varthabharthi

ನಿಮ್ಮ ಅಂಕಣ

ಕನ್ನಡ ನಮ್ಮ ಪ್ರಾಣ ಇಂಗ್ಲಿಷ್ ನಮ್ಮ ತ್ರಾಣ

ವಾರ್ತಾ ಭಾರತಿ : 10 Jan, 2019
ಕೃಷ್ಣಮೂರ್ತಿ ಚಮರಂ

ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವಂತಿದೆ ಈ ಕನ್ನಡಪರರ ಸದರಿ ಹೋರಾಟ. ಯಾರದೋ ಮಕ್ಕಳ ಭವಿಷ್ಯವನ್ನು ಹೀಗೇ ಇರಬೇಕು ಎಂದು ನಿರ್ಧರಿಸುವ ಹಕ್ಕು ಇವರಿಗೇನಿದೆ? ಹಾಗೊಂದು ವೇಳೆ ಇವರಿಗೆ ಬಡವರು ಮತ್ತು ಗ್ರಾಮಾಂತರ ಪ್ರದೇಶದವರಿಂದಲೇ ಕನ್ನಡ ಉಳಿಯಬೇಕು ಎನ್ನುವುದಾದರೆ ಕನ್ನಡ ಓದುವ ಮಕ್ಕಳ ಉದ್ಯೋಗ ಭದ್ರತೆ ಹಾಗೂ ಅವರ ಉತ್ತಮ ಭವಿಷ್ಯದ ಖಾತರಿ ಕೊಡಬಲ್ಲರೇ?

