ತೆರೆಗೆ ಬರಲಿದೆ ಮೋದಿ ಜೀವನಾಧರಿತ ಚಿತ್ರ: ಪ್ರಧಾನಿ ಪಾತ್ರ ನಿರ್ವಹಿಸಲಿರುವ ನಾಯಕ ಯಾರು ಗೊತ್ತೇ?
ಮುಂಬೈ, ಡಿ.30: ಬಾಲಿವುಡ್ ನಲ್ಲಿ ಗಣ್ಯರ, ರಾಜಕೀಯ ನಾಯಕರ ಜೀವನ ಘಟನೆಗಳನ್ನು ಆಧರಿಸಿದ ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಜನವರಿ ಮೊದಲ ವಾರದಲ್ಲಿ ಚಿತ್ರ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ವಿವೇಕ್ ಒಬೆರಾಯ್ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ನಟಿಸಲಿದ್ದಾರೆ.
ಚಿತ್ರಕ್ಕೆ ಮುಂದಿನ ಕೆಲ ತಿಂಗಳ ಕಾಲ ಗುಜರಾತ್, ದಿಲ್ಲಿ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಸೇರಿದಂತೆ ದೇಶದ ವಿವಿಧೆಡೆ ಚಿತ್ರೀಕರಣ ನಡೆಯಲಿದೆ. ಓಂಕಾರ (2006), ಕಂಪನಿ (2002) ಮತ್ತು ಸಾಥಿಯಾ (2002) ಚಿತ್ರಗಳಲ್ಲಿ ನಾಯಕ ನಟರಾಗಿದ್ದ ವಿವೇಕಾನಂದ ಒಬೆರಾಯ್, ಈ ಯೋಜನೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ನಿರ್ದೇಶಕ ಒಮಂಗ್ ಕುಮಾರ್. ಈ ಮೊದಲು ಮೇರಿ ಕೋಮ್ ಹೆಸರಿನ ಚಿತ್ರವನ್ನು ಇವರು ನಿರ್ದೇಶಿಸಿದ್ದರು. 2017ರಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿರುವ ಭೂಮಿ ಚಿತ್ರವನ್ನೂ ಇವರು ನಿರ್ದೇಶಿಸಿದ್ದರು. ಚಿತ್ರತಂಡ ಕಥೆ, ಚಿತ್ರಕಥೆ ಹಾಗೂ ಸ್ಕ್ರೀನ್ಪ್ಲೇ ಸಿದ್ಧಪಡಿಸುವಲ್ಲಿ ಕಳೆದ ಒಂದೂವರೆ ವರ್ಷದಿಂದ ನಿರತವಾಗಿದೆ. ಕಳೆದ ವಾರ ಅಗತ್ಯ ಅನುಮತಿ ದೊರಕಿದೆ ಎಂದು ತಿಳಿದುಬಂದಿದೆ.