ಸಿಂಧು ಸೆಮಿಗೆ; ಸಮೀರ್ಗೆ ಜಯ
ವರ್ಲ್ಡ್ ಟೂರ್ ಫೈನಲ್ಸ್
ಗುವಾಂಗ್ರೊ, ಡಿ.14: ತಮ್ಮ ಅಜೇಯ ಓಟ ಮುಂದುವರಿಸಿರುವ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಭಾರತದ ಪಿ.ವಿ.ಸಿಂಧು ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸಮೀರ್ ವರ್ಮ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ವರ್ಷಾಂತ್ಯದಲ್ಲಿ ಸತತ ಮೂರನೇ ಟೂರ್ನಿ ಆಡುತ್ತಿರುವ ಸಿಂಧು, ಎ ಗುಂಪಿನ ಪಂದ್ಯದಲ್ಲಿ ವಿಶ್ವ ನಂ.12 ಅಮೆರಿಕದ ಬಿವೆನ್ ಝಾಂಗ್ ಅವರನ್ನು 21-9, 21-15 ಗೇಮ್ಗಳ ಅಂತರದಲ್ಲಿ ಸುಲಭವಾಗಿ ಮಣಿಸಿದರು. 35 ನಿಮಿಷಗಳಲ್ಲಿ ಈ ಪಂದ್ಯ ಅಂತ್ಯ ಕಂಡಿತು.
ಪಂದ್ಯದ ನಂತರ ಮಾತನಾಡಿದ ಸಿಂಧು, ಆರಂಭದಲ್ಲಿ 2-6ರಿಂದ ಹಿಂದೆ ಬಿದ್ದರೂ ಸುಧಾರಿಸಿಕೊಂಡು ಮುನ್ನಡೆ ಪಡೆದೆ. ನಂತರ ಪಂದ್ಯದಲ್ಲಿ ಹಿಡಿತ ಸಾಧಿಸಿದೆ’ ಎಂದರು.
ಮತ್ತೊಂದು ಪಂದ್ಯದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೊಗಸಾದ ಪ್ರದರ್ಶನದಿಂದ ಗಮನಸೆಳೆದ ಭಾರತದ ಸಮೀರ್ ವರ್ಮ ಥಾಲೆಂಡ್ನ ಕಾಂಟಾಫೋನ್ ವಾಂಗ್ಚರೋಯ್ ವಿರುದ್ಧ 21-9, 21-18 ಅಂತರದ ಗೆಲುವು ಸಂಪಾದಿಸಿದರು. 44 ನಿಮಿಷಗಳಲ್ಲಿ ಕೊನೆಗೊಂಡ ಈ ಪಂದ್ಯದ ಗೆಲುವಿನ ಮೂಲಕ ಸಮೀರ್ ನಾಕೌಟ್ ಹಂತಕ್ಕೆ ಪ್ರವೇಶ ಪಡೆದರು.