ಇವತ್ತು ಜಗತ್ತನ್ನು ಗ್ಲೋಬಲ್ ವಿಲೇಜ್ ಎನ್ನಲಾಗುತ್ತಿದೆ. ಅಂದರೆ ಜಗತ್ತು ಒಂದು ಗ್ರಾಮವಾಗಿದೆ. 1990ರಲ್ಲಿ ನಮ್ಮ ದೇಶ ಹೊಸ ಆರ್ಥಿಕ ನೀತಿಗೆ ಸಹಿ ಹಾಕಿದಾಗ, ರಾಷ್ಟ್ರೀಕೃತ ಸಂಸ್ಥೆಗಳನ್ನು ನಿಧಾನಕ್ಕೆ ಖಾಸಗೀಕರಣಗೊಳಿಸಲಾಯಿತು. ಅಂದಿನಿಂದ ವಿಶ್ವಮಾರುಕಟ್ಟೆಗನುಗುಣವಾಗಿ ದೇಶದ ಆರ್ಥಿಕತೆ ಬದಲಾಗುತ್ತಾ ಹೋಯಿತು. ಜಗತ್ತಿನ ಆಧುನೀಕಣಕ್ಕೆ ತಕ್ಕಂತೆ ದೇಶದ ಜನರೂ ಆಧುನಿಕತೆಗೆ ತೆರದುಕೊಳ್ಳುತ್ತಾ ಹೋದರು. ಹೀಗೆ ದೇಶವು ವಿಶ್ವದೊಡನೆ ತನ್ನನ್ನು ಪ್ರತಿನಿಧಿಸಲಾರಂಭಿಸಿತು. ಈಗಿನ ಮೋದಿ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದೇಶಿ ಹೂಡಿಕೆದಾರರನ್ನು ಮುಕ್ತವಾಗಿ ಆಹ್ವಾನಿಸಿದೆ. ವಿದೇಶಿ ಪಾಲುದಾರಿಕೆಯ ನಿಯಮಗಳನ್ನೂ ಸಡಿಲಗೊಳಿಸಿದೆ. ಮಾನವ ಸಂಪನ್ಮೂಲವೇ ಪ್ರಮುಖವಾಗಿರುವ ಭಾರತದಂತಹ ದೇಶಗಳಲ್ಲಿ ಕಡಿಮೆ ಸಂಬಳದಲ್ಲಿ ಅತಿಹೆಚ್ಚು ಉತ್ಪಾದನೆ ಮಾಡಿಕೊಳ್ಳುವುದರಲ್ಲಿ ವಿದೇಶಿ ಕಂಪೆನಿಗಳು ನಿರತವಾಗಿವೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಸರಕಾರಗಳೇ ಮುಚ್ಚಿ ಖಾಸಗಿಯವರ ವ್ಯವಹಾರಕ್ಕೆ ಉತ್ತೇಜನ ನೀಡುತ್ತಿವೆ. ಇಂತಹ ಸ್ಥಿತಿಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಒಂದು ಸಣ್ಣ ಕೆಲಸ ಗಿಟ್ಟಿಸಲೂ ಇಂಗ್ಲಿಷ್ ಭಾಷೆ ತುಂಬಾ ಅನಿವಾರ್ಯವಾಗಿದೆ. ಇಲ್ಲಿ ಕೌಶಲ್ಯ ಮತ್ತು ನೈಪುಣ್ಯಕ್ಕಿಂತಲೂ ಇಂಗ್ಲಿಷ್ ಭಾಷೆಯೇ ಮುಖ್ಯವೆನಿಸಿದೆ. ಎಷ್ಟೋ ಯುವಜನರು ಎಲ್ಲಾ ರೀತಿಯ ವಿದ್ಯಾರ್ಹತೆಗಳಿದ್ದಾಗ್ಯೂ ಇಂಗ್ಲಿಷ್ ಭಾಷೆಯ ಕೊರತೆಯಿಂದಾಗಿ ಮತ್ತು ಇಂಗ್ಲಿಷ್ ಬಾರದ ಕೀಳರಿಮೆಯಲ್ಲಿ ಸಣ್ಣದೊಂದು ಕೆಲಸ ಗಿಟ್ಟಿಸಲಾಗದೆ ನರಳುತ್ತಿದ್ದಾರೆ. ಇಂತಹ ಯುವಜನರ ಆರ್ಥಿಕ ಸ್ಥಿತಿ ಅತ್ಯಂತ ಸೋಚನೀಯವಾಗಿದೆ. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶದ ಬಡ ಮತ್ತು ಕೆಳಮಧ್ಯಮ ವರ್ಗದ ಮಕ್ಕಳು ಹೀಗೆ ಇಂಗ್ಲಿಷ್ ಭಾಷೆ ಬಾರದ ಕಾರಣಕ್ಕೆ ತೀರ ಹಿಂದುಳಿದವರಾಗಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿರುವ ಕುಳಗಳು ಗಲ್ಲಿಗಲ್ಲಿಯಲ್ಲೂ ಇಂಗ್ಲಿಷ್ ಶಾಲೆಗಳನ್ನು ತೆರದು ಮಧ್ಯಮ ವರ್ಗದ ಜನರ ಮಕ್ಕಳ ಇಂಗ್ಲಿಷ್ ಶಿಕ್ಷಣದ ಕೊರತೆ ನೀಗಿಸುತ್ತಿವೆ. ಆಧುನಿಕತೆಯ ಸ್ಪರ್ಷದೊಡನೆ ಜಗಮಗಿಸುವ ವಿಶಾಲವಾದ ಇಂಟರ್ ನ್ಯಾಷನಲ್ ಹೆಸರಲ್ಲಿ ಶಾಲೆಗಳನ್ನು ತೆರೆದು ಸಿರಿವಂತರ ಮಕ್ಕಳಿಗೆ ವಿಶ್ವದರ್ಜೆಯ ಇಂಗ್ಲಿಷ್ ಶಿಕ್ಷಣ ನೀಡುವ ಸಾವಿರಾರು ಶಿಕ್ಷಣ ಸಂಸ್ಥೆಗಳಿವೆ. ಅದರೊಡನೆ ಸಿರಿವಂತರ ಮಕ್ಕಳಿಗೆ ಖಾಸಗಿ ಟ್ಯೂಷನ್ ಸವಲತ್ತು. ಇವೆಲ್ಲವೂ ಸಿರಿವಂತರ ಮಕ್ಕಳಲ್ಲಿ ಅಪಾರವಾದ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತವೆ. ಉದ್ಯೋಗ ಮಾರುಕಟ್ಟೆಯಲ್ಲಿ ಎಲ್ಲಾ ಮೇಲ್‌ಸ್ತರದ ಉದ್ಯೋಗಗಳೂ ಅವರಿಗೆ ಸರಾಗವಾಗಿ ಒಲಿಯುತ್ತವೆ. ಅವರ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ. ಆದರೆ ಕನ್ನಡ ಭಾಷಾಪ್ರೇಮದಲ್ಲಿ ಅಥವಾ ಸರಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಯುವ ಬಹುತೇಕ ಗ್ರಾಮಾಂತರ ಮಕ್ಕಳ ಬದುಕಿನ ಗತಿಯೇನು?

