varthabharthiಅನುಗಾಲ

ಅಂತರ್‌ರಾಷ್ಟ್ರೀಯ ಸಿಕ್ಕುಗಳು

ವಾರ್ತಾ ಭಾರತಿ : 20 Dec, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಚಾಣಕ್ಯರೂ ಇರುತ್ತಾರೆ; ಅಮಾತ್ಯರಾಕ್ಷಸರೂ ಇರುತ್ತಾರೆ. ಮುದ್ರೆಯುಂಗುರ ಹೇಗೆ ಬಳಕೆಯಾಗುತ್ತದೆಂಬುದು ಮತ್ತು ಪ್ರಜೆಗಳು ಅದನ್ನು ಹೇಗೆ ಗಮನಿಸುತ್ತಾರೆಂಬುದು ಮುಖ್ಯ. ಸದ್ಯ ನಾವು ಗಾಢ ನಿದ್ರೆಯಲ್ಲಿರುವುದರಿಂದ ಇವೆಲ್ಲ ನಮಗೆ ಮುಖ್ಯವಲ್ಲ. ಪ್ರಶ್ನಿಸಿದರೂ ‘‘ನಿಮಗೆ ಅಂತರ್‌ರಾಷ್ಟ್ರೀಯ ಕಾನೂನಿನ, ರಾಜತಾಂತ್ರಿಕ ಸಂಬಂಧಗಳ ನೆಲೆಯ ಪರಿಚಯ ಎಷ್ಟಿದೆ’’ ಎಂಬ ಅಧಿಕಾರಶಾಹಿಯ ಮರುಪ್ರಶ್ನೆ ಗಳನ್ನೆದುರಿಸಬೇಕಾಗುವುದು ವಿಷಾದನೀಯ.


ಪ್ರಿೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿಯೆಂಬ ಉಕ್ತಿಯಿದೆ. ಈ ಪಟ್ಟಿಗೆ ರಾಜಕೀಯ ಎಂಬ ಇನ್ನೊಂದು ಪದವನ್ನೂ ಯಾಕೆ ಸೇರಿಸಲಿಲ್ಲವೋ ಗೊತ್ತಿಲ್ಲ. ಏಕೆಂದರೆ ಇಂದು ರಾಷ್ಟ್ರೀಯ (ಈ ಪದದ ವೈರುಧ್ಯಗಳ ಸಹಿತ) ಮತ್ತು ಅಂತರ್‌ರಾಷ್ಟ್ರೀಯ ರಾಜಕೀಯದಲ್ಲಿ ಎಲ್ಲವು ಸರಿಯೆಂಬ (ಅ)ನ್ಯಾಯ ಮಾತ್ರವಿದೆ. ಕಾನೂನುಗಳಿರುವುದು ಅವನ್ನು ಮುರಿಯುವುದಕ್ಕೆ ಎಂಬ ಪೀತನ್ಯಾಯದಂತೆ ರಾಷ್ಟ್ರಹಿತವೆಂಬ ಮೂಗಿನ ನೇರಕ್ಕೆ ತರ್ಕವನ್ನೂ ಮಾನವೀಯತೆಯನ್ನೂ ಧಿಕ್ಕರಿಸುವುದನ್ನು ಜಗತ್ತೇ ಒಪ್ಪಿಕೊಂಡಂತಿದೆ. ಇವುಗಳ ಬಹುಮುಖಗಳ ದರ್ಶನಕ್ಕೆ ನಿದರ್ಶನಗಳನ್ನು, ಉದಾಹರಣೆಗಳನ್ನು ನೀಡಲಾರಂಭಿಸಿದರೆ ಮುಗಿವಿಲ್ಲ. ಎಷ್ಟು ವೇಗವಾಗಿ ಜಗತ್ತಿನ ಜನಸಂಖ್ಯೆ ಬೆಳೆಯುತ್ತದೆಯೋ ಅದಕ್ಕೂ ಮಿಗಿಲಾಗಿ ಅಮಾನವೀಯ ರಾಜಕಾರಣ ನೆಲೆನಿಂತು ಭೂಭಾರವನ್ನು ಹೆಚ್ಚಿಸುತ್ತಲೇ ಇದೆ. ಶಕ್ತರು ಮಾತ್ರ ಇದನ್ನು ಎದುರಿಸಬಲ್ಲರು. ಅಶಕ್ತರು ಈ ಮಹಾ ರಥಯಾತ್ರೆಯಲ್ಲಿ ಚಕ್ರದಡಿಗೆ ಸಿಕ್ಕಿ ನಾಮಾವಶೇಷಗೊಳ್ಳುತ್ತಾರೆ. ಮಾನವ ಹಕ್ಕುಗಳನ್ನು ಮಾತನಾಡುವವರು