varthabharthi


ಪ್ರಚಲಿತ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಕಟಗಳು

ವಾರ್ತಾ ಭಾರತಿ : 24 Dec, 2018
ಸನತ್ ಕುಮಾರ್ ಬೆಳಗಲಿ

ನರೇಂದ್ರ ಮೋದಿಯವರ ಅಧಿಕಾರ ಅವಧಿಯಲ್ಲಿ ಸಾರ್ವಜನಿಕ ವಲಯದ ಮೇಲೆ ಗೋರಿ ಕಟ್ಟಿ ಸಮಾಧಿ ಮಾಡಲಾಗುತ್ತಿದೆ. ಅದಾನಿ, ಅಂಬಾನಿಯನ್ನು ಮೆರೆಸುವುದೇ ದೇಶದ ಅಭಿವೃದ್ಧಿ ಎಂದು ಪ್ರತಿಪಾದಿಸಲಾಗುತ್ತಿದೆ. ಒಂದೂವರೆ ಶತಮಾನದಿಂದ ಬ್ರಿಟಿಷ್ ಕಾಲದಿಂದ ಬೆಳೆದು ಬಂದ ಭಾರತೀಯ ರೈಲ್ವೆಯನ್ನು ಒಡೆದು ಖಾಸಗಿ ರಣಹದ್ದುಗಳಿಗೆ ಹಾಕುವ ಮಸಲತ್ತು ನಡೆದಿದೆ. 


ದೇಶ ನವ ಉದಾರೀಕರಣದ ಕವಲು ದಾರಿಯತ್ತ ಸಾಗಿದ ನಂತರ ಸಾರ್ವಜನಿಕ ಉದ್ಯಮ ರಂಗ ನಿತ್ಯವೂ ಪ್ರಾಣಸಂಕಟ ಅನುಭವಿಸುತ್ತಿದೆ. ಸಾರ್ವಜನಿಕ ಉದ್ಯಮಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕರೆದಿದ್ದರು. ಆದರೆ, ಈಗಿನ ಪ್ರಧಾನಿ ಈ ದೇವಾಲಯಗಳನ್ನು ಒಂದೊಂದಾಗಿ ಮುಚ್ಚುತ್ತ ಹೊಸ ಕಾರ್ಪೊರೇಟ್ ದೇವಾಲಯಗಳನ್ನು ಕಟ್ಟುತ್ತಿದ್ದಾರೆ.

ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರ ಎಲ್ಲೆಡೆ ಖಾಸಗೀಕರಣದ ಅಬ್ಬರ ಕೇಳಿ ಬಂತು. ಎಲ್ಲವೂ ಖಾಸಗೀಕರಣಗೊಳಿಸುವುದು ದೇಶದ ಅಭಿವೃದ್ಧಿ ಎಂದು ಹೇಳಲಾಯಿತು. ಹಾಗೆ ನೋಡಿದರೆ, ಪಿ.ವಿ. ನರಸಿಂಹರಾವ್ ಇದ್ದಾಗಲೇ ಜಾಗತೀಕರಣದ ಶಕೆ ಆರಂಭವಾಯಿತು. ವಾಜಪೇಯಿ ಪ್ರಧಾನಿ ಆಗಿದ್ದಾಗ, ಸಾರ್ವಜನಿಕ ರಂಗದ ಉದ್ಯಮಗಳನ್ನು ಮುಚ್ಚಲೆಂದೇ ಸಚಿವ ಖಾತೆಯೊಂದನ್ನು ಮಾಡಲಾಯಿತು. ನರೇಂದ್ರ ಮೋದಿಯವರ ಅಧಿಕಾರ ಅವಧಿಯಲ್ಲಿ ಸಾರ್ವಜನಿಕ ವಲಯದ ಮೇಲೆ ಗೋರಿ ಕಟ್ಟಿ ಸಮಾಧಿ ಮಾಡಲಾಗುತ್ತಿದೆ. ಅದಾನಿ, ಅಂಬಾನಿಯನ್ನು ಮೆರೆಸುವುದೇ ದೇಶದ ಅಭಿವೃದ್ಧಿ ಎಂದು ಪ್ರತಿಪಾದಿಸಲಾಗುತ್ತಿದೆ. ಒಂದೂವರೆ ಶತಮಾನದಿಂದ ಬ್ರಿಟಿಷ್ ಕಾಲದಿಂದ ಬೆಳೆದು ಬಂದ ಭಾರತೀಯ ರೈಲ್ವೆಯನ್ನು ಒಡೆದು ಖಾಸಗಿ ರಣಹದ್ದುಗಳಿಗೆ ಹಾಕುವ ಮಸಲತ್ತು ನಡೆದಿದೆ. ಈ ದೇಶದ ಸಾರ್ವಜನಿಕ ಉದ್ಯಮ ರಂಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಹೆಮ್ಮೆಯ ಸ್ಥಾನ ಪಡೆದಿದೆ. ಈ ಸಾರಿಗೆ ಸಂಸ್ಥೆಯ ಬಸ್‌ಗಳು ಹೋಗದ ಹಳ್ಳಿಗಳು ಕರ್ನಾಟಕದಲ್ಲಿಲ್ಲ. ನಾಡಿನ ಮೂಲೆಮೂಲೆಯ ಹಳ್ಳಿಗಳಿಗೆ ಈ ಬಸ್‌ಗಳು ಸಂಚರಿಸುತ್ತವೆ. ಕನ್ನಡನಾಡು ಒಂದಾಗಿ ಉಳಿಯಲು ಈ ಬಸ್‌ಗಳ ಕೊಡುಗೆ ಅಪಾರ.
