varthabharthi

ವಿಶೇಷ-ವರದಿಗಳು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ಕಾಂಗ್ರೆಸ್‌ನಿಂದ ಮುಸ್ಲಿಮ್ ಅಭ್ಯರ್ಥಿಯೇ ಸೂಕ್ತ: ಪಿ.ವಿ.ಮೋಹನ್

ವಾರ್ತಾ ಭಾರತಿ : 10 Jan, 2019
ಸಂದರ್ಶನ: ಬಿ.ಎನ್.ಪುಷ್ಪರಾಜ್

ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ತರಬೇತುಗೊಳಿಸಲು ಕಾಂಗ್ರೆಸ್ ಅಣಿಯಾಗುತ್ತಿದೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರ ಪಡೆ ಸಜ್ಜುಗೊಳಿಸುವುದು ರಾಹುಲ್ ಗಾಂಧಿಯ ಬಯಕೆ. ಇದಕ್ಕಾಗಿ ‘ಎಐಸಿಸಿ ವಿಶೇಷ ತರಬೇತಿ ವಿಭಾಗ’ವನ್ನು ವಿಶೇಷ ಮುತುವರ್ಜಿಯಿಂದ ಪ್ರಾರಂಭಿಸಿದೆ. ಇದರ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಅವರನ್ನು ನೇಮಿಸಿದೆ. ತಮ್ಮ ಹೊಸ ಹೊಣೆಗಾರಿಕೆ ಹಾಗೂ ತರಬೇತಿ ವಿಭಾಗದ ಯೋಜನೆಗಳ ಬಗ್ಗೆ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

► ಪಕ್ಷದ ಮಹತ್ವದ ಜವಾಬ್ದಾರಿಯನ್ನು ನಿಮಗೆ ವಹಿಸಲಾಗಿದೆ. ಈ ಹುದ್ದೆಯನ್ನು ವಹಿಸಿಕೊಂಡ ಬಳಿಕ ನಿಮ್ಮ ಮುಂದಿನ ಹೊಣೆಗಾರಿಕೆಗಳೇನು?

ಪಕ್ಷದ ನಾಯಕ ರಾಹುಲ್ ಗಾಂಧಿ ತರಬೇತಿ ವಿಭಾಗದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಪಕ್ಷದಲ್ಲಿ ಒಂದು ಕೇಡರ್ ಆಧರಿತ ಕಾರ್ಯಕರ್ತರನ್ನು ಸಿದ್ಧಗೊಳಿಸುವುದು ಅವರ ಉದ್ದೇಶ. ಇದು ನನ್ನ ಪಕ್ಷ. ನನ್ನ ಪಕ್ಷ ಎಂದರೆ ಏನು? ಪಕ್ಷಕ್ಕೆ ನಾನು ಯಾವ ರೀತಿಯ ಕೊಡುಗೆ ನೀಡಬಹುದು? ಎನ್ನುವ ಬದ್ಧತೆಯನ್ನು ಕಾರ್ಯಕರ್ತರಲ್ಲಿ ಮೂಡಿಸುವ ಪ್ರಯತ್ನವಿದು. ದೇಶದಲ್ಲಿ ಎಲ್ಲರನ್ನು ಒಂದು ಗೂಡಿಸುವ ಶಕ್ತಿ ಕಾಂಗ್ರೆಸ್‌ನ ಜಾತ್ಯತೀತ ರಾಜಕಾರಣಕ್ಕೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯ್ದ ಕಾರ್ಯಕರ್ತರಿಗೆ ತರಬೇತಿ ನೀಡುತ್ತೇವೆ. ಜಿಲ್ಲೆ, ಬ್ಲಾಕ್ ಸೇರಿದಂತೆ ಪ್ರತಿ ಬೂತ್ ಮಟ್ಟದವರೆಗೆ ಈ ತರಬೇತಿ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 56,000 ಬೂತ್‌ಗಳಿವೆ. ಕಾರ್ಯಕರ್ತರಿಗೆ ಎರಡು ದಿನಗಳ ತರಬೇತಿ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನರನ್ನು ಭೇಟಿ ಮಾಡಿ ಮತ ಕೇಳಲು ಈ ಕಾರ್ಯಕರ್ತರು ಸೀಮಿತವಾಗುವುದಿಲ್ಲ.

► ಪ್ರಸಕ್ತ ಜಾತಿ, ಧರ್ಮ ಹಾಗೂ ಭಾವನಾತ್ಮಕ ವಿಷಯಗಳು ಚುನಾವಣೆಯಲ್ಲಿ ಪ್ರಭಾವ ಬೀರುತ್ತಿದೆ. ಇವುಗಳನ್ನು ಹೇಗೆ ಎದುರಿಸುತ್ತೀರಿ?