ಎಲ್ಲೂ ಗೊಂದಲಕ್ಕೆ, ವಿವಾದಕ್ಕೆ ಸಿಕ್ಕದಂತೆ ಅದನ್ನು ಒಂದು ತಾತ್ವಿಕ ನೆಲೆಯಾಗಿ ಮಾತ್ರ ವಿವರಿಸುತ್ತಾರೆಯೇ ವಿನಾ ಅದರ ರಕ್ತಸಿಕ್ತ ಪಾತ್ರವನ್ನು ವಿವೇಚಿಸುವುದೇ ಇಲ್ಲ. ಪುರಾಣ ಮತ್ತು ಚರಿತ್ರೆ ಇಂತಹ ಅಮಾನವೀಯ ತರ್ಕಶೂನ್ಯ ನಡೆಗಳಿಂದ ಬಳಲಿದೆ. ಇದು ಸರಿಯಾಗುತ್ತದೆಂಬ ನಿರೀಕ್ಷೆಗೆ ಯಾವ ಸಮರ್ಥನೆಯೂ ಇಲ್ಲ. 21ನೇ ಶತಮಾನಕ್ಕೆ ಅಡಿಯಿಟ್ಟಿದ್ದೇವೆಂಬುದನ್ನು, ವೈಜ್ಞಾನಿಕ ಆವಿಷ್ಕಾರಗಳಲ್ಲಿ ನವನವೀನ ಸಾಧನೆಗಳನ್ನು ಮಾಡಿದ್ದೇವೆಂಬುದನ್ನು ಮತ್ತು ವರ್ಷವರ್ಷವೂ ಹೊಸ ಭರವಸೆಗಳನ್ನು ನಮಗೆ ನಾವೇ ನೀಡಿಕೊಳ್ಳುತ್ತೇವೆಂಬುದನ್ನು ಬಿಟ್ಟರೆ ಹೊಸತೇನೂ ಇಲ್ಲ.

ಸೌದಿ ಅರೇಬಿಯ ಆಡಳಿತವನ್ನು ಟೀಕಿಸುತ್ತಿದ್ದ ಖಶೋಗಿ ಎಂಬ ಪತ್ರಕರ್ತನನ್ನು ಟರ್ಕಿಯಲ್ಲಿ ಅಮಾನವೀಯವಾಗಿ ಕೊಂದ ಸೌದಿ ಅರೇಬಿಯ ಸರಕಾರವನ್ನು ಭಯೋತ್ಪಾದಕವೆಂದು ಅಮೆರಿಕ ಗುರುತಿಸುವುದಿಲ್ಲ. ಆದರೆ ಪಾಕಿಸ್ತಾನವನ್ನು ಭಯೋತ್ಪಾದನೆಗೆ ನೆರವಾಗುವ ದೇಶವೆಂದು ಹೆಸರಿಸಿ ಅದಕ್ಕೆ ನೀಡುವ ನೆರವನ್ನು ನಿಲ್ಲಿಸಿತು. ಅಮೆರಿಕದ ಛತ್ರದಡಿಯಲ್ಲಿರುವ ವಿಶ್ವಸಂಸ್ಥೆ, ಯುರೋಪಿಯನ್ ದೇಶಗಳು, ವಿಶ್ವಬ್ಯಾಂಕ್, ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪಾಕಿಸ್ತಾನವನ್ನು ಬಹುತೇಕ ಕೈಬಿಟ್ಟಿವೆ. ಈ ಬೆಳವಣಿಗೆಯಲ್ಲಿ ಭಾರತದ ಪಾತ್ರವಿದೆ. ಇದನ್ನು ಹೇಳಿಕೊಳ್ಳುವುದಕ್ಕೆ ಭಾರತ ಹೆಮ್ಮೆ ಪಡುತ್ತದೆ ಮತ್ತು ಅದು ಸಮರ್ಥನೀಯವೂ ಹೌದು. ಆದರೆ ಅಮೆರಿಕದ ಮಿತ್ರರಾಷ್ಟ್ರವಾದ ಸೌದಿ ಅರೇಬಿಯಾ ದೇಶವು ಪಾಕಿಸ್ತಾನದ ಆರ್ಥಿಕ ಪುನಶ್ಚೇತನಕ್ಕೆ ಭಾರೀ ನೆರವನ್ನು ನೀಡುವ ವಾಗ್ದಾನ ನೀಡಿ ಈಗಾಗಲೇ ಅದನ್ನು ಅನುಷ್ಠಾನಗೊಳಿಸುತ್ತಿದೆ. ಇದಕ್ಕೆ ಅಮೆರಿಕ ಅಡ್ಡಿ ಬರುವುದಿಲ್ಲ. ಇಷ್ಟೇ ಅಲ್ಲ, ಪಾಕಿಸ್ತಾನದೊಂದಿಗೆ ಚೀನಾ ನಡೆಸುತ್ತಿರುವ ವ್ಯವಹಾರವನ್ನು