ಈ ಬಗ್ಗೆ ಕನ್ನಡ ಹೋರಾಟಗಾರರು ಎಂದಾದರೂ ಯೋಚಿಸಿರುವರೇ? ಕನ್ನಡ ಮಾಧ್ಯಮವೇ ಶಿಕ್ಷಣ ಮಾಧ್ಯಮವಾಗಬೇಕೆಂಬ ಕಟು ಕನ್ನಡದ ಸಾಹಿತಿಗಳು ಎಂದಾದರೂ ಬಡ ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಿದ್ದಾರೆಯೇ? ಕನ್ನಡ ಮಾಧ್ಯಮದ ಬಗ್ಗೆ ಭಾವುಕವಾಗಿ ಮಾತಾಡುವ ಸಾಹಿತಿಗಳು, ಹೋರಾಟಗಾರರು ಈ ಗ್ಲೋಬಲ್ ವಿಲೇಜ್ ಕಾನ್ಸೆಪ್ಟ್ ಬಂದಾಗ ಏಕೆ ಅದರ ಆಗುಹೋಗುಗಳ ಕುರಿತು ಮಾತಾಡಲಿಲ್ಲ? ಖಾಸಗೀಕರಣಕ್ಕೆ ಸರಕಾರಗಳು ಮುಂದಾದಾಗ ಏಕೆ ಅದನ್ನು ವಿರೋಧಿಸಲಿಲ್ಲ? ಈ ಖಾಸಗೀಕರಣ ನಮ್ಮ ಮಾತೃಭಾಷೆಗೆ ದೊಡ್ಡ ಹೊಡೆತ ನೀಡುತ್ತದೆ ಎಂದು ಮುಂದಾಲೋಚನೆ ಮಾಡದಷ್ಟು ಮುಗ್ಧರಾಗಿದ್ದರೇ? ಅದೂ ಹೋಗಲಿ, ಇವರು ಅದಾಗಲೇ ರಾಜ್ಯಾದ್ಯಂತ ಹುಟ್ಟಿಕೊಂಡಿರುವ ಖಾಸಗಿ ಇಂಗ್ಲಿಷ್ ಶಾಲೆಗಳ ವಿರುದ್ಧ ಯಾಕೆ ಸೊಲ್ಲೆತ್ತುತ್ತಿಲ್ಲ? ರಾಜಕಾರಣಿಗಳು, ಅಧಿಕಾರಿಗಳು, ಕನ್ನಡಪರ ಹೋರಾಟಗಾರರು ಮತ್ತು ಕಟ್ಟರ್ ಕನ್ನಡಪರ ಸಾಹಿತಿ ಬಾಂಧವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕನ್ನಡ ಶಾಲೆಗಳಲ್ಲಿಯೇ ಓದಿಸುತ್ತಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳನ್ನೂ ಇವರಿಗೆ ಕೇಳಿದರೆ ಅವರು ಅತ್ಯಂತ ಜಾಣ್ಮೆಯ ಉತ್ತರ ನೀಡುತ್ತಾರೆ. ಇದು ಇವರ ಕನ್ನಡಪರ ಕಾಳಜಿ! ಇವರ ಪ್ರಕಾರ ಕನ್ನಡ ಮಾಧ್ಯಮ ಶಾಲೆಗಳು ಇರಬೇಕು ಮತ್ತು ಕನ್ನಡ ಮಾಧ್ಯಮದಲ್ಲಿ ಬಡವರ ಮಕ್ಕಳು, ಗ್ರಾಮೀಣ ಮಕ್ಕಳು ಮಾತ್ರವೇ ಕಲಿತು ಕನ್ನಡವನ್ನು ಉಳಿಸಿ ಬೆಳೆಸಿ ಕಾಪಾಡಲು ತಮ್ಮ ಜೀವನವನ್ನು ತ್ಯಾಗ ಮಾಡಬೇಕು!

