varthabharthiಅನುಗಾಲ

ಹನುಮದ್ವಿಲಾಸ

ವಾರ್ತಾ ಭಾರತಿ : 27 Dec, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಹನುಮಂತ ಹಿಂದೂಗಳಲ್ಲೇ ಯಾವ ಜಾತಿಯವನು ಎಂದು ಇತ್ಯರ್ಥವಾಗದೇ ಇದ್ದರೂ ಈಗ ಆತನಿಗೊಂದು ಜಾತಿ-ಮತವನ್ನು ಕರುಣಿಸುವಲ್ಲಿ ನಮ್ಮ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ನಮ್ಮ ಮಠಗಳು ಅಯೋಧ್ಯೆಯ ವಿವಾದದ ನಡುವೆ ಇದನ್ನೂ ಇತ್ಯರ್ಥಪಡಿಸಿ ಹನುಮಂತನಿಗೆ ಒಂದು ಜಾತಿ ದೃಢೀಕರಣಪತ್ರವನ್ನು ನೀಡಬೇಕು. ಇದಕ್ಕೆ ಸಂವಿಧಾನದ ತಿದ್ದುಪಡಿಯಾಗಬೇಕೋ ಗೊತ್ತಿಲ್ಲ. ಇದ್ದರೆ ಅದು ಮಹಿಳಾ ಮೀಸಲಾತಿ ಮಸೂದೆಯ ಹಾಗೆ, ಲೋಕಪಾಲ ಮಸೂದೆಯ ಹಾಗೆ ಶೈತ್ಯಾಗಾರದಲ್ಲಿ ಕೊಳೆತು ಪ್ರತೀ ಚುನಾವಣೆಯಲ್ಲೂ ಭರವಸೆ ನೀಡಲು ಒಳ್ಳೆಯ ಕಾರಣವಾಗುತ್ತದೆ.


ಕಲಿಕಾಲದ ಭರತಖಂಡಕ್ಕೆ ಹೊಂದುವಂತೆ ಭಗವದ್ಗೀತೆಯ ಒಂದು ಶ್ಲೋಕವನ್ನು ಹೀಗೆ ಬದಲಾಯಿಸಿಕೊಂಡು ಹೇಳಬಹುದು: ಯತ್ರ ಯೋಗೇಶ್ವರಃ ಕೃಷ್ಣೋ ತತ್ರ ಪಾರ್ಥೊ ಧನುರ್ಧರಃ  ಯೋಗೇಶ್ವರನು ಹೇಳಿದ ಮಾತನ್ನು ಬಿಲ್ಲಿಗೆ ಬಾಣ ಹೂಡಿ ಸನ್ನದ್ಧನಾದ ದಶನಾಮಧಾರಿ ಅರ್ಜುನನು ಈಡೇರಿಸಲು ಸದಾ ಕಾತರನಾಗಿರುತ್ತಾನೆ. ಧ್ವಜದ ಮೇಲಿರುವ ಹನುಮ ಈ ಮಾತುಗಳನ್ನು ಕೇಳಿಸಿಕೊಂಡು ನಕ್ಕನೊ ಏನೋ ಗೊತ್ತಿಲ್ಲ; ಆದರೆ ಈ ಬಾರಿ ಯೋಗೇಶ್ವರನ ಮಾತು ಮತ್ತು ಅದನ್ನು ಈಡೇರಿಸುವ ಕ್ರಿಯೆಯೆಂಬ ಪ್ರಹಸನಕ್ಕೆ ಧ್ವಜದಲ್ಲಿದ್ದ ನಮ್ಮ-ನಿಮ್ಮ ಹನುಮ ಸಿಕ್ಕಿಹಾಕಿಕೊಂಡ ಕಥೆಯನ್ನು ಹೇಳುವವನಿದ್ದೇನೆ:

ಉತ್ತರ ಪ್ರದೇಶದ ಯೋಗೀಶ್ವರ ಮುಖ್ಯಮಂತ್ರಿ ಕಳೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಭಾಜಪದ ತಾರಾ ಪ್ರಚಾರಕ. ಜನರನ್ನೊಲಿಸುವ ವಿಶಿಷ್ಟ ಪರಿ ಅವರದ್ದಾದ್ದರಿಂದ ಅವರು ಮುತ್ತಿನಹಾರದಂತೆ ನುಡಿಯುತ್ತಿರುತ್ತಾರೆಂದು ಅವರ ಅನುಯಾಯಿಗಳೇ ಹೇಳುತ್ತಾರೆ.