ತಡೆಯಲು ಅಮೆರಿಕಕ್ಕೆ ಮನಸ್ಸೂ ಇಲ್ಲ; ಸಾಧ್ಯವೂ ಇಲ್ಲ. ಶಕ್ತ ರಾಷ್ಟ್ರವೊಂದರ ಸಾರ್ವಭೌಮ ಶಕ್ತಿಗೆ ಯಾವ ತರ್ಕಗಳೂ ಇಲ್ಲವಾದ್ದರಿಂದ ಭಾರತ ಈ ಬೆಳವಣಿಗೆಗಳನ್ನು ಪ್ರತಿಭಟಿಸುವ ಇರಾದೆ ಹೊಂದಿಲ್ಲ. ನಮ್ಮ ಭವ್ಯ ಪರಂಪರೆಯ ತಾಳ್ಮೆ ಮತ್ತು ಸಹನೆ ನಮ್ಮ ದೌರ್ಬಲ್ಯದ ಮುಖವಾಡವಾಗಿ ನಮ್ಮನ್ನು ಸುಮ್ಮನಾಗಿಸಿದೆ.

ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ಸ್ವಾಧೀನ ಮತ್ತು ಹಿಡಿತದಲ್ಲಿದೆ. ಇದು ಹಗಲುಬೆಳಕಿನಷ್ಟೇ ಸ್ಪಷ್ಟ. ಇದು ಒಂದು ಅಂತರ್‌ರಾಷ್ಟ್ರೀಯ ಸಮಸ್ಯೆಯಲ್ಲ, ದ್ವಿಪಕ್ಷೀಯ ವ್ಯವಹಾರವೆಂದು ಭಾರತ ಕಳೆದ ಏಳು ದಶಕಗಳಿಂದ ಹೇಳಿಕೊಂಡು ಬಂದಿದ್ದರೂ ಅದೀಗ ದ್ವಿಪಕ್ಷೀಯ ಸಂಬಂಧಗಳನ್ನು ದಾಟಿ ಮುನ್ನಡೆದಿದೆಯೆಂಬುದು ಸ್ಪಷ್ಟ. ಆದರೆ ಅದರ ಇತ್ಯರ್ಥಕ್ಕೆ-ಭಾರತ ಪಾಕಿಸ್ತಾನಗಳನ್ನೂ ಸೇರಿಸಿ-ಯಾರಿಗೂ ಮನಸ್ಸಿಲ್ಲ. ನಮ್ಮ ರಾಜಕಾರಣಿಗಳು ಈ ಕಾಯಿಲೆ ಹೇಗೆ ಆರಂಭವಾಯಿತು ಮತ್ತು ಅದಕ್ಕೆ ಯಾರು ಕಾರಣರು ಎಂಬ ಆರೋಪಪಟ್ಟಿಯನ್ನು ಗಟ್ಟಿಮಾಡಿ ಮತಗಿಟ್ಟಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆಯೇ ವಿನಾ ಇದಕ್ಕೊಂದು ಕೊನೆ ಕಾಣಿಸುವುದಕ್ಕೆ ಯಾರಿಗೂ ಇಚ್ಛಾಶಕ್ತಿಯಿದ್ದಂತೆ ಸದ್ಯಕ್ಕೆ ಕಾಣಿಸುವುದಿಲ್ಲ. ನಮ್ಮ ಸುವರ್ಣ ಕಾರಿಡಾರ್ ಚತುಷ್ಪಥ, ಅಷ್ಟಪಥ, ದಶಪಥ ರಸ್ತೆಗಳೆದುರು, ಗ್ರಾಮಸಡಕ್ ಯೋಜನೆಯೆದುರು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾದ ಬಹುಮಹತ್ವಾಕಾಂಕ್ಷೆಯ ಕಾರಿಡಾರ್ ರಸ್ತೆ ಲಕ್ಷ್ಯಕ್ಕೆ ಸಿಕ್ಕುವುದೇ ಇಲ್ಲ. ನಮ್ಮ ದೇಶಭಕ್ತರು ತಮ್ಮ ಅಧಿಕಾರವನ್ನುಳಿಸಿಕೊಳ್ಳುವುದಕ್ಕಾಗಿ ಈ ಜ್ವಲಂತ ಸವಾಲುಗಳನ್ನು ಮಖಮಲ್ಲಿನ ಪರದೆಯಿಂದ ಮುಚ್ಚಿಟ್ಟು ಹಿರಿಮೆಯನ್ನು ಮೆರೆಸುತ್ತಲೇ ಇದ್ದಾರೆ. ಭಾರತಮಾತೆ ಕತ್ತಲಕೋಣೆಯಲ್ಲಿ ನರಳುತ್ತಿದ್ದಾಳೆ.