ಇಂಥ ಸಾರಿಗೆ ಸಂಸ್ಥೆಯಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ಈಗ ವ್ಯಾಪಕವಾಗಿ ಬೆಳೆದು ನಿಂತಿದೆ. ಈ ರೀತಿ ಬೆಳೆದು ನಿಂತ ಸಂಸ್ಥೆಯನ್ನು ಕುರಿಯನ್ನು ಕಟುಕರಿಗೆ ಮಾರಿದಂತೆ, ಖಾಸಗಿ ರಂಗದ ಮೊಸಳೆಗಳ ಬಾಯಿಗೆ ಹಾಕಲು ಆಗಾಗ ಮಸಲತ್ತುಗಳು ನಡೆಯುತ್ತಲೇ ಇವೆ. ಈ ಸಂಸ್ಥೆ ರಾಜ್ಯದಲ್ಲಿ ಸಾವಿರಾರು ಕೋಟಿ ವೌಲ್ಯದ ಆಸ್ತಿ ಹೊಂದಿದೆ. ಬಹುತೇಕ ಊರುಗಳಲ್ಲಿ ಸ್ವಂತ ಜಾಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ಡಿಪೋ ಮತ್ತು ಕಾರ್ಯಾಗಾರಗಳು ತಲೆಯೆತ್ತಿ ನಿಂತಿವೆ. ಇವೆಲ್ಲವೂ ಇಲ್ಲಿ ಕೆಲಸ ಮಾಡುವ ಶ್ರಮಜೀವಿಗಳ ಬೆವರಿನ ಫಲ.

ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಟ್ಟಿದವರು ಇಲ್ಲಿ ಕೆಲಸ ಮಾಡುವ ಕಾರ್ಮಿಕರು. ಇದನ್ನು ಕಟ್ಟಿದವರ ಬದುಕು ನೆಮ್ಮದಿಯಿಂದ ಕೂಡಿಲ್ಲ ಎಂಬುದು ವಿಷಾದದ ಸಂಗತಿ. ಕನಿಷ್ಠ ಸಂಬಳ, ಸವಲತ್ತುಗಳಿಗೆ ಹೋರಾಡುವುದು ಒತ್ತಟ್ಟಗಿರಲಿ, ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸಂಸ್ಥೆಯಲ್ಲಿ ಉಳಿದಿಲ್ಲ. ಮೇಲಧಿಕಾರಿಗಳ ಕಿರುಕುಳ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಈ ಸಂಸ್ಥೆಯಲ್ಲಿ ಹೆಚ್ಚಿದೆ. ಇದರೊಂದಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅನೇಕ ಡಿಪೋಗಳಲ್ಲಿ ರಜೆ ಪಡೆಯಲು ಸಿಬ್ಬಂದಿ 500 ರೂ. ಲಂಚ ನೀಡಬೇಕಾಗುತ್ತದೆ. ಚಾಲಕರಿಗೆ ಓಡಿಸಲು ಹೊಸ ಬಸ್ ಬೇಕೆಂದರೆ 5,000 ರೂ. ದಕ್ಷಿಣೆ ಕೊಡಬೇಕು. ಇದರೊಂದಿಗೆ ನಿತ್ಯವೂ ಶೋಕಾಸ್ ನೋಟಿಸ್‌ಗಳು, ರಜೆ ನಿರಾಕರಣೆ, ಕೆಲಸದ ಒತ್ತಡ ಇವುಗಳಿಂದಾಗಿ ಹತಾಶರಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ವರ್ಗಾವಣೆಯ ಶಿಕ್ಷೆ ಬೇರೆ.