ಈ ಬಾರಿ ಅವರ ಮಾತಿನ ವರಸೆಗೆ ಹನುಮನ ಬಾಲ ಸಿಕ್ಕಿಕೊಂಡಿತು. ಹನುಮನ ಜಾತಿ ಯಾವುದು ಎಂಬುದನ್ನು ಭಕ್ತಕೋಟಿ ಎಂದೂ ಗಮನಿಸಿದ್ದು ನನಗೆ ಗೊತ್ತಿಲ್ಲ. (ನನ್ನ ಮೌಢ್ಯಕ್ಕೆ ಕ್ಷಮಿಸಬೇಕು.) ಕೇಳಿದರೆ ವಾನರ ಜಾತಿ ಎನ್ನಬೇಕು. ಇನ್ನೂ ಮಹತ್ವ ನೀಡಬೇಕೆಂದರೆ ವಾಯುಪುತ್ರ, ಅಂಜನಾಪುತ್ರ ಹೀಗೆ ವಿವರಿಸಬೇಕು. ಅದರಿಂದಾಚೆಗೆ ಅವನನ್ನು ಕೇಳಿದವರಿಲ್ಲ. ಅವನೇ ಹೇಳಿದಂತೆ ಅವನು ರಾಮಭಕ್ತ; ರಾಮಸೇವಕ. ಲಂಕೆಯಲ್ಲಿ ಪ್ರಶ್ನಿಸಿದಾಗ ದಾಸೋಹಂ ಕೋಸಲೇಂದ್ರಸ್ಯಃ ಎಂದನಂತೆ.

ಇಂತಿಪ್ಪಹನುಮಂತನಿಗೆ ಈ ಯೋಗೀಶ್ವರರು ಒಂದು ಜಾತಿ ಕಲ್ಪಿಸಿದರು. ಭಾಷಣಮಾಡುತ್ತ ತಮ್ಮ ವರಸೆಗೆ ತಾವೇ ಮಣಿದು ಹನುಮಂತ ಒಬ್ಬ ದಲಿತ ಎಂದರು. ಇದು ಇಡೀ ದೇಶಕ್ಕೆ ಸೇವಕ ಸೃಷ್ಟಿಯ ರೋಮಾಂಚನವನ್ನು ತಂದಿತು. ಯೋಗದೃಷ್ಟಿಗೆ ಮಾತ್ರ ಇದು ಕಾಣಸಿಗುವ ಸತ್ಯ ಎಂದುಕೊಂಡು ಅವರ ಅನುಯಾಯಿಗಳು ಹಿರಿಹಿರಿಹಿಗ್ಗಿದರು. ಶ್ರೀಮಂತರ ರಾಮಸನ್ನಿಧಿಯಲ್ಲಿ ಹನುಮನಿಗೆ ಪಕ್ಕದಲ್ಲೇ ಔಟ್ ಹೌಸ್‌ನಂತೆ ಒಂದು ಗುಡಿಯಿದ್ದರೆ ದಲಿತರು ಶ್ರೀರಾಮಮಂದಿರವನ್ನು ಮಲಿನಗೊಳಿಸುವುದು ತಪ್ಪುತ್ತದೆಯೆಂಬ ಚಾಣಾಕ್ಷತೆಯೂ ಈ ಯೋಗಿಯ ಮನಸ್ಸಿನಲ್ಲಿತ್ತು. ಇದೆಲ್ಲವೂ ಕ್ರೋಡೀಕರಿಸಿ ಹನುಮನನ್ನು ದಲಿತನೆಂದು ಅವರು ಗುರುತಿಸಿದ್ದು ಈ ಶತಮಾನದ ಮಹತ್ಸಾಧನೆ! ಯುಗ ಯುಗಗಳಲ್ಲೂ ಇಂತಹ ಯೋಗಿಗಳಿದ್ದರೆ ಯೋಗಾಯೋಗ! ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರವನ್ನು ಕಟ್ಟುವಾಗ ಈ ದಲಿತ ಹನುಮನಿಗೂ ಒಂದು ಗುಡಿಕಟ್ಟಿದರೆ ಕಾರ್ಮಿಕ ವಸತಿಗೃಹದಂತಿರುವ ಅದನ್ನು ನೋಡಿ ದಲಿತರೂ ಸಂತೋಷವಾಗಿರುತ್ತಾರೆ ಎಂಬ ದೂರಗಾಮಿ ಯೋಜನೆಯ ಯೋಗೀಶ್ವರರ ತತ್ವವಿಚಾರದ ವಿಸ್ತಾರವನ್ನು ನೋಡಿ ಶತಯೋಜನ ಸಮುದ್ರವನ್ನು ಲಂಘಿಸಿದ ಹನುಮನಿಗೂ ಬೆರಗಾಯಿತು.