ವಿಜಯ ಮಲ್ಯ ಎಂಬ ವಂಚಕನೆಂದು ನಮ್ಮ ಸರಕಾರ ಹೆಸರಿಸಿದ ಮಾಜಿ ಸಂಸದ ಮತ್ತು ಮಾಜಿ ಎಲ್ಲರಿಗೂ ಬೇಕಾದ ವ್ಯಕ್ತಿಯನ್ನು ಭಾರತಕ್ಕೆ ತರಲು ಇನ್ನಿಲ್ಲದ ಪ್ರಯತ್ನಗಳಾಗುತ್ತಿವೆ. ವಿಜಯಮಲ್ಯ ಕೆಲವು ಬ್ಯಾಂಕುಗಳ ಸಾಲಗಾರ. ಅವರಷ್ಟೇ ಅಲ್ಲ, ಬೇಕಾದಷ್ಟು ಇತರ ಸಾಲಗಾರರಿದ್ದಾರೆ. ಕೆಲವರು ದೇಶದೊಳಗಿದ್ದಾರೆ, ಇನ್ನು ಕೆಲವರು ಹೊರಗಿದ್ದಾರೆ, ಕೆಲವರು ಕಾನೂನಿನ ಬೆಂಬಲ ಹೊಂದಿದ್ದರೆ, ಕೆಲವರು ಕಾನೂನಿನಡಿ ಸಿಲುಕಿದ್ದಾರೆ; ಅಷ್ಟೇ ವ್ಯತ್ಯಾಸ. ಅಪರೂಪದ ಉದಾಹರಣೆಗಳ ಹೊರತಾಗಿ- ಆಡಳಿತ ಪಕ್ಷದಲ್ಲಿದ್ದರೆ ಬದುಕಿಡೀ ಕಾನೂನಿನ ಸಮಸ್ಯೆಗಳಿಲ್ಲದೆ ಕಳೆಯಬಹುದು ಎಂಬುದು ಭಾರತೀಯ ಅಲಿಖಿತ ನ್ಯಾಯ. ಈಚೆಗೆ ವಿಜಯ ಮಲ್ಯ ತಾನು ಸಾಲದ ಮೊತ್ತವನ್ನು ಮರುಪಾವತಿಸಲು ಸಿದ್ಧನಿದ್ದೇನೆಂದು ಹೇಳಿದರೂ ಅವರ ಮಾತಿಗೆ ನಿರೀಕ್ಷಿತ ಮನ್ನಣೆ ಹೋಗಲಿ, ಪ್ರತಿಕ್ರಿಯೆಯೂ ಸಿಗಲೇ ಇಲ್ಲ. ಟಿಪ್ಪೂವಿನ ಖಡ್ಗವನ್ನು ವಿಜಯ ಮಲ್ಯ ಹಠತೊಟ್ಟು ಲಂಡನ್‌ನ ಮ್ಯೂಸಿಯಂನಿಂದ ಹರಾಜಿನಲ್ಲಿ ಕೊಂಡುಕೊಂಡು ಭಾರತಕ್ಕೆ ತಂದಂತೆ (ಆಗ ಅವರಿಗೆ ಜೈಕಾರ ಹಾಕಿದವರೇ!) ಈಗ ಅವರನ್ನು ಭಾರತಕ್ಕೆ ತರುವ ಹಠಕ್ಕೆ ಮತ್ತು ಜಿದ್ದಿಗೆ ಬಿದ್ದಿದ್ದಾರೆ. ಇದು ಯಾವಾಗ ಎಷ್ಟು ಪರಿಣಾಮಕಾರಿಯಾಗಿ ನಡೆಯುತ್ತದೆಯೋ ಎಂಬುದನ್ನು 2019ರ ಚುನಾವಣೆಯೇ ಹೇಳಬೇಕು. ಏಕೆಂದರೆ ಇಂತಹ ವೀರಾವೇಶಗಳೆಲ್ಲ ಚುನಾವಣಾ ಕಸರತ್ತುಗಳೆಂಬುದನ್ನು ನಮ್ಮ ರಾಜಕಾರಣ ಬಹಳ ಸಲ ಪ್ರದರ್ಶಿಸಿದೆ.

