varthabharthi

ಕ್ರೀಡೆ

ಹೋಬರ್ಟ್ ಅಂತರ್‌ರಾಷ್ಟ್ರೀಯ ಟೆನಿಸ್

ಅಲಿಝ್ ಕಾರ್ನೆಟ್ ಸೆಮಿಫೈನಲ್‌ಗೆ

ವಾರ್ತಾ ಭಾರತಿ : 10 Jan, 2019

ಹೋಬರ್ಟ್(ಆಸ್ಟ್ರೇಲಿಯ), ಜ.10: ಟೂರ್ನಿಯ ಮಾಜಿ ಚಾಂಪಿಯನ್ ಫ್ರೆಂಚ್ ತಾರೆ ಅಲಿಝ್ ಕಾರ್ನೆಟ್ ಹೋಬರ್ಟ್ ಅಂತರ್‌ರಾಷ್ಟ್ರೀಯ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಂನ ಗ್ರೀಟ್ ಮಿನ್ನೆನ್ ಅವರನ್ನು 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

2016ರಲ್ಲಿ ಹೋಬರ್ಟ್ ಟೂರ್ನಿಯ ಕಿರೀಟ ಧರಿಸಿರುವ ಆರನೇ ಶ್ರೇಯಾಂಕದ ಕಾರ್ನೆಟ್ ಒಂದೂ ಸೆಟ್ ಬಿಟ್ಟುಕೊಡದೆ ಸೆಮಿಫೈನಲ್‌ಗೆ ಪ್ರವೇಶ ಪಡೆದರು. ಸೆಮಿಫೈನಲ್ ಪಂದ್ಯದಲ್ಲಿ ಕಾರ್ನೆಟ್ ಅವರು ಸೊಫಿಯಾ ಕೆನಿನ್ ಅವರನ್ನು ಎದರಿಸಲಿದ್ದಾರೆ. ಅಮೆರಿಕದ ಸೊಫಿಯಾ ಅವರು ಕ್ರಿಸ್ಟೆನ್ ಫ್ಲಿಪ್ಕಿನ್ಸ್ ಅವರನ್ನು 7-5, 7-5 ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಇತರ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಬೆಲಿಂಡಾ ಬೆನ್‌ಕಿಕ್ ಅವರು ಡಯಾನಾ ಯಾಸ್‌ಟ್ರೆಮೆಸ್ಕಾ ಅವರನ್ನು 7-6(2) 6-3 ಸೆಟ್‌ಗಳ ಅಂತರದಿಂದ ಹಾಗೂ ಅನ್ನಾ ಕರೊಲಿನಾ ಸ್ಕಿಮ್‌ಡ್ಲೊವಾ ಅವರು ಇರಿನಾ ಕ್ಯಾಮೆಲಿಯಾ ಬೆಗು ಅವರನ್ನು 7-5, 7-5 ಸೆಟ್‌ಗಳ ಅಂತರದಿಂದ ಸೋಲಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)