ಯೋಗೀಶ್ವರರ ಮಾತೆಂಬ ಜ್ಯೋತಿಯ ಬೆಂಕಿ, ಬೆಳಕು, ಧೂಳು, ಹೊಗೆ, ಮಸಿ ಇವೆಲ್ಲ ಇನ್ನೂ ಆರುವ ಮುನ್ನವೇ ಅವರ ನಿಷ್ಠಾವಂತ ಮುಸ್ಲಿಂ ಶಾಸಕನೊಬ್ಬ (ಅವನ ಹೆಸರು ನನಗೆ ನೆಪಾಗುವುದಿಲ್ಲ; ಒಂದು ವೇಳೆ ಅವನ ಹೆಸರು ಇಸ್ಲಾಮಿನದ್ದೇ ಇದ್ದರೂ ಅದೀಗ ಅಲ್ಲಹಾಬಾದ್ ಪ್ರಯಾಗರಾಜ್ ಆದಂತೆ ಬದಲಾಗಿರಬಹುದಾದ್ದರಿಂದ ಅವನ ಹೆಸರು ಇಲ್ಲಿ ಅಪ್ರಸ್ತುತ! ಆದರೆ ಅವನು ಹಿಂದುತ್ವದ ಪ್ರಬಲ ಪ್ರತಿಪಾದಕ ಎಂಬುದನ್ನು ನಿರಾಕರಿಸುವಂತಿಲ್ಲ; ನಖ್ವಿ ಮತ್ತು ಶಾನವಾಝ್ ಹುಸೈನ್‌ರ ಸ್ಥಾನಕ್ಕೆ ಕುತ್ತು ತರಬಲ್ಲಷ್ಟು ತಳಮಳ ಹುಟ್ಟಿಸುವಷ್ಟು, ಭಾರತೀಯ!) ಈ ಪುರಾಣ ಇಲ್ಲಿಗೇ ಮಣ್ಣಾಗಬಾರದು, ಅಮರವಾಗಿ ಉಳಿಯಬೇಕು ಎಂಬ ಮಹೋದ್ದೇಶದಿಂದ ಹನುಮಾನ್ ಒಬ್ಬ ಮುಸ್ಲಿಮ್ ಎಂದು ಭಾಷಣ ಬಿಗಿದೇ ಬಿಟ್ಟ. ಇದಕ್ಕೆ ಅನೇಕರು ಸಮರ್ಥನೀಯವಾದ ವಾದವನ್ನು ಹೂಡಿದರು. ಉಸ್ಮಾನ್, ಸುಲೇಮಾನ್, ರಹ್ಮಾನ್ ಎಂಬಿತ್ಯಾದಿ ಹೆಸರುಗಳೂ ಹನುಮಾನ್ ಎಂಬ ಹಾಗೆ ‘ನ್’ ಧಾತುವಿನೊಂದಿಗೆ (ವ್ಯಾಕರಣಕಾರರು ಇದು ಧಾತುವೋ ಪ್ರತ್ಯಯವೋ ಹೇಳಬೇಕು) ಅಂತ್ಯಗೊಳ್ಳುವುದರಿಂದ ಈ ಶಾಸಕರು ಹೇಳಿದ್ದು ಸರಿಯಿರಬಹುದು ಎಂದೂ ಹೇಳಿದರು. ಶಾಸಕರ ಕಾಳಜಿ ಸ್ಪಷ್ಟ. ಅಯೋಧ್ಯಾ ವಿವಾದದಲ್ಲಿ ಆಖಾಡದವರು ಜಾಗ ಕೊಡುವುದು ಕಷ್ಟ. ಏಕೆಂದರೆ ಅದಿರುವುದು ಕುಸ್ತಿ ಮಾಡುವುದಕ್ಕೆ. ನೆಮ್ಮದಿಯ ಬದುಕಿಗೆ ಅಲ್ಲಿ ಅವಕಾಶವಿಲ್ಲ.

