾಮರ್ಥ್ಯ ಹೊಂದಿದ್ದಾರೆ. ತೆಲಂಗಾಣದಲ್ಲಿ ಜನರಿನ್ನೂ ತಮ್ಮ ರಾಜ್ಯ ಪ್ರತ್ಯೇಕವಾದ ಉತ್ಸಾಹದಿಂದ ಹೊರಬಂದಂತಿಲ್ಲ. ಸ್ವಾತಂತ್ರ್ಯಾನಂತರದ ಭಾರತದ ಗಾಂಧಿ-ನೆಹರೂರವರ ಪ್ರತಿಷ್ಠೆ ಚಂದ್ರಶೇಖರರಾವ್ ಅವರಿಗೆ ಸಂದಿದೆ. ಈ ಉತ್ಸಾಹ ಇರುವವ ವರೆಗೆ ಅವರು ಸುರಕ್ಷಿತ. ಇದನ್ನೂ ಅವರು ಬಲ್ಲರು. ಆದ್ದರಿಂದ ಅವರು ಸ್ಥಳೀಯ ಅಸ್ಮಿತೆಯನ್ನು ಒತ್ತುನೀಡಿ ಪ್ರಚಾರಪಡಿಸಿದ್ದರು. ಪ್ರಾಯಃ ಮುಂದಿನ ಲೋಕಸಭಾ ಚುನಾವಣೆಗೂ ಇದು ಅವರಿಗೆ ಸಹಾಯಕವಾದೀತು.

ಒಟ್ಟಿನಲ್ಲಿ ಈ ಚುನಾವಣೆ ಎಲ್ಲರಿಗೂ ಕರೆಗಂಟೆ. ಕಾಂಗ್ರೆಸ್ ಕೊನೇ ಪಕ್ಷ 2019ರ ಕೊನೆಯವರೆಗಾದರೂ ಒಳ್ಳೆಯ ಸ್ವಚ್ಛ ಆಡಳಿತವನ್ನು ನೀಡಿ ತನ್ನ ಅಸ್ತಿತ್ವವನ್ನು ಈ ನೆಪದಲ್ಲಿ ಭದ್ರಪಡಿಸಿಕೊಳ್ಳದಿದ್ದರೆ ಅದಕ್ಕೆ ಈ ಗೆಲುವು ಮುಂದಿನ ಸೋಲಿಗೆ ಉಪಾಂತ್ಯವಾದೀತು. ಭಾಜಪವು ತಾನು ಅನಿವಾರ್ಯವೆಂದು ತಿಳಿಯುವುದನ್ನು ನಿಲ್ಲಿಸದಿದ್ದರೆ ಮತ್ತು ಘೋಷಣೆಗಳನ್ನೂ ಧಾರ್ಮಿಕ ಅತಿಗಳನ್ನೂ ಮತೀಯ ದ್ವೇಷಕಾರಕ ಭಾವನೆಗಳನ್ನೂ ತಮ್ಮ ಬಂಡವಾಳವಾಗಿ ಮಾಡಿದರೆ ಮುಂದಿನ ಮಹಾಚುನಾವಣೆ ಕೇಂದ್ರದ ಪಾಲಿಗೆ ಭಾಜಪಮುಕ್ತವಾಗಲೂ ಸಾಕು.

ಕಲಿಯುವ ಮನಸ್ಸಿಗೆ ಬದುಕಿನ, ಚರಿತ್ರೆಯ ಪ್ರತೀ ಕಣವೂ ಪ್ರತೀ ಅಂಶವೂ ಒಂದು ಪಾಠ; ಒಂದು ಅನುಭವ. ಕೆಲವು ದಶಕಗಳಷ್ಟೇ ಬದುಕುವ ಮನುಷ್ಯ ತನ್ನನ್ನು ಇತಿಹಾಸದ ಭಾಗವಾಗಿ ನೋಡಬೇಕೇ ಹೊರತು ಅದರ ಕೇಂದ್ರವಾಗಿ ಅಲ್ಲ. ತಾನಿದ್ದರೆ ಜಗವಿದ್ದೀತು ಎಂಬ ಭಾವನೆಯೊಂದಿಗೆ ಯಾರೇ ಆದರೂ ಸಾರ್ವಜನಿಕ ಬದುಕನ್ನು ಪ್ರವೇಶಿಸಿದರೆ ಅದು ಫಲಪ್ರದವಾಗಲು ಸಾಧ್ಯವಿಲ್ಲ. ರಾಜಕಾರಣದಲ್ಲಂತೂ ಯಾರೇ ಆಗಲಿ, ಯಾವುದೇ ಆಗಲಿ, ಶಾಶ್ವತವಲ್ಲ ಎಂಬುದು ನೆನಪಿದ್ದವರಷ್ಟೇ ಮಾನವಹಿತಕ್ಕಾಗಿ, ಸಮಾಜ ಕಲ್ಯಾಣಕ್ಕಾಗಿ ಕೊಡುಗೆಯನ್ನು ನೀಡಿದರು. ಸಮುದ್ರದ ತೆರೆಗಳಂತೆ ಒಬ್ಬರಾದ ಮೇಲೆ ಒಬ್ಬರು ಬಂದೇ ಬರುತ್ತಾರೆ ಮತ್ತು ಹೆಸರಿರುವ ಯಾರೂ ಸದಾ ನೆನಪಿನಲ್ಲಿರಲು ಸಾಧ್ಯವಿಲ್ಲ. ಇದು ಡಿಮೆನ್ಶಿಯಾ ಅಥವಾ ಮರೆಗುಳಿತನದ ಅನಾರೋಗ್ಯವಲ್ಲ. ಮಾನವ ಸಹಜ ಪ್ರಕ್ರಿಯೆ. ಇದು ಹೀಗೇ ಇದ್ದರೆ ಚಂದ. ಇಲ್ಲವಾದರೆ ಇತಿಹಾಸದುದ್ದಕ್ಕೂ ಪುರಾಣದ ರಾಕ್ಷಸರು, ಹಿಟ್ಲರ್, ಮುಸಲೋನಿಗಳೇ ಇರ/ಬರಬೇಕಾಗಿತ್ತು. ತನ್ನ ಅಸ್ತಿತ್ವವನ್ನು ಇತ್ಯಾತ್ಮಕವಾಗಿ ಸಾಬೀತುಪಡಿಸಬೇಕೆಂಬವನು ತನ್ನ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ; ಒಮ್ಮೆಮ್ಮೆ ತನ್ನ ದೋಷಗಳ ಬಗ್ಗೆ ಆತ್ಮಾವಲೋಕನ ಮಾಡುತ್ತಾನೆಯೇ ಹೊರತು ಅದನ್ನೇ ವೈಭವೀಕರಿಸುವುದಿಲ್ಲ. ಇತರರನ್ನು ತುಚ್ಛವಾಗಿ ಕಾಣುವುದಿಲ್ಲ. ಚಿಂತನಶೀಲ ವ್ಯಕ್ತಿಗೆ ಪ್ರತಿಯೊಂದು ಗಿಡವೂ ಒಂದು ಮೂಲಿಕೆಯಂತೆ ಕಾಣಿಸಿ ಯಾವುದೋ ಒಂದು ದುರ್ಭರ ಕ್ಷಣದಲ್ಲಿ ಜೀವರಕ್ಷಕವಾಗಬಹುದೆಂದು ಅನ್ನಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)