ತನ್ಮಧ್ಯೆ ಕೇಂದ್ರ ಸಚಿವರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದರಣೀಯರೂ ಆದ ನಿತಿನ್ ಗಡ್ಕರಿಯವರು ‘‘ವಿಜಯಮಲ್ಯರನ್ನು ‘ವಂಚಕ’ ಎಂದು ಕರೆಯುವುದು ತಪ್ಪಾಗುತ್ತದೆ, ಅವರೊಬ್ಬ ಸಾಲಗಾರ ಮಾತ್ರ’’ ಎಂದು ಹೇಳಿರುವುದು ಗಮನಾರ್ಹ. (ಎಲ್ಲ ರಾಜಕಾರಣಿಗಳಂತೆ ಅವರೂ ಅದನ್ನು ಆನಂತರ ನಿರಾಕರಿಸಿದರು. ಮಾಮೂಲಿನಂತೆ ಮಾಧ್ಯಮವನ್ನು ದೂರಿದರು.) ಏಕೆಂದರೆ ಮಲ್ಯರೊಬ್ಬರೇ ಆ ಪ್ರಮಾಣದ ಸಾಲಗಾರರಲ್ಲ. ಅಂಬಾನಿ, ಅದಾನಿ ಮಾತ್ರವಲ್ಲ, ಅನೇಕ ಇತರ ಕಾರ್ಪೊರೇಟುಗಳು ಅವರನ್ನು ಮೀರಿಸುವ ಸಾಲಗಾರರೇ. ಈ ಕುರಿತು ಒಮ್ಮೆ ಪಟ್ಟಿ ಬಹಿರಂಗವಾಗಿತ್ತು; ಆದರೆ ಅಷ್ಟೇ ಬೇಗ ಅದನ್ನು ಒಳಗೆಳೆದುಕೊಳ್ಳಲಾಯಿತು. ಸಾಲವನ್ನು ಒಪ್ಪಿಕೊಂಡಂತೆ ಮರುಪಾವತಿಸದ ಎಲ್ಲ ಸಾಲಗಾರರೂ ತಾತ್ವಿಕವಾಗಿ ವಂಚಕರೇ. ಅಡಿಕೆಗೂ ಆನೆಗೂ (ಅವ)ಮಾನದಲ್ಲಿ ವ್ಯತ್ಯಾಸವಿಲ್ಲ. ಸರಕಾರಗಳು ಲಕ್ಷಕೋಟಿ ಕಾರ್ಪೊರೇಟ್ ಸಾಲಗಳನ್ನು ಆ ಸಾಲಗಾರ ಸಂಸ್ಥೆಗಳಿಗೆ ರೋಗಗ್ರಸ್ತ ಕೈಗಾರಿಕೆಗಳೆಂಬ ಅಭಿದಾನವನ್ನು ನೀಡಿ ಸದ್ದಿಲ್ಲದೆ ಮನ್ನಾ ಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಿಜಯ ಮಲ್ಯರನ್ನು ಭಾರತಕ್ಕೆ ತರುತ್ತೇವೆಂಬುದು, ಅವರಿಗಾಗಿ ಮುಂಬೈಯಲ್ಲಿ ಸೂಕ್ತ ಜೈಲು ಕಾದಿದೆಯೆಂಬುದು ಅಮಾನವೀಯ ಕ್ರಮವೆಂದೇ ಹೇಳಬೇಕು. ಇಷ್ಟಕ್ಕೂ ಹೀಗೆ ಹೇಳುವವರು ಅವರ ಜೋಳವಾಳಿಗೆಯಲ್ಲಿದ್ದು ಪೀಕದಾನಿ ಹಿಡಿದು ಅವರ ತಾಂಬೂಲದ ಉಗುಳಿಗೆ ಕಾದುಕೊಂಡಿದ್ದವರೇ ಎಂಬುದನ್ನು ಮರೆಯಬಾರದು.

ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬ ಮಾತು ತೋಳದ ಆಳಿಗೂ ಅನ್ವಯಿಸುವುದು ದುರಂತ. ನರಿಗೆ ಈ ವಿಜಯಮಲ್ಯ ಪ್ರಸಂಗದಿಂದಾಗಿ ಭಾರತ ಸರಕಾರದ ವಿದೇಶಾಂಗ ಸಚಿವರ ನೆರವಿನ ನೆರಳಿನಲ್ಲೇ ಆಶ್ರಯಪಡೆದ ಲಲಿತ್ ಮೋದಿ ಎಂಬ ವಂಚಕನ ಹೆಸರೇ ಮರೆತುಹೋಗಿದೆ. ನೀರವ್ ಮೋದಿ ಹೆಸರೇ ಮಾಧ್ಯಮಗಳಲ್ಲಿಲ್ಲ. ಚೋಕ್ಸಿಯ ಕುರಿತು ಇಂಟರ್‌ಪೋಲಿನ ರೆಡ್ ಕಾರ್ನರ್ ನೋಟಿಸ್‌ನ ವರದಿಗಳಿವೆ. ಆದರೆ ಅವರು ಈಗಾಗಲೇ ಆಂಟಿಗುವಾ ದೇಶದ ಪ್ರಜೆಯೆಂದು ಸ್ವೀಕರಿಸಲ್ಪಟ್ಟಿದ್ದಾರೆ. ಇದರಿಂದಾಗಿ ಅವರನ್ನು ತರಲು ಅಂತರ್‌ರಾಷ್ಟ್ರೀಯ ಕಾನೂನು ಎಡೆಕೊಡುತ್ತಿದೆಯೇ ಅಥವಾ ಇದೂ ಪ್ರಜೆಗಳನ್ನು ಹಾದಿ ತಪ್ಪಿಸುವ ಒಂದು ತಂತ್ರವೇ ಎಂಬುದನ್ನು ಭವಿಷ್ಯವೇ ಹೇಳಬೇಕು.

ಇಷ್ಟಕ್ಕೂ ಸ್ವಿಸ್‌ಬ್ಯಾಂಕಿನಲ್ಲಿರುವ ಭಾರತದ ಕಪ್ಪುಹಣ ಹೆಣವಾಗಿ ಛಲಬಿಡದ ತ್ರಿವಿಕ್ರಮನ ಹೆಗಲನ್ನೇರಿದೆ. ಪಂಚವಿಂಶತಿ ಕಥೆಗಳಿನ್ನೂ ಮುಗಿದಿಲ್ಲ; ಬೆಳಗಾಗುವುದೇ ಇಲ್ಲ. ಚುನಾವಣಾ ಸಮಯ-ಸಂದರ್ಭಗಳಲ್ಲಿ ಭುಜಬಲದ ಪರಾಕ್ರಮ ಕಂಠೀರವರಂತೆ ವೀರಾವೇಶದಿಂದ ಅದನ್ನು ಕೆಲವೇ ದಿನಗಳಲ್ಲಿ ತರುತ್ತೇವೆಂದು ಘೋಷಿಸಿದ್ದು ಬಿಟ್ಟರೆ ಅದೀಗ ವ್ಯಂಗ್ಯಚಿತ್ರಗಳಿಗೂ ಅಪರೂಪದ ಬರಹಗಳಿಗೂ ಗ್ರಾಸವಾಗಿದೆಯೇ ವಿನಾ ಸಾರ್ವಜನಿಕ ಚರ್ಚೆಗಲ್ಲ. ನಂಬಿಕಸ್ಥರು ಮತ್ತು ಮೂಢನಂಬಿಕಸ್ಥರು ಇದೊಂದು ವಿಚಾರವೇ ಅಲ್ಲವೆಂಬಷ್ಟು ಸಿನಿಕರಾಗಿದ್ದಾರೆ ಇಲ್ಲವೇ ಖಳನಾಯಕರ ಬೆಂಬಲಿಗರಂತೆ ತೋಳುತಟ್ಟಿಕೊಂಡು ಸಮರ್ಥಿಸುತ್ತಿದ್ದಾರೆ. ಪ್ರಾಯಃ ಕೆಲವೊಂದು ಅಚ್ಚರಿಗಳನ್ನು 2019ರ ಚುನಾವಣಾ ಸಮಯದ ನಿಕಟಪೂರ್ವಕಾಲಕ್ಕೆ ಮೀಸಲಾಗಿರಿಸಿದಂತೆ ಕಾಣಿಸುತ್ತಿದೆ.

