varthabharthi

ಸಂಪಾದಕೀಯ

ಯಾರು ಉಗ್ರವಾದಿಗಳು? ಕಲ್ಲು ತೂರುವವರೋ? ಬಾಂಬೆಸೆಯುವವರೋ?

ವಾರ್ತಾ ಭಾರತಿ : 11 Jan, 2019

ಕೆಲವು ತಿಂಗಳ ಹಿಂದೆಯಷ್ಟೇ ಭೀಕರ ಪ್ರಕೃತಿ ವಿಕೋಪಕ್ಕೆ ಸುದ್ದಿಯಾಗಿದ್ದ ಕೇರಳ ಇದೀಗ ಶಬರಿಮಲೆ ಹಿನ್ನೆಲೆಯಲ್ಲಿ ದೇಶದ ಗಮನ ಸೆಳೆಯುತ್ತಿದೆ. ಶಬರಿ ಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎನ್ನುವ ತೀರ್ಮಾನ ಹೊರಬಿದ್ದಿರುವುದು ಸುಪ್ರೀಂಕೋರ್ಟ್‌ನಿಂದ. ಇದು ಅಲ್ಲಿನ ರಾಜ್ಯ ಸರಕಾರದ ನಿರ್ಧಾರವಾಗಿರಲಿಲ್ಲ. ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಮಹಿಳೆಯರು ಯಾರಾದರೂ ಶಬರಿ ಮಲೆ ಪ್ರವೇಶಿಸಲು ಯತ್ನಿಸಿದರೆ ಅವರಿಗೆ ರಕ್ಷಣೆ ನೀಡಬೇಕಾದುದು ಸರಕಾರದ ಕರ್ತವ್ಯ. ಸುಪ್ರೀಂಕೋರ್ಟ್ ಆದೇಶದಂತೆ ಮಹಿಳೆಯರಿಗೆ ಅಲ್ಲಿನ ರಾಜ್ಯ ಸರಕಾರ ಭದ್ರತೆಯನ್ನು ನೀಡಿದೆ. ಅದರ ವಿರುದ್ಧ ಪ್ರತಿಭಟಿಸಿ ಬೀದಿಗಿಳಿಯುವುದು ಎಂದರೆ ನ್ಯಾಯಾಂಗ ನಿಂದನೆಯಾಗಿದೆ. ಶಬರಿಮಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಕೆಲವು ಶಕ್ತಿಗಳು ರಾಜ್ಯದಲ್ಲಿ ಉದ್ದೇಶಪೂರ್ವಕ ದೊಂಬಿ ಎಬ್ಬಿಸಲು ಸಂಚು ಹೂಡಿರುವುದು ಕಂಡು ಬರುತ್ತದೆ. ಉತ್ತರ ಪ್ರದೇಶದಲ್ಲಿ ಅಯೋಧ್ಯೆಯ ಮೂಲಕ ಅಧಿಕಾರದೆಡೆಗೆ ಸಾಗಿದವರು, ಶಬರಿ ಮಲೆಯನ್ನು ಮುಂದಿಟ್ಟುಕೊಂಡು ಕೇರಳವನ್ನು ಪ್ರವೇಶಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಭಾವನಾತ್ಮಕ ಮತ್ತು ಧಾರ್ಮಿಕ ಹಿನ್ನೆಲೆಯಿರುವ ಈ ಪ್ರಕರಣ ಕೇರಳ ಹೊರತು ಪಡಿಸಿ ಇನ್ನೆಲ್ಲೇ ನಡೆದಿದ್ದರೂ, ಅಲ್ಲಿ ಹಲವು ಹೆಣಗಳನ್ನು ಉರುಳಿಸಲು ಮತ್ತು ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವಲ್ಲಿ ಆರೆಸ್ಸೆಸ್ ಮತ್ತು ಸಂಘಪರಿವಾರ ಯಶಸ್ವಿಯಾಗಿಬಿಡುತ್ತಿತ್ತು. ಆದರೆ ಕೇರಳದಲ್ಲಿ ಮಾತ್ರ ಅವರು ಸಂಪೂರ್ಣ ವಿಫಲರಾದರು. ಇದರ ಹೆಗ್ಗಳಿಕೆ ಅಲ್ಲಿನ ಸರಕಾರ, ಪೊಲೀಸ್ ವ್ಯವಸ್ಥೆ ಮತ್ತು ಮಾಧ್ಯಮಗಳಿಗೆ ಸಲ್ಲಬೇಕು. ಈ ಮೂರೂ ವ್ಯವಸ್ಥೆ ನ್ಯಾಯಾಂಗದ ಆದೇಶವನ್ನು ಜಾರಿಗೊಳಿಸುವಲ್ಲಿ ಪರಸ್ಪರ ಕೈ ಜೋಡಿಸಿ ನಿಂತ ಕಾರಣದಿಂದ ಆರೆಸ್ಸೆಸ್ ಮತ್ತು ಸಂಘಪರಿವಾರ ತೀವ್ರ ಮುಖಭಂಗಕ್ಕೀಡಾಗಬೇಕಾಯಿತು.