ಇಂಥ ಕಾರ್ಮಿಕರಿಗಾಗಿ ಹೋರಾಡುತ್ತ ಬಂದ ಎಐಟಿಯುಸಿಗೆ ಸೇರಿದ ಕೆಎಸ್ಸಾರ್ಟಿಸಿ ಕಾರ್ಮಿಕರ ಮತ್ತು ಸಿಬ್ಬಂದಿ ಒಕ್ಕೂಟದ ರಾಜ್ಯ ಸಮ್ಮೇಳನ ಇತ್ತೀಚೆಗೆ ಕಲಬುರಗಿಯಲ್ಲಿ ನಡೆಯಿತು. ಅದರಲ್ಲಿ ಪಾಲ್ಗೊಂಡಿದ್ದರಿಂದ ಅನೇಕ ವಿಷಯಗಳನ್ನು ತಿಳಿಯಲು ಸಾಧ್ಯವಾಯಿತು. ನಾಲ್ಕು ದಶಕಗಳಿಂದ ಈ ಸಂಘಟನೆಯ ಸಂಪರ್ಕದಲ್ಲಿ ಇರುವ ನನಗೆ ಅವರ ಸಮಸ್ಯೆಗಳ ಅರಿವು ಸಾಕಷ್ಟು ಇದೆ.

70ರ ದಶಕದಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕ ಎಂ.ಎಸ್. ಕೃಷ್ಣನ್ ಜೊತೆ ಸೇರಿ ಸಂಘಟನೆ ಕಟ್ಟಿದ ಎಚ್.ವಿ. ಅನಂತ ಸುಬ್ಬರಾವ್ ಈ ಸಂಘಟನೆಗಾಗಿ ತಮ್ಮ ಬದುಕನ್ನೇ ಅರ್ಪಿಸಿದ್ದಾರೆ. ಅವರೊಂದಿಗೆ ಅನೇಕ ಕಾರ್ಮಿಕರ ಸಭೆಯಲ್ಲಿ ಪಾಲ್ಗೊಂಡಿದ್ದೇನೆ. ಬೆಳಗಿನ ಜಾವ ಡಿಪೋಗಳಿಗೆ ಹೋಗಿ, ಕಾರ್ಮಿಕರನ್ನು ಅವರು ಭೇಟಿ ಮಾಡುವುದನ್ನು ಕಂಡಿದ್ದೇನೆ. ಸ್ವಂತದ ಬದುಕನ್ನೇ ಕಡೆಗಣಿಸಿ, ಕಾರ್ಮಿಕರಿಗಾಗಿ ಶ್ರಮಿಸುತ್ತಿದ್ದ ಅನಂತ ಸುಬ್ಬರಾವ್ ರಾತ್ರಿಯೆಲ್ಲ ಸಂಘಟನೆ ಕಚೇರಿಯಲ್ಲಿ ಕೆಲಸ ಮಾಡಿ, ಅಲ್ಲಿಯೇ ಮಲಗುತ್ತಿದ್ದರು. ಅವರು ತಮ್ಮ ಮನೆಗೆ ಯಾವಾಗಲಾದರೂ ಒಮ್ಮೆ ಅತಿಥಿಯಂತೆ ಹೋಗುತ್ತಿದ್ದರು. ಇತ್ತೀಚೆಗೆ ಆರೋಗ್ಯ ಕೈಕೊಟ್ಟ ನಂತರ ನಿಯಮಿತವಾಗಿ ಮನೆಗೆ ಹೋಗುತ್ತಿದ್ದಾರೆ. ಕರ್ನಾಟಕದ ಮೂಲೆಮೂಲೆಯಲ್ಲಿ ಹೆಸರು ಹಿಡಿದು ಕರೆಯುವಷ್ಟು ಸಂಪರ್ಕ ಅವರಿಗಿದೆ. ಕಳೆದ 40 ವರ್ಷಗಳಲ್ಲಿ ಕಾರ್ಮಿಕ ಸಂಘಟನೆಗಾಗಿ 500 ಬಾರಿ ಕರ್ನಾಟಕವನ್ನು ಅವರು ಸುತ್ತಿದ್ದಾರೆ. ಹಾಗಾಗಿಯೇ ಈ ಸಂಘಟನೆ ಇಷ್ಟು ಬಲಿಷ್ಠವಾಗಿ ಬೆಳೆದು ನಿಂತಿದೆ. ಪ್ರತಿಯೊಬ್ಬ ಕಾರ್ಮಿಕನ ವೈಯಕ್ತಿಕ ಸಮಸ್ಯೆಗೂ ಅವರು ಸ್ಪಂದಿಸುತ್ತಾರೆ. ಈಗ ಕಾರ್ಮಿಕ ಸಂಘಟನೆ ಜೊತೆಗೆ ಸಂಸ್ಥೆಯನ್ನು ಉಳಿಸುವ ಸವಾಲನ್ನು ಅವರು ಸ್ವೀಕರಿಸಿದ್ದಾರೆ. ಸಾರ್ವಜನಿಕ ರಂಗದ ಈ ಸಾರಿಗೆ ಸಂಸ್ಥೆಯನ್ನು ರಕ್ಷಿಸಲು ಎಐಟಿಯುಸಿ ಕಾರ್ಮಿಕ ಸಂಘಟನೆ ನಿರಂತರವಾಗಿ ಹೋರಾಡುತ್ತಿದೆ. ಇದು ಚುನಾವಣೆ ಮೂಲಕ ಮಾನ್ಯತೆ ಪಡೆದ ಸಂಘಟನೆ. ಮಾನ್ಯತೆಗಾಗಿ ಮತ್ತೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಸಬೇಕು ಎಂಬುದು ಅವರ ಇನ್ನೊಂದು ಬೇಡಿಕೆ ಆಗಿದೆ.
ಈ ಹಿಂದೆ ಪಿ.ಜಿ.ಆರ್. ಸಿಂಧ್ಯಾ ಸಾರಿಗೆ ಸಚಿವರಾಗಿದ್ದಾಗ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯನ್ನು ನಾಲ್ಕು ನಿಗಮಗಳಲ್ಲಿ ವಿಂಗಡಿಸಲಾಯಿತು. ಇದರಿಂದ ಆಡಳಿತ ವೆಚ್ಚ ಹೆಚ್ಚಾಗಿ, ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿದೆ. ಈ ನಷ್ಟಕ್ಕೆ ಅಧಿಕಾರಿಗಳೇ ಕಾರಣ ಎಂದು ಈಗಿನ ಸಾರಿಗೆ ಸಚಿವರು ಹೇಳುತ್ತಾರೆ. ತಾವು ಖಾಸಗೀಕರಣಕ್ಕೆ ವಿರೋಧ ಎಂದು ಅವರು ಹೇಳಿದ್ದಾರೆ. ಆದರೆ, ಅವರು ಇಡುತ್ತಿರುವ ಹೆಜ್ಜೆಗಳು ಖಾಸಗೀಕರಣಕ್ಕೆ ಪೂರಕವಾಗಿವೆ. ಖಾಸಗಿ ಬಸ್ ಲಾಬಿಗಳ ಒತ್ತಡಕ್ಕೆ ಮಣಿದು ಪದೇ ಪದೇ ಸಾರಿಗೆ ಸಂಸ್ಥೆ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾವವನ್ನು ಅವರು ಮುಂದಿಡುತ್ತಿದ್ದಾರೆ. ಮುಖ್ಯಮಂತ್ರಿ ಇಂಥ ಪ್ರಸ್ತಾವವನ್ನು ತಿರಸ್ಕರಿಸಿದರೂ ದರ ಹೆಚ್ಚಳಕ್ಕೆ ಮತ್ತೆ ಪ್ರಯತ್ನ ನಡೆಸಿದ್ದಾರೆ. ಸರಕಾರಿ ಬಸ್‌ಗಳ ಪ್ರಯಾಣ ದರ ಹೆಚ್ಚಾದರೆ, ತಾವೂ ಪ್ರಯಾಣ ದರ ಹೆಚ್ಚಿಸಲು ಖಾಸಗಿ ಬಸ್‌ಗಳ ಮಾಲಕರು ಕಾಯುತ್ತಿದ್ದಾರೆ.