ಇಂದು ಯಾರೂ ಬುದ್ಧಿವಂತಿಕೆ ತೋರಿಸಿಕೊಳ್ಳಲು ಅಥವಾ ಭಾಷೆ ಉಳಿಸಲು ಅಧ್ಯಯನ ಮಾಡುವುದಿಲ್ಲ. ಎಲ್ಲರೂ ಒಂದು ಉದ್ಯೋಗ ಕ್ಕಾಗಿಯೇ ಶಾಲೆ ಕಲಿಯುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಓದುವುದು ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆದು ಹೆಚ್ಚೆಚ್ಚು ಸಂಪಾದಿಸಲು ಮತ್ತು ತಮ್ಮ ಜೀವನ ಮಟ್ಟವನ್ನು ಉನ್ನತಿಗೇರಿಸಿಕೊಳ್ಳುವುದಕ್ಕಾಗಿಯೇ ಎಂಬುದರಲ್ಲಿ ಏನಾದರೂ ಸಂಶಯವಿದೆಯೇ? ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಾತೃಭಾಷೆಗೆ ನಿಷ್ಠರಾಗಿರುತ್ತಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಾಕ್ಷಣಕ್ಕೆ ತಮ್ಮ ಮಾತೃಭಾಷೆಯನ್ನೇ ಮರೆತುಬಿಡುತ್ತಾರೆ ಎಂಬ ವಾದವೇ ಹುರುಳಿಲ್ಲದ್ದು. ಹಾಗೊಂದು ವೇಳೆ ಇಂಗ್ಲಿಷ್ ಭಾಷೆಯು ನಮ್ಮ ಭಾಷೆಯನ್ನು ನಶಿಸುವಂತೆ ಮಾಡುತ್ತದೆ ಎಂಬುದೇ ನಿಜವಾಗಿದ್ದರೆ, ಕನ್ನಡ ಉಳಿಸಲು ಏನು ಕ್ರಮ ಕೈಗೊಳ್ಳಬೇಕು? ಯಾರು ಕೈಗೊಳ್ಳಬೇಕು? ಅದರ ಕುರಿತ ಕ್ರಿಯಾ ಯೋಜನೆ ಕಟ್ಟರ್ ಕನ್ನಡವಾದಿಗಳ ಬಳಿ ಏನಿದೆ? ಅದನ್ನು ಎಂದೂ ಅವರು ಹೇಳಿಲ್ಲ. ಆದರೆ ಯಾವಾಗೆಲ್ಲಾ ಸರಕಾರ ಎಲ್ಲರಿಗೂ ಇಂಗ್ಲಿಷ್ ಶಿಕ್ಷಣ ಕೊಡಬೇಕೆಂದು ಮುಂದಾಗುತ್ತದೋ ಆಗೆಲ್ಲಾ ಇವರಲ್ಲಿ ಕನ್ನಡ ಪ್ರೇಮ ಉಕ್ಕಿ ಹರಿದು ಬೀದಿಗೆ ಬೀಳುತ್ತಾರೆ. ಇವರಿಗೆಲ್ಲಾ ಗೊತ್ತಿರಲಿ ಕನ್ನಡ ನಮ್ಮ ಪ್ರಾಣ ಮತ್ತು ಇಂಗ್ಲಿಷ್ ನಮ್ಮ ತ್ರಾಣ ಎಂದು.