ಒಂದು ಸಣ್ಣ ಕೋಮುಉದ್ವಿಗ್ನ ಸ್ಥಿತಿ ನಿರ್ಮಾಣವಾದರೂ ಕರ್ನಾಟಕದಂತಹ ರಾಜ್ಯಗಳಿಗೆ ಅದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಸಂವಿಧಾನದ ರಕ್ಷಣೆಯ ಸಂದರ್ಭದಲ್ಲಿ ಕಾನೂನನ್ನು ಕಠಿಣವಾಗಿ ಬಳಸಲು ಎಡವುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಕಾರಣದಿಂದಲೇ ಪ್ರಭಾಕರಭಟ್ಟರಂತಹ ಆರೆಸ್ಸೆಸ್ ನಾಯಕ ಇನ್ನೂ ಬಹಿರಂಗವಾಗಿ ಓಡಾಡುತ್ತಿದ್ದಾರೆ. ಈ ಮನುಷ್ಯನನ್ನು ಒಂದು ದಿನದ ಮಟ್ಟಿಗೂ ಜೈಲಿಗೆ ತಳ್ಳಲು ವಿಫಲವಾದ ಜಾತ್ಯತೀತ ಸರಕಾರಗಳ ದೌರ್ಬಲ್ಯಗಳೇ ಇಲ್ಲಿನ ಕೋಮುಶಕ್ತಿಗಳ ಸಾಮರ್ಥ್ಯ. ಶಬರಿಮಲೆಯಂತಹ ವಿವಾದ ಕರ್ನಾಟಕದಲ್ಲಿ ನಡೆದಿದ್ದರೆ, ಸಂಘಪರಿವಾರ ಮಾಡಬಹುದಾಗಿದ್ದ ಅನಾಹುತಗಳನ್ನು ಕಲ್ಪಿಸುವುದಕ್ಕೂ ಸಾಧ್ಯವಿರುತ್ತಿರಲಿಲ್ಲ. ಕೇರಳದಲ್ಲಿ ಸರಕಾರ ಸಂವಿಧಾನಕ್ಕೆ ಬದ್ಧವಾಗಿ ನಿಂತಿತು. ಅದಕ್ಕಾಗಿ ಪೊಲೀಸ್ ಇಲಾಖೆಯನ್ನು ಸಮರ್ಥವಾಗಿ ಬಳಸಿಕೊಂಡಿತು. ಒಂದು ಕಾಲದಲ್ಲಿ ಕೇರಳದ ಆರೆಸ್ಸೆಸ್ ಮುಖಂಡರೇ ಶಬರಿ ಮಲೆಯಲ್ಲಿ ಮಹಿಳೆಯರು ಪ್ರವೇಶಿಸುವುದನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಸಂಬಂಧಪಟ್ಟ ವೀಡಿಯೊ ದಾಖಲೆಗಳೂ ಇವೆ. ಆದರೆ ತೀರ್ಪು ಹೊರ ಬೀಳುತ್ತಿದ್ದಂತೆಯೇ, ಜನರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೇ ತೀರ್ಪಿನ ವಿರುದ್ಧ ಆರೆಸ್ಸೆಸ್ ಬೀದಿಗಿಳಿಯಿತು. ಧರಣಿಯ ಹೆಸರಿನಲ್ಲಿ ಕೇರಳದಲ್ಲಿ ಹಿಂಸಾಚಾರ ನಡೆಸಿತು. ಸಾರ್ವಜನಿಕರ ಸೊತ್ತುಗಳನ್ನು ನಾಶ ಪಡಿಸಿತು. ಪೊಲೀಸರ ಮುಂದುಗಡೆಯೇ ಅವರನ್ನು ಪ್ರಚೋದಿಸುವ, ನಿಂದಿಸುವ ಘೋಷಣೆಗಳನ್ನು ಮೆರವಣಿಗೆಗಳಲ್ಲಿ ಕೂಗಲಾಯಿತು.

ಇದೇ ಸಂದರ್ಭದಲ್ಲಿ ಸಂಘಪರಿವಾರ ಕೇರಳದಲ್ಲಿ ಭಯೋತ್ಪಾದಕ ಅಥವಾ ಉಗ್ರವಾದಿ ರೂಪವನ್ನು ಪಡೆದಿರುವುದು ಬೆಳಕಿಗೆ ಬಂತು. ಹಲವೆಡೆ ಬಾಂಬ್‌ಗಳನ್ನು ಎಸೆಯಲಾಯಿತು. ಒಂದೆಡೆ ಆರೆಸ್ಸೆಸ್ ಮುಖಂಡನೊಬ್ಬ ಪೊಲೀಸ್ ಠಾಣೆಯೆಡೆಗೆ ಬಾಂಬ್ ತೂರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಯಿತು. ಹಲವೆಡೆ ಸಿಪಿಎಂ ನಾಯಕರ ಮನೆಯ ಮುಂದೆ ಬಾಂಬ್‌ಗಳು ಸ್ಫೋಟಗೊಂಡವು. ಒಬ್ಬ ಆರೆಸ್ಸೆಸ್ ಮುಖಂಡನ ಮನೆಯಲ್ಲಿ ಬಾಂಬ್ ತಯಾರಿಸುವ ಕಚ್ಚಾವಸ್ತುಗಳು ಪತ್ತೆಯಾಗಿವೆ. ಈ ಹಿಂದೆಯೂ ಆರೆಸ್ಸೆಸ್ ಕಾರ್ಯಕರ್ತರು ಬಾಂಬ್‌ಗಳ ಜೊತೆಗೆ ಪೊಲೀಸರಿಗೆ ಸಿಕ್ಕಿ ಬಿದ್ದ ಉದಾಹರಣೆಗಳಿವೆ. ಇವೆಲ್ಲವೂ ಏನನ್ನು ಹೇಳುತ್ತದೆ. ಆರೆಸ್ಸೆಸ್ ಮತ್ತು ಸಂಘಪರಿವಾರ ಕೇರಳದಲ್ಲಿ ಉಗ್ರವಾದಿ ಸಂಘಟನೆಗಳಾಗಿ ಬದಲಾಗಿವೆ ಎಂದಲ್ಲವೇ?

ಇದು ಕೇವಲ ಕೇರಳಕ್ಕಷ್ಟೇ ಸೀಮಿತಗೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗಳನ್ನೇ ತೆಗೆದುಕೊಳ್ಳೋಣ. ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯನ್ನು ಮಾರಕಾಸ್ತ್ರಗಳಿಂದ ಥಳಿಸಿಕೊಲ್ಲುವ, ಆತನಿಗೆ ಗುಂಡಿಟ್ಟು ಸಾಯಿಸುವ ಜನರ ವಿರುದ್ಧ ಈವರೆಗೆ ಮಾಧ್ಯಮಗಳು ‘ಉಗ್ರರು’ ಎಂಬ ಪದ ಬಳಸದೇ ಇರಲು ಕಾರಣವಾದರೂ ಏನು? ಇದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನೂ ಸಂಘಪರಿವಾರದ ಕಾರ್ಯಕರ್ತರು ಥಳಿಸಿ ಕೊಂದರು. ನ್ಯಾಯಾಲಯ ದಲಿತ ದೌರ್ಜನ್ಯ ಕಾನೂನನ್ನು ದುರ್ಬಲಗೊಳಿಸಿ ಆದೇಶ ನೀಡಿದಾಗ ಬೀದಿಗಿಳಿದು ಪ್ರತಿಭಟನೆ ನಡೆಸಿದ ದಲಿತರ ಮೇಲೆ ಸಂಘಪರಿವಾರದ ಮುಖಂಡರೇ ಗುಂಡೆಸೆದರು. ಈ ಹಿಂಸಾಚಾರದಲ್ಲಿ ಹಲವು ದಲಿತರು ಪ್ರಾಣ ಕಳೆದುಕೊಂಡರು. ಹಿಂಸೆಯನ್ನು ಬಹಿರಂಗವಾಗಿ ಕೈಗೆತ್ತಿಕೊಂಡು ಅದನ್ನು ದೇಶದ ಕಾನೂನುವ್ಯವಸ್ಥೆಯ ವಿರುದ್ಧ ಬಳಸುವವರನ್ನು ಉಗ್ರರೆಂದು ಗುರುತಿಸುವುದಕ್ಕೆ ನಮ್ಮ ಸರಕಾರವಾಗಲಿ, ಮಾಧ್ಯಮಗಳಾಗಲಿ ಯಾಕೆ ಆಸಕ್ತಿ ತೋರಿಸುತ್ತಿಲ್ಲ? ಈ ಎಲ್ಲ ಪ್ರಕರಣಗಳಿಗೆ ಹೋಲಿಸಿದರೆ, ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಶ್ಮೀರದ ನಾಗರಿಕರೇ ಹೆಚ್ಚು ಸಹ್ಯವಾಗಿ ಕಾಣುತ್ತಾರೆ.