ಕರ್ನಾಟಕ ಸಾರಿಗೆ ಸಂಸ್ಥೆ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ಲಾಭ-ನಷ್ಟದ ಗುರಿಯನ್ನು ಇಟ್ಟುಕೊಂಡು ನಡೆಸಬಾರದು. ಹಾಗೆಂದು ನಷ್ಟ ಅನುಭವಿಸಬೇಕೆಂದಲ್ಲ. ಜನರ ಸೇವೆ ಅದರ ಮುಖ್ಯ ಗುರಿಯಾಗಿರುತ್ತದೆ. ಇದನ್ನು ಅಧಿಕಾರದಲ್ಲಿ ಇರುವವರು ಗಮನಿಸಬೇಕು. ಈಗ ಈ ಸಾರಿಗೆ ಸಂಸ್ಥೆ ವ್ಯಾಪಕವಾಗಿ ಬೆಳೆದಿದೆ. ಇಲ್ಲಿ ಮಹಿಳಾ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರ್ವಾಹಕರಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಾರೆ. ರಾತ್ರಿಯೆಲ್ಲ ಪ್ರಯಾಣ ಮಾಡಿ, ನಿಗದಿತ ಊರು ತಲುಪಿದ ನಂತರ ಮಹಿಳಾ ನಿರ್ವಾಹಕರಿಗೆ ತಂಗಲು ವಿಶ್ರಾಂತಿ ಧಾಮದ ವ್ಯವಸ್ಥೆ ಕೂಡ ಇಲ್ಲ. ಕಾರ್ಯಾಗಾರದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆಯೂ ಇಲ್ಲ. ಹೀಗೆ ಹಲವಾರು ಸಮಸ್ಯೆಗಳಿಂದ ಈ ಸಿಬ್ಬಂದಿ ತೊಂದರೆಗೆ ಒಳಗಾಗಿದ್ದಾರೆ. ರಾಜ್ಯ ಸಾರಿಗೆ ಸಂಸ್ಥೆಯನ್ನು ಕಾಪಾಡಬೇಕೆಂದರೆ, ಖಾಸಗಿ ಬಸ್ ಮಾಲಕರ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ನಾಲ್ಕು ನಿಗಮಗಳು ಅನುಭವಿಸುತ್ತಿರುವ ಒಂದೂವರೆ ಸಾವಿರ ಕೋಟಿ ರೂಪಾಯಿ ನಷ್ಟವನ್ನು ಕಡಿಮೆ ಮಾಡಬೇಕೆಂದರೆ, ಸಾರಿಗೆ ನಿಗಮಗಳನ್ನು ವಿಲೀನಗೊಳಿಸಬೇಕು. ಸಾರಿಗೆ ನಿಗಮಗಳ ನೌಕರರ ಸಂಬಳವನ್ನು ಸರಕಾರವೇ ಭರಿಸಬೇಕು. ಕಾರ್ಮಿಕ ಸಂಘದ ಮಾನ್ಯತೆಗಾಗಿ ಚುನಾವಣೆ ನಡೆಸಬೇಕು. ಇವೆಲ್ಲ ಈಡೇರಿಸಲಾಗದ ಬೇಡಿಕೆಗಳಲ್ಲ. ಸಮ್ಮಿಶ್ರ ಸರಕಾರವು ಕಾರ್ಮಿಕರ ಕೂಗಿಗೆ ಸ್ಪಂದಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)