ವೈವಾಹಿಕ ಬದುಕಿಗೆ ಕಾಲಿಟ್ಟ ಸೈನಾ ನೆಹ್ವಾಲ್-ಕಶ್ಯಪ್
ಹೈದರಾಬಾದ್, ಡಿ.14: ಭಾರತದ ಬ್ಯಾಡ್ಮಿಂಟನ್ ಸ್ಟಾರ್ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ಕಶ್ಯಪ್ ಶುಕ್ರವಾರ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.
ಸೈನಾ ಹಾಗೂ ಕಶ್ಯಪ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವಿವಾಹದ ಸುದ್ದಿಯನ್ನು ಬಹಿರಂಗಪಡಿಸಿದರು. ‘‘ಇದೊಂದು ನನ್ನ ಜೀವನದ ಶ್ರೇಷ್ಠ ಪಂದ್ಯ’’ ಎಂಬ ಅಡಿಬರಹದೊಂದಿಗೆ ವಿವಾಹದ ಫೋಟೊವನ್ನು ಸೈನಾ ಟ್ವೀಟ್ ಮಾಡಿದ್ದಾರೆ.
ದಂಪತಿ ರವಿವಾರ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೈನಾ-ಕಶ್ಯಪ್ 2005ರಲ್ಲಿ ಹೈದರಾಬಾದ್ನ ಪಿ.ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಇಬ್ಬರು ಜೊತೆಯಾಗಿ ಅಭ್ಯಾಸ ನಡೆಸುತ್ತಿದ್ದರು. 10 ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು ಇದೀಗ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಹೈದರಾಬಾದ್ನ 32ರ ಹರೆಯದ ಕಶ್ಯಪ್ ಅರ್ಜುನ ಪ್ರಶಸ್ತಿ ಜಯಿಸಿದ್ದು, 2012ರಲ್ಲಿ ಲಂಡನ್ ಒಲಿಂಪಿಕ್ಸ್ನಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದರು.
28ರ ಹರೆಯದ ಸೈನಾ ಭಾರತದ ಓರ್ವ ಸೂಪರ್ಸ್ಟಾರ್ ಆಟಗಾರ್ತಿಯಾಗಿದ್ದು 20 ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ ಒಲಿಂಪಿಕ್ಸ್ನಲ್ಲಿ ಕಂಚು ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವೂ ಸೇರಿದೆ.
ಸೈನಾ ಹಾಗೂ ಕಶ್ಯಪ್ ದಾಂಪತ್ಯಜೀವನಕ್ಕೆ ಕಾಲಿಟ್ಟ ಭಾರತದ ಮೂರನೇ ಕ್ರೀಡಾ ಜೋಡಿಯಾಗಿದ್ದಾರೆ. ದೀಪಿಕಾ ಪಲ್ಲಿಕಲ್-ದಿನೇಶ್ ಕಾರ್ತಿಕ್ ಹಾಗೂ ಇಶಾಂತ್ ಶರ್ಮ-ಪ್ರತಿಮಾ ಸಿಂಗ್ ಈ ಹಿಂದೆ ವಿವಾಹವಾಗಿದ್ದಾರೆ.