ಮಧ್ಯಪೂರ್ವದ ಇಸ್ಲಾಮ್ ದೇಶಗಳೊಂದಿಗೆ ಭಾರತದ ಸಂಬಂಧ ಲಾಗಾಯ್ತಿನಿಂದಲೂ ಚೆನ್ನಾಗಿದೆ. ಇದು ಇಸ್ರೇಲನ್ನು ವಿರೋಧಿಸುವ ಹಂತಕ್ಕೂ ಹೋಗಿತ್ತು. ಆದರೆ ಸದ್ಯ ಈ ಎರಡೂ ತಂಡಗಳನ್ನು ಮೆಚ್ಚಿಸುವ ಹದನಿಧಾನದಲ್ಲಿ ಭಾರತವು ಗೆದ್ದಿದೆ. ಒಂದು ದೃಷ್ಟಿಯಲ್ಲಿ ನೆಹರೂ ಕಾಲದಲ್ಲಿದ್ದು ಆನಂತರ ತೆರೆಮರೆಗೆ ಸರಿದ ಅಲಿಪ್ತ ರಾಜಕಾರಣವು ಈಗ ಬೆಳಕಿಗೆ ಮತ್ತು ನೆರವಿಗೆ ಬಂದಿದೆ. ನೆಹರೂ ನಿವೃತ್ತರಾಗುವುದಿಲ್ಲ ಎಂಬ ಸತ್ಯ ಪ್ರಕಟವಾಗಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ಪ್ರಕರಣದ ಮಧ್ಯವರ್ತಿಯಾಗಿದ್ದು ಭಾರತಕ್ಕೆ ಬೇಕಾದ ಕ್ರಿಶ್ಚಿಯನ್ ಮೈಕೆಲ್ ಎಂಬ ಆರೋಪಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸರಕಾರವು ಭಾರತಕ್ಕೆ ಹಸ್ತಾಂತರಿಸಿದ್ದು ಇದನ್ನು ಭಾರೀ ರಾಜತಾಂತ್ರಿಕ ಗೆಲುವೆಂದು ಬಣ್ಣಿಸಲಾಗಿದೆ. ಆದರೆ ಅವರಿನ್ನೂ ಸಿಬಿಐಯ ವತಿಯಿಂದ ಪಂಚತಾರಾ ಆತಿಥ್ಯವನ್ನು ಹೊಂದಿದ್ದಾರೆಂದು ವರದಿಯಾಗಿರುವುದನ್ನು ಗಮನಿಸಿದರೆ ಈ ಪ್ರಸಂಗವೂ ಒಂದು ತಂತ್ರವೇ ಇರಬಹುದೆಂದು ಕಾಣುತ್ತದೆ. ಆದರೆ ಬಿಬಿಸಿ ವರದಿಗಳನ್ನು ನಂಬುವುದಾದರೆ ಈ ಹಸ್ತಾಂತರವು ಒಂದು ಅಮಾನವೀಯ ಅಂತರ್‌ರಾಷ್ಟ್ರೀಯ ರಾಜಕಾರಣ. ಯುಎಇಯ ರಾಜಕುಮಾರಿ ಆಕೆಯ ತಂದೆ ಮತ್ತು ಅಲ್ಲಿನ ಸರ್ವಾಧಿಕಾರಿ ದೊರೆಯ ಚಿತ್ರಹಿಂಸೆಯನ್ನು ತಾಳಲಾರದೆ ತಪ್ಪಿಸಿಕೊಂಡು ಹೋಗುತ್ತಿದ್ದವಳು ಭಾರತದ ಜಲಸೇನೆಯ ಅಶ್ರಯಕ್ಕೆ ಸಿಕ್ಕಿದಳು. ಈ ಮಹಿಳೆಯನ್ನು ದಾಳವಾಗಿ ಬಳಸಿಕೊಂಡು ಅದುವರೆಗೆ ಕ್ರಿಶ್ಚಿಯನ್ ಮೈಕೇಲನನ್ನು ಹಸ್ತಾಂತರಿಸದ ಯುಎಇ ಸರಕಾರಕ್ಕೆ ಅವರನ್ನು ತಮಗೆ ಹಸ್ತಾಂತರಿಸುವುದಾದರೆ ಆಕೆಯನ್ನು ಯುಎಇಗೆ ಹಸ್ತಾಂತರಿಸುವುದಾಗಿ ಭಾರತ ತನ್ನ ಭದ್ರತಾ ಸಲಹೆಗಾರರ ಯೋಜನೆಯಂತೆ ವಿನಿಮಯ ತಂತ್ರವನ್ನು ಹೂಡಿ ಮರಳಿಸಿತೆಂದು ಮತ್ತು ಆಕೆ ಈ ಹಸ್ತಾಂತರದ ಆನಂತರ ಬಹುತೇಕ ಮರಣದಂಡನೆಗೆ ಗುರಿಯಾಗಿದ್ದಾಳೆಂದು ಮತ್ತು ಆಕೆಯ ಉಳಿವಿನ ಬಗ್ಗೆ ಯಾವ ಕುರುಹೂ ಇಲ್ಲವೆಂದು ಬಿಬಿಸಿ ವರದಿ ಮಾಡಿದೆ.