ರಾಜಕಾರಣಕ್ಕೆ ಹೊರತಾದ, ಭಕ್ತಿ ಮುಂತಾದ ವಿಚಾರಗಳಿಗೆ ಅವಕಾಶವಿಲ್ಲ. ಏನಾದರೂ ಶ್ರೀರಾಮನಿಗೆ ಭಾಗಶಃ ಸೋಲಾದರೆ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಒಂದಿಷ್ಟು ಜಾಗ ಸಿಕ್ಕಿದರೆ, ಅಲ್ಲಿ ಹನುಮನಿಗೆ ಮಸೀದಿಯಾದರೂ ದಕ್ಕಲಿ ಅಥವಾ ಈ ನೆಪದಲ್ಲಿ ಹನುಮನಿಗೆ ಶ್ರೀರಾಮಸಾನ್ನಿಧ್ಯ ಸಿಕ್ಕಲಿ ಎಂಬುದೇ ಅವರ ಅಶಯ. ಶ್ರೀರಾಮನಿಗೆ ಮರುಹುಟ್ಟು ನೀಡಿದ್ದೇ ಅಯೋಧ್ಯಾ ವಿವಾದ. ಅದಲ್ಲವಾದರೆ ಸೋಮನಾಥ ಮಂದಿರ ರಚನೆಯಾಗುವಾಗಲೇ ರಾಮನಿಗೂ ಒಂದು ಮಂದಿರವಷ್ಟೇ ಅಲ್ಲ ಒಂದು ರಾಜ್ಯವನ್ನೇ ಕೊಡಿಸಬಹುದಿತ್ತು. ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಶ್ರೀರಾಮ ಚಿರಂಜೀವಿಯಲ್ಲ. ಅವನೂ ತನ್ನ ಅವತಾರ ಸಮಾಪ್ತಿಯಾದೊಡನೆಯೇ ದೇವರಾಗಿ ನಿಂತನೇ ಹೊರತು ಮನುಷ್ಯನಾಗಿ ಅಲ್ಲ. ಆದ್ದರಿಂದ ಅವನು ಮರುಹುಟ್ಟು ಪಡೆಯಬೇಕಾದರೆ, ಮತ್ತೆ ಅವತಾರವೆತ್ತಿ ಬರಬೇಕಾದರೆ (ದೊಡ್ಡವರ ಹುಟ್ಟನ್ನು ಯಾವಾಗಲೂ ಅವತಾರವೆನ್ನುತ್ತಾರೆ) ಭಗವದ್ಗೀತೆಯಲ್ಲಿ ಹೇಳಿದಂತೆ ಧರ್ಮಗ್ಲಾನಿಯಾಗಲೇ ಬೇಕು. ಮಂತ್ರಿಗಳು ವಿಮಾನದಲ್ಲಿ ಬಂದರೆ ಅದನ್ನಿಳಿಸಲು ಒಂದು ನಿಲ್ದಾಣ ಬೇಕಲ್ಲ, ಹಾಗೆಯೇ ದೇವರಿಗೊಂದು ಮಂದಿರವೂ ಬೇಕು. ಹೀಗಾಗಿ ಅಯೋಧ್ಯೆಯ ವಿವಾದಮುಖೇನ ಒಂದು ಧರ್ಮಗ್ಲಾನಿಯೂ ಒಂದು ಮಂದಿರವೂ ಆದರೆ ದೇವರಿಗೆ ಬರುವುದಕ್ಕೆ ನೆಪವೂ ಬಂದರೆ ತಂಗಲು ನಿಲ್ದಾಣವೂ ಲಭಿಸುತ್ತದೆ. ಹನುಮಾನ್ ಹೀಗಲ್ಲ.