ಇಂಗ್ಲಿಷ್ ಬದುಕು ಕೊಡುತ್ತದೆ ಎಂದರೆ ನಮಗೆ ಇಂಗ್ಲಿಷ್ ಬೇಕು. ನಾಳೆ ಜಪಾನ್ ಭಾಷೆ ಅನ್ನ ಕೊಡುತ್ತದೆ ಅಂದರೆ ಅದನ್ನು ನಾವು ಕಲಿಯಲು ಬಯಸುತ್ತೇವೆ. ಮುಂದೊಮ್ಮೆ ಇನ್ನೊಂದು ಯಾವುದೋ ಭಾಷೆ ನಮಗೆ ಉದ್ಯೋಗ ನೀಡುತ್ತದೆ ಎಂದರೆ ಅದನ್ನು ಕಲಿಯಬೇಕು ಅಷ್ಟೆ. ಕಟ್ಟರ್ ಕನ್ನಡವಾದಿಗಳು ಸರಕಾರ, ಆರ್ಥಿಕ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯನ್ನು ಕನ್ನಡ ಭಾಷೆ ಉಳಿವಿಗಾಗಿಯೇ ರೂಪಿಸಬಲ್ಲರಾದರೆ ಅದು ನಿಜವಾದ ಕನ್ನಡಪ್ರೇಮ. ಆಗ ಎಲ್ಲರೂ ತಾವಾಗಿಯೇ ಕನ್ನಡ ಕಲಿಯಲು ಮುಂದಾಗುತ್ತಾರೆ. ಕನ್ನಡವೇ ಬದುಕನ್ನು ರೂಪಿಸುತ್ತದೆ ಎಂದಾದರೆ ಕನ್ನಡವೇ ಪ್ರಾಣ, ಕನ್ನಡವೇ ತ್ರಾಣ. ಅಂದರೆ ಇದೆಲ್ಲವೂ ಉದ್ಯೋಗದ ಸುತ್ತಲೇ ಇರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಡವರ ಮಕ್ಕಳನ್ನು ಬಾವಿಗೆತಳ್ಳಿ ಆಳ ನೋಡುವಂತಿದೆ ಈ ಕನ್ನಡಪರರ ಸದರೀ ಹೋರಾಟ. ಯಾರದೋ ಮಕ್ಕಳ ಭವಿಷ್ಯವನ್ನು ಹೀಗೇ ಇರಬೇಕು ಎಂದು ನಿರ್ಧರಿಸುವ ಹಕ್ಕು ಇವರಿಗೇನಿದೆ? ಹಾಗೊಂದು ವೇಳೆ ಇವರಿಗೆ ಬಡವರು ಮತ್ತು ಗ್ರಾಮಾಂತರ ಪ್ರದೇಶದವರಿಂದಲೇ ಕನ್ನಡ ಉಳಿಯಬೇಕು ಎನ್ನುವುದಾದರೆ ಕನ್ನಡ ಓದುವ ಮಕ್ಕಳ ಉದ್ಯೋಗ ಭದ್ರತೆ ಹಾಗೂ ಅವರ ಉತ್ತಮ ಭವಿಷ್ಯದ ಖಾತರಿ ಕೊಡಬಲ್ಲರೇ? ಅಸಂಭವ!

ಯಾವಾಗ ದೇಶವು ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿತೋ ಆಗಲೇ ಸ್ಥಳೀಯ ಭಾಷೆಗಳಿಗಿಂತ ಜಾಗತಿಕ ಭಾಷೆಯ ಅನಿವಾರ್ಯ ಸೃಷ್ಟಿಯಾಯಿತು ಎಂಬುದನ್ನು ಕನ್ನಡಪರರು ಎಂದಾದರೂ ಯೋಚಿಸಿದ್ದಾರೆಯೇ? ಹೋರಾಟಗಾರರಿಗೆ ದೇಶದಲ್ಲಿ ನಡೆಯುವ ವ್ಯವಹಾರಗಳು, ಪಾಲಿಸಿಗಳು ಗೊತ್ತಿರಬೇಕು. ಹಿಂದೆ ಹೊಸ ಆರ್ಥಿಕ ನೀತಿಗೆ ಸಹಿ ಹಾಕಿದಾಗ ಅದನ್ನು ವಿರೋಧಿಸಿ ದೇಶಾದ್ಯಂತ ಬೀದಿಗೆ ಬಿದ್ದವರು ಇದೇ ಕೂಲಿಕಾರ್ಮಿಕರು, ರೈತರು ಮತ್ತು ದಲಿತರು.