ಕಾಶ್ಮೀರದಲ್ಲಿ ಸೇನೆ ಹಲವು ದಶಕಗಳಿಂದ ಅಲ್ಲಿನ ಜನರ ಮೇಲೆ ದೌರ್ಜನ್ಯ ಎಸಗುತ್ತಾ ಬರುತ್ತಿದೆ. ಹಲವು ಅಮಾಯಕರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ. ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಸೇನೆಯ ಸರ್ವಾಧಿಕಾರದ ವಿರುದ್ಧ ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸಲು ಅವರಲ್ಲಿ ಸಕಾರಣಗಳಿವೆ. ಪ್ರತಿಭಟನೆಯ ಸಂದರ್ಭದಲ್ಲಿ ಅವರು ಕಲ್ಲು ತೂರಾಟ ನಡೆಸಿರಬಹುದು. ಆದರೆ ಎಂದೂ ಪೊಲೀಸರ ಕಡೆಗೆ ಬಾಂಬ್‌ಗಳನ್ನು ಎಸೆದಿಲ್ಲ. ಕಾಶ್ಮೀರದಲ್ಲಿ ಬಾಂಬ್‌ಗಳನ್ನು ಎಸೆಯುವ ಉಗ್ರವಾದಿಗಳನ್ನು ಸೇನೆ ಬಹಿರಂಗವಾಗಿ ಗುಂಡಿಟ್ಟುಕೊಂದಿದೆ. ಕಲ್ಲು ತೂರಾಟ ನಡೆಸುವ ನಾಗರಿಕರನ್ನು ಉಗ್ರವಾದಿಗಳು ಎಂದು ಬಿಂಬಿಸಲು ಯತ್ನಿಸುವ ಸರಕಾರದ ಪಾಲಿಗೆ, ಕೇರಳದಲ್ಲಿ ಪೊಲೀಸರೆಡೆಗೆ ಬಾಂಬ್ ಎಸೆದ, ಉತ್ತರ ಪ್ರದೇಶದಲ್ಲಿ ಪೊಲೀಸರನ್ನೇ ಗುಂಡಿಟ್ಟುಕೊಂದ, ಪ್ರತಿಭಟನೆ ನಡೆಸಿದ ದಲಿತರ ಮೇಲೆ ಬಹಿರಂಗವಾಗಿ ಗೋಲಿಬಾರ್ ನಡೆಸಿ ಕೊಂದು ಹಾಕಿದ ಸಂಘಪರಿವಾರವೇಕೆ ಉಗ್ರವಾದಿಯಲ್ಲ?

ಕಾಶ್ಮೀರದಲ್ಲಿ ಎಂದಿಗೂ ಅಲ್ಲಿನ ನಾಗರಿಕರು ಒಬ್ಬ ಪೊಲೀಸ್ ಅಧಿಕಾರಿಯನ್ನು ಗುಂಪಾಗಿ ಥಳಿಸಿ ಕೊಂದ ಉದಾಹರಣೆಗಳಿಲ್ಲ. ಆದರೆ ಉತ್ತರ ಪ್ರದೇಶ, ಕೇರಳದಲ್ಲಿ ಅದು ನಡೆಯುತ್ತಿದೆ. ಸಂಘಪರಿವಾರದ ಬೇರನ್ನು ಇನ್ನಷ್ಟು ಆಳವಾಗಿ ಕೆದಕುತ್ತಾ ಹೋದಂತೆ ಸನಾತನ ಸಂಸ್ಥೆಯಂತಹ ಉಗ್ರವಾದಿ ಸಂಘಟನೆಗಳೂ ಈ ಆರೆಸ್ಸೆಸ್ ಎಂಬ ವಿಷವೃಕ್ಷದ ಫಲ ಎನ್ನುವುದು ಬಹಿರಂಗವಾಗುತ್ತದೆ. ದಾಭೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್‌ರಂತಹ ಚಿಂತಕರನ್ನು ಕೊಂದು ಹಾಕಿ ಬಲಾಢ್ಯವಾಗುತ್ತಿರುವ ಈ ಸಂಘಟನೆಗಳನ್ನು ಉಗ್ರರೆಂದು ಘೋಷಿಸುವುದಕ್ಕೆ ಈ ದೇಶದಲ್ಲಿ ಇನ್ನೆಂತಹ ಅನಾಹುತಗಳು ನಡೆಯಬೇಕು? ಇವರನ್ನು ಪರೋಕ್ಷವಾಗಿ ಹಾಲುಣಿಸಿ ಬೆಳೆಸುತ್ತಿರುವ ಸರಕಾರಕ್ಕೆ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಕುರಿತಂತೆ ಮಾತನಾಡುವ ನೈತಿಕ ಹಕ್ಕಿದೆಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)