varthabharthi

ಕರಾವಳಿ

ಜ.15ರಂದು ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ

ವಾರ್ತಾ ಭಾರತಿ : 11 Jan, 2019

ಮಂಗಳೂರು, ಜ.11: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ಜ.15ರಂದು ಪೂರ್ವಾಹ್ನ 11 ಗಂಟೆಗೆ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ‘ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.

ಪೂರ್ವಾಹ್ನ 11:30ಕ್ಕೆ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಉದ್ಘಾಟಿಸುವರು. ಸಾಹಿತಿ ಬಿ.ಎ.ಶಂಸುದ್ದೀನ್ ಮಡಿಕೇರಿ ಅಧ್ಯಕ್ಷತೆ ವಹಿಸುವರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಆಶಯ ನುಡಿಯಲಿದ್ದಾರೆ.

ಬ್ಯಾರಿ ಕವಿಗಳಾಗಿ ಎಂ.ಬಿ.ನಾಸಿರ್ ಅಹ್ಮದ್, ಎಂ.ಅಬ್ದುಲ್ಲಾ ಮಡಿಕೇರಿ, ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಹಸನಬ್ಬ ಮೂಡುಬಿದಿರೆ, ಆಯಿಶಾ ಯು.ಕೆ., ಮರಿಯಂ ಇಸ್ಮಾಯೀಲ್, ಕೊಡವ ಕವಿಗಳಾಗಿ ನಾಗೇಶ್ ಕಾಲೂರು, ಫ್ಯಾನ್ಸಿ ಮುತ್ತಣ್ಣ, ತುಳು ಕವಿಗಳಾಗಿ ಶೀಲಾ, ಕಿಶೋರ್ ರೈ, ಅರೆಭಾಷೆ ಕವಿಗಳಾಗಿ ಬಿ.ಆರ್. ಜೋಯಪ್ಪ, ರೇವತಿ ರಮೇಶ್, ಕನ್ನಡ ಕವಿಗಳಾಗಿ ಕಾಜೂರು ಸತೀಶ್, ಕೆ.ಜಿ.ರಮ್ಯಾ, ಕೊಂಕಣಿ ಕವಿಗಳಾಗಿ ವಿಲ್ಫ್ರೆಡ್ ಕ್ರಾಸ್ತಾ, ಚಾರ್ಲ್ಸ್ ಡಿಸೋಜ ಮುಂತಾದವರು ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮಹಮದ್ ಅಧ್ಯಕ್ಷತೆ ವಹಿಸುವರು. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಾಧಕರಿಗೆ ಸನ್ಮಾನ ಮಾಡಲಿರುವರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಿರುವರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎ.ಹಸನಬ್ಬ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪಿ.ಸಿ.ಜಯರಾಮ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಆರ್.ಪಿ.ನಾಯ್ಕ, ಮಡಿಕೇರಿ ಬದ್ರಿಯಾ ಜಮಾಅತ್ ಅಧ್ಯಕ್ಷ ಯೂಸುಫ್, ಮಡಿಕೇರಿ ನಗರಸಭಾ ಸದಸ್ಯರಾದ ಅಮೀನ್ ಮೊಹ್ಸಿನ್, ಮನ್ಸೂರ್ ಅಹ್ಮದ್, ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಎನ್. ಮುಹಮ್ಮದ್ ಮುಂತಾದವರು ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಸಮೀರ್ ಮುಲ್ಕಿ ಬಳಗದಿಂದ ಬ್ಯಾರಿ ಹಾಡು ಹಾಗೂ ಬ್ಯಾರಿ ಕವ್ವಾಲಿ, ಮುಫೀದ್ ಎಸ್. ಬಳಗದಿಂದ ಬ್ಯಾರಿ ಒಪ್ಪನೆ ಮತ್ತು ಬ್ಯಾರಿ ಕೋಲ್‌ಕಲಿ ಹಾಗೂ ಮಡಿಕೇರಿಯ ಕ್ರೆಸೆಂಟ್ ವಿದ್ಯಾಸಂಸ್ಥೆಯ ಬಳಗದಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)