ಆತ ಚಿರಂಜೀವಿ. ಪೂಜೆಗೊಳ್ಳುತ್ತ, ಡಾರ್ವಿನ್‌ನ ವಿಕಾಸವಾದದ ಮೆಟ್ಟಲುಗಳನ್ನು ನೋಡುತ್ತ, ಇಂದಿಗೂ ವಾನರ ಕುಲವು ಅಳಿಯದಂತೆ ಪೋಷಿಸುತ್ತ ತಾನು ಕಾಣಿಸಿಕೊಳದೆಯೇ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಉಳಿದವನು. ಪುಟ್ಟ ಮಕ್ಕಳಲ್ಲಿ ಹನುಮಾನ್ ಸಾಕಾರ ಸ್ವರೂಪಿ. ಏಕೋ ಮಾಣಿ ದಶಮರ್ಕಟಃ ಎಂಬ ಮಾತು ಸುಮ್ಮನೇ ಬಂದಿಲ್ಲ. ಕನ್ನಡದಲ್ಲಿ ಹೇಳಿದರೆ ದಲಿತರೂ ಪುನರುಚ್ಚರಿಸುತ್ತಾರೆಂಬ ಭಯಕ್ಕೆ ಸಂಸ್ಕೃತದಲ್ಲಿ ಕಟ್ಟಿಕೊಟ್ಟ ಬುತ್ತಿ. ಅದು ಬೈಗುಳವಲ್ಲ; ವರ್ಧಮಾನದ ವರಾತವನ್ನು ಹೇಳುತ್ತಲೇ ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ ಎಂದು ನೆನಪಿಸುವ ಸೂಕ್ತಿ. ನಮ್ಮ ರಾಜಕಾರಣಿಗಳು ಎಂದೂ ಚಿಂತಿಸುವುದಿಲ್ಲ; ಅವರು ಚಿಂತನೆಯನ್ನಷ್ಟೇ ಮಾಡುತ್ತಾರೆಂಬುದಕ್ಕೆ ಇದಕ್ಕಿಂತ ಜ್ವಲಂತ ಉದಾಹರಣೆ ಸದ್ಯದ ವರ್ಷಗಳಲ್ಲಿ ಹೇರಳವಾಗಿವೆ. ಹೇಗಿದ್ದರೂ ಹನುಮನು ಹಿಂದೂವೇ ಇರಲಿ, ಮುಸ್ಲಿಮನೇ ಇರಲಿ, ‘‘ಎಲ್ಲಿ ಶ್ರೀರಾಮನೋ ಅಲ್ಲೇ ಈ ಹನುಮನು’’ ಎಂದು ಹಾಡುವುದಕ್ಕೆ ಅಡ್ಡಿಯಿಲ್ಲ.

