varthabharthi

ಕರಾವಳಿ

ಬಂಟ್ವಾಳ ಕೆಳಗಿನಪೇಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಎಸ್ಡಿಪಿಐಯಿಂದ ಪುರಸಭೆ ಎದುರು ಧರಣಿ

ವಾರ್ತಾ ಭಾರತಿ : 15 Dec, 2018

ಬಂಟ್ವಾಳ, ಡಿ.15: ಬಂಟ್ವಾಳ ಪುರಸಭಾ ವಾರ್ಡ್ ನಂ-8 ಕೆಳಗಿನಪೇಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇದನ್ನು ಪರಿಹರಿಸುವಂತೆ ಹಾಗೂ ಹೊಸ ಪೈಪ್‌ಲೈನ್ ಅಳವಡಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಬಂಟ್ವಾಳ ಪುರಸಭಾ ವಾರ್ಡ್ ಸಮಿತಿ ವತಿಯಿಂದ ಪುರಸಭಾ ಕಚೇರಿ ಮುಂಭಾಗದಲ್ಲಿ ಶನಿವಾರ ಧರಣಿ ನಡೆಸಲಾಯಿತು.

ಧರಣಿಯ ನೇತೃತ್ವ ವಹಿಸಿ ಮಾತನಾಡಿದ ಪುರಸಭಾ ಸದಸ್ಯ ಮುನೀಶ್ ಅಲಿ, ಬಂಟ್ವಾಳ ಪುರಸಭೆಗೆ ಒಳಪಟ್ಟ ವಾರ್ಡ್ ನಂ-8 ಕೆಳಗಿನಪೇಟೆ ವ್ಯಾಪ್ತಿಯಲ್ಲಿ ಪ್ರತಿ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆಯ ಉದ್ಘವಾಗುತ್ತಿದ್ದು, ಇದರಿಂದ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಹಳೆ ಪೈಪ್‌ಲೈನ್‌ನಿಂದಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ವೇಗ ಕಡಿಮೆಯಾಗಲು ಕಾರಣವಾಗಿದ್ದು, ಇದನ್ನು ಸರಿಪಡಿಸಬೇಕು. ಅದಲ್ಲದೆ, ಬಹುಗ್ರಾಮ ಕುಡಿಯುವ ನೀರು ಯೋಜನೆಯ ಹೊಸ ಪೈಪ್‌ಲೈನ್ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿದೆ. ಹಲವು ಕಡೆಗಳಲ್ಲಿ ಈ ಹೊಸ ಪೈಪ್‌ಲೈನ್ ಒಡೆದು ಹಾನಿಯಾಗಿದ್ದು ನೀರು ಪೋಲಾಗುತ್ತಿದೆ. ಇದರಿಂದ ತಗ್ಗು ಪ್ರದೇಶವಾದ ಕೆಳಗಿನಪೇಟೆಯ ವ್ಯಾಪ್ತಿಯ ಸುಮಾರು 180ಕ್ಕೂ ಹೆಚ್ಚಿನ ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಧರಣಿನಿರತರು ಆರೋಪಿಸಿದ್ದಾರೆ.

ಸಮಸ್ಯೆಯ ಬಗ್ಗೆ ಈ ಮೊದಲಿನ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸಹಿತ ಇತರ ಅಧಿಕಾರಿಗಳ ಗಮನಕ್ಕೆ ತಂದರೂ, ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಅದಲ್ಲದೆ, ಸ್ಥಳಕ್ಕೆ ತೆರಳಿ ನೀರಿನ ಸಮಸ್ಯೆಯನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಈಗಾಗಲೇ ಅಳಡಿಕೆಯಾಗಿರುವ ಪೈಪ್ ಲೈನ್‌ಗಳ ಗುಣಮಟ್ಟಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಒಡೆದಿರುವ ಪೈಪ್‌ಗಳನ್ನು ದುರಸ್ತಿ ಕಾರ್ಯವನ್ನು ತಕ್ಷಣವೇ ಆರಂಭಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ವಾರ್ಡ್ ನಾಗರಿಕರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಹುಲ್ ಎಸ್.ಎಚ್., ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಎಸ್ಡಿಪಿಐ ಶಾಖಾ ಅಧ್ಯಕ್ಷ ಅಬ್ದುಲ್ಲತೀಫ್, ಕಾರ್ಯದರ್ಶಿ ಯಾಸಿರ್ ಅರಾಫತ್, ಮುಖಂಡರಾದ ಉಬೈದುಲ್ಲಾ, ಬಶೀರ್, ಇಸ್ಮಾಯೀಲ್, ಶಬೀರ್, ಆಮ್ ಆದ್ಮಿ ಪಕ್ಷದ ಹಮೀದ್, ಇಸ್ಮಾಯೀಲ್ ಅರಬಿ, ಸಿಪಿಎಂನ ಪ್ರಭಾಕರ್, ಜೆಡಿಎಸ್‌ನ ಸವಾಝ್, ಕೆ.ಎಚ್.ಅಬೂಬಕರ್, ಸವಾಝ್ ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)