ಆಗ ಕನ್ನಡಪರರಿಗೆ ಇದು ಮುಂದೊಮ್ಮೆ ನಮ್ಮ ಭಾಷೆಯ ಮೇಲೆ ಪರಿಣಾಮ ಬೀರಬಹುದು ಎಂದು ಅನಿಸಲಿಲ್ಲ. ದೇಶದಲ್ಲಿ ಖಾಸಗೀಕರಣ ಶುರುವಾದಾಗಲೂ ಅದನ್ನು ವಿರೋಧಿಸಿ ಪ್ರತಿಭಟನೆಗಾಗಿ ಬೀದಿಗೆ ಬಿದ್ದವರು ಇದೇ ದಲಿತರು, ಕಾರ್ಮಿಕರು ಮತ್ತು ಬಡಜನರು. ಆಗಲೂ ಈ ಖಾಸಗೀಕರಣ ನಮ್ಮ ಭಾಷೆಯ ಜನರ ಉದ್ಯೋಗ ಕಸಿಯಬಹುದು ಎಂದು ಕನ್ನಡಪರರಿಗೆ ಅನಿಸಲಿಲ್ಲ. ನಂತರ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಬೇಕು ಎಂದು ಎಸ್ಸಿ/ಎಸ್ಟಿ ಮತ್ತು ಹಿಂದುಳಿದ ಜಾತಿಯ ಜನ ಬೀದಿಗೆ ಬಿದ್ದಾಗಲೂ ಈ ಎಸ್ಸಿ/ಎಸ್ಟಿ/ಒಬಿಸಿ ಜನರೆಲ್ಲರೂ ನಮ್ಮ ಕನ್ನಡಿಗರು, ಇದು ಅವರ ಬದುಕಿನ ಪ್ರಶ್ನೆ ನಾವೂ ಇದನ್ನು ಬೆಂಬಲಿಸಿ ಹೋರಾಟಕ್ಕಿಳಿಯಬೇಕು ಎಂದು ಕನ್ನಡಪರರಿಗೆ ಅನಿಸಲಿಲ್ಲ. ಅದೂ ಹೋಗಲಿ, ದೇಶದಲ್ಲಿ ಶೇ.60 ಹೂಡಿಕೆ ಮಾಡಿ ತಮ್ಮ ವಹಿವಾಟು ಆರಂಭಿಸಲು ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಕೇಂದ್ರ ಸರಕಾರ ರೆಡ್ ಕಾರ್ಪೆಟ್ ಹಾಸಿ ಕರೆದಾಗ, ಅದಕ್ಕೆ ತಕ್ಕ ಪಾಲಿಸಿಗಳನ್ನು ಮಾಡಿದಾಗ ಇದು ನಮ್ಮ ಭಾಷೆಗೆ ದೊಡ್ಡ ಗಂಡಾಂತರ ಎಂದು ಈ ಕನ್ನಡಪರರಿಗೆ ಅನಿಸಲೇ ಇಲ್ಲ.

ತನ್ನಷ್ಟಕ್ಕೆ ತಾನೇ ಒಂದು ಭಾಷೆ ಉಳಿಯದು. ಮಗುವೊಂದು ಆಟಿಕೆಗಾಗಿ ಚಂಡಿಹಿಡಿವಂತೆ ಅದೆಲ್ಲಾ ನಮಗೆ ಗೊತ್ತಿಲ್ಲ, ಕನ್ನಡ ಮಕ್ಕಳು ಕನ್ನಡ ಮಾತ್ರ ಕಲಿಯಬೇಕು...ಅವರಿಗೆ ಇಂಗ್ಲಿಷ್ ಕೂಡದು. ಇದು ಕನ್ನಡಕ್ಕೆ ಮಾರಕ ಎಂದು ಅರಚಾಡುತ್ತಿರುವ ಕನ್ನಡಪರರಲ್ಲಿ ಸ್ಪಷ್ಟತೆಯ ಕೊರತೆಯಿದೆ. ಯೋಜನೆಯ ಕೊರತೆಯಿದೆ. ಹಾಗಾಗಿಯೇ ಅವರು ಕನ್ನಡ ಉಳಿಸುವ ಮಾರ್ಗಗಳನ್ನು ತೊರೆದು, ಸುಮ್ಮನೆ ಚಂಡಿಹಿಡಿದಿದ್ದಾರೆ. ಇವರಿಗೆ ಸರಕಾರ ಮಣೆ ಹಾಕಬೇಕಿಲ್ಲ. ನಮಗೂ ಇಂಗ್ಲಿಷ್ ಬೇಕು ಎಂಬುದು ನಮ್ಮ ಹಕ್ಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)