ದೇಶದಲ್ಲಿ ಹಿಂದುತ್ವಕ್ಕೆ ಪರ್ಯಾಯ ರಾಜಕಾರಣವನ್ನು ನಾವು ಮಾಡುತ್ತಿಲ್ಲ. ಬದಲಾಗಿ ಈ ಮಣ್ಣಿನಲ್ಲಿ ಬಹುತ್ವ ಇದೆ. ಅದರೊಂದಿಗೆ ಜಾತ್ಯತೀತ ನಿಲುವಿನ ರಾಜಕಾರಣ ಬೆಳೆದು ಬಂದಿದೆ. ಅದರ ಜೊತೆ ಕಾಂಗ್ರೆಸ್ ಪಕ್ಷ ಇದೆ. ಅದನ್ನು ಗಟ್ಟಿಗೊಳಿಸುವ ಕೆಲಸ ನಾವು ಮಾತ್ರ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರಿಗೆ ಎಲ್ಲಾ ಧರ್ಮಗಳ ಬಗ್ಗೆ ಗೊತ್ತಿರಬೇಕು. ಆಗ ಅವರು ಇನ್ನೊಂದು ಧರ್ಮವನ್ನು ದ್ವೇಷಿಸುವುದಿಲ್ಲ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಸಾಂಸ್ಕೃತಿಕ ರಾಜಕಾರಣ ಮಾಡುತ್ತಿರುವ ಈ ಸಂದರ್ಭದಲ್ಲಿ ನಾವು ಈ ನೆಲದ ಬಹುತ್ವ ಮತ್ತು ಏಕತೆಯ ರಾಜಕಾರಣದ ಬಗ್ಗೆ ನಮ್ಮ ಕಾರ್ಯಕರ್ತರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಹಾಗೂ ಈ ಬಗ್ಗೆ ಆಳವಾದ ಜ್ಞಾನ ಹೊಂದಿರುವವರನ್ನು ಆಹ್ವಾನಿಸಿ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದೇವೆ.

► ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದ.ಕ. ಲೋಕಸಭಾ ಕ್ಷೇತ್ರ ಈಗ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಸವಾಲನ್ನು ಹೇಗೆ ಎದುರಿಸುತ್ತೀರಿ?