ಭಾರತಕ್ಕೆ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಅಷ್ಟೇನೂ ಒಳ್ಳೆಯ ಹೆಸರಿಲ್ಲ. ಅಸ್ಸಾಮ್, ಕಾಶ್ಮೀರಗಳಲ್ಲಿ ನಮ್ಮ ಮಿಲಿಟರಿ ನಡೆದುಕೊಂಡು ಬಂದ ರೀತಿ, ರೋಹಿಂಗ್ಯಾ ಮುಸ್ಲಿಮರ ಪ್ರಸಂಗದಲ್ಲಿ ಭಾರತ ಅನುಸರಿಸಿದ ನೀತಿಗಳಲ್ಲಿ ಇದು ಬಹಿರಂಗವಾಗಿದೆ. ಇದು ನಿಜವೇ ಆಗಿದ್ದಲ್ಲಿ ಈ ವಿನಿಮಯವು ಮಾನವ ಹಕ್ಕುಗಳ ಬಹುದೊಡ್ಡ ಉಲ್ಲಂಘನೆಯೆಂದು ಮತ್ತು ಇದರಲ್ಲಿ ಮಾನವಹಕ್ಕುಗಳನ್ನು ಮತ್ತು ವ್ಯಕ್ತಿಸ್ವಾತಂತ್ರ್ಯವನ್ನು ಅದರಲ್ಲೂ ಮಹಿಳೆಯರ ಗೌವವನ್ನು, ರಕ್ಷಣೆಯನ್ನು ಎತ್ತಿಹಿಡಿಯುವ ಭಾರತದ ಧ್ಯೇಯವು ಪೊಳ್ಳೆಂದು ಸಾಬೀತಾಗುವ ಅಪಾಯವಿದೆ. ಶಕ್ತಿಯಿದ್ದರೆ ಎಲ್ಲವೂ ಸರಿ. ಕೆನಡಾದಲ್ಲಿ ಬಂಧಿತಳಾದ, ಅಮೆರಿಕಕ್ಕೆ ಬೇಕಾಗಿದ್ದ, ಚೀನಾದ ಹುವಾಹೈ ಮೊಬೈಲ್ ಕಂಪೆನಿಯ ಅಧಿಕಾರಿಯನ್ನು ಅಮೆರಿಕಕ್ಕೆ ಹಸ್ತಂತರಿಸುವ ಪ್ರಕ್ರಿಯೆಯನ್ನು ಚೀನಾ ವಿರೋಧಿಸಿದ್ದು ಮಾತ್ರವಲ್ಲ, ತಕ್ಷಣ ಕೆನಡಾದ ಅಧಿಕಾರಿಯೊಬ್ಬರನ್ನು ಬಂಧಿಸಿ ತನ್ನ ಮಹಿಳೆಯನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಈ ಚಾಣಾಕ್ಷತೆ ಎಷ್ಟು ರಾಷ್ಟ್ರಗಳಿಗೆ ಸಾಧ್ಯ?

ಚಾಣಕ್ಯರೂ ಇರುತ್ತಾರೆ; ಅಮಾತ್ಯರಾಕ್ಷಸರೂ ಇರುತ್ತಾರೆ. ಮುದ್ರೆಯುಂಗುರ ಹೇಗೆ ಬಳಕೆಯಾಗುತ್ತದೆಂಬುದು ಮತ್ತು ಪ್ರಜೆಗಳು ಅದನ್ನು ಹೇಗೆ ಗಮನಿಸುತ್ತಾರೆಂಬುದು ಮುಖ್ಯ. ಸದ್ಯ ನಾವು ಗಾಢ ನಿದ್ರೆಯಲ್ಲಿರುವುದರಿಂದ ಇವೆಲ್ಲ ನಮಗೆ ಮುಖ್ಯವಲ್ಲ. ಪ್ರಶ್ನಿಸಿದರೂ ‘‘ನಿಮಗೆ ಅಂತರ್‌ರಾಷ್ಟ್ರೀಯ ಕಾನೂನಿನ, ರಾಜತಾಂತ್ರಿಕ ಸಂಬಂಧಗಳ ನೆಲೆಯ ಪರಿಚಯ ಎಷ್ಟಿದೆ’’ ಎಂಬ ಅಧಿಕಾರಶಾಹಿ ಮರುಪ್ರಶ್ನೆಗಳನ್ನೆದುರಿಸಬೇಕಾಗುವುದು ವಿಷಾದನೀಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)