ಉತ್ತರ ಪ್ರದೇಶದ ಇನ್ನೊಬ್ಬ ಜಾತ್ (ಇದನ್ನು ‘ಜಾಟ್’ ಎಂದೂ ಹೇಳುತ್ತಾರೆ!) ಶಾಸಕರು (ಇವರೂ ಹಿಂದುತ್ವದ ಪ್ರತಿಪಾದಕರೇ) ಹನುಮಂತ ಒಬ್ಬ ಜಾತ್ ಎಂದು ಘೋಷಿಸಿಯೇಬಿಟ್ಟರು! ಅವರು ಸುಮ್ಮನೇ ಏನನ್ನೂ ಹೇಳುವವರೇ ಅಲ್ಲ. ಜಾತ್ ಜನರು (ಇದೇ ಪದದಿಂದ ಜಾತೀಯ ಮತ್ತು ಜಾತ್ಯತೀತ ಈ ಎರಡೂ ಪದಗಳು ಬಂದಿರಬೇಕು ಎಂದು ಉತ್ಖನನಶಾಸ್ತ್ರಿಗಳು ಹೇಳುತ್ತಾರೆ) ಸದಾ ಎಲ್ಲರಿಗೂ ಬೆಟ್ಟದಡಿ ಹುಲ್ಲಾಗಿ ಮನೆಗೆ ಮಲ್ಲಿಗೆಯಾಗಿ ನೆರವಾಗುವವರು. ಹನುಮಂತನೂ ಹಾಗೆಯೇ. ತನ್ನ ಹೆಗಲಿನಲ್ಲಿಯೇ ರಾಮಲಕ್ಷ್ಮಣರನ್ನು ಕೂರಿಸಿಕೊಂಡು ಜೆಟ್ ವಿಮಾನದಂತೆ ಹೊತ್ತೊಯ್ದವನು; ಸಾಗರದ ಮೇಲೆ ರಫೇಲ್ ಯುದ್ಧವಿಮಾನದಂತೆ ಹಾರಬಲ್ಲವನು. ಆದ್ದರಿಂದ ಹನುಮಂತನಿಗೆ ಜಾತಿಯಿಲ್ಲವೆನ್ನುವವರು ಈ ಕೆಲವು ಕೊಂಡಿಗಳನ್ನು ಜೋಡಿಸಿಯಾದರೂ ಆತನು ಜಾತ್ ಎಂದು ತೀರ್ಮಾನಿಸಬೇಕು ಎಂಬರ್ಥದಲ್ಲಿ ಹನುಮಂತನಿಗೂ ಒಂದು ಜಾತಿ ಕಲ್ಪಿಸಿದರು. ಆಧಾರ್ ಇಲ್ಲದೆ ಏನೂ ಸಿಗದ ಈ ದೇಶದಲ್ಲಿ ಈ ರೀತಿ ಹನುಮಂತನಿಗೆ ಒಂದು ಆಧಾರ ಸಿಕ್ಕಿದೆ; ಶ್ರೀರಾಮನಿಗಿನ್ನೂ ಆಧಾರವಿಲ್ಲ. ಗೋವುಗಳಿಗೂ ಆಧಾರವನ್ನು ಕಲ್ಪಿಸುವ ಯೋಜನೆಯಲ್ಲಿ ದೇವದೇವತೆಗಳಿಗೂ ಆಧಾರ ಕಲ್ಪಿಸುವುದು ತಪ್ಪೂಅಲ್ಲ; ಕಷ್ಟವೂ ಅಲ್ಲ.

ಇಂತಹ ಸಮಸ್ಯೆಯನ್ನು ನಮ್ಮ ಜನರು ಹಿಂದೆಯೂ ಅನುಭವಿಸಿದ್ದರೆಂದು ಮಾಸ್ಟರ್ ಹಿರಣ್ಯಯ್ಯನವರು ಹೇಳುತ್ತಿದ್ದರು: ಹನುಮಂತನು ಶೈವೋಪಾಸಕನೋ ಶ್ರೀವೈಷ್ಣವನೋ ಎಂಬ ವಿವಾದವೆದ್ದಿತ್ತಂತೆ. ತೆಂಕಲೈ ಬಡಗಲೈ ಎಂಬ ಆನೆಯ ನಾಮದ ವಿವಾದ ಮಧುರೆಯಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದ ಹಾಗೆ ಈ ಸಮಸ್ಯೆಯೂ. ಆದರೆ ಇದು ನ್ಯಾಯಾಲಯದ ಮೆಟ್ಟಲೇರಲಿಲ್ಲ. ನಮ್ಮ ವೈಷ್ಣವ ಪಂಡಿತರು ಇದಕ್ಕೊಂದು ಸೂತ್ರವನ್ನು ಹೇಳಿದರು. ಹನುಮಂತ ರಾಮಭಕ್ತ. ರಾಮನು ವಿಷ್ಣುವಿನ ಅವತಾರ; ಅಂಶ. ಹನುಮಂತನ ಎದೆ ಸೀಳಿದಾಗ ಇಂದು ದೇಶಭಕ್ತರ ಎದೆ ಸೀಳಿದಾಗ ಅಲ್ಲಿ ಮೋದಿಯವರ ಫೋಟೋ ಕಂಡ ಹಾಗೆ ಸೀತಾರಾಮರ ಸುಂದರ ವರ್ಣರಂಜಿತ ಭಾವಚಿತ್ರ (ಹೇಗಿದೆಯೆಂದು ಗೊತ್ತಾಗದಿದ್ದರೆ ಕ್ಯಾಲೆಂಡರನ್ನು ನೆನಪಿಸಿಕೊಳ್ಳಿ) ಕಂಡಿತಂತೆ. ಈ ಸೀಳೆದೆೆಯನ್ನು ಸರಿಪಡಿಸಲು ಕ್ರಿಶ್ಚಿಯನ್ ಬರ್ನಾರ್ಡ್‌ರಂತಹ ಹೃದ್ರೋಗತಜ್ಞರು ಹುಟ್ಟುವ ಬಹುಕಾಲದ ಹಿಂದೆಯೇ ಈ ದೇಶದಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರಿದ್ದರೆಂಬುದು ಈ ಘಟನೆಯಿಂದ ಗೊತ್ತಾಗುತ್ತದೆ! ಹನುಮಂತನ ದವಡೆಯ ಶಸ್ತ್ರ ಚಿಕಿತ್ಸೆಯನ್ನೂ ಈ ದೇಶದಲ್ಲಿ ತ್ರೇತಾಯುಗದಲ್ಲೇ ಮಾಡಿದ್ದರು. ನಮ್ಮ ವೈದ್ಯಕೀಯ ಪದ್ದತಿ ಎಷ್ಟು ಮುಂದುವರಿದಿತ್ತು ಎಂಬುದಕ್ಕೂ ಇದು ಸಾಕ್ಷಿ. ಆದ್ದರಿಂದ ಹನುಮಂತ ಶ್ರೀವೈಷ್ಣವನೇ; ತಲ್ಲಣಿಸದಿರು ಕಂಡ್ಯ, ಇದಕೆ ಸಂಶಯಬೇಡ ಎಂದು ಹಾಡಿದರು.

ಆದರೆ ಇದನ್ನು ಇನ್ನೊಂದು ಅರ್ಥಾತ್ ಶೈವಪಕ್ಷ ಒಪ್ಪಲಿಲ್ಲ. ಅವರೂ ನಮ್ಮ ಪುರಾಣಗಳನ್ನು ಅಗೆದು ತೆಗೆದರು. ಮೊದಲು ಕೋಶಾವಸ್ಥೆ; ನಂತರ ಕಂಡಿತು ಗೆರೆಮಿರಿವ ಚಿನ್ನದದಿರು. ಮಹಾಭಾರತದಲ್ಲೆ ಇದೆಯಲ್ಲ ಸೌಗಂಧಿಕಾ ಪ್ರಸಂಗ. ಏನಾಯಿತು? ಭೀಮನನ್ನು ಪುರುಷ ಮೃಗವು ಅಟ್ಟಿಸಿಕೊಂಡು ಬರುವಾಗ ಅವನಿಗೆ ನೆರವಾದದ್ದು ಹನುಮಂತನ ರೋಮ. ಅದನ್ನು ಭೀಮನಿಗಿತ್ತು ಅಪಾಯವೆದುರಾದಲ್ಲಿ ಎಸೆಯಬೇಕೆಂದು ಹೇಳಿದನಂತೆ. ರೋಮಾಂಚನವಾಗುವ ಈ ಪ್ರಸಂಗದಲ್ಲಿ ಇನ್ನೇನು ಪುರುಷಮೃಗವು ಭೀಮನನ್ನು ಹಿಡಿಯಿತೆನ್ನುವಷ್ಟರಲ್ಲಿ ಭೀಮ ಎಸೆದ ಹನುಮಂತನ ರೋಮ ಬಿದ್ದ ಜಾಗದಲ್ಲಿ ಒಂದು ಶಿವಲಿಂಗ ಬಿದ್ದಿತು. ಪುರುಷಮೃಗ ಕಟ್ಟಾ ಶಿವ ಭಕ್ತ. ಅದನ್ನು ಪೂಜಿಸಿಯೇ ಮುಂದುವರಿಯಬೇಕು. ಅಷ್ಟರಲ್ಲಿ ಭೀಮ ಇನ್ನೆಷ್ಟೋ ದೂರ ಓಡಿರುತ್ತಿದ್ದ. (ಇದೇನೂ ದೊಡ್ಡ ವಿಷಯವಲ್ಲ; ನಮ್ಮ ನ್ಯಾಯವಾದಿಗಳು ಯಾವುದೇ ಪ್ರಕರಣವನ್ನು ಈ ರೀತಿ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿ ವರ್ಷಾನುಗಟ್ಟಲೆ ಎಳೆದಾಡುತ್ತಾರೆ!) ಹೀಗೆ ಹನುಮಂತನ ರೋಮ ಬಿದ್ದಲ್ಲೆಲ್ಲ ಶಿವಲಿಂಗ ಉದ್ಭವವಾಗುತ್ತದೆಯಾದರೆ ಆತ ಮಹಾನ್ ಶಿವಭಕ್ತನೇ ಇರಬೇಕು.

ಈ ದೇಶದಲ್ಲಿ ಇಷ್ಟೊಂದು ಶೈವದೇಗುಲಗಳಿದ್ದರೆ ಅವೆಲ್ಲವೂ ಹನುಮಂತನ ದೇಹದಿಂದ ಬಿದ್ದ ರೋಮಗಳೇ. ಆದ್ದರಿಂದ ಆತ ಶೈವ. ಹೀಗೆ ಹನುಮಂತ ಹಿಂದೂಗಳಲ್ಲೇ ಯಾವ ಜಾತಿಯವನು ಎಂದು ಇತ್ಯರ್ಥವಾಗದೇ ಇದ್ದರೂ ಈಗ ಆತನಿಗೊಂದು ಜಾತಿ-ಮತವನ್ನು ಕರುಣಿಸುವಲ್ಲಿ ನಮ್ಮ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ನಮ್ಮ ಮಠಗಳು ಅಯೋಧ್ಯೆಯ ವಿವಾದದ ನಡುವೆ ಇದನ್ನೂ ಇತ್ಯರ್ಥಪಡಿಸಿ ಹನುಮಂತನಿಗೆ ಒಂದು ಜಾತಿ ದೃಢೀಕರಣಪತ್ರವನ್ನು ನೀಡಬೇಕು. ಇದಕ್ಕೆ ಸಂವಿಧಾನದ ತಿದ್ದುಪಡಿಯಾಗಬೇಕೋ ಗೊತ್ತಿಲ್ಲ. ಇದ್ದರೆ ಅದು ಮಹಿಳಾ ಮೀಸಲಾತಿ ಮಸೂದೆಯ ಹಾಗೆ, ಲೋಕಪಾಲ ಮಸೂದೆಯ ಹಾಗೆ ಶೈತ್ಯಾಗಾರದಲ್ಲಿ ಕೊಳೆತು ಪ್ರತೀ ಚುನಾವಣೆಯಲ್ಲೂ ಭರವಸೆ ನೀಡಲು ಒಳ್ಳೆಯ ಕಾರಣವಾಗುತ್ತದೆ. ಹನುಮಂತನ ಲೀಲಾವಿನೋದಗಳನ್ನು ತಮ್ಮ ಬಿಡುವಿಲ್ಲದ ಸೇವಾ ಕಾರ್ಯಗಳ ನಡುವೆ ನಮ್ಮ ರಾಜಕಾರಣಿಗಳೂ ದೇಶಭಕ್ತರೂ ಹಾಡಿ ಪ್ರೇರಣೆ ನೀಡುತ್ತಿದ್ದಾರಲ್ಲ! ಇದಕ್ಕಾಗಿ ನಾವು ಧನ್ಯರು; ಋಣಿಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)