ಟ್ರಂಪ್ರನ್ನು ಬಂಡೆಯಿಂದ ಕೆಳಗೆ ದೂಡಿದರೆ ಒಂದು ಬಿಯರ್!: ಕೆನಡ ಅಧ್ಯಕ್ಷರಿಗೆ ವಿಚಿತ್ರ ಆಫರ್
ಒಟ್ಟಾವ (ಕೆನಡ), ಜ. 10: ‘‘ನಾನು ನಿಮಗೊಂದು ಬಿಯರ್ ಬಾಟಲಿ ಕೊಡುತ್ತೇನೆ.. ನೀವು (ಅಮೆರಿಕ ಅಧ್ಯಕ್ಷ) ಡೊನಾಲ್ಡ್ ಟ್ರಂಪ್ರನ್ನು ಬಂಡೆಯಿಂದ ಕೆಳಗೆ ದೂಡುತ್ತೀರಾ?’’
ಇಂಥ ವಿಚಿತ್ರ ಪ್ರಶ್ನೆಯನ್ನು ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಬ್ರಿಟಿಶ್ ಕೊಲಂಬಿಯ ರಾಜ್ಯದ ಟೌನ್ಹಾಲ್ನಲ್ಲಿ ಬುಧವಾರ ನಡೆದ ಸಮಾರಂಭವೊಂದರಲ್ಲಿ ಎದುರಿಸಿದರು.
‘‘ನೀವು ಟ್ರಂಪ್ರನ್ನು ಎತ್ತರದ ಬಂಡೆಯ ಮೇಲಿಂದ ಕೆಳಗೆ ದೂಡಿ ಹಾಕುತ್ತೀರಾ? ನಾವು ನಿಮ್ಮ ಋಣ ಇಟ್ಟುಕೊಳ್ಳುವುದಿಲ್ಲ. ನಾನು ನಿಮಗೆ ಒಂದು ಬಾಟಲಿ ಬಿಯರ್ ತೆಗೆದುಕೊಡುತ್ತೇನೆ’’ ಎಂಬುದಾಗಿ ಸಭೆಯಲ್ಲಿದ್ದ ಗಡ್ಡದ ವ್ಯಕ್ತಿಯೊಬ್ಬ ಕೇಳಿದನು.
ಈ ಪ್ರಶ್ನೆ ಕೇಳಿ ನಗಬೇಕೋ, ಸುಮ್ಮನಿರಬೇಕೋ ಎನ್ನುವುದು ಸಭಿಕರಿಗೆ ಗೊತ್ತಾಗಲಿಲ್ಲ.
ಆದರೆ, ಟ್ರೂಡೊಗೆ ಮಾತ್ರ ಇದು ಹಾಸ್ಯ ಎನಿಸಲಿಲ್ಲ. ಅವರು ಖಡಕ್ ಆಗಿಯೇ ಉತ್ತರಿಸಿದರು.
‘‘ನಮ್ಮ ಅತ್ಯಂತ ನಿಕಟ ಮಿತ್ರದೇಶವೊಂದರ ನಾಯಕನ ವಿರುದ್ಧ ಹಿಂಸಾತ್ಮಕ ಬೆದರಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಮ್ಮ ಎರಡು ದೇಶಗಳ ನಡುವಿನ ಬಾಂಧವ್ಯ ಆಳವಾಗಿದೆ. ಯಾರು ಪ್ರಧಾನಿಯಾಗಿದ್ದಾರೆ ಅಥವಾ ಅಧ್ಯಕ್ಷರಾಗಿದ್ದಾರೆ ಎನ್ನುವುದು ಇಲ್ಲಿ ಮುಖ್ಯವಲ್ಲ’’ ಎಂದು ಟ್ರೂಡೊ ಹೇಳಿದರು.