ತರಬೇತಿಯ ಸಂದರ್ಭದಲ್ಲಿ ಬಂದಿರುವ ಕಾರ್ಯಕರ್ತರ ಸಂಖ್ಯೆ ಕಡಿಮೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಗೆ ಬಂದಿದ್ದಾರೆ. ಇಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಇದೆ. ಇಲ್ಲಿ ಬಹಳ ವರ್ಷಗಳಿಂದ ಪಕ್ಷದ ಕಾರ್ಯಕ್ರಮ ಅಥವಾ ನಾಯಕತ್ವದಿಂದ ಬದಲಾವಣೆ ಆಗಿರುವುದಲ್ಲ. ಇಲ್ಲಿನ ಮತದಾರರು ಬುದ್ಧಿವಂತರು ಮತ್ತು ಕಾಳಜಿ ಹೊಂದಿರುವವರು. ಆ ಕಾರಣದಿಂದ ಮತದಾರರೇ ಇಲ್ಲಿ ಬದಲಾವಣೆ ಮಾಡಿದ್ದಾರೆ. ಇಲ್ಲಿ ಕಾರ್ಯಕರ್ತರ ಸಂಘಟನೆ ತಳಮಟ್ಟದಲ್ಲಿ ಹೆಚ್ಚು ಬಲಗೊಂಡಿಲ್ಲ. ಇಲ್ಲಿ ನಾಯಕತ್ವದ ಹಲವು ವೈಫಲ್ಯಗಳಿವೆ. ಕಾಂಗ್ರೆಸ್‌ನಿಂದ ಕೇವಲ ಪಕ್ಷ ಕಟ್ಟುವ ಕೆಲಸ ಮಾತ್ರವಲ್ಲ ಸಮಾಜ ಕಟ್ಟುವ ಕೆಲಸವೂ ಆಗಬೇಕಾಗಿದೆ. ಇಲ್ಲಿ ಜನಾರ್ದನ ಪೂಜಾರಿ ಅವರು ಹಲವು ಬಾರಿ ಸೋತರು. ವೀರಪ್ಪ ಮೊಯ್ಲಿ ಅವರೂ ಸೋತರು. ಸಮಾನತೆಯ ಕೊರತೆಯೂ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಒಂದು ಬೆಳವಣಿಗೆ ಆಗಿದೆ. ಮುಸ್ಲಿಮ್ ಸಮುದಾಯವರು ಒಕ್ಕೊರಲಿನಿಂದ ಒಮ್ಮತದ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿಯ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಇದು ಉತ್ತಮ ಬೆಳವಣಿಗೆ. ನಾನು ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಯಾರು ಆಗಬೇಕು ಎನ್ನುತ್ತೀರಿ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದದ ವಾತವರಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಅಭ್ಯರ್ಥಿ ಆಯ್ಕೆಯ ಸಂದರ್ಭದಲ್ಲಿ ಬೇರೆ, ಬೇರೆ ಜಾತಿಗಳಿಗೆ ಅವಕಾಶ ನೀಡಲಾಗುತ್ತದೆ. ಈ ನಾಡಿನಲ್ಲಿ ಇಲ್ಲಿನ ಜಾತ್ಯತೀತತೆಯನ್ನು ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಅತ್ಯಂತ ದೊಡ್ಡ ಸವಾಲು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗೆ ಪಕ್ಷ ಒಂದು ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಗೆಲ್ಲಲು ಹೆಚ್ಚಿನ ಅವಕಾಶ ಇರುವುದು ದ.ಕ. ಲೋಕಸಭಾ ಕ್ಷೇತ್ರದಲ್ಲಿ. ಜಿಲ್ಲೆಯ ಬಿಲ್ಲವ, ಬಂಟ ಹಾಗೂ ಇತರ ಸಮುದಾಯಗಳ ಜನರು ಮುಸ್ಲಿಮ್ ಅಭ್ಯರ್ಥಿಗೆ ಬೆಂಬಲ ನೀಡಿದರೆ ಗೆಲ್ಲುವ ಅವಕಾಶವಿದೆ. ಈ ಹಿಂದಿನ ಚುನಾವಣೆಗಳಲ್ಲಿ ಮುಸ್ಲಿಮ್ ಸಮುದಾಯದವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಅವರನ್ನು ಬೆಂಬಲಿಸಿದ್ದಾರೆ. ಈ ಬಾರಿ ಒಂದು ಬದಲಾವಣೆ ಮಾಡಬೇಕಾಗಿದೆ. ಸೆಕ್ಯುಲರ್ ರಾಜಕಾರಣದಲ್ಲಿ ಈ ರೀತಿಯ ಬದಲಾಣೆಯ ಅಗತ್ಯವಿದೆ. ಮುಸ್ಲಿಮ್ ಅಭ್ಯರ್ಥಿಯನ್ನು ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸುವುದು, ಅವರ ಪರವಾಗಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕು. ಇಲ್ಲಿ ಯು.ಟಿ.ಖಾದರ್ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಜಿಲ್ಲೆಯ ಎಲ್ಲಾ ಸಮುದಾಯಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿಯ ತಲೆ ತಲೆಮಾರಿನಿಂದ ಅಭಿವೃದ್ಧಿಗೆ ವಿವಿಧ ರೀತಿಯ ಕೊಡುಗೆ ನೀಡಿದ ಮುಸ್ಲಿಮ್ ಸಮುದಾಯಕ್ಕೆ ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅವಕಾಶ ನೀಡುವ ಅಗತ್ಯವಿದೆ. ಮುಸ್ಲಿಮರನ್ನು ಈ ಸಮಾಜದ ಅವಿಭಾಜ್ಯ ಅಂಗವೆಂದು ಕಾಂಗ್ರೆಸ್ ಭಾವಿಸುತ್ತದೆ. ಕಾಂಗ್ರೆಸ್ ಎಲ್ಲರಿಗೂ ಸೇರಿದ ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯತೀತ ಮೌಲ್ಯ ಹೊಂದಿರುವ ಪಕ್ಷ. ಈ ಸಂದೇಶ ಎಲ್ಲಾ ಸಮುದಾಯದವರಿಗೂ ತಲುಪಬೇಕಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಅಜಗಜಾಂತರವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭಿನ್ನವಾಗಿ ಯೋಚಿಸಬೇಕಾದ ಅನಿವಾರ್ಯ ಇದೆ ಮತ್ತು ಅದನ್ನು ಕಾರ್ಯಗತಗೊಳಿಸಬೇಕಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆ ಅದಕ್ಕೊಂದು ಒಳ್ಳೆಯ ಅವಕಾಶ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)